My Blog List

Thursday, April 29, 2021

ಚೌಪದಿ - 89

ಬಾಡಿರುವ ಮನಸುಗಳನೊಂದುಕಡೆ ಸೇರಿಸಲು। 
ಹಾಡಿದರು ರಾಗದಲಿ ಹಲವಾರು ಜನರು॥ 
ಹಾಡುಗಳ ಹಾಡುತ್ತ ಬೇಸರವ ಕಳೆಯುತ್ತ। 
ಆಡುತಂತ್ಯಾಕ್ಷರಿಯನನಿಕೇತನ॥ 89 ॥ 

Wednesday, April 28, 2021

ಚೌಪದಿ - 88

ಅಣುವಣುವಿನಲಿ ನಗೆಯು ಮೂಡುತಿರೆ ದಿನದಿನವು। 
ಕಣಕಣದಲೂ ಕೂಡ ಜಿನುಗುವುದು ಮನವು॥ 
ರಣಭೀಕರತೆಯಲ್ಲು ರಸಪಾಕದಂತಿರಲು। 
ಮಣಭಾರವಿಳಿಯುವುದೊ - ಅನಿಕೇತನ॥ 88 ॥ 

ಚೌಪದಿ - 87

ಕೆಸರೆರೆಚಿ ಹಾರಾಡಿ ಗಾಳಿಯಲಿ ಗುದ್ದಾಡಿ। 
ಕಸವನ್ನು ತಿನ್ನುತ್ತ ಹೊಲಸನುಗುಳುವರು॥ 
ಬಿಸಿಯುಸಿರಿನಲಿ ತಾವು ಮಾಡಿದ್ದೆ ಸರಿಯೆನುತ। 
ಮಸಿಬಳಿದುಕೊಳ್ಳುವರು - ಅನಿಕೇತನ॥ 87 ॥ 

ವೇದಗಳು, ಉಪನಿಷತ್ತುಗಳು

|ವೇದಗಳು , ಉಪನಿಷತ್ತುಗಳು| 
ಸನಾತನ ಧರ್ಮ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಚರ್ಚೆಯ ವಿಷಯ ಬಂದಾಗ "ವೇದಗಳು, ಉಪನಿಷತ್ತು"ಗಳ ಉಲ್ಲೇಖ ಸಾಮಾನ್ಯ. ಹಾಗಾದರೆ, 'ವೇದ' ಎಂದರೇನು? ಇದನ್ನು ರಚಿಸಿದ್ದು ಯಾರು? ನಾವು ಇದರ ಬಗ್ಗೆ ತಲೆಕೆಡಿಕೊಳ್ಳುವ ಗೋಜಿಗೆ ಹೋಗದಿದ್ದರೂ, ವೇದಗಳು, ಉಪನಿಷತ್ತುಗಳ ಬಗ್ಗೆ ಸಂದರ್ಭಕ್ಕನುಸಾರವಾಗಿ ಆಗಾಗ್ಗೆ ಉಲ್ಲೇಖ ಮಾಡುವುದು ನಮ್ಮಲ್ಲಿ ರೂಢಿಯಲ್ಲಿದೆ. 

|ವೇದ| 
ನಾನೇನು ವೇದಗಳ ಅಧ್ಯಯನ ಮಾಡಿದವನಲ್ಲ. ಕೆಲವು ಉಪನ್ಯಾಸಗಳ ಮೂಲಕ ಕೇಳಿದ್ದು (ಶೃತಿ) ಅವು ನನ್ನ ಜ್ಞಾಪಕದಲ್ಲಿ (ಸ್ಮೃತಿ) ಉಳಿದಿರುವುದು ಮತ್ತು ಅಲ್ಪ ಸ್ವಲ್ಪ ಓದಿ ಗ್ರಹಿಸಿದ್ದು. ಆದರೆ, ಅವುಗಳನ್ನು ಎಷ್ಟರಮಟ್ಟಿಗೆ ಅರ್ಥೈಸಿಕೊಂಡಿದ್ದೇನೆ ಹಾಗೂ ಲೇಖನಿಸುತ್ತಿದ್ದೇನೆ? ನಿಖರವಾದ ಉತ್ತರವಿಲ್ಲ. ವೇದಗಳ ಬಗ್ಗೆ ಅಲ್ಪವಾಗಿ ಗ್ರಹಿಸಿ ಅರ್ಥೈಸಿಕೊಂಡದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ. 

