My Blog List

Thursday, August 27, 2009

ಕಲೋಸಸ್ ಪ್ರತಿಮೆ


ಕಲೋಸಸ್ ಪ್ರತಿಮೆ


ಯುದ್ಧದಲ್ಲಿ ಶತ್ರುವನ್ನು ಸೋಲಿಸಸಿದ ನೆನಪಿಗಾಗಿ ಗೆದ್ದ ರಾಜರು ವಿಜಯಸ್ತಂಭ ಸ್ಥಾಪಿಸುವುದು ಹಿಂದಿನ ಕಾಲದಿಂದಲೂ ಅನುಸರಿಸುತ್ತ ಬಂದಿರುವ ರೂಢಿ. ಇವು ಶಾಸನಗಳ ರೂಪದಲ್ಲಿಯೂ ಇವೆ. ಕರ್ನಾಟಕದ ವೀರಗಲ್ಲುಗಳು ನಮಗೆ ಪರಿಚಿತವಾಗಿವೆ.

ಹೀಗೊಂದು ವಿಜಯಸ್ತಂಭ ಅಪೂರ್ವವೂ, ಅದ್ಭುತವೂ ಆಗಿದ್ದು. ತಮ್ಮ ಕೀರ್ತಿಯನ್ನು ಶಾಶ್ವತಗೊಳಿಸುವಂತಿರಬೇಕು ಎಂಬ ಆಕಾಂಕ್ಷೆಯಿಂದ ಪುರಾತನ ರೋಡ್ಸ್ ದ್ವೀಪವಾಸಿಗಳು ವಿಜಯದ ಸ್ಮಾರಕವಾಗಿ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿದರು. ಅದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರಖ್ಯಾತವಾದ ಕಲೋಸಸ್ ಪ್ರತಿಮೆ.

ಈಗ ಗ್ರೀಸ್ ದೇಶಕ್ಕೆ ಸೇರಿರುವ ರೋಡ್ಸ್, ಮೆಡಿಟರೇನಿಯನ್ ದ್ವೀಪಗಳ ಪೈಕಿ ಒಂದಾಗಿದ್ದು, ಆಯಕಟ್ಟಿನ ಬಂದರಾಗಿತ್ತು. ಹಾಗಾಗಿ, ದ್ವೀಪದ ಮುಖ್ಯ ನಗರ ರೋಮನರ, ಪರ್ಶಿಯನರ, ಅರಬರ, ವೆನಿಷಿಯನರ, ತುರ್ಕರ (ಟರ್ಕಿ ದೇಶದವರು), ಹಾಗೆಯೇ, ಸೇಂಟ್ ಜಾನ್ಸ್ ಕ್ರೂಸೇಡಿಂಗ್ ನೈಟರ ಆಳ್ವಿಕೆಗೆ ಒಳಪಟ್ಟಿತ್ತು.

ಕ್ರಿ.ಪೂ. ಮೂರನೇ ಶತಮಾನದ ಅಂತ್ಯದ ವೇಳೆಗೆ ಮ್ಯಾಸಿಡೋನಿಯನ್ನರ ಭಾರಿ ಸೈನ್ಯ ರೋಡ್ಸ್ ದ್ವೀಪದ ಮೇಲೆ ದಾಳಿ ಮಾಡಿತು. ರೋಡ್ಸ್ ಜನರು, ಸಂಖ್ಯೆಯಲ್ಲಿ ಮ್ಯಾಸಿಡೋನಿಯನ್ನರಿಗಿಂತ ಕಡಿಮೆಯಾಗಿದ್ದರೂ, ಶೌರ್ಯದಿಂದ ಹೋರಾಡಿದರು. ಶತ್ರು ಸೈನ್ಯ ನಗರದ ಮೇಲೆ ಬಲವಾದ ಮುತ್ತಿಗೆ ಹಾಕಿತು. ರೋಡ್ಸ್ ಜನರು ಧೈರ್ಯಗುಂದಲಿಲ್ಲ. ಇಡೀ ಒಂದು ವರ್ಷ ನಡೆದ ಮುತ್ತಿಗೆ ಹಾಗೂ ಕದನದಲ್ಲಿ ಮ್ಯಾಸಿಡೋನಿಯನ್ನರ ಸೈನ್ಯ ಸೋತು ಹಿಮ್ಮೆಟ್ಟಿತು.

