ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Showing posts with label
#ಮಳೆ #Rain #ಚೌಪದಿ_ಚೌಕ #chaupadi_chauka #ಅನಿಕೇತನ #anikEtana #kannaDa
.
Show all posts
Showing posts with label
#ಮಳೆ #Rain #ಚೌಪದಿ_ಚೌಕ #chaupadi_chauka #ಅನಿಕೇತನ #anikEtana #kannaDa
.
Show all posts
Saturday, March 20, 2021
ಚೌಪದಿ - 41
ಅಳುತಲಿದೆ ಆಗಸವು ನೆಲದ ಕಷ್ಟವನೋಡಿ।
ತೊಳಲುತಾ ಶಿರದಲ್ಲಿ ಭಾರವನು ತುಂಬಿ॥
ಬಳುಕುತಾ ಗುಡುಗುತಾ ಸುರಿಯುತಿರೆ ಕಣ್ಣೀರು।
ಮಳೆಯಾಗಿಹುದು ಇಳೆಗೆ - ಅನಿಕೇತನ॥ 41 ॥
Friday, March 19, 2021
ಚೌಪದಿ - 40
ಬಂಗಾರದಂತಹಾ ದಿನಕರನು ಮುಳುಗಿರಲು।
ರಂಗಾದ ಬಾನಿನಲಿ ಕವಿದಿಹುದು ಮೋಡ॥
ತಂಗಾಳಿ ಬೀಸಿರಲು ಮುಸ್ಸಂಜೆ ವೇಳೆಯಲಿ।
ಸಂಗಾತಿ ಮಳೆಯದುವೆ - ಅನಿಕೇತನ॥ 40 ॥
ಚೌಪದಿ - 39
ಬೆಳೆಯುತ್ತ ಬಿಸಿಲಲ್ಲಿ ಬಾಡುತ್ತ ಚಳಿಯಲ್ಲಿ।
ಹೊಳೆಯುತ್ತ ಮಳೆಯಲ್ಲಿ ಬದುಕುವೆವು ನಾವು॥
ಸುಳಿಯಲ್ಲಿ ಸಿಲುಕದೇ ಸಾಗುತಿರೆ ಮನವದುವು।
ಸೆಳೆಯುವುದು ದೈವವದು - ಅನಿಕೇತನ॥ 39 ॥
ಚೌಪದಿ - 38
ಹಳೆಯದನು ನೆನೆನೆನೆದು ಜೀವನವೆ ಹೊರೆಯಾಗಿ।
ಅಳುತಿಹುದು ಮನವು ನೋವಿನಾ ಬೇಗೆಯಲಿ॥
ತಳಮಳವು ದುಗುಡಗಳು ಎದೆಯಲ್ಲಿ ಉಮ್ಮಳಿಸಿ।
ಮಳೆಯಾಗಿಹುದು ಮನದೆ - ಅನಿಕೇತನ॥ 38॥
ಚೌಪದಿ - 37
ವನಕುಸುಮ ಅರಳಿದೊಡೆ ಮಣ್ಣಿನಾ ಪರಿಮಳಕೆ।
ನನಗದುವೆ ಉತ್ಸಾಹ ಮನವೆಲ್ಲವರಳಿ॥
ಕನಸುಗಳು ನನಸಾಗಿ ಹಸನಾಗುತಿರೆ ಬದುಕು।
ಮನದೊಳಗೆ ಮಳೆಯಿದುವೆ - ಅನಿಕೇತನ॥ 37 ॥
Older Posts
Home
Subscribe to:
Posts (Atom)