'ವೇದ' ಎಂಬುದರ ಸಂಕ್ಷಿಪ್ತ ಅರ್ಥವೇ - ಜ್ಞಾನ.
ಯಾವುದರ ಬಗ್ಗೆ ಜ್ಞಾನ - ಜೀವನ, ಬದುಕಿನ ಜ್ಞಾನ.
ಇವು, ಜೀವ,ಜಗತ್ತು,ಪರತತ್ವ (ಬ್ರಹ್ಮ, ಶ್ರೀಹರಿ, ಈಶ್ವರ) ಇದೇ 'ತ್ರಿಕೂಟ' ರಹಸ್ಯ.
ಜೀವ ಮತ್ತು ಜಗತ್ತು ಇವೆರಡು ನಮ್ಮ ಕಣ್ಣಿಗೆ ಕಾಣುವಂತಹುದು. 
ಇನ್ನು ಪರತತ್ವ ಯಾವುದು?
ಈ 'ಜೀವ' ಮತ್ತು 'ಜಗತ್ತು' ಇರುವುದಾದಲ್ಲಿ ಅದರ ಸೃಷ್ಟಿಕರ್ತ, ಅಗೋಚರ ಶಕ್ತಿ,ಇಂದ್ರಿಯಗಳ ಅನುಭವಕ್ಕೆ ಬಾರದ ಚೇತನ ಒಂದಿರಬೇಕಲ್ಲವೇ.! ಅದೇ ಬ್ರಹ್ಮ, ಶ್ರೀಹರಿ, ಈಶ್ವರ ಅಥವ ಪರತತ್ವ. 

ವೇದಗಳನ್ನು ರಚಿಸಿದ್ದು ಒಬ್ಬಿಬ್ಬರಲ್ಲ, ಅದು 'ಅಪೌರುಷೇಯ'ವಾದವು. ಆದರೆ, ಅವುಗಳ, ಅಸ್ತಿತ್ವದ ಮೂಲ ವಸ್ತು ನಮಗೆ ದೊರೆತಿರುವ ಕಾರಣದಿಂದ ಅವನ್ನು ಆಯಾ ಕಾಲಕ್ಕೆ, ಅವಶ್ಯಕತೆಗಳಿಗೆ ಅನುಗುಣವಾಗಿ ತಕ್ಕ ಮಾರ್ಪಾಡುಗಳೊಂದಿಗೆ, ಜೀವನದ ಸತ್ವಗಳು, ಸತ್ಯತೆಯನ್ನು ಕಂಡುಕೊಂಡ ಮಹಾ ಜ್ಞಾನಿಗಳು, ತಪಸ್ವಿಗಳು, ಋಷಿ ಮುನಿಗಳು ರಚಿಸಿದ್ದು ಈ ವೇದಗಳು.
ಹಾಗಿದ್ದಲ್ಲಿ ಉಪನಿಷತ್ತುಗಳ ವಿವರಣೆ ಏನು?

ವೇದದ ಸಂಕ್ಷಿಪ್ತ ತಿರುಳು, ಸಾರವೇ ಉಪನಿಷತ್ತುಗಳು.
ವೇದಗಳು ಎಷ್ಟು?
ಮುಖ್ಯವಾದುವು ನಾಲ್ಕು.
೧.ಋಗ್ವೇದ, ೨.ಯಜುರ್ವೇದ, ೩.ಸಾಮವೇದ, ೪.ಅಥರ್ವವೇದ (ಅಥರ್ವಣ).
ಇವುಗಳಲ್ಲಿ ಕೇವಲ ಯಜುರ್ವೇದದಲ್ಲಿ ಮಾತ್ರವೇ ಎರಡು ಕವಲು ಅಥವಾ ಉಪ-ವೇದಗಳುಂಟು.
೧. ಕೃಷ್ಣ ಯಜುರ್ವೇದ.
೨. ಶುಕ್ಲ ಯಜುರ್ವೇದ.
ಯಜುರ್ವೇದವು ಎರಡು ಕವಲಾದದ್ದು ಹೇಗೆ, ಏಕೆ?

