My Blog List

Sunday, July 11, 2010

'ದಶಾವತಾರ' ಪರಿಕಲ್ಪನೆಯ ಹಿಂದಿನ ಅಂತರಾರ್ಥ.

ವಿಷ್ಣುವಿನ ಅವತಾರಗಳಲ್ಲಿ ಹತ್ತು ಅವತಾರಗಳನ್ನು 'ದಶಾವತಾರ' ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಮೊದಲ ಮೂರು ಅವತಾರಗಳು ಮತ್ಸ್ಯ, ಕೂರ್ಮ, ವರಾಹ ಅವತಾರಗಳನ್ನು ಸಾಂಕೇತಿಕ ಅವತಾರ ಎಂದು ಕರೆಯುತ್ತಾರೆ. ಈ ರೂಪದಲ್ಲಿ ವಿಷ್ಣುವಿನ ಪೂಜೆಯಾಗುವುದು ಅಪರೂಪವೇ. ಪ್ರಳಯದಿಂದ ಕಾಪಾಡಿದ ಎಂದು ನಂಬಲಾದ ಮತ್ಸ್ಯ ಅವತಾರ ಚಲನೆಯನ್ನು ಸೂಚಿಸಿದರೆ, ಸಮುದ್ರ ಮಥನಕ್ಕೆ ಆಧಾರವಾದ ಕೂರ್ಮಾವತಾರ ಸ್ಥಿತಿಯನ್ನು ಸೂಚಿಸುತ್ತದೆ. ಹಾಗೆಯೇ, ಭೂಮಿಯನ್ನು ತನ್ನ ಕೋರೆಗಳಿಂದ ಎತ್ತಿದ ಎಂದು ವಿವರಿಸಲಾದ ವರಾಹವು, ಕ್ರಿಯೆಯನ್ನು ಸೂಚಿಸುವ ಅವತಾರ. ಚಲನೆ, ಸ್ಥಿತಿ ಮತ್ತು ಕ್ರಿಯೆಗಳು ಸೃಷ್ಟಿಯ ಬಹುಮುಖ್ಯ ಲಕ್ಷಣಗಳೆಂಬುದನ್ನು ಈ ಅವತಾರಗಳು ಸೂಚಿಸುತ್ತದೆ. ಇನ್ನು ನರಸಿಂಹ, ವಾಮನ, ಪರಶುರಾಮ. ಈ ಮೂರು ಅವತಾರಗಳನ್ನು ಅರ್ಧಾವತಾರಗಳು ಎಂದು ಕರೆಯುತ್ತಾರೆ. ನರಸಿಂಹ ಅವತಾರದಲ್ಲಿ ಪ್ರಹ್ಲಾದನನ್ನು, ಅವನ ತಂದೆ, ಹಿರಣ್ಯ ಕಶ್ಯಪುವೇ ಹಿಂಸಿಸುತ್ತಿರುವಾಗ ಮಹಾವಿಷ್ಣು ಅರ್ಧಸಿಂಹ ಮತ್ತು ಅರ್ಧ ಮಾನವನ ರೂಪತಾಳಿ, ಹಿರಣ್ಯ ಕಶ್ಯಪುವನ್ನು ಸಂಹರಿಸುತ್ತಾನೆ. ಸಿಂಹ ಪ್ರಾಣಿಗಳಲ್ಲೇ ಬಲಿಷ್ಠವಾದದ್ದು. ಅದಕ್ಕೆ ವೀರ ಗುಣವುಳ್ಳ ಮಾನವ ದೇಹವೂ ಸೇರಿದರೆ ಸರ್ವಶಕ್ತಿ ಜೊತೆಗೂಡಿದಂತೆಯೇ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬುದ್ಧಿಯಲ್ಲಿ ಮಾನವ ಮಿಗಿಲು ಎಂಬುದು ಸಹಜವಾದ ಎಣಿಕೆ. ಆದರೆ, ನರಸಿಂಹ ಅವತಾರದಲ್ಲಿ ತಲೆ ಪ್ರಾಣಿಯದಾಗಿದ್ದು, ದೇಹ ಮಾನವನದು. ಇದು ಅವತಾರದ ಅರ್ಧಸ್ವರೂಪಕ್ಕೆ ನಿದರ್ಶನವಾದಂತೆ ಅದು ಆವೇಶದ ಅಭಿವ್ಯಕ್ತಿ ಎಂಬುದನ್ನು ಸೂಚಿಸುತ್ತದೆ. ಇನ್ನು ವಾಮನ ಬಲಿಯನ್ನು ತ್ರಿವಿಕ್ರಮ ರೂಪತಾಳಿ ಪಾತಾಳಕ್ಕೆ ತಳ್ಳಿದ ಅವತಾರ. ಇಲ್ಲಿ ವಾಮನ ಮತ್ತು ತ್ರಿವಿಕ್ರಮ ಎರಡೂ ಒಂದೇ ಶಕ್ತಿಯ ರೂಪಗಳು ಎಂಬುದನ್ನು ಗಮನಿಸಬೇಕು. ನೋಡಲು ವಾಮನನಂತಿದ್ದರೂ, ಅವನಲ್ಲಿ ತ್ರಿವಿಕ್ರಮಶಕ್ತಿ ಅಡಗಿರಬಹುದು ಎಂಬುದನ್ನು ಈ ಅವತಾರವು ಸೂಚಿಸುತ್ತದೆ. ಪರಶುರಾಮನು ತನ್ನ ಅವತಾರದಲ್ಲಿ ಪ್ರಜಾಪೀಡಕರಾದ ಕ್ಷತ್ರಿಯರನ್ನೆಲ್ಲ ನಾಶ ಮಾಡಿದ ಚಿತ್ರ ಕಣ್ಮುಂದೆ ಬರುತ್ತದೆ. ಆಡಳಿತ ನಡೆಸುವವರು ಅಹಂಕಾರ ತೋರಿದರೆ, ಭಗವಂತನು ಅವರನ್ನು ಶಿಕ್ಷಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಅಷ್ಟೇ‌ ಅಲ್ಲ, ಮುಂದಿನ ಅವತಾರದಲ್ಲಿ ವಿಷ್ಣುವು ಕ್ಷತ್ರಿಯನಾಗಿಯೇ ಜನಿಸುತ್ತಾನೆ. ಇದು ಈ ಪ್ರಕ್ರಿಯೆಯಲ್ಲಿರುವ ಸಂಕೀರ್ಣತೆಗೆ ನಿದರ್ಶನವಾಗಿದೆ. ಈ ಮೂರು ಅವತಾರಗಳಲ್ಲಿ ಸಂದೇಶವಿದೆ. ಆದರೆ ಭಗವಂತನ ಸ್ವರೂಪ ಇಲ್ಲೆಲ್ಲ ಸೀಮಿತ ಅವಧಿಯಲ್ಲಿ ಬಂದು ಹೋಗುತ್ತದೆ. ಹಾಗಾಗಿಯೇ ಇವುಗಳನ್ನು ಅರ್ಧಾವತಾರಗಳು ಎಂದು ಹೇಳಲಾಗುವುದು. ಇವನ್ನೆಲ್ಲಾ ಆವೇಶಾವತಾರ ಅಥವಾ ವಿಷ್ಣುವು ತಾತ್ಕಾಲಿಕವಾಗಿ ಧರಿಸಿದ್ದ ಅವತಾರ ಎಂದು ವಿಶ್ಲೇಷಿಸುವುದೂ ಇದೆ.

ರಾಮ, ಕೃಷ್ಣರನ್ನು, ವಿಷ್ಣುವಿನ ಪೂರ್ಣಾವತಾರಗಳು ಎಂದು ಹೇಳಲಾಗುತ್ತದೆ. ವಿಷ್ಣುವು ಹೆಚ್ಚಾಗಿ ಪೂಜಿತನಾಗುವುದು ಈ ರೂಪಗಳಲ್ಲೇ. ಶ್ರೀರಾಮನ ಜೀವನ ಚಿತ್ರಣವೇ ಆದರ್ಶದ ಪ್ರತಿರೂಪವಾಗಿದೆ. ಜೀವನದ ವಿವಿಧ ಸವಾಲುಗಳನ್ನು, ಮಾನವನು ಹೇಗೆ ಎದುರಿಸಬೇಕು ಎಂಬುದನ್ನು ಸ್ವತಃ ಭಗವಂತನೇ ಅಭಿನಯಿಸಿ ತೋರಿಸಿದ ಅವತಾರಗಳೇ ಇವು. ಶ್ರೀರಾಮನ ಅವತಾರದಲ್ಲಿ ಬಹಳ ಮುಖ್ಯವಾಗಿ ಕಾಣುವುದು ಕೌಟುಂಬಿಕ ಚಿತ್ರಣ. ಶ್ರೀರಾಮನೊಬ್ಬನೇ ಎಲ್ಲಿಯೂ ಪೂಜಿತನಾಗುವುದಿಲ್ಲ. ಸೀತೆ, ಲಕ್ಷ್ಮಣ, ಹನುಮಂತ, ರಾಮನ ಜೊತೆಯಲ್ಲಿ ಇರುತ್ತಾರೆ. ಕೆಲವೊಮ್ಮೆ ಭರತ ಮತ್ತು ಶತ್ರುಘ್ನ ಕೂಡ ಜೊತೆಗಿರುತ್ತಾರೆ. ಇಂತಹ ತುಂಬಿದ ಕುಟುಂಬವೇ‌ ರಾಮಾವತಾರದ ಸಂದೇಶ. ರಾಮಾಯಣದಲ್ಲಿ ಕುಟುಂಬ ಎಂಬುದು ವಿಶಾಲವಾದ ನೆಲೆಯಲ್ಲಿ ಚರ್ಚಿತವಾಗಿದೆ. ಅದು ಒಂದು ಸಂಸಾರಕ್ಕೆ ಸೀಮಿತವಾದ ಕಲ್ಪನೆಯಲ್ಲ. ಇಡೀ ಮನುಕುಲವೇ ಒಂದು ಎಂಬ ಉನ್ನತ ನೆಲೆಯದು. ಹೀಗಾಗಿ ಅಲ್ಲಿ ಹನುಮಂತ, ಸುಗ್ರೀವ, ಜಾಂಬುವಂತರಂತಹ ವೀರರಿಗೆ ಮಾತ್ರವಲ್ಲ, ಅಳಿಲಿಗೂ ಒಂದು ಮಹತ್ತರ ಸ್ಥಾನವಿದೆ. ಬೇಜವಾಬ್ದಾರಿಯ ಅಗಸನ ಮಾತಿಗೂ ಇಲ್ಲಿ ಒಂದು ಬೆಲೆ ಇದೆ. ಈ ಅರ್ಥದಲ್ಲಿ ಪರಿಪೂರ್ಣತೆ ರಾಮಾವತಾರಕ್ಕೆ ಇದೆ. ಅಷ್ಟೇ‌ ಅಲ್ಲ, ಆಕಾರದಲ್ಲಿಯೂ ಶ್ರೀರಾಮನು ಪರಿಪೂರ್ಣ ಪುರುಷಾಕೃತಿ ಎಂಬುದು ಇಲ್ಲಿ ಗಮನಾರ್ಹ. ಅದಕ್ಕಾಗಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯುತ್ತಾರೆ. ನಮ್ಮ ಜೀವನದಲ್ಲಿ ನಡೆ-ನುಡಿಗಳು ಒಂದೇ ರೀತಿಯಿದ್ದರೆ, ಮಾದರಿಯಾಗಿ ಇತರರಿಗೆ ಸಂದೇಶವಾಗಬಲ್ಲದೇ ವಿನಾ ಕೇವಲ ಆಚರಣೆ ಇಲ್ಲದ ಉಪದೇಶದಿಂದಲ್ಲ ಎಂಬ ಸಂದೇಶ ಶ್ರೀರಾಮನ ಅವತಾರದಲ್ಲಿದೆ.

ಶ್ರೀಕೃಷ್ಣನು ಸಮುದಾಯದ ದೇವತೆ. ಈ ಅವತಾರದ ವ್ಯಾಪ್ತಿಯೂ ಬಹಳ ದೊಡ್ಡದು. ಇವನನ್ನು ಅವತಾರವೆನ್ನದೆ ವಿಷ್ಣುವಿನ ಪರಿಪೂರ್ಣ ಅಂಶವೆಂದೇ ಕರೆಯುವುದೂ ಇದೆ. ಶ್ರೀಕೃಷ್ಣನ ಅವತಾರದ ವೈಶಿಷ್ಟ್ಯವೆಂದರೆ, ಈತ, ತಾನೇ ಘಟನಾವಳಿಯ ಕೇಂದ್ರವಾಗಿ, ಸಾಧಿಸಿದ್ದಕ್ಕಿಂತಲೂ ಹೆಚ್ಚಾಗಿ, ಯಾರಿಂದ ಯಾವ ಕೆಲಸವನ್ನು ತೆಗೆದುಕೊಳ್ಳಬೇಕು ಎಂಬ ಕುಶಲಿಯಾಗಿ ಕಾಣಿಸುತ್ತಾನೆ. ರಾಜನೀತಿ ತಜ್ಞನನ್ನಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಇಡೀ ಮಹಾಭಾರತವೇ‌ ಇದೆ. ಕೃಷ್ಣನ ಬಾಲಲೀಲೆಗಳಲ್ಲಿಯೇ‌ ಅಸುರ ಸಂಹಾರದ ಕಥೆಗಳು ಹಾಸು ಹೊಕ್ಕಾಗಿ ಬಂದಿವೆ. ಸೃಷ್ಟಿ ವ್ಯಾಪಾರವನ್ನು ಮುಗಿಸಿ, ಆಲದೆಲೆಯ ಮೇಲೆ ಮಲಗಿ, ನಿಶ್ಚಿಂತೆಯಿಂದ ನೀರಿನ ಮೇಲೆ ತೇಲುತ್ತಾ, ತಾನು ಆಡುತ್ತಿರುವ ಜೀವನ ನಾಟಕವನ್ನು ನೆನೆಸಿಕೊಂಡು ಆನಂದ ಪಡುವ ಬಾಲಕೃಷ್ಣನ ಚಿತ್ರ ಚಿರಪರಿಚಿತ. ಇದು ಶ್ರೀಕೃಷ್ಣಾವತಾರದ ಸಂದೇಶವೂ ಹೌದು. ಸಂಸಾರದೊಳಗಿದ್ದು ಇಲ್ಲದಂತೆ, ಸಕಲವೂ ತಾನಾಗಿಯೂ, ಸಕಲವನ್ನು ಅನುಭವಿಸುತ್ತಾ ಸ್ಥಿತಪ್ರಜ್ಞನಾಗುವ ಜ್ಞಾನಿಯ ಚಿತ್ರಣ ಇಲ್ಲಿದೆ. ಭಾರತೀಯ ಚಿಂತನಾ ಪರಂಪರೆಯ ಸಾರವೇ ಆಗಿರುವ ಭಗವದ್ಗೀತೆಯ ಬೋಧಕನೇ ಶ್ರೀಕೃಷ್ಣ. ಬದುಕಿನ ಸಾರವನ್ನೇ ಹೇಳುವ ಈ ಗ್ರಂಥವು, ಕೃಷ್ಣಾವತಾರದ ಸಾರರೂಪವೂ‌ ಆಗಿದೆ. ಉಳಿದಂತೆ ಚಾರಿತ್ರಿಕವಾದ ಬುದ್ಧನನ್ನ್ನು ಒಂಭತ್ತನೆಯ ಅವತಾರವೆಂದೂ ಗುರುತಿಸಲಾಗುವುದು. ಕ್ರಿಯಾತ್ಮಕವಾದ ಎಲ್ಲಾ ಅವತಾರಗಳ ಜಂಜಾಟವನ್ನು ಮುಗಿಸಿ ಶಾಂತ ಮನಃಸ್ಥಿತಿ ಪಡೆಯುವ ಚಿತ್ರಣವನ್ನು ಬೌದ್ಧಾವತಾರದಲ್ಲಿ ಕಾಣಬಹುದು. ಬಲರಾಮನನ್ನು ಒಂಭತ್ತನೆಯ ಅವತಾರ ಎಂದು ಕರೆಯುವ ವಾಡಿಕೆಯೂ ಅಲ್ಲಲ್ಲಿ ಇದೆ. ಇದು ಕೃಷಿನಾಯಕನಿಗೆ ಗೌರವ ಸೂಚಿಸುವ ಪ್ರಯತ್ನ ಎಂದು ಹೇಳಬಹುದು. ಪರಮಾತ್ಮನ ಸೃಷ್ಟಿ ನಿರಂತರ ಮತ್ತು ನವನವೀನ ಎಂದು ಸೂಚಿಸುವ ಸಲುವಾಗಿಯೇ ಇನ್ನೂ ಆಗಬೇಕಾಗಿರುವ ಕಲ್ಕಿ ಎಂಬ ಹತ್ತನೆಯ ಅವತಾರವನ್ನು ಸೂಚಿಸಲಾಗಿದೆ.

ದಶಾವತಾರ ಪರಿಕಲ್ಪನೆಯಲ್ಲಿ ಜೀವವಿಕಾಸದ ಚಿತ್ರಣವೂ ಇದೆ. ಮೊದಲು ಕಾಣಿಸಿಕೊಂಡಿದ್ದು ಜಲಚರ ಜೀವಿಗಳು ಎಂಬುದನ್ನು ಮತ್ಸ್ಯಾವತಾರ ಸೂಚಿಸಿದರೆ, ಜಲ ಮತ್ತು ಭೂಮಿಗಳೆರಡರಲ್ಲಿಯೂ ಓಡಾಡಬಲ್ಲ ಉಭಯವಾಸಿ ಜೀವಿಗಳು ಸೃಷ್ಟಿಯಾದವೆಂಬುದನ್ನು ಕೂರ್ಮಾವತಾರವು ಸೂಚಿಸುತ್ತದೆ. ನಂತರ ಬಂದ ಸಸ್ತನಿಗಳನ್ನು ವರಾಹ ಅವತಾರ ಸೂಚಿಸಿದರೆ, ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ನರಸಿಂಹ ಅವತಾರ ಸೂಚಿಸುತ್ತದೆ. ಆರಂಭದಲ್ಲಿ ಕಾಣಿಸಿಕೊಂಡ ಕುಬ್ಜ ಮಾನವರನ್ನು ವಾಮನ ಅವತಾರ ಸೂಚಿಸಿದರೆ, ವಿಕಾಸಗೊಂದ ಆದರ್ಶವಾದಿ ಮಾನವನನ್ನು ರಾಮಾವತಾರ ಸೂಚಿಸುತ್ತದೆ. ರಾಜನೀತಿ ತಜ್ಞನ ಪಾತ್ರವನ್ನು ಕೃಷ್ಣನೂ, ಆಧ್ಯಾತ್ಮಿಕ ವಿಕಸನವನ್ನು ಬುದ್ಧನೂ ಸೂಚಿಸುತ್ತಾನೆ. ಕಲ್ಕಿಯು ಆಧುನಿಕ ಮಾನವನ ಸ್ವರೂಪ. ಹೀಗೆ ದಶಾವತಾರ ಕಲ್ಪನೆಯಲ್ಲಿ ಮಾನವ ವಿಕಾಸ ಚಕ್ರವಿರುವುದನ್ನು ಗಮನಿಸಬಹುದು.

Friday, July 02, 2010

ಸಾಕಾರ ಸ್ವರೂಪ ಮಹಾವಿಷ್ಣು.

ಮಹಾವಿಷ್ಣುವು ಸಾಕಾರ ಸ್ವರೂಪನು, ಹಾಗಾಗಿ ಹಲವು ಅವತಾರಗಳ ಮೂಲಕ ಗುರುತಿಸಲ್ಪಟ್ಟಿದ್ದಾನೆ. ಹತ್ತು ಅವತಾರಗಳನ್ನೂ ಪ್ರಮುಖ ಎಂದು ನಿರ್ದೇಶಿಸುವ ವಾಡಿಕೆ ಇದ್ದರೂ ವಿಷ್ಣುವಿನ ಅವತಾರಗಳು ವಾಸ್ತವವಾಗಿ ಅಸಂಖ್ಯ. 'ವಿಷ್ಣು' ಎಂಬ ಶಬ್ದವೇ 'ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು' ಎಂಬ ಅರ್ಥವನ್ನು ಸೂಚಿಸುತ್ತದೆ. ವಿಷ್ಣುವಿನ ವಾಮನ ಅವತಾರದಲ್ಲಿ ತ್ರಿವಿಕ್ರಮನಾಗುವ ಚಿತ್ರಣ ಇದೆ. ಹಾಗೇ ಕೃಷ್ಣಾವತಾರದಲ್ಲಿ ಭಗವದ್ಗೀತೆ ಬೋಧನೆ ಮಾಡಿದಾಗ 'ವಿಶ್ವರೂಪದರ್ಶನ' ಮಾಡಿದ ವಿವರಗಳಿವೆ. ವಿಷ್ಣುವಿನ ಸ್ವರೂಪ ಸಾಕಾರವಾಗುವುದರ ಜೊತೆಗೆ ಅದು 'ವಿರಾಟ್' ಆಗಿರುವುದು ಎಂಬುದನ್ನು ಇಲ್ಲಿ ಸೂಚಿಸುತ್ತದೆ. ವಿಷ್ಣುವಿನ ಕುರಿತ ಜನಪ್ರಿಯವಾದ ಪರಿಕಲ್ಪನೆ ಎಂದರೆ ಕ್ಷೀರಸಾಗರದ ಮೇಲೆ ಶೇಷಶಾಯಿಯಾಗಿ ವಿಶ್ರಮಿಸುತ್ತಿರುವುದು. ಒಂದೆಡೆ, ಲಕ್ಷ್ಮಿಯು ಅವನ ಕಾಲನ್ನೊತ್ತುತ್ತಿದರೆ, ಇನ್ನೊಂದೆಡೆ, ನಾಭಿಯಿಂದ ಬಂದ ಕಮಲದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯದಲ್ಲಿ ನಿರತನಾಗಿದ್ದಾನೆ. ಇದು ಇಡೀ ಬ್ರಹ್ಮಾಂಡದಲ್ಲಿ ಇರುವ ಚೇತನ ಸ್ವರೂಪವನ್ನು ಚಿತ್ರಿಸುತ್ತದೆ. ಕ್ಷೀರಸಾಗರವು ಪ್ರಕೃತಿಯ ಪರಿಶುದ್ಧ ರೂಪವನ್ನು ಸೂಚಿಸಿದರೆ, ಮುಗಿಲು-ಕಡಲುಗಳೆರಡರ ಕಲ್ಪನೆ ಬೆರೆತಂತಿರುವ ಇದನ್ನು ವಿಜ್ಞಾನದ ಆಕಾಶಗಂಗೆ (ಮಿಲ್ಕೀವೇ) ಪರಿಕಲ್ಪನೆಗೆ ಹೋಲಿಸಬಹುದು. ವಿಷ್ಣುವು ಮಲಗಿದ್ದಾನೆ ಎನ್ನಲಾದ ಆದಿಶೇಷ ಅಥವಾ ಅನಂತ ಎಂಬ ಸರ್ಪಕ್ಕೆ ಸಾವಿರ ಹೆಡೆಗಳಿದ್ದು ಅದು ಅನೇಕ ಲೋಕವನ್ನು ಹೊತ್ತಿದೆ ಎನ್ನಲಾಗುತ್ತದೆ. 'ಅನಂತ' ಎಂಬ ಪದಕ್ಕೆ ಎಣಿಕೆಗೆ ಸಿಕ್ಕದ್ದು ಎಂಬ ಅರ್ಥವಿದೆ. ಹೀಗೆ ಎಣಿಸುವವನು ಮಾನವ ಎಂಬುದನ್ನು ಗಮನಿಸಬೇಕಾಗುತ್ತದೆ. ಅಂದರೆ, ಪ್ರಕೃತಿಯು ಮಾನವನಿಗಿಂತಲೂ ಬಹಳ ದೊಡ್ಡದು. ಅದನ್ನು ಎಣಿಸುವ ಪ್ರಯತ್ನವೇ ವ್ಯರ್ಥ ಎಂಬುದನ್ನು 'ಅನಂತ' ಎಂಬ ಪದ ಸೂಚಿಸುತ್ತದೆ. ಹಾಗೆಯೇ, 'ಶೇಷ' ಎಂಬ ಪದವೂ ಅರ್ಥಗರ್ಭಿತವಾದದ್ದು. ಇದು ಉಳಿದದ್ದು ಎಂಬುದನ್ನು ಸೂಚಿಸುತ್ತದೆ. ಸೃಷ್ಟಿಯು ಯಾವಾಗಲೂ ಶೂನ್ಯದಿಂದ ಉಂಟಗುವುದಿಲ್ಲ. ಹಿಂದಿನ ಸೃಷ್ಟಿಯಲ್ಲಿ ಉಳಿದು ಹೋದದ್ದು ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಇಡೀ ಜಗತ್ತನ್ನು ಮುನ್ನಡೆಸುತ್ತಿರುವ 'ಸೃಷ್ಟಿಚಕ್ರ'. ಆದಿಶೇಷನ ಪರಿಕಲ್ಪನೆ ಇದನ್ನೇ ಸೂಚಿಸುತ್ತದೆ ಎನ್ನಬಹುದು. ಇದರ ಜೊತೆಗೆ ಸರ್ಪವು ಕಾಮಕ್ಕೆ ಸಂಕೇತ ಎಂಬ ಅರ್ಥ ಕೂಡ ಈ ವಿಶ್ಲೇಷಣೆಗೆ ಇಂಬು ನೀಡುತ್ತದೆ.

ವಿಷ್ಣುವನ್ನು ನೀಲಮೇಘಶ್ಯಾಮನೆಂದು ವರ್ಣಿಸುತ್ತಾರೆ. ಇದು ಮಳೆ ನೀಡಲು ಸಿದ್ಧವಾಗಿರುವ ಕಡುನೀಲಿ ಮೋಡದ ಬಣ್ಣ. ಇದರಲ್ಲಿ ಸೃಷ್ಟಿಯು ಪಕ್ವವಾಗಿರುವುದರ ಸಾಂಕೇತಿಕ ಅರ್ಥವಿದೆ. ವಿಷ್ಣುವಿನ ಕಲ್ಪನೆಯಲ್ಲಿ ಸಾಧನೆ ಮತ್ತು ಸಿದ್ಧಿ ಇವೆರಡರ ಸಂಯೋಗದ ಅರ್ಥಗಳಿರುವುದನ್ನು ನಾವು ಗಮನಿಸಬಹುದು. ವಿಷ್ಣುವಿನ ಕಲ್ಪನೆಯಲ್ಲಿರುವ ಇನ್ನು ಕೆಲವು ಅಂಶಗಳತ್ತ ಗಮನ ಹರಿಸಿದರೆ, ವಿಷ್ಣುವು ಸಾಮಾನ್ಯವಾಗಿ ಚಿತ್ರಿತವಾಗುವುದು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಹಿಡಿದಿರುವ ಸ್ಥಿತಿಯಲ್ಲಿ. ಈ ನಾಲ್ಕು ಕೈಗಳು ನಾಲ್ಕು ದಿಕ್ಕುಗಳನ್ನು ಸೂಚಿಸುತ್ತಾ ವಿಷ್ಣುವು ಸರ್ವವ್ಯಾಪಿ ಎಂಬುದನ್ನು ತೋರಿಸುತ್ತದೆ. ಶಂಖವು ಸಮಸ್ತ ಉದಯದ ಸಂಕೇತ. ಚಕ್ರವು ಸಮಸ್ತ ಚಿತ್ತವೃತ್ತಿಯ, ಗದೆಯು ಸಮಸ್ತ ಬುದ್ಧಿಗಳ ದ್ಯೋತಕ. ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಇವೆಲ್ಲವೂ, ವಿಷ್ಣುವು ಸೃಷ್ಟಿಕರ್ತನೂ ಮತ್ತು ಸ್ಥಿತಿಕಾರನೂ ಆಗಿದ್ದಾನೆ ಎಂಬುದಕ್ಕೆ ರೂಪಕ. ಇನ್ನು ವಿಷ್ಣುವಿನ ಎದೆಯ ಮೇಲೆ ಶ್ರೀವತ್ಸ ಲಾಂಛನವಿದೆ. ಅದನ್ನು ಕೌಸ್ತುಭಮಣಿ ಮತ್ತು ವೈಜಯಂತಿ ಹಾರಗಳು ಮುಚ್ಚಿರುತ್ತವೆ. ಶ್ರೀವತ್ಸ ಲಾಂಛನವು ಎಲ್ಲಾ ಭೋಗವಸ್ತುಗಳ ಸಂಕೇತವಾಗಿದೆ. ಇದರ ಮೇಲಿನ ಕೌಸ್ತುಭಮಣಿಯು, ಭೋಗಿಯ ಪ್ರತಿನಿಧಿ. ಹೀಗೆ ಭೋಗ-ಭೋಗಿಗಳಿಂದ ಕೂಡಿದ ಪ್ರಪಂಚವು ಸ್ಥಿತಿಕಾರಕನಾದ ವಿಷ್ಣುವಿಗೆ ಒಂದು ಮಾಲೆಯೇ. ಜೊತೆಗಿರುವ ವೈಜಯಂತಿ ಮಾಲೆಯು ಪಂಚಭೂತಗಳ ಸಂಕೇತ. ಹೀಗೆ ವಿಷ್ಣು ಸ್ವರೂಪದಲ್ಲಿ ಇಡೀ ಬ್ರಹ್ಮಾಂಡದ ಸೂಕ್ಷ್ಮ ಚಿತ್ರಣವೇ ಅಡಗಿರುವುದನ್ನು ನೋಡಬಹುದು.

Thursday, June 24, 2010

ಶಿವಲಿಂಗದ ಮಹತ್ವ.

ಶಿವಲಿಂಗದ ಮಹತ್ವ.
ಶಿವನ ಸ್ವರೂಪವು ಅತ್ಯಂತ ಗಹನವಾದದ್ದು. ವಿಸ್ತರಿಸಿ ಹೇಳುವುದಾದರೆ, ಅವನು ರೂಪಗಳಿಗೆ ಅತೀತನು. ಅಮೂರ್ತ ತತ್ತ್ವವನ್ನು ಆರಾಧಿಸುವುದು ಅಸಾಧ್ಯವಾದ್ದರಿಂದ ಶಿವನ ವಿಗ್ರಹವು ಎಂದೂ ಮೂಲಮೂರ್ತಿಯಾಗಿ ಪ್ರತಿಷ್ಠಾಪಿಸಲ್ಪಡುವುದಿಲ್ಲ ಮತ್ತು ಪೂಜಿಸಲ್ಪಡುವುದಿಲ್ಲ. ಶಿವಲಿಂಗದ ಸಂಕೇತದಲ್ಲೇ ಶಿವನಿಗೆ ಪೂಜೆ. ಲಿಂಗ ಎಂದರೆ ಸಂಕೇತ ಅಥವಾ ಗುರುತು. ಶಿವನು ಕಾಲಾತೀತನಾದ್ದರಿಂದ, ಅಂತಹ ಅವ್ಯಕ್ತರೂಪದ ವಿಶಾಲತೆಯನ್ನು ಶಿವಲಿಂಗವು ಸಂಕೇತಿಸುತ್ತದೆ. ವ್ಯಕ್ತರೂಪವು ಶಿವ ಮತ್ತು ಅವ್ಯಕ್ತರೂಪವು ಲಿಂಗ ಎಂಬುದೂ ಉಲ್ಲೇಖಿತವಾಗಿದೆ. ಶಿವಲಿಂಗಗಳಲ್ಲಿ 'ಚಲ' ಮತ್ತು 'ಅಚಲ' ಎಂಬ ಎರಡು ಬಗೆಗಳಿವೆ.

