My Blog List

Wednesday, October 29, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

<span title=

ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.

ಕಾಶಿಯಿಂದ ತಿರುವಾರೂರಿಗೆ ಹಿಂದಿರುಗುವಾಗ ತಿರುತ್ತಣಿಯಲ್ಲಿ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷರಾಗಿ ವಾಗ್ಗೇಯಕಾರನಾಗುವ ಶಕ್ತಿಯನ್ನು ಅನುಗ್ರಹಿಸಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ "ಗುರುಗುಹ" ಎಂಬ ಅಂಕಿತದೊಡನೆ ಕೃತಿ ರಚನೆಯನ್ನು ಆರಂಭಿಸಿದರು. ಇವರ ಮೊದಲ ಕೃತಿ ’ಶ್ರೀನಾಥಾದಿ’ ಮಾಯಾಮಾಳವಗೌಳ ರಾಗದಲ್ಲಿ, ಆದಿತಾಳದಲ್ಲಿ ರಚಿತವಾಗಿದೆ. ಪಲ್ಲವಿಯಲ್ಲಿಯೇ ಮೂರು ಕಾಲಗಳನ್ನು ಹೊಂದಿಸಿ ಮಾಡಿರುವ ವಿಶಿಷ್ಟ ಕೃತಿ ಇದು. ಕೆಲವು ಕೃತಿಗಳನ್ನು ಸಮಷ್ಟಿಚರಣದೊಡನೆ ರಚಿಸಿದ್ದಾರೆ. ಮಧ್ಯಮಕಾಲ ಸಾಹಿತ್ಯವನ್ನು ಕೃತಿಗಳಿಗೆ ಅಳವಡಿಸಿದ್ದಾರೆ.

ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಮುತ್ತುಸ್ವಾಮಿ ದಿಕ್ಷಿತರದು. ನಾಗಸ್ವರ ವಾದನ ಕ್ರಮವನ್ನು ರೂಪಿಸಿದವರೇ ದೀಕ್ಷಿತರು. ವಾಗ್ಗೇಯಕಾರರಾಗಿ, ವರ್ಣ, ಕೃತಿ, ಕೀರ್ತನೆ, ರಾಗಮಾಲಿಕೆಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಅನೇಕ ಆರ್ಷೇಯವಾದ ರಾಗಗಳನ್ನು ತಮ್ಮ ಕೃತಿಗಳ ಮೂಲಕ ಜೀವಂತಗೊಳಿಸಿದ್ದಾರೆ. ಎಪ್ಪತ್ತೆರಡು ಮೇಳಗಳಲ್ಲಿ ಕೃತಿಗಳನ್ನು ರಚಿಸಿ, ಮೇಳಗಳಿಗೆ ರಾಗ ಸ್ವರೂಪವನ್ನು ನೀಡಿದ್ದಾರೆ. ಸಮುದಾಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನವಗ್ರಹ ಕೃತಿಗಳು, ಪಂಚಲಿಂಗ ಕೃತಿಗಳು, ನವಾವರಣ ಕೃತಿಗಳು ಮುಖ್ಯವಾದವು. ಪಾಶ್ಚಾತ್ಯ ಸಂಗೀತ ಮಟ್ಟುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ದೀಕ್ಷಿತರು ತಮ್ಮ ರಚನೆಗಳಲ್ಲಿ ಸೂಳಾದಿ ಸಪ್ತತಾಳಗಳನ್ನು ಮಾತ್ರ ಬಳಸಿದ್ದಾರೆ.
ದೀಕ್ಷಿತರು ಉತ್ತಮ ಶಿಷ್ಯರನ್ನು ಪಡೆದಿದ್ದರು. ಅವರ ದೌಹಿತ್ರರು (ಮಗಳ ಮಗ) ಮತ್ತು ದತ್ತು ಪುತ್ರರು ಆಗಿದ್ದ ಸುಬ್ಬರಾಮ ದೀಕ್ಷಿತರು ಅವರ ರಚನೆಗಳನ್ನು ಸ್ವರ ಲಿಪಿಯ ಮೂಲಕ ಬರೆದಿಟ್ಟು, ಮುಂದಿನ ಪೀಳಿಗೆಗೆ ಶುದ್ಧವಾದ ಸಂಪ್ರದಾಯಬದ್ಧವಾದ ಸಂಗೀತವನ್ನು ಉಳಿಸಿದ್ದಾರೆ.

ಇವರು ರಚಿಸಿರುವ ಕೃತಿ "ವಾತಾಪಿ ಗಣಪತಿಂ ಭಜೇಹಂ" ಇಲ್ಲಿದೆ ನೋಡಿ.

ಇವರು ರಚಿಸಿರುವ ಕೃತಿ "ಗಣನಾಯಕಮ್" ಇಲ್ಲಿದೆ ನೋಡಿ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

<span title=

ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅಲಂಕಾರ ಶಾಸ್ತ್ರಗಳ ಅಧ್ಯಯನ ಮಾಡಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ವಾಲ್ಮೀಕಿ ರಾಮಾಯಣದ ಇಪ್ಪತ್ತನಾಲ್ಕು ಶ್ಲೋಕಗಳನ್ನು ಕಂಠಪಾಠ ಮಾಡಿ ಶ್ರೀ ತ್ಯಾಗರಾಜರು ಸುಮಧುರವಾಗಿ ಹಾಡುತ್ತಿದ್ದರು. ತಂದೆ ರಾಮಬ್ರಹ್ಮರ ರಾಮಾಯಣದ ವ್ಯಾಖ್ಯಾನಕ್ಕೆ ಶ್ಲೋಕಗಳನ್ನು ಹಾಡುತ್ತಿದ್ದರು.

ಸೊಂಠಿ ವೆಂಕಟರಮಣ ಭಾಗವತರ ಶಿಷ್ಯರಾಗಿ, ತಮ್ಮ ಎಂಟನೇ ವಯಸ್ಸಿನಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಕಾಲಾವಧಿಯಲ್ಲಿ ಸಂಗೀತದಲ್ಲಿ ಪಾರಂಗತರಾದರು. ಗುರುಗಳು ಹೆಮ್ಮೆಯಿಂದ "ದೊರಕುನಾ ಇಟುವಂಟಿ ಶಿಷ್ಯುಡು" ಅಂದರೆ "ಇಂತಹ ಶಿಷ್ಯನು ದೊರಕುವನೇ" ಎಂದು ಸಭಿಕರ ಮುಂದೆ ತ್ಯಾಗರಾಜರನ್ನು ಹೊಗಳಿದರು.

ಮುಂದೆ ರಾಮಕೃಷ್ಣಾನಂದ ಯತಿಗಳಿಂದ ತಾರಕನಾಮ ಉಪದೇಶವಾಯಿತು. ಶ್ರೀ ರಾಮಚಂದ್ರನೇ ಅವರ ಸರ್ವಸ್ವವಾದನು. ತೊಂಬತ್ತಾರು ಕೋಟಿ ರಾಮನಾಮ ಮಂತ್ರವನ್ನು ಜಪಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ, ಅವನ ದರ್ಶನವನ್ನು ಅನೇಕ ಬಾರಿ ಪಡೆದರು. ಶ್ರೀ ತ್ಯಾಗರಾಜರ ಪರಂಪರೆಯಲ್ಲಿ ಕರ್ನಾಟಕ ಸಂಗೀತವು ಸಮೃದ್ಧವಾಗಿ ಬೆಳೆದು, ಜನಮನವನ್ನು ಸೂರೆಗೊಂಡಿತು.

ಅವರ ಕೃತಿಗಳು ಭಕ್ತಿ ಪ್ರಧಾನವಾಗಿ ತತ್ವಗಳು, ನೀತಿಗಳು, ಪುರಾಣಗಳ ಸತ್ವವನ್ನು ಒಳಗೊಂಡಿವೆ. ಮೊಟ್ಟಮೊದಲಿಗೆ ಕೃತಿಗಳಲ್ಲಿ ಸಂಗತಿಗಳನ್ನು ಅಳವಡಿಸಿದವರು ತ್ಯಾಗರಾಜರು ಎಂಬ ಹೆಗ್ಗಳಿಕೆ ಇವರದು. ತಾವು ಭೇಟಿ ಕೊಟ್ಟ ಕ್ಷೇತ್ರಗಳ ಅಧಿದೇವತೆಗಳನ್ನು ಸರಳಸುಂದರ ಕೃತಿಗಳ ಮೂಲಕ ಸ್ತುತಿಸಿರುವುದು ಲಾಲ್ಗುಡಿ ಪಂಚರತ್ನ, ತಿರುವೊಟ್ಟ್ರಿಯೂರು ಪಂಚರತ್ನ, ಕೋವೂರು ಪಂಚರತ್ನಗಳೆಂದು ಪ್ರಸಿದ್ದವಾಗಿವೆ. ಅವರು ರಚಿಸಿರುವ ಘನರಾಗ ಪಂಚರತ್ನಗಳಂತೂ ಸಂಗೀತ ಕ್ಷೇತ್ರಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.

ಇವರ ಪತ್ನಿ ಶಾಂತಮ್ಮ, ಮಗಳು ಸೀತಾಲಕ್ಷ್ಮಿ.

ಅನೇಕ ಶಿಷ್ಯರಿಗೆ ತರಬೇತಿಯನ್ನು ನೀಡಿ ತಮ್ಮ ಸಂಗೀತ ರಚನೆಗಳು ಪರಂಪರಾಗತವಾಗಿ ಉಳಿಯುವಂತೆ ಮಾಡಿದರು. ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಪುಷ್ಯ ಬಹುಳ ಪಂಚಮಿಯಂದು ಶ್ರೀರಾಮನ ಪಾದಾರವಿಂದವನ್ನು ಸೇರಿದರು. ನಾದ ಬ್ರಹ್ಮಾನಂದರಾಗಿ, ನಾದ ಯೋಗಿಯೆನಿಸಿದರು. ಇಂದಿಗೂ ತ್ಯಾಗರಾಜರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ಮೂಲೆಮೂಲೆಗಳಲ್ಲೂ ತ್ಯಾಗರಾಜರ ಆರಾಧನೆಯನ್ನು ಆಚರಿಸುವುದು ವಾಡಿಕೆಯಾಗಿದೆ.

ತ್ಯಾಗರಾಜರ ಪಂಚರತ್ನ ಕೀರ್ತನೆಗಳು ಇಲ್ಲಿವೆ ನೋಡಿ...

೧. ಜಗದಾನಂದ ಕಾರಕ - ನಾಟ ರಾಗ - ಆದಿತಾಳ

೨. ದುಡುಕು ಗಲ - ಗೌಳರಾಗ - ಆದಿತಾಳ

೩. ಸಾಧಿಂಚೆನೆ - ಆರಭಿ ರಾಗ - ಆದಿತಾಳ

೪. ಕನಕನ ರುಚಿರಾ - ವರಾಳಿ ರಾಗ - ಆದಿತಾಳ

೫. ಎಂದರೋ ಮಹಾನುಭಾವುಲು - ಶ್ರೀ ರಾಗ - ಆದಿತಾಳ




ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ

Tuesday, October 28, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

<span title=

ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿಸಿದ್ದರು. ಅವಳನ್ನು ತಮ್ಮ ಕೃತಿಗಳ ಮೂಲಕ ನಾನಾ ವಿಧದಲ್ಲಿ ಬೇಡಿದ್ದರು. ಅದರಲ್ಲೂ ದೇವಿಯನ್ನು ತಾಯಿಯೆಂದೇ ಸಂಭೋದಿಸಿ ಆನಂದ ಪಟ್ಟಿದ್ದರು.

ಶ್ಯಾಮಶಾಸ್ತ್ರಿಗಳು ತಿರುವಾರೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಅಯ್ಯರ್‍. ವೆಂಕಟಸುಬ್ರಹ್ಮಣ್ಯನೆಂದು ಮಗುವಿಗೆ ನಾಮಕರಣ ಮಾಡಿದರು. ಮುದ್ದಿನಿಂದ ಶ್ಯಾಮಕೃಷ್ಣನೆಂದು ಮಗುವನ್ನು ಕರೆಯುತ್ತಿದ್ದರು. ಮುಂದೆ ಶ್ಯಾಮಶಾಸ್ತ್ರಿಗಳೆಂಬ ಹೆಸರೇ ಜನಜನಿತವಾಗಿ ಉಳಿಯಿತು. ಶ್ಯಾಮಶಾಸ್ತ್ರಿಗಳು ವೇದಾಧ್ಯಯನ, ವ್ಯಾಕರಣ, ಛಂದಸ್ಸು, ಸಾಹಿತ್ಯ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತರು. ಸಂಗೀತವನ್ನು ತಮ್ಮ ಸೋದರಮಾವನಿಂದ ಕಲಿತರು.

ಯೋಗಿಗಳಾದ ಸಂಗೀತ ಸ್ವಾಮಿಗಳು ಅಗಿಂದಾಗ್ಗೆ ವಿಶ್ವನಾಥ ಅಯ್ಯರ್‍ ಅವರನ್ನು ಭೇಟಿ ಮಾಡಲು ಬರುತ್ತಿದ್ದರು. ವರ್ಚಸ್ವಿಯಾದ ಬಾಲಕನನ್ನು ನೋಡಿ ಸಂತೋಷಿಸಿ, ಸಂಗೀತದಲ್ಲಿ ಉನ್ನತ ಶಿಕ್ಷಣವನ್ನು ನೀಡಲು ಒಪ್ಪಿಗೆಯನ್ನಿತ್ತರು. ಇದಲ್ಲದೇ ಶ್ರೀವಿದ್ಯಾಮಂತ್ರವನ್ನು ಬಲಕನಿಗೆ ಉಪದೇಶಿಸಿದರು. ಗುರುಗಳ ಆಶ್ರಯದಲ್ಲಿ ಶ್ಯಾಮಶಾಸ್ತ್ರಿಗಳು ಸಂಗೀತದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದರು. ರಾಗಾಲಾಪನೆ, ರಾಗ, ತಾನ, ಪಲ್ಲವಿಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದರು. ಸಂಗೀಟದಲ್ಲಿ ಹಿರಿಯ ವಾಗ್ಗೇಯಕಾರರೆನಿಸಿ, "ಶ್ಯಾಮಕೃಷ್ಣ" ಎಂಬ ಅಂಕಿತನಾಮದಲ್ಲಿ ಅನೇಕ ಸ್ವರಜತಿ, ವರ್ಣಾ, ಕೃತಿಗಳನ್ನು ರಚಿಸಿದರು. ಇವರ ಕೃತಿಗಳು ಹೆಚ್ಚಾಗಿ ತೆಲುಗು ಭಾಷೆಯಲ್ಲಿದ್ದರೂ ಸಂಸ್ಕೃತ ಹಾಗೂ ತಮಿಳಿನಲ್ಲೂ ಕೆಲವು ಕೃತಿಗಳು ರಚಿತವಾಗಿವೆ. ತಾಳಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ ಇವರು, ನೂರೆಂಟು ತಾಳಗಳನ್ನೂ ಅಭ್ಯಾಸ ಮಾಡಿದ್ದರು. ಸ್ವರಜತಿಗಳು, ಸಭಾಗಾನದ ರಚನೆಯ ಗುಣಗಳನ್ನು ಒಳಗೊಂಡು, ಸಂಗೀತ ಕಛೇರಿಯಲ್ಲಿ ಇಂದಿಗೂ ನಿರೂಪಿತವಾಗುತ್ತಿವೆ. ಇವರ ರಚನೆಗಳು ಪೂರ್ಣವಾಗಿದ್ದು ಭಕ್ತಿಯಿಂದ ಕೂಡಿವೆ. ಕೆಲವು ಕೃತಿಗಳಲ್ಲಿ ಸ್ವರಸಾಹಿತ್ಯವೂ, ಚಿಟ್ಟೆಸ್ವರಗಳು ಕಂಡುಬರುತ್ತವೆ.

ಇವರು ರಚಿಸಿರುವ ಕೃತಿಗಳಲ್ಲಿ "ಹಿಮಾದ್ರಿ ಸುತೇ ಪಾಹಿಮಾಂ" ಪ್ರಮುಖವಾದದ್ದು. ಈ ಕೃತಿಯನ್ನು ಕಲ್ಯಾಣಿ ರಾಗದಲ್ಲಿ ರಚಿಸಲಾಗಿದೆ... ಈ ಕೃತಿಯನ್ನು "ಹಂಸಗೀತೆ" ಚಿತ್ರದಲ್ಲಿ ಅಳವಡಿಸಲಾಗಿದೆ...

