ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ಪ್ರತೀಕ್ಷೆ #anticipation #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Showing posts with label
#ಪ್ರತೀಕ್ಷೆ #anticipation #ಚೌಪದಿ_ಚೌಕ #Chaupadi_Chauka #ಅನಿಕೇತನ #anikEtana #kannaDa
.
Show all posts
Sunday, April 04, 2021
ಚೌಪದಿ - 60
ಕಾಯಕವ ನೀ ಮಾಡು ಭಕ್ತಿಯಲಿ ಮನವಿಟ್ಟು।
ಬಾಯನ್ನು ಮುಚ್ಚುತ್ತ ಸದಾಕಾಲವೂ॥
ನೋಯಿಸದೆ ಯಾರನೂ ಆದರಿಸೆ ಒಲವಿನಲಿ।
ಕಾಯುವುದು ಧರ್ಮವದು - ಅನಿಕೇತನ॥ 60 ॥
Friday, April 02, 2021
ಚೌಪದಿ - 58
ಇಳೆಯೆಲ್ಲ ಹೊತ್ತುರಿದು ಆಗುತಿರೆ ಯುದ್ಧವದು।
ಹೊಳೆಯಾಗಿ ಹರಿದಿಹುದು ರಕ್ತದೋಕುಳಿಯು॥
ಕಳವಳವ ನೀಗಿಸಲು ಬೇಡುತ್ತ ದೇವರಲಿ।
ಮಳೆಗಾಗಿ ಕಾಯುತಿಹ - ಅನಿಕೇತನ॥ 58 ॥
Wednesday, March 31, 2021
ಚೌಪದಿ - 57
ಅರಳುತಿರೆ ಹೂವೊಂದು ನಿರೀಕ್ಷೆಯನಿಡದೆಯೆ।
ಮರಳುತಿದೆ ಜೀವನವು ಮೊದಲಿನಾ ಹಾಗೆ॥
ಸರಿಯಾದ ಹಾದಿಯಲಿ ಪಯಣವದು ಸಾಗುತಿರೆ।
ಬರಡಾಗದೀಬದುಕು - ಅನಿಕೇತನ॥ 57 ॥
Tuesday, March 30, 2021
ಚೌಪದಿ - 56
ಕನವರಿಸಿ ನಿದಿರೆಯಲಿ ಕಾದಿಹೆನು ಹಗಲಿರಳು।
ಕನಸೊಂದ ಕಟ್ಟುತ್ತ ಜೀವವನೆ ತೇಯ್ದು॥
ನನಸಾಗಬೇಕೆಂದು ಸಂಕಲ್ಪ ಮಾಡಿಹೆನು।
ಮನದಲ್ಲಿ ಛಲವಿಟ್ಟು - ಅನಿಕೇತನ॥ 56 ॥
ಚೌಪದಿ - 55
ದಿನದಿನವು ಹೊಸತನ್ನು ಹುಡುಕುತ್ತ ಸಾಗುವೆವು।
ಕನಸುಗಳ ಕಟ್ಟುತ್ತ ನನಸದನು ಮಾಡಿ॥
ಅನುದಿನವು ಸಂತಸವು ಮನದಲ್ಲಿ ಕಾಯುತಿರೆ।
ಘನವಾಗುವುದು ಬದುಕು - ಅನಿಕೇತನ॥ 55 ॥
Monday, March 29, 2021
ಚೌಪದಿ - 54
ಜಗ್ಗದೆಯೆ ಜಗವನ್ನು ಜಯಿಸುವಾ ನಿಟ್ಟಿನಲಿ।
ಹಿಗ್ಗುತಲಿ ಹೋರಾಡು ಎದುರಾಗೆ ಸೋಲು॥
ಕುಗ್ಗದೆಯೆ ಕಣ್ತೆರೆದು ಕಾಯುತಿರೆ ಸಮಯಕ್ಕೆ।
ಸಗ್ಗವನೆ ಕಾಣುವೆಯೊ - ಅನಿಕೇತನ॥ 54 ॥
ಚೌಪದಿ - 53
ಬೇಯುತಿದೆ ಅನ್ನವದು ಮಧ್ಯಾಹ್ನದೂಟಕ್ಕೆ।
ಹಾಯೆನಿಸಿ ಬಾಳೆಲೆಗೆ ನೀರನ್ನು ಚಿಮುಕಿ॥
ಪಾಯಸವ ತಿನ್ನುತಿರೆ ಹರಿನಾಮ ಜಪಿಸುತಲಿ।
ಕಾಯುವಿಕೆಯಲೆ ಸುಖವು - ಅನಿಕೇತನ॥ 53 ॥
Sunday, March 28, 2021
ಚೌಪದಿ - 52
ರಾಮನಾ ಬರುವಿಕೆಗೆ ಕಾಯುತ್ತ ಕುಳಿತಿಹಳು।
ನೇಮದಲಿ ಆರಿಸುತ ಬೋರೆ ಹಣ್ಣುಗಳ॥
ಕಾಮನೆಯು ಕೈಗೂಡಿ ಶಬರಿಯನನುಗ್ರಹಿಸೆ।
ರಾಮನೇ ಬರುತಿಹನು - ಅನಿಕೇತನ॥ 52 ॥
ಚೌಪದಿ - 51
ಶರಶಯ್ಯೆಯಲಿ ಮಲಗಿ ಜೀವವನು ಹಿಡಿದಿಹನು।
ಪರಲೋಕವನು ಸೇರೆ ಉತ್ತರಾಯಣದಿ॥
ಮರಣಕ್ಕೆ ಕಾದಿಹನು ಗಂಗೆಯಾ ಮಗನವನು।
ಕುರುವಂಶದಾ ಹಿರಿಯ - ಅನಿಕೇತನ॥ 51 ॥
Older Posts
Home
Subscribe to:
Posts (Atom)