ಅಚಲ ಲಿಂಗಗಳು.
ಅಚಲ ಲಿಂಗಗಳು ದೇವಸ್ಥಾನಗಳಲ್ಲಿ ಸ್ಥಾಪಿತವಾಗುತ್ತವೆ. ಇವು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತದೆ. ಅತ್ಯಂತ ಕೆಳಗಿನ ಭಾಗವು ಚೌಕಾಕಾರವಾಗಿರುತ್ತದೆ. ಇದು 'ಬ್ರಹ್ಮ ಭಾಗ'. ಇದು ಸಹಜವಾಗಿ ಸೃಷ್ಟಿಯ ಸಂಕೇತ. ಮಧ್ಯ ಭಾಗವು ಅಷ್ಟಕೋನಾಕಾರದಲ್ಲಿದ್ದು 'ವಿಷ್ಣು ಭಾಗ' ಎಂದು ಕರೆಯಲ್ಪಡುತ್ತದೆ. ಇದು ಸ್ಥಿತಿಗೆ ಸಂಕೇತ. ದುಂಡನೆಯ ಕುಂಭದೋಪಾದಿಯ 'ರುದ್ರ ಭಾಗ'ವು ಪೀಠದಿಂದ ಹೊರಬರುವಂತಿದ್ದು ಇದು ಅವ್ಯಕ್ತದಿಂದ ಮೂಡಿದ ವ್ಯಕ್ತ ರೂಪದ ಸಂಕೇತ. ಇದನ್ನೇ ಶಿವ ಸ್ವರೂಪವಾಗಿ ಪೂಜಿಸಲಾಗುತ್ತದೆ. ಈ ಪೂಜಾಭಾಗದ ಮೇಲೆ ತ್ರಿಗುಣ ಸಂಕೇತವಾದ ಮೂರು ಗೆರೆಗಳಿರುತ್ತದೆ. ಇದಕ್ಕೆ 'ಬ್ರಹ್ಮಸೂತ್ರ' ಎಂದು ಹೆಸರು. ಇದರಿಂದ ಲಿಂಗವು ಪೂಜೆಗೆ ಅರ್‌ಹವಾಗುತ್ತದೆ. ಅಷ್ಟೇ ಅಲ್ಲ, ಶಿವಲಿಂಗದ ಎದುರು ಬಸವನ ಮೂರ್ತಿ ಇರಲೇಬೇಕು ಎಂಬ ಪ್ರತೀತಿ ಇದೆ. ಇದನ್ನು ಅವ್ಯಕ್ತದ ಅಗಾಧತೆಯನ್ನು ವ್ಯಕ್ತದ ಮೂಲಕ ಸರಿದೂಗಿಸುವ ಯತ್ನವನ್ನಾಗಿ ನೋಡಬಹುದು. ಗಮನಿಸ ಬೇಕಾದ ಅಂಶವೆಂದರೆ, ಶಿವನು ನಂದಿವಾಹನನೂ ಹೌದು. ಈ ನಂದಿಯ ಭುಜದಲ್ಲೂ ಶಿವಲಿಂಗ ಸ್ವರೂಪದ ಡುಬ್ಬ ಇರುವುದನ್ನು ನೋಡಬಹುದು.

ಚಲ ಲಿಂಗಗಳು.
ಚಲ ಲಿಂಗಗಳೆಂದರೆ ಮೈಮೇಲೆ ಧರಿಸುವ ಲಿಂಗಗಳು, ಕೊರಳಲ್ಲಿ, ತಲೆಯ ಮೇಲೆ, ಭುಜದಲ್ಲಿ ಲಿಂಗಗಳನ್ನು, ಬಟ್ಟೆಯಲ್ಲಿ ಸುತ್ತಿ ಅಥವಾ ಸಂಪುಟಗಳಲ್ಲಿಟ್ಟು ಮೈಮೇಲೆ ಇರಿಸಿಕೊಳ್ಳುವ ಸಂಪ್ರದಾಯ ಶೈವ ಪರಂಪರೆಯಲ್ಲಿದೆ. ಇದನ್ನು 'ಶಿವಯೋಗ' ಎಂದೂ ಕರೆಯಲಾಗುತ್ತದೆ. ಶಿವನು ತಾನೇ ಲಿಂಗವನ್ನು ಸದಾ ತನ್ನ ಕೊರಳಲ್ಲಿ ಧರಿಸಿರುತ್ತಾನೆಂದೂ, ಅದಕ್ಕೆ 'ಆತ್ಮಲಿಂಗ'ವೆಂಬ ಹೆಸರಿದೆ ಎಂದು ಪ್ರತೀತಿ ಇದೆ. ಹೀಗೆ ಶಿವಲಿಂಗ ಧರಿಸುವುದರ ಹಿಂದೆ ಅಮೂರ್ತವನ್ನು ಹಿಡಿಯುವ ಮಹತ್ವಾಕಾಂಕ್ಷೆ ಮತ್ತು ಅದಕ್ಕೆ ಬೇಕಾಗುವ ಏಕಾಗ್ರತೆ ಎರಡರ ತಾತ್ತ್ವಿಕತೆಯೂ ಇದೆ. ಶಿವನು ನಿರಾಕಾರನು, ಅವನು ನಮ್ಮ ಅಭಿರುಚಿ ಮತ್ತು ಆಕಾರಗಳಿಗೆ ತಕ್ಕಂತೆ ಪರಿಭಾವಿಸಬೇಕು. ಈ ಉಪಾಸನೆಗೆ ಲಿಂಗಧಾರಣೆಯು ಸಂಕೇತ ಎಂದು ಹೇಳಬಹುದು.

Wednesday, April 07, 2010

ಯೋಗಮೂರ್ತಿ ಪರಶಿವ.

ಯೋಗಮೂರ್ತಿ ಪರಶಿವ. 



ಪರಶಿವನು ಯೋಗ ಮತ್ತು ಯೋಗಿಗಳ ಒಡೆಯನು. ಗಾಢ ಧ್ಯಾನದಲ್ಲಿರುವ, ಅಂತರ್ಮುಖಿಯಾಗಿ ಆನಂದದಿಂದಿರುವ ಶಿವನ ಚಿತ್ರಣವು ಬಹಳ ಪ್ರಖ್ಯಾತವಾದದ್ದು. ಶಿವನ ಜಟೆಯಿಂದ ಹರಿದು ಬರುತ್ತಿರುವ ಗಂಗೆಯ ಧಾರೆ ಈ ಪೂರ್ಣತೆಯಿಂದ ಬಂದ ಪಾವಿತ್ರ್ಯದ ಸಂಕೇತ. ಅದು ನಿರಂತರ ಜ್ಞಾನ ಪ್ರವಾಹವನ್ನು ಸೂಚಿಸುತ್ತದೆ. ಈಶನ ಶಿರದಲ್ಲಿರುವ ಚಂದ್ರ, ಕಾಲ ಲೆಕ್ಕಾಚಾರದ ಸಂಕೇತ. ಭಾರತೀಯ ಪಂಚಾಂಗಕ್ಕೆ ಚಂದ್ರನ ಚಲನೆಯಿಂದ ಉಂಟಾಗುವ ಶುಕ್ಲ ಮತ್ತು ಕೃಷ್ಣ ಪಕ್ಷಗಳೇ ಆಧಾರವಾಗಿರಿವ ಎಣಿಕೆಯ ಕ್ರಮ. ಇಂತಹ ಚಂದ್ರನನ್ನೇ ಶಿರದಲ್ಲಿ ಧರಿಸಿ ಶಿವನು, ಕಾಲವು ತನಗೆ ಆಭರಣವೇ ಹೊರತು ಅದಕ್ಕಿಂತ ಹೆಚ್ಚಿನದಲ್ಲ ಎಂದು ಧ್ವನಿಸುತ್ತಾನೆ. ಸಾವಿನ ರೂಪವೇ ಆಗಿರುವ ಘಟ ಸರ್ಪವೂ ಅವನ ಅಲಂಕಾರವೇ. ಶಿವನು ಹಾಲಾಹಲದಂತಹ ಘೋರ ವಿಷವನ್ನೇ ಕುಡಿದು ಜಗವನ್ನು ರಕ್ಷಿಸಿದವನು. ರೂಪವಿರುವುದಕ್ಕೆಲ್ಲ ಅಂತ್ಯವಿರುತ್ತದೆ. ಆದರೆ, ರೂಪವನ್ನು ಮೀರಿದ ಶಿವನಿಗೆ ಅಂತ್ಯದ ಪ್ರಶ್ನೆಯೇ ಇಲ್ಲ. ಇವೆಲ್ಲದರ ಮೂಲಕವೇ ಶಿವನು ಸಾವನ್ನು ಶಾಶ್ವತವಾಗಿ ಜಯಿಸಿದವನಾಗಿ ಮೃತ್ಯುಂಜಯ ಎಂಬ ಹೆಸರನ್ನು ಪಡೆದಿದ್ದಾನೆ. ಶಿವನಿಗೆ ಆಭರಣವಾಗಿರುವ ಮಂಡಲಾಕಾರದ ಸರ್ಪಗಳು ಜೀವ ಜಗತ್ತಿನಲ್ಲಿ ಸೂಕ್ಷ್ಮವಾಗಿರುವ ಲೈಂಗಿಕತೆಯ ಸಂಕೇತ. ಇವುಗಳ ನಿಯಂತ್ರಣವನ್ನು ಬಿಂಬಿಸುವ ಶಿವನ ರೂಪ ಆತ ಶಕ್ತಿಯ ಒಡೆಯ ಕೂಡ ಹೌದು ಎನ್ನುವುದಕ್ಕೆ ನಿದರ್ಶನವಾಗಿದೆ.

ತ್ರಿಶೂಲ ಮತ್ತು ಡಮರುಗ.
ತ್ರಿಶೂಲವು ಶಿವನ ಪ್ರಮುಖವಾದ ಆಯುಧ. ಇದರಲ್ಲಿ ರಕ್ಷಣೆ ಮತ್ತು ಆಕ್ರಮಣ ಎರಡೂ ಗುಣಗಳಿವೆ. ಇವೆರಡನ್ನು ಏಕ ಕಾಲದಲ್ಲಿ ಸಾಧಿಸುವ ಈ ತ್ರಿಶೂಲದಲ್ಲಿರುವ ಮೂರು ಮೊನೆಗಳು ತತ್ತ್ವಶಾಸ್ತ್ರದ ತ್ರಿಗುಣಗಳನ್ನು ಬಿಂಬಿಸುತ್ತವೆ. ಸೃಷ್ಟಿ - ಸ್ಥಿತಿ - ಲಯಗಳು ಜಗತ್ತಿನ ಸ್ಥಾಯಿ ಗುಣಗಳು. ಇವುಗಳನ್ನು ಅರಿತರೆ ರಕ್ಷಣೆ ಮತ್ತು ಮರೆತರೆ ಆಕ್ರಮಣ ಎಂಬ ವೇದಾಂತವನ್ನು ತ್ರಿಶೂಲ ಪ್ರತಿನಿಧಿಸುತ್ತದೆ.

ಶಿವನ ಆಕಾರಗಳಲ್ಲಿ ಬಹಳ ಮುಖ್ಯವಾದದ್ದು ತಾಂಡವ ನೃತ್ಯ ಭಂಗಿ ಅಥವಾ ನಟರಾಜನ ಸ್ವರೂಪ. ಈ ಸ್ವರೂಪವು ನಿರಂತರವಾದ ಕಾಲಕ್ಕೆ ಸಂಕೇತವಾಗಿದೆ. ಶಿವನ ತಾಂಡವ ನೃತ್ಯ ಮಾಡುತ್ತಿರುವಾಗ ತನ್ನ ಡಮರುಗಗಳನ್ನು ಹದಿನಾಲ್ಕು ಬಾರಿ ನುಡಿಸಿದನೆಂದೂ, ಅದು ಆ - ಇ - ಉಣ್ - ಋ - ಲೃ - ಕ್ ಮೊದಲಾದ ಬೀಜಾಕ್ಷರಗಳು ಮೂಡಿದವೆಂದು ಪ್ರತೀತಿ. ಇದಕ್ಕೆ ಮಾಹೇಶ್ವರ ಸೂತ್ರಗಳು ಎಂದು ಹೆಸರು. ಈ ಬೀಜಾಕ್ಷರಗಳಿಂದ ಜಗತ್ತಿನ ಎಲ್ಲಾ ಭಾಷೆ ಮತ್ತು ಅವುಗಳ ವ್ಯಾಕರಣ ರೂಪಗೊಳ್ಳುವುದರಿಂದ ಡಮರುಗವನ್ನು ಭಾಷೆಯ ಪ್ರತಿನಿಧಿ ಎಂದು ಕರೆಯಬಹುದು ಅಥವಾ ಬರಹರೂಪದಲ್ಲಿ ಜ್ಞಾನವನ್ನು ಹಿಡಿದಿಡುವ ಕಾರ್ಯಕ್ಕೆ ಇದನ್ನು ರೂಪಕವಾಗಿ ನೋಡಬಹುದು. 

ಒಂದೆಡೆ ಹೀಗೆ ನಾಗರೀಕವಾದ ಕಲೆ-ವಿಜ್ಞಾನಗಳ ನೆಲೆಯಾದ ಭಾಷೆಯನ್ನು ಡಮರುಗ ಸೂಚಿಸುತ್ತಿದ್ದರೆ, ಇನ್ನೊಂದು ಹಸ್ತದಲ್ಲಿರುವ ಖಟ್ಟಾಂಗ (ಒಂದು ತುದಿಯಲ್ಲಿ ತಲೆ ಬುರುಡೆಯನ್ನು ಹೊಂದಿರುವ ಮಂತ್ರದಂಡ) ಪ್ರಕೃತಿ ಸಹಜವಾದ ಮೂಲ ಸ್ವರೂಪಿ ಜ್ಞಾನವನ್ನು ಪ್ರಧಾನವಾಹಿನಿಗೆ ತರಬಲ್ಲ ಸಾಮರ್ಥ್ಯವನ್ನು ಸೂಚಿಸುತ್ತದೆ. ಹೀಗೆ ಶಿವ ಸಹಜತೆ ಮತ್ತು ನಾಗರೀಕತೆ ಎರಡರ ಸಮನ್ವಯ ಮೂರ್ತಿಯಾಗಿದ್ದಾನೆ. ಶಿವನ ಕೈಯಲ್ಲಿರುವ ದರ್ಪಣ, ಇಡೀ ಸೃಷ್ಟಿಯೇ ಅದರಲ್ಲಿ ಅಡಕವಾಗಿ ಎಲ್ಲವೂ ಶಿವಮಯವಾಗಿರುವುದನ್ನು ಸೂಚಿಸುತ್ತದೆ. ಶಿವನು ಕೇವಲ ಜ್ಞಾನದ ಸಂಕೇತ ಮಾತ್ರವಲ್ಲ, ಕಲಿಕೆಗೆ ಹೆಗ್ಗುರುತು ಕೂಡ ಹೌದು. ಜಗತ್ತಿನೆಲ್ಲೆಡೆ ಜ್ಞಾನವನ್ನು ಹರಡಿದ ಋಷಿಗಳಿಗೆ ಜ್ಞಾನದ ಪ್ರಾಥಮಿಕ ಪಾಠ ಕಲಿಸಿದವನು ಶಿವನೇ! ಅವನು ದಕ್ಷಿಣ ದಿಕ್ಕಿನಲ್ಲಿ ಕುಳಿತು ವಿದ್ಯೆ ಕಲಿಸಿದ್ದರಿಂದ 'ದಕ್ಷಿಣಾಮೂರ್ತಿ' ಎಂಬ ಹೆಸರೂ ಇದೆ.


