My Blog List

Tuesday, October 14, 2008

ಮಲೆನಾಡಿನಲ್ಲಿ ಎರಡು ದಿನಗಳು...

ಮಲೆನಾಡು ಪ್ರವಾಸ

ಹೋದ ಜಾಗಗಳು: ಶಿವಮೊಗ್ಗ, ತೀರ್ಥಹಳ್ಳಿ, ಕವಲೇದುರ್ಗ ಕೋಟೆ, ಹಿಡ್ಲೆಮನೆ ಜಲಪಾತ, ಕುಪ್ಪಳ್ಳಿ, ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು.

ಒಟ್ಟು ಮಂದಿ: ೬+೧ (ವಾಹನ ಚಾಲಕ ಸತೀಶ)

ಪ್ರಯಾಣಕ್ಕೆ ಬಳಸಿದ ವಾಹನ: ಟೋಯೋಟಾ ಕ್ವಾಲಿಸ್.

ಮಾರ್ಗ:

--> ಬೆಂಗಳೂರು - ತುಮಕೂರು - ಗುಬ್ಬಿ - ತಿಪಟೂರು - ಅರಸೀಕೆರೆ - ಬೀರೂರ್ - ತರಿಕೆರೆ - ಭದ್ರಾವತಿ - ಶಿವಮೊಗ್ಗ - ತೀರ್ಥಹಳ್ಳಿ.

--> ತೀರ್ಥಹಳ್ಳಿ - ಕವಲೇದುರ್ಗ - ನಗರ - ನಿಟ್ಟೂರು - ಕುಂಬಳೆ - ಹಿಡ್ಲೆಮನೆ ಜಲಪಾತ - ತೀರ್ಥಹಳ್ಳಿ.

--> ತೀರ್ಥಹಳ್ಳಿ - ಕುಪ್ಪಳ್ಳಿ - ಕೊಪ್ಪ - ಶೃಂಗೇರಿ - ಬರ್ಕಣ ಜಲಪಾತ - ಆಗುಂಬೆ - ಜಯಪುರ - ಚಿಕ್ಕಮಗಳೂರು - ಹಾಸನ - ನೆಲಮಂಗಲ - ಬೆಂಗಳೂರು.

ದಿನಾಂಕ: ೨೫ ಜನವೈ ೨೦೦೭ ಇಂದ ೨೭ ಜನವರಿ ೨೦೦೭.

ಪಾತ್ರವರ್ಗ: ನಾಗರಾಜ, ಪ್ರವೀಣ, ವಿನೋದ, ರಾಘವೇಂದ್ರ, ಪ್ರಶಾಂತ ಮತ್ತು ನಾನು.

ಛಾಯಾಗ್ರಾಹಕ: ಪ್ರಶಾಂತ್

ಚಿತ್ರಕಥೆ: ಅನಿಲ್ ರಮೇಶ್

ಆ ವರ್ಷ ಗಣರಾಜ್ಯೋತ್ಸವ ಶುಕ್ರವಾರವಿದ್ದ ಕಾರಣ ನಾವು ಗುರುವಾರ ಅಂದರೆ ೨೫ ಜನವರಿ ೨೦೦೭ ರಂದು ಈ ಪ್ರಯಾಣವನ್ನು ಕೈಗೊಳ್ಳಲು ನಿರ್ಧರಿಸಿದೆವು. ಜಾಗಗಳ ನಿರ್ಧಾರ ಮಾಡುವ ಕೆಲಸ ಸ್ವಲ್ಪ ಕಷ್ಟಕರವಾಗಿತ್ತು. ಕೊನೆಗೆ ಪ್ರಶಾಂತನ ಸಹಾಯದಿಂದ ಮಲೆನಾಡಿಗೆ ಹೋಗಲು ನಿರ್ಧರಿಸಿದೆವು. ಪ್ರಶಾಂತ ಒಂದು ವರ್ಷದ ಹಿಂದೆ ಅಂದರೆ ೨೦೦೬ರಲ್ಲಿ ಇದೇ ಜಾಗಗಳಿಗೆ ಹೋಗಿ ಬಂದಿದ್ದ.