ಪಲ್ಲವಿ: || ಹಿಮಾದ್ರಿ ಸುತೇ ಪಾಹಿಮಾಂ ವರದೇ ಪರದೇವತೆ||
ಅನು ಪಲ್ಲವಿ:|| ಸುಮೇರು ಮಧ್ಯವಾಸಿನಿ ಶ್ರೀ ಕಾಮಾಕ್ಷಿ|| ಹಿಮಾದ್ರಿ||
ಚರಣ: ||ಶ್ಯಾಮಕೃಷ್ಣ ಸೋದರಿ ಗೌರೀ ಪರಮೇಶ್ವರಿ ಗಿರಿಜಾ ನೀಲವೇಣಿ ಕೀರವಾಣಿ ಶ್ರೀ ಲಲಿತೆ|| ಹಿಮಾದ್ರಿ||


ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್]

Thursday, October 16, 2008

ಗೋಕಾಕ ಪ್ರವಾಸ...

ವಿನೋದನ ಮದುವೆ

ವಿನೋದ weds ರೀನಾ

ದಿನಾಂಕ: ೪-೧೨-೨೦೦೭

ಸ್ಥಳ: ಸಮುದಾಯ ಭವನ, ಗೋಕಾಕ

ಗುಂಪು-೧: ನಾಗರಾಜ, ಸಂಧ್ಯಾ(ಶ್ರೀಮತಿ ನಾಗರಾಜ), ರಾಘು, ಶರತ್, ಪ್ರವೀಣ(ಟಿಂಕು) ಮತ್ತು ನಾನು(ಅನಿಲ್).

ಗುಂಪು-೨: ಶಂಕರ, ಮಾನಸ (ಶ್ರೀಮತಿ ಶಂಕರ), ಸಂತೋಷ, ಮಯೂರಿ (ಶ್ರೀಮತಿ ಸಂತೋಷ), ರಾಮ, ಅಶೋಕ.

ದಿನಾಂಕ: ೩೦-೧೧-೨೦೦೭

ವಿನೋದನಿಗೆ ಅವನ ಮದುವೆ ಎರಡು ದಿನದ ಕಾರ್ಯಕ್ರಮವಾದರೆ, ನಮಗೆ (ಅಂದರೆ ಗುಂಪು - ೧) ನಾಲ್ಕು ದಿನದ ಸುಧೀರ್ಘ ಹಾಗೂ ಹೆಕ್ಟಿಕ್ ಪ್ರೊಗ್ರಾಮ್.

ಮೊದಲೇ ನಿರ್ಧರಿಸಿದಂತೆ ನಾವುಗಳು (ಸಂಧ್ಯಾ ಅವರನ್ನು ಹೊರತುಪಡಿಸಿ) ದಿನಾಂಕ ೩೦-೧೧-೨೦೦೭, ಅಂದರೆ, ಶುಕ್ರವಾರದಂದು ಬೆಂಗಳೂರಿನಿಂದ ಧಾರವಾಡಕ್ಕೆ ೨೧:೧೫ ರ ರಾಣಿ ಚೆನ್ನಮ್ಮ ರೈಲನ್ನ್ನೇರಿದೆವು. ಮೂರನೇ ದರ್ಜೆಯ ಹವಾನಿಯಂತ್ರಿತ (೩ ಟಯರ್ ಎ ಸಿ) ಬೋಗಿಯಲ್ಲಿ ಸ್ಥಳವನ್ನು ಕಾದಿರಿಸಲಾಗಿತ್ತು (ಟಿಕೆಟ್ ಗಳ ಕೃಪೆ: ರಾಘು). ಸಂಧ್ಯಾ ಅವರು ಎರಡು ಮೂರು ದಿನ ಮೊದಲೇ ಸವದತ್ತಿಗೆ ಪ್ರಯಾಣ ಬೆಳೆಸಿ ಅವರ ತಾಯಿಯ ತವರು ಮನೆಯಲ್ಲಿ ತಂಗಿದ್ದರು. ನಾಗರಾಜ ನಮ್ಮ ಜೊತೆ ಇದ್ದಿದ್ದರಿಂದ ನಾವುಗಳು ಸವದತ್ತಿಗೆ ಹೋಗುವುದು ಅನಿವಾರ್ಯವಾಗಿತ್ತು Smiling. ರೈಲಿನಲ್ಲಿ ವಾತಾವರಣ ಆರಾಮದಯಕ. ಹರಟೆ, ಫೋಟೋ ಸೆಶನ್ ಮಾಡುತ್ತಾ ಕಾಲ ಕಳೆದದ್ದೆ ಗೊತ್ತಾಗಲಿಲ್ಲ. ನಾಗರಾಜರಿಗೆ ಹೊಟ್ಟೆ ಹಸಿವು (ಕೃಪೆ: ಹೆಂಡತಿ ಊರು ಸೇರಿದ್ದು), ಹಾಗಾಗಿ ರೈಲು ತುಮಕೂರಿಗೆ ಬಂದಾಗ ಎಲ್ಲರಿಗೂ ಬಿಸಿ ಇಡ್ಲಿ ವಡೆ ತರಿಸಿದೆವು(ಕಂಪನಿ ಕೊಡದೆ ಇರಕ್ಕೆ ಆಗಲ್ಲ ನೋಡಿ)Smiling. ಸಮಯ ರಾತ್ರಿ ೧೦.೪೫. ಹೊಟ್ಟೆಗೆ ಬಿಸಿ ಬಿಸಿ ಇಡ್ಳಿ ವಡೆ ಬಿದ್ದ ಮೇಲೆ ಹರಟೆಗೆ ಹುರುಪು ಬಂದು ಚೆನ್ನಾಗಿ ಟೈಮ್ ಪಾಸ್ ಆಗ್ತಾ ಇತ್ತು. ಆದರೆ ೧೧.೩೦ ರ ಸುಮಾರಿಗೆ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಮಹಾನುಭಾವರೊಬ್ಬರು, ಡಿಸ್ಟರ್ಬ್ ಆಗ್ತಾ ಇದೆ, ಲೈಟ್ ಆಫ್ ಮಾಡಿ ಮಲ್ಕೊಳ್ಳಿ ಅಂದಾಗ ಬೇರೆ ದಾರಿ ಕಾಣದೆ ನಾವೂ ಮಲಗಿದೆವು... Sad

ದಿನಾಂಕ: ೧-೧೨-೨೦೦೭

ರೈಲು ಧಾರವಾಡವನ್ನು ತಲುಪಿದಾಗ ಬೆಳಿಗ್ಗೆ ಸುಮಾರು ೬:೧೫ ರ ಸಮಯ... ಸಂಧ್ಯಾ ಅವರು ನಮ್ಮನ್ನು ಸವದತ್ತಿಗೆ ಕರೆತರಲು ಕಳುಹಿಸಿದ್ದ ಟೆಂಪೋ ಕ್ರೂಸರ್ (cruiser)ನ ಡ್ರೈವರ್ ಖಸೀಮ (ಖಾಸಿಮ್) ನಮಗಾಗಿ ಕಾಯುತ್ತಿದ್ದ. ನಾವು ಕ್ರೂಸರ್ ನಲ್ಲಿ ಹತ್ತಿ ಸವದತ್ತಿ ಕಡೆಗೆ ಹೊರೆಟೆವು... ದಾರಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಬೆಳಗ್ಗಿನ ಸುರ್ಯೋದಯದ ಫೋಟೋ ತೆಗೆದುಕೊಂಡೆವು. ಸೂರ್ಯೋದಯ...

ಖಾಸೀಮನ ಡ್ರೈವಿಂಗ್ ಸ್ಕಿಲ್ಸ್ ಬಗ್ಗೆ ಹೇಳಲೇ ಬೇಕು. Always One Leg on the Accelerator & Do Not Hit Below 100km... ಅದು ನಿಜವಾಗಿಯೂ ಕ್ರೂಸರ್ Smiling. ನಾವು ಸವದತ್ತಿಯಲ್ಲಿ ಸಂಧ್ಯಾ ಅವರ ಅಜ್ಜಿ ಮನೆಯನ್ನು ತಲುಪಿದಾಗ ಸಮಯ ೭:೩೦. ಈ ಮಧ್ಯ ಕೆಲ ದಿನಗಳಿಂದ ದೂರವಿದ್ದ ಸಂಧ್ಯಾ ನಾಗರಾಜ ದಂಪತಿಗಳ ಮುಖದಲ್ಲಿ ಒಂದು ತರಹದ ಕಳೆ ಎದ್ದು ಕಾಣುತ್ತಿತ್ತು. ಮತ್ತೆ ಅವರ ಮನೆಯಲ್ಲಿ ಚಹಾ /ಕಾಫಿ ಕುಡಿದೆವು. ಅಂದು ಅವರ ಮನೆಯಲ್ಲಿ ಸಂತರು ಬರುವ ಕಾರ್ಯಕ್ರಮ ಇದ್ದುದರಿಂದ ಮನೆಯವರೆಲ್ಲ ಅದಕ್ಕಾಗಿ ತಯಾರಿ ನಡೆಸಿದ್ದರು. ನಮಗೆ ಹೋಟೆಲ್ ಶಿವಾನಿಯಲ್ಲಿ ಸ್ನಾನದ ವ್ಯವಸ್ಥೆ ಮಾಡಲಾಗಿತ್ತು.

ನಾವು ಸ್ನಾನ ಮುಗಿಸಿ ೯.೩೦ ರ ಸುಮಾರಿಗೆ ಸಂಧ್ಯಾರವರ ಅಜ್ಜಿ ಮನೆಗೆ ಬಂದೆವು. ಎಲ್ಲರೂ ಸಂತರ ಆಗಮನಕ್ಕಾಗಿ ಕಾಯುತ್ತಿದ್ದರು. ಮನೆಗೆ ಬಂದ ಅಳಿಯ ನಾಗರಾಜರಿಗೆ ಸ್ಪೆಷಲ್ ಡ್ರೆಸ್ ಹಾಕುವಂತೆ ಪತ್ನಿಯಿಂದ ಇಂದ ಆದೇಶ. ಹೆಂಡತಿ ಆದೇಶ ಪಾಲಿಸಲೇಬೇಕಲ್ವೇ. ಮೀರುವುದಕ್ಕೆ ಆಗುತ್ಯೇ? ಅದರಂತೆ ನಾಗರಾಜ ಟಿಪಿಕಲ್ ನಾರ್ತ್ ಕರ್ನಾಟಕ ಶೈಲಿಯಲ್ಲಿ, ತಲೆ ಮೇಲೆ ಟೋಪಿ ಇಟ್ಕೊಂಡು ಪಂಚೆ ಕಟ್ಟಿಕೊಂಡರು. ನಂತರ ಸಂತರ ಆಗಮನ. ಮನೆಯವರೆಲ್ಲರೂ ಸೇರಿ ಪೂಜೆ ಮಾಡಲಾರಂಭಿಸಿದರು. ಸಂಧ್ಯಾ-ನಾಗರಾಜ ಕೂಡ ಕೈ ಜೋಡಿಸಿದರು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ಇದ್ದುದರಿಂದ ನಾವು ಸವದತ್ತಿ ಎಲ್ಲಮ್ಮ ಗುಡ್ಡ ನೋಡಿಬರಲು ಹೊರಟೆವು.

ಶನಿವಾರ ಆದ್ದರಿಂದ ಎಲ್ಲಮ್ಮನ ಗುಡ್ಡದಲ್ಲಿ ಜನ ಜಂಗುಳಿ ಇರಲಿಲ್ಲ (ಮಂಗಳವಾರ ಮತ್ತು ಶುಕ್ರವಾರದಂದು ವಿಪರೀತ ಜನ ಇರುತ್ತಾರಂತೆ). ಎಲ್ಲಮ್ಮನ ದರ್ಶನ ಪಡೆದು ಕೆಲ ಛಾಯಾಚಿತ್ರಗಳನ್ನು ತೆಗೆದುಕೊಂಡು ಪರ್ಯಾಯ ಮಾರ್ಗವಾಗಿ ಮನೆ ಕಡೆ ಹೊರಟೆವು. ದಾರಿಯಲ್ಲಿ ಬೆಟ್ಟದ ಮೇಲಿಂದ ಮಲಪ್ರಭಾ ಡ್ಯಾಮ್ ನ ಹಿನ್ನೀರಿನ ದೃಶ್ಯವನ್ನು ನೋಡಿ, ಸ್ವಲ್ಪ ಸಮಯ ಅಲ್ಲಿ ಕಾಲ ಕಳೆದು ಮನೆಗೆ ಬರುವ ಹೊತ್ತಿಗೆ ೧೧:೩೦ ಆಗಿತ್ತು. ನಂತರ ಉಪ್ಪಿಟ್ಟು ತಿಂದು ಬೇಗನೆ ಬಾದಾಮಿಗೆ ಹೊರಡುವ ತರಾತುರಿ. ಆದರೆ ಅಳಿಯ ನಾಗರಾಜ ಮತ್ತು ಮೊಮ್ಮಗಳು ಸಂಧ್ಯಾ ಎಲ್ಲರಿಗೂ (ಬಗ್ಗಿ) ನಮಸ್ಕಾರ ಮಾಡಿ ಹೊರಡುವ ಹೊತ್ತಿಗೆ ೧:೦೦ ಘಂಟೆ. ಸಂಧ್ಯಾಳ ಅಮ್ಮ ಮತ್ತು ತಮ್ಮ ನಮ್ಮ ಜೊತೆ ಜೀಪನ್ನೆರಿದರು (ಕ್ರೂಸರ್). ಅವರು ದಾರಿಯಲ್ಲಿ ಇಳಿದು ಬಾಗಲಕೊಟೆಗೆ ಹೋಗುವರಿದ್ದರು...

ಬಾಗಲಕೋಟೆ ಇಂದ ಬಾದಾಮಿಗೆ ಸುಮಾರಾಗಿ ೯೦ ಕಿ.ಮೀ. ದೂರ. ಅಷ್ಟೇನೂ ಉತ್ತಮವಲ್ಲದ ರಸ್ತೆ ಆದ್ದರಿಂದ ನಾವು ಸುಮಾರು ೩:೦೦ ರ ಹೊತ್ತಿಗೆ ಬಾದಾಮಿ ತಲುಪ ಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಡ್ರೈವ್ ಮಾಡುತ್ತಿದ್ದುದು ಯಾರು??? ಖಾಸಿಮ್. ಹಾಗಾಗಿ ೨.೦೦ ರ ಹೊತ್ತಿಗೆ ನಾವು ಬಾದಾಮಿ ತಲುಪಿದೆವು. ಬಾದಾಮಿಯಲ್ಲಿ ಗುಹಾಂತರ ದೇವಾಲಯ ನೋಡಲು ನಾಗರಾಜ ಟಿಕೆಟ್ ತೆಗೆದುಕೊಂಡು ಬಂದರು... ಇಮ್ಮಡಿ ಪುಲಿಕೇಶಿಯ ಕಾಲದ ಈ ಗುಹಾಂತರ ದೇವಾಲಯಗಳನ್ನು ನೋಡಿ ಆಶ್ಚರ್ಯ ಚಕಿತರಾಗದವರಿಲ್ಲ ... ಒಂದೇ ಒಂದು ಪದದಲ್ಲಿ ಹೇಳುವದಾದರೆ "ಅದ್ಭುತ". ಬಾದಾಮಿ

ಈ ಗುಹಾಂತರ ದೇವಾಲಯವು ಕಲ್ಲಿನ ಒಂದು ಬೆಟ್ಟದಲ್ಲಿ ಕಡೆಯಲ್ಪಟ್ಟಿದೆ.. ಈ ದೇವಾಲಯವಿರುವ ಗುಡ್ಡದ ಪಕ್ಕದಲ್ಲೇ (ಕೆಳಗೆ) ಒಂದು ಕೆರೆ ಇದೆ. ಬಾದಾಮಿ

ಎಲ್ಲರೂ, ಎಲ್ಲಾ ರೀತಿಯ (ಸೋಲೋ, ಗ್ರೂಪ್, ಕಪಲ್ etc) ಫೋಟೊಗಳಿಗೆ ಪೋಸ್ ನೀಡಿದರು .... ಸಾಕಷ್ಟು ಫೋಟೋಗಳನ್ನು ತೆಗೆದುಕೊಂಡು ಕೆಳಗೆ ಬರುವ ಹೊತ್ತಿಗೆ ೩:೩೦ .. ನಂತರ ಖಾನಾವಳಿಯಲ್ಲಿ ಸಕ್ಕತ್ ಖಾರದ ಊಟ. ಸಂಧ್ಯಾರವರು ಸಜ್ಜಿ ರೊಟ್ಟಿ ಊಟ ಗಡದ್ ಆಗಿ ಹೊಡೆದರು. ಊಟ ಮುಗಿಸಿ ಹೊರಗೆ ಬಂದಾಗ ಕಣ್ಣಿಗೆ ಬಿದ್ದಿದ್ದು ಎಳನೀರು... ಖಾರ ಕಡಿಮೆ ಮಾಡಲು ಎಳನೀರಿನ ಸೇವನೆ.

