My Blog List

Saturday, January 31, 2009

ಸ್ವಾಮಿಯೇ ಶರಣಂ ಅಯ್ಯಪ್ಪ.

ಸ್ವಾಮಿಯೇ ಶರಣಂ ಅಯ್ಯಪ್ಪ.

ಹೋದ ವರ್ಷ Cousin ರಾಘು ಅವರ ಅಪ್ಪ ೧೯ನೇಬಾರಿ ಶಬರಿಮಲೆಗೆ ಹೋರಟಾಗ ಕರೆದಿದ್ದರು. ರಜೆ ಸಿಗದ ಕಾರಣ ಹೋಗೋದಕ್ಕೆ ಆಗಿರ್ಲಿಲ್ಲ. :(
ಈ ವರ್ಷ ಕೂಡ ಕರೆದರು. ತಕ್ಷಣ ಜೊತೆಗೆ ಹೋಗಲು ಒಪ್ಪಿದೆ. ಕಾರಣ ಹೋದ ವಾರ ತುಂಬಾ ಕೆಲಸವಿತು. ಹಗಲು ರಾತ್ರಿ ದುಡಿದಿದ್ದೆ. (ಹೊಸ ಪ್ರಾಜೆಕ್ಟ್ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಟೆಂಡರ್‍ Quote ಮಾಡಿದ್ದೆ. ಪ್ರಾಜೆಕ್ಟ್ ಸಿಕ್ಕರೆ ಸಂತೋಷ ಆಗುತ್ತೆ.) :)

ಇರ್ಲಿ. ಆ ವಿಷಯ ಈಗ ಬೇಡ.

ಈಗ ವಿಷಯಕ್ಕೆ ಬರುವೆ.
ಶಬರಿಮಲೆಗೆ ಹೋಗಬೇಕೆನ್ನುವ ಆಸೆ ಮುಂಚಿನಿಂದಲೂ ಇತ್ತು. ಕಾರಣಾಂತರಗಳಿಂದ ಹೋಗೋದಕ್ಕೆ ಆಗಿರ್ಲಿಲ್ಲ. ಈ ಬಾರಿ ಮಾಲೆ ಹಾಕಿಕೊಂಡು ವ್ರತ ಮಾಡಿ ಅಯ್ಯಪ್ಪನ ಕೃಪೆಗೆ ಪಾತ್ರನಾಗುವ ಅವಕಾಶ ಸಿಕ್ಕಿತು. ಹಾಗಾಗಿ ತಕ್ಷಣ ಒಪ್ಪಿಕೊಂಡೆ.

ಇಂದು ಬೆಳಿಗ್ಗೆ ಬೇಗ ಎದ್ದು ತಣ್ಣೀರಿನ ಸ್ನಾನ ಮಾಡಿ, ಮನೆದೇವರಾದ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಆತನ ಅಪ್ಪಣೆ ಪಡೆದು, ನಂತರ ಅಯ್ಯಪ್ಪನಿಗೂ ಕಾಣಿಕೆ ಸಲ್ಲಿಸಿದೆ.
ಅಮ್ಮ ಕೊಟ್ಟ ಹಾರ್ಲಿಕ್ಸ್ ಕುಡಿದು ಮಲ್ಲೇಶ್ವರದ ಬಳಿಯಿರುವ ಶ್ರೀರಾಂಪುರದಲ್ಲಿರುವ ಅಯ್ಯಪ ದೇವಸ್ಥಾನಕ್ಕೆ ಹೊರಟೆ. On the Way ರಾಘು ತಂದೆಯವವರನ್ನು ಜೊತೆಗೆ ಕರೆದುಕೊಂಡು ದೇವಸ್ಥಾನಕ್ಕೆ ಹೋದೆ.

ಅವರು ಹೇಳಿದಂತೆ ಮುಂಚೆಯೇ ಕೇಸರಿ/ಕಪ್ಪು ಪಂಚೆ, ಉತ್ತರೀಯಗಳನ್ನು ಅಮ್ಮ ಮಲ್ಲೇಶ್ವರಕ್ಕೆ ಹೋಗಿದ್ದಾಗ ಖರೀದಿಸಿದ್ದರು. ಒಂದು ಪಂಚೆ ಹಾಗೂ ಒಂದು ಉತ್ತರೀಯವನ್ನು ತೆಗೆದುಕೊಂಡು ಹೋಗಿದ್ದೆ. ದೇವಸ್ಥಾನಕ್ಕೆ ಅಂಟಿಕೊಂಡಿರುವ ಅಂಗಡಿಯಲ್ಲಿ ಇರುಮುಡಿ ಬ್ಯಾಗ್,ಸೈಡ್ ಬ್ಯಾಗ್, ಗಣೇಶ-ಅಯ್ಯಪ್ಪ-ಸುಬ್ರಹ್ಮಣ್ಯ ದೇವರುಗಳು ಒಟ್ಟಿಗೇ ಇರುವ ಚಿತ್ರಪುಟ ಹಾಗೂ ಮಾಲೆ ಖರೀದಿಸಿ, ನಂತರ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ೫೪ ರುದ್ರಾಕ್ಷಿಗಳುಳ್ಳ ಮಾಲೆಯನ್ನು ಹಾಕಿಕೊಂಡೆ.

ಅರ್ಚಕರು ಅಕ್ಕಿಯನ್ನು, ಎರಡು ಅಚ್ಚು ಬೆಲ್ಲವನ್ನು ನನ್ನಿಂದ ಸ್ವೀಕರಿಸಿದರು.

ನಂತರ ಮನೆಗೆ ಬಂದು ಅಯ್ಯಪ್ಪನ ಭಕ್ತಿಗೀತೆಗಳ ಕ್ಯಾಸೆಟ್ ಹುಡುಕಿದೆ. ಸಿಕ್ಕ ನಂತರ ಮ್ಯೂಸಿಕ್ ಪ್ಲೇಯರಿನಲ್ಲಿ ಹಾಕಿ ಪರೀಕ್ಷಿಸಿದೆ. ಕ್ಯಾಸೆಟ್ ಚೆನ್ನಾಗಿತ್ತು.

ಸಂಜೆ ೫.೩೦ಕ್ಕೆ ಮತ್ತೆ ತಣ್ಣೇರು ಸ್ನಾನ ಮಾಡಿ ಸಾಯಂಕಾಲದ ಸಂಧ್ಯಾವಂದನೆಯನ್ನು ಮಾಡಿದೆ. ನಂತರ ಸಂಕಲ್ಪ ಮಾಡಿಕೊಂಡು ಅಯ್ಯಪ್ಪನಿಗೆ ಧೂಪಾರತಿ ಮಾಡಿ, ಬಾಳೇಹಣ್ಣುಗಳನ್ನು ನೈವೇದ್ಯಕ್ಕೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿದೆ.
ನಂತರ ಗಣೇಶ, ಅಯ್ಯಪ್ಪ, ಸುಬ್ರಹ್ಮಣ್ಯರ ಅಷ್ಟೋತ್ತರಗಳನ್ನು ಪಠಿಸಿದೆ. ಕೊನೆಯಲ್ಲಿ ೧೦೮ ಶರಣು ಘೋಷಗಳನ್ನು ಜಪಿಸಿದೆ.

