My Blog List

Friday, February 12, 2010

ನಿರಾಕಾರ ಸ್ವರೂಪ ಪರಶಿವ.

ಮಂಜುನಾಥ.
ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾರ್ಥ. ಜನಿಸಿದೆಲ್ಲವೂ ಮರಣ ಹೊಂದಲೇಬೇಕು, ನಾಶವಾಗಲೇಬೇಕು. ಇದು ಸೃಷ್ಟಿಯ ನಿಯಮ. ಇದನ್ನು ಸಂಕೇತಿಸುವ ಶಕ್ತಿಯೇ ಶಿವ. ಶಿವ ಎಂಬ ಪರಿಕಲ್ಪನೆಯ ಅರ್ಥ ಇಷ್ಟಕ್ಕೇ ಸೀಮಿತವಾದದ್ದಲ್ಲ. ಅಂತ್ಯವಿಲ್ಲದ ಶೂನ್ಯದೊಳಗೆ ವಿಲೀನಗೊಳ್ಳುವುದೇ ಜಗತ್ತಿನ ಅವಸಾನ, ಅದುವೇ ಲಯ. ಈ ಮಹಾಶೂನ್ಯವನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದರ ಸ್ವರೂಪವೇ ಪರಶಿವ. ತಮಿಳುನಾಡಿನ ಚಿದಂಬರಂ ಕ್ಷೇತ್ರ ಬಹಳ ಪ್ರಖ್ಯಾತವಾದದ್ದು. ಅಲ್ಲಿನ ದೇಗುಲದ ಗರ್ಭಗುಡಿಯಲ್ಲಿ ಉಳಿದ ಶಿವಾಲಯಗಳಂತೆ ಶಿವಲಿಂಗವಿಲ್ಲ. ಗರ್ಭಗುಡಿ ಬರಿದಾಗಿದ್ದು ಗೋಡೆಯ ಮೇಲೆ ಚಕ್ರವೊಂದರ ನಿರೂಪಣೆ ಇದೆ. ಇಲ್ಲಿರುವುದು ಆಕಾಶ ಲಿಂಗ (ಆಕಾಶವನ್ನು ಶೂನ್ಯಕ್ಕೆ ಹೋಲಿಸಿದ್ದಾರೆ) ಎಂದು ಪ್ರತೀತಿ. ಅದರ ಮುಂದೆ ತೆರೆಯನ್ನೆಳೆದಿದ್ದಾರೆ. ಪೂಜೆಯ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಪಕ್ಕಕ್ಕೆ ಸರಿಸುತ್ತಾರೆ. ಇದೇ 'ಚಿದಂಬರ ರಹಸ್ಯ' ಎಂದು ಪ್ರಖ್ಯಾತವಾಗಿದೆ. ಆಕಾರವು ಮನುಷ್ಯನ ಗ್ರಹಿಕೆಗೆ ಎಟುಕಲು ಮಾತ್ರ ರೂಪುಗೊಂಡಿದೆ. ಪರಮಾತ್ಮನ ನಿಜಸ್ವರೂಪ ರೂಪ ರೂಪಗಳನ್ನು ಮೀರಿದ್ದು ಎಂಬ ಅರ್ಥ ಇಲ್ಲಿದೆ. ರೂಪಾತೀತ ಸ್ಥಿತಿಯೇ ಶಿವನ ನಿಜವಾದ ಸ್ವರೂಪ.

ಶಿವನ ಸ್ವರೂಪಗಳು.
ನಿರಾಕಾರಮಯನಾದ ಶಿವನ ಆರಾಧನೆಯಲ್ಲಿ ಶಾಂತ ಸ್ವರೂಪವನ್ನು ಕಾಣಬಹುದಾಗಿದ್ದು, ಪ್ರಳಯ ಸ್ವರೂಪವಾದ ರುದ್ರನೆಂಬ ಇನ್ನೊಂದು ಆಕಾರವೂ ಇದೆ. ಶಿವನು ಒಂದು ರೂಪದಲ್ಲಿ ಶ್ವೇತವರ್ಣನಾಗಿದ್ದರೆ, ಇನ್ನೊಂದು ರೂಪದಲ್ಲಿ ಕಡು ನೀಲಿಬಣ್ಣವನ್ನು ಹೊಂದಿದ್ದಾನೆ. ಪರಸ್ಪರ ವಿರುದ್ಧ ಎನಿಸಬಹುದಾದ ಈ ಗುಣಗಳು ಶಿವನಿಗಿರುವುದು ಆಶ್ಚರ್ಯಕರ ಎನಿಸಬಹುದು. ಆದರೆ, ಎಲ್ಲಾ ವರ್ಣಗಳನ್ನು ಬೇರ್ಪಡಿಸಲಾಗದಂತೆ ಪಡೆದಿರುವ ಇವನ ನಿರಾಕಾರವು ಅಸಂಖ್ಯ ಆಕಾರಗಳ ಪೂರ್ಣ ಸ್ವರೂಪವೂ ಆಗಿದೆ. ಹೀಗಾಗಿ ನೋಡುವವರ ಭಾವಕ್ಕೆ ತಕ್ಕ ಬಣ್ಣಗಳಲ್ಲಿ ಶಿವನು ಕಂಡಿದ್ದಾನೆ. ಮುಕ್ಕಣ್ಣನೆಂದು ಹೆಸರಾದ ಶಿವನಿಗಿರುವ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳ ಸಂಕೇತ. ಇವು ಬೆಳಕು, ಜೀವ ಮತ್ತು ಶಾಖದ ಮೂಲ ಆಕಾರಗಳೂ ಹೌದು. ಹಾಗೇ‌ಸಾಮಾನ್ಯ ಕಣ್ಣುಗಳನ್ನು ಮೀರಿದ ಶಿವನ ಮೂರನೆಯ ಕಣ್ಣು, ಜ್ಞಾನ ನೇತ್ರ. ಅದು ವಿವೇಕದ ಸಂಕೇತ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ. ತೆರೆದರೆ ಮಹಾ ಪ್ರಳಯವೇ ಆಗಿ ಬಿಡುತ್ತದೆ ಎಂಬಲ್ಲಿ ಜ್ಞಾನ ಮತ್ತು ವಿವೇಕಗಳು ಒಟ್ಟಾಗಿ ಇರಬೇಕಾದ ಸರ್ವ ವ್ಯಾಪಕತೆಯ ಗುಣವನ್ನು ಗಮನಿಸಬಹುದು.

ಸೂರ್ಯ-ಚಂದ್ರರೇ ಶಿವನ ಸಹಜ ಕಣ್ಣುಗಳಾದರೆ ಪ್ರಚಂಡವಾಗಿ ಬೀಸುತ್ತಿರುವ ಗಾಳಿಸಹಿತವಾದ ಇಡೀ ಆಕಾಶವು ಅವನ ತಲೆಗೂದಲಾಗುತ್ತದೆ. ಆದ್ದರಿಂದಲೇ ಅವನಿಗೆ 'ವ್ಯೋಮಕೇಶ' (ಆಕಾಶವನ್ನೇ ತಲೆಗೂದಲಾಗಿ ಉಳ್ಳವನು) ಎಂದು ಕರೆಯುತ್ತಾರೆ. ಹುಲಿಯು ಆಕ್ರಮಣಕಾರಿಯಾದ ಪ್ರಾಣಿ. ಅಸಹಾಯಕ ಬಲಿಪಶುಗಳನ್ನು ನಿರ್ದಾಕ್ಷಿಣ್ಯವಾಗಿ ಬಗೆದು ತಿನ್ನುವ ಕ್ರೂರಿ. ಇದನ್ನು ಎಂದಿಗೂ ತೃಪ್ತಿಗೊಳ್ಳದೆ ಮಾನವರನ್ನು ಸದಾ ಬಲಿ ತೆಗೆದುಕೊಳ್ಳುತ್ತಿರುವ 'ಆಸೆ'ಗಳಿಗೆ ಹೋಲಿಸಬಹುದು. ಹುಲಿಯನ್ನು ಕೊಂದು ಅದರ ಚರ್ಮವನ್ನು ಧರಿಸಿರುವ ಶಿವನು ಆಸೆಯನ್ನು ಮೆಟ್ಟಿ ನಿಂತಿರುವ ಮನೋಸ್ಥಿತಿಯ ಸಂಕೇತ.

ಆನೆ, ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದದ್ದು. ಶಿವನು ಅದರ ಚರ್ಮವನ್ನು ಧರಿಸಿ ಎಲ್ಲಾ ಬಗೆಯ ಪಶುಭಾವಗಳನ್ನು ಜಯಿಸಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಾನೆ. ಶಿವನು ಧರಿಸಿರುವ ತಲೆಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೇ ಅವನು ವಿನಾಶದ ಪ್ರಭು ಎಂದು ಸೂಚಿಸುತ್ತದೆ. ತಲೆಬುರುಡೆಗಳ ಮೂಳೆಯು ಕಾಲಪ್ರವಾಹದ ಆವರ್ತಗಳನ್ನು, ಸೃಷ್ಟಿ-ಸ್ಥಿತಿ-ಲಯಗಳ ನಿರಂತರವಾದ ಕಾಲಚಕ್ರವನ್ನು ಸೂಚಿಸುತ್ತದೆ. ಹೀಗೆ ಶಿವನ ಸ್ವರೂಪದಲ್ಲಿ ತಾತ್ತ್ವಿಕತೆಯನ್ನು ಕಾಣಬಹುದು. 
(ಇನ್ನೂ ಇದೆ) 

Thursday, February 11, 2010

ಗಣಪತಿಯು ವಾಕ್ಸ್ವರೂಪಿ.

ಮಣ್ಣಿನ ಗಣಪತಿ.

ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಈತನೇ ಲಂಬೋದರ. ಇದನ್ನು ಆತ ಮೂರುವರೆ ಸುತ್ತುಗಳುಳ್ಳ  ಸರ್ಪದಿಂದ ಹಿಡಿದಿಟ್ಟಿದ್ದಾನೆ. ಹಿಂದೂ ಧರ್ಮದಲ್ಲಿ ಸರ್ಪವು ಕಾಮದ ಸಂಕೇತ. ಕಾಮವು ನಿಯಂತ್ರಣವಿಲ್ಲದಿದ್ದಾಗ ಹೇಗೆ ಅಪಾಯಕಾರಿಯೋ, ಹಾಗೇ ನಿಯಂತ್ರಣದಲ್ಲಿದ್ದಾಗ ಸೃಷ್ಟಿಯ ವಿಕಾಸಕ್ಕೆ ಕಾರಣವಾಗುತ್ತದೆ. ಗಣಪತಿಗೆ ವಾಹನವಾಗಿರುವುದು ಇಲಿ. ಅದು ಸ್ವಭಾವದಲ್ಲಿ ಹಾವಿನ ಶತ್ರು. ಸ್ವಭಾವವನ್ನು ಮೀರಿದ ಜ್ಞಾನದಲ್ಲಿ ಶತ್ರುತ್ವ ಇರುವುದಿಲ್ಲವೆಂದು ತಿಳಿಸುವ ಸಲುವಾಗಿಯೇ ಗಣಪತಿ ಅವೆರಡನ್ನೂ ಒಟ್ಟಾಗಿ ಇರಿಸಿಕೊಂಡಿರುವನು. ಗಣಪತಿಯ ವಾಹನವಾದ ಮೂಷಕ (ಇಲಿ) ಎಂಬ ಶಬ್ದವು  ಮೂಷ್ (ಅಂದರೆ 'ಕದಿಯುವಿಕೆ') ಎಂಬ ಧಾತುವಿನಿಂದ ಬಂದಿದೆ. ಮೂಷಕವು ಅಂದರೆ ಆಸೆಯು ಕಳ್ಳತನದಿಂದ ಮನಸ್ಸಿನಲ್ಲಿ ಪ್ರವೇಶಿಸಿ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ನಾಶ ಮಾಡುತ್ತದೆ. ಅದನ್ನು ದಿವ್ಯ ಜ್ಞಾನದಿಂದ ನಿಯಂತ್ರಿಸಿದಾಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಮನುಷ್ಯರ ಬುದ್ಧಿಯನ್ನು ಚಂಚಲ ಮಾಡುವ ಆಸೆಗಳನ್ನು ಮೂಷಕವು ಪ್ರತಿನಿಧಿಸುತ್ತದೆ. ಎಲ್ಲಾ ವಿಷಯಾಸಕ್ತಿಗೆ ಸಂಕೇತವಾಗಿರುವ ಇಲಿಯು ಹರಿತವಾದ ಬುದ್ಧಿಗೂ ಸಂಕೇತವಾಗಿದೆ. ಗಣಪತಿಯು ವಿದ್ಯೆಯ ಅಧಿದೇವತೆಯಾಗಿರುವುದರಿಂದ ಇಲಿಯನ್ನೇ ವಾಹನವನ್ನಾಗಿರಿಸಿಕೊಂಡಿರುವುದು ಸಹಜವಾಗಿದೆ.

ಮಣ್ಣಿನ ಮಗನಾಗಿ ಗಣಪತಿ.
ಮೂಲತಃ ಮಣ್ಣಿನ ಮಗನಾಗಿ ಗಣಪತಿ, ಕೃಷಿ ಅಭಿಮಾನಿಯಾದ ದೇವತೆಯೂ ಹೌದು. ಈತನ ದೊಡ್ಡ ಹೊಟ್ಟೆಯನ್ನು ಕಣಜದ ಸಂಕೇತವನ್ನಾಗಿ ನೋಡಬಹುದು. ಕಿವಿಗಳು ಮರದಂತೆ ವಿಶಾಲ. ಅವು ಒಳಿತು-ಕೆಡಕುಗಳು ಬೆರೆತ ವಿಚಾರಗಳನ್ನು ಕೇರಿ ಶುದ್ಧೀಕರಿಸುವಂತಹವುಗಳು. ಗಣಪತಿಯ ಕೈಯಲ್ಲಿರುವ ಕಬ್ಬಿನ ಜಲ್ಲೆ, ಅವನಿಗೆ ಅತ್ಯಂತ ಪ್ರಿಯವಾದ ಪತ್ರ-ಪುಷ್ಪಗಳು ಎಲ್ಲವೂ ವ್ಯವಸಾಯದ ಪ್ರತೀಕಗಳೇ. ಈತನು ಧಾನ್ಯಗಳನ್ನು ಹಾಳು ಮಾಡುವ ಮೂಷಕವನ್ನು ನಿಯಂತ್ರಿಸಿ ವಾಹನವನ್ನಾಗಿಸಿಕೊಂಡವನು. ಬೆಳೆಗಳಿಗೆ ತೊಡಕನ್ನು ತರುವ ಕಾಡುಹಂದಿ, ಆನೆ ಮೊದಲಾದವುಗಳನ್ನು ನಿಯಂತ್ರಿಸುವ ಪಾಶಾಂಕುಶಗಳು ಈತನ ಕೈಯಲ್ಲಿವೆ. ಈತನ ತಾಯಿ ಪಾರ್ವತೀ ಬೆಟ್ಟದ ಮಗಳಾದರೆ, ತಂದೆ ಪರಮೇಶ್ವರನು ಬೆಟ್ಟದ ವಾಸಿಯಾಗಿದ್ದಾನೆ. ಇವೆಲ್ಲವೂ ಗಣಪತಿಯ ಸ್ವರೂಪದಲ್ಲಿನ ಕೃಷಿ ಚಟುವಟಿಕೆಗಳಿಗೆ ಸಂಕೇತವಾಗಿದೆ. ಗಣಪತಿಯ ಮಣ್ಣಿನ ಮೂರ್ತಿಯೇ ಶ್ರೇಷ್ಟ ಎನ್ನುವುದರ ಹಿನ್ನೆಲೆ ಇದೇ.