ಜೀವ - ನಾನು
ಜಗತ್ತು - ನಮ್ಮೊಂದಿಗೆ ಇರುವುದು
ಪರತತ್ವ - ಕಣ್ಣಿಗೆ ಕಾಣದ ಶಕ್ತಿ,ಬೆಳಕು.
ಇವನ್ನು ಅನೇಕ ಋಷಿ ಮುನಿಗಳು, ತಪಸ್ವಿಗಳು, ಜ್ಞಾನಿಗಳು ಕಂಡುಕೊಂಡ ಸತ್ಯ.
ಇವು ನಿತ್ಯ ಜೀವನದ ನಿಸ್ವಾರ್ಥ  ಬದುಕಿನ ಜ್ಞಾನಮಾರ್ಗ - ವೇದಗಳಾದವು.
ಈ ಮಾರ್ಗಗಳು ಆಯಾ ಕಾಲಘಟ್ಟ, ಪ್ರಾಂತ್ಯ, ವಿವೇಚನೆ, ಅನುಭವ, ಜ್ಞಾನಕ್ಕೆ ತಂಕಂತೆ ಕವಲೊಡೆದು ವಿವಿಧ ಭಾಗಗಳಾದವು. ಇವು ಕೆಲವೊಮ್ಮೆ ನಿಜ ಬದುಕಿನ ಮಾರ್ಗಕ್ಕೆ ಯಾವುದು ಸರಿ, ಯಾವುದು ಸರಿಯಿಲ್ಲದ್ದು ಎಂಬ ತಿಳುವಳಿಕೆಯ ನ್ಯೂನತೆ, ಆಚರಣೆ, ವಿಧಿವಿಧಾನಗಳಲ್ಲಿ ಗೊಂದಲಗಳು ಉಂಟಾದಾಗ ಅವುಗಳನ್ನು ಒಟ್ಟು ಸಂಗ್ರಹಿಸಿ, ಪರಿಶೀಲಿಸಿ, ಬೇಕು ಬೇಡಗಳನ್ನು ಪರಿಷ್ಕರಿಸಿ ನಾಲ್ಕು  ಭಾಗಗಳನ್ನಾಗಿ ಮಾಡಿದವರು 'ಕೃಷ್ಣ ದ್ವೈಪಾಯನರು' ಹಾಗೆ ವೇದಗಳನ್ನು ಭಾಗಗಳಾಗಿ ವಿಂಗಡಿಸಿದ್ದರಿಂದ ಕೃಷ್ಣ-ದ್ವೈಪಾಯನರು - 'ವೇದ-ವ್ಯಾಸ'ರಾದರು. 

| ಯಜುರ್ವೇದದ ಕವಲು |
ವೇದಗಳು ನಾಲ್ಕು ಭಾಗಗಳಾಗಿ ವಿಂಗಡಣೆ ಆದನಂತರ, ಜ್ಞಾನಿಗಳು ಆಯಾ ಪ್ರಾಂತ್ಯ, ಆಸಕ್ತಿ, ನಂಬಿಕೆ, ಇಚ್ಛೆಯಂತೆ  ವಿಧಿವಿಧಾನಗಳ ಆಚರಣೆಯಲ್ಲಿ ಒಂದನ್ನು ಆಯ್ದುಕೊಂಡು ತಮ್ಮನ್ನೂ, ತಮ್ಮ ಶಿಷ್ಯರು, ಅನುಯಾಯಿಗಳನ್ನು ಒಟ್ಟುಗೂಡಿಸಿ ಜ್ಞಾನಮಾರ್ಗದಲ್ಲಿ ಮುಂದುವರೆದರು.

| ವೈಶಂಪಾಯನರು | 

ಯಜುರ್ವೇದದ ಆರಾಧಕರು,ಜ್ಞಾನಿಗಳು, ಗುರುಗಳು. ಇವರ ಶಿಷ್ಯಗಣದಲ್ಲಿ ಪ್ರಮುಖರಾದವರು ಯಾಜ್ಞವಲ್ಕ್ಯರು. ಅಸಾಧಾರಣ ಪ್ರತಿಭೆ, ತೀಕ್ಷ್ಣವಾದ ಗ್ರಹಣಶಕ್ತಿ, ಜ್ಞಾನ ಉಳ್ಳವರು ಯಾಜ್ಞವಲ್ಕ್ಯರು.