ಪೂಜೆ ಮುಗಿಯುವ ಹೊತ್ತಿಗೆ ಅಮ್ಮ ಭಜನೆಯಿಂದ ಬಂದರು. ಅಣ್ಣ(ಅಪ್ಪ) ಕೂಡ ವಾಕಿಂಗ್ ಮುಗಿಸಿ ಮನೆಗೆ ಬಂದರು. ಕಾಫಿ ಕುಡಿಯುತ್ತಾ ಅಯ್ಯಪ್ಪನ ಭಕ್ತಿಗೀತೆಗಳನ್ನು ಕೇಳಿದೆ.

ರಾತ್ರಿ ೯.೩೦ಕ್ಕೆ ಅಕ್ಕಿ ರೊಟ್ಟಿ ಸೇವಿಸಿದೆ. ರಾತ್ರಿ ಊಟ ಮಾಡುವ ಹಾಗಿಲ್ಲ.

ಇನ್ನು ಹದಿನೈದು ದಿನಗಳ ಕಾಲ ಎರಡು ಹೊತ್ತು ಸಂಧ್ಯಾವಂದನೆ ಮಾಡಬೇಕು. ಎರಡು ಹೊತ್ತು ದೇವರಿಗೆ ನೈವೇದ್ಯ ಸಲ್ಲಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ ತಿನ್ನಬೇಕು, ಮಧ್ಯಾಹ್ನ ಮಾತ್ರ ಊಟ ಮಾಡಬೇಕು.
ಹೊರಗಡೆ ಏನೂ ಸೇವಿಸಬಾರದು.

ತುಂಬಾ ನಿಷ್ಠೆಯಿಂದ ವ್ರತವನ್ನು ಆಚರಿಸಬೇಕು ಅಂತ ರಾಘು ಅವರ ತಂದೆ ಕಟ್ಟಪ್ಪಣೆ ಮಾಡಿರುವರು.

ನಾನು ಸಂಧ್ಯಾವಂದನೆಯನ್ನು ದಿನವೂ ಮಾಡೋದ್ರಿಂದ ಭಜನೆಯನ್ನು ಮನೆಯಲ್ಲೇ ಮಾಡಬಹುದಂತೆ.

ನಾನು ಫೆಬ್ರುವರಿ ೧೪ರಂದು ಶಬರಿಮಲೆಗೆ ಹೊರಟು, ಫೆಬ್ರುವರಿ ೧೮ರಂದು ಬೆಂಗಳೂರಿಗೆ ಹಿಂದಿರುಗುವೆ.

ನನ್ನ ಜೊತೆಗೆ ಇನ್ನೂ ಐದು ಜನ ಸೇರ್ಕೋತಾರೆ. ಅವರಲ್ಲಿ ಒಬ್ಬರು ಗುರುಸ್ವಾಮಿಗಳು. ಮತ್ತೊಬ್ಬರು ರಾಘು ಅವರ ತಂದೆ.

ಸ್ವಾಮಿಯೇ ಶರಣಂ ಅಯ್ಯಪ್ಪ.

-ಅನಿಲ್.

Friday, January 30, 2009

ಶುಕ್ರಚಂದ್ರಯುತಿಇಂದು ಸಂಜೆ ಆಗಸದಲ್ಲಿ ಈ ಅಮೋಘ ದೃಶ್ಯ ನೋಡುವ ಸೌಭಾಗ್ಯ ನನ್ನದಾಯಿತು. Smiling

ಶುಕ್ರ - ಚಂದ್ರಯುತಿಯ ಬಗ್ಗೆ ಸ್ನೇಹಿತರು ಹೇಳುತಲೇ ಇದ್ದರು.

ನಿನ್ನೆ ಕಛೇರಿಯಿಂದ ಬರುವಾಗ ನೋಡಿದ್ದೆ. ಆದರೆ ಕ್ಯಾಮೆರಾ ಮನೆಯಲ್ಲಿ ಇದ್ದಿದ್ದರಿಂದ ಫೋಟೊ ತೆಗೆಯುವ ಅವಕಾಶ ಸಿಗಲಿಲ್ಲ.

ಇಂದು ಮರೆಯದೇ ಕ್ಯಾಮೆರಾವನ್ನು ಕಛೇರಿಗೆ ತೆಗೆದುಕೊಂಡು ಹೋಗಿದ್ದೆ.

ಸಂಜೆ ಸುಮಾರು ೬.೩೦ಕ್ಕೆ ಶುಕ್ರ-ಚಂದ್ರಯುತಿಯ ಬಗ್ಗೆ ನೆನಪಾಯ್ತು.

ಕೂಡಲೇ ಕ್ಯಾಮೆರಾ ತೆಗೆದುಕೊಂಡು ಆಫೀಸಿನ Terraceಗೆ ಹೋಗಿ ಕೆಲವು ಚಿತ್ರಗಳನ್ನು ತೆಗೆದೆ.

ಕ್ಯಾಮೆರಾದ ಬ್ಯಾಟೆರಿ ಮುಗಿಯುವುದರಲ್ಲಿತ್ತು.

ಆದರೂ ಕೆಲವು ಚಿತ್ರಗಳನ್ನು ತೆಗೆದೆ.

ನಂತರ ಮನೆಗೆ ಬಂದು ಮತ್ತೊಮ್ಮೆ ಶುಕ್ರ-ಚಂದ್ರಯುತಿಯ ಚಿತ್ರ ತೆಗೆದೆ.

ಮನೆಗೆ ಬಂದು ತೆಗೆದ ಫೋಟೋವನ್ನು ಇಲ್ಲಿ ಅಪ್ಲೋಡ್ ಮಾಡಿರುವೆ.

ನೋಡಿ, ನಿಮ್ಮ ಅನಿಸಿಕೆ ತಿಳಿಸಿ.

Thursday, January 29, 2009

ಸರ್ವಗುಣ ಸಂಪನ್ನ ಕನ್ಯೆ.

ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

"ಖಂಡಿತ. ಅವಳು ಧರ್ಮವತಿ"

"ನಿಮ್ಮ ಮಗಳಿಗೆ ಕಲೆಯಲ್ಲಿ ಆಸಕ್ತಿಯಿದೆಯೇ?"

"ಅವಳು ಕಲಾವತಿ"

"ಅವಳು ವಿದ್ಯಾಭ್ಯಾಸ ಮಾಡಿದ್ದಾಳೆಯೇ?"

"ಹು. ಅವಳು ವಿದ್ಯಾವತಿ".

"ವೇದಗಳ ಅಧ್ಯಯನ ಮಾಡಿದ್ದಾಳೆಯೇ?"

"ಓಹ್. ಅವಳು ವೇದವತಿ".

ಆ ಯುವಕ ಸಂತೋಷಗೊಂಡು ಸರ್ವಗುಣ ಸಂಪನ್ನಳಾದ ಇವಳೇ ತನಗೆ ತಕ್ಕ ವಧು ಎಂದು ತಿಳಿದು ಆ ಹುಡುಗಿಯನ್ನು ಮದುವೆಯಾಗುತ್ತಾನೆ.

ಒಂದು ವಾರದ ನಂತರ ಆ ಯುವಕ ಮತ್ತೆ ಮಾವನ ಮನೆಗೆ ಬರುತ್ತಾನೆ. ಅವನ ಮುಖ ಬಾಡಿರುತ್ತದೆ.

ಮಾವ "ಯಾಕಪ್ಪ? ಏನಾಯ್ತು? ಏಕೆ ನಿನ್ನ ಮುಖ ಬಾಡಿದೆ? ನಿನ್ನ ಮನದಲ್ಲಿ ಏನೋ ಚಿಂತೆ ಇರೋ ಹಾಗಿದೆ?" ಎಂದು ಕೇಳುತ್ತಾನೆ.