ಇಂದಿನ ಯುಗದ ನಾಯಕತ್ವದ ಸಮಸ್ತ ಗುಣಗಳಿಗೂ ಗಣಪತಿಯು ಆದರ್ಶಪ್ರಾಯನಾಗಿರುವನು. ಒಳ್ಳೆಯ ಮಾತು, ಪ್ರಚಂಡ ಬುದ್ಧುಶಕ್ತಿ, ಕಲಾ ಪ್ರೌಢಿಮೆ, ಇಂದ್ರಿಯನಿಗ್ರಹ, ವ್ಯವಹಾರ ಚಾತುರ್ಯ ಎಲ್ಲವೂ ಇವನ ಸ್ವತ್ತು. ಇದೇ ಕಾರಣಕ್ಕೆ ಇವನು ವಿಶ್ವನಾಯಕನೂ ಹೌದು. 

(ಮುಗಿಯಿತು) 

ಚಿತ್ರ ಕೃಪೆ: ಪವಿತ್ರ

Wednesday, February 10, 2010

ಗಣಪತಿಗೇ ಏಕೆ ಮೊದಲ ಪೂಜೆ?

ಗಣಪ.

ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ ಎಂಬುದು ಒಂದು ವಿವರಣೆ. ಇನ್ನೊಂದು ಮಾದರಿ ವಿಶ್ಲೇಷಣೆ ಎಂದರೆ ಶಿವನು ಪರಮ ಪುರುಷನಾದರೆ, ಪಾರ್ವತಿಯು ಪರಮ ಪ್ರಕೃತಿ. ಆಕೆಯ ದೇಹದಲ್ಲಿನ ಕೊಳೆ ಎಂದರೆ ಅದು ಮಾಯಾ ಪ್ರಕೃತಿ. ಅದನ್ನು ಪಡೆದು ಹುಟ್ಟಿದವನು ಗಣಪತಿ. ಪರಶಿವನು ಈ ತಮೋಗುಣಗಳ ಶಿರವನ್ನು ತೆಗೆದು ಅದರಲ್ಲಿ ಬ್ರಹ್ಮ ಸ್ವರೂಪಿಯಾದ ಗಜ ಮುಖವನ್ನು ಇಟ್ಟಿದ್ದಾನೆ. ಹೀಗಾಗಿ ಮಾಯೆಯನ್ನು ಗೆದ್ದು ಸತ್ಯದ ಅರಿವು ಮೂಡಿಸಬಲ್ಲವನು ಎಂಬ ಅಂತರಾರ್ಥ ಗಣಪತಿಯ ಸ್ವರೂಪದಲ್ಲಿದೆ. ಚಿಂತನಾಕ್ರಮದಲ್ಲಿನ ಪರಿಶುದ್ಧತೆ ಮತ್ತು ಪರಿಪೂರ್ಣತೆಯೇ ಆತನ ಮೊದಲ ಪೂಜೆಗೆ ಕಾರಣವಾಗಿದೆ. 

ಗಣಪತಿಯ ಮೂರ್ತಿಸ್ವರೂಪ.
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ. 