ಚಿತ್ರ ಕೃಪೆ: ಶ್ರೀನಿವಾಸ್

Friday, February 12, 2010

ನಿರಾಕಾರ ಸ್ವರೂಪ ಪರಶಿವ.

ಮಂಜುನಾಥ.
ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾರ್ಥ. ಜನಿಸಿದೆಲ್ಲವೂ ಮರಣ ಹೊಂದಲೇಬೇಕು, ನಾಶವಾಗಲೇಬೇಕು. ಇದು ಸೃಷ್ಟಿಯ ನಿಯಮ. ಇದನ್ನು ಸಂಕೇತಿಸುವ ಶಕ್ತಿಯೇ ಶಿವ. ಶಿವ ಎಂಬ ಪರಿಕಲ್ಪನೆಯ ಅರ್ಥ ಇಷ್ಟಕ್ಕೇ ಸೀಮಿತವಾದದ್ದಲ್ಲ. ಅಂತ್ಯವಿಲ್ಲದ ಶೂನ್ಯದೊಳಗೆ ವಿಲೀನಗೊಳ್ಳುವುದೇ ಜಗತ್ತಿನ ಅವಸಾನ, ಅದುವೇ ಲಯ. ಈ ಮಹಾಶೂನ್ಯವನ್ನು ವಿಜ್ಞಾನವೂ ಒಪ್ಪಿಕೊಳ್ಳುತ್ತದೆ. ಇದರ ಸ್ವರೂಪವೇ ಪರಶಿವ. ತಮಿಳುನಾಡಿನ ಚಿದಂಬರಂ ಕ್ಷೇತ್ರ ಬಹಳ ಪ್ರಖ್ಯಾತವಾದದ್ದು. ಅಲ್ಲಿನ ದೇಗುಲದ ಗರ್ಭಗುಡಿಯಲ್ಲಿ ಉಳಿದ ಶಿವಾಲಯಗಳಂತೆ ಶಿವಲಿಂಗವಿಲ್ಲ. ಗರ್ಭಗುಡಿ ಬರಿದಾಗಿದ್ದು ಗೋಡೆಯ ಮೇಲೆ ಚಕ್ರವೊಂದರ ನಿರೂಪಣೆ ಇದೆ. ಇಲ್ಲಿರುವುದು ಆಕಾಶ ಲಿಂಗ (ಆಕಾಶವನ್ನು ಶೂನ್ಯಕ್ಕೆ ಹೋಲಿಸಿದ್ದಾರೆ) ಎಂದು ಪ್ರತೀತಿ. ಅದರ ಮುಂದೆ ತೆರೆಯನ್ನೆಳೆದಿದ್ದಾರೆ. ಪೂಜೆಯ ಕೆಲವು ಸಂದರ್ಭಗಳಲ್ಲಿ ಮಾತ್ರ ಇದನ್ನು ಪಕ್ಕಕ್ಕೆ ಸರಿಸುತ್ತಾರೆ. ಇದೇ 'ಚಿದಂಬರ ರಹಸ್ಯ' ಎಂದು ಪ್ರಖ್ಯಾತವಾಗಿದೆ. ಆಕಾರವು ಮನುಷ್ಯನ ಗ್ರಹಿಕೆಗೆ ಎಟುಕಲು ಮಾತ್ರ ರೂಪುಗೊಂಡಿದೆ. ಪರಮಾತ್ಮನ ನಿಜಸ್ವರೂಪ ರೂಪ ರೂಪಗಳನ್ನು ಮೀರಿದ್ದು ಎಂಬ ಅರ್ಥ ಇಲ್ಲಿದೆ. ರೂಪಾತೀತ ಸ್ಥಿತಿಯೇ ಶಿವನ ನಿಜವಾದ ಸ್ವರೂಪ.

ಶಿವನ ಸ್ವರೂಪಗಳು.
ನಿರಾಕಾರಮಯನಾದ ಶಿವನ ಆರಾಧನೆಯಲ್ಲಿ ಶಾಂತ ಸ್ವರೂಪವನ್ನು ಕಾಣಬಹುದಾಗಿದ್ದು, ಪ್ರಳಯ ಸ್ವರೂಪವಾದ ರುದ್ರನೆಂಬ ಇನ್ನೊಂದು ಆಕಾರವೂ ಇದೆ. ಶಿವನು ಒಂದು ರೂಪದಲ್ಲಿ ಶ್ವೇತವರ್ಣನಾಗಿದ್ದರೆ, ಇನ್ನೊಂದು ರೂಪದಲ್ಲಿ ಕಡು ನೀಲಿಬಣ್ಣವನ್ನು ಹೊಂದಿದ್ದಾನೆ. ಪರಸ್ಪರ ವಿರುದ್ಧ ಎನಿಸಬಹುದಾದ ಈ ಗುಣಗಳು ಶಿವನಿಗಿರುವುದು ಆಶ್ಚರ್ಯಕರ ಎನಿಸಬಹುದು. ಆದರೆ, ಎಲ್ಲಾ ವರ್ಣಗಳನ್ನು ಬೇರ್ಪಡಿಸಲಾಗದಂತೆ ಪಡೆದಿರುವ ಇವನ ನಿರಾಕಾರವು ಅಸಂಖ್ಯ ಆಕಾರಗಳ ಪೂರ್ಣ ಸ್ವರೂಪವೂ ಆಗಿದೆ. ಹೀಗಾಗಿ ನೋಡುವವರ ಭಾವಕ್ಕೆ ತಕ್ಕ ಬಣ್ಣಗಳಲ್ಲಿ ಶಿವನು ಕಂಡಿದ್ದಾನೆ. ಮುಕ್ಕಣ್ಣನೆಂದು ಹೆಸರಾದ ಶಿವನಿಗಿರುವ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳ ಸಂಕೇತ. ಇವು ಬೆಳಕು, ಜೀವ ಮತ್ತು ಶಾಖದ ಮೂಲ ಆಕಾರಗಳೂ ಹೌದು. ಹಾಗೇ‌ಸಾಮಾನ್ಯ ಕಣ್ಣುಗಳನ್ನು ಮೀರಿದ ಶಿವನ ಮೂರನೆಯ ಕಣ್ಣು, ಜ್ಞಾನ ನೇತ್ರ. ಅದು ವಿವೇಕದ ಸಂಕೇತ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ. ತೆರೆದರೆ ಮಹಾ ಪ್ರಳಯವೇ ಆಗಿ ಬಿಡುತ್ತದೆ ಎಂಬಲ್ಲಿ ಜ್ಞಾನ ಮತ್ತು ವಿವೇಕಗಳು ಒಟ್ಟಾಗಿ ಇರಬೇಕಾದ ಸರ್ವ ವ್ಯಾಪಕತೆಯ ಗುಣವನ್ನು ಗಮನಿಸಬಹುದು.

ಸೂರ್ಯ-ಚಂದ್ರರೇ ಶಿವನ ಸಹಜ ಕಣ್ಣುಗಳಾದರೆ ಪ್ರಚಂಡವಾಗಿ ಬೀಸುತ್ತಿರುವ ಗಾಳಿಸಹಿತವಾದ ಇಡೀ ಆಕಾಶವು ಅವನ ತಲೆಗೂದಲಾಗುತ್ತದೆ. ಆದ್ದರಿಂದಲೇ ಅವನಿಗೆ 'ವ್ಯೋಮಕೇಶ' (ಆಕಾಶವನ್ನೇ ತಲೆಗೂದಲಾಗಿ ಉಳ್ಳವನು) ಎಂದು ಕರೆಯುತ್ತಾರೆ. ಹುಲಿಯು ಆಕ್ರಮಣಕಾರಿಯಾದ ಪ್ರಾಣಿ. ಅಸಹಾಯಕ ಬಲಿಪಶುಗಳನ್ನು ನಿರ್ದಾಕ್ಷಿಣ್ಯವಾಗಿ ಬಗೆದು ತಿನ್ನುವ ಕ್ರೂರಿ. ಇದನ್ನು ಎಂದಿಗೂ ತೃಪ್ತಿಗೊಳ್ಳದೆ ಮಾನವರನ್ನು ಸದಾ ಬಲಿ ತೆಗೆದುಕೊಳ್ಳುತ್ತಿರುವ 'ಆಸೆ'ಗಳಿಗೆ ಹೋಲಿಸಬಹುದು. ಹುಲಿಯನ್ನು ಕೊಂದು ಅದರ ಚರ್ಮವನ್ನು ಧರಿಸಿರುವ ಶಿವನು ಆಸೆಯನ್ನು ಮೆಟ್ಟಿ ನಿಂತಿರುವ ಮನೋಸ್ಥಿತಿಯ ಸಂಕೇತ.

ಆನೆ, ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದದ್ದು. ಶಿವನು ಅದರ ಚರ್ಮವನ್ನು ಧರಿಸಿ ಎಲ್ಲಾ ಬಗೆಯ ಪಶುಭಾವಗಳನ್ನು ಜಯಿಸಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಾನೆ. ಶಿವನು ಧರಿಸಿರುವ ತಲೆಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೇ ಅವನು ವಿನಾಶದ ಪ್ರಭು ಎಂದು ಸೂಚಿಸುತ್ತದೆ. ತಲೆಬುರುಡೆಗಳ ಮೂಳೆಯು ಕಾಲಪ್ರವಾಹದ ಆವರ್ತಗಳನ್ನು, ಸೃಷ್ಟಿ-ಸ್ಥಿತಿ-ಲಯಗಳ ನಿರಂತರವಾದ ಕಾಲಚಕ್ರವನ್ನು ಸೂಚಿಸುತ್ತದೆ. ಹೀಗೆ ಶಿವನ ಸ್ವರೂಪದಲ್ಲಿ ತಾತ್ತ್ವಿಕತೆಯನ್ನು ಕಾಣಬಹುದು. 
(ಇನ್ನೂ ಇದೆ) 

Thursday, February 11, 2010

ಗಣಪತಿಯು ವಾಕ್ಸ್ವರೂಪಿ.

ಮಣ್ಣಿನ ಗಣಪತಿ.

ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಈತನೇ ಲಂಬೋದರ. ಇದನ್ನು ಆತ ಮೂರುವರೆ ಸುತ್ತುಗಳುಳ್ಳ  ಸರ್ಪದಿಂದ ಹಿಡಿದಿಟ್ಟಿದ್ದಾನೆ. ಹಿಂದೂ ಧರ್ಮದಲ್ಲಿ ಸರ್ಪವು ಕಾಮದ ಸಂಕೇತ. ಕಾಮವು ನಿಯಂತ್ರಣವಿಲ್ಲದಿದ್ದಾಗ ಹೇಗೆ ಅಪಾಯಕಾರಿಯೋ, ಹಾಗೇ ನಿಯಂತ್ರಣದಲ್ಲಿದ್ದಾಗ ಸೃಷ್ಟಿಯ ವಿಕಾಸಕ್ಕೆ ಕಾರಣವಾಗುತ್ತದೆ. ಗಣಪತಿಗೆ ವಾಹನವಾಗಿರುವುದು ಇಲಿ. ಅದು ಸ್ವಭಾವದಲ್ಲಿ ಹಾವಿನ ಶತ್ರು. ಸ್ವಭಾವವನ್ನು ಮೀರಿದ ಜ್ಞಾನದಲ್ಲಿ ಶತ್ರುತ್ವ ಇರುವುದಿಲ್ಲವೆಂದು ತಿಳಿಸುವ ಸಲುವಾಗಿಯೇ ಗಣಪತಿ ಅವೆರಡನ್ನೂ ಒಟ್ಟಾಗಿ ಇರಿಸಿಕೊಂಡಿರುವನು. ಗಣಪತಿಯ ವಾಹನವಾದ ಮೂಷಕ (ಇಲಿ) ಎಂಬ ಶಬ್ದವು  ಮೂಷ್ (ಅಂದರೆ 'ಕದಿಯುವಿಕೆ') ಎಂಬ ಧಾತುವಿನಿಂದ ಬಂದಿದೆ. ಮೂಷಕವು ಅಂದರೆ ಆಸೆಯು ಕಳ್ಳತನದಿಂದ ಮನಸ್ಸಿನಲ್ಲಿ ಪ್ರವೇಶಿಸಿ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ನಾಶ ಮಾಡುತ್ತದೆ. ಅದನ್ನು ದಿವ್ಯ ಜ್ಞಾನದಿಂದ ನಿಯಂತ್ರಿಸಿದಾಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಮನುಷ್ಯರ ಬುದ್ಧಿಯನ್ನು ಚಂಚಲ ಮಾಡುವ ಆಸೆಗಳನ್ನು ಮೂಷಕವು ಪ್ರತಿನಿಧಿಸುತ್ತದೆ. ಎಲ್ಲಾ ವಿಷಯಾಸಕ್ತಿಗೆ ಸಂಕೇತವಾಗಿರುವ ಇಲಿಯು ಹರಿತವಾದ ಬುದ್ಧಿಗೂ ಸಂಕೇತವಾಗಿದೆ. ಗಣಪತಿಯು ವಿದ್ಯೆಯ ಅಧಿದೇವತೆಯಾಗಿರುವುದರಿಂದ ಇಲಿಯನ್ನೇ ವಾಹನವನ್ನಾಗಿರಿಸಿಕೊಂಡಿರುವುದು ಸಹಜವಾಗಿದೆ.

ಮಣ್ಣಿನ ಮಗನಾಗಿ ಗಣಪತಿ.
ಮೂಲತಃ ಮಣ್ಣಿನ ಮಗನಾಗಿ ಗಣಪತಿ, ಕೃಷಿ ಅಭಿಮಾನಿಯಾದ ದೇವತೆಯೂ ಹೌದು. ಈತನ ದೊಡ್ಡ ಹೊಟ್ಟೆಯನ್ನು ಕಣಜದ ಸಂಕೇತವನ್ನಾಗಿ ನೋಡಬಹುದು. ಕಿವಿಗಳು ಮರದಂತೆ ವಿಶಾಲ. ಅವು ಒಳಿತು-ಕೆಡಕುಗಳು ಬೆರೆತ ವಿಚಾರಗಳನ್ನು ಕೇರಿ ಶುದ್ಧೀಕರಿಸುವಂತಹವುಗಳು. ಗಣಪತಿಯ ಕೈಯಲ್ಲಿರುವ ಕಬ್ಬಿನ ಜಲ್ಲೆ, ಅವನಿಗೆ ಅತ್ಯಂತ ಪ್ರಿಯವಾದ ಪತ್ರ-ಪುಷ್ಪಗಳು ಎಲ್ಲವೂ ವ್ಯವಸಾಯದ ಪ್ರತೀಕಗಳೇ. ಈತನು ಧಾನ್ಯಗಳನ್ನು ಹಾಳು ಮಾಡುವ ಮೂಷಕವನ್ನು ನಿಯಂತ್ರಿಸಿ ವಾಹನವನ್ನಾಗಿಸಿಕೊಂಡವನು. ಬೆಳೆಗಳಿಗೆ ತೊಡಕನ್ನು ತರುವ ಕಾಡುಹಂದಿ, ಆನೆ ಮೊದಲಾದವುಗಳನ್ನು ನಿಯಂತ್ರಿಸುವ ಪಾಶಾಂಕುಶಗಳು ಈತನ ಕೈಯಲ್ಲಿವೆ. ಈತನ ತಾಯಿ ಪಾರ್ವತೀ ಬೆಟ್ಟದ ಮಗಳಾದರೆ, ತಂದೆ ಪರಮೇಶ್ವರನು ಬೆಟ್ಟದ ವಾಸಿಯಾಗಿದ್ದಾನೆ. ಇವೆಲ್ಲವೂ ಗಣಪತಿಯ ಸ್ವರೂಪದಲ್ಲಿನ ಕೃಷಿ ಚಟುವಟಿಕೆಗಳಿಗೆ ಸಂಕೇತವಾಗಿದೆ. ಗಣಪತಿಯ ಮಣ್ಣಿನ ಮೂರ್ತಿಯೇ ಶ್ರೇಷ್ಟ ಎನ್ನುವುದರ ಹಿನ್ನೆಲೆ ಇದೇ.