ಅದಕ್ಕೆ ಆ ಯುವಕ "ಮಾವ, ನೀವು ನಿಮ್ಮ ಮಗಳು ಸುಂದರವತಿ, ಗುಣವತಿ, ಧರ್ಮವತಿ, ಕಲಾವತಿ, ವಿದ್ಯಾವತಿ, ವೇದವತಿ ಎಂದೆಲ್ಲಾ ಹೇಳಿದಿರಿ. ಅಲ್ವೇ?"

"ಹೌದು. ಹೇಳಿದೆ."

"ಆದರೆ, ಈಗಾಗಲೇ ಅವಳು ಗರ್ಭವತಿ ಎಂದು ಹೇಳಲು ಮರೆತಿರಲ್ಲಾ?" Sad

Wednesday, January 28, 2009

ಪ್ರೀತಿ, ಪ್ರೇಮ... ಹೀಗೊಂದು Philosophy

ಪ್ರೀತಿ, ಪ್ರೇಮ, Philosophy

ನಾವು ಪ್ರೀತಿಸಿ ಮದುವೆಯಾಗಿದ್ದೀವಿ - ಹಾಗಂತ ಹೇಳ್ತಾರೆ ಕೆಲವರು.

ನಾವು ಮದುವೆಯಾಗಿ ಪ್ರೀತಿಸ್ತಾ ಇದ್ದೀವಿ - ಹೀಗಂತಾರೆ ಹಲವರು.

ಎರಡೂ ಬಗೆಯ ಜನರಿಗೂ ಬದುಕಿನಲ್ಲಿ ಅಹಹಹಾ ಎಂಬಂಥ ಖುಷಿ ದೇವರಾಣೆಗೂ ಸಿಕ್ಕುವುದಿಲ್ಲ ಎಂಬುದು ಪರಮ ಸತ್ಯ.

ಅಂದಮೇಲೆ-ಪ್ರೀತಿಸಿ ಮದುವೆಯಾಗಬೇಕಾ? ಅಥವಾ ಮದುವೆಯಾದ ಮೇಲೆಯೇ ಪ್ರೀತಿಸಬೇಕಾ?

ಉತ್ತರಿಸುವುದು ಕಷ್ಟ.

ಮದುವೆಯ ದಿನಗಳವರೆಗೂ ಪ್ರೀತಿಸುವುದೇ ಬೇಡ ಎನ್ನುವುದಾದರೆ ಕಳ್ಳ ಪ್ರೇಮದ ಪುಳಕವನ್ನು ಕಳೆದುಕೊಳ್ಳಬೇಕಾಗುತ್ತದೆ.

ಇದರರ್ಥ ಇಷ್ಟೇ - ನಾವು, ನೀವೆಲ್ಲ ಪ್ರೇಮಿಸದೇ ಸುಖವಾಗಿರಲಾರೆವು ಮತ್ತು ಪೇಮಿಸಿದರೂ ಸುಖದಿಂದ ಬದುಕಲಾರೆವು!

ನೆನಪಿರಲಿ:

ಪ್ರೀತಿ-ಪ್ರೇಮ ಅನ್ನೋದು ಶುದ್ಧ ಜೂಜು. ಅದನ್ನು ಗೆಲ್ಲುವ ಹಠದಿಂದಲೇ ಆಡಬೇಕು. ಸೋತಷ್ಟೂ ಹಠ ಹೆಚ್ಚಾಗಬೇಕು.

ನಮ್ಮ ಬದುಕೆಂಬುದು ಪ್ರೀತಿಯ ಪರಿಧಿಯೊಳಗೆ ಇರಬೇಕು. ನಾವೆಲ್ಲ ಇದರಲ್ಲೇ ಮುಳುಗಬೇಕು.

ಈಜಿದರೆ ದಡ. ಈಜದಿದ್ದರೆ ದಡವೇ ಗತಿ. ಹೀಗಾಗಿ ಈಜಾಡುತ್ತಲೇ ಇರಬೇಕು.

ಅದೇ ಜೀವನ. ಅದೇ ಪ್ರೇಮ.

-----------------------------------------------------------------

ಮರೆತಿದ್ದೆ: philosophy ನನ್ನದಲ್ಲ. ;)

ಮಿಂಚಂಚೆಯಲ್ಲಿ ಬಂದದ್ದು. :)

*

Tuesday, January 20, 2009

ಲಾಲಿ ಹಾಡು

ನಾನು ಚಿಕ್ಕವನಿದ್ದಾಗ ಮಲಗೋಕ್ಕೆ ತುಂಬಾ ಹಠ ಮಾಡ್ತಿದ್ದೆ ಅಂತ ಆಗಾಗ ಅಮ್ಮ ಹೇಳ್ತಿರ್ತಾರೆ.

ಆಗ ಅಣ್ಣ (ಅಪ್ಪ) ಹಾಡು ಹೇಳಿ ನನ್ನನ್ನು ಮಲಗಿಸ್ತಿದ್ರಂತೆ.

ಲಾಲಿ ಹಾಡು ಅಂದ ಕೂಡಲೆ ನನಗೆ ನೆನಪಾಗುವುದು ಈ ಹಾಡು.

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಕಣ್ಣಲ್ಲಿ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
ಚಲುವಲ್ಲೆ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಗಿ ಬಂದವನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಮೇಲುಕೋಟೆಯ ಸ್ವಾಮಿ ಚೆಲುವರಾಯನ
ಬೇಲೂರು ಶ್ರೀ ಚೆನ್ನಕೇಶವನ
ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಆಲದೆಲೆಯ ಮೇಲೆ ಮಲಗಿದವನ
ಹತ್ತವತಾರದ ಪರಮಾಥ್ಮನ
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೆ ತೂಗುವ ಜಗದೀಶನ

ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ

ಈಗಲೂ ಈ ಹಾಡು ಕೇಳಿದರೆ ನಿದ್ದೆ ಬರುತ್ತೆ. (ಸುಳ್ಳಲ್ಲ).

ಅಂದಹಾಗೆ, ನಿಮ್ಮ ಮೆಚ್ಚಿನ ಲಾಲಿ ಹಾಡು ಯಾವುದು ಅಂತ ಹೇಳ್ತೀರಾ?

-ಅನಿಲ್.

Monday, January 19, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೩

ಎಲ್ಲಿದೆ?

