My Blog List

Wednesday, October 29, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

<span title=

ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.

ಕಾಶಿಯಿಂದ ತಿರುವಾರೂರಿಗೆ ಹಿಂದಿರುಗುವಾಗ ತಿರುತ್ತಣಿಯಲ್ಲಿ ಸುಬ್ರಹ್ಮಣ್ಯ ದೇವರು ಪ್ರತ್ಯಕ್ಷರಾಗಿ ವಾಗ್ಗೇಯಕಾರನಾಗುವ ಶಕ್ತಿಯನ್ನು ಅನುಗ್ರಹಿಸಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ "ಗುರುಗುಹ" ಎಂಬ ಅಂಕಿತದೊಡನೆ ಕೃತಿ ರಚನೆಯನ್ನು ಆರಂಭಿಸಿದರು. ಇವರ ಮೊದಲ ಕೃತಿ ’ಶ್ರೀನಾಥಾದಿ’ ಮಾಯಾಮಾಳವಗೌಳ ರಾಗದಲ್ಲಿ, ಆದಿತಾಳದಲ್ಲಿ ರಚಿತವಾಗಿದೆ. ಪಲ್ಲವಿಯಲ್ಲಿಯೇ ಮೂರು ಕಾಲಗಳನ್ನು ಹೊಂದಿಸಿ ಮಾಡಿರುವ ವಿಶಿಷ್ಟ ಕೃತಿ ಇದು. ಕೆಲವು ಕೃತಿಗಳನ್ನು ಸಮಷ್ಟಿಚರಣದೊಡನೆ ರಚಿಸಿದ್ದಾರೆ. ಮಧ್ಯಮಕಾಲ ಸಾಹಿತ್ಯವನ್ನು ಕೃತಿಗಳಿಗೆ ಅಳವಡಿಸಿದ್ದಾರೆ.

ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಮುತ್ತುಸ್ವಾಮಿ ದಿಕ್ಷಿತರದು. ನಾಗಸ್ವರ ವಾದನ ಕ್ರಮವನ್ನು ರೂಪಿಸಿದವರೇ ದೀಕ್ಷಿತರು. ವಾಗ್ಗೇಯಕಾರರಾಗಿ, ವರ್ಣ, ಕೃತಿ, ಕೀರ್ತನೆ, ರಾಗಮಾಲಿಕೆಗಳನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಅನೇಕ ಆರ್ಷೇಯವಾದ ರಾಗಗಳನ್ನು ತಮ್ಮ ಕೃತಿಗಳ ಮೂಲಕ ಜೀವಂತಗೊಳಿಸಿದ್ದಾರೆ. ಎಪ್ಪತ್ತೆರಡು ಮೇಳಗಳಲ್ಲಿ ಕೃತಿಗಳನ್ನು ರಚಿಸಿ, ಮೇಳಗಳಿಗೆ ರಾಗ ಸ್ವರೂಪವನ್ನು ನೀಡಿದ್ದಾರೆ. ಸಮುದಾಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ನವಗ್ರಹ ಕೃತಿಗಳು, ಪಂಚಲಿಂಗ ಕೃತಿಗಳು, ನವಾವರಣ ಕೃತಿಗಳು ಮುಖ್ಯವಾದವು. ಪಾಶ್ಚಾತ್ಯ ಸಂಗೀತ ಮಟ್ಟುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ದೀಕ್ಷಿತರು ತಮ್ಮ ರಚನೆಗಳಲ್ಲಿ ಸೂಳಾದಿ ಸಪ್ತತಾಳಗಳನ್ನು ಮಾತ್ರ ಬಳಸಿದ್ದಾರೆ.
ದೀಕ್ಷಿತರು ಉತ್ತಮ ಶಿಷ್ಯರನ್ನು ಪಡೆದಿದ್ದರು. ಅವರ ದೌಹಿತ್ರರು (ಮಗಳ ಮಗ) ಮತ್ತು ದತ್ತು ಪುತ್ರರು ಆಗಿದ್ದ ಸುಬ್ಬರಾಮ ದೀಕ್ಷಿತರು ಅವರ ರಚನೆಗಳನ್ನು ಸ್ವರ ಲಿಪಿಯ ಮೂಲಕ ಬರೆದಿಟ್ಟು, ಮುಂದಿನ ಪೀಳಿಗೆಗೆ ಶುದ್ಧವಾದ ಸಂಪ್ರದಾಯಬದ್ಧವಾದ ಸಂಗೀತವನ್ನು ಉಳಿಸಿದ್ದಾರೆ.

ಇವರು ರಚಿಸಿರುವ ಕೃತಿ "ವಾತಾಪಿ ಗಣಪತಿಂ ಭಜೇಹಂ" ಇಲ್ಲಿದೆ ನೋಡಿ.

ಇವರು ರಚಿಸಿರುವ ಕೃತಿ "ಗಣನಾಯಕಮ್" ಇಲ್ಲಿದೆ ನೋಡಿ.

ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