My Blog List

Wednesday, June 30, 2021

ಚೌಪದಿ - 155

ಬೊಮ್ಮನನು ನೆನೆಯುತ್ತ ಸಾಗಬೇಕಿದೆ ದಿನವು। 
ತಮ್ಮದೇ ರೀತಿಯಲಿ ತೋರುತ್ತ ಭಕ್ತಿ॥ 
ಹೆಮ್ಮೆಯನು ಪಡುವೆಯೋ ಬದುಕನವಲೋಕಿಸುತ। 
ನೆಮ್ಮದಿಯು ಮೌನದಲೆ - ಅನಿಕೇತನ॥ 155 ॥ 

ಚೌಪದಿ - 154

ಊನವಾಗಿರೆ ಮನವು ಸದ್ದಿರದೆ ಕೊರಗುವುದು। 
ಹೂನಗೆಯ ತೋರುತ್ತ ನೋವುಗಳ ಮರೆತು॥ 
ಯಾನವನು ಮಾಡುತಿರೆ ತಿಳಿವುದೋ ಕೊನೆಯಲ್ಲಿ। 
ಮೌನದಲೆ ನೆಮ್ಮದಿಯು - ಅನಿಕೇತನ॥ 154 ॥ 

Tuesday, June 29, 2021

ಚೌಪದಿ - 153

ಹೂನಗೆಯ ಬೆಳಕಿನಲಿ ನೇಸರನು ಮೂಡಿರಲು। 
ಬಾನಿನಾ ಜೀವಿಗಳು ಹಾರಿಹವು ಮುದದಿ॥ 
ತಾನು ದಿನವೂ ಬೆಳಕ ಚೆಲ್ಲಿರಲು ಸದ್ದಿರದೆ। 
ಮೌನದಲೆ ನೆಮ್ಮದಿಯು - ಅನಿಕೇತನ॥ 153 ॥ 

ಚೌಪದಿ - 152

ನಾನು ನಾನೆಂಬುವಾ ಹುಂಬತನದಲಿ ಮೆರೆದು। 
ಮಾನವನು ಕೊಬ್ಬುವನು ದಿನದಿಂದ ದಿನಕೆ॥ 
ಮಾನ ಮರ್ಯಾದೆಯನು ಕಳೆದುಕೊಳ್ಳುವ ಬದಲು। 
ಮೌನದಲೆ ನೆಮ್ಮದಿಯು - ಅನಿಕೇತನ॥ 152 ॥ 

Monday, June 28, 2021

ಚೌಪದಿ - 151

ತಮ್ಮ ಬೆನ್ನನು ತಾವೆ ತಟ್ಟಿಕೊಳ್ಳುವರಯ್ಯ। 
ಹಮ್ಮಿನಿಂದಲಿ ಬೀಗಿ ಕೊಬ್ಬನ್ನು ತೋರಿ॥ 
ಸುಮ್ಮನಿರುವುದೆ ಲೇಸು ದೂರವಿರುವುದೆ ಸುಖವು। 
ನೆಮ್ಮದಿಯು ಮೌನದಲೆ - ಅನಿಕೇತನ॥ 151 ॥ 

ಚೌಪದಿ - 150

ನೋಡು ನೀ ಭಕ್ತಿಯಲಿ ಕಣ್ಣನ್ನು ಮಿಟುಕಿಸದೆ। 
ಹೂಡು ನೀ ಬಾಣವನು ಬದಲಿಸದೆ ಗುರಿಯ॥ 
ಕೇಡು ನೀ ಬಯಸದಿರು ಯಾರಿನೂ ಮೂದಲಿಸಿ। 
ಮಾಡು ನೀ ಕ್ರಾಂತಿಯನು - ಅನಿಕೇತನ॥ 150 ॥ 

ಚೌಪದಿ - 149

ಜಗಳವನು ಶುರುಮಾಡಿ ಗುಂಪನ್ನು ಕಟ್ಟುತಲಿ। 
ಹೊಗಳುಭಟರನ್ನೆಲ್ಲ ಕರೆಯುತಿರೆ ಕೂಗಿ॥ 
ತೆಗಳುವುದಕೆಂದೇನೆ ಜನರನ್ನು ಹುರಿದುಂಬಿ। 
ರಗಳೆಯನು ಮಾಡುವರೊ - ಅನಿಕೇತನ॥ 149 ॥ 