ಗಣಪತಿಯ ಸ್ವರೂಪದಲ್ಲಿರುವ ಕುತೂಹಲಕರ ಅಂಶವೆಂದರೆ ಮುರಿದ ದಂತ. ಸಾಮಾನ್ಯವಾಗಿ ವಿಗ್ರಹಗಳಲ್ಲಿ ಕೊಂಚ ಭಿನ್ನ ಕಂಡರೂ ಅದು ಪೂಜೆಗೆ ಅರ್ಹವಾಗುವುದಿಲ್ಲ. ಆದರೆ ಗಣಪತಿಯ ದಂತ ಭಗ್ನವಾಗಿರುವುದೇ ಇಲ್ಲಿ ಸ್ವರೂಪವಾಗಿದೆ. ಇದು ಏಕೆ ಎಂದು ಯೋಚಿಸಿದಾಗ, ಕೆಲವು ಸತ್ಯಗಳ ಅರಿವಾಗುತ್ತದೆ. ಮೂಲಸ್ವರೂಪವಾದ 'ಸತ್ಯ' ಅಖಂಡವಾದದ್ದು. ಅದನ್ನು ಬಲ ಭಾಗದಲ್ಲಿರುವ ಪೂರ್ಣದಂತ ಸೂಚಿಸುತ್ತದೆ. ಪ್ರಪಂಚ ಮಾಯೆಗಳಿಂದ ತುಂಬಿ ಅಪರಿಪೂರ್ಣವಾಗಿದೆ. ಇದನ್ನು ಮುರಿದಿರುವ ಎಡದಂತವು ಸೂಚಿಸುತ್ತದೆ. ಪೂರ್ಣ ಮತ್ತು ಅಪೂರ್ಣಗಳೆರಡೂ ಬೇರೆಬೇರೆಯಾಗಿ ಕಂಡರೂ ಅವೆರಡೂ ಪರಮಾತ್ಮನ ರೂಪ ವಿಶೇಷಗಳೇ. ಇದನ್ನು ಗಣಪತಿಯ ದಂತಗಳು ಸೂಚಿಸುತ್ತದೆ. 

(ಇನ್ನೂ ಇದೆ)

Tuesday, February 09, 2010

ಗಣಪತಿಯ ಬಗ್ಗೆ.

ಗಣಪತಿ.

ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ ಅರ್ಥವೇ ಗಣಗಳ ಅಧಿಪತಿ, ಅಂದರೆ, ಸಮುದಾಯದ ನಾಯಕ ಎಂದು. ಆ ಕಾರಣಕ್ಕೇ ಅವನಿಗೆ ಬೃಹಸ್ಪತಿ ಮತ್ತು ವಾಚಸ್ಪತಿ ಎಂಬ ಹೆಸರುಗಳಿವೆ. ಗಣಪತಿಯ ಸ್ವರೂಪದ ಮುಖ್ಯ ಲಕ್ಷಣವೆಂದರೆ ವಿಘ್ನಗಳನ್ನು ನಿವಾರಿಸುವುದು. ವಿಘ್ನಗಳು ಎಲ್ಲಾ ಕಾರ್ಯಗಳಿಗೂ ಇರುತ್ತವೆ. ಆದರೆ, ಧೀರರು ಮಾತ್ರವೇ ಅದನ್ನು ಹಿಮ್ಮೆಟ್ಟಿಸಬಲ್ಲರು. ಗಣಪತಿ ಅಂತಹ ಸಾಮರ್ಥ್ಯದ ಪ್ರತೀಕವಾಗಿದ್ದಾನೆ. ಹೀಗಾಗಿ ಗಣಪತಿಗೆ 'ವಿಘ್ನೇಶ್ವರ'ನೆಂಬ ಹೆಸರಿದೆ.

ಗಣಪತಿ ಹೆಸರಿನ ಮೂಲ.
ಗಣ ಎಂದತೆ ತತ್ತ್ವ. ಯಾವ ಮೂಲ ತತ್ತ್ವಗಳಿಂದ ಎಲ್ಲಾ ವಿದ್ಯೆಗಳೂ ಆವಿಷ್ಕಾರಗೊಳ್ಳುವುದೋ , ಆ ಮೂಲ ತತ್ತ್ವವೇ ಗಣಪತಿ. ಹೀಗಾಗಿ ಆತನು ವಿದ್ಯೆಗೆ ಅಧಿಪತಿಯಾಗಿರುತ್ತಾನೆ. ಗಣಪತಿಗೆ ಆನೆಯ ಮುಖವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪ್ರತಿನಿಧಿಸುವ 'ಗಜ' ಎಂಬ ಶಬ್ದಕ್ಕೆ ಆಳವಾದ ಅರ್ಥವಿದೆ. 'ಗ' ಎಂದರೆ ಗತಿ. ಜೀವನದ ಪರಮ ಧ್ಯೇಯದತ್ತ ತಿಳಿದೂ ತಿಳಿಯದೆಯೂ ಸಾಗುವುದು. 'ಜ' ಎಂದರೆ ಜನ್ಮ, ಅಂದರೆ ವಿಶ್ವದ ಮಹತ್ತರ ಉದ್ದೇಶ ಯಾವುದಿದೆಯೋ ಅದಕ್ಕಾಗಿ ಜನ್ಮ ತಳೆಯುವುದು ಎಂದರ್ಥ. ಸೃಷ್ಟಿಯಲ್ಲಿ ಸೂಕ್ಷ್ಮಾಂಡ ಹಾಗೂ ಬ್ರಹ್ಮಾಂಡಗಳೆಂಬ ಎರಡು ಬಗೆಗಳಿವೆ. ಇವೆರಡೂ ಒಂದಕ್ಕೊಂದು ಪ್ರತಿರೂಪವಾಗಿದೆ. ಈ ಎರಡೂ ರೂಪಗಳಲ್ಲಿರುವ ತತ್ತ್ವ ಒಂದೇ. ಆದರೆ, ಸ್ವರೂಪವು ಬೇರೆ. ಗಣಪತಿ ಮೂರ್ತಿಯಲ್ಲಿರುವ ಗಜಮುಖವು ಬ್ರಹ್ಮಾಂಡದ ಪ್ರತೀಕ. ಮಾನವ ಶರೀರವು ಸೂಕ್ಷ್ಮಾಂಡದ ಪ್ರತೀಕ. ಸೂಕ್ಷ್ಮಾಂಡದ ಗುರಿ ಬ್ರಹ್ಮಾಂಡವಾಗಿರುವುದರಿಂದ ಗಣಪತಿಯ ಸ್ವರೂಪದಲ್ಲಿ ಗಜಮುಖಕ್ಕೇ ಪ್ರಾಧಾನ್ಯತೆ.