ಒಂದೊಮ್ಮ ಗುರುಗಳಾದ ವೈಶಂಪಾಯನರಿಗೂ, ಶಿಷ್ಯರಾದ ಯಾಜ್ಞವಲ್ಕ್ಯರಿಗೂ ಒಂದು ಶ್ಲೋಕ, ಮಂತ್ರ ಪ್ರಯೋಗದ ಬಗ್ಗೆ ಸಣ್ಣದೊಂದು ಭಿನ್ನಾಭಿಪ್ರಾಯ ಪ್ರಾರಂಭವಾಯಿತು. ಅದು ತರ್ಕ, ವಿವಾದ, ವಾಗ್ವಾದದ ಮಟ್ಟಕ್ಕೆ ಏರಿದಾಗ ಕೋಪಗೊಂಡ ವೈಶಂಪಾಯನರು, ಗುರುಭಕ್ತಯಿಲ್ಲದ ನಿನ್ನಂತಹ ಶಿಷ್ಯ ಗುರು ದ್ರೋಹ ಬಗೆದಂತೆ, ಹಾಗಾಗಿ ನೀನು ನನ್ನಲ್ಲಿ ಇಲ್ಲಿಯತನಕ ಕಲಿತ ವಿದ್ಯೆಯನ್ನು ವಾಂತಿ (ವಮನ) ಮಾಡಲು ಆಗ್ರಹಿಸಿದರು. [ಇಲ್ಲಿ ವಿದ್ಯೆಯನ್ನು ವಾಂತಿ ಮಾಡುವುದು ಎಂಬುದರ ಗೂಢಾರ್ಥ, ಕಲಿತು ಅರಗಿಸಿಕೊಂಡ ವಿದ್ಯೆಯನ್ನು ಹೊರಹಾಕುವುದು ಎಂಬ ಅರ್ಥ] ಗುರುಗಳ ಆಗ್ರಹದಂತೆ ಯಾಜ್ಞವಲ್ಕ್ಯರು ತಾವು ಕಲಿತ ಯಜುರ್ವೇದ ವಿದ್ಯೆಯನ್ನು ಹೊರಹಾಕಿದಾಗ ಅಲ್ಲಿದ್ದ ಇತರೆ ಶಿಷ್ಯರು 'ತಿತ್ತಿರಿ' ಪಕ್ಷಿಗಳ ರೂಪತಾಳಿ ಹೊರಹಾಕಿದ ವಿದ್ಯೆಯನ್ನು ತಿಂದು (ಗ್ರಹಿಸಿ) ಜೀರ್ಣಿಸಿಕೊಂಡರು. 

ಇನ್ನುಮುಂದೆ ಇಲ್ಲಿದ್ದು ವೈಶಂಪಾಯನರಲ್ಲಿ ವಿದ್ಯೆಯನ್ನು ಮುಂದುವರೆಸುವ ಅವಶ್ಯಕತೆ ಇಲ್ಲವೆಂದು ನಿರ್ಧರಿಸಿದ ಯಾಜ್ಞವಲ್ಕ್ಯರು ಅಲ್ಲಿಂದ ಹೊರಟರು.

ಮುಂದೆ ಸೂರ್ಯದೇವರನ್ನು ಕುರಿತು ಕಠೋರವಾದ ತಪಸ್ಸು ಮಾಡಿದ ನಂತರ, ಸೂರ್ಯದೇವ ಪ್ರತ್ಯೇಕವಾಗಿ ಯಜುರ್ವೇದದ ಹೊಸ ವಿಧಿವಿಧಾನಗಳ ಸಾರವನ್ನು ಬೋಧನೆ ಮಾಡಿದ. ಅಲ್ಲಿಂದ ಯಜುರ್ವೇದವು ಕವಲೋಡೆದು "ಶುಕ್ಲ ಯಜುರ್ವೇದ" ಉಗಮವಾಯಿತು. ಹೀಗೆ ಶುಕ್ಲ ಯಜುರ್ವೇದದ ಉಗಮದ ಕೀರ್ತಿ ಯಾಜ್ಞವಲ್ಕ್ಯರಿಗೆ ಸಲ್ಲತಕ್ಕದ್ದು. 

Tuesday, April 27, 2021

ಚೌಪದಿ - 86

ಎದೆಬಗೆದು ಹನುಮನೇ ತೋರಿರಲು ರಾಮನಿಗೆ। 
ನದಿಯಂತೆ ಹರಿದಿಹುದು ಕಣಕಣದೆ ಭಕ್ತಿ॥ 
ಪದಗಳಿಗೆ ನಿಲುಕದಾ ಭಕ್ತಿಯನು ನೋಡುತ್ತ। 
ಎದೆಗಪ್ಪಿಕೊಂಡಿಹನು - ಅನಿಕೇತನ॥ 86 ॥ಚೌಪದಿ - 85

ರಾಮನಾಮವನುಲಿಯೆ ಸುರಿದಿಹುದು ಪನ್ನೀರು। 
ನೇಮದಲಿಯಾರಾಧಿಸುತಲಿರಲು ತಾನು॥ 
ರಾಮನಾ ಭಕ್ತಿಯಲಿ ಮೈಮರೆತಿರಲು ಹನುಮ। 
ರಾಮನೇ ನಲಿದಿಹನು - ಅನಿಕೇತನ॥ 85 ॥ 

