My Blog List

Saturday, July 30, 2011

ಭೀಮನ ಅಮಾವಾಸ್ಯೆ ವ್ರತ.

ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.

ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. 

ಯಾವುದೇ ಹಬ್ಬ, ವ್ರತ ಕೈಗೊಳ್ಳುವ ಮೊದಲು ಸಂಕಲ್ಪ ಮುಖ್ಯ. ನಾವು ಯಾವ ಕಾರಣಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಿದ್ದೇವೆ ಎಂಬುದರ ಅರಿವು ಇರಲೇಬೇಕು. ಭೀಮನ ಅಮಾವಾಸ್ಯೆಯನ್ನು ಮದುವೆಯಾಗದ ಹೆಣ್ಣುಮಕ್ಕಳು ಭೀಮನಂತಹ ಬಲಶಾಲಿ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಹಾಗೂ ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಆರಾಧ್ಯ ದೈವ ಜ್ಯೋತಿರ್ಭೀಮೇಶ್ವರನ ಪೂಜೆ ಮಾಡುತ್ತಾರೆ. 

ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡಬು(ಸಿಹಿ ಇಲ್ಲದ), ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ. 

ಸೋದರಿ ಆ ಸಮಯದಲ್ಲಿ ಆವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ. ಒಂದು ರೀತಿ ರಕ್ಷಾ ಬಂಧನದ ಇನ್ನೊಂದು ರೂಪದ್ದಂತಿರುತ್ತದೆ ಈ ಆಚರಣೆ. ಸೋದರಿಯನ್ನು ಸದಾ ಸೋದರ ರಕ್ಷಣೆ ಮಾಡುತ್ತಾನೆಂಬ ಸಂಕೇತ ಸೂಚಿಸುತ್ತದೆ.

ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.

ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ ಎಂದು ಹೆಸರು ಬಂದ ಬಗ್ಗೆ ಒಂದು ಕಥೆ ಇದೆ. ಆಸೆಬುರುಕ ಬ್ರಾಹ್ಮಣನೊಬ್ಬ, ಹಣಕ್ಕಾಗಿ ತನ್ನ ಮಗಳ ಮದುವೆಯನ್ನು ರಾಜಕುಮಾರನ ಶವದೊಂದಿಗೆ ನಡೆಸುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ, ಶವವನ್ನೂ, ಶವವನ್ನು ವರಿಸಿದ ವಧುವನ್ನೂ ರಾಜ ಪರಿವಾರದವರು ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ.

ಗಾಡಾಂಧಕಾರದಲ್ಲಿ ಪತಿಯ ಶವದ ಮುಂದೆ ಕುಳಿತು ರೋದಿಸುತ್ತಿದ್ದ ಆ ಸತಿ, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷಳಾಗಿ ಅವಳ ಪತಿಗೆ ಜೀವದಾನ ನೀಡುತ್ತಾರೆ. ಆ ದಂಪತಿಗೆ ರಾಜ್ಯವೂ ಪ್ರಾಪ್ತಿಯಾಗಿ ಸುಖಶಾಂತಿ ನೆಮ್ಮದಿಯಿಂದ ಜೀವಿಸುತ್ತಾರೆ. ಅಮಾವಾಸ್ಯೆಯ ದಿನ ಆ ಸತಿ ತನ್ನ ಪತಿಯನ್ನು ಬದುಕಿಸುಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿ ಭೀಮೇಶ್ವರ ವ್ರತ.

ಮಾಹಿತಿ ಕೃಪೆ: ದಟ್ಸ್ ಕನ್ನಡ