ಚೌಪದಿ - 148

ಹೊಲಸನ್ನು ತಾ ತಿಂದು ಬೇರೊಬ್ಬರಿಗೆ ಬಳಿದು। 
ಕಲಹವನು ಶುರುಮಾಡಿ ನಲಿದಾಡುವವರು॥ 
ಬಲವನ್ನು ತೋರಿಸದೆ ಮುಖವನ್ನು ಮುಚ್ಚುತ್ತ। 
ಬಲಿಪಶುವ ನಾಟಕವನಾಡುವವರು॥ 148 ॥ 

ಚೌಪದಿ - 147

ಬೇಕಾದ ಹಾಗೆಲ್ಲ ಮಾತನ್ನು ತಿರುಚುತ್ತ। 
ಸಾಕಾಗಿ ಕೊನೆಯಲ್ಲಿ ಕೆಸರೆರೆಚುವವರು॥ 
ಯಾಕಾದರೂ ಕೆಲರು ಹೀಗೆಂದು ಯೋಚಿಸಲು। 
ಸಾಕಾಗಿಹುದು ಮಾತು - ಅನಿಕೇತನ॥ 147॥ 

Thursday, June 24, 2021

ಚೌಪದಿ - 146

ಅರಚಾಡಿ ಗಂಟಲಿಗೆ ನೋವನ್ನು ಕೊಡದಿರೋ। 
ನರಳಾಡಿ ಕೂರುವುದು ನೋವಿನಲಿ ತಾನು॥ 
ಹೊರಗಟ್ಟು ಕೋಪವನು ಸಹನೆಯಾ ತೋರುತ್ತ। 
ವಿರಮಿಸೋ ಮೌನದಲಿ - ಅನಿಕೇತನ॥ 146 ॥ 

Wednesday, June 23, 2021

ಚೌಪದಿ - 145

ಹೇಳು ನೀನೆಲ್ಲವನು ಹಗುರವಾಗಿಸಿ ಮನವ। 
ಕೇಳು ನಿನ್ನಯ ಸರದಿ ಬರುವಾವರೆಗೂ॥ 
ಹೇಳಬೇಕಿಹುದೆಲ್ಲವನು ಮನದಿ ನೆನಪಿಟ್ಟು। 
ಕೇಳು ಮಾತನು ಮೊದಲು - ಅನಿಕೇತನ॥ 145 ॥ 

ಚೌಪದಿ - 144

ಪರಬೊಮ್ಮ ಜಗವನ್ನು ಹರಸುತಿರಲನುದಿನವು। 
ನರಜಂತುಗಳು ತಾವು ಬಾಳುವರು ಸುಖದಿ॥ 
ಪರಬೊಮ್ಮನನು ನೆನೆದು ಭಕ್ತಿಯಲಿ ಬೇಡಿದರೆ। 
ಚಿರಕಾಲ ಸುಖವಿಹುದೊ - ಅನಿಕೇತನ॥ 144 ॥ 

Monday, June 21, 2021

ಷಟ್ಪದಿ - 7

ಯೋಗ ಮಾಡುತ ಕಲಿಯುತಿರುವೆನು 
ಯೋಗದಲ್ಲಿಯ ಜೀವ ಕಲೆಯನು 
ಯೋಗವಿದ್ದರೆ ಸಿಗುವುದೆಲ್ಲವು ಬದುಕಿನಲಿ ತಾನು। 
ಯೋಗ ಮಾಡುತ ದಿನವ ಕಳೆದರೆ 
ರೋಗರುಜಿನವು ದೂರವಿರುವುದು 
ಯೋಗ ಬಂದಿದೆಯೆಂದು ಬೀಗದೆ ಮಾಡು ಕೆಲಸವನು॥ 7 ॥ 

ಚೌಪದಿ - 143

ಇಲ್ಲಿರುವುದೇ ಸಗ್ಗವೆಂದರಿತು ಬದುಕಿಬಿಡು। 
ಅಲ್ಲಿರುವುದೇ ನರಕವೆಂದು ಮರೆತುಬಿಡು॥ 
ಇಲ್ಲಿದ್ದು ಗೆಲ್ಲುತ್ತ ನೀನೆಂದು ಮರೆಯದಿರು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 143 ॥

Sunday, June 20, 2021

ಚೌಪದಿ - 142

ಬೆಲ್ಲ ಬೇವಿನ ಹಾಗೆ ಬದುಕನ್ನು ಸಾಗಿಸಲು। 
ಚೆಲ್ಲು ನೀ ಸಿಹಿಯನ್ನು ಕಹಿಯನ್ನು ನುಂಗಿ॥ 
ಇಲ್ಲಸಲ್ಲದ ನೆಪವ ಮಾಡುತ್ತ ಹೇಳದಿರು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 142 ॥ 

ಚೌಪದಿ - 141

ಮೆಲ್ಲಮೆಲ್ಲನೆಯುಲಿದು ಸದ್ದಿಲ್ಲದೇ ದುಡಿವು-। ದೆಲ್ಲ ಜೀವಿಗಳಿಗೂ ದೊರಕುವುದು ಸಗ್ಗ॥ ಎಲ್ಲೆಯೋ ಹುಟ್ಟುತ್ತಲೆಲ್ಲಿಯೋ ಸಾಯುತಿರ-। ಲೆಲ್ಲವೂ ಅವನಿಚ್ಛೆ - ಅನಿಕೇತನ॥ 141 ॥

Saturday, June 19, 2021

ಚೌಪದಿ - 140

ಎಲ್ಲವೂ ತನ್ನಿಂದಲೆನ್ನುತ್ತ ಬೀಗಿದರೆ। 
ಸಲ್ಲುವಾ ಸಗ್ಗವೂ ಸಾಗುವುದು ದೂರ॥ 
ಕಲ್ಲೊಂದು ಕರಗಲೂ ಕಾರಣವ ಹುಡುಕಿರಲು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 140 ॥ 

ಚೌಪದಿ - 139

ಒಲ್ಲದೆಯೆ ಮಾಡದಿರು ಕಾಯಕವನೆಂದೆಂದು। 
ಬಲ್ಲವರು ಹೇಳಿಹರು ನಮ್ಮೊಳಿತಿಗಾಗಿ॥ 
ಹುಲ್ಲುಕಡ್ಡಿಯು ತಾನು ತೂಗತಿರಲನುದಿನವು। 
ಎಲ್ಲವೂ ಅವನಿಚ್ಛೆ - ಅನಿಕೇತನ॥ 139 ॥ 

ಚೌಪದಿ - 138

ಭಯವನ್ನು ಪಡದೆಯೇ ಸಾಗುತಿರೆ ಮುಂದೆ ನಿರ್-।
ಭಯವಾಗಿ ನಡೆಯುವುದು ನಮ್ಮಯಾ ಬದುಕು॥ 
ಜಯಪರಾಜಯಗಳಿಗೆ ಹೆದರದೇ ನಿಂತು ನಿರ್-। 
ಭಯನಾಗಿ ಹೋರಾಡು - ಅನಿಕೇತನ॥ 138 ॥ 

Thursday, June 17, 2021

ಚೌಪದಿ - 137

ಹೊಸ ವಿಷಯವೇನಿಲ್ಲವಾದರೂ ಬರೆಯುತಿರು। 
ಕಸಿಯಾಗುವುದು ಮನವು ದಿನದಿಂದ ದಿನಕೆ॥ 
ಪಸರಿಸುತಲರಿವನ್ನು ಮುಂದಕ್ಕೆ ಹೋಗುತಿರೆ। 
ಹೊಸತನ್ನು ಬರೆಯುವೆಯೊ - ಅನಿಕೇತನ॥ 137 ॥ 

Tuesday, June 15, 2021

ಚೌಪದಿ - 136

ಸದ್ದಿಲ್ಲದೇ ಮಾಡುತಿರೆ ಕಾಯಕವ ದಿನವು। 
ಗೆದ್ದು ಬರಬಹುದಂತೆ ವಿಘ್ನಗಳನಳಿಸಿ॥ 
ಬಿದ್ದೊಡನೆ ಬೊಬ್ಬಿಡುತ ನಾಟಕವನಾಡದೆಯೆ 
ತಿದ್ದಿಕೊಳೊ ನಿನ್ನನ್ನು - ಅನಿಕೇತನ॥ 136 ॥ 