Monday, April 26, 2021

ಚೌಪದಿ - 84

ಬಿಕ್ಕಿಬಿಕ್ಕಿಯಳುವಾ ಮನವನ್ನು ಬಿಡದೆಯೇ। 
ನಕ್ಕುನಗಿಸುತಲಿರಲು ಕಣ್ಣೀರು ಸುರಿಯೆ॥ 
ಬಿಕ್ಕಳಿಕೆ ನಿಲ್ಲುವುದು ಹೊಟ್ಟೆ ಹುಣ್ಣಾಗುವುದು। 
ನಕ್ಕಿಬಿಡು ನೋವಿನಲು - ಅನಿಕೇತನ॥ 84 ॥ 

Sunday, April 25, 2021

ಚೌಪದಿ - 83

ಅತಿಯಾದ ಬುದ್ಧಿಯನುಪಯೋಗಿಸಿ ಮಾಡುವರು। 
ಮತಿಹೀನ ಕೆಲಸವನು ಹೀನ ಮತಿಯವರು॥ 
ಮತಿಗೆಟ್ಟು ಮಾಡಿರುವ ಹೀನಾಯ ಕೆಲಸವನು। 
ಅತಿಯಾಗಿ ಹೊಗಳುವರೊ - ಅನಿಕೇತನ॥ 83 ॥ 
 


Saturday, April 24, 2021

ಚೌಪದಿ - 82

ನಗುನಗುತ ಬದುಕಿಬಿಡು ಮನವನ್ನು ನೋಯಿಸದೆ। 
ದುಗುಡಗಳ ನೀ ಮರೆತು ಪಯಣವನು ಮಾಡು॥ 
ಜಗದಲ್ಲಿ ಕಷ್ಟಗಳು ಮನುಕುಲಕೆ ಹೊಸತಲ್ಲ। 
ರಗಳೆಗಳ ಬದಿಗಟ್ಟೊ - ಅನಿಕೇತನ॥ 82 ॥ 

ಚೌಪದಿ - 81

ವಾರಗಳುರುಳುತಿರಲು ಬಲುಬೇಗ ವರ್ಷದಲಿ। 
ಮೂರುದಿನಗಳ ಬದುಕನರಿತಿಹೆವು ನಾವು॥ 
ಭಾರಗಳನೊಂದೊಂದೆ ಕಡಿಮೆಮಾಡುತ ನಡೆಯೆ। 
ಸಾರವಿದೆ ಜೀವನಕೆ - ಅನಿಕೇತನ॥ 81 ॥ 

Friday, April 23, 2021

ಚೌಪದಿ - 80

ಮಳೆಯಿಂದ ಭೂಮಿಯನು ಮುಟ್ಟುತಿರೆ ಒಲವಿನಲಿ। 
ಇಳೆಯು ತಾ ನಾಚಿಹಳು ನೀರಾಗಿ ಕರಗಿ॥ 
ಹೊಳೆದಿಹಳು ಭೂಮಿ ತಾ ಸೂಕ್ಷ್ಮದಲಿ ಹಸಿರಾಗಿ। 
ಮಳೆರಾಯ ಸುರಿಸಿರಲು ಮುಸಲಧಾರೆ॥ 80 ॥  

Thursday, April 22, 2021

ಚೌಪದಿ - 79

ಗಗನದಲಿ ಗುದ್ದಾಡಿ ಮೋಡಗಳು ಹೋರಾಡಿ। 
ಹಗಲೆಲ್ಲ ಬೆಂದಿದ್ದ  ಧರಣಿಯನು ತಣಿಸೆ॥ 
ಧಗಧಗಿಸಿ ಉರಿದಿದ್ದ ಭೂಮಿಯನು ಸೂಕ್ಷ್ಮದಲಿ। 
ಹಗುರಾಗಿಸಿದ ಮಳೆಯೊ - ಅನಿಕೇತನ॥ 79 ॥ 

Wednesday, April 21, 2021

ಚೌಪದಿ - 78

ಕಾಮನೆಯದೀಡೇರೆ ಮಾಡುನೀಂ ತಪವನ್ನು। 
ನೇಮದಲಿ ನಿಷ್ಠೆಯಲಿ ಭಜಿಸುತಿರೆ ದಿನವು॥ 
ನಾಮಜಪ ಮಾಡುತಿರೆ ಹಗುರಾಗುವುದು ಮನವು। 
ರಾಮನಾಮವ ಜಪಿಸೊ - ಅನಿಕೇತನ॥ 78 ॥ 