ಗಜಮುಖವೇ‌ ವಿಶ್ವವನ್ನು ಪ್ರತಿನಿಧಿಸಿದರೆ, ಮಾನವಾಕಾರವೇ ವ್ಯಕ್ತಿ ಎಂದು ಗ್ರಹಿಸಬಹುದು. ಅವೆರಡೂ ಒಂದೇ, ಮಾತ್ರವಲ್ಲ, ಪರಸ್ಪರ ಪೂರಕವಾದದ್ದು ಎಂಬುದನ್ನು ಗಣಪತಿಯ ಕಲ್ಪನೆ ತೋರಿಸಿಕೊಡುತ್ತದೆ. 

(ಇನ್ನೂ ಇದೆ)

Monday, February 08, 2010

ಮಹಾರಾಜ ಸ್ವಾತಿತ್ತಿರುನಾಳ್ - ೩

ತ್ಯಾಗರಾಜರ 'ದರ್ಶನ' 

ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು  ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ್ಥಾನ ವಿದ್ವಾಂಸರಲ್ಲಿ ಒಬ್ಬರಾಗಿದ್ದ, ವಯಸ್ಸಿನಲ್ಲಿ  ತಮಗಿಂತ ಮೂರು ವರ್ಷಹಿರಿಯರಾದ ವಡಿವೇಲು ಎಂಬುವವರಿಗೆ ತ್ಯಾಗರಾಜರನ್ನು ಕರೆದು ತರಲು ದೊರೆ ಹೇಳಿದರು. ವಡಿವೇಲು ಅವರು ಪ್ರಸಿದ್ಧ ಹಾಡುಗಾರರಲ್ಲದೇ ಪಿಟೀಲು ವಿದ್ವಾಂಸರು ಕೂಡ ಆಗಿದ್ದರು. ವಡಿವೇಲು ಅವರು ತ್ಯಾಗರಾಜರನ್ನು ಕಂಡಿದ್ದರು. ಅದಲ್ಲದೆ, ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ವೀಣಾ ಕುಪ್ಪಯ್ಯರ್ ಅವರ ಗೆಳೆಯ ಕೂಡ. ಆದರೆ, ತ್ಯಾಗರಾಜರಿಗೆ ವಡಿವೇಲು ಅವರ ಪರಿಚಯವಿರಲಿಲ್ಲ. 

ವಡಿವೇಲು ಅವರು ತಿರುವಯ್ಯಾರಿಗೆ ಬಂದು ತಿರುಮಂಜನವೆಂಬ ಬೀದಿಯ  ಒಂದು ಮನೆಯಲ್ಲಿ ತಂಗಿದರು. ಅದೇ ಬೀದಿಯಲ್ಲಿ ತ್ಯಾಗರಾಜರೂ ಇದ್ದರು. ವಡಿವೇಲು ತಂಗಿದ್ದ ಮನೆ, ತ್ಯಾಗರಾಜರ ಮನೆಯ ಸಾಲಿನ ಎದುರು ಸಾಲಿನಲ್ಲಿ, ನದಿಗೆ ಇಳಿಯುವ ಬಳಿ ಇತ್ತು. ಸ್ನಾನ ಸಂಧ್ಯಾವಂದನೆಗಳಿಗೆ ನದಿಗೆ ಹೋಗುತ್ತಿದ್ದ ತ್ಯಾಗರಾಜರು ವಡಿವೇಲು ತಂಗಿದ್ದ ಮನೆಯ ಮುಂದೆಯೇ ಹೋಗಬೇಕಾಗಿತ್ತು. ತ್ಯಾಗರಾಜರ ಗಮನ ಸೆಳೆಯಲು ವಡಿವೇಲು ಒಂದು ಉಪಾಯ ಹೂಡಿದರು. ದಿನವೂ ತ್ಯಾಗರಾಜರು ನದಿಗೆ ಹೋಗುವ ಸಮಯದಲ್ಲಿ ತಾವು ಸ್ವಾತಿತ್ತಿರುನಾಳ್ ಅವರ ರಚನೆಗಳನ್ನು  ಹಾಡುತ್ತಿದ್ದರು. ಮೊದಲನೆಯ ದಿನವೇ ಅವರ ಹಾಡು ಕೇಳಿ ತ್ಯಾಗರಾಜರು ಚಕಿತರಾದರು. ಅರೆಕ್ಷಣ , ಅಲ್ಲೇ ನಿಂತು ಕೇಳ ತೊಡಗಿದರು. ಎರಡನೆಯ ದಿನ ಇನ್ನೂ ಹೆಚ್ಚು ಕಾಲ ಹೊರಗೇ ನಿಂತು 'ಈತನೊಬ್ಬ ದೊಡ್ಡಾ ವಿದ್ವಾಂಸ' ಎಂದುಕೊಂಡರು. 

