My Blog List

Sunday, July 11, 2010

'ದಶಾವತಾರ' ಪರಿಕಲ್ಪನೆಯ ಹಿಂದಿನ ಅಂತರಾರ್ಥ.

ವಿಷ್ಣುವಿನ ಅವತಾರಗಳಲ್ಲಿ ಹತ್ತು ಅವತಾರಗಳನ್ನು 'ದಶಾವತಾರ' ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮೂರು ಅವತಾರಗಳು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನು ಸಾಂಕೇತಿಕ ಅವತಾರ ಎಂದು ಕರೆಯುತ್ತಾರೆ. ಈ ರೂಪದಲ್ಲಿ ವಿಷ್ಣುವಿನ ಪೂಜೆಯಾಗುವುದು ಅಪರೂಪವೇ. ಪ್ರಳಯದಿಂದ ಕಾಪಾಡಿದ ಎಂದು ನಂಬಲಾದ ಮತ್ಸ್ಯ ಅವತಾರ ಚಲನೆಯನ್ನು ಸೂಚಿಸಿದರೆ, ಸಮುದ್ರ ಮಥನಕ್ಕೆ ಆಧಾರವಾದ ಕೂರ್ಮಾವತಾರ ಸ್ಥಿತಿಯನ್ನು ಸೂಚಿಸುತ್ತದೆ. ಹಾಗೆಯೇ, ಭೂಮಿಯನ್ನು ತನ್ನ ಕೋರೆಗಳಿಂದ ಎತ್ತಿದ ಎಂದು ವಿವರಿಸಲಾದ ವರಾಹವು, ಕ್ರಿಯೆಯನ್ನು ಸೂಚಿಸುವ ಅವತಾರ. ಚಲನೆ, ಸ್ಥಿತಿ ಮತ್ತು ಕ್ರಿಯೆಗಳು ಸೃಷ್ಟಿಯ ಬಹುಮುಖ್ಯ ಲಕ್ಷಣಗಳೆಂಬುದನ್ನು ಈ ಅವತಾರಗಳು ಸೂಚಿಸುತ್ತದೆ. ಇನ್ನು ನರಸಿಂಹ, ವಾಮನ, ಪರಶುರಾಮ. ಈ ಮೂರು ಅವತಾರಗಳನ್ನು ಅರ್ಧಾವತಾರಗಳು ಎಂದು ಕರೆಯುತ್ತಾರೆ. ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು, ಅವನ ತಂದೆ, ಹಿರಣ್ಯ ಕಶ್ಯಪುವೇ ಹಿಂಸಿಸುತ್ತಿರುವಾಗ ಮಹಾವಿಷ್ಣು ಅರ್ಧಸಿಂಹ ಮತ್ತು ಅರ್ಧ ಮಾನವನ ರೂಪತಾಳಿ, ಹಿರಣ್ಯ ಕಶ್ಯಪುವನ್ನು ಸಂಹರಿಸುತ್ತಾನೆ. ಸಿಂಹ ಪ್ರಾಣಿಗಳಲ್ಲೇ ಬಲಿಷ್ಠವಾದದ್ದು. ಅದಕ್ಕೆ ವೀರ ಗುಣವುಳ್ಳ ಮಾನವ ದೇಹವೂ ಸೇರಿದರೆ ಸರ್ವಶಕ್ತಿ ಜೊತೆಗೂಡಿದಂತೆಯೇ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬುದ್ಧಿಯಲ್ಲಿ ಮಾನವ ಮಿಗಿಲು ಎಂಬುದು ಸಹಜವಾದ ಎಣಿಕೆ. ಆದರೆ, ನರಸಿಂಹ ಅವತಾರದಲ್ಲಿ ತಲೆ ಪ್ರಾಣಿಯದಾಗಿದ್ದು, ದೇಹ ಮಾನವನದು. ಇದು ಅವತಾರದ ಅರ್ಧಸ್ವರೂಪಕ್ಕೆ ನಿದರ್ಶನವಾದಂತೆ ಅದು ಆವೇಶದ ಅಭಿವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಇನ್ನು ವಾಮನ ಬಲಿಯನ್ನು ತ್ರಿವಿಕ್ರಮ ರೂಪತಾಳಿ ಪಾತಾಳಕ್ಕೆ ತಳ್ಳಿದ ಅವತಾರ. ಇಲ್ಲಿ ವಾಮನ ಮತ್ತು ತ್ರಿವಿಕ್ರಮ ಎರಡೂ ಒಂದೇ ಶಕ್ತಿಯ ರೂಪಗಳು ಎಂಬುದನ್ನು ಗಮನಿಸಬೇಕು. ನೋಡಲು ವಾಮನನಂತಿದ್ದರೂ, ಅವನಲ್ಲಿ ತ್ರಿವಿಕ್ರಮಶಕ್ತಿ ಅಡಗಿರಬಹುದು ಎಂಬುದನ್ನು ಈ ಅವತಾರವು ಸೂಚಿಸುತ್ತದೆ. ಪರಶುರಾಮನು ತನ್ನ ಅವತಾರದಲ್ಲಿ ಪ್ರಜಾಪೀಡಕರಾದ ಕ್ಷತ್ರಿಯರನ್ನೆಲ್ಲ ನಾಶ ಮಾಡಿದ ಚಿತ್ರ ಕಣ್ಮುಂದೆ ಬರುತ್ತದೆ. ಆಡಳಿತ ನಡೆಸುವವರು ಅಹಂಕಾರ ತೋರಿದರೆ, ಭಗವಂತನು ಅವರನ್ನು ಶಿಕ್ಷಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಅಷ್ಟೇ‌ ಅಲ್ಲ, ಮುಂದಿನ ಅವತಾರದಲ್ಲಿ ವಿಷ್ಣುವು ಕ್ಷತ್ರಿಯನಾಗಿಯೇ ಜನಿಸುತ್ತಾನೆ. ಇದು ಈ ಪ್ರಕ್ರಿಯೆಯಲ್ಲಿರುವ ಸಂಕೀರ್ಣತೆಗೆ ನಿದರ್ಶನವಾಗಿದೆ. ಈ ಮೂರು ಅವತಾರಗಳಲ್ಲಿ ಸಂದೇಶವಿದೆ. ಆದರೆ ಭಗವಂತನ ಸ್ವರೂಪ ಇಲ್ಲೆಲ್ಲ ಸೀಮಿತ ಅವಧಿಯಲ್ಲಿ ಬಂದು ಹೋಗುತ್ತದೆ. ಹಾಗಾಗಿಯೇ ಇವುಗಳನ್ನು ಅರ್ಧಾವತಾರಗಳು ಎಂದು ಹೇಳಲಾಗುವುದು. ಇವನ್ನೆಲ್ಲಾ ಆವೇಶಾವತಾರ ಅಥವಾ ವಿಷ್ಣುವು ತಾತ್ಕಾಲಿಕವಾಗಿ ಧರಿಸಿದ್ದ ಅವತಾರ ಎಂದು ವಿಶ್ಲೇಷಿಸುವುದೂ ಇದೆ.

ರಾಮ, ಕೃಷ್ಣರನ್ನು, ವಿಷ್ಣುವಿನ ಪೂರ್ಣಾವತಾರಗಳು ಎಂದು ಹೇಳಲಾಗುತ್ತದೆ. ವಿಷ್ಣುವು ಹೆಚ್ಚಾಗಿ ಪೂಜಿತನಾಗುವುದು ಈ ರೂಪಗಳಲ್ಲೇ. ಶ್ರೀರಾಮನ ಜೀವನ ಚಿತ್ರಣವೇ ಆದರ್ಶದ ಪ್ರತಿರೂಪವಾಗಿದೆ. ಜೀವನದ ವಿವಿಧ ಸವಾಲುಗಳನ್ನು, ಮಾನವನು ಹೇಗೆ ಎದುರಿಸಬೇಕು ಎಂಬುದನ್ನು ಸ್ವತಃ ಭಗವಂತನೇ ಅಭಿನಯಿಸಿ ತೋರಿಸಿದ ಅವತಾರಗಳೇ ಇವು. ಶ್ರೀರಾಮನ ಅವತಾರದಲ್ಲಿ ಬಹಳ ಮುಖ್ಯವಾಗಿ ಕಾಣುವುದು ಕೌಟುಂಬಿಕ ಚಿತ್ರಣ. ಶ್ರೀರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಸೀತೆ, ಲಕ್ಷ್ಮಣ, ಹನುಮಂತ, ರಾಮನ ಜೊತೆಯಲ್ಲಿ ಇರುತ್ತಾರೆ. ಕೆಲವೊಮ್ಮೆ ಭರತ ಮತ್ತು ಶತ್ರುಘ್ನ ಕೂಡ ಜೊತೆಗಿರುತ್ತಾರೆ. ಇಂತಹ ತುಂಬಿದ ಕುಟುಂಬವೇ‌ ರಾಮಾವತಾರದ ಸಂದೇಶ. ರಾಮಾಯಣದಲ್ಲಿ ಕುಟುಂಬ ಎಂಬುದು ವಿಶಾಲವಾದ ನೆಲೆಯಲ್ಲಿ ಚರ್ಚಿತವಾಗಿದೆ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ. ಇಡೀ ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಹೀಗಾಗಿ ಅಲ್ಲಿ ಹನುಮಂತ, ಸುಗ್ರೀವ, ಜಾಂಬುವಂತರಂತಹ ವೀರರಿಗೆ ಮಾತ್ರವಲ್ಲ, ಅಳಿಲಿಗೂ ಒಂದು ಮಹತ್ತರ ಸ್ಥಾನವಿದೆ. ಬೇಜವಾಬ್ದಾರಿಯ ಅಗಸನ ಮಾತಿಗೂ ಇಲ್ಲಿ ಒಂದು ಬೆಲೆ ಇದೆ. ಈ ಅರ್ಥದಲ್ಲಿ ಪರಿಪೂರ್ಣತೆ ರಾಮಾವತಾರಕ್ಕೆ ಇದೆ. ಅಷ್ಟೇ‌ ಅಲ್ಲ, ಆಕಾರದಲ್ಲಿಯೂ ಶ್ರೀರಾಮನು ಪರಿಪೂರ್ಣ ಪುರುಷಾಕೃತಿ ಎಂಬುದು ಇಲ್ಲಿ ಗಮನಾರ್ಹ. ಅದಕ್ಕಾಗಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ನಮ್ಮ ಜೀವನದಲ್ಲಿ ನಡೆ-ನುಡಿಗಳು ಒಂದೇ ರೀತಿಯಿದ್ದರೆ, ಮಾದರಿಯಾಗಿ ಇತರರಿಗೆ ಸಂದೇಶವಾಗಬಲ್ಲದೇ ವಿನಾ ಕೇವಲ ಆಚರಣೆ ಇಲ್ಲದ ಉಪದೇಶದಿಂದಲ್ಲ ಎಂಬ ಸಂದೇಶ ಶ್ರೀರಾಮನ ಅವತಾರದಲ್ಲಿದೆ.

ಶ್ರೀಕೃಷ್ಣನು ಸಮುದಾಯದ ದೇವತೆ. ಈ ಅವತಾರದ ವ್ಯಾಪ್ತಿಯೂ ಬಹಳ ದೊಡ್ಡದು. ಇವನನ್ನು ಅವತಾರವೆನ್ನದೆ ವಿಷ್ಣುವಿನ ಪರಿಪೂರ್ಣ ಅಂಶವೆಂದೇ ಕರೆಯುವುದೂ ಇದೆ. ಶ್ರೀಕೃಷ್ಣನ ಅವತಾರದ ವೈಶಿಷ್ಟ್ಯವೆಂದರೆ, ಈತ, ತಾನೇ ಘಟನಾವಳಿಯ ಕೇಂದ್ರವಾಗಿ, ಸಾಧಿಸಿದ್ದಕ್ಕಿಂತಲೂ ಹೆಚ್ಚಾಗಿ, ಯಾರಿಂದ ಯಾವ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಕುಶಲಿಯಾಗಿ ಕಾಣಿಸುತ್ತಾನೆ. ರಾಜನೀತಿ ತಜ್ಞನನ್ನಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಇಡೀ ಮಹಾಭಾರತವೇ‌ ಇದೆ. ಕೃಷ್ಣನ ಬಾಲಲೀಲೆಗಳಲ್ಲಿಯೇ‌ ಅಸುರ ಸಂಹಾರದ ಕಥೆಗಳು ಹಾಸು ಹೊಕ್ಕಾಗಿ ಬಂದಿವೆ. ಸೃಷ್ಟಿ ವ್ಯಾಪಾರವನ್ನು ಮುಗಿಸಿ, ಆಲದೆಲೆಯ ಮೇಲೆ ಮಲಗಿ, ನಿಶ್ಚಿಂತೆಯಿಂದ ನೀರಿನ ಮೇಲೆ ತೇಲುತ್ತಾ, ತಾನು ಆಡುತ್ತಿರುವ ಜೀವನ ನಾಟಕವನ್ನು ನೆನೆಸಿಕೊಂಡು ಆನಂದ ಪಡುವ ಬಾಲಕೃಷ್ಣನ ಚಿತ್ರ ಚಿರಪರಿಚಿತ. ಇದು ಶ್ರೀಕೃಷ್ಣಾವತಾರದ ಸಂದೇಶವೂ ಹೌದು. ಸಂಸಾರದೊಳಗಿದ್ದು ಇಲ್ಲದಂತೆ, ಸಕಲವೂ ತಾನಾಗಿಯೂ, ಸಕಲವನ್ನು ಅನುಭವಿಸುತ್ತಾ ಸ್ಥಿತಪ್ರಜ್ಞನಾಗುವ ಜ್ಞಾನಿಯ ಚಿತ್ರಣ ಇಲ್ಲಿದೆ. ಭಾರತೀಯ ಚಿಂತನಾ ಪರಂಪರೆಯ ಸಾರವೇ ಆಗಿರುವ ಭಗವದ್ಗೀತೆಯ ಬೋಧಕನೇ ಶ್ರೀಕೃಷ್ಣ. ಬದುಕಿನ ಸಾರವನ್ನೇ ಹೇಳುವ ಈ ಗ್ರಂಥವು, ಕೃಷ್ಣಾವತಾರದ ಸಾರರೂಪವೂ‌ ಆಗಿದೆ. ಉಳಿದಂತೆ ಚಾರಿತ್ರಿಕವಾದ ಬುದ್ಧನನ್ನ್ನು ಒಂಭತ್ತನೆಯ ಅವತಾರವೆಂದೂ ಗುರುತಿಸಲಾಗುವುದು. ಕ್ರಿಯಾತ್ಮಕವಾದ ಎಲ್ಲಾ ಅವತಾರಗಳ ಜಂಜಾಟವನ್ನು ಮುಗಿಸಿ ಶಾಂತ ಮನಃಸ್ಥಿತಿ ಪಡೆಯುವ ಚಿತ್ರಣವನ್ನು ಬೌದ್ಧಾವತಾರದಲ್ಲಿ ಕಾಣಬಹುದು. ಬಲರಾಮನನ್ನು ಒಂಭತ್ತನೆಯ ಅವತಾರ ಎಂದು ಕರೆಯುವ ವಾಡಿಕೆಯೂ ಅಲ್ಲಲ್ಲಿ ಇದೆ. ಇದು ಕೃಷಿನಾಯಕನಿಗೆ ಗೌರವ ಸೂಚಿಸುವ ಪ್ರಯತ್ನ ಎಂದು ಹೇಳಬಹುದು. ಪರಮಾತ್ಮನ ಸೃಷ್ಟಿ ನಿರಂತರ ಮತ್ತು ನವನವೀನ ಎಂದು ಸೂಚಿಸುವ ಸಲುವಾಗಿಯೇ ಇನ್ನೂ ಆಗಬೇಕಾಗಿರುವ ಕಲ್ಕಿ ಎಂಬ ಹತ್ತನೆಯ ಅವತಾರವನ್ನು ಸೂಚಿಸಲಾಗಿದೆ.

