My Blog List

Saturday, July 30, 2011

ಭೀಮನ ಅಮಾವಾಸ್ಯೆ ವ್ರತ.

ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.

ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. 

ಯಾವುದೇ ಹಬ್ಬ, ವ್ರತ ಕೈಗೊಳ್ಳುವ ಮೊದಲು ಸಂಕಲ್ಪ ಮುಖ್ಯ. ನಾವು ಯಾವ ಕಾರಣಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಿದ್ದೇವೆ ಎಂಬುದರ ಅರಿವು ಇರಲೇಬೇಕು. ಭೀಮನ ಅಮಾವಾಸ್ಯೆಯನ್ನು ಮದುವೆಯಾಗದ ಹೆಣ್ಣುಮಕ್ಕಳು ಭೀಮನಂತಹ ಬಲಶಾಲಿ ಗಂಡ ಸಿಗಲಿ ಎನ್ನುವ ಉದ್ದೇಶದಿಂದ ಹಾಗೂ ಮದುವೆಯಾದ ಹೆಂಗಸರೂ ಕೂಡ ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ಆರಾಧ್ಯ ದೈವ ಜ್ಯೋತಿರ್ಭೀಮೇಶ್ವರನ ಪೂಜೆ ಮಾಡುತ್ತಾರೆ. 

ಕೆಲೆವೆಡೆ ಈ ಹಬ್ಬದಲ್ಲಿ ಸೋದರಿಯರು ಸೋದರರ ಕೈಯಿಂದ ಭಂಡಾರ ಒಡೆಸುತ್ತಾರೆ. ಭಂಡಾರ ಅಂದರೆ, ಕರಿದ ಕಡಬು(ಸಿಹಿ ಇಲ್ಲದ), ಆದರೆ ಅದರೊಳಗೆ ಲಕ್ಷ್ಮೀ ಸ್ವರೂಪಿ ನಾಣ್ಯವನ್ನು ಇಟ್ಟು ಕರೆದಿರುತ್ತಾರೆ. ಅಂತಹ ಕಡುಬನ್ನು ಮುಂಬಾಗಿಲ ಹೊಸಿಲಲ್ಲಿಟ್ಟು ಸೋದರ ಹೊಸಿಲ ಮೇಲೆ ಕೂತು ತನ್ನ ಮೊಣಕೈಯಿಂದ ಅದನ್ನು ತುಂಡರಿಸುತ್ತಾನೆ. 

ಸೋದರಿ ಆ ಸಮಯದಲ್ಲಿ ಆವನ ಬೆನ್ನ ಮೇಲೆ ಪ್ರೀತಿಯಿಂದ ಗುದ್ದುತ್ತಾಳೆ. ನಂತರ ಅಣ್ಣನ ಆಶೀರ್ವಾದ ಬೇಡುವ ಸೋದರಿ, ಫಲ ತಾಂಬೂಲ ನೀಡುತ್ತಾಳೆ. ಒಂದು ರೀತಿ ರಕ್ಷಾ ಬಂಧನದ ಇನ್ನೊಂದು ರೂಪದ್ದಂತಿರುತ್ತದೆ ಈ ಆಚರಣೆ. ಸೋದರಿಯನ್ನು ಸದಾ ಸೋದರ ರಕ್ಷಣೆ ಮಾಡುತ್ತಾನೆಂಬ ಸಂಕೇತ ಸೂಚಿಸುತ್ತದೆ.

ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಆಚರಿಸಬಹುದು. ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.

ಈ ಹಬ್ಬಕ್ಕೆ ಪತಿ ಸಂಜೀವಿನಿ ವ್ರತ ಎಂದು ಹೆಸರು ಬಂದ ಬಗ್ಗೆ ಒಂದು ಕಥೆ ಇದೆ. ಆಸೆಬುರುಕ ಬ್ರಾಹ್ಮಣನೊಬ್ಬ, ಹಣಕ್ಕಾಗಿ ತನ್ನ ಮಗಳ ಮದುವೆಯನ್ನು ರಾಜಕುಮಾರನ ಶವದೊಂದಿಗೆ ನಡೆಸುತ್ತಾನೆ. ಸುರಿಯುತ್ತಿದ್ದ ಮಳೆಯಲ್ಲಿ, ಶವವನ್ನೂ, ಶವವನ್ನು ವರಿಸಿದ ವಧುವನ್ನೂ ರಾಜ ಪರಿವಾರದವರು ನದಿ ತೀರದಲ್ಲಿ ಬಿಟ್ಟು ಹೋಗುತ್ತಾರೆ.