Monday, April 19, 2021

ಚೌಪದಿ - 77

ಬಿಗುಮಾನ ತೊರೆದರೇ ಸುಲಭವೋ ಮಾತದುವು। 
ನಗುಮೊಗವ ಬೀರುತ್ತಲಿದ್ದರೇ ಸೊಗಸು॥ 
ಹಗೆತನವ ಕೊಂದುಬಿಡು ಹಳೆಯದನು ಮರೆತುಬಿಡು। 
ಹೊಗೆಯಾಡದದು ಬೆಂಕಿ - ಅನಿಕೇತನ॥ 77 ॥ 

Friday, April 16, 2021

ಚೌಪದಿ - 76

ಹೊಸತರಲ್ಲಗಸತಾನೆತ್ತೆತ್ತಿಯೊಗೆದಂತೆ। 
ಹೊಸತಲ್ಲಿ ಹಲುಬುತನದಿಂದ ಸುಖವಿಹುದು॥ 
ತುಸುಕಾಲ ಕಳೆದಂತೆ ಕರುಬುವುದು ನಿಲ್ಲದೇ। 
ಮಸಿಬಳಿದು ಹೋಗುವುದೊ - ಅನಿಕೇತನ॥ 76 ॥ 

ಚೌಪದಿ - 75

ಮಾವಿನಾ ಹಣ್ಣುಗಳ ಸಿಹಿಯನ್ನು ಸವಿಯುತ್ತ। 
ಬೇವಿನಾ ಕಹಿಯನ್ನು ಬಾಯಲ್ಲಿ ಹೀರಿ॥ 
ಮಾವುಬೇವುಗಳಿಂದ ಬದುಕನ್ನು ಅರಿತಿರಲು। 
ನೋವು ನಲಿವುಗಳಿದುವೆ - ಅನಿಕೇತನ॥ 75 ॥ 

Tuesday, April 13, 2021

ಚೌಪದಿ - 74

ಹೊಸವರುಷ ಬಂದಿರಲು ಹೊಸಬಾಳು ಬೆಳಗುವುದು। 
ಹೊಸಹುರುಪು ಮೂಡುವುದು ಹಳೆಯದನು ಮರೆತು॥ 
ಹೊಸತೊಡಕು ಹಬ್ಬದಲಿ ಹೊಸತನವೆ ಮೆರೆಯುವುದು। 
ಹೊಸತಿರಲಿ ಜೀವನವು - ಅನಿಕೇತನ॥ 74 ॥

Monday, April 12, 2021

ಚೌಪದಿ - 73

ಮದ್ದಿಲ್ಲವಸೂಯೆಗೆ ನಿಲ್ಲೊಲ್ಲ ಕರುಬುವಿಕೆ। 
ಗೆದ್ದಿಲ್ಲ ಮತ್ಸರವು ಯಾವ ಸಮಯದಲು॥ 
ಬಿದ್ದಿಹುದಹಂಕಾರ ಮೀಸೆಯದು ಮಣ್ಣಾಗೆ।   
ಮದ್ದಿಹುದು ಬಿದ್ದೊಡನೆ - ಅನಿಕೇತನ॥ 73 ॥ 

ಚೌಪದಿ - 72

ರಣಬಿಸಿಲು ತಿವಿದಿರಲು ಭೂಮಿಯನು ದಿನದಿನವು। 
ಮಣಭಾರ ಕೆಲಸವನು ಮಾಡುವನು ತಾನು॥ 
ಪಣತೊಟ್ಟ ರೈತನಿಗೆ ಸರಿಸಾಟಿ ಯಾರಿಹರು। 
ಕ್ಷಣಕೂಡ ಕರುಬದೆಯೆ - ಅನಿಕೇತನ॥ 72 ॥ 

ಚೌಪದಿ - 71

ಕರುಬಿದ ಸುಯೋಧನನು ಪಾಂಡುಸುತರನು ನೋಡಿ। 
ಕರುಬಿದನು ಕೌರವರ ಶಪಿಸುತ್ತ ಶಕುನಿ॥ 
ಕರುಬಿದನು ಶಿಶುಪಾಲ ವಾಸುದೇವನ ಹಳಿದು। 
ಕರುಬುವಿಕೆ ಹಿತಶತ್ರು - ಅನಿಕೇತನ॥ 71 ॥ 