ಈ ವಿಜಯಕ್ಕೆ ಯೋಗ್ಯವಾದ ಸ್ಮಾರಕ ನಿರ್ಮಿಸುವ ಅಪೇಕ್ಷೆ ರೋಡ್ಸ್ ವಾಸಿಗಳದು. ದ್ವೀಪ ರಕ್ಷಣೆಗಾಗಿ ಹೋರಾಡಿದವರ ಪೈಕಿ ಚಾರೆಸ್ ಎಂಬ ಶಿಲ್ಪಿಯೂ ಇದ್ದ. ವಿಜಯ ಸ್ಮಾರಕ ನಿರ್ಮಾಣವನ್ನು ಆತನಿಗೆ ವಹಿಸಲಾಯಿತು. ಕಂಚಿನಲ್ಲಿ ತಯಾರಾದ ಆ ಪ್ರತಿಮೆಗಾಗಿ ಚಾರೆಸ್ ಮ್ಯಾಸಿಡೋನಿಯನ್ನರು ಬಿಟ್ಟು ಹೋಗಿದ್ದ ಯುದ್ಧ ಸಲಕರಣೆಗಳ ಲೋಹವನ್ನೇ ಬಳಸಿಕೊಂಡನು. ೩೨ ಮೀಟರ್ ಎತ್ತರದ, ಸುಮಾರು ೩೦೦ ಟನ್ ಭಾರದ ಕಲೋಸಸ ಪ್ರತಿಮೆಯ ನಿರ್ಮಾಣ ಪೂರ್ಣಗೊಳ್ಳಲು (ಕ್ರಿ. ಪೂ. ೨೯೨ ಇಂದ ಕ್ರಿ. ಪೂ. ೨೮೦ ವರೆಗೆ) ಹನ್ನೆರಡು ವರ್ಷಗಳು ಬೇಕಾಯಿತು. ಅದರ ಕೈಬೆರಳುಗಳು ಮನುಷ್ಯನಷ್ಟು ಉದ್ದವಿದ್ದವು.

ಪ್ರತಿಮೆ ನಿರ್ಮಾಣಗೊಂಡ ನಂತರ ಶಿಲ್ಪಿ ಚಾರೆಸನಿಗೆ ಅದು ಪ್ರಮಾಣಬದ್ಧವಾಗಿಲ್ಲ ಎನಿಸಿತು. ಅದರಿಂದಾಗಿ, ಸೂಕ್ಷ್ಮ ಪ್ರವೃತ್ತಿಯ ಚಾರೆಸ್ ಆತ್ಮಹತ್ಯೆ ಮಾಡಿಕೊಂಡನು. ಆದರೂ ಅಂದಿನ ಶಿಲ್ಪಿಗಳು ಪ್ರತಿಮೆ ಯಾವುದೇ ರೀತಿಯಿಂದಲೂ ಅತ್ಯಂತ ಪ್ರಮಾಣಬದ್ಧವಾಗಿದೆ ಎಂದು ಶ್ಲಾಘಿಸಿದರಲ್ಲದೇ, ಅದನ್ನು ಜಗತ್ತಿನ ಅದ್ಭುತಗಳಲ್ಲೊಂದೆಂದು ಸಾರಿದರು.

ಅದನ್ನು ನಿರ್ಮಿಸಿದ ಶಿಲ್ಪಿಯಂತೆಯೇ, ಪ್ರತಿಮೆಯದೂ ಅಲ್ಪಾಯುಷ್ಯವಾಗಿತ್ತು. ಅದರ ಸ್ಥಾಪನೆಯ ಐವತ್ತಾರು ವರ್ಷಗಳ ಬಳಿಕ ಸಂಭವಿಸಿದ ಭೂಕಂಪದಲ್ಲಿ ಕಲೋಸಸ್ ಪ್ರತಿಮೆ ಮುರಿದು ಚೂರುಚೂರಾಯಿತು. ಅದು ಮುರಿದು ಬಿದ್ದದ್ದನ್ನು ಕ್ರಿ. ಶ. ಒಂದನೆಯ ಶತಮಾನದಲ್ಲಿ ರೋಮನ್ ಇತಿಹಾಸಕಾರ ಪ್ಲಿನಿ ದಾಖಲುಗೊಳಿಸಿದ. ಮುಂದೆ ಏಳನೆಯ ಶತಮಾನದಲ್ಲಿ ಆ ದ್ವೀಪವನ್ನು ವಶಪಡಿಸಿಕೊಂದ ಅರಬರು ಕಲೋಸಸ್ ಪ್ರತಿಮೆಯ ಲೋಹದ ಚೂರುಗಳನ್ನು ಯಹೂದಿ ವರ್ತಕನೊಬ್ಬನಿಗೆ ಮಾರಿದರು.

ಆ ಪ್ರತಿಮೆಯ ಕಾಲಿನ ಕೆಳಗೆ ಹಡಗುಗಳು ತೂರಿಹೋಗುವಂತೆ ನಿರ್ಮಿಸಲಾಗಿತ್ತೆಂಬ ಪ್ರತೀತಿ ಇದೆ. ತರುವಾಯದ ಚಿತ್ರಕಾರರು ಆ ಪ್ರತಿಮೆ ಒಂದು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದಿರಬಹುದೆಂಬ ಊಹೆಯ ಮೇಲೆ ಅದರ ಚಿತ್ರ ರಚಿಸಿದರು.