ದಶಾವತಾರ ಪರಿಕಲ್ಪನೆಯಲ್ಲಿ ಜೀವವಿಕಾಸದ ಚಿತ್ರಣವೂ ಇದೆ. ಮೊದಲು ಕಾಣಿಸಿಕೊಂಡಿದ್ದು ಜಲಚರ ಜೀವಿಗಳು ಎಂಬುದನ್ನು ಮತ್ಸ್ಯಾವತಾರ ಸೂಚಿಸಿದರೆ, ಜಲ ಮತ್ತು ಭೂಮಿಗಳೆರಡರಲ್ಲಿಯೂ ಓಡಾಡಬಲ್ಲ ಉಭಯವಾಸಿ ಜೀವಿಗಳು ಸೃಷ್ಟಿಯಾದವೆಂಬುದನ್ನು ಕೂರ್ಮಾವತಾರವು ಸೂಚಿಸುತ್ತದೆ. ನಂತರ ಬಂದ ಸಸ್ತನಿಗಳನ್ನು ವರಾಹ ಅವತಾರ ಸೂಚಿಸಿದರೆ, ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ನರಸಿಂಹ ಅವತಾರ ಸೂಚಿಸುತ್ತದೆ. ಆರಂಭದಲ್ಲಿ ಕಾಣಿಸಿಕೊಂಡ ಕುಬ್ಜ ಮಾನವರನ್ನು ವಾಮನ ಅವತಾರ ಸೂಚಿಸಿದರೆ, ವಿಕಾಸಗೊಂದ ಆದರ್ಶವಾದಿ ಮಾನವನನ್ನು ರಾಮಾವತಾರ ಸೂಚಿಸುತ್ತದೆ. ರಾಜನೀತಿ ತಜ್ಞನ ಪಾತ್ರವನ್ನು ಕೃಷ್ಣನೂ, ಆಧ್ಯಾತ್ಮಿಕ ವಿಕಸನವನ್ನು ಬುದ್ಧನೂ ಸೂಚಿಸುತ್ತಾನೆ. ಕಲ್ಕಿಯು ಆಧುನಿಕ ಮಾನವನ ಸ್ವರೂಪ. ಹೀಗೆ ದಶಾವತಾರ ಕಲ್ಪನೆಯಲ್ಲಿ ಮಾನವ ವಿಕಾಸ ಚಕ್ರವಿರುವುದನ್ನು ಗಮನಿಸಬಹುದು.

Friday, July 02, 2010

ಸಾಕಾರ ಸ್ವರೂಪ ಮಹಾವಿಷ್ಣು.

ಮಹಾವಿಷ್ಣುವು ಸಾಕಾರ ಸ್ವರೂಪನು, ಹಾಗಾಗಿ ಹಲವು ಅವತಾರಗಳ ಮೂಲಕ ಗುರುತಿಸಲ್ಪಟ್ಟಿದ್ದಾನೆ. ಹತ್ತು ಅವತಾರಗಳನ್ನೂ ಪ್ರಮುಖ ಎಂದು ನಿರ್ದೇಶಿಸುವ ವಾಡಿಕೆ ಇದ್ದರೂ ವಿಷ್ಣುವಿನ ಅವತಾರಗಳು ವಾಸ್ತವವಾಗಿ ಅಸಂಖ್ಯ. 'ವಿಷ್ಣು' ಎಂಬ ಶಬ್ದವೇ 'ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು' ಎಂಬ ಅರ್ಥವನ್ನು ಸೂಚಿಸುತ್ತದೆ. ವಿಷ್ಣುವಿನ ವಾಮನ ಅವತಾರದಲ್ಲಿ ತ್ರಿವಿಕ್ರಮನಾಗುವ ಚಿತ್ರಣ ಇದೆ. ಹಾಗೇ ಕೃಷ್ಣಾವತಾರದಲ್ಲಿ ಭಗವದ್ಗೀತೆ ಬೋಧನೆ ಮಾಡಿದಾಗ 'ವಿಶ್ವರೂಪದರ್ಶನ' ಮಾಡಿದ ವಿವರಗಳಿವೆ. ವಿಷ್ಣುವಿನ ಸ್ವರೂಪ ಸಾಕಾರವಾಗುವುದರ ಜೊತೆಗೆ ಅದು 'ವಿರಾಟ್' ಆಗಿರುವುದು ಎಂಬುದನ್ನು ಇಲ್ಲಿ ಸೂಚಿಸುತ್ತದೆ. ವಿಷ್ಣುವಿನ ಕುರಿತ ಜನಪ್ರಿಯವಾದ ಪರಿಕಲ್ಪನೆ ಎಂದರೆ ಕ್ಷೀರಸಾಗರದ ಮೇಲೆ ಶೇಷಶಾಯಿಯಾಗಿ ವಿಶ್ರಮಿಸುತ್ತಿರುವುದು. ಒಂದೆಡೆ, ಲಕ್ಷ್ಮಿಯು ಅವನ ಕಾಲನ್ನೊತ್ತುತ್ತಿದರೆ, ಇನ್ನೊಂದೆಡೆ, ನಾಭಿಯಿಂದ ಬಂದ ಕಮಲದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯದಲ್ಲಿ ನಿರತನಾಗಿದ್ದಾನೆ. ಇದು ಇಡೀ ಬ್ರಹ್ಮಾಂಡದಲ್ಲಿ ಇರುವ ಚೇತನ ಸ್ವರೂಪವನ್ನು ಚಿತ್ರಿಸುತ್ತದೆ. ಕ್ಷೀರಸಾಗರವು ಪ್ರಕೃತಿಯ ಪರಿಶುದ್ಧ ರೂಪವನ್ನು ಸೂಚಿಸಿದರೆ, ಮುಗಿಲು-ಕಡಲುಗಳೆರಡರ ಕಲ್ಪನೆ ಬೆರೆತಂತಿರುವ ಇದನ್ನು ವಿಜ್ಞಾನದ ಆಕಾಶಗಂಗೆ (ಮಿಲ್ಕೀವೇ) ಪರಿಕಲ್ಪನೆಗೆ ಹೋಲಿಸಬಹುದು. ವಿಷ್ಣುವು ಮಲಗಿದ್ದಾನೆ ಎನ್ನಲಾದ ಆದಿಶೇಷ ಅಥವಾ ಅನಂತ ಎಂಬ ಸರ್ಪಕ್ಕೆ ಸಾವಿರ ಹೆಡೆಗಳಿದ್ದು ಅದು ಅನೇಕ ಲೋಕವನ್ನು ಹೊತ್ತಿದೆ ಎನ್ನಲಾಗುತ್ತದೆ. 'ಅನಂತ' ಎಂಬ ಪದಕ್ಕೆ ಎಣಿಕೆಗೆ ಸಿಕ್ಕದ್ದು ಎಂಬ ಅರ್ಥವಿದೆ. ಹೀಗೆ ಎಣಿಸುವವನು ಮಾನವ ಎಂಬುದನ್ನು ಗಮನಿಸಬೇಕಾಗುತ್ತದೆ. ಅಂದರೆ, ಪ್ರಕೃತಿಯು ಮಾನವನಿಗಿಂತಲೂ ಬಹಳ ದೊಡ್ಡದು. ಅದನ್ನು ಎಣಿಸುವ ಪ್ರಯತ್ನವೇ ವ್ಯರ್ಥ ಎಂಬುದನ್ನು 'ಅನಂತ' ಎಂಬ ಪದ ಸೂಚಿಸುತ್ತದೆ. ಹಾಗೆಯೇ, 'ಶೇಷ' ಎಂಬ ಪದವೂ ಅರ್ಥಗರ್ಭಿತವಾದದ್ದು. ಇದು ಉಳಿದದ್ದು ಎಂಬುದನ್ನು ಸೂಚಿಸುತ್ತದೆ. ಸೃಷ್ಟಿಯು ಯಾವಾಗಲೂ ಶೂನ್ಯದಿಂದ ಉಂಟಗುವುದಿಲ್ಲ. ಹಿಂದಿನ ಸೃಷ್ಟಿಯಲ್ಲಿ ಉಳಿದು ಹೋದದ್ದು ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಇಡೀ ಜಗತ್ತನ್ನು ಮುನ್ನಡೆಸುತ್ತಿರುವ 'ಸೃಷ್ಟಿಚಕ್ರ'. ಆದಿಶೇಷನ ಪರಿಕಲ್ಪನೆ ಇದನ್ನೇ ಸೂಚಿಸುತ್ತದೆ ಎನ್ನಬಹುದು. ಇದರ ಜೊತೆಗೆ ಸರ್ಪವು ಕಾಮಕ್ಕೆ ಸಂಕೇತ ಎಂಬ ಅರ್ಥ ಕೂಡ ಈ ವಿಶ್ಲೇಷಣೆಗೆ ಇಂಬು ನೀಡುತ್ತದೆ.

