My Blog List

Sunday, March 07, 2021

ಚೌಪದಿ - 28

ಕತ್ತಲಲಿ ಎಲ್ಲರೂ ಜೊತೆಗೂಡಿ ತಿನ್ನುತಿರೆ। 
ಹೆತ್ತವಳು ಹಾಕುವಾ ಕೈತುತ್ತಿನೂಟ॥ 
ಬತ್ತುವುದು ಹಸಿವು ಬೆಳದಿಂಗಳಾ ಬೆಳಕಿನಲಿ। 
ಮತ್ತು ಬರುವುದು ನಿದಿರೆ - ಅನಿಕೇತನ॥ 28 ॥

ಚೌಪದಿ - 27

ಬಾಳಿನಾ ಕಡಲಲ್ಲಿ ಮುಳುಗದೇ ಈಜುತಿರು। 
ಹಾಳುಮಾಡಿಕೊಳದೇ ಜೀವನವ ನೀನು॥ 
ಆಳವನು ನೋಡುತಿರೆ ಬೆಳಕಿನಲೆ ಕಾಣುವುದು। 
ಏಳುಬೀಳುಗಳಿದುವೆ - ಅನಿಕೇತನ॥ 27 ॥ 

Friday, March 05, 2021

ಚೌಪದಿ - 26

ಹೋಗಿಹುದು ಮುಸ್ಸಂಜೆ ಹೊಸತೊಂದು ದಿನತರಲು। 
ಆಗಸವ ಸಿಂಗರಿಸಿ ಒಲವಿಂದ ತಾನು॥ 
ಸಾಗುತಿದೆ ಕತ್ತಲೆಯು ಮುಂಜಾವಿನೌತಣಕೆ। 
ಆಗಲಿದೆ ನಲ್ಬೆಳಗು- ಅನಿಕೇತನ॥ 26 ॥ 

ಚೌಪದಿ - 25

ಬೇಸರವ ಪಡದೆಯೇ ನಡೆಸಿಬಿಡು ಜೀವನವ। 
ನೇಸರನ ನೋಡುತಾ ಬದುಕುವುದ ಕಲಿಯೊ॥ 
ಘಾಸಿಗೊಳಗಾಗದೆಯೆ ಬೆಳಗುವವನೆಂದೆಂದು। 
ಆಸೆಗಳ ಹುಟ್ಟಿಸುತ - ಅನಿಕೇತನ॥ 25 ॥ 


Thursday, March 04, 2021

ಚೌಪದಿ - 24

ಕಾನನವು ಕರೆದೊಡೇ ಭಯವೇಕೆ ಪಡುವೆನೀಂ?। 
ಮಾನವನ ಮುಸ್ಸಂಜೆ ಮುಗಿಯುವುದು ಹೀಗೆ॥ 
ಯಾನವನು ಮಾಡುತಿರೆ ಸುಖವಾಗುವುದು ಪಯಣ। 
ಹೂನಗೆಯ ಬೆಳಗಿದುವೆ - ಅನಿಕೇತನ॥ 24 ॥