ಬಾದಾಮಿ ಇಂದ ೫ ಕಿ ಮೀ ದೂರವಿರುವ ಬನಶಂಕರಿಗೆ ಪ್ರಯಾಣ. ದೇವಸ್ಥಾನದಲ್ಲಿ ಅಮ್ಮನವರ ದರ್ಶನ ಮಾಡಿ ೪.೩೦ ರ ಹೊತ್ತಿಗೆ ೧೦ ಕಿ ಮೀ ದೂರದ ಮಹಾಕೂಟಕ್ಕೆ ಹೊರಟೆವು.. ಮಹಾಕೂಟ ಒಂದು ತಂಪಾದ ಸ್ಥಳ.. ಇಲ್ಲಿ ಬೆಟ್ಟದ ನಡುವೆ ಒಂದು ದೇವಸ್ಥಾನವಿದ್ದು, ದೇವಸ್ಥಾನದ ಪಕ್ಕದಲ್ಲಿ ಒಂದು ಕೊಳ (ಕಲ್ಯಾಣಿ) ಇದೆ. ಕೊಳದ ತಳದಲ್ಲಿ ಒಂದು ರೀತಿಯ ದ್ವಾರವಿದ್ದು ಅಲ್ಲಿಂದ ಒಂದು ಸಣ್ಣ ಲಿಂಗವಿರುವ ದೇವಾಲಯವನ್ನು ಪ್ರವೇಶಿಸಬಹುದು. ರಾಘು ಮತ್ತು ನಾಗರಾಜ ನೀರಿನಲ್ಲಿ ಮುಳುಗಿ ದೇವಸ್ಥಾನ ನೋಡಲು ಮುಂದಾದರು.. ಮಹಾಕೂಟ... ನಾಗರಾಜ ನೀರಿನಲ್ಲಿ ಮುಳುಗಿ ದ್ವಾರದ ಮೂಲಕ ದೇವಸ್ಥಾನ ಪ್ರವೇಶಿಸಿದರು . ರಾಘು ಕೂಡ ಸ್ವಲ್ಪ ಪ್ರಯಾಸಪಟ್ಟು ದೇವಸ್ಥಾನ ನೋಡಲು ಸಾಧ್ಯವಾಯಿತು. ಈ ನೀರಿನ ಕೊಳದ ತಳದಿಂದ ನೀರಿನ ಗುಳ್ಳೆಗಳು ಏಳುತ್ತಿದ್ದವು ಮತ್ತು ನೀರು ಬೆಚ್ಹಗಿತ್ತು. ಮಹಾಕೂಟದಿಂದ ಪಟ್ಟದಕಲ್ಲಿಗೆ ಹೋದೆವು. ಇಲ್ಲಿ ಉದ್ಯಾನದ ನಡುವೆ ಸುಂದರ ಸಣ್ಣ ಪುಟ್ಟ ದೇವಾಲಯಗಳಿವೆ. ಈ ದೇವಾಲಯಗಳು ಸುಮಾರು ೧೨೦೦ ವರ್ಷಗಳಷ್ಟು ಹಳೆಯವು. ದೇವಾಲಯಗಳು ಭಗ್ನಗೊಂಡಿದ್ದರೂ ನೋಡಲು ಸುಂದರವಾಗಿ, ಆಕರ್ಷಣೀಯ ವಾಗಿದೆ. ಪಟ್ಟದಕಲ್ಲಿನಿಂದ ಐಹೊಳೆ ಕಡೆಗೆ ಹೊರಟೆವು . ಆದರೆ ಸಮಯ ಆಗಲೇ ೬:೩೦ ಆದ್ದರಿಂದ ಐಹೊಳೆ ನೋಡಲು ಸಾಧ್ಯವಾಗಲಿಲ್ಲ. ನಮ್ಮ್ದಮುಂದಿನ ಲಕ್ಷ್ಯ ಬಾಗಲಕೋಟೆ. ಐಹೊಳೆ ಇಂದ ಸುಮಾರು ೪೦ ಕಿ ಮೀ ದೂರ... ಈ ದೂರವನ್ನು ಕ್ರಮಿಸಿ ಬಾಗಲಕೋಟೆ ತಲುಪುವ ಹೊತ್ತಿಗೆ ರಾತ್ರಿ ೭:೧೫ ಆಗಿತ್ತು.

ಬಾಗಲಕೋಟೆಯಲ್ಲಿ ಸಂಧ್ಯಾರವರ ದೊಡ್ಡಪ್ಪನ (ಕಾಕಾ & ಕಾಕೂ) ಮನೆಗೆ ಹೋದೆವು .ಆ ಸಮಯಕ್ಕೆ ಸವದತ್ತಿ ಇಂದ ನಮ್ಮ ಜೊತೆ ಹೊರಟಿದ್ದ ಸಂಧ್ಯಾಳ ತಾಯಿ ಮತ್ತು ತಮ್ಮ ಅಲ್ಲಿದ್ದರು. ನಾವು ಅವರ ಮನೆಯಲ್ಲಿ ಚಹಾ ಕುಡಿದು ಹೋಟೆಲ್ ದುರ್ಗಾವಿಹಾರ ದಲ್ಲಿ ಚೆಕ್ ಇನ್ ಮಾಡಿದೆವು. ಈ ಹೋಟೆಲ್ ಏನೋ ಹೇಳ್ತಾರಲ್ಲ , "ಹೊರಗೆಲ್ಲ ಥಳಕು, ಒಳಗೆ ಬರೀ ಹುಳುಕು" ಆ ತರಹ . ಅಲ್ಲಿ ಒಂದು ಗಂಟೆ ಕಾರ್ಡ್ಸ್ (judgement) ಆಡಿದೆವು.. ಆಟ ಸ್ವಲ್ಪ ಹೊಸತು ಆದ್ದರಿಂದ ಎಲ್ಲರಿಗೂ ಅದನ್ನು ಕಲಿಯುವ್ದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಸುಮಾರು ೯.೦೦ ರ ಹೊತ್ತಿಗೆ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋದೆವು.ಅಲ್ಲಿ ಊಟದ ಪ್ರೊಗ್ರಾಮ್. ರಾಯಲ್ ಊಟ, ಚಪಾತಿ, ಪಲ್ಯ, ಸಾರು ಮತ್ತು ಗುಲಾಬ್ ಜಾಮೂನ್.
ಎಲ್ಲರೂ ಸಕ್ಕತ್ತಾಗಿ ಬ್ಯಾಟಿಂಗ್ ಮಾಡಿದೆವು. ಸುಮಾರು ೧೦:೦೦ ರ ಹೊತ್ತಿಗೆ ಹೋಟೆಲ್ ಗೆ ಬಂದೆವು. ನಂತರ ಕಾರ್ಡ್ಸ್ ಆಟ ಶುರು... ಸುಮಾರು ೨:೦೦ ಗಂಟೆ ವರೆಗೂ ನಾನ್ ಸ್ಟಾಪ್ ಆಟ. ಪ್ರವೀಣ ಭರ್ಜರಿ ಆಟ ಆಡಿ ಎಲ್ಲರನ್ನೂ ಮೀರಿಸಿಬಿಟ್ಟ. ಶಬ್ಹಾಶ್ ಪ್ರವೀಣ (ಅಲಿಯಾಸ್ ಟಿಂಕು)....... ಈ ದಿನದ schedule, hectic ಆಗಿತ್ತು. ಅರ್ಧ ದಿನದಲ್ಲಿ ಸುಮಾರು ೧೫೦ ಕಿ ಮೀ ನಷ್ಟು ಸುತ್ತಾಟ... ಸಾಕಷ್ಟು ಜಾಗಗಳ ವೀಕ್ಷಣೆ... ಮಲಗಿದ ತಕ್ಷಣ ನಿದ್ರೆ...
ಎಚ್ಚರ ಆದಾಗ ಬೆಳಿಗ್ಗೆ ೭.೩೦.

ದಿನಾಂಕ : ೨-೧೨-೨೦೦೭

ಹಿಂದಿನ ದಿನ ಸಾಕಷ್ಟು ಸುತ್ತಾಟ ಆಗಿದ್ದರಿಂದ, ಆ ದಿನ ಆದಷ್ಟೂ relax ಮಾಡುವ ಪ್ಲಾನ್ ಇತ್ತು.

ನೋಡಬೇಕಾದ ಸ್ಥಳಗಳು ಎರಡೇ:

೧) ಕೂಡಲಸಂಗಮ.

೨)ಆಲಮಟ್ಟಿ.

ಒಟ್ಟು ದೂರ: ಸುಮಾರು ೧೦೦ ಕಿ. ಮೀ.

ಸಂಧ್ಯಾಳ ದೊಡ್ಡಪ್ಪನ ಮನೆಯವರು ಅವರ ಮನೆ ದೇವರನ್ನು ನೋಡಲು ಬೆಳಿಗ್ಗೆ ಬೇಗನೆ ಹೊರಡುವವರಿದ್ದರು. ನಾವುಗಳು ಸ್ನಾನ ಮುಗಿಸಿ ರೆಡಿ ಆಗುವ ಹೊತ್ತಿಗೆ ೮:೩೦. ಆ ಹೊತ್ತಿಗೆ ಸಂಧ್ಯಾ ನಮಗೆ ಮಧ್ಯಾನ್ಹದ ಊಟ ತಂದು ಕೊಟ್ಟು ಹೋದರು. ಬೆಳಿಗ್ಗೆ ಅಷ್ಟು ಹೊತ್ತಿಗೆ ಚಪಾತಿ,ಪಲ್ಯ, ಚಿತ್ರಾನ್ನ, ಮೊಸರನ್ನದ ಊಟ ರೆಡಿ ಮಾಡಿ, ಕಟ್ಟಿ (pack maadi) ಕಳುಹಿಸಿದ್ದರು.

ನಾವು ೮.೩೦ ರ ಹೊತ್ತಿಗೆ ಬಾಗಲಕೋಟೆ ಇಂದ ಕೂಡಲಸಂಗಮ ದತ್ತ ಹೊರಟೆವು. ಬಾಗಲಕೋಟೆಯ ನವನಗರದ ಹೋಟೆಲೊಂದರಲ್ಲಿ ಭರ್ಜರಿ ಬ್ರೇಕ್ ಫಾಸ್ಟ್.. ಕೂಡಲಸಂಗಮ ಸುಮಾರು ೪೫ ಕಿ ಮೀ ದೂರ. ದಾರಿಯಲ್ಲಿ ಸುಂದರ ಸೂರ್ಯಕಾಂತಿ ಹೊಲಗಳು... ಫೋಟೋ ಸೆಶನ್ ಬಗ್ಗೆ ಹೇಳಬೇಕಿಲ್ಲ.... Eye-wink.

ಸುಮಾರು ೧೦.೧೫ ರ ಹೊತ್ತಿಗೆ ಕೂಡಲ ಸಂಗಮ ತಲುಪಿದೆವು.

ಕೂಡಲಸಂಗಮದಲ್ಲಿ...

ಇದು ೩ ನದಿಗಳ ಸಂಗಮ ಸ್ಥಳ (ಕೃಷ್ಣ, ಮಲಪ್ರಭ ಹಾಗೂ ಘಟಪ್ರಭಾ) ಹಾಗೂ ಬಸವಣ್ಣನವರು ಐಕ್ಯವಾದ ಸ್ಥಳ. ಐಕ್ಯ ಸ್ಥಳ (ಲಿಂಗ)ವು ನೀರಿನ ಮಧ್ಯದಲ್ಲಿದೆ. ಅದನ್ನು ನೋಡಲು ಅನುಕೂಲವಾಗುವಂತೆ ಒಂದು ಸುಂದರ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ದಾಟಿ , ಮೆಟ್ಟಿಲುಗಳ ಮೂಲಕ ಕೆಳಗಿಳಿದು ಲಿಂಗ ನೋಡಲು ಹೋಗಬೇಕು. ಅದೇ ಸ್ಥಳದಲ್ಲಿ ಮೇಲೆ ನಿಂತು ನೋಡಿದರೆ ಅಪಾರ ಜಲರಾಶಿ... ಪ್ರವೀಣನಿಗೆ ಶಿವನಸಮುದ್ರ. ಅವನು ಯಾಕೆ ಆ ರೀತಿ ಹೇಳ್ದ ಅಂತ ಇನ್ನೂ ಅರ್ಥ ಆಗಿಲ್ಲ... Laughing out loud

ಲಿಂಗದ ದರ್ಶನ ಪಡೆದು , auditorium ಗೆ ಹೋದೆವು. ವಿಶಾಲವಾದ ಇದರಲ್ಲಿ ಸುಮಾರು ೩೫೦೦ ಜನ ಕೂಡ ಬಹುದಾಗಿದೆ. ನಂತರ ೨೫ ಕಿ ಮೀ ದೂರದ ಆಲಮಟ್ಟಿಗೆ ಪ್ರಯಾಣ. ಶರತ್ ೨೨ ವರ್ಷಗಳ ಹಿಂದೆ ಇದ್ದ ಮನ, ಕಲಿತ ಶಾಲೆ ನೋಡಿ ಅವನಿಗೆ "ಏನೋ ಒಂಥರಾ ....... ",ಅಲ್ಲಿ ಅವನ ಕಪ್ಪು ಬಿಳುಪು ಫೋಟೋ ಶೂಟ್.

ಆಲಮಟ್ಟಿಯಲ್ಲಿ ಶರತ್...

ಸಮಯ ಸುಮಾರು ೧.೦೦. ನಂತರ ಆಲಮಟ್ಟಿ ಡ್ಯಾಮ್ ಹಾಗೂ ಪಾರ್ಕ್ ನೋಡುವ ಸಮಯ.. ಸ್ವಲ್ಪ ಹೊತ್ತು ಪಾರ್ಕಿನಲ್ಲಿ ಸುತ್ತಾಟ... ಆಲಮಟ್ಟಿ

ಮಧ್ಯಾಹ್ನ ೨:೦೦ ರ ಹೊತ್ತಿಗೆ ಊಟಕ್ಕೆ ಕೂತೆವು.. ಹೊಟ್ಟೆ ಬಿರಿಯುವಷ್ಟು ತಿಂದರೂ ಡಬ್ಬಿಗಳು ಖಾಲಿ ಆಗಲಿಲ್ಲ.. ಹಾಗೂ ಹೀಗೂ ಊಟ ಮುಗಿಸಿ ಮತ್ತಷ್ಟು ಸುತ್ತಾಡಿ, ಪುನಃ ಬಾಗಲಕೋಟೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಧ್ಯಾ ಅವರ ಕಾಕಾ, ತಮ್ಮ, ಅಪ್ಪ, ಅಮ್ಮ, ಹಾಗು ಉಳಿದವರು ಆಲಮಟ್ಟಿ ಡ್ಯಾಮ್ ನೋಡಲು ಬಂದರು (ಮನೆ ದೇವರ ದರ್ಶನ ಮುಗಿಸಿ).

ಆಲಮಟ್ಟಿ...

ಅವರನ್ನು ಸ್ವಲ್ಪ ಮಾತಾಡಿಸಿ ಬಾಗಲಕೋಟೆಗೆ ಹೊರಟು ಸುಮಾರು ೪.೩೦ ರ ಹೊತ್ತಿಗೆ ದುರ್ಗಾ ವಿಹಾರಕ್ಕೆ ಬಂದೆವು. ಸಂಜೆ ಹಾಗೇ ಬಾಗಲಕೋಟೆ ಸುತ್ತಾಡಿ, ಚಹಾ/ಕಾಫಿ ಕುಡಿದು ೭.೦೦ ರ ಹೊತ್ತಿಗೆ ಕಾರ್ಡ್ಸ್ ಆಡಲು ಕುಳಿತೆವು.... ಯಥಾ ಪ್ರಕಾರ ಪ್ರವೀಣನ ವಿಜಯೋತ್ಸವ ಮುಂದುವರೆದಿತ್ತು. ಒಂದು ಕಾರ್ಡ್ ಬಿಟ್ಟ, ರಾಘು ಅನಲೈಜ್ ಮಾಡ್.... ಆಗಲೇ ಗೊತ್ತಾಗಿದ್ದು ಸತ್ಯ... Smiling ಮುಂದಿನ ಆಟಗಳಲ್ಲಿ ಪ್ರವೀಣ ಕಾರ್ಡ್ ಡ್ರಾಪ್ ಮಾಡಿದಾಗಲೆಲ್ಲ ಎಲ್ಲಾರೂ ಅವನನ್ನ ಗುರಾಯಿಸಿ ಪ್ರಶ್ನೆ ಕೇಳುವುದು ಮಾಮೂಲಿ ಅಯಿತು.. ಜೊತೆಗೆ ಹೊಟ್ಟೆ ಬಿರಿಯುವಷ್ಟು ನಗು...