ಜಾಗಗಳ ನಿರ್ಧಾರವಾದ ಮೇಲೆ ನಮ್ಮ ಮುಂದೆ ಇದ್ದ ಕೆಲವು ಅಂಶಗಳು:

೧. ಎಷ್ಟು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ.

೨. ಪ್ರಯಾಣಕ್ಕೆ ಬಳಸುವ ವಾಹನ.

೩. ಲಾಡ್ಜಿಂಗ್ ಮತ್ತು ಬೋರ್ಡಿಂಗ್.

೧. ಎಷ್ಟು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ - ನಮ್ಮ ಗುಂಪಿನ ಹೆಚ್ಚು ಮಂದಿ ಆ ವರ್ಷದ ಮಾರ್ಚ್ ವರೆಗೂ ತಮ್ಮ ಬಿಡುವಿಲ್ಲದಿದ್ದ ಕಾರಣ, ನಮಗೆ ಎಷ್ಟು ಮಂದಿ ಪ್ರಯಾಣದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಯಲು ಹೆಚ್ಚು ಕಷ್ಟವಾಗಲಿಲ್ಲ. ಕೊನೆಗೆ ನಾವು ಆರು ಮಂದಿ ಈ ಪ್ರಯಾಣದಲ್ಲಿ ಭಾಗಿಯಾಗಲು ನಿರ್ಧರಿಸಿದೆವು.

೨. ಪ್ರಯಾಣಕ್ಕೆ ಬಳಸುವ ವಾಹನ - ಮೊದಲು ನಾವು ಪ್ರವೀಣನ ಟಾಟಾ ಸುಮೋವಿನಲ್ಲಿ ಹೋಗಲು ನಿರ್ಧರಿಸಿದ್ದೆವು. ಪ್ರವೀಣನ ವಾಹನದ ಚಾಲಕ ಲಭ್ಯವಿರದಿದ್ದ ಕಾರಣ ನಾವು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಹೊಟೆಲ್ ಏರ್ ಲೈನ್ಸ್ ನಲ್ಲಿ ೨೪ ಜನವರಿ ೨೦೦೭ ರಂದು ನಾವು ಭೇಟಿಯಾಗಿದ್ದಾಗ, ರಾಘವೇಂದ್ರ ಟೊಯೋಟಾ ಕ್ವಾಲಿಸ್ ಅನ್ನು ಫೋನ್ ಮೂಲಕ ಮುಂಚಿತವಾಗಿ ಕಾದಿರಿಸಿದ.

೩. ಕೊನೆಯದಾಗಿ ನಮ್ಮ ಮುಂದೆ ಇದ್ದದ್ದು - ಬೋರ್ಡಿಂಗ್ ಮತ್ತು ಲಾಡ್ಜಿಂಗ್. ನಾವುಗಳು (ಪ್ರಶಾಂತನನ್ನು ಬಿಟ್ಟು) ಹೊಟೆಲ್ ಏರ್ ಲೈನ್ಸ್ ನಲ್ಲಿ ಭೇಟಿಯಾಗಿದ್ದಾಗ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಗೆ ಶಿವಮೊಗ್ಗದಲ್ಲಿ ತಂಗಿದ್ದು, ಅಲ್ಲಿಂದ ಮುಂದೆ ಪ್ರಯಾಣ ಬೆಳೆಸುವುದಾಗಿ ಯೋಜನೆ ಹಾಕಿಕೊಂಡಿದ್ದೆವು. ಪ್ರಶಾಂತನಿಗೆ ಈ ವಿಷಯವನ್ನು ಫೋನ್ ಮಾಡಿ ಹೇಳಿದಾಗ ಅವನು "ಶಿವಮೊಗ್ಗದಲ್ಲಿ ತಂಗಿದರೇ, ೧೫೦ ಕಿ.ಮೀ ಹೆಚ್ಚಾಗುತ್ತದೆ. ನಾವು ತೀರ್ಥಹಳ್ಳಿಯಲ್ಲಿ ತಂಗೋಣ. ಅಲ್ಲಿಂದ ನಾವು ನೋಡಬೇಕಾದ ಸ್ಥಳಗಳು ಹತ್ತಿರವಾಗುತ್ತದೆ. ಮುಂಗಡವಾಗಿ ಕೋಣೆಗಳನ್ನು ಕಾದಿರಿಸುವ ಅವಶ್ಯಕತೆ ಇಲ್ಲ. ಸಾಕಷ್ಟು ಹೊಟೆಲ್ ಗಳಿವೆ" ಎಂದ. ನಮಗೆಲ್ಲಾ ತಲೆ ಮೇಲಿದ್ದ ಭಾರ ಕಡಿಮೆ ಆದಂತಾಯಿತು.

