My Blog List

Friday, August 29, 2008

ಟೋಪಿ ಹಳೆಯದಾದರೇನು?! ಕೋತಿ ನವನವೀನ!

ಇದು ನನಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಈ-ಮೇಲ್ ನ ಕನ್ನಡ ಅನುವಾದ.....................................................
-------------------------------------------------------------------------------------------------------------

ಇದೊಂದು ಹಳೆಯ ಕತೆ ಅಂತ ತಿಳ್ಕೋಬೇಡಿ. ಈ ಹಳೆಯ ಕತೆಗೆ ಹೊಸ ಭಾಗವೊಂದು ಸೇರ್ಪಡೆಯಗಿದೆ. ಕುತೂಹಲಕಾರಿಯಾಗಿದೆ!

ಒಬ್ಬ ಯುವಕ ಮನೆಯಲ್ಲೇ ಟೋಪಿಗಳನ್ನು ತಯಾರಿಸಿ ಊರಿಂದೂರಿಗೆ ಹೋಗಿ ಅವನ್ನು ಮಾರುತ್ತಿದ್ದ. ಬೆಳಿಗ್ಗೆ ಒಂದೂರಿನಲ್ಲಿದ್ದರೆ, ಮಧ್ಯಾಹ್ನ ಮತ್ತೊಂದೂರು, ಸಂಜೆ ಮಗದೊಂದೂರು. ಒಂದು ಮಧ್ಯಾಹ್ನ ಒಂದೂರಿನಿಂದ ಮತ್ತೊಂದೂರಿಗೆ ನಡೆದು ಹೋಗುತ್ತಿದ್ದ. ತಲೆಯ ಮೇಲೆ ಟೋಪಿಯಿದ್ದರೂ, ಬಿಸಿಲು ಹೆಚ್ಚಾಗಿದ್ದುದರಿಂದ ಸ್ವಲ್ಪ ವಿಶ್ರಾಂತಿ ಪಡೆಯೋಣವೆನಿಸಿತು. ದಾರಿಯಲ್ಲೊಂದು ಮಾವಿನ ಮರ ಕಂಡಿತು. ಟೋಪಿಗಳಿದ್ದ ಚೀಲ ಪಕ್ಕದಲ್ಲಿಟ್ಟುಕೊಂಡು ಮರದ ನೆರಳಲ್ಲಿ ಮಲಗಿಬಿಟ್ಟ. ನಿದ್ದೆಯಿಂದೆದ್ದು ನೋದಿದರೆ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ. ಗಾಬರಿಗೊಂಡು ತಲೆಯೆತ್ತಿ ನೋಡಿದಾಗ ಮರದ ಮೇಲೆ ಹತ್ತಾರು ಕೋತಿಗಳು ಕುಳಿತಿದ್ದವು. ಎಲ್ಲ ಕೋತಿಗಳೂ ತಲೆಗೊಂದೊಂದು ಟೋಪಿಗಳನ್ನು ಹಾಕಿಕೊಂಡು ಕುಳಿತಿದ್ದವು. ಕೋತಿಗಳದ್ದು ಅನುಕರಣ ಬುದ್ಧಿಯೆಂಬುದು ಈತನಿಗೆ ಗೊತ್ತಿತ್ತು. ಆತ ತನ್ನ ಟೋಪಿಯನ್ನು ನೆಲಕ್ಕೆಸೆದ. ಎಲ್ಲ ಕೋತಿಗಳು ತಮ್ಮ ಟೋಪಿಗಳನ್ನು ನೆಲಕ್ಕೆಸೆದವು. ಆತ ತಕ್ಷಣ ಎಲ್ಲ ಟೋಪಿಗಳನ್ನು ಆಯ್ದುಕೊಂಡು ತನ್ನ ಚೀಲಕ್ಕೆ ತುಂಬಿಕೊಂಡು, ಮುಂದಿನೂರಿಗೆ ಓಡಿದ. ಅಂದು ಸಂಜೆ ತನ್ನ ಬುದ್ಧಿವಂತಿಕೆ ಕತೆಯನ್ನು ಮಕ್ಕಳಿಗೆ ಹೇಳಿದ. ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕರು.

ಇದಿಷ್ಟು ಕತೆಯ ಹಳೆಯ ಭಾಗ. ಈಗ ಹೊಸ ಭಾಗವನ್ನು ನೋಡಿ.