ಈ ದೇವಾಲಯವು ಮಧ್ಯಪ್ರದೇಶದ ಕ್ಷಿಪ್ರಾ ನದಿಯ ದಂಡೆಯ ಮೇಲಿದೆ. ಇದು ಪುರಾಣಗಳಲ್ಲಿ ಅವಂತಿಕಾ ನಗರಿ ಎಂದು ವರ್ಣಿತವಾಗಿತ್ತು. ಇದನ್ನು ಭೂಮಿಯ ನಾಭಿ ಎಂದೂ ವರ್ಣಿಸಲಾಗಿದೆ. ಶ್ರೀ ಕೃಷ್ಣ-ಬಲರಾಮ-ಸುಧಾಮರು ಇಲ್ಲಿ ವಿದ್ಯಾಭ್ಯಾಸ ಮಾಡಿದರಂತೆ. ಪ್ರಸಿದ್ಧವಾದ ವಿಕ್ರಮಾದಿತ್ಯನ ಸಿಂಹಾಸನ ಇಲ್ಲಿಯೇ ಇತ್ತು ಎಂದು ಪ್ರತೀತಿ. ಉಜ್ಜಯನಿಹಲವಾರು ಬಂಗಾರದ ಕಲಶಗಳನ್ನು ಹೊಂದಿರುವ ದೇಗುಲಗಳನ್ನು ಹೊಂದಿರುವುದರಿಂದ "ಸ್ವರ್ಣ ಶೃಂಗ" ಎಂದೂ ಪ್ರಸಿದ್ಧವಾಗಿದೆ. ಬಹಳ ಹಿಂದೆ ಇಲ್ಲಿ ಅನೇಕ ವೇದಾಧ್ಯಯನ ಸಂಪನ್ನ ಶಿವ ಭಕ್ತರಿದ್ದರಂತೆ. ಅವರಲ್ಲಿ ವೇದ ಪ್ರಿಯನೆಂಬುವನು ತನ್ನ ನಾಲ್ಕು ಪುತ್ರರೊಂದಿಗೆ ಶಿವ ಕೈಂಕರ್ಯದಲ್ಲಿ ತೊಡಗಿದ್ದನಂತೆ. ಹೀಗಿರುಬಾಗ, ದೂಷಣನೆಂಬ ರಾಕ್ಷಸನು ತನ್ನ ದುಷ್ಟ ಶಕ್ತಿಯೊಂದಿಗೆ ಇವರ ಮೇಲೆರಗ್ಲು ಶಿವಪೂಜಾ ನಿರತರಾದ್ದ ತನ್ನ ಭಕ್ತರನ್ನು ಕಾಪಡಲು ಶಿವನು ಲಿಂಗಾಕಾರದಿಂದ ಮಹಾಕಾಳನಾಗಿ ಹೊರಬಂದು ರಾಕ್ಷಸ ಸಂಹಾರ ಮಾಡಿದನಂತೆ. ಕೊನೆಗೆ ಭಕ್ತರ ವಿನಂತಿ ಮೇರೆಗೆ ಅದೇ ಆಕಾರದಲ್ಲಿ ಜ್ಯೋತಿರ್ಮಯನಾಗಿ ನಿಂತನಂತೆ. ಉಜ್ಜಯನಿ ಪರಮ ಪವಿತ್ರವಾದ ಕ್ಷೇತ್ರ. ಇಲ್ಲಿ ೭ ಸಾಗರ ತೀರ್ಥಗಳು, ೨೮ ತೀರ್ಥಗಳು, ೮೪ ಸಿದ್ಧಲಿಂಗಗಳು, ೨೫-೩೦ಶಿವಲಿಂಗಗಳು, ಶ್ರೀಯಂತ್ರ ಸಹಿತ ಹರಿಸಿದ್ಧಿ ಮಾತಾಮಂದಿರ, ಬಡಾಗಣೇಶ್, ಗರ್‍ಕಾಲಿಕಾ ಪೂಜಾ ಮಂದಿರಗಳು, ಗೋಮತಿ ಕುಂಡ, ಸಂದೀಪಿನಿ ಆಶ್ರಮ ಮೊದಲಾದ ಯಾತ್ರಾ ಸ್ಥಳಗಳಿವೆ. ಇಲ್ಲಿಂದ ೮ಕಿ.ಮೀ. ದೂರದಲ್ಲಿ ಸ್ಥಿರಮಾನ ಗಣಪತಿ ದೇವಾಲಯವಿದೆ. ಉಜ್ಜಯನಿಯನ್ನು ಸಂದರ್ಶಿಸಿದವರೆಲ್ಲ ಗಣಪತಿಯನ್ನು ದರ್ಶನ ಮಾಡಲೇಬೇಕು.


ಮಹಾಕಾಳೇಶ್ವರನ ವಿಶೇಷ.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಳೇಶ್ವರ ಐದು ಮಹಡಿಗಳ ಬೃಹತ್ ಶಿಲಾ ದೇವಸ್ಥಾನ. ವಿಶೇಷವೆಂದರೆ, ಇಲ್ಲಿ ಜ್ಯೋತಿರ್ಲಿಂಗವಿರುವುದು ಭೂಗರ್ಭದಲ್ಲಿ. 

ಶಿವನಿಗೆ ಇಲ್ಲಿ ಪ್ರತಿದಿನ ಹತ್ತಿರದ ಸ್ಮಶಾನದಿಂದ ತಂದ ಬೂದಿಯಿಂದಲೇ ಲೇಪನ. ನಂತರವೇ ಪೂಜೆ, ಅಭಿಷೇಕ. ಕಾಶಿ-ಗಯಾಗಳಂತೆ ಇಲ್ಲಿ ಕೂಡ ’ಪಿತೃಶ್ರಾದ್ಧ’ ಮಾಡುತ್ತಾರೆ. 

ಇತರ ಮಂದಿರಗಳು:

ಉಜ್ಜಯನಿಯಲ್ಲಿ ಇನ್ನೂಅನೇಕ ದೊಡ್ಡ ದೊಡ್ಡ ದೇವಾಲಯಗಳಿವೆ. - ಶ್ರೀ ರಾಮ ಮಂದಿರ, ಗೋಪಾಲ ಮಂದಿರ, ಹರಿ ಸಿದ್ಧಿ ದೇವೀ ಮಂದಿರ. ಗಣೇಶ ಮಂದಿರ , ಸಂದೀಪಿನೀ ಆಶ್ರಮ, .ಹೀಗೆ ಅನೇಕ ನೋಡತಕ್ಕ ಸ್ಥಳಗಳಿವೆ. ಖಗೋಲ ವಿಜ್ಞಾನ ಕ್ಕೆ ಸಂಬಂಧ ಪಟ್ಟ ಜಂತರ್ ಮಂತರ್ ಪ್ರಯೋಗ ಮಂದಿರ ನೋಡಲೇಬೇಕಾದ ಸ್ಥಳ. ಗೋಪಾಲ ಮಂದಿರ ಬಹಳ ಸುಂದರವಾಗಿದೆ. ಕೃಷ್ಣಜನ್ಮಾಷ್ಟಮಿ ಬಹಳ ವೈಭವದಿಂದ ನಡೆಯುತ್ತದೆ.

ಹರಿ-ಹರ:

ವೈಕುಂಠ ಚತುರ್ದಶಿಯ ದಿನ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗದ ಉತ್ಸವ ಇಲ್ಲಿಗೆ ಬರುತ್ತದೆ. ಹರಿ -ಹರ ಮಿಲನದ ಉತ್ಸವ ಆದಿನ ನಡೆಯುತ್ತದೆ. ಶ್ರೀ ಮಹಾಕಾಳೇಶ್ವರನಿಗೆ ಪ್ರಾತಃ ಸಮಯದಲ್ಲಿ ನಡೆಯುವ ಭಸ್ಮಾರತಿ ಬಹಳ ವಿಶೇಷವಾದುದು. ಪ್ರತಿದಿನ ಐದು ಬಾರಿ ಈ ಶ್ರೀ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ವಿಶೇಷ ಆರತಿ ನಡೆಯುತ್ತದೆ.ಶಿವರಾತ್ರಿ ಯಲ್ಲಿ ಬಹಳ ಜನಸಂದಣಿ ಇರುವುದು.