ಇಂದಿನ ಯುಗದ ನಾಯಕತ್ವದ ಸಮಸ್ತ ಗುಣಗಳಿಗೂ ಗಣಪತಿಯು ಆದರ್ಶಪ್ರಾಯನಾಗಿರುವನು. ಒಳ್ಳೆಯ ಮಾತು, ಪ್ರಚಂಡ ಬುದ್ಧುಶಕ್ತಿ, ಕಲಾ ಪ್ರೌಢಿಮೆ, ಇಂದ್ರಿಯನಿಗ್ರಹ, ವ್ಯವಹಾರ ಚಾತುರ್ಯ ಎಲ್ಲವೂ ಇವನ ಸ್ವತ್ತು. ಇದೇ ಕಾರಣಕ್ಕೆ ಇವನು ವಿಶ್ವನಾಯಕನೂ ಹೌದು. 

(ಮುಗಿಯಿತು) 

ಚಿತ್ರ ಕೃಪೆ: ಪವಿತ್ರ

Wednesday, February 10, 2010

ಗಣಪತಿಗೇ ಏಕೆ ಮೊದಲ ಪೂಜೆ?

ಗಣಪ.

ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ ಎಂಬುದು ಒಂದು ವಿವರಣೆ. ಇನ್ನೊಂದು ಮಾದರಿ ವಿಶ್ಲೇಷಣೆ ಎಂದರೆ ಶಿವನು ಪರಮ ಪುರುಷನಾದರೆ, ಪಾರ್ವತಿಯು ಪರಮ ಪ್ರಕೃತಿ. ಆಕೆಯ ದೇಹದಲ್ಲಿನ ಕೊಳೆ ಎಂದರೆ ಅದು ಮಾಯಾ ಪ್ರಕೃತಿ. ಅದನ್ನು ಪಡೆದು ಹುಟ್ಟಿದವನು ಗಣಪತಿ. ಪರಶಿವನು ಈ ತಮೋಗುಣಗಳ ಶಿರವನ್ನು ತೆಗೆದು ಅದರಲ್ಲಿ ಬ್ರಹ್ಮ ಸ್ವರೂಪಿಯಾದ ಗಜ ಮುಖವನ್ನು ಇಟ್ಟಿದ್ದಾನೆ. ಹೀಗಾಗಿ ಮಾಯೆಯನ್ನು ಗೆದ್ದು ಸತ್ಯದ ಅರಿವು ಮೂಡಿಸಬಲ್ಲವನು ಎಂಬ ಅಂತರಾರ್ಥ ಗಣಪತಿಯ ಸ್ವರೂಪದಲ್ಲಿದೆ. ಚಿಂತನಾಕ್ರಮದಲ್ಲಿನ ಪರಿಶುದ್ಧತೆ ಮತ್ತು ಪರಿಪೂರ್ಣತೆಯೇ ಆತನ ಮೊದಲ ಪೂಜೆಗೆ ಕಾರಣವಾಗಿದೆ. 

ಗಣಪತಿಯ ಮೂರ್ತಿಸ್ವರೂಪ.
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ. 

ಗಣಪತಿಯ ಸ್ವರೂಪದಲ್ಲಿರುವ ಕುತೂಹಲಕರ ಅಂಶವೆಂದರೆ ಮುರಿದ ದಂತ. ಸಾಮಾನ್ಯವಾಗಿ ವಿಗ್ರಹಗಳಲ್ಲಿ ಕೊಂಚ ಭಿನ್ನ ಕಂಡರೂ ಅದು ಪೂಜೆಗೆ ಅರ್ಹವಾಗುವುದಿಲ್ಲ. ಆದರೆ ಗಣಪತಿಯ ದಂತ ಭಗ್ನವಾಗಿರುವುದೇ ಇಲ್ಲಿ ಸ್ವರೂಪವಾಗಿದೆ. ಇದು ಏಕೆ ಎಂದು ಯೋಚಿಸಿದಾಗ, ಕೆಲವು ಸತ್ಯಗಳ ಅರಿವಾಗುತ್ತದೆ. ಮೂಲಸ್ವರೂಪವಾದ 'ಸತ್ಯ' ಅಖಂಡವಾದದ್ದು. ಅದನ್ನು ಬಲ ಭಾಗದಲ್ಲಿರುವ ಪೂರ್ಣದಂತ ಸೂಚಿಸುತ್ತದೆ. ಪ್ರಪಂಚ ಮಾಯೆಗಳಿಂದ ತುಂಬಿ ಅಪರಿಪೂರ್ಣವಾಗಿದೆ. ಇದನ್ನು ಮುರಿದಿರುವ ಎಡದಂತವು ಸೂಚಿಸುತ್ತದೆ. ಪೂರ್ಣ ಮತ್ತು ಅಪೂರ್ಣಗಳೆರಡೂ ಬೇರೆಬೇರೆಯಾಗಿ ಕಂಡರೂ ಅವೆರಡೂ ಪರಮಾತ್ಮನ ರೂಪ ವಿಶೇಷಗಳೇ. ಇದನ್ನು ಗಣಪತಿಯ ದಂತಗಳು ಸೂಚಿಸುತ್ತದೆ. 

(ಇನ್ನೂ ಇದೆ)

Tuesday, February 09, 2010

ಗಣಪತಿಯ ಬಗ್ಗೆ.

ಗಣಪತಿ.

ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ ಅರ್ಥವೇ ಗಣಗಳ ಅಧಿಪತಿ, ಅಂದರೆ, ಸಮುದಾಯದ ನಾಯಕ ಎಂದು. ಆ ಕಾರಣಕ್ಕೇ ಅವನಿಗೆ ಬೃಹಸ್ಪತಿ ಮತ್ತು ವಾಚಸ್ಪತಿ ಎಂಬ ಹೆಸರುಗಳಿವೆ. ಗಣಪತಿಯ ಸ್ವರೂಪದ ಮುಖ್ಯ ಲಕ್ಷಣವೆಂದರೆ ವಿಘ್ನಗಳನ್ನು ನಿವಾರಿಸುವುದು. ವಿಘ್ನಗಳು ಎಲ್ಲಾ ಕಾರ್ಯಗಳಿಗೂ ಇರುತ್ತವೆ. ಆದರೆ, ಧೀರರು ಮಾತ್ರವೇ ಅದನ್ನು ಹಿಮ್ಮೆಟ್ಟಿಸಬಲ್ಲರು. ಗಣಪತಿ ಅಂತಹ ಸಾಮರ್ಥ್ಯದ ಪ್ರತೀಕವಾಗಿದ್ದಾನೆ. ಹೀಗಾಗಿ ಗಣಪತಿಗೆ 'ವಿಘ್ನೇಶ್ವರ'ನೆಂಬ ಹೆಸರಿದೆ.

ಗಣಪತಿ ಹೆಸರಿನ ಮೂಲ.
ಗಣ ಎಂದತೆ ತತ್ತ್ವ. ಯಾವ ಮೂಲ ತತ್ತ್ವಗಳಿಂದ ಎಲ್ಲಾ ವಿದ್ಯೆಗಳೂ ಆವಿಷ್ಕಾರಗೊಳ್ಳುವುದೋ , ಆ ಮೂಲ ತತ್ತ್ವವೇ ಗಣಪತಿ. ಹೀಗಾಗಿ ಆತನು ವಿದ್ಯೆಗೆ ಅಧಿಪತಿಯಾಗಿರುತ್ತಾನೆ. ಗಣಪತಿಗೆ ಆನೆಯ ಮುಖವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪ್ರತಿನಿಧಿಸುವ 'ಗಜ' ಎಂಬ ಶಬ್ದಕ್ಕೆ ಆಳವಾದ ಅರ್ಥವಿದೆ. 'ಗ' ಎಂದರೆ ಗತಿ. ಜೀವನದ ಪರಮ ಧ್ಯೇಯದತ್ತ ತಿಳಿದೂ ತಿಳಿಯದೆಯೂ ಸಾಗುವುದು. 'ಜ' ಎಂದರೆ ಜನ್ಮ, ಅಂದರೆ ವಿಶ್ವದ ಮಹತ್ತರ ಉದ್ದೇಶ ಯಾವುದಿದೆಯೋ ಅದಕ್ಕಾಗಿ ಜನ್ಮ ತಳೆಯುವುದು ಎಂದರ್ಥ. ಸೃಷ್ಟಿಯಲ್ಲಿ ಸೂಕ್ಷ್ಮಾಂಡ ಹಾಗೂ ಬ್ರಹ್ಮಾಂಡಗಳೆಂಬ ಎರಡು ಬಗೆಗಳಿವೆ. ಇವೆರಡೂ ಒಂದಕ್ಕೊಂದು ಪ್ರತಿರೂಪವಾಗಿದೆ. ಈ ಎರಡೂ ರೂಪಗಳಲ್ಲಿರುವ ತತ್ತ್ವ ಒಂದೇ. ಆದರೆ, ಸ್ವರೂಪವು ಬೇರೆ. ಗಣಪತಿ ಮೂರ್ತಿಯಲ್ಲಿರುವ ಗಜಮುಖವು ಬ್ರಹ್ಮಾಂಡದ ಪ್ರತೀಕ. ಮಾನವ ಶರೀರವು ಸೂಕ್ಷ್ಮಾಂಡದ ಪ್ರತೀಕ. ಸೂಕ್ಷ್ಮಾಂಡದ ಗುರಿ ಬ್ರಹ್ಮಾಂಡವಾಗಿರುವುದರಿಂದ ಗಣಪತಿಯ ಸ್ವರೂಪದಲ್ಲಿ ಗಜಮುಖಕ್ಕೇ ಪ್ರಾಧಾನ್ಯತೆ.

ಗಜಮುಖವೇ‌ ವಿಶ್ವವನ್ನು ಪ್ರತಿನಿಧಿಸಿದರೆ, ಮಾನವಾಕಾರವೇ ವ್ಯಕ್ತಿ ಎಂದು ಗ್ರಹಿಸಬಹುದು. ಅವೆರಡೂ ಒಂದೇ, ಮಾತ್ರವಲ್ಲ, ಪರಸ್ಪರ ಪೂರಕವಾದದ್ದು ಎಂಬುದನ್ನು ಗಣಪತಿಯ ಕಲ್ಪನೆ ತೋರಿಸಿಕೊಡುತ್ತದೆ. 

(ಇನ್ನೂ ಇದೆ)

Monday, February 08, 2010

ಮಹಾರಾಜ ಸ್ವಾತಿತ್ತಿರುನಾಳ್ - ೩

ತ್ಯಾಗರಾಜರ 'ದರ್ಶನ' 

ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು  ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ್ಥಾನ ವಿದ್ವಾಂಸರಲ್ಲಿ ಒಬ್ಬರಾಗಿದ್ದ, ವಯಸ್ಸಿನಲ್ಲಿ  ತಮಗಿಂತ ಮೂರು ವರ್ಷಹಿರಿಯರಾದ ವಡಿವೇಲು ಎಂಬುವವರಿಗೆ ತ್ಯಾಗರಾಜರನ್ನು ಕರೆದು ತರಲು ದೊರೆ ಹೇಳಿದರು. ವಡಿವೇಲು ಅವರು ಪ್ರಸಿದ್ಧ ಹಾಡುಗಾರರಲ್ಲದೇ ಪಿಟೀಲು ವಿದ್ವಾಂಸರು ಕೂಡ ಆಗಿದ್ದರು. ವಡಿವೇಲು ಅವರು ತ್ಯಾಗರಾಜರನ್ನು ಕಂಡಿದ್ದರು. ಅದಲ್ಲದೆ, ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ವೀಣಾ ಕುಪ್ಪಯ್ಯರ್ ಅವರ ಗೆಳೆಯ ಕೂಡ. ಆದರೆ, ತ್ಯಾಗರಾಜರಿಗೆ ವಡಿವೇಲು ಅವರ ಪರಿಚಯವಿರಲಿಲ್ಲ. 

ವಡಿವೇಲು ಅವರು ತಿರುವಯ್ಯಾರಿಗೆ ಬಂದು ತಿರುಮಂಜನವೆಂಬ ಬೀದಿಯ  ಒಂದು ಮನೆಯಲ್ಲಿ ತಂಗಿದರು. ಅದೇ ಬೀದಿಯಲ್ಲಿ ತ್ಯಾಗರಾಜರೂ ಇದ್ದರು. ವಡಿವೇಲು ತಂಗಿದ್ದ ಮನೆ, ತ್ಯಾಗರಾಜರ ಮನೆಯ ಸಾಲಿನ ಎದುರು ಸಾಲಿನಲ್ಲಿ, ನದಿಗೆ ಇಳಿಯುವ ಬಳಿ ಇತ್ತು. ಸ್ನಾನ ಸಂಧ್ಯಾವಂದನೆಗಳಿಗೆ ನದಿಗೆ ಹೋಗುತ್ತಿದ್ದ ತ್ಯಾಗರಾಜರು ವಡಿವೇಲು ತಂಗಿದ್ದ ಮನೆಯ ಮುಂದೆಯೇ ಹೋಗಬೇಕಾಗಿತ್ತು. ತ್ಯಾಗರಾಜರ ಗಮನ ಸೆಳೆಯಲು ವಡಿವೇಲು ಒಂದು ಉಪಾಯ ಹೂಡಿದರು. ದಿನವೂ ತ್ಯಾಗರಾಜರು ನದಿಗೆ ಹೋಗುವ ಸಮಯದಲ್ಲಿ ತಾವು ಸ್ವಾತಿತ್ತಿರುನಾಳ್ ಅವರ ರಚನೆಗಳನ್ನು  ಹಾಡುತ್ತಿದ್ದರು. ಮೊದಲನೆಯ ದಿನವೇ ಅವರ ಹಾಡು ಕೇಳಿ ತ್ಯಾಗರಾಜರು ಚಕಿತರಾದರು. ಅರೆಕ್ಷಣ , ಅಲ್ಲೇ ನಿಂತು ಕೇಳ ತೊಡಗಿದರು. ಎರಡನೆಯ ದಿನ ಇನ್ನೂ ಹೆಚ್ಚು ಕಾಲ ಹೊರಗೇ ನಿಂತು 'ಈತನೊಬ್ಬ ದೊಡ್ಡಾ ವಿದ್ವಾಂಸ' ಎಂದುಕೊಂಡರು. 

ಮೂರನೆಯ ದಿನ, ತ್ಯಾಗರಾಜರ ಕುತೂಹಲ ಎಲ್ಲೆ ಮೀರಿತು. ಹಾಡುತ್ತಿರುವ ಮೇಧಾವಿ ಯಾರು ಎಂದು ನೋಡಲೇಬೇಕೆಂದು ವಡಿವೇಲು ಇದ್ದ ಮನೆಯ ಒಳಕ್ಕೆ ಪ್ರವೇಶಿಸಿದರು. ಕೂಡಲೇ ವಡಿವೇಲು ಎದ್ದು ಬಂದು ನಮಸ್ಕರಿಸಿ, ಸ್ವಾಗತಿಸಿದರು. 'ಧನ್ಯ ಸ್ವಾಮಿ, ನಾನು ಧನ್ಯ. ತಾವೇಕೆ ಶ್ರಮ ವಹಿಸಿದಿರಿ? ಒಂದು ಮಾತು ಹೇಳಿಕಳಿಸಿದ್ದರೆ, ನಿಮ್ಮ ಸನ್ನಿಧಾನಕ್ಕೆ ನಾನೇ ಬರುತ್ತಿದ್ದೆ' ಎಂದು ವಿನಮ್ರದಿಂದ ಹೇಳಿದರು. ತ್ಯಾಗರಾಜರು ವಡಿವೇಲು ಅವರ ಅಮೋಘವಾದ ವಿದ್ವತ್ತನ್ನು ಮುಕ್ತಕಂಠದಿಂದ ಹೊಗಳಿದರು. ತಮ್ಮ ಮನೆಗೆ ಬಂದು (ಮರುದಿನವೇ) ಹಾಡಬೇಕೆಂದು ಹೇಳಿದರು. ಈ ಅವಕಾಶಕ್ಕೇ ಕಾದಿದ್ದ ವಡಿವೇಲು, ತ್ಯಾಗರಾಜರರ ಆಮಂತ್ರಣವನ್ನು ಸ್ವೀಕರಿಸಿ ಅವರ ಆದರಕ್ಕೆ ಪಾತ್ರರಾದರು. 