ಐವತ್ತು ವರ್ಷಗಳ ನಂತರ ಆತನ ಮೊಮ್ಮಗನೂ ವಂಶಪಾರಂಪರೆಯ ವೃತ್ತಿಯಲ್ಲಿದ್ದ. ಟೋಪಿ ತಯಾರಿಸಿ, ಊರಿಂದೂರಿಗೆ ಅಲೆಯುತ್ತ ಟೋಪಿಗಳನ್ನು ಮಾರುತ್ತಿದ್ದ. ಒಂದು ದಿನ ತಾತನಿಗಾದ ಅನುಭವವೇ ಮೊಮ್ಮಗನಿಗೂ ಆಯಿತು. ಆತ ಬಿಸಿಲಿನಲ್ಲಿ ಬಳಲಿ ಅದೇ ಮಾವಿನ ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ. ತಲೆಯ ಮೇಲೆ ಟೊಪಿ ಹಾಕಿಕೊಂಡಿದ್ದ. ಪಕ್ಕದಲ್ಲಿ ಟೋಪಿಗಳು ತುಂಬಿದ್ದ ಚೀಲವಿತ್ತು. ವಿಶ್ರಾಂತಿಯ ನಂತರ ಎದ್ದು ನೋಡಿದಾಗ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ. ಮರದ ಮೇಲಿದ್ದ ಕೋತಿಗಳೆಲ್ಲ ಆತನ ಚೀಲದಿಂದ ಟೋಪಿಯನ್ನು ಹಾರಿಸಿಕೊಂಡು ಹೋಗಿ ತಲೆಯ ಮೇಲೇರಿಸಿಕೊಂಡು ನಲಿಯುತ್ತಿದ್ದವು.

ತಕ್ಷಣ ಆತನಿಗೆ ತನ್ನ ತಾತ ಹೇಳುತ್ತಿದ್ದ ಕತೆಯ ನೆನಪಾಯಿತು. ಆತ ಎದ್ದು ನಿಂತು ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿದ. ಕೋತಿಗಳೂ ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿದವು. ಆತ ನಿಂತಲ್ಲಿಯೇ ಮೂರು ಸುತ್ತು ಸುತ್ತಿದ. ಕೋತಿಗಳೂ ಮೂರು ಸುತ್ತು ಸುತ್ತಿದವು. ಆತ ಏನೇನು ಮಾಡಿದನೋ ಕೋತಿಗಳೂ ಅದನ್ನೇ ಮಾಡಿದವು. ಕೊನೆಗೆ ಆತ ತನ್ನ ತಲೆಯಿಂದ ಟೋಪಿಯನ್ನು ತೆಗೆದು ನೆಲಕ್ಕೆಸೆದ. ಆದರೆ ಒಂದು ಕೋತಿಯೂ ಟೋಪಿಯನ್ನು ಕಿತ್ತೆಸೆಯಲಿಲ್ಲ. ಎಲ್ಲ ಗಂಭೀರವಾಗಿ ಕುಳಿತಿದ್ದವು. ಆತನಿಗೆ ದಿಕ್ಕೇ ತೋಚಲಿಲ್ಲ. ಆಗ ಮರದ ಮೇಲಿಂದ ಒಂದು ಕೋತಿಯು ಕೆಳಗಿಳಿದು ಆತನ ಬಳಿ ಬಂದು ’ನಿನಗೊಬ್ಬನೇ ತಾತ ಇದ್ದಾನೆ ಎಂದುಕೊಂಡಿದ್ದೀಯಾ? ನಿಮ್ಮ ತಾತ ನಿನಗೆ ಕತೆ ಹೇಳಿದಂತೆ, ನಮ್ಮ ತಾತಂದಿರೂ ನಮಗೆ ಕತೆಯನ್ನು ಹೇಳಿದ್ದಾರೆ’ ಎಂದು ಹೇಳಿ ಮತ್ತೆ ಮರವನ್ನೇರಿ ಕುಳಿತುಕೊಂಡಿತು. ಟೋಪಿಯನ್ನೆಸೆಯಲಿಲ್ಲ.

ಪಾಪ! ಮೊಮ್ಮಗ ನಿರಾಶನಾಗಿ ಹೊರಟುಹೋದ.

ಈಗ ಮೊಮ್ಮಕ್ಕಳಿಗೆ ಕತೆಗಳನ್ನು ಹೇಳುವ ಅಜ್ಜ-ಅಜ್ಜಿಯರೂ ಇಲ್ಲ, ಅಜ್ಜ-ಅಜ್ಜಿಯರಿದ್ದರೂ ಕೇಳುವಷ್ಟು ಸಮಯ, ಸಹನೆ ಮೊಮ್ಮಕ್ಕಳಿಗಿಲ್ಲ. ಅವರಿಗೆ ಏನನ್ನಾದರೂ ನೀತಿ ಕತೆಗಳನ್ನು ಹೇಳಬೇಕಿದ್ದರೆ ಟೀವಿಯ ಮೂಲಕವೋ ಅಂತರ್ಜಾಲದ ಮೂಲಕವೋ ಹೇಳಬೇಕಾಗುತ್ತದೆ. ಅಲ್ಲವೇ?

2 comments:

  1. ಅನಿಲ್,

    ಕತೆ ತುಂಬಾ ಚೆನ್ನಾಗಿದೆ, ಒಳ್ಳೆಯ ಸಂದೇಶ ಇದರಲ್ಲಿದೆ.

    --
    ಪಾಲ

    ReplyDelete
  2. ಪಾಲ,
    ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    ReplyDelete