ಭಾಮಿನಿ ಷಟ್ಪದಿ - 6

ಹಾಗೆ ಸುಮ್ಮನೆ ಕುಳಿತು ಬರೆದೆನು
ಭಾಗಿ ಗುಣಿಸುತ ಕೂಡಿ ಕಳೆಯುತ 
ತೂಗಿ ಆಡುತ ತಾಳ ಹಾಕುತ ಹಾಡಿ ರಾಗದಲಿ। 
ರಾಗತಾಳಗಳೆರಡು ಹೊಂದಲು 
ಬೇಗ ಬೇಗನೆ ಪದ್ಯ ಮುಗಿಸುತ 
ಬಾಗಿ ನಮಿಸಿಹೆ ದೇವ ದೇವಿಗೆ ಭಕ್ತಿ ತೋರುತಲಿ॥ 6 ॥ 

Monday, June 14, 2021

ಚೌಪದಿ - 135

ಬಾಳಲ್ಲಿ ತೊಡಕುಗಳು ಬಹಳಷ್ಟು ಬಂದರೂ। 
ಗಾಳಕ್ಕೆ ಸಿಲುಕದೆಯೆ ನಯವಾಗಿ ಸಾಗು॥ 
ಏಳುಬೀಳುಗಳಲ್ಲಿ ಬದುಕನ್ನು ಗಮನಿಸುವ। 
ಧೂಳಕಣ ನೀನಾಗೊ - ಅನಿಕೇತನ॥ 135 ॥ 

Sunday, June 13, 2021

ಚೌಪದಿ - 134

ಹಿಂದೊಂದು ಮಾತಾಡಿ ಚೂರಿಯನು ಹಾಕುತ್ತ। 
ಮುಂದೊಂದು ಮಾತಾಡಿ ಮುಗ್ಧನಾಗದಿರು॥ 
ಒಂದೊಂದೆ ನಂಟುಗಳ ಕಳಚುತ್ತ ಸಾಗುದವ-। 
ನೆಂದೆಂದು ಒಬ್ಬಂಟಿ - ಅನಿಕೇತನ॥ 134 ॥ 

ಚೌಪದಿ - 133

ಮಾಯೆಯಾ ಲೋಕದಲಿ ವಿಹರಿಸುತ ನಲಿಯುವರು। 
ಕಾಯಕವ ಮಾಡುವರು ಮನವ ನೋಯಿಸದೆ॥ 
ಗಾಯವನು ಕೆರೆಯದೇ ಮರೆಯದಾ ನೆನಪುಗಳ। 
ಛಾಯೆಯಲಿ ನೀ ನಲಿಯೊ - ಅನಿಕೇತನ॥ 133 ॥ 

Friday, June 11, 2021

ಚೌಪದಿ - 132

ಹೂತಿಹುದು ಮನದೊಳಗೆ ಹೇಳಲಾಗದ ಭಯವು। 
ಮಾತನಾಡದೆ ಜಗಳವಾಡಿಹರು ಜನರು॥ 
ಸೋತರೂ ಸರಿಯೆಂದು ಸಂಬಂಧಗಳನುಳಿಸೆ। 
ಮಾತಾಡಿ ಬಗೆಹರಿಸೊ - ಅನಿಕೇತನ॥ 132 ॥ 

Thursday, June 10, 2021

ಚೌಪದಿ - 131

ಹತ್ತಿಯಾ ಮೃದುತನವು ಮನದಲ್ಲಿ ನೆಲೆಯಾಗೆ। 
ಮೆತ್ತನೆಯ ಹೊದಿಕೆಯಲಿ ಮೈಯನ್ನು ಮುಚ್ಚು॥ 
ಬಿತ್ತು ಸಂಬಂಧಗಳನೆಲ್ಲರೊಳಗೊಂದಾಗಿ। 
ಕತ್ತಿಯನು ಮಾರದೆಯೆ  - ಅನಿಕೇತನ॥ 131 ॥ 