ಅಂತೂ ಇಂತೂ ನಾವು ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡೆವು.

ದಿನಾಂಕ ೨೫ ಜನವರಿ ೨೦೦೭:

ನಾವೆಲ್ಲರೂ ನಮ್ಮ ಸ್ನೇಹಿತನಾದ ಶಂಕರನ ಮನೆಯಲ್ಲಿ ಭೇಟಿಯಾಗಲು ನಿರ್ಧರಿಸಿದೆವು. ಕಾರಣ, ಅವನಿದ್ದದ್ದು ಯಶವಂತಪುರದಲ್ಲಿ. ವಿನೋದ, ಪ್ರವೀಣ ಹತ್ತಿರದಲ್ಲೇ ಇದ್ದಿದ್ದರಿಂದ ಅವರು ಬೇಗನೆ ಶಂಕರನ ಮನೆಗೆ ಬಂದು ನಮಗಾಗಿ ಕಾಯುತ್ತಿದ್ದರು. ನಾಗರಾಜ ಜಯನಗರದಿಂದ ವಿಜಯನಗರದ ಬಳಿಯಿರುವ ಗೋವಿಂದರಾಜನಗರದಲ್ಲಿರುವ ರಾಘವೇಂದ್ರನ ಮನೆಗೆ ಬಂದರು. ನಾನು ನಾಗರಭಾವಿಯಲ್ಲಿರುವ ನಮ್ಮ ಮನೆಯಿಂದ ಹೊರಟು ರಾಘವೇಂದ್ರನ ಮನೆಗೆ ಬಂದು ತಲುಪುವಷ್ಟರಲ್ಲಿ ನಾಗರಾಜ ಮತ್ತು ವಾಹನ ಚಾಲಕ ಸತೀಶ ರಾಘವೇಂದ್ರನ ಮನೆಯಲ್ಲಿ ನನಗಾಗಿ ಕಾಯುತ್ತಿದ್ದರು. ನಾನು ರಾಘವೇಂದ್ರನ ಮನೆಯನ್ನು ತಲುಪಿದ ಕೂಡಲೆ ಅಲ್ಲಿಂದ ಹೊರಟು, ಬಸವೇಶ್ವರನಗರದಲ್ಲಿರುವ ಪ್ರಶಾಂತನನ್ನು ಕರೆದುಕೊಂಡು ಶಂಕರನ ಮನೆಯಲ್ಲಿ ಕಾಯುತ್ತಿದ್ದ ವಿನೋದ ಮತ್ತು ಪ್ರವೀಣರನ್ನು ಭೇಟಿಮಾಡಿ ಅಲ್ಲಿಂದ ಹೊರಡುವ ಹೊತ್ತಿಗೆ ಸಮಯ ರಾತ್ರಿ ಹನ್ನೊಂದಾಗಿತ್ತು.

