My Blog List

Wednesday, March 03, 2021

ಚೌಪದಿ - 23

ನಗುವೊಂದು ಬೇಕಿಹುದು ಹಗುರಾದ ಮನಸಿಗೂ। 
ಬಗೆಹರಿಯೆ ದುಗುಡಗಳು ಹೋಗುವುದು ನೋವು॥ 
ನಗುನಗುತ ಇರುವಾಗ ಕಣ್ಣುಗಳು ತುಂಬಿದರೆ। 
ಸೊಗಸಾದ ಬದುಕದುವೆ - ಅನಿಕೇತನ॥ 23 ॥ 

ಚೌಪದಿ - 22

ಹಿಮಕರಗಿ ನೀರಾಗಿ ಹರಿದಿರಲು ಬೆಟ್ಟದಿಂ।
ಸುಮವರಳಿ ಪರಿಮಳವ ಚೆಲ್ಲಿರಲು ಕಂಪು॥
ಡಮರುಗವ ನುಡಿಸುತಲಿ ಎದ್ದಿರಲು ಶಂಕರನು।
ನಮಿಸಿಹೆನು ನೋಡುತಲಿ ಶಿವನ ಮೊಗವ॥ 

ಪರಮಶಿವ ಪಾರ್ವತಿ ಜೊತೆಗೂಡಿ ನಗುತಿಹರು।
ಹರಸಿಹರು ಮಮತೆಯನು ತೋರಿಸುತ ನನಗೆ॥
ಕರಮುಗಿದು ನಾನಿಂದು ಭಕುತಿಯಲಿ ಹಾಡಿತಿರೆ।
ಸುರಿದಿಹುದು ಕಣ್ಣೀರು ಸಂತಸದಲಿ॥ 

ಹಣತೆಯನು ಹಚ್ಚುತ್ತ ದೀಪವನು ಬೆಳಗುತ್ತ।
ಗಣಪನಿಗೆ ನಮಿಸುತ್ತ ಬಾಗಿಹುದು ಶಿರವು॥ 
ಕಣಕಣದಿ ಹರಿದಿಹುದು ಭಕುತಿಯಾ ರಸಧಾರೆ। 
ಗುಣವಿರುವ ಮುಂಜಾವು - ಅನಿಕೇತನ॥ 22 ॥ 

Tuesday, March 02, 2021

ಚೌಪದಿ - 21

ಅದೇ ಬೆಳಕು ಅದೇ ಸೊಬಗು ಎಲ್ಲವೂ ಅದೇ।
ಅದೇ ಹೊಳಪು ಅದೇ ಸೊಗಸು ಸದಾ ಜೊತೆಗೆ॥
ಅದೇ ಇರಲಿ ಸದಾ ನಮಗೆ ಕಾಲಕಾಲವೂ।
ಅದೇ ಮುಂಜಾವಿರಲಿ - ಅನಿಕೇತನ॥ 21 ॥ 

Monday, March 01, 2021

ಚೌಪದಿ - 20

ಮೂಡಣದ ಆಗಸದಿ ಹೊಮ್ಮಿಹುದು ಚಿತ್ತಾರ।  
ಗೂಡಿನಾ ಹೊರಬಂದು ಇಣುಕಿಹನು ರವಿಯು॥ 
ನೋಡುತಿರೆ ಬಾನಿನಾ ಸೊಬಗನ್ನು ನಾವುಗಳು। 
ಹಾಡಿಹುದು ಮುಂಜಾವು - ಅನಿಕೇತನ॥ 20॥

Friday, February 26, 2021

ಚೌಪದಿ - 19

ನೆನಪುಗಳು ಶಾಪವೂ ಮರೆವೊಂದು ವರವೆಂದು।
ಮನಸಿನಲಿ ನೆನಪಿರಲಿ ಚಿರಕಾಲ ನಿನಗೆ॥ 
ನೆನಪುಗಳ ಮರೆಯದೆಯೆ ಮರೆತುಬಿಡು ಚಿಂತಿಸದೆ। 
ಮರೆವಿನಲಿ ಸುಖವಿಹುದೊ - ಅನಿಕೇತನ॥ 19 ॥