ಚೌಪದಿ - 130

ಚೆಲ್ಲುತಿರೆ ಮಮತೆಯನು ಹೂನಗೆಯ ಮಾತಿನಲಿ। 
ಕಲ್ಲಿನಂತಿರುವವರು ಕರಗುವರು ನಿಜದಿ॥ 
ಮಲ್ಲಿಗೆಯ ಪರಿಮಳವ ಬೀರುತಿರಲನುದಿನವು। 
ಎಲ್ಲರೂ ನನ್ನವರೆ - ಅನಿಕೇತನ॥ 130 ॥ 

Wednesday, June 09, 2021

ಚೌಪದಿ - 129

ಸಮಯವದು ಸಾಗುತಿರೆ ಯಾರಿಗೂ ಕಾಯದೆಯೆ। 
ಸಮವಾಗಿ ನೋಡುತ್ತ ಜನರೆಲ್ಲರನ್ನು॥ 
ಗಮನಿಸುತ ಕಾಯುವನು ಪಾಠವನು ಕಲಿಸುತ್ತ। 
ನಮಗೆಲ್ಲ ತಿಳಿಸುವನು  - ಅನಿಕೇತನ॥ 129 ॥ 

ಚೌಪದಿ - 128

ಕಾಲನನು ನಿಲ್ಲಿಪುದು ಬಲುಕಷ್ಟವೆಂದರಿತು। 
ಓಲೆಯನು ಬರೆದಿಟ್ಟು ಹಬ್ಬವನು ಮಾಡು॥ 
ಹಾಲನ್ನು ನೀ ಕುಡಿದು ಚಿಂತಿಸದೆ ಮಲಗುತ್ತ। 
ಕಾಲನಿಗೆ ಶರಣಾಗೊ  - ಅನಿಕೇತನ॥ 128 ॥ 

Monday, June 07, 2021

ಚೌಪದಿ - 127

ಉಪಯೋಗವಾಗುವಾ ಸಮಯವನು ಕಳೆಯುತ ದು-। 
ರುಪಯೋಗವಾಗುವಾ ಯೋಜನೆಯ ಮರೆಯೊ॥ 
ಅಪಕಾರವನು ಮಾಡಿ ಹೀನಾಯವಾಗದೆಯೆ। 
ಉಪಕಾರವನೇ ಮಾಡೊ - ಅನಿಕೇತನ॥ 127 ॥ 

Sunday, June 06, 2021

ಚೌಪದಿ - 126

ಶುದ್ಧತೆಯ ಕಾಪಾಡಿ ತನುವಲ್ಲಿ ಮನದಲ್ಲಿ।  
ಬದ್ಧತೆಯ ಬಿಡದೆಯೇ ಜೀವನವ ನಡೆಸು॥  
ಉದ್ಧರಿಸೆ ಧರ್ಮವನು ಬದುಕಿನಲಿ ದಿನದಿನವು।  
ಪದ್ಧತಿಯದಾಗುವುದೊ - ಅನಿಕೇತನ॥ 126 ॥ 

Saturday, June 05, 2021

ಭಾಮಿನಿ ಷಟ್ಪದಿ - 5

ಹರಿಯ ಜೊತೆಯಲಿ ರಮೆಯು ಕುಳಿತಿರೆ 
ಹರನು ಬಂದನು ಗೌರಿಯೊಂದಿಗೆ 
ಸುರರ ಲೋಕಕೆ ಮೆರಗು ತುಂಬುತ ಬೆಳಕ ಚೆಲ್ಲುತಲಿ। 
ಹರುಷ ಪಡುತಿಹ ದೈವ ಲೋಕವ 
ಕರುಣೆಯಿಂದಲಿ ಕಾಯುತಿರುವರು 
ಬೆರಗುಗೊಳಿಸುತ ಜಗವನೆಲ್ಲವ ತಮ್ಮ ಶಕ್ತಿಯಲಿ॥ 5 ॥ 