Sunday, April 11, 2021

ಚೌಪದಿ - 70

ನರಿಬುದ್ಧಿಯಿದ್ದವರಸೂಯೆಯನು ಪಡದೆಯೇ। 
ಸರಿಯಾದ ದಾರಿಯಲಿ ಮಾಡಿದರೆ ಪಯಣ॥ 
ಹರಿಹರರು ತೋರುವರು ಮುಕ್ತಿಯಾ ಹಾದಿಯನು। 
ಪರಿಗಣಿಸಿ ಲೆಕ್ಕವನು - ಅನಿಕೇತನ॥ 70 ॥ 

Friday, April 09, 2021

ಚೌಪದಿ - 69

ಬಿಸಿಲಿನಲಿ ಬೇಯುತ್ತ ಹಗಲೆಲ್ಲ ದುಡಿಯುವರು। 
ಸಸಿನೆಟ್ಟು ಕಸಿಮಾಡಿ ಕೈಮುಗಿದು ಭುವಿಗೆ॥ 
ಹಸಿಯಾದ ಭೂಮಿಯನು ಫಲವತ್ತು ಮಾಡುತ್ತ। 
ಹಸಿರಿನಲೆ ಬದುಕುವರೊ - ಅನಿಕೇತನ॥ 69 ॥ 

ಚೌಪದಿ - 68

ಮೆಲ್ಲುಸಿರ ಮಾತಿನಲಿ ನಾಕವೇ ಅಡಗಿಹುದು। 
ಸಲ್ಲುವುದು ಫಲವದುವು ನಿನ್ನ ನುಡಿಯಲ್ಲಿ॥ 
ಕಲ್ಲುಸಕ್ಕರೆಯಂಥ ರುಚಿಯಿರಲಿ ಪದಗಳಲಿ। 
ಬೆಲ್ಲವನು ನೀ ಸವಿಯೊ - ಅನಿಕೇತನ॥ 68 ॥

Thursday, April 08, 2021

ಚೌಪದಿ - 67

ಪದಗಳಿಗೆ ನಿಲುಕದಾ ಭಾವನೆಯು ಮೂಡಿಹುದು। 
ಹದವಾಗಿರುವ ಮನವು ಪುಳಕಗೊಂಡಿಹುದು॥ 
ಕದತೆರೆದು ಹಾಡಿಹೆನು ಕುಣಿದಿಹೆನು ನಲಿದಿಹೆನು। 
ಬದಲಾದ ಸಮಯಗಳಲನಿಕೇತನ॥ 67 ॥ 

Wednesday, April 07, 2021

ಚೌಪದಿ - 66

ರಸವಾದ ಪಾಕವನು ಒಲವಿಂದ ಬಡಿಸುತ್ತ। 
ಹಸನಾದ ಜೀವನಕೆ ಬೆಳೆದು ನಿಂತಿಹಳು॥ 
ಬಸಿರಾಗಿಹಳು ಭೂಮಿ ವರುಣನಾ ಸ್ಪರ್ಶಕ್ಕೆ। 
ಹಸಿರಾಗಿಹಳು ಧರಣಿ - ಅನಿಕೇತನ॥ 66 ॥ 

ಚೌಪದಿ - 65

ಹುಚ್ಚು ಮನಸಿನಾ ಹತ್ತು ಮುಖಗಳು ಬರುತ ಹೂ-। 
ಗುಚ್ಛವನು ತಂದಿಹವು ಸಂತಸವ ಬೀರಿ॥ 
ರಚ್ಚೆ ಹಿಡಿದಿಹ ಮನವ ಸ್ವಚ್ಛಗೊಳಿಸಿ ದಿನವು। 
ಹಚ್ಚ ಹಸಿರಾಗಿರಿಸೊ - ಅನಿಕೇತನ॥ 65 ॥ 

Tuesday, April 06, 2021

ಚೌಪದಿ - 64

ಮಾಡದೆಯೆ ನಿರೀಕ್ಷೆ ಯಾರಿಂದ ಏನನೂ। 
ಹಾಡುವುದು ಹಕ್ಕಿಯದು ರಾಗದಲಿ ದಿನವು॥ 
ನೋಡದನು ಕಲಿಯುವುದು ನಮಗಿದೆಯೊ ಸಾಕಷ್ಟು। 
ಗೂಡನ್ನು ಬಿಟ್ಟು ನಡೆ - ಅನಿಕೇತನ॥ 64 ॥ 