ದಿನಾಂಕ ೨೬ ಜನವರಿ ೨೦೦೭:

ವಾರಾಂತ್ಯ ರಜೆಯಿದ್ದ ಕಾರಣ ರಾ-ಹೆ ೪ ರಲ್ಲಿ ಹೆಚ್ಚು ಟ್ರಾಫಿಕ್ ಇತ್ತು. ಆದರೆ ಸತೀಶನು ಹೇಗೋ ನಮ್ಮನ್ನು ಆ ಟ್ರಾಫಿಕ್ ನಿಂದ ಪಾರುಮಾಡಿದನು. ನಮಗೆ ನೆಲಮಂಗಲ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ... ಸಮಯ ೧.೩೦ ಇರಬಹುದು, ವಿನೋದ, ಪ್ರಶಾಂತ ಮತ್ತು ಪ್ರವೀಣ ನಿದ್ರಾದೇವಿಗೆ ಶರಣಾಗಿದ್ದರು. ನಿದ್ದೆ ಮಾಡದ ನಾಗರಾಜ, ರಾಘು ಮತ್ತು ನಾನು ಹರಟೆಯಲ್ಲಿ ನಿರತರಾಗಿದ್ದೆವು...

ರಾಹೆ ೪ ರಿಂದ ಹೊನ್ನಾವರದ ಮಾರ್ಗಕ್ಕೆ ವಾಹನವನ್ನು ತಿರುಗಿಸಿ "ಗುಬ್ಬಿ"ಯ ಬಳಿ ಇದ್ದ ಪುಟ್ಟ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಚಹಾ ಕುಡಿದು ಅಲ್ಲಿಂದ ಹೊರಟೆವು. ವಾಹನದಲ್ಲಿ ಡಾ. ರಾಜ್ ಕುಮಾರ್ ಅವರ ಹಾಡುಗಳು ಕೇಳಿಬರುತ್ತಿದ್ದವು. ಸತೀಶ ವಾಹನ ಚಾಲನೆಯಲ್ಲಿ ಪರಿಣತನಾಗಿದ್ದರಿಂದ ನಾವು ಭದ್ರಾವತಿಯನ್ನು ಸುಮಾರು ೪.೦೦ಕ್ಕೆ ತಲುಪಿದೆವು. ಅಲ್ಲಿ ಸತೀಶನಿಗೆ ಚಹಾ ಕುಡಿಯಲು ವಾಹನವನ್ನು ನಿಲ್ಲಿಸಿದ. ಮತ್ತೆ ಪ್ರಯಾಣವನ್ನು ಮುಂದುವರೆಸಿ ತೀರ್ಥಹಳ್ಳಿಯ ಕಡೆಗೆ ಹೊರಟೆವು. ನಾವು ಶಿವಮೊಗ್ಗ ಸಿಟಿಯನ್ನು ತಲುಪದೇ ಉಪಮಾರ್ಗದಲ್ಲಿ ತೀರ್ಥಹಳ್ಳಿಯನ್ನು ಸುಮಾರು ೫.೪೫ಕ್ಕೆ ತಲುಪಿದೆವು.
ನಾವು ಹೊಟೆಲ್ ಮಯೂರದಲ್ಲಿ ತಂಗಲು ೩ ಕೋಣೆಗಳನ್ನು ಕಾದಿರಿಸಿದೆವು.