ಸುಮಾರು ೨೧:೦೦ ರ ಹೊತ್ತಿಗೆ ಮತ್ತೆ ಊಟದ ಕಾರ್ಯಕ್ರಮ... ಭರ್ಜರಿ ಊಟ ಮಾಡಿ ಹೋಟೆಲಿಗೆ ವಾಪಸ್ ಬಂದು ಕಾರ್ಡ್ಸ್ ಆಡಲು ಶುರು ಮಾಡಿದೆವು. ರಾತ್ರಿ ೨:೦೦ ರ ವರಗೆ ನಿಲ್ಲದ ಆಟ.. ಜೊತೆಗೆ ಪ್ರವೀಣನ ಕಾರ್ಡ್ಸ್ ಕಾಮಿಡಿ Smiling
ಈ ನಡುವೆ ಹಿಂದಿನ ದಿನ ರಾತ್ರಿ ನಾಗರಾಜ, ಸಂಧ್ಯಾಳ ದೊಡ್ಡಪ್ಪನ ಮನೇಲಿ ಇರೋದ್ ಬಿಟ್ಟು , ನಮ್ಮ ಜೊತೆ ಹೋಟೆಲ್ನಲ್ಲೇ ಮಲಗಿದ್ದರು.... ಆದ್ದರಿಂದ ಸಂಧ್ಯಾಗೆ ಸಿಟ್ಟು ಬಂದಿತ್ತು.... ಅದನ್ನ ಕಡಿಮೆ ಮಾಡೋಕೆ ನಾಗರಾಜ ಆ ದಿನ ರಾತ್ರಿ ಅವರ ದೊಡ್ಡಪ್ಪನ ಮನೆಯಲ್ಲಿ ಮಲಗುವಂತೆ ಅಯಿತು.... ಗಂಡ ಹೆಂಡಿರ ಜಗಳ ಉಂಡು ಮಲಗೊತನಕ ಅಲ್ವೇ?

ಈ ವೇಳೆಗೆ ಬೆಂಗಳೂರಿನಿಂದ ವಿನೋದ ಮತ್ತು ಅವನ ಮನೆಯವರು ಗೊಕಾಕ್ ಗೆ ಬರಲು ೯:೧೫ ರ ರಾಣಿ ಚೆನ್ನಮ್ಮ ರೈಲನ್ನು ಹಿಡಿದಿದ್ದರು... ಲಾಸ್ಟ್ ಮಿನಿಟ್ ಅಡ್ಜಸ್ಟ್ ಮೆಂಟ್ ಮಾಡಿದ ಮದುವೆ ಗಂಡು ವಿನೋದ ವೈಟಿಂಗ್ ಲಿಸ್ಟ್ ನಲ್ಲಿ Sad ... ಅವನಿಗೆ ಬರ್ತ್ ಖಾಯಂ ಆಗಿ ಅವನು ಮಲಗುವ ಹೊತ್ತಿಗೆ ರಾತ್ರಿ ೧೨:೦೦, ಪಾಪ ಮದುವೆಯಾಗುವ ಮೊದಲೂ ನೆಮ್ಮದಿಯ ನಿದ್ದೆ ಇಲ್ಲ. Eye-wink... ಮಾರನೆಯ ದಿನ ಬೆಳಿಗ್ಗೆ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪಿದ...

ದಿನಾಂಕ : ೩-೧೨-೨೦೦೭ (ಮದುವೆಯ ಹಿಂದಿನ ದಿನ)

ಈ ದಿನ ನಾವು ಬಾಗಲಕೋಟೆಯಿಂದ ಗೋಕಾಕಿಗೆ ಹೊರಟು ಮದುವೆ ಮನೆ ಸೇರುವ ಕಾರ್ಯಕ್ರಮ....ಅದರಂತೆ ನಾವು ಬೆಳಿಗ್ಗೆ ೮.೩೦ ರ ಹೊತ್ತಿಗೆ ರೆಡಿ ಆಗಿ ಸಂಧ್ಯಾರವರ ದೊಡ್ಡಪ್ಪನ ಮನೆಗೆ ಹೋಗಿ ಅಲ್ಲಿ ತಿಂಡಿ ತಿಂದು, ಹೋಟೆಲಿಗೆ ಬಂದು ಚೆಕ್ ಔಟ್ ಮಾಡಿದೆವು... ಸುಮಾರು ೯:೩೦ ರ ಹೊತ್ತಿಗೆ ಗೋಕಾಕಿಗೆ ಹೋಗಲು, ಬಸ್ ಹಿಡಿಯುವ ಸಲುವಾಗಿ ಬಾಗಲಕೋಟೆ ರೈಲು ನಿಲ್ದಾಣದ ಬಳಿ ಬಂದೆವು.. ಅಲ್ಲಿಂದ ಯರಗಟ್ಟಿಗೆ ಹೋಗುವ ಬೆಳಗಾವಿ ಬಸ್ಸನ್ನು ಹತ್ತಿ ಸುಮಾರು ೧೧:೦೦ ರ ಹೊತ್ತಿಗೆ ಯರಗಟ್ಟಿ ತಲುಪಿದೆವು... ಬಸ್ ಸೂಪರ್ ಫಾಸ್ಟ್... ರೋಡ್ hump ಬಂದರೂ ಸ್ಪೀಡ್ ನಲ್ಲಿ ಯಾವುದೇ ರೀತಿಯ ಇಳಿಕೆ ಇಲ್ಲ.... ಯರಗಟ್ಟಿ ಇಂದ ಗೋಕಾಕ (ಬೆಂಗಳೂರು ಟು ಗೋಕಾಕ) ಬಸ್ ಹಿಡಿದು ಸುಮಾರು ೧೨:೦೦ ರ ಹೊತ್ತಿಗೆ ಗೋಕಾಕ ಬಸ್ ನಿಲ್ದಾಣದಲ್ಲಿ ಇಳಿದಾಗ, ನಮ್ಮನ್ನು ಸ್ವಾಗತಿಸಲು ವಿನೋದ (ಮದುವೆ ಗಂಡು) ಅಲ್ಲಿ ಹಾಜರ್...

ಹೋಟೆಲ್ ಅನಮೊಲ ದಲ್ಲಿ ನಮಗಾಗಿ ೨ ಕೋಣೆಗಳನ್ನು ರಿಸರ್ವ್ ಮಾಡಿದ್ದ ವಿನೋದ... ಅಲ್ಲಿ ಹೋಗಿ ಚೆಕ್ ಇನ್, ಉತ್ತಮವಾದ ರೂಮ್ ಗಳು, ಬಾಗಲಕೋಟೆಗೆ ಹೋಲಿಸಿದರೆ ಇದು ಪಂಚ ತಾರಾ ಹೋಟೆಲ್... ನಂತರ ಅನಮೊಲ ರೆಷ್ಟೊರಂಟ ದಲ್ಲಿ ಊಟ... ಊಟ ಮುಗಿಸಿ ಸೆಟಲ್ ಆಗುವ ಹೊತ್ತಿಗೆ ೩:೦೦ ರ ಸಮಯ .. ಆನಂತರ ಗೋಕಾಕ ಜಲಪಾತ ನೋಡಲು ಹೊರಟೆವು... ಗೋಕಾಕ ಜಲಪಾತಮಳೆಗಾಲದಲ್ಲಾಗಿದ್ದರೆ ಜಲಪಾತ ಬಹಳ ಸುಂದರವಂತೆ... ನೀರಿಲ್ಲದ ಕಾರಣ ಜಲಪಾತ ಅಷ್ಟೇನೂ ಸೊಗಸು ಅನಿಸಲಿಲ್ಲ. ಹೀಗಾಗಿಯೂ ನದಿ ದಾಟಲು ನಿರ್ಮಿಸಿರುವ ತೂಗು ಸೇತುವೆ ಹಾಗೂ ಅಗಲವಾದ, ಕಲ್ಲು ಬಂಡೆಗಳಿಂದ ಕೂಡಿರುವ ನದೀ ಮಾತ್ರ ಸುಂದರವಾಗಿದೆ.... ನಾವು ತೂಗು ಸೇತುವೆ ದಾಟಿ, ಜಲಪಾತದ ಹತ್ತಿರ ಹೋಗಿ, ಬಹಳಷ್ಟು ಫೋಟೋ ತೆಗೆದು ಕೊಂಡೆವು..

ಸುಮಾರು ೪:೩೦ ರ ಹೊತ್ತಿಗೆ ಹೋಟೆಲಿಗೆ ಹೊರಟೆವು.. ಸಾಕಷ್ಟು ಸಮಯ ಇದ್ದುದರಿಂದ ಸಂಜೆ ಯಾವುದಾದರೊಂದು ಸಿನಿಮಾ ನೋಡುವ ಪ್ಲಾನ್ ಮಾಡಿದೆವು... ಆದರೆ ಹಾಗಾಗದೇ, ಸುಮಾರು ೭:೩೦ ರ ಹೊತ್ತಿಗೆ ಮದುವೆ ಮಂಟಪಕ್ಕೆ (ಸಮುದಾಯ ಭವನ) ಹೋದೆವು.. ಅಲ್ಲಿ ಮದುವೆ ಗಂಡನ್ನು ಎದುರುಗೊಳ್ಳುವ (ಹೆಣ್ಣಿನವರು ವಿನೋದನನ್ನು ಬರಮಾಡಿಕೊಳ್ಳುವ) ಕಾರ್ಯಕ್ರಮ... ಅದರ ನಂತರ ಗಂಡು, ಹೆಣ್ಣಿಗೆ ಅರಿಶಿನ ಹಚ್ಚುವ ಕಾರ್ಯಕ್ರಮ... ಎಲ್ಲರೂ ಮದುವೆ ಗಂಡಿಗೆ ಅರಿಶಿನ ಹಚ್ಚಿದ್ದೋ ಹಚ್ಚಿದ್ದು..... ಬ್ಲೀಚ್ ಮಾಡಿಸಿಕೊಂಡ ಅವನ ಮುಖ ಹಳದಿಯಾಗಿತ್ತು... ನಂತರ ಆಂಟಿಯೊಬ್ಬರು ಎಲ್ಲರನ್ನೂ ಓಡಾಡಿಸಿಕೊಂಡು ಅರಿಶಿನ ಹಚ್ಚುತ್ತಿದ್ದನ್ನು ಕಂಡು ಶರತ್ ಮತ್ತು ನಾನು ಅಲ್ಲಿಂದ Escape...
ಶರತ್ ಮತ್ತು ನನ್ನನ್ನು ಬಿಟ್ಟು ಗುಂಪು ೧ ರ ಎಲ್ಲರಿಗೂ ಅರಿಶಿನದ ಲೇಪನ.. ಸ್ವಲ್ಪ ಹೊತ್ತಿನ ನಂತರ ಗಂಡು ಹೆಣ್ಣಿಗೆ ಸ್ನಾನದ ಪ್ರೊಗ್ರಾಮ್... ಹೊರಗಡೆ ಮಣೆ ಹಾಕಿ ತಲೆ ಮೇಲೆ ನೀರು ಸುರಿಯುವುದು... ನಾವು ಒಂದು ಪ್ಯಾಕ್ ಐಸ್ ಅನ್ನು ವಿನೋದನ ಶರ್ಟ್ ಒಳಗೆ ಸುರಿದಾಗ.... ಅವನಿಗೆ "ಚಳಿ ಚಳಿ ತಾಳೆನು ಈ ಚಳಿಯ" ಹಾಡು ಜ್ಞಾಪಕ ಬಂತು ಅಂತ ಆಮೇಲೆ ಹೇಳ್ದ.

ಎಲ್ಲ ಕಾರ್ಯಕ್ರಮ ಮುಗಿದು ಊಟ ಮಾಡುವ ಹೊತ್ತಿಗೆ ೧೦:೦೦ ರ ಸಮಯ.. ನಂತರ ಹೋಟೆಲಿಗೆ ಹೋಗಿ ಮಲಗುವ ಕಾರ್ಯಕ್ರಮ... ಆದರೆ ಶಾಸ್ತ್ರದ ಪ್ರಕಾರ ವಿನೋದ ಮದುವೆ ಮಂಟಪದಲ್ಲೇ ಮಲಗಬೇಕು ಎಂದಾಗ ಅವನ ಮುಖ ಬಾಡಿ ಹೋಗಿತ್ತು.. ನಾಗರಾಜ, ಸಂಧ್ಯಾ ಹಾಗೂ ಪ್ರವೀಣ ಟಾಟಾ indica ಹತ್ತಿ ಹೋಟೆಲ್ ಸೇರಿದರು.. ಶರತ್, ರಾಘು ಹಾಗೂ ನಾನು ಹೋಟೆಲಿಗೆ ಹೋಗಲು ಕಾರ್ ಗಾಗಿ ಕಾಯಿತ್ತಿದ್ದೆವು... ಆಗ ಪ್ರವೀಣನಿಗೆ ಬಿಸ್ಕೆಟ್ ಹಾಕುವ ಸಲುವಾಗಿ ಅವನಿಗೆ ಫೋನ್ ಮಾಡಿ "ನಾವು ಹೋಟೆಲಿಗೆ ಬರಲು ಆಗ್ತ ಇಲ್ಲ , ವಿನೋದನಿಗೆ ಕಂಪನಿ ಕೊಡಲು ಇಲ್ಲೇ ಮಲಗುತ್ತೇವೆ... ನೀನು ನಾಗರಾಜರ ರೂಮ್ ಅಲ್ಲಿ ಅಡ್ಜಸ್ಟ್ ಮಾಡ್ಕೋ" ಅಂತ ಅಂದಾಗ ಪ್ರವೀಣ ಫುಲ್ ರೈಸ್ ಆದ. ಆ ಕಡೆ ಇಂದ ಫೋನ್ ಮಾಡಿದ ಅವನ fiancee ಗೆ ಬೈದೆ ಬಿಟ್ಟ. ಯಾಕೆ ರೈಸ್ ಆದ ಅಂತ ಅರ್ಥ ಆಗ್ಲಿಲ್ಲ. ಪ್ರವೀಣ್ ರೈಸ್ ಆಗಿ ನಾಗರಾಜರ ರೂಮ್ ಗೆ ಹೋಗಿ ಅಲ್ಲಿ ಬಾಗಿಲು ತಟ್ಟಿದಾಗ, ಸಂಧ್ಯಾ ಅವರು ನಾಗರಾಜರಿಗೆ ತಗುಲಿಕೊಂಡರು. ಹಾಕಿದ ಬಿಸ್ಕಿಟ್ ಸೂಪರ್ ಆಗಿ ಕೆಲ್ಸ ಮಾಡಿತ್ತು.

ನಂತರ ನಾವು ಕಾರ್ ಹತ್ತಿ , ಹೋಟೆಲಿಗೆ ಹೋದಾಗ ೨೩:೩೦. ಪ್ರವೀಣನನ್ನು ಕೂಲ್ ಮಾಡಿ... ಶರತ್, ರಾಘು, ನಾನು, ಪ್ರವೀಣ ಕಾರ್ಡ್ಸ್ ಆಡಲು ಕುಳಿತೆವು.. ಬೆಂಡ್ ಎತ್ತಿಸಿಕೊಂಡ ನಾಗರಾಜ same day ಮಲಗುವಂತೆ ಅಯಿತು. ನಮ್ಮ ಕಾರ್ಡ್ಸ್ ಆಟ ಮುಂದುವರೆದಿತ್ತು... ಅಷ್ಟಾಗಿ ಮೂಡ್ನಲ್ಲಿ ಇಲ್ಲದ ಪ್ರವೀಣ ಮಲಗುವ ಯೋಚನೆ ಮಾಡಿದ. ನಡೆದದ್ದನ್ನೆಲ್ಲ ನೆನೆಸಿಕೊಂಡು ಶರತ್, ರಾಘು ಮತ್ತೆ ನಾನು ಹೊಟ್ಟೆ ನೋಯುವಷ್ಟು ನಕ್ಕಿದ್ದೆ ನಕ್ಕಿದ್ದು.. Laughing out loud

ಸಾಕಷ್ಟು ಬಿಸ್ಕಿಟ್ ತಿಂದು ರೈಸ್ ಆಗೊಗಿದ್ದ ಪ್ರವೀಣ ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದ... ನಾವು ಆಟ ಮುಂದುವರೆಸಿ, ನಕ್ಕೂ ನಕ್ಕೂ ಮಲಗುವ ಹೊತ್ತಿಗೆ ಸಮಯ ೧:೩೦. ಮದುವೆ ಮಂಟಪ ದಲ್ಲಿ ಮಲಗಿದ್ದ ವಿನೋದನಿಗೆ ಸ್ವಾತಂತ್ರ್ಯದ ಕೊನೆಯ ರಾತ್ರಿ ಅಷ್ಟೇನೂ ಆರಾಮದಾಯಕವಾಗಿರಲಿಲ್ಲ...

ಈ ಹೊತ್ತಿಗೆ ಬೆಂಗಳೂರಿನಿಂದ ಗುಂಪು-೨ ಗೋಕಾಕಿಗೆ ಹೊರಟಿತ್ತು... ಅದೇ ರೈಲು... ೨೧:೧೫ ರ ರಾಣಿ ಚೆನ್ನಮ್ಮ..... ನವದಂಪತಿ ಶಂಕರ ಅಂಡ್ ಮಾನಸ, ೨ ಎ ಸಿ ನಲ್ಲಿ ಪ್ರತ್ಯೇಕ ಆಸನ ಕಾದಿರಿಸಿದ್ದರು..... privacy ಬೇಕು ನೋಡಿ.... ಉಳಿದವರೆಲ್ಲ ೩ ಎ ಸಿ ಅಲ್ಲಿ ಪ್ರಯಾಣ...