ತ್ಯಾಗರಾಜರ ಮನೆಯಲ್ಲಿ ವಡಿವೇಲು, ತಮ್ಮ ಮಧುರವಾದ ಕಂಠದಿಂದ, ಸ್ವಾತಿತ್ತಿರುನಾಳ್ ಅವರ ಹಲವಾರು ಕೃತಿಗಳನ್ನು ಹಾಡಿದರು. ತ್ಯಾಗರಾಜರು ಆನಂದಪರವಶರಾದರು. ಪದ್ಮನಾಭನೇ ಕಣ್ಣೆದುರು ಬಂದು ನಿಂತಂತಾಯಿತೇನೋ! 'ಭೇಷ್ ವಡಿವೇಲು! ಪರಮ ಸುಪ್ರೀತನಾಗಿದ್ದೇನೆ ನಾನು. ನಿನಗೇನು ವರ ಬೇಕೋ ಕೇಳು!' ಎಂದರು. ಆಗ ವಡಿವೇಲು 'ಸ್ವಾಮಿನ್! ತಿರುವಾಂಕೂರು ಮಹಾರಾಜರು ತಮ್ಮನ್ನು ಕಾಣಬೇಕೆಂದು ತವಕಿಸುತ್ತಿದ್ದಾರೆ. ಆದುದರಿಂದ ತಾವು...' ಎಂದು ವಡಿವೇಲು ತಮ್ಮ ಪ್ರಾರ್ಥನೆಯನ್ನು ಹೇಳಿ ಮುಗಿಸುವ ಮುನ್ನವೇ ಶ್ರೀ ತ್ಯಾಗರಾಜರು ಚಕಿತರಾದುದನ್ನು ಕಂಡು ಅಷ್ಟಕ್ಕೇ ನಿಲ್ಲಿಸಿದರು. 

ಕೆಲಕಾಲ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತರು. ನಂತರ ತ್ಯಾಗರಾಜರು 'ಸ್ವಾತಿತ್ತಿರುನಾಳ್ ಅವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನನ್ನ ಆಶ್ವಾಸನೆ ಖಂಡಿತ ನೆರವೇರುತ್ತದೆ. ಆದರೆ ನನ್ನ - ಅವರ ಭೇಟಿ ಈ ಪ್ರಪಂಚದಲ್ಲಿ ಅಲ್ಲ. ಸ್ವರ್ಗದಲ್ಲಿ! ಅವರ ಆರಾಧ್ಯ ದೈವನೂ (ಪದ್ಮನಾಭ) ನನ್ನ ಆರಾಧ್ಯ ದೈವನೂ (ಶ್ರೀರಾಮ) ಒಬ್ಬನೇ.' ಎಂದು ಹೇಳಿದರು. ನಿರಾಶರಾದ ವಡಿವೇಲು ತಿರುವಾಂಕೂರಿಗೆ ಮರಳಿ, ನಡೆದ ಸಂಗತಿಯನ್ನೆಲ್ಲಾ ದೊರೆಗೆ ತಿಳಿಸಿದರು. 

ಮಹಾರಾಜ ಸ್ವಾತಿತ್ತಿರುನಾಳ್ ಸ್ವತಃ ತಾವೇ ತಿರುವಯ್ಯಾರಿಗೆ ಹೋಗಬೇಕೆಂದು ಎಷ್ಟೋ ಬಾರಿ ಪ್ರಯತ್ನಿಸಿದರು. ಆದರೆ, ರಾಜಕಾರ್ಯ ಅವರನ್ನು ಬಿಡಲಿಲ್ಲ. ರಾಜಕಾರ್ಯ ಬಿಡಲಿಲ್ಲವೋ, ತ್ಯಾಗರಾಜರ ಮಾತು ನಿಜವಾಗಬೇಕೆಂಬ ದೈವಸಂಕಲ್ಪವೋ ಏನೋ, ಈ ಘಟನೆ ನಡೆದ ಬಳಿಕ ಸುಮಾರು ಹನ್ನೆರಡು ವರ್ಷಗಳ ಕಾಲ ಸ್ವಾತಿತ್ತಿರುನಾಳ್ ಅವರು ಬದುಕಿದ್ದರೂ, ತ್ಯಾಗರಾಜರನ್ನು ಭೇಟಿಯಾಗಲು ತಿರುವಯ್ಯಾರಿಗೆ ಹೋಗುವುದಕ್ಕಾಗಲೇ ಇಲ್ಲ. 

ಕೊನೆಗೆ ಸ್ವಾತಿತ್ತಿರುನಾಳ್ ಅವರೇ ತ್ಯಾಗರಾಜರ ಭೇಟಿಗಾಗಿ ಅವರಿಗಿಂತ ೧೨ದಿನಗಳ ಮೊದಲೇ ಸ್ವರ್ಗದಲ್ಲಿ ಕಾದು ಕುಳಿತರು! ಸ್ವಾತಿತ್ತಿರುನಾಳ್ ಅವರು ೧೮೪೬ನೇ ಡಿಸೆಂಬರ್ ೨೫ರಂದು, ಅಂದರೆ, ಪುಷ್ಯ ಶುಕ್ಲ ಅಷ್ಟಮಿಯಂದು ಸ್ವರ್ಗಸ್ಥರಾದರು. ತ್ಯಾಗರಾಜರು ೧೮೪೭ನೇ ಜನವರಿ ೬ರಂದು, ಅಂದರೆ, ಪುಷ್ಯ ಬಹುಳ ಪಂಚಮಿಯಂದು ಸ್ವಾತಿತ್ತಿರುನಾಳ್ ಅವರನ್ನು ನೋಡಲು ಸ್ವರ್ಗಕ್ಕೆ ಹೊರಟರು. 

ಮಹಾಮೇಧಾವಿಯೂ, ಸಾಹಿತಿಯೂ, ರಾಜಕಾರಣಿಯೂ, ರಸಿಕರೂ, ವಾಗ್ಗೇಯಕಾರರೂ ಆಗಿ ಬಾಳಿ ಕೇವಲ ೩೪ವರ್ಷಗಳಲ್ಲೇ, ಮಹಾ ಪ್ರತಿಭಾನ್ವಿತರೆನಿಸಿಕೊಂಡ ಮಹಾರಾಜ ಸ್ವಾತಿತ್ತಿರುನಾಳ್ ಅವರ ಹೆಸರನ್ನು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವ ವಾಗ್ಗೇಯಕಾರರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇಲ್ಲವೆಂದೇ ಹೇಳಬೇಕು. ಅವರು ನಮಗೆ, ಸಂಗೀತ ಪ್ರಪಂಚಕ್ಕೆ, ಬಿಟ್ಟು ಹೋಗಿರುವ ಆಸ್ತಿ ಅಮರವಾಗಿರುತ್ತದೆ. ಅವರ ಕೀರ್ತಿ ಆಚಂದ್ರಾರ್ಕ ಬೆಳಗುತ್ತಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. 

(ಮುಗಿಯಿತು)

Saturday, January 30, 2010

ಮಹಾರಾಜ ಸ್ವಾತಿತ್ತಿರುನಾಳ್ - ೨

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತಪದ್ಮನಾಭಗೋಸ್ವಾಮಿ, ಗೋವಿಂದಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮವಾರಿಯರ್ ಅವರುಗಳೂ ಇದ್ದರು.

ಸ್ವಾತಿತ್ತಿರುನಾಳ್ ಅವರೇ ಕೇರಳದಲ್ಲಿ ಹರಿಕಥೆ ಸಂಪ್ರದಾಯವನ್ನು ರೂಢಿಗೆ ತಂದವರು. ಸಂಗೀತ ಮತ್ತು ಸಾಹಿತ್ಯದ ಪ್ರಚಾರಕ್ಕೆ ಇದೊಂದು ಮುಖ್ಯವಾದ ಸಾಧನವೆಂಬುದೇ ಅವರ ಉದ್ದೇಶವಾಗಿತ್ತು. ಇದಕ್ಕಾಗಿಯೇ 'ಕುಚೇಲೋಪಾಖ್ಯಾನ', 'ಅಜಮಿಳೋಪಾಖ್ಯಾನ' ಎಂಬ ಎರಡು ಕಥೆಗಳನ್ನು ಸಂಸ್ಕೃತದಲ್ಲಿ ರಚಿಸಿದರು. ಮಹಾರಾಷ್ಟ್ರದಲ್ಲಿ ಅತ್ಯಂತ ಜನಪ್ರಿಯವಾಗಿದ್ದ 'ಹರಿಕಥೆ ಸಂಪ್ರದಾಯ' ೧೯ನೇ ಶತಮಾನದಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆಯಿತು.

ಈ ಮೊದಲೇ ಹೇಳಿರುವಂತೆ ಅನಂತಪದ್ಮನಾಭಗೋಸ್ವಾಮಿ ಎಂಬ ಪ್ರಸಿದ್ಧ ಹರಿಕಥೆ ಭಾಗವತರು, ತಂಜಾವೂರಿನ ಮಹಾರಾಜರಾದ ಶರಭೋಜಿಯವರ ಆಸ್ಥಾನದಲ್ಲಿದ್ದರು. ಸ್ವಾತಿತ್ತಿರುನಾಳ್ ಅವರು ಭಾಗವತರನ್ನು ಆಹ್ವಾನಿಸಿ, ಗೌರವಿಸಿ, ತಮ್ಮ 'ಗುರು' ಎಂದೇ ಭಾವಿಸಿ, ಅವರು ರಚಿಸಿದ ಎರಡು ಉಪಾಖ್ಯಾನಗಳನ್ನು ಭಾಗವತರಿಗೆ ಅರ್ಪಿಸಿ, ಕಥೋಪನ್ಯಾಸ ಮಾಡಿ ಅನುಗ್ರಹಿಸಬೇಕೆಂದು ಕೋರಿದರು. 'ಉತ್ಸವ ಪ್ರಬಂಧ' ಎಂಬ ಮತ್ತೊಂದು ಕೃತಿಯನ್ನು ಸ್ವಾತಿತ್ತಿರುನಾಳ್ ರಚಿಸಿದರು.

ಕೇರಳದಲ್ಲಿ ಇವರ ಕಾಲದಲ್ಲಿದ್ದ ಸಂಗೀತ ಸಂಪ್ರದಾಯಕ್ಕೆ 'ಸೋಪಾನ ಸಂಪ್ರದಾಯ' ಎಂದು ಹೆಸರಿತ್ತು. ಹಿಂದೂಸ್ತಾನಿ ಸಂಗೀತದ ಕುರಿತು ಆಗ ಅಲ್ಲಿಯವರಿಗಿನ್ನೂ ತಿಳಿದಿರಲಿಲ್ಲ. ಆ ಕಾರಣಕ್ಕೇ ತಂಜಾವೂರಿಗೆ ಹಿಂದೂಸ್ತಾನಿ ಸಂಗೀತವನ್ನು ಪರಿಚಯಿಸಿದ ರಂಗಯ್ಯಂಗಾರರನ್ನೂ, ರಘುನಾಥರಾಯರೆಂಬ ವೈಣಿಕರನ್ನೂ, ಸಾರಂಗಿ ವಿದ್ವಾನ್ ಚಿಂತಾಮಣಿ ಭಾಗವತರನ್ನೂ ಗೌರವಿಸಿ ಆದರದಿಂದ ಬರಮಾಡಿಕೊಂಡರು.

ವಾಗ್ಗೇಯಕಾರರ ಶ್ರೇಣಿಯಲ್ಲಿ ಸ್ವಾತಿತ್ತಿರುನಾಳ್ ಮಹಾರಾಜರಿಗೆ ವಿಶೇಷ ಸ್ಥಾನವಿದೆ. ಹಲವಾರು ಭಾಷೆಗಳಲ್ಲಿ ಅವರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಸುಮಾರು ೬೦೦ ಕೀರ್ತನೆಗಳು ಈಗಾಗಲೇ ಗ್ರಂಥರೂಪದಲ್ಲಿ ಬಂದಿವೆ.

ಇವರ ರಚನೆಗಳು, ಕೀರ್ತನೆಗಳು, ಪದ, ವರ್ಣ, ತಿಲ್ಲಾನ, ಪ್ರಬಂಧಗಳೆಂಬ ಐದು ಭಾಗಗಳಿವೆ. ಅವರ ನವರತ್ನಮಾಲಿಕಾ, ನವವಿಧ ಭಕ್ತಿ ಮಂಜರಿ ಮೊದಲಾದವುಗಳಿಗೆ ವಿಶಿಷ್ಟ ಸ್ಥಾನವಿದೆ. ಕೇವಲ ಕೀರ್ತನೆಗಳೇ ಮುನ್ನೂರಕ್ಕೂ ಹೆಚ್ಚಿವೆ.

ನೃತ್ಯಕ್ಕಾಗಿಯೇ ಮೀಸಲಿಡುವಂತೆ ಶೃಂಗಾರರಸ ಪ್ರಧಾನವಾದ ಅನೇಕ ಪದಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆತ್ಮ-ಪರಮಾತ್ಮರ ಸಂಬಂಧವು, ನಾಯಕಿ-ನಾಯಕರ ಸಂಬಂಧವಾಗಿವೆ. ತಿರುವಾಂಕೂರು ರಾಜ ಮನೆತನದ ಕುಲಸ್ವಾಮಿ ಶ್ರೀ ಪದ್ಮನಾಭನೇ ನಾಯಕ! ಉದಾ: 'ಪನ್ನಗೇಂದ್ರಶಯನ' ಎಂಬ ಪದದ ಎಂಟು ಚರಣಗಳಲ್ಲಿ ನಾಯಕಿಯ ಅಂತರ್ಭಾವವನ್ನು ಅದ್ಭುತ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಜತಿಸ್ವರ, ಸ್ವರಜತಿ, ತಾನವರ್ಣ, ಪದವರ್ಣ ಮೊದಲಾದವುಗಳನ್ನು ಇವರು ರಚಿಸಿದ್ದಾರೆ. ಶ್ರೀ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳಂತೆ ಸ್ವಾತಿತ್ತಿರುನಾಳ್ ಅವರೂ ಕೃಗುಚ್ಛವನ್ನು ರಚಿಸಿದ್ದಾರೆ. ಅದುವೇ 'ನವರಾತ್ರಿ ಕೀರ್ತನೆಗಳು'.

ಇವರು ತಮ್ಮ ಕೃತಿಗಳಿಗೆ ತಮ್ಮ ಕುಲಸ್ವಾಮಿಯಾದ ಶ್ರೀ ಪದ್ಮನಾಭಸ್ವಾಮಿಯ ಶ್ರೀನಾಮಗಳೆ ಆದ 'ಜಲಜನಾಭ', 'ಸರಸಿಜನಾಭ', 'ಕಂಜನಾಭ', 'ಸರಸೀರುಹನಾಭ' ಎಂಬ ಮುದ್ರೆಗಳನ್ನಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರ ಹಾಗೂ ಅವರ ಸಮಕಾಲೀನರಾದ ತ್ಯಾಗರಾಜರ ನಡುವೆ ಇದ್ದ ಸ್ನೇಹ-ಸಂಬಂಧವನ್ನು ನೆನೆಸಿಕೊಂಡರೆ ಮೈನವಿರೇಳುವುದು.