ಭಾಮಿನಿ ಷಟ್ಪದಿ - 4

ಗಿರಿಯನೇರುತ ರವಿಯು ಮೂಡಿರೆ 
ಧರೆಯು ಸೊಬಗಲಿ ನಾಚಿ ನಿಂತಿದೆ 
ಮೆರುಗಿನಿಂದಲಿ ನದಿಯು ಹರಿದಿದೆ ಸಾಗರದ ಕಡೆಗೆ। 
ಮರದ ಮೇಲಿನ ಹಕ್ಕಿ ಹಾಡಿಗೆ  
ಕರುವು ಕುಣಿಯುತಲಾಟವಾಡಿದೆ
ಇರುವುದೆಲ್ಲವ ನೆನೆಯುತಿರುವೆನು ಕೈಗಳನುಮುಗಿದು॥ 4 ॥ 

Friday, June 04, 2021

ಚೌಪದಿ - 125

ಪಾರಾಗಬೇಕೆಂದು ಬಿಡುಗಡೆಯ ಬೇಡದೆಯೆ। 
ಹೋರಾಟ ಮಾಡುತ್ತ ಜೀವನವ ಕಲಿಯೊ॥ 
ನೂರಾರು ಕಷ್ಟಗಳು ಬಂದರೂ ಧೃತಿಗೆಡದೆ। 
ಹೋರಾಡಿ ಪಾರಾಗು - ಅನಿಕೇತನ॥ 125 ॥ 

Thursday, June 03, 2021

ಚೌಪದಿ - 124

ನೆಲದಲ್ಲಿ ಬೇರೂರಿ ಹುಟ್ಟುವಾ ಸಸಿಯೊಂದು। 
ಫಲಕೊಡುವ ಮರವಾಗಿ ಬೆಳೆಯುವಾ ಹಾಗೆ॥ 
ಹಲವಾರು ಮನಗಳಿಗೆ ಹುರುಪನ್ನು ತುಂಬುತ್ತ। 
ಒಲವಿಂದ ನೀ ಬದುಕು - ಅನಿಕೇತನ॥ 124 ॥ 

Wednesday, June 02, 2021

ಚೌಪದಿ - 123

ತಾರಾಟದಿಂದೇನು ಫಲವಿಲ್ಲವೆಂದರಿತು। 
ಯಾರಾದರೇನಂದು ಕಾದಾಡಬೇಡ॥ 
ಬೇರೂರಬೇಕಾದ ಸಂಬಂಧಗಳ ಕಡಿದು। 
ಹಾರಾಡ ಬೇಡವೋ - ಅನಿಕೇತನ॥ 123 ॥ 

Tuesday, June 01, 2021

ಚೌಪದಿ - 122

ಯೋಗವನು ಮಾಡುತ್ತ ಜೀವನವ ನಡೆಸಿದರೆ। 
ಸಾಗುವೆವು ಬಲುದೂರ ಸುಖವಾಗಿ ನಾವು॥ 
ಮಾಗುತಿಹ ಮೈಮನವು ಜಡರಹಿತವಾಗುತಿರೆ। 
ಯೋಗಾನುಯೋಗವದು - ಅನಿಕೇತನ॥ 122 ॥ 

ಚೌಪದಿ - 121

ನೋಡುತಿರೆ ಬಾನಿನಲಿ ಮುಸ್ಸಂಜೆಯಾ ಸೊಬಗ। 
ಮೂಡಿಹುದು ಮನದೊಳಗೆ ನೇಸರನ ಮೊಗವು॥ 
ಹಾಡಿತಿರೆ ರಾಗದಲಿ ಭಾವನೆಯ ತುಂಬುತ್ತ। 
ಮೋಡಗಳು ಸರಿದಿಹವೊ - ಅನಿಕೇತನ॥ 121 ॥ 


ಭಾಮಿನಿ ಷಟ್ಪದಿ - 3

ಉಗಮವಾಗುತಲೆನ್ನ ಮನದೊಳು 
ಸುಗಮವಾಗಿಹ ನದಿಯು ಹರಿದಿದೆ
ಮೊಗದಲನುದಿನ ಕಾಂತಿ ಮೂಡುತಲರಿವು ಬೆಳಗುತಿದೆ
ಜಗವ ಮರೆಸುವ ಭಕ್ತಿಬಾವದೆ  
ಮುಗುಳುನಗುತಿಹ ತಾಯ ನೋಡಲು 
ಗಗನ ಕುಸುಮವೆ ದೊರಕಿದಂತಿದೆ ಗುರುವಿನಾಶ್ರಯದೆ॥ 3 ॥