ಕುಂಭಮೇಳ:

ಹರಿದ್ವಾರ , ಪ್ರಯಾಗ , ನಾಸಿಕದಂತೆ ಇಲ್ಲಿಯೂ ಹನ್ನೆರಡು ವರ್ಷಕ್ಕೊಮ್ಮೆ ಕುಂಭಮೇಳ ನಡೆಯುತ್ತದೆ. ಲಕ್ಷಾಂತರ ಜನ ಸೇರುತ್ತಾರೆ. ಕ್ಷಿಪ್ರಾನದಿಯಲ್ಲಿ ಸ್ನಾನ ಮಾಡಿ ತರ್ಪಣ ಕೊಡುತ್ತಾರೆ . ನದಿಯ ಸ್ನಾನಘಟ್ಟಗಳು ವಿಶಾಲವಾಗಿ ಚೆನ್ನಾಗಿವೆ. ಸಮುದ್ರ ಮಥನ ಕಾಲದಲ್ಲಿ ಹುಟ್ಟಿದ ಅಮೃತದ ಬಿಂದುಗಳು ಈ ನಾಲ್ಕು ಸ್ಥಳಗಳಲ್ಲಿ ಬಿದ್ದುದರಿಂದ ಪರ್ವಕಾಲದಲ್ಲಿ ಈ ನದಿಗಳಲ್ಲಿ ಸ್ನಾನ ಮಾಡುವುದರಿಂದ ಮುಕ್ತಿ ದೊರಕುವುದೆಂದು ಹೇಳುತ್ತಾರೆ. ದೇಶದ ನಾನಾ ಭಾಗಗಳಿಂದ ಭಕ್ತರು ಹಾಗೂ ವಿದೇಶೀಯರೂ ಸಹ ಕುಂಭ ಮೇಳದ ಸಮಯದಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

ಹೇಗೆ ಹೋಗುವುದು? ಉಜ್ಜಯನಿ, ನಾಗ್ಡ ಹಾಗೂ ಭೂಪಾಲ್ ನಡುವಿನ ರೈಲು ನಿಲ್ದಾಣ. 

ಎಲ್ಲಿಂದ ಎಷ್ಟು ದೂರ. ಭೂಪಾಲ್ ಇಂದ ೧೮೪ ಕಿ.ಮೀ. ಇಂದೋರ್ ಇಂದ ೫೫ ಕಿ.ಮೀ. ಅಹಮದಾಬಾದ್ ಇಂದ ೪೭೫ ಕಿ.ಮೀ. ದೆಹಲಿಯಿಂದ ೭೪೯ ಕಿ.ಮೀ. ಬೆಂಗಳೂರಿನಿಂದ ೧೪೮೩ ಕಿ.ಮೀ.

ವಸತಿ. ಧರ್ಮಶಾಲೆ ಮತ್ತು ಹೊಟೆಲ್ಗಳು ಸಾಕಷ್ಟಿವೆ. ಮೊದಲಿಗಿಂತಲೂ ವಸತಿ ಸೌಕರ್ಯಗಳು ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಅನುಕೂಲವಿದೆ. 


 

Wednesday, January 14, 2009

ಮಕರ ಸಂಕ್ರಾಂತಿಯ ಶುಭ ಹಾರೈಕೆಗಳು.


ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ.


ಎಲ್ಲರಿಗೂ ಮಕರ ಸಂಕ್ರಾಂತಿಯ ಸವಿ ಹಾರೈಕೆಗಳು.

Tuesday, January 13, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೨

೨. ಶ್ರೀಶೈಲದ ಮಲ್ಲಿಕಾರ್ಜುನ.

ಮಲ್ಲಿಕಾರ್ಜುನ ದೇವಾಲಯ

ಎಲ್ಲಿದೆ?
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ.
ಕೃಷ್ಣ ನದಿ ತೀರದಲ್ಲಿರುವ ಇದು ಕದಲಿ, ಬಿಲ್ವವೃಕ್ಷಗಳಿಂದ ಕೂಡಿದ ಮನೋಹರವಾದ ಪರ್ವತಶ್ರೇಣಿಯಲ್ಲಿದೆ.
ಪುರಾಣ ಕಾಲದಲ್ಲಿ ಶಿವ-ಪಾರ್ವತಿಯರು ತಮ್ಮ ಮಗನಾದ ಕುಮಾರಸ್ವಾಮಿಯನ್ನು ಅರಸುತ್ತಾ ಇಲ್ಲಿಗೆ ಬಂದರು ಎಂದು ಪ್ರತೀತಿ.
ಒಂದು ಐತಿಹ್ಯದಂತೆ ಶಿವನ ಮಕ್ಕಳು ಕೈಲಾಸ ಪರ್ವತವನ್ನು ತೊರೆದು ಶ್ರೀಶೈಲದಲ್ಲಿ ವಿಹರಿಸುತ್ತಿರಲು, ಬಹುದಿನಗಳ ನಂತರ ಮಕ್ಕಳನ್ನು ನೋಡುವಾಸೆಯಿಂದ ಕೈಲಾಸಪತಿಯು ಪತ್ನಿ ಸಮೇತ ಇಲ್ಲೇ ಬಂದು ನೆಲೆನಿಂತನು.
ಆದಿ ದಂಪತಿಗಳ ಸೇವೆಗಾಗಿ ಇಂದ್ರಾದಿಗಳು ಶ್ರೀಶೈಲಕ್ಕೆ ಬಂದರು. ಕೆಲಕಾಲದ ನಂತರ ಶಿವನು ತನ್ನ ಪರಿವಾರದೊಡನೆ ಮೂಲಸ್ಥಾನಕ್ಕೆ ಹೊರಡಲನುವಾದಾಗ ಸ್ವಾಮಿಯು ಇಲ್ಲೇ ನೆಲೆಸಬೇಕೆಂದು ಭಕ್ತರು ಕೋರಿದರು.
ಶಿವ-ಪಾರ್ವತಿಯರು ಮಲ್ಲಿಕಾರ್ಜುನ-ಭ್ರಮರಾಂಬೆಯ ರೂಪದಲ್ಲಿ ಇಲ್ಲಿ ಜ್ಯೋತಿರ್ಮಯರಾಗಿ ನಿಂತರಂತೆ. ಈಗಲೂ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಶಿವ-ಪಾರ್ವತಿಯರು ಇಲ್ಲಿಗೆ ಭೇಟಿ ನೀಡುತ್ತಾರೆಂಬುದು ಸ್ಥಳೀಯರ ನಂಬಿಕೆ.
ಪ್ರಖ್ಯಾತ ವಚನಕಾರ್ತಿ ಅಕ್ಕಮಹಾದೇವಿ ಇಲ್ಲಿಯೇ ಮಲ್ಲಿಕಾರ್ಜುನನ ದರ್ಶನ ಪಡೆದು ಅಂತರ್ಧಾನರಾದರೆಂದೂ ನಂಬಿಕೆ.
ಛತ್ರಪತಿ ಶಿವಾಜಿ ಈ ದೇವಾಲಯಕ್ಕೆ ಆರಂಭಿಕ ರೂಪ ನೀಡಿದನಂತೆ.
ವಿಜಯನಗರ ಅರಸರ ಕಾಲದಲ್ಲಿ ಈ ದೇವಸ್ಥಾನ ಸಾಕಷ್ಟು ಅಭಿವೃದ್ಧಿ ಹೊಂದಿತು.

ಶ್ರೀಶೈಲದ ಮಲ್ಲಿಕಾರ್ಜುನ ದೇವಾಲಯ.

ದೇವಸ್ಥಾನದ ಸ್ವರೂಪ.