ವಿಷ್ಣುವನ್ನು ನೀಲಮೇಘಶ್ಯಾಮನೆಂದು ವರ್ಣಿಸುತ್ತಾರೆ. ಇದು ಮಳೆ ನೀಡಲು ಸಿದ್ಧವಾಗಿರುವ ಕಡುನೀಲಿ ಮೋಡದ ಬಣ್ಣ. ಇದರಲ್ಲಿ ಸೃಷ್ಟಿಯು ಪಕ್ವವಾಗಿರುವುದರ ಸಾಂಕೇತಿಕ ಅರ್ಥವಿದೆ. ವಿಷ್ಣುವಿನ ಕಲ್ಪನೆಯಲ್ಲಿ ಸಾಧನೆ ಮತ್ತು ಸಿದ್ಧಿ ಇವೆರಡರ ಸಂಯೋಗದ ಅರ್ಥಗಳಿರುವುದನ್ನು ನಾವು ಗಮನಿಸಬಹುದು. ವಿಷ್ಣುವಿನ ಕಲ್ಪನೆಯಲ್ಲಿರುವ ಇನ್ನು ಕೆಲವು ಅಂಶಗಳತ್ತ ಗಮನ ಹರಿಸಿದರೆ, ವಿಷ್ಣುವು ಸಾಮಾನ್ಯವಾಗಿ ಚಿತ್ರಿತವಾಗುವುದು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಹಿಡಿದಿರುವ ಸ್ಥಿತಿಯಲ್ಲಿ. ಈ ನಾಲ್ಕು ಕೈಗಳು ನಾಲ್ಕು ದಿಕ್ಕುಗಳನ್ನು ಸೂಚಿಸುತ್ತಾ ವಿಷ್ಣುವು ಸರ್ವವ್ಯಾಪಿ ಎಂಬುದನ್ನು ತೋರಿಸುತ್ತದೆ. ಶಂಖವು ಸಮಸ್ತ ಉದಯದ ಸಂಕೇತ. ಚಕ್ರವು ಸಮಸ್ತ ಚಿತ್ತವೃತ್ತಿಯ, ಗದೆಯು ಸಮಸ್ತ ಬುದ್ಧಿಗಳ ದ್ಯೋತಕ. ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಇವೆಲ್ಲವೂ, ವಿಷ್ಣುವು ಸೃಷ್ಟಿಕರ್ತನೂ ಮತ್ತು ಸ್ಥಿತಿಕಾರನೂ ಆಗಿದ್ದಾನೆ ಎಂಬುದಕ್ಕೆ ರೂಪಕ. ಇನ್ನು ವಿಷ್ಣುವಿನ ಎದೆಯ ಮೇಲೆ ಶ್ರೀವತ್ಸ ಲಾಂಛನವಿದೆ. ಅದನ್ನು ಕೌಸ್ತುಭಮಣಿ ಮತ್ತು ವೈಜಯಂತಿ ಹಾರಗಳು ಮುಚ್ಚಿರುತ್ತವೆ. ಶ್ರೀವತ್ಸ ಲಾಂಛನವು ಎಲ್ಲಾ ಭೋಗವಸ್ತುಗಳ ಸಂಕೇತವಾಗಿದೆ. ಇದರ ಮೇಲಿನ ಕೌಸ್ತುಭಮಣಿಯು, ಭೋಗಿಯ ಪ್ರತಿನಿಧಿ. ಹೀಗೆ ಭೋಗ-ಭೋಗಿಗಳಿಂದ ಕೂಡಿದ ಪ್ರಪಂಚವು ಸ್ಥಿತಿಕಾರಕನಾದ ವಿಷ್ಣುವಿಗೆ ಒಂದು ಮಾಲೆಯೇ. ಜೊತೆಗಿರುವ ವೈಜಯಂತಿ ಮಾಲೆಯು ಪಂಚಭೂತಗಳ ಸಂಕೇತ. ಹೀಗೆ ವಿಷ್ಣು ಸ್ವರೂಪದಲ್ಲಿ ಇಡೀ ಬ್ರಹ್ಮಾಂಡದ ಸೂಕ್ಷ್ಮ ಚಿತ್ರಣವೇ ಅಡಗಿರುವುದನ್ನು ನೋಡಬಹುದು.