ಎಲ್ಲರಿಗೂ ದಣಿವಾಗಿದ್ದರಿಂದ ಸ್ವಲ್ಪ ಹೊತ್ತು ಕೋಣೆಯಲ್ಲಿ ಮಲಗಲು ನಿರ್ಧರಿಸಿದರು. ವಿನೋದ ಮತ್ತು ನಾನು ನಿದ್ದೆ ಮಾಡುವ ಮೂಡ್ ನಲ್ಲಿ ಇರಲಿಲ್ಲ. ಸಮಯ ವ್ಯರ್ಥ ಮಾಡದೇ ವಿನೋದ ಸ್ನಾನವನ್ನು ತಣ್ಣೀರಿನಲ್ಲಿ ಮಾಡಿದ. ನಾನು ಮುಖ ತೊಳೆದುಕೊಂಡೆ. ನಾವಿದ್ದ ಹೊಟೆಲ್ ಆಗಷ್ಟೇ ತೆರೆದಿತ್ತು, ಇಡ್ಲಿಯನ್ನು ತಿಂದು ಚಹಾ ಕುಡಿದು ಹೊಟೆಲಿನವರನ್ನು ಹತ್ತಿರವಿರುವ ಜಾಗಗಳ ಬಗ್ಗೆ ಕೇಳಲು ಅವರು "೧ ಕಿಮೀ. ದೂರದಲ್ಲಿ ಒಂದು ನದಿಯಿದೆ. ಅಲ್ಲಿಗೆ ಹೋಗಬಹುದು" ಎಂದರು. ಮುಂಜಾನೆಯ ಮಂಜಿನ ಕಾರಣ ನಮಗೆ ನದಿಯು ಕಾಣಲಿಲ್ಲ. ಆದರೆ ಶಬ್ದ ಕೇಳಿಸುತ್ತಿತ್ತು. ಅಲ್ಲೇ ಸ್ವಲ್ಪ ಸಮಯ ಇದ್ದೆವು. ಅಷ್ಟರಲ್ಲಿ ರಾಘು ಫೋನ್ ಮಾಡಿ ಸ್ನಾನ ಮಾಡಲು ಬಿಸಿನೀರು ಲಭ್ಯವಿದೆ ಎಂದಾಗ ಹೊಟೆಲ್ ಕಡೆಗೆ ಹೊರಟೆವು.

<span title=

ಕವಲೇದುರ್ಗ ಕೋಟೆ:

ಸ್ನಾನದ ನಂತರ ಹೊಟೆಲ್ ನಲ್ಲಿ ತಿಂಡಿಯನ್ನು ತಿಂದು ಕವಲೇದುರ್ಗ ಕೋಟೆಯ ಹಾದಿ ಹಿಡಿದೆವು. ಹಾದಿ ಸುಗಮವಾಗಿರಲಿಲ್ಲವಾದ್ದರಿಂದ ವೇಗ ಕಡಿಮೆ ಆಯ್ತು. ಕವಲೇದುರ್ಗ ಕೋಟೆಗೆ ಹೋಗುವ ಮಾರ್ಗದಲ್ಲಿ ನಮಗೆ ಒಂದು ಸೇತುವೆ ಸಿಕ್ಕಿತು... ಅಲ್ಲಿ ಪ್ರಶಾಂತನು ಪ್ರಕೃತಿಯ ಸೌಂದರ್ಯವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದನು.

<span title=

ಅಲ್ಲಿ ನಾವುಗಳು ಒಂದು ಗ್ರೂಪ್ ಫೋಟೊ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಈ ನಡುವೆ, ನಮ್ಮ "ಮಾರ್ಗದರ್ಶಕ" ಪ್ರಶಾಂತನು Confuse ಆಗಿದ್ದರಿಂದ ದಾರಿ ತಪ್ಪಿದೆವು. ಯಾರನ್ನಾದರೂ ಕೇಳೋಣವೆಂದರೇ, ಒಬ್ಬ ನರಪಿಳ್ಳೆಯೂ ಅಲ್ಲಿ ಇರಲಿಲ್ಲ. ಹಾಗೂ ಹೀಗೂ ಸರಿಯಾದ ದಾರಿಯನ್ನು ಕಂಡುಕೊಂಡು ಮುಂದೆ ಹೊರಟೆವು. ಸ್ವಲ್ಪ ಮುಂದೆ ಹೋದಾಗ ನಮಗೆ ಮಣ್ಣು ದಾರಿ ಸಿಕ್ಕಿತು. ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ, ಕೋಟೆಯ ಕಡೆಗೆ ಚಾರಣವನ್ನು ಆರಂಭಿಸಿದೆವು. ಆಗ ಸಮಯ ಹತ್ತು ಘಂಟೆ ನಲವತ್ತೈದು ನಿಮಿಷ... ನಾವು ಕೋಟೆಯನ್ನು ಚಾರಣ ಮಾಡಲು ತುಂಬಾ ಉತ್ಸುಕದಿಂದ ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿತ್ತು...
ಚಾರಣವನ್ನು ಶುರುಮಾಡಿದೆವು... ಕೋಟೆಯ ತುತ್ತತುದಿಯನ್ನು ತಲುಪಲು ನಮಗೆ ಸಹ್ಯಾದ್ರಿ ಪರ್ವತ ಶ್ರೇಣಿ ಹಾಗೂ ಲಿಂಗನಮಕ್ಕಿ ಜಲಾಶಯ ಕಾಣಿಸುತ್ತದೆ. ನಾವು (ನಾಗರಾಜ, ರಾಘು, ಪ್ರವೀಣ, ವಿನೋದ ಮತ್ತು ನಾನು) ಕೋಟೆಯಲ್ಲಿದ್ದ ಪರ್ಯಾಯ ದಾರಿಯನ್ನು ಹಿಡಿದು ಚಾರಣಮಾಡಿದ್ರೆ, <span title=