ಮೂರನೆಯ ದಿನ, ತ್ಯಾಗರಾಜರ ಕುತೂಹಲ ಎಲ್ಲೆ ಮೀರಿತು. ಹಾಡುತ್ತಿರುವ ಮೇಧಾವಿ ಯಾರು ಎಂದು ನೋಡಲೇಬೇಕೆಂದು ವಡಿವೇಲು ಇದ್ದ ಮನೆಯ ಒಳಕ್ಕೆ ಪ್ರವೇಶಿಸಿದರು. ಕೂಡಲೇ ವಡಿವೇಲು ಎದ್ದು ಬಂದು ನಮಸ್ಕರಿಸಿ, ಸ್ವಾಗತಿಸಿದರು. 'ಧನ್ಯ ಸ್ವಾಮಿ, ನಾನು ಧನ್ಯ. ತಾವೇಕೆ ಶ್ರಮ ವಹಿಸಿದಿರಿ? ಒಂದು ಮಾತು ಹೇಳಿಕಳಿಸಿದ್ದರೆ, ನಿಮ್ಮ ಸನ್ನಿಧಾನಕ್ಕೆ ನಾನೇ ಬರುತ್ತಿದ್ದೆ' ಎಂದು ವಿನಮ್ರದಿಂದ ಹೇಳಿದರು. ತ್ಯಾಗರಾಜರು ವಡಿವೇಲು ಅವರ ಅಮೋಘವಾದ ವಿದ್ವತ್ತನ್ನು ಮುಕ್ತಕಂಠದಿಂದ ಹೊಗಳಿದರು. ತಮ್ಮ ಮನೆಗೆ ಬಂದು (ಮರುದಿನವೇ) ಹಾಡಬೇಕೆಂದು ಹೇಳಿದರು. ಈ ಅವಕಾಶಕ್ಕೇ ಕಾದಿದ್ದ ವಡಿವೇಲು, ತ್ಯಾಗರಾಜರರ ಆಮಂತ್ರಣವನ್ನು ಸ್ವೀಕರಿಸಿ ಅವರ ಆದರಕ್ಕೆ ಪಾತ್ರರಾದರು. 

ತ್ಯಾಗರಾಜರ ಮನೆಯಲ್ಲಿ ವಡಿವೇಲು, ತಮ್ಮ ಮಧುರವಾದ ಕಂಠದಿಂದ, ಸ್ವಾತಿತ್ತಿರುನಾಳ್ ಅವರ ಹಲವಾರು ಕೃತಿಗಳನ್ನು ಹಾಡಿದರು. ತ್ಯಾಗರಾಜರು ಆನಂದಪರವಶರಾದರು. ಪದ್ಮನಾಭನೇ ಕಣ್ಣೆದುರು ಬಂದು ನಿಂತಂತಾಯಿತೇನೋ! 'ಭೇಷ್ ವಡಿವೇಲು! ಪರಮ ಸುಪ್ರೀತನಾಗಿದ್ದೇನೆ ನಾನು. ನಿನಗೇನು ವರ ಬೇಕೋ ಕೇಳು!' ಎಂದರು. ಆಗ ವಡಿವೇಲು 'ಸ್ವಾಮಿನ್! ತಿರುವಾಂಕೂರು ಮಹಾರಾಜರು ತಮ್ಮನ್ನು ಕಾಣಬೇಕೆಂದು ತವಕಿಸುತ್ತಿದ್ದಾರೆ. ಆದುದರಿಂದ ತಾವು...' ಎಂದು ವಡಿವೇಲು ತಮ್ಮ ಪ್ರಾರ್ಥನೆಯನ್ನು ಹೇಳಿ ಮುಗಿಸುವ ಮುನ್ನವೇ ಶ್ರೀ ತ್ಯಾಗರಾಜರು ಚಕಿತರಾದುದನ್ನು ಕಂಡು ಅಷ್ಟಕ್ಕೇ ನಿಲ್ಲಿಸಿದರು. 