ದಿನಾಂಕ ೪-೧೨-೨೦೦೭ (ಮದುವೆಯ ದಿನ)

ವಿನೋದ ಕಷ್ಟ ಪಟ್ಟು ರಾತ್ರಿ ಕಳೆದಿದ್ದ... ಬೆಳಿಗ್ಗೆ ಎದ್ದು ತರಾತುರಿಯಲ್ಲಿ ಮದುವೆಗೆ ಸಿದ್ಧನಾಗಿದ್ದ...
ನಾವು ಬೆಳಿಗ್ಗೆ ಎದ್ದು, ರೆಡಿ ಆಗುವ ಹೊತ್ತಿಗೆ ಸಮಯ ೯:೦೦... ಮಹೂರ್ತ ಸುಮಾರು ೯:೩೦ ರ ಸುಮಾರಿಗೆ... ಗುಂಪು-೨ ಸುಮಾರು ೧೧:೦೦ ರ ಹೊತ್ತಿಗೆ ಗೋಕಾಕ ತಲುಪುವ ನಿರೀಕ್ಷೆಯಿತ್ತು.... ನಾವುಗಳು ೯:೧೫ ರ ಸುಮಾರಿಗೆ ಮದುವೆ ಮಂಟಪಕ್ಕೆ ಹೋದವು... ವಿನೋದನ ಸ್ವಾತಂತ್ರ್ಯ ಅಪಹರಣಕ್ಕೆ ವೇದಿಕೆ ಸಿದ್ಧ ವಾಗಿತ್ತು.. ನಾವು ಮದುವೆ ಮಂಟಪ ತಲುಪುತ್ತಲೇ ಮಾಂಗಲ್ಯ ಧಾರಣೆ ನಡೆಯಿತು. ಮೂರು ಗಂಟು ಹಾಕಿದ ವಿನೋದನು ಸ್ವಾತಂತ್ರ್ಯ ಕಳೆದು ಕೊಂಡಿದ್ದ.. Smiling

ದಿನಾಂಕ ೪-೧೨-೨೦೦೭ ಸಮಯ ೯:೩೦..... ಆದರೂ ಮುಖದಲ್ಲಿ ಒಂದು ರೀತಿಯ ಖಳೆ... ಹಿಂದಿನ ದಿನ ಹಚ್ಚಿದ ಅರಿಶಿನದ ಹೊಳಪು ಕಡಿಮೆ ಮಾಡಲು ಮುಖ ತಿಕ್ಕಿ ತಿಕ್ಕಿ ತೊಳೆದ ಪರಿಣಾಮವೋ ಏನೋ? ಬಹಳ ದಿನಗಳ ನಿರೀಕ್ಷೆಯಲ್ಲಿದ್ದ ವಿನೋದನ ಮದುವೆ ಆಗೇ ಹೊಗಿತ್ತು!!!

ಈ ಮಧ್ಯೆ, ೨ ಎ ಸಿ ಯಲ್ಲಿ ಪ್ರಯಾಣ ಮಾಡುತ್ತಿದ್ದ ಶಂಕರ, ಗೋಕಾಕಿಗೆ ಬಂದ ಮೇಲೆ ರೂಮ್ ಹಂಚಿಕೊಳ್ಳುವ ವಿಷಯಕ್ಕೆ ತುಂಬ ತಲೆ ಕೆಡಿಸಿ ಕೊಂಡಿದ್ದ... ಮದುವೆಗೆ ಮುಂಚೆ ಡೈನಾಮಿಕ್ ಅಂಡ್ ರನ್ ಟೈಮ್ ಡಿಶಿಷನ್ ಮೇಕರ್ ಆಗಿದ್ದ ಹುಡುಗ ಹೇಗಾಗೋದ. ಗುಂಪು-೨ ಗೋಕಾಕ ತಲುಪಿ, ಹೋಟೆಲಿಗೆ ಹೋಗಿ ರೆಡಿ ಆಗಿ ಮದುವೆ ಮಂಟಪ್ಪಕ್ಕೆ ಬರುವ ಹೊತ್ತಿಗೆ ೧೨:೦೦ ಹೊಡೆದಿತ್ತು...

ಹರಸಲು ಹೋಗಿದ್ದೆವು ನಾವೆಲ್ಲರೂ

ಎಲ್ಲರೂ ಸೇರಿ ನವವಧುವರರಿಗೆ ಶುಭಾಶಯ ಹೇಳಿದೆವು. ನಂತರ ಊಟದ ಕಾರ್ಯಕ್ರಮ... ಮತ್ತೆ ಖಾರವಾದ ಊಟ Smiling ಮುಗಿಸುವ ಹೊತ್ತಿಗೆ ಸಮಯ ಸುಮಾರು ೨.೩೦... ವಧು-ವರರಿಗೆ ಮತ್ತೊಮ್ಮೆ ಶುಭಾಶಯ ಕೋರಿ ನಡೆದುಕೊಂಡೇ ಹೋಟೆಲಿಗೆ ಹೊರೆಟೆವು... ದಾರಿಯಲ್ಲಿ ಎಲ್ಲರೂ ಪಾಚಕ್ (ಜಲ ಜೀರ) ಹಾಗೂ ಲಿಂಬೂ ಸೋಡಾ ಕುಡಿದು.. ಹೋಟೆಲ್ ಮುಟ್ಟಿದೆವು.. ಸಂಜೆ ೫.೪೫ ರ ಬೆಂಗಳೂರು ರೈಲು ಹಿಡಿಯಲು ೫.೦೦ ಕ್ಕೆ ಹೋಟೆಲ್ ಚೆಕ್ ಔಟ್ ಮಾಡುವ ಪ್ಲಾನ್... ಹಾಗಾಗಿ ಸ್ವಲ್ಪ ಹೊತ್ತು ಕಾರ್ಡ್ಸ್ ಆಟ...೪.೪೫ ರ ಹೊತ್ತಿಗೆ ಎಲ್ಲರೂ ರೈಲು ನಿಲ್ದಾಣಕ್ಕೆ ಹೊರಡಲು ರೆಡಿ ಆದರು...

ಹೊರಡುವ ಮುನ್ನ ಕರದಂಟು ಹಾಗೂ ಕುಂದ ಖರೀದಿಸಿದೆವು...

ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲೇ ಗೋಕಾಕ ಜಲಪಾತ ಸಿಗುತ್ತದೆ, ಒಂದು ೫ ನಿಮಿಷ ಸಮಯ ಇದ್ದರಿಂದ ಗುಂಪು-೨ ರ ಮಂದಿ, ಜಲಪಾತದ ಒಂದು ದೃಶ್ಯ ನೋಡಲು ಬಯಸಿದರು... ೫ ನಿಮಿಷದ ನಂತರ ಎಲ್ಲರೂ ಹಿಂತಿರುಗಿ ಬಂದರು...ಜೀಪ್ (ಟವೇರ) ರೈಲು ನಿಲ್ದಾಣದತ್ತ ಹೊರಟಿತು... ಜಲಪಾತದಿಂದ ಹಿಂದಿರುಗಿದ ಶಂಕರ ಯಾಕೋ ಕೊಪಿಸಿಕೊಂಡಿದ್ದ... (ಸೇತುವೆ ದಾಟಲು ಆತನ ಹೆಂಡತಿ ಮಾನಸ ಹೆದರಿದ್ದರಿಂದ ಇರಬೇಕು.. ೫:೩೫ ರ ಹೊತ್ತಿಗೆ ರೈಲು ನಿಲ್ದಾಣ ತಲುಪಿ... ೫:೪೫ ರೈಲು ಹಿಡಿದೆವು... ಗುಂಪು-೧ ೩ ನೆ ಸ್ಲೀಪೆರ್ ಬೋಗಿಯಲ್ಲಿ, ಕಬೀರ ದಂಪತಿಗಳು ೨ ನೆ ಎ ಸಿ, ಮತ್ತು ಉಳಿದವರು ೩ ನೆ ಎ ಸಿ ಯಲ್ಲಿ... ಮತ್ತೆ ಕಾರ್ಡ್ಸ್ ಆಟ, ಹಾಗೆಯೇ ಟೈಮ್ ಪಾಸ್.... ಬೆಳಗಾವಿ ತಲುಪಿದ ನಂತರ...ಶಂಕರ ದಂಪತಿಗಳನ್ನು ಆಗಾಗ ಮಾತಾಡಿಸಲು ಎಲ್ಲರೂ ಸರದಿಯಲ್ಲಿ ಹೋಗಿ ಬಂದರು(Privacy ಹಾಳು ಮಾಡಲು) Eye-wink ಏನೋ ಸ್ವಲ್ಪ ತಿಂದು ರಾತ್ರಿ ೧೦:೦೦ ರ ಹೊತ್ತಿಗೆ ಮಲಗಿದೆವು... ಬಹಳ ಚಳಿಯಿತ್ತು...

ಹಾಗೂ ಹೀಗೂ ರೈಲು ಬೆಂಗಳೂರನ್ನು ತಲುಪಿದಾಗ ಸಮಯ ಬೆಳಿಗ್ಗೆ ೭.೪೫...

ಬಹು ದಿನದ ನಿರೀಕ್ಷೆಯ ವಿನೋದನ ಮದುವೆ, ಮಜಾ ಹಾಗೂ ಧೀರ್ಘ ಪ್ರವಾಸದೊಂದಿಗೆ ಶುಭಂ ಅಯಿತು...

Tuesday, October 14, 2008

ತಲೆನೋವು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು. ತಲೆ ನೋವು ಸರಿ ಹೋಗುತ್ತೆ" ಅಂತ ಹೇಳಿ ರೂಮಿನೊಳಗೆ ಬಂದೆ. ಅಣ್ಣ Walking ಗೆ ಹೋಗಿದ್ರು. ನಾನು ಬಂದ ಹದಿನೈದು ನಿಮಿಷದ ನಂತರ ಅವರೂ ಮನೆಗೆ ಬಂದರು... ಅವರೂ ಸಹ "ಏನು, ಈ ದಿನ ಬೇಗ ಬಂದಿದ್ದೀಯಾ? ಅದಕ್ಕೆ ಮಳೆ ಬರ್ತಿದೆ" ಅಂತ ಹೇಳಿದರು. ನಾನು "ಇಲ್ಲ ಅಣ್ಣ, ತಲೆ ನೋವು, ಅದಕ್ಕೆ ಬೇಗ ಬಂದೆ" ಅಂತ ಹೇಳಿದೆ.

ಮಳೆ ಬರುತ್ತಿದ್ದರಿಂದ ಅಣ್ಣ "ಬಿಸಿ ಬಿಸಿಯಾಗಿ ಏನಾದರೂ ಮಾಡು" ಅಂತ ಅಮ್ಮನಿಗೆ ಹೇಳಿದರು... "ಮೆಣಸಿನಕಾಯಿ ಇದೆ. ಬಜ್ಜಿ ಮಾಡ್ತೀನಿ" ಅಂತ ಹೇಳಿ ಅಡುಗೆ ಮನೆಗೆ ಹೋದರು... ನನಗೆ ತಲೆನೋವಿದ್ದ ಕಾರಣ ಕೋಣೆಯಲ್ಲಿ ಸ್ವಲ್ಪ ಹೊತ್ತು ಮಲಗಿದೆ. ಅಮ್ಮ ಒಳಗೆ ಬಂದು "ಏಳೋ, ಮುಸ್ಸಂಜೆ ಹೊತ್ತು ಮಲಗಬಾರ್ದು" ಅಂತ ಹೇಳಿದ್ರು. ನಾನು "ಸರಿ ಏಳ್ತೀನಿ" ಅಂತ ಹೇಳಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿದೆ.

ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕಣ್ಣು ತೆಗೆಯುವಷ್ಟರಲ್ಲಿ ಗಡಿಯಾರದಲ್ಲಿ ಆರು ಘಂಟೆ ಆಗಿತ್ತು... ಎದ್ದು ಮುಖ ತೊಳೆದುಕೊಂಡು, ಟಿವಿ ಹಾಕಿ ಟಾಮ್ ಅಂಡ್ ಜೆರ್ರಿ ನೋಡಲು ಕುಳಿತೆ... ಅಷ್ಠೊತ್ತಿಗೆ ಅಮ್ಮ ಮೆಣಸಿನಕಾಯಿ ಬಜ್ಜಿಯನ್ನು ತಂದರು... ಬಿಸಿಬಿಸಿಯಾದ ಮೆಣ್ಸಿನ್ಕಾಯ್ ಬಜ್ಜಿಯನ್ನು ತಿನ್ನುವ ಹೊತ್ತಿಗೆ ಬಿಸಿಬಿಸಿ ಸ್ಟ್ರಾಂಗ್ ಕಾಫಿ ತಂದಿಟ್ಟರು... ಕಾಫಿ ಕುಡಿದು ಮತ್ತೆ ಸ್ವಲ್ಪ ಹೊತ್ತು ಮಲಗಿದೆ... ಮತ್ತೆ ಎದ್ದಾಗ ಏಳು ಘಂಟೆ ನಲವತ್ತೈದು ನಿಮಿಷವಾಗಿತ್ತು... ತಲೆ ನೋವು ಮಾಯವಾಗಿತ್ತು...

ಕಂಪ್ಯೂಟರ್ ಆನ್ ಮಾಡಿ ಸಂಪದದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ಊಟ ಮುಗಿಸಿ, ನನ್ನ ತಲೆನೋವಿನ ಕತೆಯನ್ನು ಬರೆಯುವ ಹೊತ್ತಿಗೆ ರಾತ್ರಿ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು...

ಮಲೆನಾಡಿನಲ್ಲಿ ಎರಡು ದಿನಗಳು...

ಮಲೆನಾಡು ಪ್ರವಾಸ

ಹೋದ ಜಾಗಗಳು: ಶಿವಮೊಗ್ಗ, ತೀರ್ಥಹಳ್ಳಿ, ಕವಲೇದುರ್ಗ ಕೋಟೆ, ಹಿಡ್ಲೆಮನೆ ಜಲಪಾತ, ಕುಪ್ಪಳ್ಳಿ, ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು.

ಒಟ್ಟು ಮಂದಿ: ೬+೧ (ವಾಹನ ಚಾಲಕ ಸತೀಶ)

ಪ್ರಯಾಣಕ್ಕೆ ಬಳಸಿದ ವಾಹನ: ಟೋಯೋಟಾ ಕ್ವಾಲಿಸ್.

ಮಾರ್ಗ:

--> ಬೆಂಗಳೂರು - ತುಮಕೂರು - ಗುಬ್ಬಿ - ತಿಪಟೂರು - ಅರಸೀಕೆರೆ - ಬೀರೂರ್ - ತರಿಕೆರೆ - ಭದ್ರಾವತಿ - ಶಿವಮೊಗ್ಗ - ತೀರ್ಥಹಳ್ಳಿ.

--> ತೀರ್ಥಹಳ್ಳಿ - ಕವಲೇದುರ್ಗ - ನಗರ - ನಿಟ್ಟೂರು - ಕುಂಬಳೆ - ಹಿಡ್ಲೆಮನೆ ಜಲಪಾತ - ತೀರ್ಥಹಳ್ಳಿ.

--> ತೀರ್ಥಹಳ್ಳಿ - ಕುಪ್ಪಳ್ಳಿ - ಕೊಪ್ಪ - ಶೃಂಗೇರಿ - ಬರ್ಕಣ ಜಲಪಾತ - ಆಗುಂಬೆ - ಜಯಪುರ - ಚಿಕ್ಕಮಗಳೂರು - ಹಾಸನ - ನೆಲಮಂಗಲ - ಬೆಂಗಳೂರು.

ದಿನಾಂಕ: ೨೫ ಜನವೈ ೨೦೦೭ ಇಂದ ೨೭ ಜನವರಿ ೨೦೦೭.

ಪಾತ್ರವರ್ಗ: ನಾಗರಾಜ, ಪ್ರವೀಣ, ವಿನೋದ, ರಾಘವೇಂದ್ರ, ಪ್ರಶಾಂತ ಮತ್ತು ನಾನು.

ಛಾಯಾಗ್ರಾಹಕ: ಪ್ರಶಾಂತ್

ಚಿತ್ರಕಥೆ: ಅನಿಲ್ ರಮೇಶ್

ಆ ವರ್ಷ ಗಣರಾಜ್ಯೋತ್ಸವ ಶುಕ್ರವಾರವಿದ್ದ ಕಾರಣ ನಾವು ಗುರುವಾರ ಅಂದರೆ ೨೫ ಜನವರಿ ೨೦೦೭ ರಂದು ಈ ಪ್ರಯಾಣವನ್ನು ಕೈಗೊಳ್ಳಲು ನಿರ್ಧರಿಸಿದೆವು. ಜಾಗಗಳ ನಿರ್ಧಾರ ಮಾಡುವ ಕೆಲಸ ಸ್ವಲ್ಪ ಕಷ್ಟಕರವಾಗಿತ್ತು. ಕೊನೆಗೆ ಪ್ರಶಾಂತನ ಸಹಾಯದಿಂದ ಮಲೆನಾಡಿಗೆ ಹೋಗಲು ನಿರ್ಧರಿಸಿದೆವು. ಪ್ರಶಾಂತ ಒಂದು ವರ್ಷದ ಹಿಂದೆ ಅಂದರೆ ೨೦೦೬ರಲ್ಲಿ ಇದೇ ಜಾಗಗಳಿಗೆ ಹೋಗಿ ಬಂದಿದ್ದ.

