My Blog List

Sunday, June 26, 2011

ಕಣ್ಣಾಮುಚ್ಚಾಲೆ ಆಟ.


ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ: 


ಕಣ್ಣಾಮುಚ್ಚೆ 
ಕಾಡೆಗೂಡೆ 
ಉದ್ದಿನ ಮೂಟೆ 
ಉರುಳೇಹೋಯ್ತು 
ನಮ್ಮಾ ಹಕ್ಕಿ 
ನಿಮ್ಮಾ ಹಕ್ಕಿ 
ಬಿಟ್ಟೆನೋ ಬಿಟ್ಟೆ. 


ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ ಮಕ್ಕಳು ಕಣ್ಣಾಮುಚ್ಚಾಲೆ ಆಟವನ್ನು ಆಡ್ತಿದ್ರು. ಅವರು ಒಂದು, ಎರಡು, ಮೂರು ಎಂದು ನೂರರವರೆಗೂ ಎಣಿಸುತ್ತಾ ಆಡುತ್ತಿದ್ದರು. ನನ್ನ ಬಾಲ್ಯವನ್ನು ನೆನೆದಾಗ ಈ ಸಾಹಿತ್ಯ ನೆನಪಾಯ್ತು. 

Monday, June 20, 2011

ಅಪ್ಪ (ಅಣ್ಣ) ನ ದಿನ.

ಇಂದಿಗೆ ನನ್ನ ಅಣ್ಣನಿಗೆ ೩೨ ವರ್ಷ, ೧ ತಿಂಗಳು, ೧೪ ದಿನಗಳಾದವು. ನಾನು ಹುಟ್ಟಿದ ಮೇಲೆಯೇ ಅಲ್ಲವೇ ನನ್ನ ಅಣ್ಣನು ತಂದೆಯಾದದ್ದು ಹಾಗಾಗಿ, ಅಣ್ಣನಿಗೂ ಕೂಡ ನನ್ನಷ್ಟೇ ವಯಸ್ಸು. ಅಲ್ವಾ ಅಣ್ಣಾ? ಚಿಕ್ಕಂದಿನಿಂದಲೂ ನಾನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನನಗೆ ಪ್ರೋತ್ಸಾಹ ನೀಡಿ, ಸಲಹೆ ನೀಡಿ, ನನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಹಾಗೆ ಮಾಡಿರುವ ಆ ನನ್ನ ಜನಕನಿಗೆ ಇದೋ ನನ್ನ ವಂದನೆ. 

ಅಣ್ಣ, 
ನಾನು ಜನಿಸಿದಾಗಿನಿಂದ ನಡೆಯಲು ಆರಂಭಿಸುವವರೆಗೂ ನನ್ನನ್ನು ಎತ್ತಿ, ಮುದ್ದಾಡಿರುವೆ. ನಿದ್ದೆ ಮರೆತುಕೊಂಡು ಅಳುತ್ತಿದ್ದಾಗ ಲಾಲಿ ಹಾಡುಗಳನ್ನು ಅದೆಷ್ಟು ಹೇಳಿರುವೆಯೋ ಅವೆಲ್ಲ ನನಗೆ ನೆನಪಿದೆ. ನೀನು ನನಗೆ ಯಾವಾಗಲೂ 'ತೂಗುವೆ ರಂಗನ, ತೂಗುವೆ ಕೃಷ್ಣನ, ತೂಗಿ ಜೋ ಜೋ ಹಾಡುವೆ' ಎಂಬ ಲಾಲಿ ಹಾಡನ್ನು ಹೇಳಿ, ನನ್ನನ್ನು ಮಲಗಿಸುತ್ತಿದ್ದೆ. ಈಗಲೂ, ಈ ಹಾಡನ್ನು ಕೇಳಿದಾಗ ನನಗೆ ನಿದ್ದೆ ಬರುತ್ತದೆ. ಅಷ್ಟು ಅಕ್ಕರೆ, ವಾತ್ಸಲ್ಯದಿಂದ ನೀನು ಹಾಡುತ್ತಿದ್ದೆ. ನನ್ನನ್ನು ನೀನು ಸ್ನೇಹಿತನಂತೆ ಕಾಣುತ್ತಿದ್ದೆ. ನಿನ್ನನ್ನು ನಾನು ಹಿರಿಯ ಮಿತ್ರನಂತೆ ಇಂದಿಗೂ ಆದರುಸುತ್ತಿರುವೆ. ಏನಾದರೂ ಸಲಹೆ ಬೇಕಾದರೆ ಮೊದಲು ಆ ವಿಷಯದ ಬಗ್ಗೆ ವಿಶ್ಲೇಷಿಸಿ ನಂತರ ನಿನ್ನನ್ನೇ ಕೇಳುವುದು. ನೀನು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ನಂತರ ಒಂದು ನಿರ್ಧಾರಕ್ಕೆ ಬಂದು ಅದನ್ನು ನನಗೆ ಅರ್ಥವಾಗುವಂತ ಸಲಹೆ ನೀಡಿರುವೆ. ನಿನ್ನ ಬಗ್ಗೆ ನನಗೆ ಬಹಳ ಅಭಿಮಾನವಿದೆ. 