ಕೆಲಕಾಲ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತರು. ನಂತರ ತ್ಯಾಗರಾಜರು 'ಸ್ವಾತಿತ್ತಿರುನಾಳ್ ಅವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನನ್ನ ಆಶ್ವಾಸನೆ ಖಂಡಿತ ನೆರವೇರುತ್ತದೆ. ಆದರೆ ನನ್ನ - ಅವರ ಭೇಟಿ ಈ ಪ್ರಪಂಚದಲ್ಲಿ ಅಲ್ಲ. ಸ್ವರ್ಗದಲ್ಲಿ! ಅವರ ಆರಾಧ್ಯ ದೈವನೂ (ಪದ್ಮನಾಭ) ನನ್ನ ಆರಾಧ್ಯ ದೈವನೂ (ಶ್ರೀರಾಮ) ಒಬ್ಬನೇ.' ಎಂದು ಹೇಳಿದರು. ನಿರಾಶರಾದ ವಡಿವೇಲು ತಿರುವಾಂಕೂರಿಗೆ ಮರಳಿ, ನಡೆದ ಸಂಗತಿಯನ್ನೆಲ್ಲಾ ದೊರೆಗೆ ತಿಳಿಸಿದರು. 

ಮಹಾರಾಜ ಸ್ವಾತಿತ್ತಿರುನಾಳ್ ಸ್ವತಃ ತಾವೇ ತಿರುವಯ್ಯಾರಿಗೆ ಹೋಗಬೇಕೆಂದು ಎಷ್ಟೋ ಬಾರಿ ಪ್ರಯತ್ನಿಸಿದರು. ಆದರೆ, ರಾಜಕಾರ್ಯ ಅವರನ್ನು ಬಿಡಲಿಲ್ಲ. ರಾಜಕಾರ್ಯ ಬಿಡಲಿಲ್ಲವೋ, ತ್ಯಾಗರಾಜರ ಮಾತು ನಿಜವಾಗಬೇಕೆಂಬ ದೈವಸಂಕಲ್ಪವೋ ಏನೋ, ಈ ಘಟನೆ ನಡೆದ ಬಳಿಕ ಸುಮಾರು ಹನ್ನೆರಡು ವರ್ಷಗಳ ಕಾಲ ಸ್ವಾತಿತ್ತಿರುನಾಳ್ ಅವರು ಬದುಕಿದ್ದರೂ, ತ್ಯಾಗರಾಜರನ್ನು ಭೇಟಿಯಾಗಲು ತಿರುವಯ್ಯಾರಿಗೆ ಹೋಗುವುದಕ್ಕಾಗಲೇ ಇಲ್ಲ. 

ಕೊನೆಗೆ ಸ್ವಾತಿತ್ತಿರುನಾಳ್ ಅವರೇ ತ್ಯಾಗರಾಜರ ಭೇಟಿಗಾಗಿ ಅವರಿಗಿಂತ ೧೨ದಿನಗಳ ಮೊದಲೇ ಸ್ವರ್ಗದಲ್ಲಿ ಕಾದು ಕುಳಿತರು! ಸ್ವಾತಿತ್ತಿರುನಾಳ್ ಅವರು ೧೮೪೬ನೇ ಡಿಸೆಂಬರ್ ೨೫ರಂದು, ಅಂದರೆ, ಪುಷ್ಯ ಶುಕ್ಲ ಅಷ್ಟಮಿಯಂದು ಸ್ವರ್ಗಸ್ಥರಾದರು. ತ್ಯಾಗರಾಜರು ೧೮೪೭ನೇ ಜನವರಿ ೬ರಂದು, ಅಂದರೆ, ಪುಷ್ಯ ಬಹುಳ ಪಂಚಮಿಯಂದು ಸ್ವಾತಿತ್ತಿರುನಾಳ್ ಅವರನ್ನು ನೋಡಲು ಸ್ವರ್ಗಕ್ಕೆ ಹೊರಟರು. 

ಮಹಾಮೇಧಾವಿಯೂ, ಸಾಹಿತಿಯೂ, ರಾಜಕಾರಣಿಯೂ, ರಸಿಕರೂ, ವಾಗ್ಗೇಯಕಾರರೂ ಆಗಿ ಬಾಳಿ ಕೇವಲ ೩೪ವರ್ಷಗಳಲ್ಲೇ, ಮಹಾ ಪ್ರತಿಭಾನ್ವಿತರೆನಿಸಿಕೊಂಡ ಮಹಾರಾಜ ಸ್ವಾತಿತ್ತಿರುನಾಳ್ ಅವರ ಹೆಸರನ್ನು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವ ವಾಗ್ಗೇಯಕಾರರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇಲ್ಲವೆಂದೇ ಹೇಳಬೇಕು. ಅವರು ನಮಗೆ, ಸಂಗೀತ ಪ್ರಪಂಚಕ್ಕೆ, ಬಿಟ್ಟು ಹೋಗಿರುವ ಆಸ್ತಿ ಅಮರವಾಗಿರುತ್ತದೆ. ಅವರ ಕೀರ್ತಿ ಆಚಂದ್ರಾರ್ಕ ಬೆಳಗುತ್ತಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. 

(ಮುಗಿಯಿತು)