(ಸಶೇಷ)

Thursday, January 21, 2010

ಮಹಾರಾಜ ಸ್ವಾತಿತ್ತಿರುನಾಳ್ - ೧



೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು 'ಸಂಗೀತ ಯುಗ' ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿತ್ತಿರುನಾಳ್ ಸಹ ಒಬ್ಬರು.

ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು. ಅಪಾರವಾದ ಸಂಗೀತಜ್ಞಾನವನ್ನೂ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದ ಸ್ವಾತಿತ್ತಿರುನಾಳ್, ಸಂಗೀತ ಪ್ರಪಂಚಕ್ಕೆ ಅಮಿತಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರ ನಂತರ ಸಂಗೀತ ಪ್ರಪಂಚ ಅವರನ್ನು 'ಅಭಿನವ ತ್ಯಾಗರಾಜ' ಎಂಬ ಹೆಸರಿನಿಂದ ಗೌರವಿಸಲಾರಂಭಿಸಿತು.

ಸ್ವತಃ ಮಹಾರಾಜನಾದರೂ ವಿದ್ಯೆಯ ದಾಹ ಇವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.

ಸ್ವಾತಿತ್ತಿರುನಾಳ್ ಅವರ ಕಾಲಕ್ಕೆ ಮೊದಲು, ಕೇರಳದಲ್ಲಿ ಸಂಗೀತವು ತನ್ನದೇ‌ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ 'ಆಟಕಥಾ ಸಂಗೀತ' ಎಂದು ಹೆಸರಿತ್ತು.

ಅಶ್ವಿನಿತ್ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು. ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು.

ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿತ್ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದು.

ತಿರುವಾಂಕೂರು ಅರಸು ಮನೆತನದಲ್ಲಿ ೧೮೧೩ನೇ ಇಸವಿಯ ಏಪ್ರಿಲ್ ೧೬ನೇ ತಾರೀಖು ಸ್ವಾತಿತ್ತಿರುನಾಳ್ ಅವರು ಜನಿಸಿದರು. ಹುಟ್ಟುವಾಗಲೇ ಮಕುಟ ಧರಿಸುವ ಯೋಗ ಇವರಿಗಾಯಿತು. ಇವರ ಹಿಂದಿನ ದೊರೆ ಬಾಲರಾಮವರ್ಮ ಮಹಾರಾಜರ ಕಾಲ ೧೮೧೧ನೇ ಇಸವಿಗೆ ಮುಗಿದು ಅವರಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರ ತಂಗಿ ರಾಣಿ ಸೇತುಕ್ಷ್ಮಿಬಾಯಿಯೇ ಗದ್ದುಗೆ ಏರಿದರು. ಇವರು ಶ್ರೀ ಪದ್ಮನಾಭಸ್ವಾಮಿಯ ಅನನ್ಯ ಭಕ್ತರು. ಆ ಸ್ವಾಮಿಯ ಅನುಗ್ರಹದಿಂದ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಕುಮಾರನೇ ಸ್ವಾತಿತ್ತಿರುನಾಳ್.

ಚಿಕ್ಕಂದಿನಲ್ಲೇ ಮಾತೆಯನ್ನು ಕಳೆದುಕೊಂಡ ಸ್ವಾತಿತ್ತಿರುನಾಳ್ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಶುಕ್ಲ ಪಕ್ಷದ ಚಂದ್ರನಂತೆ ಇವರ ದೇಹ, ಮನಸ್ಸು, ಬುದ್ಧಿ ಎಲ್ಲವೂ ಬೆಳೆದವು, ಬೆಳಗಿದವು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ ಕಲೆ, ಯುದ್ಧಕಲೆ, ಹೀಗೆ ಎಲ್ಲದರಲ್ಲೂ ಮಹಾಮೇಧಾವಿ ಎನಿಸಿಕೊಂಡರು.

೧೬ನೇ ವಯಸ್ಸಿನಲ್ಲಿ, ಚಿಕ್ಕಮ್ಮ ಗೌರಿ ಪಾರ್ವತಿಬಾಯಿ ಅವರು ತಮ್ಮ ಅಮೃತ ಹಸ್ತದಿಂದ ಸ್ವಾತಿತ್ತಿರುನಾಳ್ ಅವರಿಗೆ ಮಕುಟಾಭಿಷೇಕ ಮಾಡಿದರು.

ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ಇವರು ರಾಜ್ಯಭಾರವನ್ನು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿದರು. ಕಲಾವಿದರಿಗೆ ಇವರು ಕೊಡಿತ್ತಿದ್ದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅನೇಕ ಸಂಗೀತಗಾರರಿಗೆ, ಕಲಾವಿದರಿಗೆ ಸ್ವತಃ ಧನಸಹಾಯ ನೀಡಿ ವಿದ್ಯೆಕಲಿಸುವ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭೆ ಇರುವವರಿಗೆ ವಿಶೇಷ ಗೌರವ ಸಲ್ಲಿಸಿ ಪ್ರಶಸ್ತಿ ನೀಡುತ್ತಿದ್ದರು.

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳು ದೇಶಗಳಿಂದೆಲ್ಲ ಸಂಗೀತ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು. ಅವರಲ್ಲಿ ಹಲವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ರಾಜ್ಯವು ಸಂಪತ್ಸಮೃದ್ಧವಾಗಿತ್ತಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾದವು.

(ಸಶೇಷ)

Wednesday, January 20, 2010

ಚಾನೆಲ್ ಸುರಂಗ

ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ನಡುವೆ ಸಾಗರಗರ್ಭ ಸುರಂಗದ ಮೂಲಕ ಸಂಪರ್ಕ ಕಲ್ಪಿಸುವ ಚಾನೆಲ್ ಸುರಂಗ ಮಾರ್ಗ ಯೋಜನೆ ಈ ಶತಮಾನದ ಸಿವಿಲ್ ಇಂಜಿನಿಯರಿಂಗ್ ಸಾಧನೆಗಳಲ್ಲಿ ಅದ್ಭುತವಾದದ್ದು.

೩೭ ಕಿ. ಮೀ. ಅಗಲವಿರುವ ಇಂಗ್ಲೀಷ್ ಕಡಲ್ಗಾಲುವೆ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ನಡುವಣ ವಿಭಜನ ಗೆರೆಯಾಗಿದೆ. ಯುರೋಪಿನ ಇತರ ದೇಶಗಳ ಮಧ್ಯೆ ಇರುವಂತೆ ಇಂಗ್ಲೆಂಡಿನೊಂದಿಗೆ ಜನಸಂಪರ್ಕ, ಸಾಗಾಣಿಕೆ, ವಾಣಿಜ್ಯ ವಹಿವಾಟು ಸಲೀಸಾಗಿ ನಡೆಯಲಿ ಈ ಕಾಲುವೆ ಅಗತ್ಯವಿತ್ತು. ಈ ದೂರವನ್ನು ಕಡಿಮೆ ಮಾಡಿದರೆ ಈ ಎರಡು ದೇಶಗಳ ವಾಣಿಜ್ಯ ಸಂಪರ್ಕ, ಜನರ ಓಡಾಟ ಕ್ಷಿಪ್ರವಾಗುತ್ತದೆ. ಆದರೆ ಕಾಲುವೆಯ ನೀರನ್ನು ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲವಷ್ಟೆ. ಕಾಲುವೆಯ ಕೆಳಗೆ ಭೂಮಿಯಲ್ಲಿ ಸುರಂಗ ಕೊರೆದರೆ?

ಫ್ರೆಂಚ್ ಗಣಿಗಾರಿಕೆ ಇಂಜಿನಿಯರ್ ಆಲ್ಬರ್ಟ್ ಮಥಿಯಾಸ್ ಫೇವಿಯರ್ ೧೮೦೨ರಲ್ಲಿಯೇ ಈ ಸುರಂಗ ಮಾರ್ಗದ ಯೋಜನೆ ಮಂಡಿಸಿದ್ದ. ಸುರಂಗದೊಳಗೆ ಕುದುರೆಗಾಡಿ ಓಡಿಸಬಹುದೆಂದೂ, ಬೆಳಕಿಗಾಗಿ ಮೇಣದ ಬತ್ತಿ ಬಳಸಬಹುದೆಂದೂ ಸಲಹೆ ನೀಡಿದ್ದ. ಮುಂದೆ ಅನೇಕರು ಬೇರೆ ಬೇರೆ ರೀತಿಯ ಉಪಾಯಗಳನ್ನು ಸೂಚಿಸಿದ್ದರು. ಕೆಲವು ಕಾರಣಗಳಿಂದ ಅವು ಯಾವುವೂ ಕಾರ್ಯರೂಪಕ್ಕೆ ಬರಲಿಲ್ಲ.

ಚಾನೆಲ್ ಸುರಂಗ ಮಾರ್ಗ
ಚಿತ್ರ ಕೃಪೆ: ಇಲ್ಲಿಂದ 

೧೯೮೦ರ ದಶಕದಲ್ಲಿ ಸುರಂಗ ಮಾರ್ಗ ಯೋಜನೆಗೆ ಮತ್ತೆ ಜೀವ ಬಂದಿತು. ಎರಡೂ ಸರ್ಕಾರಗಳು ಈ ಬೃಹತ್ ಸಿವಿಲ್ ಇಂಜಿನಿಯರಿಂಗ್ ಯೋಜನೆಗೆ ಸಮ್ಮತಿಸಿದವು. ಫ್ರಾನ್ಸಿನ ಕೆಲೇ ಸಮೀಪದ ಸಂಗಟ್ಟೆಯಿಂದ ಬ್ರಿಟನಿನ ಕೆಂಟ್ ಅಲ್ಲಿರುವ ಫೋಕ್ಸ್ಟೋನ್ ಸಮೀಪದ ಬ್ರೈಟನ್ ಮಧ್ಯೆ ಸುರಂಗ ಮಾರ್ಗದ ನಿರ್ಮಾಣ ಆರಂಭವಾಯಿತು. ಬ್ರಿಟಿಷರು ತಮ್ಮ ಕಡೆಯಿಂದ, ಫ್ರೆಂಚರು ತಮ್ಮ ಕಡೆಯಿಂದ ಸುರಂಗ ಕೊರೆಯುತ್ತ ಬಂದು ೩೩ನೇ ಕಿ. ಮೀ. ಬಿಂದುವಿನಲ್ಲಿ ಸಂಧಿಸುವ ಏರ್ಪಾಡಾಯಿತು. ಈ ಭೇಟಿ ಭೂಗರ್ಭದೊಳಗೆ ನಡೆಯಬೇಕಾಗಿತ್ತಾದ್ದರಿಂದ ಅಂದಾಜು ಹಾಕಿಕೊಂಡಂತೆ, ಅದೇ ಮಟ್ಟದಲ್ಲಿ ಸುರಂಗ ಕೊರೆಯುತ್ತ, ದಿನದ ಪ್ರಗತಿಯ ಬಗ್ಗೆ ಎರಡೂ ಕಡೆಯವರು ವಿಚಾರ ವಿನಿಮಯ ಮಾಡಿಕೊಳ್ಳುತ್ತ, ತಮ್ಮ ಅಂದಾಜಿನಂತೆಯೇ ಮುಂದುವರೆಯುತ್ತಿದ್ದೇವೆಯೇ ಎಂಬುದನ್ನು ಪರೀಕ್ಷಿಸುತ್ತ ಸಾಗಬೇಕಾಗಿತ್ತು. ಸುಮಾರು ೫೦ ಕಿ. ಮಿ. ಪೈಕಿ ೩೭ ಕಿ. ಮೀ. ಇಂಗ್ಲೀಷ್ ಕಾಲುವೆಯ ಕೆಳಗೆ, ಸಮುದ್ರ ತಳದಿಂದ ೭೦ ಮೀ. ಅಷ್ಟು ಆಳದಲ್ಲಿ ಆ ಸುರಂಗ ಸಾಗಬೇಕಿತ್ತು.

ಸುರಂಗ ಮಾರ್ಗ ಕೊರೆಯಲೆಂದೇ ವಿನ್ಯಾಸಗೊಳಿಸಲಾದ ಸುಮಾರು ೬೦೦ಟನ್ಗಳಷ್ಟು ತೂಗುವ ಯಂತ್ರಗಳನ್ನು ಬಳಸಲಾಯಿತು. ಇವು ಘಂಟೆಗೆ ಸುಮಾರು ೯ಮೀ. ಕೊರೆಯಬಲ್ಲವು. ಭೂಮಿಯಡಿಯಲ್ಲಿ ಸಿಕ್ಕಿದ ಕಲ್ಲು, ಮಣ್ಣು, ಕಂದು ಸೀಮೆಸುಣ್ಣ, ಸುಣ್ಣಮಿಶ್ರಿತ ಜೇಡಿಮಣ್ಣನ್ನು ಕೊರೆಯುತ್ತ ಯಂತ್ರಗಳು ಮುಂದುವರೆದವು. ಕಂಪ್ಯೂಟರ್ ಸಹಾಯದಿಂದ ತಾವು ಸಾಗುತ್ತಿರುವ ಮಾರ್ಗ ಸರಿಯೇ ಎಂದು ಪರೀಕ್ಷಿಸುತ್ತಿದ್ದರು. ಹಾಗಿದ್ದರೂ ಅನೇಕ ಬಾರಿ ದಾರಿ ತಪ್ಪಿದುದುಂಟು, ತಿದ್ದಿಕೊಂಡು ಮುಂದುವರೆದುದ್ದುಂಟು.


ಚಿತ್ರ ಕೃಪೆ: ಇಲ್ಲಿಂದ 

ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ಇದು ಜೋಡು ಮಾರ್ಗವಲ್ಲ. ಬದಲು, ಮೂರು ಮಾರ್ಗಗಳು ಪರಸ್ಪರ ಸಮಾನಾಂತರವಾಗಿ ಸಾಗುತ್ತವೆ. ಇವು ಪ್ರತ್ಯೇಕ ಮಾರ್ಗಗಳೆ ಆಗಿದ್ದು ಒಂದೊಂದು ಮಾರ್ಗದ ಮಧ್ಯೆ ಸುಮಾರು ೩೦ಮೀ. ಅಂತರವಿದೆ. ಎರಡು ಮುಖ್ಯ ಮಾರ್ಗಗಳು ತಲಾ ೭.೬ ಮೀ. ವ್ಯಾಸದ್ದಾಗಿರುತ್ತದೆ. ಅತಿ ವೇಗವಾಗಿ ಸಾಗುವ ವಿದ್ಯುತ್ ರೈಲಿನ ಆಘಾತವನ್ನು ತಾಳಿಕೊಳ್ಳುವಂತೆ ಗಟ್ಟಿಯಾದ ಕಾಂಕ್ರೀಟ್ ಸಾರಣೆ ಮಾಡಲಾಗಿದೆ. ಮಧ್ಯದ್ದು ೪.೮ಮೀ. ವ್ಯಾಸದ ಸರ್ವೀಸ್ ಟನಲ್. ಇದನ್ನು ತುರ್ತು ಸಲಕರಣೆಗಳ ಸಾಗಣೆ, ಅಗ್ನಿಶಾಮಕ ವ್ಯವಸ್ಥೆ ಮತ್ತು ದುರಸ್ತಿಗಾಗಿ ಬಳಸಬಹುದಾಗಿದೆ. ನೀರು, ಚರಂಡಿ, ಗಾಳಿ ವ್ಯವಸ್ಥೆಯೊಂದಿಗೆ ಪ್ರತಿ ೩೭೫ ಮೀ. ಅಂತರದಲ್ಲಿ ಇರುವ ಅಡ್ಡ ಮಾರ್ಗಗಳು ಈ ಮೂರು ಸುರಂಗಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ. ಇದಕ್ಕೆಂದೇ ತಯಾರಿಸಲಾದ ಬೃಹತ್ ಯಂತ್ರಗಳ ಸಹಾಯದಿಂದ ಈ ಸುರಂಗ ಮಾರ್ಗವನ್ನು ಕೊರೆಯಲಾಯಿತು.