ಗಾಡಾಂಧಕಾರದಲ್ಲಿ ಪತಿಯ ಶವದ ಮುಂದೆ ಕುಳಿತು ರೋದಿಸುತ್ತಿದ್ದ ಆ ಸತಿ, ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಾಳೆ. ಅವಳ ಭಕ್ತಿಗೆ ಮೆಚ್ಚಿದ ಶಿವಪಾರ್ವತಿಯರು ಪ್ರತ್ಯಕ್ಷಳಾಗಿ ಅವಳ ಪತಿಗೆ ಜೀವದಾನ ನೀಡುತ್ತಾರೆ. ಆ ದಂಪತಿಗೆ ರಾಜ್ಯವೂ ಪ್ರಾಪ್ತಿಯಾಗಿ ಸುಖಶಾಂತಿ ನೆಮ್ಮದಿಯಿಂದ ಜೀವಿಸುತ್ತಾರೆ. ಅಮಾವಾಸ್ಯೆಯ ದಿನ ಆ ಸತಿ ತನ್ನ ಪತಿಯನ್ನು ಬದುಕಿಸುಕೊಳ್ಳಲು ನಡೆಸಿದ ಪೂಜೆಯೇ ಜ್ಯೋತಿ ಭೀಮೇಶ್ವರ ವ್ರತ.

ಮಾಹಿತಿ ಕೃಪೆ: ದಟ್ಸ್ ಕನ್ನಡ

Monday, July 18, 2011

ಹಾವುರಾಣಿ. - Common Garden Skink.

ಹಾವುರಾಣಿ ಸರೀಸೃಪದ ಜಾತಿಗೆ ಸೇರಿದ ಪ್ರಾಣಿ. ಇದು ಸಾಮಾನ್ಯವಾಗಿ ೨೦ ಸೆಂ. ಮೀ. ಉದ್ದ ಬೆಳೆಯುತ್ತದೆ. ಆದರೆ ಕೆಲವು ಹಾವುರಾಣಿಗಳು ಕೇವಲ ೧೦ ಸೆಂ. ಮೀ. ಉದ್ದ ಮಾತ್ರ ಬೆಳೆಯುತ್ತವೆ. ಹೆಣ್ಣು ಹಾವುರಾಣಿಯು ಗಂಡು ಹಾವುರಾಣಿಯ ಜೊತೆ ಸಂಭೋಗ ನಡೆಸಿದಾಗ ಸುಮಾರು ೨೫೦ ಮೊಟ್ಟೆಗಳನ್ನು ಇಡುತ್ತದೆ. ಎಲ್ಲಾ ಸರೀಸೃಪಗಳಂತೆಯೇ, ಹಾವುರಾಣಿಯು ಬಾಲವನ್ನು ಜೋರಾಗಿ ಅಲ್ಲಾಡಿಸಿ, ತನ್ನ ಬೇಟೆಯ ಮೇಲೆ ನಿಗಾ ಇಡುತ್ತದೆ. ಸಾಮಾನ್ಯವಾಗಿ ಹಾವುರಾಣಿಯು ಕಪ್ಪು ಮಿಶ್ರಿತ ಕಂದು ಬಣ್ಣದ್ದಾಗಿರುತ್ತದೆ. ಕೆಲವು ಬಾರಿ, ತುಂಬಾ ಬಿಸಿಲಿನಲ್ಲಿ, ಇವುಗಳು ಕಡು ಕೆಂಪು ಬಣ್ಣದಂತೆ ಕಾಣುತ್ತದೆ. 

