My Blog List

Friday, July 31, 2015

ಹೀಗೊಂದು ಡೈರಿ ಪುರಾಣ

ಡೈರಿಗಳ ಹಾಳೆಗಳಲ್ಲಿ ತುಂಬಿದ ಅಕ್ಷರಗಳು, ನನ್ನ ಮನಸಿನ ಬೇಡದ ಭಾವನೆಗಳು. ಅವುಗಳನ್ನು ಹಳೆ ಪಾತ್ರೆ, ಕಬ್ಬಿಣ, ಪೇಪರ್ ಅವನಿಗೆ ಹಳೆಯ ಡೈರಿಗಳನು ಕೊಟ್ಟು ಮನೆಗೆ ಹಿಂದಿರುಗುವ ಹಾದಿಯಲ್ಲಿ, ಅನೇಕ ಹೊಸ ಹೊಸ ಭಾವನೆಗಳು ಮತ್ತೆ ನನ್ನ ಮನದಲ್ಲಿ ಮೂಡಿದವು, ನನ್ನಲ್ಲಿದ್ದ ನೆಗೆಟಿವಿಟಿ ದೂರ ಓಡಿತು. ಮನಸು ಶಾಂತವಾಯಿತು, ನಿರ್ಮಲವಾಯಿತು, ಹೃದಯ ಪ್ರಶಾಂತವಾಗಿತ್ತು. ಖಾಲಿ ಬಿಳಿಯ ಹಾಳೆಯಂತೆ ನನ್ನ ಮನವು ಘಮಘಮಿಸಿತ್ತಿತ್ತು. ಆ ಡೈರಿಗಳಲ್ಲಿ ಬರೆದಿದ್ದ ಅನೇಕ ಪದ್ಯಗಳು, ದಿನಚರಿ, ಪುಟ್ಟ ಪ್ರಬಂಧಗಳು, ಹೀಗೇ ಬೇಡದ್ದು, ಬೇಕಿದ್ದು, ಎಲ್ಲಾ ಇತ್ತು. ಆದರೂ ಅದನ್ನು ಹಳೇ ಪೇಪರಿನವನಿಗೆ ಕೊಟ್ಟೆ, ಮನೆಯಲ್ಲಿದ್ದ ಗಲೀಜು ಕಡಿಮೆಯಾಯಿತು, ಮನದಲಿದ್ದ ಗಬ್ಬು ಕೂಡ ಮಾಯವಾಯಿತು. ಆದರೂ, ನನಗೆ ಆ ಡೈರಿಗಳು ಬಲು ಪ್ರಿಯವಾಗಿದ್ದವು. 

ಅದರಲ್ಲಿ ಆಗಾಗ ಬರೆದಿಟ್ಟಿದ್ದ ಕವನಗಳು, ಪದ್ಯಗಳು, ನನಗೆ ತುಂಬಾ ಆತ್ಮೀಯವಾಗದ್ದವು. ನನ್ನ ಒಂಟಿತನವನ್ನು ನೀಗಿಸಿತ್ತು. ಒಂಟಿತನದ ಸಂಗಾತಿಯಾಗಿತ್ತು. ಆದರೂ ಅದನ್ನು ಕೊಟ್ಟುಬಿಟ್ಟೆ. ಕೆಲವು ಬರವಣಿಗೆಗಳು ನಾನು ನೊಂದಾಗ ಬರೆದಿದ್ದು, ಅತ್ತಾಗ ಗೀಚಿದ್ದು, ನೋವಿನಲ್ಲಿ ಸಂಗಾತಿಯಾಗಿದ್ದು. ಕ್ರಮೇಣ ನನಗೆ ಅದು ಭಾವನೆಗಳಿಲ್ಲದ ಬಿಳಿ ಹಾಳೆಗಳೆನಿಸಿ ಬಿಸಾಡಿದೆ. ಹರಿದೆ, ಕೆಲವು ಬರಹಗಳ ಮೇಲೆಯೇ ಗೀಚಿದೆ, ಹಳೇ ಪೇಪರಿನವನಿಗೆ ಕೊಟ್ಟೆ. ಎಲ್ಲಿ ಭಾವನೆಗಳು ಇರದೋ ಅಲ್ಲಿ ಎಷ್ಟೇ ಹೆಣಗಿದರೂ, ಏಗಿದರೂ, ಏನೂ ಪ್ರಯೋಜನವಿಲ್ಲ. ಆ ಡೈರಿಗಳು ಹಲವು ಬಾರಿ ನನ್ನನ್ನು ಕಾಡಿದ್ದಿದೆ. ಹೋದದ್ದು ಹೋಯಿತು, ಮತ್ತೆ ಬಾರದು, ಆ ಡೈರಿಯಲ್ಲಿದ್ದ ಪದಗಳು, ಇಂದು ಯಾರ ಪಾಲಾಗಿದೆಯೋ ನಾನರಿಯೇ!

ಈಗ ಮನೆ ಬದಲಾಗಿದೆ, ಮನಸ್ಸು ಬದಲಾಗಿದೆ, ಹೊಸ ಹೊಸ ಆಸೆ, ಆಕಾಂಕ್ಷೆಗಳಿಂದ ಮನವು ಚಿಗುರೊಡೆದಿದೆ. ಈಗ ನನಗೆ ಅವುಗಳೇ ಸಂಗಾತಿ. ಜೊತೆಗೆ ನನ್ನ ನಲ್ಮೆಯ ಮಡದಿಯೂ ನನಗೆ ಸಹಕಾರ ಕೊಡುತ್ತಿದ್ದಾಳೆ. ನನ್ನ ಜೊತೆ ಜೊತೆಗೆ ನಡೆದು, ನನ್ನ ನೋವು ನಲಿವುಗಳಲಿ ಜೊತೆಗಾತಿಯಾಗಿರುವಳು. ಅವಳ ಆಸೆ, ಆಕಾಂಕ್ಷೆಗಳಿಗೆ ನಾನಿದ್ದೇನೆ. ಇನ್ಯಾವ ಡೈರಿಗಳ ಅವಶ್ಯಕತೆಯೂ ನನಗಿಲ್ಲ. ಆಗ ನನಗೆ ಬದುಕಬಹುದೆಂಬ ಆಸೆಯೂ ಇದ್ದಿಲ್ಲ, ಆದರೂ, ಸಾಯಲು ಧೈರ್ಯವೂ ಇರಲಿಲ್ಲ. ಏನೋ ಜೀವನ ನಡೆಸುತ್ತಿದ್ದೆ. ಈಗ ಮತ್ತೊಂದು ಜೀವದ ಜೊತೆ ಇದ್ದು, ಆಕೆಯನ್ನೂ ಚೆನ್ನಾಗಿ ನೋಡಿಕೊಳ್ಳುವ ಛಲವಿದೆ. ಗೆಲ್ಲುವೆನೆಂಬ ಭರವಸೆಯಿದೆ. ಜೀವನ ಇನ್ನೂ ಸುಧಾರಿಸಬೇಕು. ಮುಂದೇ ಹೇಗೋ ಏನೋ? ಅಂತೂ ಜೀವಿಸಲೇ ಬೇಕು, ಬದುಕಿ ಜಯಿಸಲೇಬೇಕು.


#ಡೈರಿಯಲ್ಲಿ_ಬರೆಯಲು_ನಿಲ್ಲಿಸಿದ_ಪುರಾಣ