ತಮ್ಮ ಅಂದಾಜಿನಂತೆ, ಎರಡೂ ಕಡೆಯಿಂದ ಸುರಂಗ ಕೊರೆಯುತ್ತ ಬಂದ ಕಾರ್ಮಿಕರು, ಇಂಜಿನಿಯರುಗಳು ೧೯೯೦ರ ಅಕ್ಟೋಬರ್ ೩೦ರಂದು ಸಂಧಿಸಿದರು. ೧೯೯೩ರ ಜೂನ್ ತಿಂಗಳಿನಲ್ಲಿ ರೈಲು ಪ್ರಾರಂಭಿಕ ಓಟ ನಡೆಸಿತು. ಈಗ ಆ ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಬ್ರಿಟನಿನ ಬ್ರೈಟನ್ ನಿಲ್ದಾಣದಿಂದ ಫ್ರಾನ್ಸಿನ ಸಂಗಟ್ಟೆ ನಿಲ್ದಾಣದವರೆಗಿನ ೫೦ಕಿ.ಮೀ. ದೂರವನ್ನು ಸುಮಾರು ೩೫ ನಿಮಿಷಗಳಲ್ಲಿ ಕ್ರಮಿಸಬಹುದು. ಕೆಲವರು ತಮ್ಮ ವಾಹನವನ್ನೂ ರೈಲಿನಲ್ಲಿ ಸಾಗಿಸಿ, ಅಲ್ಲಿಂದ ಮುಂದೆ ತಮ್ಮ ಪ್ರಯಾಣ ಮುಂದುವರೆಸುತ್ತಾರೆ.

Monday, January 18, 2010

ಪಿರಮಿಡ್

ಪಿರಮಿಡ್ 


ಎಲ್ಲರೂ  ಕಾಲಕ್ಕೆ ಹೆದರಿದರೆ, ಕಾಲವೇ ಪಿರಮಿಡ್ಗಳಿಗೆ ಅಂಜುತ್ತದೆ ಎಂಬ ಗಾದೆ ಮಾತಿದೆ. ಚೌಕಾಕಾರದ ತಳ, ತ್ರಿಕೋಣಾಕಾರದ ಪಾರ್ಶ್ವಗಳು, ಈ ಪಾರ್ಶ್ವಗಳು ಮೇಲೇರುತ್ತ ಒಂದುಗೂಡಿ ಪಿರಮಿಡ್ ಶಿಖರವಾಗುತ್ತದೆ. ಪಿರಮಿಡ್ಗಳ ನಿರ್ಮಾಣಾವಧಿ ಸುಮಾರು ಕ್ರಿ. ಪೂ. ೨೫೭೦ ಇಂದ ಕ್ರಿ. ಪೂ. ೨೬೫ರವರೆಗೆ. ಕಳೆದ ಸುಮಾರು ೫೦೦೦ ವರ್ಷಗಳಿಂದ ಪ್ರಕೃತಿಯ ಎಲ್ಲ ಪ್ರಕೋಪಗಳನ್ನು ಸಹಿಸಿಕೊಂಡು ನಿಂತಿರುವ ಈ ಭವ್ಯ ಗೋಪುರಗಳು ಆಗಿನ ಕಾಲದ ಚಕ್ರವರ್ತಿಗಳ, ಸಾಮ್ರಾಜ್ಞಿಯರ ಸಮಾಧಿಗಳಾಗಿವೆ.

ಪಿರಮಿಡ್
ಚಿತ್ರ ಕೃಪೆ: ಇಲ್ಲಿಂದ 

ಈಗ ಈಜಿಪ್ಟಿನಲ್ಲಿ ಉಳಿದಿರುವ ಸುಮಾರು ೪೦ ಪಿರಮಿಡ್ಗಳ ಪೈಕಿ ಕೈರೋ ನಗರದ ಸಮೀಪದಲ್ಲಿರುವ ಪಿರಮಿಡ್ಗಳು ಪ್ರವಾಸಿಗಳನ್ನು ಅಧಿಕವಾಗಿ ಆಕರ್ಷಿಸುತ್ತವೆ. ಕ್ರಿ. ಪೂ. ೨೬೫೦ರಲ್ಲಿ ನಿರ್ಮಾಣಗೊಂಡ ಪಿರಮಿಡ್ ಸಕ್ಕಾರ ಎಂಬಲ್ಲಿದೆ. ಚಕ್ರವರ್ತಿ ಜೋಸೆರ್ ಅಪ್ಪಣೆಯ ಮೇರೆಗೆ ಇಮ್ಹೊಟೆಪ್ ಎಂಬ ವಾಸ್ತುಶಿಲ್ಪಿ ಇದನ್ನು ನಿರ್ಮಿಸಿದ. ಈತ ರಾಜ್ಯದ ಒಬ್ಬ ವೈದ್ಯ ಮಂತ್ರಿಯೂ ಆಗಿದ್ದ. ಸಕ್ಕಾರ ಪಿರಮಿಡ್ ೬೨ ಮೀ. ಎತ್ತರವಿದೆ. ಎಲ್-ಗಿಜಾ ಸಮೀಪ ಅತ್ಯಂತ ಪ್ರಸಿದ್ಧವಾದ ಹಾಗೂ ಭವ್ಯವಾದ ಮೂರು ಪಿರಮಿಡ್ಗಳಿವೆ. ಗಿಜಾ ಪಿರಮಿಡ್ಗಳು ಈಜಿಪ್ಟಿನ ಫ್ಲಾರೊ ದೊರೆಗಳ ಭವ್ಯತೆ ಮತ್ತು ಶಕ್ತಿ ಸಾಹಸಗಳ ಕುರುಹುಗಳೆಂದು ಪರಿಗಣಿಸಲಾಗಿದೆ. ಕ್ರಿ. ಪೂ. ೨೫೯೦ರಲ್ಲಿ ನಿರ್ಮಾಣಗೊಂಡ ಖುಫು ಪಿರಮಿಡ್ ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದೆ. ಒಟ್ಟು ೧೩ಎಕರೆ ವಿಸ್ತೀರ್ಣವಿರುವ ಇದು ನಿರ್ಮಾಣಗೊಂಡಾಗ ೧೪೭ಮೀ. ಎತ್ತರವಿತ್ತು. ಆ ರಾಜನ ತರುವಾಯ ಪಟ್ಟಕ್ಕೆ ಬಂದ ಆತನ ಮಗ ಅದರ ಸಮೀಪದಲ್ಲಿಯೇ ತನಗಾಗಿ ಒಂದು ಪಿರಮಿಡ್ ನಿರ್ಮಿಸಿಕೊಂಡ. ಅದರ ಎತ್ತರ ೧೩೬.೪ಮೀ. ಮುಂದೆ ಪಟ್ಟಕ್ಕೆ ಬಂದ ಮತ್ತೊಬ್ಬ ರಾಜನೂ ೭೩.೧ಮೀ. ಎತ್ತರದ ಪಿರಮಿಡ್ ನಿರ್ಮಿಸಿಕೊಂಡ.

ರಾಜರುಗಳು ಇನ್ನೂ ದೃಢಕಾಯರಾಗಿದ್ದಾಗಲೇ ಅವರಿಗಾಗಿ ಪಿರಮಿಡ್ ನಿರ್ಮಾಣ ಪ್ರಾರಂಭವಾಗುತ್ತಿತ್ತು. ಪಿರಮಿಡ್ಗಳಿಗೆ ಬಳಸಲಾಗಿರುವ ಸುಣ್ಣಕಲ್ಲು ಮತ್ತು ಬೆಣಚುಕಲ್ಲು ದಿಂಡುಗಳು ಪ್ರತಿಯೊಂದೂ ಸುಮಾರು ಮೂರರಿಂದ ಹದಿನೈದು ಟನ್ ಭಾರದವು. ಇಷ್ಟು ಭಾರವಾದ ದಿಂಡು ಕಲ್ಲುಗಳನ್ನು ಬಹಳ ದೂರ ಕಲ್ಲುಗಣಿಗಳಿಂದ ನೈಲ್ ನದಿಯಲ್ಲಿ ಸಾಗಿಸಿ ತಂದು, ಪಿರಮಿಡ್ ನಿರ್ಮಾಣದ ಸ್ಥಳಗಳಿಗೆ ಗಾಡಿಗಳ ಮೂಲಕ ಸಾಗಿಸಿರಬಹುದೆಂದು ಹೇಳಲಾಗಿದೆ. ಈ ಬೃಹತ್ ಪಿರಮಿಡ್ಗಳನ್ನು ನಿರ್ಮಿಸಲು ಎಷ್ಟು ವರ್ಷ ತೆಗೆದುಕೊಂಡಿರಬಹುದು; ಅಷ್ಟು ಭಾರದ ದಿಂಡುಗಳನ್ನು ಎತ್ತರಕ್ಕೆ ಏರಿಸಲು ಯಾವ ಕ್ರಮ ಅನುಸರಿಸಿರಬಹುದು, ಕಟ್ಟಿದವರಿಗೆ ಏನೆಲ್ಲಾ ತೊಡಕುಗಳು ಎದುರಾಗಿರಬಹುದು,ಅವನ್ನು ಅವರು ಹೇಗೆ ನಿಭಾಯಿಸಿರಬಹುದು - ಎಂಬುದನ್ನು ಇಂದಿನ ಅಧುನಿಕ ಕ್ರೇನುಗಳ ಯುಗದಲ್ಲಿ ಕಲ್ಪಿಸಿಕೊಳ್ಳುತ್ತ ಹೋದಂತೆ ಅಂದಿನ ನಿರ್ಮಾಣಕಾರರ ಕಾರ್ಯ ತಂತ್ರದ ಬಗ್ಗೆ ನಮಗೆ ಅಚ್ಚರಿಯಾಗದೆ ಇರುವುದಿಲ್ಲ.

ಒಂದು ಅಂದಾಜಿನಂತೆ, ಕಲ್ಲು ಚಪ್ಪಡಿಗಳನ್ನು ನಿರ್ಮಾಣ ಸ್ಥಳಕ್ಕೆ ಸಾಗಿಸಿವ ಕೆಲಸದಲ್ಲಿ ಒಂದು ಲಕ್ಷ ಕೆಲಸಗಾರರು, ಮತ್ತು ನಿರ್ಮಾಣ ಸ್ಥಳದಲ್ಲಿ ಪ್ರತಿದಿನ ಸುಮಾರು ನಲವತ್ತು ಸಾವಿರ ಮಂದಿ ಕೆಲಸ ಮಾಡುತ್ತಿದ್ದರು. ಒಂದು ಪಿರಮಿಡ್ ನಿರ್ಮಾಣಕ್ಕೆ ಆಗಿರಬಹುದಾದ ವೆಚ್ಚವನ್ನು ಪ್ರಾಯಶಃ ಊಹಿಸಿಕೊಳ್ಳಲು ಸಾಧ್ಯವಾಗದು.

ಪಿರಮಿಡ್ಗಳು ಆಸಕ್ತರಿಗೆ ಸರ್ವಕಾಲಕ್ಕೂ ಅಧ್ಯಯನದ ವಿಷಯಗಳಾಗುತ್ತಾ ಬಂದಿವೆ. ಅವುಗಳನ್ನು ಕುರಿತು ದಂತಕಥೆಗಳೂ ಹೇರಳವಾಗಿವೆ.

ಇವುಗಳ ಒಳಭಾಗದ ರಚನೆ ಅದ್ಭುತವಾಗಿದೆ. ಅಲ್ಲಲ್ಲಿ ಭವ್ಯವಾದ ವಿಶಾಲ ಮಂಟಪಗಳು, ಸ್ತಂಭಗಳು, ಗೋಡೆಗಳ ಮೇಳೆ ವರ್ಣಚಿತ್ರಗಳು, ಪುರಾತನ ಚಿತ್ರಲಿಪಿಯಲ್ಲಿರುವ ಸೂಚನೆ - ಸಂಕೇತಗಳು, ಉಬ್ಬು ಚಿತ್ರಗಳು, ಭವ್ಯ ವಿಗ್ರಹಗಳು, ಪಿರಮಿಡ್ ಗರ್ಭಗೃಹಕ್ಕೆ ಸಾಗುವ ಏರುದಾರಿ, ಮುಂದೆ ನಾಲ್ಕಾರು ಕಡೆ ಚದುರುವ ಕವಲು ದಾರಿಗಳು, ಹೊರಗಿನಿಂದ ಬೆಳಕು ಬಂದು ಚಿತ್ರಗಳ ಬಣ್ಣ ಅಳಿಸಿ ಹೋಗದಂತೆ ಅವನ್ನೂ ಬೆಚ್ಚಗಿರಿಸುವಂತೆ ನಿರ್ಮಿಸಿರುವ ಬೆಳಕಿಂಡಿಗಳು, ಗಾಳಿಕಿಂಡಿಗಳು.

ಪಿರಮಿಡ್ (Typical)
ಚಿತ್ರ ಕೃಪೆ: ಇಲ್ಲಿಂದ

ಪಿರಮಿಡ್ ಕಾಂಪ್ಲೆಕ್ಸ್
ಚಿತ್ರ ಕೃಪೆ: ಇಲ್ಲಿಂದ

ಈಜಿಪ್ಟಿನವರು ಮಾತ್ರವಲ್ಲದೆ ಇಥಿಯೋಪಿಯದವರು, ಬ್ಯಾಬಿಲೋನಿಯದವರು ಮತ್ತು ಮಾಯಾ ಜನರು ಸಹ ಪಿರಮಿಡ್ಗಳನ್ನು ನಿರ್ಮಿಸಿದ್ದಾರೆ. ಇವು ರಾಜರ ಸಮಾಧಿಗಾಗಿ, ಕಾಲ ಮಾಪಕಗಳಾಗಿ, ದೇವಾಲಯಗಳಾಗಿ ಬಳಕೆಯಲ್ಲಿದ್ದವು. ಪಿರಮಿಡ್ಗಳನ್ನು ರಾಜಗೋಪುರಗಳಾಗಿ ನಿರ್ಮಿಸುವ ಪರಿಪಾಠ ಹೇಗೆ ರೂಢಿಯಲ್ಲಿ ಬಂದಿತು ಎಂಬುದನ್ನು ಅಂದಾಜು ಮಾಡಲು ಸಾಧ್ಯವಿಲ್ಲವಾದರೂ, ನೈಲ್ ನದಿಯ ಬಯಲಿನ ನಾಗರಿಕತೆ ಸುಮಾರು ೫೦೦೦ ವರ್ಷಗಳಷ್ಟು ಹಿಂದೆಯೇ ಬೃಹತ್ ಪಿರಮಿಡ್ ಗೋಪುರಗಳನ್ನು ನಿರ್ಮಿಸುವಷ್ಟು ತಂತ್ರಜ್ಞಾನ ಪಡೆದಿತ್ತು ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

Friday, January 01, 2010

ಹೊಸ ವರ್ಷ ಮತ್ತು ಚಂದ್ರ ಗ್ರಹಣ

ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು..

ಹೊಸ ವರುಷ ತರಲಿ ಹರುಷ

ಚಂದ್ರ ಗ್ರಹಣ

ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ..

ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ್ದು.. ಹಾಗಾಗಿ ನೀಲಿ ಎಫೆಕ್ಟ್ ಇಲ್ಲ..