ಮಲ್ಲಿಕಾರ್ಜುನನ ದೇವಸ್ಥಾನವು ೧೫೭೨ ಅಡಿಗಳಷ್ಟು ಎತ್ತರದ ಬೆಟ್ಟದ ಮೇಲಿದೆ.
ದೇಗುಲದ ವಿಸ್ತೀರಣ ೩೦೦೦೦೦ ಚ. ಅಡಿ. ಸಂಪೂರ್ಣ ಶಿಲಾನಿರ್ಮಿತವಾದ ಈ ದೇವಸ್ಥಾನದ ಮುಖಮಂಟಪ ಮತ್ತು ನಂದಿ ವಿಗ್ರಹಗಳು ಅತಿ ಸುಂದರವಾಗಿವೆ.
ಇಲ್ಲಿನ ದೇವಿ ಭ್ರಮರಾಂಬಾಳನ್ನು ಮಾಧವಿ ಎಂದೂ ಕರೆಯುತ್ತಾರೆ. ಇದನ್ನು ಶಕ್ತಿಸ್ಥಳವೆಂದೂ ಕರೆಯಲಾಗುತ್ತದೆ.

ಪಾತಾಳ ಗಂಗಾ (ಕೃಷ್ಣಾ ನದಿ ದಡದಲ್ಲಿರುವ ಕ್ಷೇತ್ರ) ಇಂದ ತೀರ್ಥವನ್ನು ಒಯ್ದು ೮೫೨ ಮೆಟ್ಟಿಲುಗಳನ್ನು ಹತ್ತಿ ಭಕ್ತಾದಿಗಳು ಅಭಿಷೇಕ ಮಾಡುತ್ತಾರೆ. ಹತ್ತಿರದಲ್ಲಿರುವ ಸಾಕ್ಷಿ ಗಣಪತಿ (೨೨ ಕಿ. ಮೀ.) ಪ್ರಮುಖ ಕ್ಷೇತ್ರ.

ಭೇಟಿ ನೀಡುವ ಸಮಯ.

ಶಿವರಾತ್ರಿಗೆ ಮುನ್ನ ಮಘಮಾಸ ಕಳೆದ ನಂತರ ಈ ಯಾತ್ರೆ ಕೈಗೊಳ್ಳಬೇಕು.
ಮಹಾಶಿವರಾತ್ರಿ, ಮಕರ ಸಂಕ್ರಾಂತಿ, ಚಾಂದ್ರಮಾನ ಯುಗಾದಿಗಳು ಇಲ್ಲಿ ಪ್ರಮುಖ ಉತ್ಸವದ ದಿನಗಳು.
ಇದಲ್ಲದೇ ಪ್ರತೀ ಪಕ್ಷದ ಚತುರ್ದಶಿಯ ಪ್ರದೋಷಕಾಲಕ್ಕೆ ಇಲ್ಲಿ ವಿಶೇಷ ಪೂಜೆ ಇರುತ್ತದೆ.

ಹೇಗೆ ಹೋಗುವುದು?
ಶ್ರೀಶೈಲಯಾತ್ರೆ ಅತ್ಯಂತ ಕಠಿಣವಾದದ್ದು.
ಆತ್ಮಕೂರಿನಿಂದ ದ್ರೋಣಾಚಲಂ ಮಾರ್ಗದ ೭೫ ಕಿ.ಮೀ. ಬರಿಗಾಲಿನಲ್ಲಿ ಕ್ರಮಿಸುವುದು ಶ್ರೀಶೈಲ ಯಾತ್ರೆ.
ಇದು ಶಿವ ಭಕ್ತರಿಗೆ ಪವಿತ್ರವಾದದ್ದು.

ವಸತಿ.
ಕರ್ನಾಟಕ ಭವನ, ಶಂಕರಮಠದ ಅತಿಥಿ ಗೃಹಗಳಿವೆ.
ಆಂಧ್ರ ಪ್ರದೇಶ ಸರ್ಕಾರದ ಶೈಲಾ ವಿಹಾರ ಅತಿಥಿ ಗೃಹಗಳಿವೆ.
ಇದಲ್ಲದೇ ಖಾಸಗಿ ಅತಿಥಿ ಗೃಹಗಳೂ ಇವೆ.

--------------------------------------------
ಚಿತ್ರ ಕೃಪೆ: apsrtc.gov.in ಮತ್ತು shaivam.org

Monday, January 12, 2009

ನಿಸರ್ಗ ಮಾಸಿಕ - ಜನವರೀ ಸಂಚಿಕೆ.

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.

ನಿಸರ್ಗ

೨೦೦೯ರ ಮೊದಲ ಸಂಚಿಕೆಯನ್ನು ತಪ್ಪದೇ ಓದಿರಿ.

Sunday, January 11, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೧

ಭಾರತದ ವಿವಿಧ ಭಾಗಗಳಲ್ಲಿ ಜ್ಯೋತಿರ್ಲಿಂಗಗಳು ಹರಡಿಕೊಂಡಿವೆ.
ಈ ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಹೇಗೆ ಎಂದು ತಿಳಿಯೋಣ.

ಸೌರಾಷ್ಟ್ರೇ ಸೋಮನಾಥ೦ ಚ |
ಶ್ರೀಶೈಲೇ ಮಲ್ಲಿಕಾರ್ಜುನ೦ |
ಉಜ್ಜಯನ್ಯ೦ ಮಹಾಬಲ೦ |
ಓ೦ಕಾರೇ ಮಮಲೇಶ್ವರ |
ಪರಾಲ್ಯಾ೦ ವೈದ್ಯನಾಥ೦ ಚ |
ಡಾಕಿಣ್ಯಾ೦ ಭೀಮಶಂಕರಂ |
ಸೇತುಬ೦ಧೇ ತು ರಾಮೇಶ೦ |
ನಾಗೇಶ೦ ಧಾರುಕಾವನೆ |
ವಾರಣಸ್ಯಾ೦ತು ವಿಶ್ವೇಶಂ |
ತ್ರ್ಯ೦ಬಕ೦ ಗೌತಮೀತಟೆ |
ಹಿಮಾಲಯೇ ತು ಕೇದಾರ೦ |
ಘುಷ್ಮೇಶ್ವರಂ ಚ ಶಿವಾಲಯೇ ||
ಏತಾನಿ ಜ್ಯೋತಿರ್ಲಿ೦ಗಾನಿ ಸಾಯ೦ ಪ್ರಾತಃ ಪಠೇನ್ನರಃ
ಸಪ್ತ ಜನ್ಮ ಕೃತ೦ ಪಾಪ೦ ಸ್ಮರಣೇನ ವಿನಶ್ಯತಿ ||

ಮೇಲೆ ಹೇಳಿದ ಶ್ಲೋಕವು ಸುಪ್ರಸಿದ್ಧ "ರುದ್ರಸಂಹಿತೆ"ಯಲ್ಲಿದೆ.

. ಸೌರಾಷ್ಟ್ರದ ಸೋಮನಾಥ.
ಎಲ್ಲಿದೆ?
ಗುಜರಾತಿನ ಕಾಥೇವಾಡ ಜಿಲ್ಲೆಯ ದಕ್ಷಿಣ ತುದಿಯಲ್ಲಿದೆ.
ಸಮುದ್ರ ತೀರದಲ್ಲಿರುವ ಇದನ್ನು ಪ್ರಾಚೀನ ತ್ರಿವೇಣಿ ಕ್ಷೇತ್ರ ಎಂದೂ ಕರೆಯಲಾಗುತ್ತದೆ.
ಸರಸ್ವತಿ, ಹಿರಣ್ಯ ಮತ್ತು ಕಪಿಲ ನದಿಗಳು ಇಲ್ಲಿ ಸಂಗಮವಾಗುವುವು.
ಚಂದ್ರನು ಇಲ್ಲಿ ತಪಸ್ಸು ಮಾಡಿದ್ದನಂತೆ. ಈ ಪೌರಾಣಿಕ ನಂಬಿಕೆ ಅನುಸರಿಸಿ ’ಸೋಮನಾಥ’ ಎಂಬ ಹೆಸರು ಬಂದಿದೆ.
ಅರ್ಜುನ ತನ್ನ ತೀರ್ಥಯಾತ್ರೆಯನ್ನು ಇಲ್ಲಿಂದಲೇ ಆರಂಭಿಸಿದ್ದಂತೆ.
ಈ ಕ್ಷೇತ್ರದ ಕುರಿತು ಅನೇಕ ಪೌರಾಣಿಕ ನಂಬಿಕೆಗಳಿವೆ.