ಸಾಮಾನ್ಯವಾಗಿ, ಹಾವುರಾಣಿಗಳ ಆಹಾರ ಸಣ್ಣ ಕ್ರಿಮಿಗಳು, ಕೀಟಗಳು, ಎರೆಹುಳಗಳು, ನೊಣಗಳು, ಮಿಡತೆಗಳು, ಜಿರಳೆಗಳು, ಸಣ್ಣ ಜೇಡಹುಳಗಳು, ಇರುವೆಗಳು, ಇತ್ಯಾದಿ. ಹಾವುರಾಣಿಗಳು ಬಾಳೆಹಣ್ಣನ್ನು, ಸ್ಟ್ರಾಬೆರ್ರಿಗಳನ್ನು ಕೂಡ ಇಷ್ಟಪಡುತ್ತವೆ. ಹಾವುರಾಣಿಗಳು ತನ್ನ ಬೇಟೆಯ ಚಲನೆಯನ್ನು ಅವಲಂಬಿಸಿ ಬೇಟೆಯಾಡುತ್ತದೆ. ತನ್ನ ಬೇಟೆಯು ಚಲಿಸದಿದ್ದಾಗ, ತನಗೆ ಬೇಟೆಯು ಕಾಣಿಸದ ಕಾರಣ ಅದು ಬೇಟೆಯಾಡುವುದಿಲ್ಲ. ಬೇಟೇಯಾಡುವಾಗ ಹಾವುರಾಣಿಯು ಅವಿತುಕೊಡು ಅಥವಾ ಕಾದು ಬೇಟೆಯಾಡುತ್ತದೆ. ತನ್ನ ಬೇಟೆಯನ್ನು ಬಾಯಲ್ಲಿ ಹಿಡಿದಾಗ, ಅದನ್ನು ಜೋರಾಗಿ ಅಲ್ಲಾಡಿಸಿ ಸಾಯಿಸುತ್ತದೆ. ನಂತರ ಅದನ್ನು ಇಡಿಯಾಗಿ ನುಂಗುತ್ತದೆ. ತನ್ನ ಊಟವಾದ ಬಳಿಕ ಹಾವುರಾಣಿಯು ಬೇಟೆಯಾಡುವುದಿಲ್ಲ. ಹಾವುರಾಣಿಗಳು ಸಾಮಾನ್ಯವಾಗಿ ೪ - ೫ ದಿನಕ್ಕೊಮ್ಮೆ ಬೇಟೆಯಾಡುತ್ತದೆ. ಆದರೆ, ಪ್ರತಿದಿನವೂ ಆಹಾರವನ್ನು ಬೇಟೆಯಾಡಿ ಕೂಡ ತಿನ್ನುತ್ತದೆ. 

Scientific classification
Kingdom : Animalia
Phylum : Chordata
Class : Reptilia
Order : Squamata (paraphyletic)
Infraorder : Scincomorpha
Family : Scincidae
Subfamily : Lygosominae
Genus : Lampropholis
Species: L. guichenoti

ಇವು ಸಾಮಾನ್ಯವಾಗಿ ಎಲೆಗಳ ಮರೆಯಲ್ಲಿ ಮತ್ತು ಉದ್ದನೆಯ ಹುಲ್ಲುಗಳ ನಡುವೆ ಇದ್ದು ಬೇಟೆಯಾಡುತ್ತದೆ. ತನಗಿಂತ ದೊಡ್ಡ ಪ್ರಾಣಿಗಳ ಬಾಯಿಗೆ ಸಿಗಬಾರದೆಂದು ಇವು ಮರದ ದಿಮ್ಮಿಗಳ ಒಳಗೆ ಇರಲು ಇಷ್ಟ ಪಡುತ್ತವೆ. ಎಲ್ಲಾ ಸರೀಸೃಪಗಳಂತೆಯೇ ಇವುಗಳು ಕೂಡ ಪರಿಸರದ ಶಾಖವನ್ನು ಅವಲಂಬಿಸಿದ ಉಷ್ಣತೆಯುಳ್ಳ ಪ್ರಾಣಿಗಳು (Cold Blooded). ಹಾಗಾಗಿ, ಇವುಗಳು, ಬೆಳಗಿನ ಜಾವ ಬಂಡೆಯ ಮೇಲೆ, ಅಥವಾ, ರಸ್ತೆಯ ಮೇಲೆ ತನ್ನ ಮೈಯನ್ನು ಉಷ್ಣವಾಗಿರಿಸಿಕೊಳ್ಳಲು ಬಿಸಿಲನ್ನು ಕಾಯುತ್ತದೆ. ಸಾಮಾನ್ಯವಾಗಿ ಇವು, ಮರದ ಎಲೆಗಳ ಅಡಿಯಲ್ಲಿ, ಅತ್ಯಂತ ಶಾಖವಿರುವ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. 