ಆ ಕಾಲದಲ್ಲಿ ಪ್ರತಿಮೆಯ ಒಂದೊಂದು ಭಾಗವನ್ನು ಕಂಚಿನ ತಗಡುಗಳ ರೂಪದಲ್ಲಿ ತಯಾರಿಸಿ, ಅವುಗಳನ್ನು ಬೆಸೆಯಲು ಪ್ರತಿಯೊಂದು ಹಂತದ ಎತ್ತರಕ್ಕೆ ಅಟ್ಟ ಕಟ್ಟಿ ಕುಲುಮೆಗಳನ್ನು ಸ್ಥಾಪಿಸಿದ್ದ ಆ ಶಿಲ್ಪಿಯ ಕಾರ್ಯಕೌಶಲ್ಯ ಬೆರಗುಗೊಳಿಸುವುದಂತೂ ನಿಜ.

ಚಿತ್ರ ಕೃಪೆ: ಇಲ್ಲಿಂದ

Thursday, August 06, 2009

ಕಲೋಸಿಯಮ್

ಕಲೋಸಿಯಮ್

ಕಲೋಸಿಯಮ್

ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು ದೊಡ್ಡ ನಗರದಲ್ಲಿಯೂ ಕಲೋಸಿಯಮ್ ಇದ್ದಿರಬಹುದಾದರೂ, ರಾಜಧಾನಿಯಲ್ಲಿ ಕಲೋಸಿಯಮ್ ಸಹಜವಾಗಿಯೇ ಚಕ್ರವರ್ತಿಯ ಅಂತಸ್ತನ್ನು ಸಾರುವಂತೆ ಭವ್ಯವಾಗಿ ಇರಬೇಕಾಗುತ್ತಿತ್ತು. ಗ್ರೀಕರ ಕಾಲದಲ್ಲಿ ಸಂಗೀತ, ನಾಟಕ ಸ್ಪರ್ಧೆಗಳಿಗೆ ಕ್ರೀಡೆ, ಮನೊರಂಜಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ಆಂಫಿಥಿಯೇಟರುಗಳು, ರೋಮನ್ನರ ಕಾಲಕ್ಕೆ ಕಲೋಸಿಯಮ್ಮುಗಳಾಗಿ ಗುಲಾಮರನ್ನೂ, ಖಡ್ಗ ಮಲ್ಲರುಗಳನ್ನೂ, ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಯೆನಿಸಿದವು.

ರೋಮ್ ನಗರದಲ್ಲಿ ಎಸ್ಕೈಲಿನ್ ಮತ್ತು ಸೇಲಿಯನ್ ಬೆಟ್ಟಗಳ ಮಧ್ಯೆ ಪುರಾತನ ರೋಮನ್ ಕಲೋಸಿಯಮ್ಮಿನ ಅವಶೇಷವಿದೆ. ಪ್ರತಿದಿನ ಬಹುಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಇದು ಇಂದಿನ ಅಧುನಿಕ ಮಾನಕಗಳ ದೃಷ್ಟಿಯಿಂದ ಸಹ ಬೆರಗುಗೊಳಿಸುವಂತಿದೆ. ಅಂಡಾಕಾರದಲ್ಲಿರುವ ಇದು ೧೮೮ ಮೀ. ಉದ್ದ, ೧೫೬ ಮೀ. ಅಗಲ ಹಾಗೂ ೫೨೭ ಮೀ. ಸುತ್ತಳತೆಯದ್ದಾಗಿದೆ. ಕೇಂದ್ರ ರಂಗ ಸಹ ಅಂಡಾಕಾರವಾಗಿದ್ದು, ೮೭ ಮೀ. ಉದ್ದ, ಮತ್ತು ೭೪ ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದಿದ್ದು ೫೭ ಮೀ. ಎತ್ತರವಾಗಿದೆ. ಅದು ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಮೂರನೆಯ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.

ಈಗ ಉಳಿದಿರುವ ಕಲೋಸಿಯಮ್ಮಿನ ನಿರ್ಮಾಣ ಕಾರ್ಯ ಬಹುಶಃ ಕ್ರಿ. ಶ ೭೦ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಮುಂಚೆ ಇದ್ದ ಕಲೋಸಿಯಮ್ಮನ್ನು ಮರದಿಂದ ನಿರ್ಮಿಸಲಾಗಿದ್ದು ಕ್ರಿ. ಶ. ೬೪ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾದುದರಿಂದ ಹೊಸ ಕಲೋಸಿಯಮ್ ನಿರ್ಮಾಣ ಅಗತ್ಯವಾಗಿತ್ತು. ಹತ್ತು ವರ್ಷಗಳ ಕಾಲ ನಡೆದ ಅದರ ನಿರ್ಮಾಣಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತು ಶಿಲ್ಪಿಗಳು, ರೋಮಿನ ಕಾರ್ಮಿಕರ ಜೊತೆಗೆ ಸಾವಿರಾರು ಮಂದಿ ಗುಲಾಮರು ಭಾಗವಹಿಸಿದ್ದರು. ಚಕ್ರವರ್ತಿ ಟಾಇಟಸ್ ಅದನ್ನು ಉದ್ಘಾಟಿಸಿದ.

ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆಗಳನ್ನು ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯ ನಾಗರಿಕರಿಗೆ, ಅವರವರ ಅಂತಸ್ತಿಗೆ ತಕ್ಕಂತೆ ಆಸನಗಳು ಇದರಲ್ಲಿತ್ತು. ಒಂದೇ ಬಾರಿಗೆ ನಲವತ್ತೈದು ಸಾವಿರ ಮಂದಿ ಕುಳಿತು, ಐದು ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. ಇದಲ್ಲದೆ, ಕ್ರೀಡೆಗಳಲ್ಲಿ ಭಾಗವಹಿಸುವವರು ರಂಗ ಪ್ರವೇಶಿಸಲು, ಪಂದ್ಯಾಟಗಳಲ್ಲಿ ಪ್ರಾಣ ತೆತ್ತವರ ಕಳೇಬರವನ್ನು ಕೂಡಲೇ‌ ಸಾಗಿಸುವ ಏರ್ಪಾಟುಗಳೂ ಇದ್ದವು. ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪ್ರೇಕ್ಷಕರ ಮನರಂಜಿಸಲು ಕೋಡಂಗಿಗಳಿಗೆ ಅವಕಾಶ, ನೆಲಮಾಳಿಗೆಗಳಲ್ಲಿ ಕ್ರೂರ ಮೃಗಗಳಿಗಾಗಿ ಪಂಜರಗಳು, ಪಂಜರಗಳ ಬಾಗಿಲು ತೆರೆಯಲು ಒಂದು ನಿಯಂತ್ರಣ ಕೇಂಡ್ರ, ಇತ್ಯಾದಿ ವ್ಯವಸ್ಥೆಗಳೂ ಇದ್ದವು.

ಆಗ ಪರಿಚಿತವಾಗಿದ್ದ ಕ್ರೀಡೆಗಳ ಪೈಕಿ ಖಡ್ಗಮಲ್ಲರುಗಳ ಕದನ ಬಹಳ ಜನಪ್ರಿಯವಾಗಿತ್ತು. ಇಂಥ ಜನಪ್ರಿಯ ಖಡ್ಗಮಲ್ಲರುಗಳಲ್ಲಿ ಗುಲಾಮನಾಗಿದ್ದ ಸ್ಪಾರ್ಟಕಸ್ ಕೂಡ ಒಬ್ಬ. ವೈಯಕ್ತಿಕ ಸಾಹಸದ ಕ್ರೀಡೆಯನ್ನು ರೋಮನರು ಕ್ರೂರ ಕ್ರೀಡೆಯಾಗಿ ಮಾರ್ಪಡಿಸಿದ್ದರು. ಅಂದಿನ ಜನರೂ ಇದನ್ನು ನೋಡುವುದಕ್ಕೆ ಒಗ್ಗಿ ಹೋಗಿದ್ದರು!

ಕಲೋಸಿಯಮ್ಮಿನ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ನಡೆದ ಮೋಜಿನ ಕ್ರೀಡೆಗಳ ಸಂದರ್ಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೇ ಅಪರಾಧಿಗಳನ್ನೂ, ಸೈನ್ಯ ಸೇವೆ ತೊರೆದವರನ್ನೂ, ಮತ್ತು ಇನ್ನೂ ಹಲವು ಖೈದಿಗಳನ್ನೂಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆಯನ್ನು ಬಳಸಲಾಗುತ್ತಿತ್ತು. ಕೆಲವೊಮ್ಮೆ ಖೈದಿಗಳು ತಮ್ಮ ತಮ್ಮಲ್ಲಿಯೇ ಹೋರಾಡುತ್ತ ಮಿತ್ರರನ್ನು ಕೊಲ್ಲಬೇಕಾದ ಪರಿಸ್ತಿಥಿಯೂ ಉಂಟಾಗುತ್ತಿತ್ತು. ಮುಂದೆ ಕ್ರಿ. ಶ. ೪೦೪ರಲ್ಲಿ ಈ ಕ್ರೂರ ಕ್ರೀಡೆಯನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು.

ಚಿತ್ರ ಕೃಪೆ: ಇಲ್ಲಿಂದ