ಭೇಟಿ ನೀಡುವ ಸಮಯ.
ಸೋಮನಾಥದಲ್ಲಿನ ಕಾಲಭೈರವೇಶ್ವರ ರಥೋತ್ಸವ ಶಿವರಾತ್ರಿಯಂದು ನಡೆಯುತ್ತದೆ.
ಇದಲ್ಲದೆ ಜುಲೈ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಶೇಷ ರಥೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತವೆ.
ಭೇಟಿ ನೀಡುವ ನಿರ್ದಿಷ್ಟ ದಿನ ನಿಗದಿಯಾಗಿರದಿದ್ದರೂ, ಫೆಬ್ರವರಿ-ಮಾರ್ಚ್ ತಿಂಗಳು ಉತ್ತಮ.

ಹೇಗೆ ಹೋಗುವುದು?
ಬೆಂಗಳೂರು - ಅಹಮದಾಬಾದ್: ರೈಲು ಅಥವಾ ವಿಮಾನ ಮೂಲಕ ಪ್ರಯಾಣ. ಅಲ್ಲಿಂದ ೪೦೬ಕಿ.ಮೀ. ದೂರದಲ್ಲಿರುವ ವೇರಾವಲ್ ರೈಲು ನಿಲ್ದಾಣಕ್ಕೆ ಪ್ರಯಾಣ.
ವೇರಾವಲ್ ಇಂದ ಸೋಮನಾಥ ೨೦ ಕಿ.ಮೀ. ದೂರದಲ್ಲಿದೆ. ಸಾಕಷ್ಟು ಸರ್ಕಾರಿ ಹಾಗೂ ಖಾಸಗಿ ವಾಹನಗಳ ವ್ಯವಸ್ಥೆ ಇದೆ.

ವಸತಿ.
ಸೋಮನಾಥ ದೇವಸ್ಥಾನಕ್ಕೆ ಸೇರಿದ ಅತಿಥಿ ಗೃಹಗಳಿವೆ. ದ್ವಾರಕಾ ಪೀಠದ ಶಾರದಾ ವಿಶ್ರಾಂತಿ ಗೃಹವಿದೆ. ಇದಲ್ಲದೆ, ಕೆಲವು ಖಾಸಗಿ ಹೊಟೆಲ್ಗಳು ಕೂಡ ಲಭ್ಯ.-----------------------------------------------------------------------------
ಚಿತ್ರ ಕೃಪೆ: ಶೂನ್ಯ.ನೆಟ್

Friday, January 09, 2009

ಪೂರ್ಣಚಂದಿರ

<span title=

ನಾಳೆ ಹುಣ್ಣಿಮೆ.

ಪೂರ್ಣಚಂದಿರನ ತೇಜಸ್ಸು ಇನ್ನೂ ಚೆನ್ನಾಗಿರುತ್ತೆ.

ನಾಳೆ ಪೂರ್ಣಚಂದಿರನ ಮತ್ತೊಂದು ಚಿತ್ರ ಕ್ಲಿಕ್ಕಿಸಿ ಇಲ್ಲಿ ಪೋಸ್ಟ್ ಮಾಡುವೆ.

ನಿಮ್ಮ ಪ್ರತಿಕ್ರಿಯೆ ತಿಳಿಸಿರಿ.

Monday, January 05, 2009

ನನಗೆ - ನಿನಗೆ

ರೋಗಿ: ಡಾಕ್ಟರ್‍, ಈ ಹೂವಿನ ಹಾರ ಯಾರಿಗೆ?

ಡಾಕ್ಟರ್‍: ಆಪರೇಷನ್ ಸಕ್ಸಸ್ ಆದರೆ "ನನಗೆ, ಫೇಲ್ ಆದರೆ "ನಿನಗೆ". :)

ಅರ್ಧ ಚಂದಿರ

ಇಂದು ಸಂಜೆ ಸ್ನೇಹಿತರನ್ನು ಭೇಟಿ ಮಾಡಲು ಜಯನಗರಕ್ಕೆ ಹೋಗಿದ್ದೆ. ಅಲ್ಲಿಂದ ಮನೆಗೆ ಹೊರಡುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು.

ಮನೆಗೆ ಬರುತ್ತಿದ್ದಾಗ ಆಗಸದ ಕಡೆ ಕಣ್ಣು ಹಾಯಿಸಿದೆ. ನೋಡಿದರೆ, ಅರ್ಧ ಚಂದಿರ ಆಕಾಶದಲ್ಲಿ ಕಾಣಿಸಿತು.

ಮನೆಗೆ ಬಂದಾಗ ಹನ್ನೊಂದು ಘಂಟೆ ಮೂವತ್ತು ನಿಮಿಷವಾಗಿತ್ತು. ಅಮ್ಮ ನನಗಾಗಿ ಕಾಯುತ್ತಿದ್ದರು.

ಬಂದೊಡನೆಯೇ ಕ್ಯಾಮೆರಾ ತೆಗೆದುಕೊಂದು ಆಚೆ ಹೋಗಿ ನೋಡಿದಾಗ, ಚಂದಿರ ಈ ರೀತಿ ಇದ್ದ.

Saturday, January 03, 2009

ಪಕ್ಷಿ ವೀಕ್ಷಣೆ

ಪಕ್ಷಿಗಳು ಪುಟ್ಟ ಗಾತ್ರದ್ದಾಗಿರಲಿ, ದೊಡ್ಡ ಗಾತ್ರದ್ದಾಗಿರಲಿ, ಪ್ರಕೃತಿಯ ಅದ್ಭುತ ಸೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ. ಅವು ತಮ್ಮ ವೈವಿಧ್ಯಮಯವಾದ ಇಂಚರದಿಂದ, ಚೈತನ್ಯದಾಯಕ ಹಾರಾಟದಿಂದ, ಆಕರ್ಷಕ ಬಣ್ಣದಿಂದ ನಿಸರ್ಗಕ್ಕೆ ಜೀವ ತುಂಬುವ ಪುಟ್ಟ ಜೀವಿಗಳು.

ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಹಕ್ಕಿಗಳು ಕೆಲವಾದರೆ, ಊರಾಚೆಗಿನ ತೋಪುಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿ ವಾಸಿಸುವ ಪಕ್ಷಿಗಳು ಹಲವಾರು. ಅವುಗಳ ಬಣ್ಣ, ಆಕಾರ, ದನಿ, ಸ್ವಭಾವ, ನೆಲೆ, ಆಹಾರ, ಗೂಡುಕಟ್ಟುವ ಹಾಗೂ ಮರಿಗಳನ್ನು ಸಾಕುವ ವಿಧಾನ ಸಹ ವೈವಿಧ್ಯಮಯ.