ಜಾಗಗಳ ನಿರ್ಧಾರವಾದ ಮೇಲೆ ನಮ್ಮ ಮುಂದೆ ಇದ್ದ ಕೆಲವು ಅಂಶಗಳು:

೧. ಎಷ್ಟು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ.

೨. ಪ್ರಯಾಣಕ್ಕೆ ಬಳಸುವ ವಾಹನ.

೩. ಲಾಡ್ಜಿಂಗ್ ಮತ್ತು ಬೋರ್ಡಿಂಗ್.

೧. ಎಷ್ಟು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ - ನಮ್ಮ ಗುಂಪಿನ ಹೆಚ್ಚು ಮಂದಿ ಆ ವರ್ಷದ ಮಾರ್ಚ್ ವರೆಗೂ ತಮ್ಮ ಬಿಡುವಿಲ್ಲದಿದ್ದ ಕಾರಣ, ನಮಗೆ ಎಷ್ಟು ಮಂದಿ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಯಲು ಹೆಚ್ಚು ಕಷ್ಟವಾಗಲಿಲ್ಲ. ಕೊನೆಗೆ ನಾವು ಆರು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲು ನಿರ್ಧರಿಸಿದೆವು.

೨. ಪ್ರಯಾಣಕ್ಕೆ ಬಳಸುವ ವಾಹನ - ಮೊದಲು ನಾವು ಪ್ರವೀಣನ ಟಾಟಾ ಸುಮೋವಿನಲ್ಲಿ ಹೋಗಲು ನಿರ್ಧರಿಸಿದ್ದೆವು. ಪ್ರವೀಣನ ವಾಹನದ ಚಾಲಕ ಲಭ್ಯವಿರದಿದ್ದ ಕಾರಣ ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಹೊಟೆಲ್ ಏರ್ ಲೈನ್ಸ್ ನಲ್ಲಿ ೨೪ ಜನವರಿ ೨೦೦೭ ರಂದು ನಾವು ಭೇಟಿಯಾಗಿದ್ದಾಗ, ರಾಘವೇಂದ್ರ ಟೊಯೋಟಾ ಕ್ವಾಲಿಸ್ ಅನ್ನು ಫೋನ್ ಮೂಲಕ ಮುಂಚಿತವಾಗಿ ಕಾದಿರಿಸಿದ.

೩. ಕೊನೆಯದಾಗಿ ನಮ್ಮ ಮುಂದೆ ಇದ್ದದ್ದು - ಬೋರ್ಡಿಂಗ್ ಮತ್ತು ಲಾಡ್ಜಿಂಗ್. ನಾವುಗಳು (ಪ್ರಶಾಂತನನ್ನು ಬಿಟ್ಟು) ಹೊಟೆಲ್ ಏರ್ ಲೈನ್ಸ್ ನಲ್ಲಿ ಭೇಟಿಯಾಗಿದ್ದಾಗ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಗೆ ಶಿವಮೊಗ್ಗದಲ್ಲಿ ತಂಗಿದ್ದು, ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವುದಾಗಿ ಯೋಜನೆ ಹಾಕಿಕೊಂಡಿದ್ದೆವು. ಪ್ರಶಾಂತನಿಗೆ ಈ ವಿಷಯವನ್ನು ಫೋನ್ ಮಾಡಿ ಹೇಳಿದಾಗ ಅವನು "ಶಿವಮೊಗ್ಗದಲ್ಲಿ ತಂಗಿದರೇ, ೧೫೦ ಕಿ.ಮೀ ಹೆಚ್ಚಾಗುತ್ತದೆ. ನಾವು ತೀರ್ಥಹಳ್ಳಿಯಲ್ಲಿ ತಂಗೋಣ. ಅಲ್ಲಿಂದ ನಾವು ನೋಡಬೇಕಾದ ಸ್ಥಳಗಳು ಹತ್ತಿರವಾಗುತ್ತದೆ. ಮುಂಗಡವಾಗಿ ಕೋಣೆಗಳನ್ನು ಕಾದಿರಿಸುವ ಅವಶ್ಯಕತೆ ಇಲ್ಲ. ಸಾಕಷ್ಟು ಹೊಟೆಲ್ ಗಳಿವೆ" ಎಂದ. ನಮಗೆಲ್ಲಾ ತಲೆ ಮೇಲಿದ್ದ ಭಾರ ಕಡಿಮೆ ಆದಂತಾಯಿತು.

ಅಂತೂ ಇಂತೂ ನಾವು ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡೆವು.

ದಿನಾಂಕ ೨೫ ಜನವರಿ ೨೦೦೭:

ನಾವೆಲ್ಲರೂ ನಮ್ಮ ಸ್ನೇಹಿತನಾದ ಶಂಕರನ ಮನೆಯಲ್ಲಿ ಭೇಟಿಯಾಗಲು ನಿರ್ಧರಿಸಿದೆವು. ಕಾರಣ, ಅವನಿದ್ದದ್ದು ಯಶವಂತಪುರದಲ್ಲಿ. ವಿನೋದ, ಪ್ರವೀಣ ಹತ್ತಿರದಲ್ಲೇ ಇದ್ದಿದ್ದರಿಂದ ಅವರು ಬೇಗನೆ ಶಂಕರನ ಮನೆಗೆ ಬಂದು ನಮಗಾಗಿ ಕಾಯುತ್ತಿದ್ದರು. ನಾಗರಾಜ ಜಯನಗರದಿಂದ ವಿಜಯನಗರದ ಬಳಿಯಿರುವ ಗೋವಿಂದರಾಜನಗರದಲ್ಲಿರುವ ರಾಘವೇಂದ್ರನ ಮನೆಗೆ ಬಂದರು. ನಾನು ನಾಗರಭಾವಿಯಲ್ಲಿರುವ ನಮ್ಮ ಮನೆಯಿಂದ ಹೊರಟು ರಾಘವೇಂದ್ರನ ಮನೆಗೆ ಬಂದು ತಲುಪುವಷ್ಟರಲ್ಲಿ ನಾಗರಾಜ ಮತ್ತು ವಾಹನ ಚಾಲಕ ಸತೀಶ ರಾಘವೇಂದ್ರನ ಮನೆಯಲ್ಲಿ ನನಗಾಗಿ ಕಾಯುತ್ತಿದ್ದರು. ನಾನು ರಾಘವೇಂದ್ರನ ಮನೆಯನ್ನು ತಲುಪಿದ ಕೂಡಲೆ ಅಲ್ಲಿಂದ ಹೊರಟು, ಬಸವೇಶ್ವರನಗರದಲ್ಲಿರುವ ಪ್ರಶಾಂತನನ್ನು ಕರೆದುಕೊಂಡು ಶಂಕರನ ಮನೆಯಲ್ಲಿ ಕಾಯುತ್ತಿದ್ದ ವಿನೋದ ಮತ್ತು ಪ್ರವೀಣರನ್ನು ಭೇಟಿಮಾಡಿ ಅಲ್ಲಿಂದ ಹೊರಡುವ ಹೊತ್ತಿಗೆ ಸಮಯ ರಾತ್ರಿ ಹನ್ನೊಂದಾಗಿತ್ತು.

ದಿನಾಂಕ ೨೬ ಜನವರಿ ೨೦೦೭:

ವಾರಾಂತ್ಯ ರಜೆಯಿದ್ದ ಕಾರಣ ರಾ-ಹೆ ೪ ರಲ್ಲಿ ಹೆಚ್ಚು ಟ್ರಾಫಿಕ್ ಇತ್ತು. ಆದರೆ ಸತೀಶನು ಹೇಗೋ ನಮ್ಮನ್ನು ಆ ಟ್ರಾಫಿಕ್ ನಿಂದ ಪಾರುಮಾಡಿದನು. ನಮಗೆ ನೆಲಮಂಗಲ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ... ಸಮಯ ೧.೩೦ ಇರಬಹುದು, ವಿನೋದ, ಪ್ರಶಾಂತ ಮತ್ತು ಪ್ರವೀಣ ನಿದ್ರಾದೇವಿಗೆ ಶರಣಾಗಿದ್ದರು. ನಿದ್ದೆ ಮಾಡದ ನಾಗರಾಜ, ರಾಘು ಮತ್ತು ನಾನು ಹರಟೆಯಲ್ಲಿ ನಿರತರಾಗಿದ್ದೆವು...

ರಾಹೆ ೪ ರಿಂದ ಹೊನ್ನಾವರದ ಮಾರ್ಗಕ್ಕೆ ವಾಹನವನ್ನು ತಿರುಗಿಸಿ "ಗುಬ್ಬಿ"ಯ ಬಳಿ ಇದ್ದ ಪುಟ್ಟ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಅಲ್ಲಿಂದ ಹೊರಟೆವು. ವಾಹನದಲ್ಲಿ ಡಾ. ರಾಜ್ ಕುಮಾರ್ ಅವರ ಹಾಡುಗಳು ಕೇಳಿಬರುತ್ತಿದ್ದವು. ಸತೀಶ ವಾಹನ ಚಾಲನೆಯಲ್ಲಿ ಪರಿಣತನಾಗಿದ್ದರಿಂದ ನಾವು ಭದ್ರಾವತಿಯನ್ನು ಸುಮಾರು ೪.೦೦ಕ್ಕೆ ತಲುಪಿದೆವು. ಅಲ್ಲಿ ಸತೀಶನಿಗೆ ಚಹಾ ಕುಡಿಯಲು ವಾಹನವನ್ನು ನಿಲ್ಲಿಸಿದ. ಮತ್ತೆ ಪ್ರಯಾಣವನ್ನು ಮುಂದುವರೆಸಿ ತೀರ್ಥಹಳ್ಳಿಯ ಕಡೆಗೆ ಹೊರಟೆವು. ನಾವು ಶಿವಮೊಗ್ಗ ಸಿಟಿಯನ್ನು ತಲುಪದೇ ಉಪಮಾರ್ಗದಲ್ಲಿ ತೀರ್ಥಹಳ್ಳಿಯನ್ನು ಸುಮಾರು ೫.೪೫ಕ್ಕೆ ತಲುಪಿದೆವು.
ನಾವು ಹೊಟೆಲ್ ಮಯೂರದಲ್ಲಿ ತಂಗಲು ೩ ಕೋಣೆಗಳನ್ನು ಕಾದಿರಿಸಿದೆವು.

ಎಲ್ಲರಿಗೂ ದಣಿವಾಗಿದ್ದರಿಂದ ಸ್ವಲ್ಪ ಹೊತ್ತು ಕೋಣೆಯಲ್ಲಿ ಮಲಗಲು ನಿರ್ಧರಿಸಿದರು. ವಿನೋದ ಮತ್ತು ನಾನು ನಿದ್ದೆ ಮಾಡುವ ಮೂಡ್ ನಲ್ಲಿ ಇರಲಿಲ್ಲ. ಸಮಯ ವ್ಯರ್ಥ ಮಾಡದೇ ವಿನೋದ ಸ್ನಾನವನ್ನು ತಣ್ಣೀರಿನಲ್ಲಿ ಮಾಡಿದ. ನಾನು ಮುಖ ತೊಳೆದುಕೊಂಡೆ. ನಾವಿದ್ದ ಹೊಟೆಲ್ ಆಗಷ್ಟೇ ತೆರೆದಿತ್ತು, ಇಡ್ಲಿಯನ್ನು ತಿಂದು ಚಹಾ ಕುಡಿದು ಹೊಟೆಲಿನವರನ್ನು ಹತ್ತಿರವಿರುವ ಜಾಗಗಳ ಬಗ್ಗೆ ಕೇಳಲು ಅವರು "೧ ಕಿಮೀ. ದೂರದಲ್ಲಿ ಒಂದು ನದಿಯಿದೆ. ಅಲ್ಲಿಗೆ ಹೋಗಬಹುದು" ಎಂದರು. ಮುಂಜಾನೆಯ ಮಂಜಿನ ಕಾರಣ ನಮಗೆ ನದಿಯು ಕಾಣಲಿಲ್ಲ. ಆದರೆ ಶಬ್ದ ಕೇಳಿಸುತ್ತಿತ್ತು. ಅಲ್ಲೇ ಸ್ವಲ್ಪ ಸಮಯ ಇದ್ದೆವು. ಅಷ್ಟರಲ್ಲಿ ರಾಘು ಫೋನ್ ಮಾಡಿ ಸ್ನಾನ ಮಾಡಲು ಬಿಸಿನೀರು ಲಭ್ಯವಿದೆ ಎಂದಾಗ ಹೊಟೆಲ್ ಕಡೆಗೆ ಹೊರಟೆವು.

<span title=

ಕವಲೇದುರ್ಗ ಕೋಟೆ:

ಸ್ನಾನದ ನಂತರ ಹೊಟೆಲ್ ನಲ್ಲಿ ತಿಂಡಿಯನ್ನು ತಿಂದು ಕವಲೇದುರ್ಗ ಕೋಟೆಯ ಹಾದಿ ಹಿಡಿದೆವು. ಹಾದಿ ಸುಗಮವಾಗಿರಲಿಲ್ಲವಾದ್ದರಿಂದ ವೇಗ ಕಡಿಮೆ ಆಯ್ತು. ಕವಲೇದುರ್ಗ ಕೋಟೆಗೆ ಹೋಗುವ ಮಾರ್ಗದಲ್ಲಿ ನಮಗೆ ಒಂದು ಸೇತುವೆ ಸಿಕ್ಕಿತು... ಅಲ್ಲಿ ಪ್ರಶಾಂತನು ಪ್ರಕೃತಿಯ ಸೌಂದರ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದನು.

<span title=

ಅಲ್ಲಿ ನಾವುಗಳು ಒಂದು ಗ್ರೂಪ್ ಫೋಟೊ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಈ ನಡುವೆ, ನಮ್ಮ "ಮಾರ್ಗದರ್ಶಕ" ಪ್ರಶಾಂತನು Confuse ಆಗಿದ್ದರಿಂದ ದಾರಿ ತಪ್ಪಿದೆವು. ಯಾರನ್ನಾದರೂ ಕೇಳೋಣವೆಂದರೇ, ಒಬ್ಬ ನರಪಿಳ್ಳೆಯೂ ಅಲ್ಲಿ ಇರಲಿಲ್ಲ. ಹಾಗೂ ಹೀಗೂ ಸರಿಯಾದ ದಾರಿಯನ್ನು ಕಂಡುಕೊಂಡು ಮುಂದೆ ಹೊರಟೆವು. ಸ್ವಲ್ಪ ಮುಂದೆ ಹೋದಾಗ ನಮಗೆ ಮಣ್ಣು ದಾರಿ ಸಿಕ್ಕಿತು. ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ, ಕೋಟೆಯ ಕಡೆಗೆ ಚಾರಣವನ್ನು ಆರಂಭಿಸಿದೆವು. ಆಗ ಸಮಯ ಹತ್ತು ಘಂಟೆ ನಲವತ್ತೈದು ನಿಮಿಷ... ನಾವು ಕೋಟೆಯನ್ನು ಚಾರಣ ಮಾಡಲು ತುಂಬಾ ಉತ್ಸುಕದಿಂದ ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿತ್ತು...
ಚಾರಣವನ್ನು ಶುರುಮಾಡಿದೆವು... ಕೋಟೆಯ ತುತ್ತತುದಿಯನ್ನು ತಲುಪಲು ನಮಗೆ ಸಹ್ಯಾದ್ರಿ ಪರ್ವತ ಶ್ರೇಣಿ ಹಾಗೂ ಲಿಂಗನಮಕ್ಕಿ ಜಲಾಶಯ ಕಾಣಿಸುತ್ತದೆ. ನಾವು (ನಾಗರಾಜ, ರಾಘು, ಪ್ರವೀಣ, ವಿನೋದ ಮತ್ತು ನಾನು) ಕೋಟೆಯಲ್ಲಿದ್ದ ಪರ್ಯಾಯ ದಾರಿಯನ್ನು ಹಿಡಿದು ಚಾರಣಮಾಡಿದ್ರೆ, <span title=

ಪ್ರಶಾಂತ ಮತ್ತು ಚಾಲಕ ಸತೀಶ್ ಕೋಟೆಯ Normal Route ಹಿಡಿದು ಮೆಟ್ಟಿಲುಗಳನ್ನೇರಿ ಬಂದರು... ಪ್ರಶಾಂತನು ತನ್ನ ಕ್ಯಾಮೆರಾದಲ್ಲಿ ಪ್ರಕೃತಿಯ ಸುಂದರ ನೋಟಗಳನ್ನು ಸೆರೆಹಿಡಿಯುತ್ತಾ ಮುಂದೆ ಸಾಗಿದನು.

