My Blog List

Showing posts with label ಮಂಜು. Show all posts
Showing posts with label ಮಂಜು. Show all posts

Saturday, July 16, 2011

ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು
ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು|
ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ,
ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ|
ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ ಇಲ್ಲ।
ಎದೆಯವುಚಿ ಮಲಗಿರುವ ಮಡದಿಗಿದೋ ಮಂಪರು
ನಿದಿರೆ ಅವಳಿಗೆ ಜೋರು ಜೊತೆಯಾಗಿ ನಾನಿದ್ದರು|
ಎದೆಬಡಿತ ಜೋಗುಳ, ಎನ್ನೆದೆಯೆ ತೊಟ್ಟಿಲು
ನಾ ಉಸಿರಾಟ ನಡೆಸುತಿರೆ ನಿದಿರಮ್ಮನ ಮಡಿಲು|
ಬದುಕುವ ಬಯಕೆಯು ಎಂದೆಂದಿಗೂ ಹೀಗೆ… ಕೊನೆಯೇ ಇಲ್ಲ।
ತಪ್ಪಿಕೊಳ್ಳುವ ತವಕ ಚುಚ್ಚುವ ಬೆಳಕನ್ನು
ಹುದುಗಿದಳು ನನ್ನೊಳಗೆ ಬಿಗಿದಪ್ಪಿ ಮೈಯನ್ನು|
ಬಾಳ ಹಾಸಿಗೆ ಮೇಲೆ, ಒಲವಿನ ಹೊದಿಕೆಯಲಿ
ಜೋಡಿಯಿವೆ ಮೈ ಬಿಸಿಯ ಬೆಚ್ಚನೆಯ ಗೂಡಿನಲಿ|
ಇದ ನೋಡಿ ಕರುಬುವ ಮೂಡಣದವ…. ಉರಿಯುತಿಹ ಮೆಲ್ಲ।
ಮೂಡಣದ ದೊರೆಯುರಿದು ಮೇಲೇರುತಿಹನು
ವಾಡಿಕೆಯ ಗೆಯ್ಮೆಯ ನೆನೆಸುತಿಹನವನು|
ಹಗಲ ಹೊರೆಯನು ಹೊರೆದು, ಹೊಟ್ಟೆ ಪಾಡಿಗೆ ದುಡಿದು
ಎದುರು ನೋಡುವೆ ಬೆಳಗ ಮರಳಿ ಇರುಳನು ಕಳೆದು|
ಮುಂಜಾವ ಮುಸುಕಿನ ಮುದ್ದಾಟಕೆ… ಸೋಲದವರಿಲ್ಲ ।