ನಾನು ಬೆಳೆದಂತೆಲ್ಲಾ, ನಾನು ನನ್ನ ಸ್ವಂತ ಬುದ್ಧಿಯಿಂದ, ಆತ್ಮವಿಶ್ವಾಸದಿಂದ ತೆಗೆದುಕೊಂಡಂತಹ ನಿರ್ಧಾರಗಳನ್ನು ಪ್ರೋತ್ಸಾಹಿಸಿರುವೆ. ಹಾಗೆಯೇ, ಕೆಲವೊಮ್ಮೆ ಅತಿ ಬುದ್ಧಿವಂತಿಕೆಯಿಂದ, ಆತುರದಲ್ಲಿ ತೆಗೆದುಕೊಂಡಂತಹ ನಿರ್ಧಾರಗಳನ್ನು ಖಂಡಿಸಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಾಗೆ ಮಾಡಿರುವೆ. ನೀನು ನನ್ನ ಕೆಲಸ ಕಾರ್ಯಗಳನ್ನು ಚೆನ್ನಾಗಿ ವಿಮರ್ಶಿಸಿರುವೆ. ಮಾಡಿದ ಕಾರ್ಯಗಳಲ್ಲಿ ಗೆದ್ದಾಗ, ಅಹಂಕಾರದಿಂದ ಬೀಗದೇ, ಹಾಗೆಯೇ ಕೆಲವು ಬಾರಿ ಸೋತಾಗ, ಬೇಸರದಿಂದ ಕುಗ್ಗದೇ, ಎಲ್ಲವನ್ನು ಸಮಾನ ರೀತಿಯಲ್ಲಿ ನೋಡುವ ಹಾಗೆ ನನಗೆ ಪಾಠವನ್ನು ಹೇಳಿರುವೆ. 

ನನ್ನನ್ನು ತೀಡಿ, ತಿದ್ದಿ, ಒಬ್ಬ ಸತ್ಪ್ರಜೆಯನ್ನಾಗಿ ಮಾಡಿರುವ ನಿನಗೆ ನಾನು ಏನು ಮಾಡಿದರೂ ಸಾಲದು. ನನ್ನ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವಂತೆ ಮಾಡಿರುವ ನೀನು, ನನ್ನ ತಂದೆಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇಂದಿಗೂ ನನ್ನನ್ನು ಅತಿ ಹತ್ತಿರದಿಂದ ನೋಡಿ, ನನ್ನ ತಪ್ಪುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅದಕ್ಕೆ ಸರಿಯಾದ ದಾರಿಯನ್ನು ತೋರಿಸಿ, ನನ್ನ ಬೆನ್ನೆಲುಬಾಗಿ ನಿಂತಿರುವ ನಿನಗೆ ನಾನು ಕೃತಜ್ಞನಾಗಿರುವೆ. 

ಬರೆಯಲು ಪದಗಳು ಸಾಲುತ್ತಿಲ್ಲ, ಕಣ್ಣಲ್ಲಿ ಆನಂದಬಾಷ್ಪ ನಿಲ್ಲುತ್ತಿಲ್ಲ.