ನಾವು ವಿಶ್ರಾಂತಿ ಪಡೆಯದೆಯೇ ಕವಲೇದುರ್ಗ ಕೋಟೆಯನ್ನು ಹತ್ತಿದೆವು... ಕೋಟೆಯ Peak Point ಅನ್ನು ತಲುಪಿದಾಗ ಸಮಯ ಹನ್ನೊಂದು ಘಂಟೆ ನಲವತ್ತೈದು ನಿಮಿಷ...

ಕೋಟೆಯ ತುತ್ತತುದಿಗೆ ಹೋದಾಗ ನಾವು ಕಂಡ ದೃಶ್ಯ ರಮಣೀಯವಾಗಿತ್ತು... ಸಹ್ಯಾದ್ರಿಯ ಪರ್ವತ ಶ್ರೇಣಿ,

<span title=

ಲಿಂಗನಮಕ್ಕಿ ಜಲಾಶಯ, ಮಾರ್ಗ ಮಧ್ಯದಲ್ಲಿ ಕಂಡ ಸೇತುವೆ ಎಲ್ಲವೂ ನಮಗೆ ಕಂಡವು. <span title=

ಒಟ್ಟಿನಲ್ಲಿ ನಾವು ಕಂಡಂತಹ ದೃಶ್ಯ ನಯನ ಮನೋಹರವಾಗಿತ್ತು... ಅಲ್ಲೇ ಸ್ವಲ್ಪ ಹೊತ್ತು ಕಾಲ ಕಳೆದು ನಂತರ ಕೋಟೆಯಿಂದ ವಾಪಸ್ಸಾಗಲು ನಿರ್ಧರಿಸಿದೆವು...
ನಾವು ಮತ್ತೆ ನಮ್ಮ ವಾಹನದ ಬಳಿ ವಾಪಸ್ ಬರುವ ಹೊತ್ತಿಗೆ ಸಮಯ ಒಂದು ಘಂಟೆ ಮೂವತ್ತು ನಿಮಿಷವಾಗಿತ್ತು... ಹೊಟ್ಟೆ ಹಸಿದಿತ್ತು... ಅಲ್ಲಿಂದ ೪೦ ಕಿ. ಮೀ ದೂರವಿರುವ "ನಗರ" ಎಂಬ ಊರಿನ ಕಡೆ ಹಾದಿ ಹಿಡಿದೆವು. ನಗರದಲ್ಲಿ ಊಟಾ ಮಾಡಿ ನಮ್ಮ ಮುಂದಿನ ಗುರಿ "ಹಿಡ್ಲೆಮನೆ ಜಲಪಾತ"ದ ಕಡೆಗೆ ಹೊರಟೆವು.

ಹಿಡ್ಲೆಮನೆ ಜಲಪಾತ:

ಈ ಸುಂದರ ಜಲಪಾತವು "ಹೊಸನಗರ" ತಾಲ್ಲೂಕಿನ "ನಿಟ್ಟೂರು" ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಸಿಗುವ "ಕುಂಬಳೆ" ಎನ್ನುವ ಊರಿನಲ್ಲಿ ಸಿಗುವ ಸರ್ಕಾರಿ ಪ್ರಾಥಮಿಕ ಶಾಲೆಯ ನಂತರದ ಬಲಕ್ಕೆ ತಿರುಗಿ ಒಂದು ಕಿ ಮೀ ಮುಂದೆ ಹೋದರೆ ಅಲ್ಲಿ ಒಂದು ಮನೆ ಸಿಗುತ್ತದೆ. ಆ ಮನೆಯ ಬಳಿ ನಮ್ಮ ವಾಹನವನ್ನಿ ನಿಲ್ಲಿಸಿ, ಮನೆಯ ಹಿಂಬದಿಯಲ್ಲಿರುವ ತೋಟದ ಮಾರ್ಗವಾಗಿ ಹೋದಾಗ ನಮಗೆ ಸಿಕ್ಕಿದ್ದು ಈ ಜಲಪಾತ... ಈ ಜಲಪಾತಕ್ಕೆ ಹೋಗುವ ಹಾದಿ ಸುಗಮವಾಗಿಲ್ಲ. ಈ ಜಲಪಾತಕ್ಕೆ ನಾವು ಚಾರಣ ಮಾಡಿಕೊಂದು ಹೋಗಬೇಕು. ಪಾಚಿ ಕಟ್ಟಿದ್ದ ಕಲ್ಲು ಬಂಡೆಗಳನ್ನು ದಾಟಿಕೊಂಡು ಮೇಳೆ ಹತ್ತಿಕೊಂಡು ಹೋದಾಗ ನಮಗೆ ಈ ಜಲಪಾತ ಸಿಕ್ಕಿತು.

<span title=

ಈ ಜಲಪಾತದ ಕೆಲವು ಪಾಪೆಗಳನ್ನು ತೆಗೆದು, ಮುಕ್ಕಾಲು ಘಂಟೆ ಅಲ್ಲಿ ಕಾಲ ಕಳೆದು, ನಂತರ ಅಲ್ಲಿಂದ ಹೊರೆಟೆವು.
ಸಮಯ ಸಂಜೆ ಐದಾಗಿತ್ತು. ವಾಹನದ ಬಳಿ ಬಂದು ಅಲ್ಲಿಂದ ವಾಹನದಲ್ಲಿ ತೀರ್ಥಹಳ್ಳಿಯ ಕಡೆ ಪ್ರಯಾಣ ಬೆಳೆಸಿದೆವು... ತೀರ್ಥಹಳ್ಳಿಯ ಮಾರ್ಗದಲ್ಲಿ ಚಹಾ ಕುಡಿಯಲು ಮನಸ್ಸಾಗಿ, ಚಹಾ ಕುಡಿಯಲು ವಾಹನವನ್ನು ನಿಲ್ಲಿಸಿ, ಚಹಾ ಕುಡಿದು ಮತ್ತೆ ತೀರ್ಥಹಳ್ಳಿಯ ಕಡೆ ಪ್ರಯಾಣವನ್ನು ಬೆಳೆಸಿದೆವು. ತೀರ್ಥಹಳ್ಳಿ ತಲುಪಿದಾಗ ಸಮಯ ಏಳು ಘಂಟೆ ಮೂವತ್ತು ನಿಮಷ... ನಾವೆಲ್ಲರೂ ಫ್ರೆಶ್ ಆಗಿ, ಹೊಟೆಲ್ಲ್ಲೊಂದರಲ್ಲಿ ಊಟವನ್ನು ಮಾಡಿ ಮತ್ತೆ ನಾವಿದ್ದ ಕೋಣೆಗೆ ಬರುವಹೊತ್ತೆಗೆ ರಾತ್ರಿ ಹತ್ತು ಘಂಟೆ... ಆಮೇಲೆ, ಆ ದಿನದಲ್ಲಿ ಆದ ಘಟನೆಗಳನ್ನು ನಮ್ಮ ನಮ್ಮ ಮನೆಯವರಿಗೆ ದೂರವಾಣಿಯ ಮೂಲಕ ಕರೆ ಮಾಡಿ ತಿಳಿಸಿದೆವು...

ದಿನಾಂಕ ೨೭ ಜನವರಿ ೨೦೦೭:

ಬೆಳಿಗ್ಗೆ ನನ್ನನ್ನು ಹೊರತುಪಡಿಸಿ ಎಲ್ಲರೂ ಬೇಗನೆ ಎದ್ದು, ವಿನೋದ ಮತ್ತೆ ನಾನು ಹಿಂದಿನ ದಿನ ಹೋಗಿದ್ದ ನದಿಯ ಬಳಿ ಹೊರಟರು... ನಾನು ಇನ್ನು ಸ್ವಲ್ಪ ಹೊತ್ತು ಮಲಗಿದ್ದು, ಅವರು ಬರುವ ಹೊತ್ತಿಗೆ ಸ್ನಾನವನ್ನು ಮಾಡಿ ಅವರು ಬರುವಿಕೆಗಾಗಿ ಕಾಯುತ್ತಿದ್ದೆ... ಎಲ್ಲರೂ ಬಂದಮೇಲೆ, ಹೊಟೆಲ್ ಮಯೂರದಲ್ಲಿ ತಿಂಡಿಯನ್ನು ತಿಂದು ತೀರ್ಥಹಳ್ಳಿಯಿಂದ ಹನ್ನೆರಡು ಕಿ. ಮೀ ದೂರದಲ್ಲಿರುವ ಕುಪ್ಪಳ್ಳಿಯ ಕಡೆಗೆ ದಾರಿ ಹಿಡಿದೆವು...

<span title=

ಕುಪ್ಪಳ್ಳಿ ಎಲ್ಲರಿಗೂ ತಿಳಿದಿರುವಂತೆ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಊರು. ಅವರಿದ್ದ ಮನೆಯನ್ನು ಈಗ ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ...

<span title=

ಅಲ್ಲಿ ಸುಮಾರು ಎರಡು ಘಂಟೆ ಕಾಲ ಕಳೆದು ಕೆಲವು ಪುಸ್ತಕಗಳನ್ನು ಖರೀದಿಸಿ ಅಲ್ಲಿಂದ ಶೃಂಗೇರಿಯ ಕಡೆ ಪ್ರಯಾಣವನ್ನು ಬೆಳೆಸಿದೆವು...
ನಾವು ಶೃಂಗೇರಿಯನ್ನು ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಒಂದು ಘಂಟೆಯಾಗಿತ್ತು... ಶೃಂಗೇರಿ ಶಾರದಾಂಬೆಯ ದರ್ಶನವನ್ನು ಮಾಡಿ, ತುಂಗಾ ತೀರದಲ್ಲಿ ಸವಲ್ಪ ಹೊತ್ತು ಕಾಲ ಕಳೆದು ದೇವಸ್ಥಾನದಲ್ಲಿ ಊಟವನ್ನು ಮಾಡಿ "ಆಗುಂಬೆ" ಕಡೆ ಹೊರಟೆವು... ಹಾದಿಯು ಸುಗಮವಾಗಿದ್ದರಿಂದ ಸತೀಶನು ವಾಹನವನ್ನು ವೇಗವಾಗಿ ಡ್ರೈವ್ ಮಾಡಿದನು... ಆಗುಂಬೆಗೆ ಒಂದು ಕಿ. ಮೀ ಮುಂಚೆ ಎಡಕ್ಕೆ ತಿರುಗಿದರೆ ಬರ್ಕಣ ಜಲಪಾತಕ್ಕೆ ಹೋಗುವ ದಾರಿ ಸಿಗುತ್ತದೆ... ಆ ಜಂಕ್ಷನ್ ಇಂದ ಸ್ವಲ್ಪ ಮುಂದೆ ಹೋದರೆ ನಮಗೆ ಮತ್ತೊಂದು Deviation ಕಾಣುತ್ತದೆ. ಮುಖ್ಯರಸ್ತೆಯಿಂದ ಏಳು ಕಿ. ಮೀ ಮುಂದೆ ಹೋದರೆ ಸೊಗಸಾದ ಬರ್ಕಣ ಜಲಪಾತ ಸಿಗುತ್ತದೆ. ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ಎರಡು ಕಿ. ಮೀ ಮುಂದೆ ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋದೆವು. ನಿರ್ಜನ ಪ್ರದೇಶವಾಗಿದ್ದರಿಂದ ಆತಂಕವಾಗುತ್ತಿತ್ತು. ವಿನೋದ ಮತ್ತು ರಾಘವೇಂದ್ರ ನಮಗಿಂತ ಮುಂದೆ ಇದ್ದರು. ದಟ್ಟವಾದ ಕಾಡು ಪ್ರದೇಶದಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದಾಗ ವಿಚಿತ್ರ ಶಬ್ದ, ಹಕ್ಕಿಗಳ ಕಲರವ ಕೇಳಿಬರುತ್ತಿದ್ದವು. ಆತಂಕದಲ್ಲೂ ಒಂದು ರೀತಿಯ ಆನಂದವಿತ್ತು. ಮುಂದೇನಾಗುತ್ತದೆ ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು... ಹಾಗೇ ಮುಂದೆ ನಡೆದುಕೊಂಡು ಹೋದೆವು. ಇನ್ನೇನು ನಾವು ಜಲಪಾತದ ಹತ್ತಿರವಿದ್ದಾಗ, ನಾಗರಾಜ ಅವರಿಗೆ ಭಯವಾಗಿ ವಾಪಸ್ ಹೊರಡೋಣ ಎಂದರು. ಪ್ರಶಾಂತನು ಏನಾದರಾಗಲಿ ಜಲಪಾತವನ್ನು ನೋಡಿಯೇ ತೀರೋದು ಅಂತ ಪಟ್ಟು ಹಿಡಿದ ಮುಂದಕ್ಕೆ ಸಾಗಿದ. ನಾಗರಾಜನಿಗೆ ಬೇರೆ ವಿಧಿಯಿಲ್ಲದೆ ನಮ್ಮನ್ನು ಹಿಂಬಾಲಿಸಿಕೊಂಡು ಬರುವಂತಾಯಿತು. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಲೇ ನಮಗೆ ಸುಂದರವಾದ ಬರ್ಕಣ ಜಲಪಾತ ಕಾಣಿಸಿತು. ನಮ್ಮ ಕಣ್ಣುಗಳನ್ನು ನಂಬುವುದಕ್ಕೇ ಸಾಧ್ಯವಾಗಲಿಲ್ಲ. ಅಷ್ಟು ಸೊಗಸಾಗಿತ್ತು...

<span title=

ಪರ್ವತ ಶ್ರೇಣಿಗಳ ಮಧ್ಯೆಯಿಂದ ಧುಮ್ಮಿಕ್ಕುತ್ತಿದ್ದ ಬರ್ಕಣ ಜಲಪಾತದ ಬಳಿ ಕೆಲ ಹೊತ್ತು ಕಾಲ ಕಳೆದು ನಂತರ ಅಲ್ಲಿಂದ ಆಗುಂಬೆಯ ಕಡೆಗೆ ಹೊರಟೆವು.
ಆಗುಂಬೆಯಲ್ಲಿ ಸೂರ್ಯಾಸ್ತವನ್ನು ನೋಡಿ ಅಲ್ಲಿಂದ ಹೊರಡುವ ಹೊತ್ತಿಗೆ ಸಂಜೆ ಆರು ಘಂಟೆ ಮೂವತ್ತು ನಿಮಿಷ...

ಸೂರ್ಯಾಸ್ತವನ್ನು ನೋಡಿ ಅಲ್ಲಿಂದ ಬೆಂಗಳೂರಿಗೆ ಚಿಕ್ಕಮಗಳೂರು, ಹಾಸನ ಮಾರ್ಗವಾಗಿ ಹೋಗಲು ನಿರ್ಧರಿಸಿ, ಆಗುಂಬೆ ಚೆಕ್ ಪೋಸ್ಟ್ ಬಳಿ ಚಹಾ ಕುಡಿದು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ವಾಹನದಲ್ಲಿ ವಿನೋದನು ಡಾ||ರಾಜ್ ಕುಮಾರ್ ಅವರು ಹಾಡಿರುವ ಕೆಲವು ಹಾಡುಗಳನ್ನು ಹಾಡಿ ನಮ್ಮನ್ನು ರಂಜಿಸಿದನು.

ನಂತರ ನಾಗರಾಜ ಉಪೇಂದ್ರರ ರಕ್ತಕಣ್ಣೀರು ಚಿತ್ರದ ಸಂಭಾಷಣೆಗಳನ್ನು ಹೇಳಿ ನಮ್ಮನು ರಂಜಿಸಿದರು.

ವಾಹನವನ್ನು ಜಯಪುರದ ಬಳಿ ನಿಲ್ಲಿಸಿ ಮತ್ತೆ ಚಹಾ ಕುಡಿದು, ಹಾಸನದಲ್ಲಿ ಊಟಕ್ಕೆ ನಿಲ್ಲಿಸಿ, ಊಟವನ್ನು ಮುಗಿಸಿ ಅಲ್ಲಿಂದ ಹೊರಟಾಗ ರಾತ್ರಿ ಹನ್ನೊಂದು ಘಂಟೆ...
ಬೆಂಗಳೂರಿಗೆ ತಲುಪುವ ಹೊತ್ತಿಗೆ ಮುಂಜಾನೆ ಮೂರಾಗಿತ್ತು...

ಎಲ್ಲರನ್ನೂ ಅವರವರ ಮನೆಗೆ ಬಿಟ್ಟು ನಾನು ರಾಘು ಮನೆಗೆ ಹೋಗುವಷ್ಟರಲ್ಲಿ ಬೆಳಿಗ್ಗೆ ನಾಲ್ಕಾಗಿತ್ತು...

