My Blog List

Sunday, August 08, 2021

ಚೌಪದಿ - 178

ಕಾಲನಿಗೆ ಕೈಮುಗಿದು ಬದುಕುವಾ ಜನರೆಲ್ಲ। 
ಬಾಲವನು ಹಿಡಿಯುತ್ತ ನಡೆದಿಹರು ಹಿಂದೆ॥ 
ಓಲೆಯನು ಮರೆಯುತ್ತ ಭಯವಿರದೆ ಸಾಗಿಹರು। 
ಮೂಲವನ ನೋಡದೆಯೆ - ಅನಿಕೇತನ॥ 178 ॥ 

Saturday, August 07, 2021

ಚೌಪದಿ - 177

ಮನದಲ್ಲಿ ಯೋಜನೆಗಳನು ಮಾಡಿ ಮಾತಾಡೊ। 
ಜನರಿಂದ ಬಲುದೂರ ಹೋಗುವುದು ಕಷ್ಟ॥ 
ಮನವನ್ನು ನಿಜವಾಗಿ ಕೆಡಿಸುವಾ ಕಲೆಯನ್ನು। 
ಮನದಟ್ಟು ಮಾಡಿಹರೊ - ಅನಿಕೇತನ॥ 177 ॥ 

Friday, August 06, 2021

ಚೌಪದಿ - 176

ಅನುದಿನವು ಹೊಗಳುಭಟ್ಟರ ಜೊತೆಗೆ ನಲಿಯುವರು। 
ಮನನೊಂದು ಕೊರಗುವರು ತೆಗಳಿದರೆ ತಮಗೆ॥ 
ಜನರೆಲ್ಲ ತಮ್ಮನ್ನು ಹೀಯಾಳಿಸುವರೆಂದು। 
ದಿನವು ಗೋಳಾಡುವರೊ - ಅನಿಕೇತನ॥ 176 ॥ 

ಚೌಪದಿ - 175

ಹಗೆಯನ್ನು ಸಾಧಿಸುತ ಗೆಳೆಯರನು ನೋಯಿಸುವ। 
ಬಗೆಬಗೆಯ ಜನರಿಂದ ಕಲಿಯುವೆವು ಪಾಠ॥ 
ಸೊಗವಿರದ ಮನದಲ್ಲಿ ಮತ್ಸರವು ತುಂಬಿರಲು। 
ಮೊಗದಲ್ಲಿ ನಗುವಿರದೊ - ಅನಿಕೇತನ॥ 175 ॥ 

Thursday, August 05, 2021

ಚೌಪದಿ - 174

ಔತಣಕೆ ಬಂದವರು ಮೆರೆದಿಹರು ಕೊಬ್ಬಿನಲಿ। 
ಸೋತರೂ ಜಂಬವನು ತೋರಿಹರು ಜಗಕೆ॥ 
ಹೂತಿಹರು ವಿಷಭರಿತ ಸಸಿಯನ್ನು ಮನದೊಳಗೆ। 
ಪಾತಿಯಲಿ ಹಗೆಯಿಹುದೊ - ಅನಿಕೇತನ॥ 174 ॥ 

ಚೌಪದಿ - 173

ಇಲ್ಲ ಸಲ್ಲದ ನೆಪವನೊಡ್ಡುವಾ ಜನರನ್ನು। 
ಮೆಲ್ಲಮೆಲ್ಲಗೆ ದೂರ ಸರಿಸಿದರೆ ಸುಖವು॥ 
ಎಲ್ಲ ಬಲ್ಲವರನ್ನು ನಂಬದಿದ್ದರೆಯೊಳಿತು। 
ಎಲ್ಲರನು ನೋಡುತಿರೊ - ಅನಿಕೇತನ॥ 173 ॥ 

ಚೌಪದಿ - 172

ಮಾತುಗಳು ಹಿತವಿರದೆ ಸಂಬಂಧಗಳು ಮುರಿದು। 
ಜೋತು ಬಿದ್ದಿವೆ ನೋಡು ಸರಪಳಿಯು ಕಳಚಿ॥ 
ಮಾತಿನಲಿ ಮಿತವಿದ್ದು ಭಾವನೆಯು ದಿಟವಿರಲು। 
ಯಾತನೆಯು ಕರಗುವುದೊ - ಅನಿಕೇತನ॥ 172 ॥ 
Monday, August 02, 2021

ಚೌಪದಿ - 171

ಹಿಂಸೆಯನು ಮಾಡುತ್ತ ಜೀವನವ ಕಳೆಯದಿರು। 
ಹಿಂಸೆಯಿಂದಲಿ ಸಿಗದು ಸುಖವದುವು ನಿನಗೆ॥ 
ಹಿಂಸೆಯಾ ನಡವಳಿಕೆ ತರವಲ್ಲವದು ಪರಮ-। 
ಹಿಂಸೆಯಲಿ ನೋವಿಹುದೊ - ಅನಿಕೇತನ॥ 171 ॥ 

Sunday, August 01, 2021

ಚೌಪದಿ - 170

ವನದಲ್ಲಿ ಹುಲಿ ಸಿಂಹ ಕರಡಿಗಳು ಕೋತಿಗಳು। 
ಮನಬಿಚ್ಚಿ ಮಾತುಗಳನಾಡುತಾ ನಗಲು॥ 
ಸನಿಹದಲೆ ಕುಳಿತಿರುವ ನರಿಯೊಂದು ಕೊರಗುತ್ತ। 
ಮನದಲ್ಲೆ ಗೊಣಗಿಹುದೊ - ಅನಿಕೇತನ॥ 170 ॥