ಹಾವುರಾಣಿಗಳನ್ನು ಆಹಾರವಾಗಿ ತಿನ್ನುವ ಜೀವಿಗಳೆಂದರೆ, ಹಾವುಗಳು, ಕೆಂಪು ಎದೆಯ ಹಕ್ಕಿ (robin) ಹಾಗು ದೊಡ್ಡ ಹಲ್ಲಿಗಳು. 

ಈ ಚಿತ್ರದಲ್ಲಿರುವ ಹಾವುರಾಣಿ ನನಗೆ ಕಾಣಿಸಿದ್ದು ಜೋಗದಲ್ಲಿ. ಇದು ತನ್ನ ಬೇಟೆಯನ್ನು ಹುಡುಕುತ್ತಿತ್ತು. ಆಗ ಇದನ್ನು ಸೆರೆಹಿಡಿದೆ. 
ಇನ್ನು ಇದರ ಪರಿಚಯ ಮಾಡೋಣ ಅನ್ನಿಸಿತು. ಹಾಗಾಗಿ ಈ ಲೇಖನ ಬರೆದದ್ದು. 

Saturday, July 16, 2011

ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು
ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು|
ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ,
ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ|
ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ ಇಲ್ಲ।
ಎದೆಯವುಚಿ ಮಲಗಿರುವ ಮಡದಿಗಿದೋ ಮಂಪರು
ನಿದಿರೆ ಅವಳಿಗೆ ಜೋರು ಜೊತೆಯಾಗಿ ನಾನಿದ್ದರು|
ಎದೆಬಡಿತ ಜೋಗುಳ, ಎನ್ನೆದೆಯೆ ತೊಟ್ಟಿಲು
ನಾ ಉಸಿರಾಟ ನಡೆಸುತಿರೆ ನಿದಿರಮ್ಮನ ಮಡಿಲು|
ಬದುಕುವ ಬಯಕೆಯು ಎಂದೆಂದಿಗೂ ಹೀಗೆ… ಕೊನೆಯೇ ಇಲ್ಲ।
ತಪ್ಪಿಕೊಳ್ಳುವ ತವಕ ಚುಚ್ಚುವ ಬೆಳಕನ್ನು
ಹುದುಗಿದಳು ನನ್ನೊಳಗೆ ಬಿಗಿದಪ್ಪಿ ಮೈಯನ್ನು|
ಬಾಳ ಹಾಸಿಗೆ ಮೇಲೆ, ಒಲವಿನ ಹೊದಿಕೆಯಲಿ
ಜೋಡಿಯಿವೆ ಮೈ ಬಿಸಿಯ ಬೆಚ್ಚನೆಯ ಗೂಡಿನಲಿ|
ಇದ ನೋಡಿ ಕರುಬುವ ಮೂಡಣದವ…. ಉರಿಯುತಿಹ ಮೆಲ್ಲ।
ಮೂಡಣದ ದೊರೆಯುರಿದು ಮೇಲೇರುತಿಹನು
ವಾಡಿಕೆಯ ಗೆಯ್ಮೆಯ ನೆನೆಸುತಿಹನವನು|
ಹಗಲ ಹೊರೆಯನು ಹೊರೆದು, ಹೊಟ್ಟೆ ಪಾಡಿಗೆ ದುಡಿದು
ಎದುರು ನೋಡುವೆ ಬೆಳಗ ಮರಳಿ ಇರುಳನು ಕಳೆದು|
ಮುಂಜಾವ ಮುಸುಕಿನ ಮುದ್ದಾಟಕೆ… ಸೋಲದವರಿಲ್ಲ ।