Thursday, October 09, 2008

ಮುತ್ತಿನ ಹಾರ - ದೇವರು ಹೊಸೆದ ಪ್ರೇಮದ ದಾರ

ಇಂದು ವಿಜಯದಶಮಿಯ ಪ್ರಯುಕ್ತ ರಾತ್ರಿ .೩೦ಕ್ಕೆ ಕಸ್ತೂರಿ ವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಹಾಗೂ ಅವರ ಮನೆಯವರೆಲ್ಲರ ಸಂದರ್ಶನ ಬರುತ್ತಿತ್ತು. ಆಗ ನನಗೆ ನೆನಪಿಗೆ ಬಂದದ್ದು ಅವರು ನಿರ್ದೇಶಿಸಿದ "ಮುತ್ತಿನ ಹಾರ" ಚಲನಚಿತ್ರ. ಚಿತ್ರದ ಹಾಡುಗಳು ನನ್ನ ಬಳಿ ಇಲ್ಲದಿದ್ದರಿಂದ ಗೂಗಲ್ ನಲ್ಲಿ ಸರ್ಚ್ ಮಾಡುವ ಯೋಚನೆ ಮನಸ್ಸಿಗೆ ಬಂತು. ನನಗೆ You tube ಮೂಲಕ ಚಿತ್ರದದೇವರು ಹೊಸೆದ ಪ್ರೇಮದ ದಾರಹಾಡಿನ ವೀಡಿಯೋ ಲಿಂಕ್ ದೊರೆಯಿತು.

ಈ ಹಾಡನ್ನು ನೋಡಿ, ಕೇಳಿ ಬಹಳ ದಿನಗಳಾಗಿದ್ದರಿಂದ, ಈ ಹಾಡು ಅಂತರ್ಜಾಲದಲ್ಲಿ ದೊರಕಿದಾಗ ನನಗೆ ಆದ ಆನಂದ ಅಷ್ಟಿಷ್ಟಲ್ಲ...

ಈ ಹಾಡಿನ ರಾಗ ಸಂಯೋಜನೆ ಅದ್ಭುತವಾಗಿದೆ. ಅದರ ಪೂರ್ಣ ಕ್ರೆಡಿಟ್ ಹಂಸಲೇಖ ಅವರಿಗೆ ಸಲ್ಲಬೇಕು.
ಡಾ|| ಎಂ. ಬಾಲಮುರಳಿಕೃಷ್ಣ ಅವರ ಗಾಯನವಂತೂ ಅದ್ಭುತವಾಗಿದೆ...

ಈ ಹಾಡಿನಲ್ಲಿ ಬರುವ ಅಮೃತವರ್ಷಿನಿ ರಾಗವೆಂದರೆ ನನಗೆ ಬಲು ಪ್ರೀತಿ...

ಹಾಡನ್ನು ನೋಡಿದಾಗ, ಕೇಳಿದಾಗ, ಮನಸ್ಸಿಗೆ ಸಂತೋಷವಾಯಿತು.

ಒಟ್ಟಿನಲ್ಲಿ ನನಗಂತೂ ಈ ಹಾಡು ತುಂಬಾ ಇಷ್ಟ...

ನೀವೂ ಈ ಹಾಡನ್ನು ನೋಡಿ... ಖುಷಿ ಪಡಿ... Smiling


ಚಿತ್ರ: ಮುತ್ತಿನ ಹಾರ
ಸಾಹಿತ್ಯ, ಸಂಗೀತ: ಹಂಸಲೇಖ
ಗಾಯಕರು: ಡಾ|| ಬಾಲಮುರಳಿಕೃಷ್ಣ, ಚಿತ್ರ ಮತ್ತು ಸಂಗಡಿಗರು
ದೇವರು ಹೊಸೆದ ಪ್ರೇಮದ ದಾರ
-------------------
ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ || ಪ ||

ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ಪ್ರೇಮಕೂ ಅಗ್ನಿಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಎಂದರೆ ನಾವು ಸುಡದೆ ಇರುವುದೆ ನೋವು
ಸರಿಯೋಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ
||ದೇವರು ಹೊಸೆದ ||

ಮೇಘವೋ ಮೇಘವು ಮುಂಗಾರಿನ ಮೇಘವು
ಮೇಘವೋ ಮೇಘವು ಹಿಂಗಾರಿನ ಮೇಘವು
ಹನಿ ಹನಿ ಹನಿ ಹನಿ ಚಿಟಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ
ಫಳ ಫಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಹೊಳೆಮಳೆ
ಹಸ್ತ ಚಿತ್ತ ಸ್ವಾತಿ ಹೊಳೆ ಮಳೆ
ಸಿಡಿಯುವ ಭುವಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ
ಆsss ಆssss ಆssss

ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಆssssss ಆsss
ವಸಂತಮಾಸದಲ್ಲಿ ಪ್ರೇಮವು ವೈಯ್ಯಾರಿಯಾಗಿ ಕುಣಿಯೆ
ಕವಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
ಕುಹು ಕುಹು ಕುಹು ಕುಹು ಕುಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೊಗಿಲೆ ಗಾನದ ಹೊನಲು
ಬಿಸಿಲೋ ಮಳೆಯೋ ಚಿಗುರೋ ಹಿಮವೋ
ಅಳುವೋ ನಗುವೋ ಸೋಲೋ ಗೆಲುವೋ
ಬದುಕೇ ಪಯಣ ನಡಿಯೇ ಮುಂದೆ
ಒಲವೇ ನಮಗೆ ನೆರಳು ಹಿಂದೆ
||ದೇವರು ಹೊಸೆದ||


ಮರೆತಿದ್ದೆ,
ಈ ಚಲನಚಿತ್ರಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ ಅನ್ಸುತ್ತೆ.

Wednesday, October 08, 2008

ಆಯುಧಪೂಜೆ ಮತ್ತು ಹಸಿವು...


ಇಂದು ಮಹಾನವಮಿ ಆಯುಧಪೂಜೆಯ ಪ್ರಯುಕ್ತ ಕಛೇರಿಗೆ ರಜೆಯಾದ ಕಾರಣ ಬೆಳಿಗ್ಗೆ ತಡವಾಗಿ ಅಂದರೆ ೭.೪೫ಕ್ಕೆ ಎದ್ದು ಸಂಪದ ಸಮುದಾಯದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ನಂತರ ಕಾರನ್ನು, ಬೈಕನ್ನು ತೊಳೆಯಲು ಕೋಣೆಯಿಂದ ಹೊರಡಲನುವಾಗುತ್ತಿದ್ದೆ. ಅಷ್ಟರಲ್ಲಿ ನನ್ನ ಚಿಕ್ಕಮ್ಮನ ಮಗ ಫೋನ್ ಮಾಡಿದ. ಏನು ವಿಷಯ ಅಂತ ಕೇಳಲು ಅವನು "ನಮ್ಮ ಮನೆಗೇ ಬಾ. ಇಲ್ಲೆ ಕಾರನ್ನು ತೊಳೆಯೋಣ. ಇಬ್ಬರ ಕಾರುಗಳನ್ನು ತೊಳೆಯಲು ಪರಸ್ಪರ ಸಹಾಯ ಮಾಡಿದಂತಾಗುತ್ತದೆ" ಅಂತ ಹೇಳಿದ. ನಾನು "ಸರಿ ಬರ್ತೀನಿ" ಅಂತ ಹೇಳಿ ಫೋನ್ ಕಟ್ ಮಾಡಿ ಅಮ್ಮ ಕೊಟ್ಟ ಹಾರ್ಲಿಕ್ಸ್ ಅನ್ನು ಕುಡಿದು ಕಾರನ್ನು ಓಡಿಸಿಕೊಂಡು ಪಕ್ಕದ ರಸ್ತೆಯಲ್ಲಿರುವ ಅವನ ಮನೆಗೆ ಹೋದೆ. ಆಗ ಸಮಯ ಹತ್ತು ಘಂಟೆ. ಇಂದು ರಜೆಯಾದ ಕಾರಣ ತಿಂಡಿಯೂ ತಡ. ಅಲ್ಲಿ ಹೋದ ತಕ್ಷಣ ನನ್ನ ಚಿಕ್ಕಮ್ಮ ಕಾಫಿ ಕುಡೀತೀಯೇನೋ ಅಂತ ಕೇಳಲು ಇನ್ನೊಂದು ಸ್ವಲ್ಪ ಹೊತ್ತು ಆಗಲಿ ಅಂತ ಹೇಳಿ ಕಾರನ್ನು ತೊಳೆಯಲು ಅಣಿಯಾದೆವು.

ಅಷ್ಟರಲ್ಲಿ ನನ್ನ ಸ್ನೇಹಿತರೊಬ್ಬರು ಎಸ್. ಎಮ್. ಎಸ್. ಮಾಡಿ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಅಂತ ಸಂದೇಶ ಕಳುಹಿಸಿದ್ದರು. ಅವರಿಗೆ ಫೋನ್ ಮಾಡಿ ದಸರಾ ಹಬ್ಬದ ಶುಭಾಶಯಗಳನ್ನು ಹೇಳಿ , ಹಾಗೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಮಾತನ್ನು ಮುಗಿಸುವಷ್ಟರಲ್ಲಿ ೧೫ ನಿಮಿಷಗಳು ಕಳೆದು ಹೋದವು. ನಂತರ ವಿಮೆ ಏಜೆಂಟ್ ಫೋನ್ ಮಾಡಿ "ನಿಮ್ಮ ಕಾರಿನ ವಿಮೆ ಬರುವ ಭಾನುವಾರದಂದು ಕೊನೆಗೊಳ್ಳುತ್ತದೆ, ಆದ್ದ್ರಿಂದ ನೀವು ಶುಕ್ರವಾರವೇ ನಮ್ಮ ಕಛೇರಿಗೆ ಬಂದು ವಿಮೆಯನ್ನು ಕಟ್ಟಬೇಕು". ಕೊನೆಯಲ್ಲಿ ವಿಮೆಗೆ ಕಟ್ಟಬೇಕಾದ ಒಟ್ಟು ಮೊತ್ತವನ್ನು ಹೇಳಿ ಫೋನ್ ಕಟ್ ಮಾಡಿದರು. ಸರಿ ಹೊತ್ತಾಗುತ್ತದೆ ಅಂತ ಫೋನನ್ನು ಸೈಲೆನ್ಟ್ ಮೋಡ್ ಗೆ ಮಾಡಿ ಕಾರನ್ನು ತೊಳೆಯಲು ಶುರುಮಾಡಿದಾಗ ವೇಳೆ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು. ಬೆಳಿಗ್ಗೆ ಒಂದು ಲೋಟ ಹಾರ್ಲಿಕ್ಸ್ ಬೆರೆಸಿದ ಹಾಲನ್ನು ಕುಡಿದಿದ್ದರಿಂದ ಹೊಟ್ಟೆ ತುಂಬಾ ಹಸಿದಿತ್ತು. ಕಾರುಗಳನ್ನು ತೊಳೆಯುದೇ ಸ್ನಾನ ಇಲ್ಲ, ಸ್ನಾನ ಮಾಡದೇ ತಿಂಡಿಯೂ ಇಲ್ಲ, ತೀರ್ಥವೂ ಇಲ್ಲ. :-(

ಮೊದಲು ನನ್ನ ಚಿಕ್ಕಮ್ಮನ ಮಗನ ಮಾರುತಿ ವ್ಯಾನನ್ನು ತೊಳೆಯಲು ಶುರುಮಾಡಿದೆವು. ಸುಮಾರು ಹನ್ನೆರಡು ಘಂಟೆಯ ಹೊತ್ತಿಗೆ ಅವನ ಕಾರನ್ನು ತೊಳೆದು ಒರೆಸಿ ಆಚೆ ನಿಲ್ಲಿಸಿ ನಂತ ನನ್ನ ಕಾರನ್ನು ತೊಳೆಯಲು ಶುರುಮಾಡಿದೆವು. ನನ್ನ ಕಾರನ್ನು ಇತ್ತೀಚೆಗಷ್ಟೇ ಸರ್ವೀಸ್ ಮಾಡಿಸಿದ್ದರಿಂದ ಜಾಸ್ತಿ ಕೊಳೆಯಿರಲಿಲ್ಲ. ಕಾರುಗಳನ್ನು ತೊಳೆದು ಒರೆಸುವ ಹೊತ್ತಿಗೆ ಗಡಿಯಾರದಲ್ಲಿ ಹನ್ನೆರಡು ಘಂಟೆ ಮೂವತ್ತು ನಿಮಿಷವಾಗಿತ್ತು.


ಬೆಳಗ್ಗಿನಿಂದ ಏನೂ ತಿನ್ನದೇ ಹೊಟ್ಟೆ ಹಸಿದಿದ್ದ ಕಾರಣ, ಮನೆಗೆ ಬಂದು ಬೇಗ ಬೇಗ ಬೈಕನ್ನು ತೊಳೆದು ಸ್ನಾನ ಮಾಡಿ, ದಿನವೂ ಮಾಡುವ ಸಂಧ್ಯಾವಂದನೆಯನ್ನು ಇಂದು ಮಾಡದೆ, ರಾಹುಕಾಲ ಮುಗಿಯುವವರೆಗೂ ಕಾದು ೧.೩೦ ರ ನಂತರ ಕಾರು ಮತ್ತು ಬೈಕುಗಳ ಪೂಜೆಯನ್ನು ಮಾಡಿ, ಚಕ್ರಕ್ಕೆ ನಿಂಬೇಹಣ್ಣುಗಳನ್ನು ಇಟ್ಟು, ಗಾಡಿಗಳಲ್ಲಿ ಒಂದು ಸುತ್ತು ಹೊಡೆದು ಮನೆಗೆ ಬಂದು ಅಮ್ಮ ಮಾಡಿದ್ದ ತರಕಾರಿ ಪಲಾವ್, ಆಂಬೊಡೆ, ಗಸಗಸೆ ಪಾಯಸವನ್ನು ತಿನ್ನುವ ಹೊತ್ತಿಗೆ ಸಮಯ ಎರಡು ಘಂಟೆ ಮೂವತ್ತು ನಿಮಿಷವಾಗಿತ್ತು.




ನಾಳೆ ವಿಜಯದಶಮಿಯ ಪ್ರಯುಕ್ತ ರಜೆ.




Tuesday, October 07, 2008

ರಾಜ್ಯೋತ್ಸವ ಓಟ ೨೦೦೮

ಕರ್ನಾಟಕ, ಒಂದೇ ರಾಜ್ಯ, ಒಂದೇ ಭಾಷೆ, ಗಂಧದ ನಾಡು ಮತ್ತು ಕಸ್ತೂರಿ ಬೀಡು. ಏಕೀಕರಣದ ಬಳಿಕ ಕರ್ನಾಟಕ ನವೆಂಬರ್ ೧ರಂದು ಉದಯಿಸಿತ್ತು. ಅಂದಿನಿಂದಲೂ ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದೇ ನಾಡಿನ ಉದ್ದಗಲಕ್ಕೂ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯ ರಾಜ್ಯೋತ್ಸವವನ್ನು ೨೦೦೮ರ ನವೆಂಬರ್ ೧ರ ಶನಿವಾರದಂದು ಆಚರಿಸಲಾಗುತ್ತಿದೆ. ಅಂದು ಸರ್ಕಾರಿ ರಜೆ. ಆದರೂ ಎಲ್ಲೆಡೆ ಧ್ವಜಾರೋಹಣ ಮಾಡಲಾಗುತ್ತದೆ. ದಿನವಿಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

೫೩ನೇ ಕನ್ನಡ ರಾಜ್ಯೋತ್ಸವದ ದಿನದಂದು ನಾಡಿನ ಜನತೆಗೆ ವಿನೂತನ ಕೊಡುಗೆ ನೀಡಲು ಬಯಸಿರುವ ಬೆಂಗಳೂರು ಮೂಲದ ಕ್ರೀಡಾ ನಿರ್ವಹಣಾ ಸಂಸ್ಥೆ, ಟ್ರಿಪಲ್ ಟ್ರೀ ಎಕ್ಸಿಬಿಷನ್ ಅಂಡ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ರಾಜ್ಯದ ಐದು ನಗರಗಳಲ್ಲಿ ’ರಾಜ್ಯೋತ್ಸವ ಓಟ ೨೦೦೮’ ಹಮ್ಮಿಕೊಂಡಿದೆ. ಅಂದು ಈ ಓಟದಲ್ಲಿ ರಾಜ್ಯದ ಜನತೆ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದೆ.

ಈ ಓಟವನ್ನು ಏಕ ಕಾಲಕ್ಕೆ ಬೆಂಗಳೂರು ಸೇರಿದಂತೆ ರಾಜ್ಯದ ಐದು ಜಿಲ್ಲೆ (ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮತ್ತು ಧಾರವಾಡ) ಗಳಲ್ಲಿ ಆಯೋಜಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿ ಇಂತಹ ವಿಭಿನ್ನ ಹಾಗೂ ವಿಶೇಷ ಓಟವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಯನ್ನು ಚಿಟುಕಿಸಿ...
ರಾಜ್ಯೋತ್ಸವ ಓಟ... " class="active">ರಾಜ್ಯೋತ್ಸವ ಓಟ...