’ಪಕ್ಷಿ ವೀಕ್ಷಣೆ’ ಕುತೂಹಲಕಾರಿಯಾದ, ಹೆಚ್ಚು ದುಬಾರಿಯಲ್ಲದ, ಪರಿಸರದ ಬಗ್ಗೆ, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು, ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹವ್ಯಾಸ. ಇದನ್ನು ಒಂದು ಅಧ್ಯಯನ ಎಂದು ಹೇಳಲೂಬಹುದು. ಪಕ್ಷಿ ವೀಕ್ಷಣೆಗೆ ಬೇಕಾಗುವ ವಸ್ತುಗಳು ಸಹ ತೀರಾ ಸಾಮಾನ್ಯವಾದುವು. ಒಂದು ನೋಟ್ ಪುಸ್ತಕ, ಲೇಖನಿ, ದುರ್ಬೀನು ಹಾಗೂ ಅತ್ಯಂತ ಮುಖ್ಯವಾಗಿ ತಾಳ್ಮೆ. ಪಕ್ಷಿ ವೀಕ್ಷಣೆಯಲ್ಲಿ ಮಕ್ಕಳೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು.

ಮನೆಯಂಗಳದಿಂದಲೇ ಪಕ್ಷಿ ವೀಕ್ಷಣೆ ಪ್ರಾರಂಭಿಸಬಹುದು. ನಗರೀಕರಣದ ಪರಿಣಾಮವಾಗಿ ಪಕ್ಷಿಗಳು ಕಾಣಿಸುವುದು ಅಪರೂಪವಾಗಿರಬಹುದು. ಆದರೂ ಮರಗಳ ಗುಂಪಿನಲ್ಲಿ, ಕೆರೆಕಟ್ಟೆಗಳ ಸಮೀಪ, ಟೆಲಿಗ್ರಾಫ್ ತಂತಿಗಳ ಮೇಲೆ ಕುಳಿತ ಹಕ್ಕಿ ಸಾಲನ್ನು ನೋಡಬಹುದು. ಸಹಜವಾಗಿಯೇ ಪಕ್ಷಿಗಳಿಗೆ ಮನುಷ್ಯರ ಬಗ್ಗೆ ಅಂಜಿಕೆ ಇರುತ್ತದೆ. ಅವು ತಮ್ಮಷ್ಟಕ್ಕೆ ಇರಬಯಸುತ್ತವೆ. ಕಿರುಕುಳವನ್ನು ಸಹಿಸಲಾರವು. ಆದುದರಿಂದ, ಸಾಧ್ಯವಾದಷ್ಟು ಮರೆಯಲ್ಲಿ ನಿಂತು, ಅವುಗಳ ಏಕಾಂತತೆಗೆ ಭಂಗವಾಗದಂತೆ, ತುಸು ದೂರದಿಂದಲೇ ಪಕ್ಷಿವೀಕ್ಷಣೆ ಮಾಡುವುದು ಒಳ್ಳೆಯದು. ಆಗ ದುರ್ಬೀನು ಸಹಾಯಕ್ಕೆ ಬರುತ್ತದೆ.

ಪಕ್ಷಿಗಳು ಗೂಡು ಕಟ್ಟುವುದನ್ನು, ಆಹಾರ ಸಂಗ್ರಹಿಸುವುದನ್ನು, ಸಲ್ಲಾಪ ನಡೆಸುವುದನ್ನು, ಮೊಟ್ಟೆಗಳನ್ನು ಜೋಪಾನ ಮಾಡುವುದನ್ನು, ಕಾವು ಕೊಡುವುದನ್ನು, ಮರಿಗಳಿಗೆ ಗುಟುಕು ನೀಡುವುದನ್ನು, ಅಪಾಯದ ಸಂದರ್ಭದಲ್ಲಿ ಗಾಬರಿಯ ದನಿಯಲ್ಲಿ ಸೂಚನೆ ನೀಡುವುದು, ಪ್ರತಿಭಟಿಸುವುದು, ಅಪಾಯ ನೀಗಿದ ಮೇಲೆ ಹರ್ಷದ ದನಿ ಹೊರಡಿಸುವುದು, ನೀರಿನಲ್ಲಿ ಮುಳುಗು ಹಾಕಿ ಬಿಸಿಲಿನ ಝಳದಿಂದ ಸಾಂತ್ವನ ಪಡೆಯುವುದು, ಮುಂತಾದವನ್ನು ಮರೆಯಲ್ಲಿ ನಿಂತು ನೋಡುತ್ತ ಹೋದಂತೆ ಅವುಗಳ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ.

ಪಕ್ಷಿಗಳ ವಲಸೆ ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ವಿದ್ಯಮಾನ. ಅವು ಭೂಕಂಡದ ಬೇರೆ ಬೇರೆ ಭಾಗಗಳಿಂದ, ಭೂಗೋಳಿಕ ಎಲ್ಲೆಗಳನ್ನು ದಾಟಿ, ಹಾರಿ ಬಂದು ಒಂದು ನಿರ್ದಿಷ್ಟ ತಾಣದಲ್ಲಿ ಸಂಸಾರ ಹೂಡುತ್ತವೆ, ಆಹಾರ ಸಂಗ್ರಹಿಸುತ್ತವೆ, ಮೊಟ್ಟೆಯಿಟ್ಟು ಮರಿಮಾಡುತ್ತವೆ. ಮರಿಗಳು ಹಾಡುವಂತಾಗುವ ವೇಳೆಗೆ ಹಾರಿಹೋಗುತ್ತವೆ. ಇವೆಲ್ಲಾ ಪಕ್ಷಿವೀಕ್ಷಕರ ಅಧ್ಯಯನಕ್ಕೆ ಬಹಳ ಮುಖ್ಯವಾದ ವಿಷಯಗಳಾಗಿವೆ.

ಪಕ್ಷಿ ವೀಕ್ಷಕರು ತಮ್ಮ ಪುಸ್ತಕಗಳಲ್ಲಿ ಈ ಕೆಳಕಂಡಂತೆ ವಿವರಗಳನ್ನು ಸಂಗ್ರಹಿಸಿ ಪಕ್ಷಿಗಳನ್ನು ಕುರಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಪಕ್ಷಿ ವೀಕ್ಷಣೆ ವಿವರ.

ವೇಳೆ........................ ದಿನಾಂಕ.......................

ಸ್ಥಳ.........................ಋತು.............................

ಪಕ್ಷಿಯ ವರ್ಣನೆ...............................................

೧. ಆಕಾರ....................................................

೨. ಬಣ್ಣ........................................................

೩. ಪ್ರಮುಖ ವೈಶಿಷ್ಟ್ಯಗಳು..................................

..................................................................

..................................................................

೪. ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸ............

..................................................................

೫. ಮರಿಗಳ ಬಣ್ಣ ಮತ್ತು ಸ್ವರೂಪ.........................

..................................................................

..................................................................

ಪಕ್ಷಿಯ ನಡೆವಳಿಕೆ............................................

..................................................................

ಧ್ವನಿ............................................................

ಗೂಡಿನ ವರ್ಣನೆ..............................................

..................................................................

ಪ್ರವಾಸಿ ಪಕ್ಷಿಯೇ ಅಥವಾ ಸ್ಥಳೀಯ ಪಕ್ಷಿಯೇ?..........


----------------------------------------------------

ಮಾಹಿತಿ ಕೃಪೆ: ನವಕರ್ನಾಟಕ ಜ್ಞಾನ-ವಿಜ್ಞಾನ ಕೋಶ.