ಚೌಪದಿ - 63

ಅರಿಶಿನದ ಕೊಂಬುಗಳು ಪರಿಮಳವ ಬೀರುತಿರೆ। 
ಗರಿಗೆದರಿ ತೂಗಿಹುವು ಅಡಿಕೆ ತೆಂಗುಗಳು॥ 
ಗರಿಬಿಚ್ಚಿ ಕುಣಿಯುತಿರೆ ನವಿಲುಗಳು ಮಳೆಯಲ್ಲಿ। 
ಪರಿಸರದ ಹಸಿರಿದುವೆ - ಅನಿಕೇತನ॥ 63 ॥ 

Monday, April 05, 2021

ಚೌಪದಿ - 62

ಎಲೆಯೊಂದು ಚಿಗುರುವುದು ಕೆಂಬಣ್ಣವಾಗುತಲಿ। 
ಎಲೆಯೊಂದು ಬೆಳೆಯುವುದು ಹಸಿರಾಗಿ ತಾನು॥ 
ಎಲೆಯೊಂದು ಉದುರುವುದು ಒಣಗುತ್ತ ಹಣ್ಣಾಗಿ। 
ಎಲೆಗಳಾ ಕಥೆಯಿದುವೆ - ಅನಿಕೇತನ॥ 62 ॥ 

ಚೌಪದಿ - 61

ಹುಸಿಯಾದ ಬಡಿವಾರ ಒಳಿತಲ್ಲ ಯಾರಿಗೂ। 
ಹಸಿರೆಲೆಯು ಒಣಗುವುದು ಮೆರೆಯುತ್ತ ದಿನವು॥ 
ಕಸಿಮಾಡೆ ಮನವನ್ನು ಆಗುವುದು ಸುಂದರವು। 
ನಸುನಗುತ ಜಗ ನೋಡು- ಅನಿಕೇತನ॥ 61 ॥ 

Sunday, April 04, 2021

ಒಬ್ಬಟ್ಟು ಪುರಾಣ.

ಬೇಳೆ ಒಬ್ಬಟ್ಟು - ಶ್ರೀವರಮಹಾಲಕ್ಷ್ಮೀ ವ್ರತ 
ಕಾಯಿ ಒಬ್ಬಟ್ಟು - ಶ್ರೀಸ್ವರ್ಣಗೌರೀ ವ್ರತ 
ಕೊಬ್ಬರಿ ಒಬ್ಬಟ್ಟು - ಶ್ರೀ ಅನಂತಪದ್ಮನಾಭ ವ್ರತ 
ಕೊಬ್ಬರಿ ಒಬ್ಬಟ್ಟು - ಯುಗಾದಿ 

ನಮ್ಮ ಮನೆಯಲ್ಲಿ, ನಮ್ಮ ಅಜ್ಜಿಯ ಕಾಲದಿಂದಲೂ, ಈ ಪದ್ಧತಿ ನಡೆದುಕೊಂಡು ಬಂದಿದೆ. 
And the ಒಬ್ಬಟ್ಟು ಪುರಾಣ continues... 

ಚೌಪದಿ - 60

ಕಾಯಕವ ನೀ ಮಾಡು ಭಕ್ತಿಯಲಿ ಮನವಿಟ್ಟು।
ಬಾಯನ್ನು ಮುಚ್ಚುತ್ತ ಸದಾಕಾಲವೂ॥
ನೋಯಿಸದೆ ಯಾರನೂ ಆದರಿಸೆ ಒಲವಿನಲಿ।
ಕಾಯುವುದು ಧರ್ಮವದು - ಅನಿಕೇತನ॥ 60 ॥

ಚೌಪದಿ - 59

ಆಳುವವ ನೀನಾಗು ಜಯಿಸುತ್ತ ಲೋಕವನು। 
ಬಾಳಿನಾ ಹಾದಿಯಲಿ ಹಗಲಿರುಳು ದುಡಿದು॥ 
ಏಳುಬೀಳಿನ ನಡುವೆ ರಗಳೆಯನು ಮರೆತರೇ। 
ಬಾಳು ಹಸಿರಾಗುವುದು - ಅನಿಕೇತನ॥ 59 ॥ 

Friday, April 02, 2021

ಚೌಪದಿ - 58

ಇಳೆಯೆಲ್ಲ ಹೊತ್ತುರಿದು ಆಗುತಿರೆ ಯುದ್ಧವದು। 
ಹೊಳೆಯಾಗಿ ಹರಿದಿಹುದು ರಕ್ತದೋಕುಳಿಯು॥ 
ಕಳವಳವ ನೀಗಿಸಲು ಬೇಡುತ್ತ ದೇವರಲಿ। 
ಮಳೆಗಾಗಿ ಕಾಯುತಿಹ - ಅನಿಕೇತನ॥ 58 ॥