ಪ್ರಶಾಂತ ಮತ್ತು ಚಾಲಕ ಸತೀಶ್ ಕೋಟೆಯ Normal Route ಹಿಡಿದು ಮೆಟ್ಟಿಲುಗಳನ್ನೇರಿ ಬಂದರು... ಪ್ರಶಾಂತನು ತನ್ನ ಕ್ಯಾಮೆರಾದಲ್ಲಿ ಪ್ರಕೃತಿಯ ಸುಂದರ ನೋಟಗಳನ್ನು ಸೆರೆಹಿಡಿಯುತ್ತಾ ಮುಂದೆ ಸಾಗಿದನು.

ನಾವು ವಿಶ್ರಾಂತಿ ಪಡೆಯದೆಯೇ ಕವಲೇದುರ್ಗ ಕೋಟೆಯನ್ನು ಹತ್ತಿದೆವು... ಕೋಟೆಯ Peak Point ಅನ್ನು ತಲುಪಿದಾಗ ಸಮಯ ಹನ್ನೊಂದು ಘಂಟೆ ನಲವತ್ತೈದು ನಿಮಿಷ...

ಕೋಟೆಯ ತುತ್ತತುದಿಗೆ ಹೋದಾಗ ನಾವು ಕಂಡ ದೃಶ್ಯ ರಮಣೀಯವಾಗಿತ್ತು... ಸಹ್ಯಾದ್ರಿಯ ಪರ್ವತ ಶ್ರೇಣಿ,

<span title=

ಲಿಂಗನಮಕ್ಕಿ ಜಲಾಶಯ, ಮಾರ್ಗ ಮಧ್ಯದಲ್ಲಿ ಕಂಡ ಸೇತುವೆ ಎಲ್ಲವೂ ನಮಗೆ ಕಂಡವು. <span title=

ಒಟ್ಟಿನಲ್ಲಿ ನಾವು ಕಂಡಂತಹ ದೃಶ್ಯ ನಯನ ಮನೋಹರವಾಗಿತ್ತು... ಅಲ್ಲೇ ಸ್ವಲ್ಪ ಹೊತ್ತು ಕಾಲ ಕಳೆದು ನಂತರ ಕೋಟೆಯಿಂದ ವಾಪಸ್ಸಾಗಲು ನಿರ್ಧರಿಸಿದೆವು...
ನಾವು ಮತ್ತೆ ನಮ್ಮ ವಾಹನದ ಬಳಿ ವಾಪಸ್ ಬರುವ ಹೊತ್ತಿಗೆ ಸಮಯ ಒಂದು ಘಂಟೆ ಮೂವತ್ತು ನಿಮಿಷವಾಗಿತ್ತು... ಹೊಟ್ಟೆ ಹಸಿದಿತ್ತು... ಅಲ್ಲಿಂದ ೪೦ ಕಿ. ಮೀ ದೂರವಿರುವ "ನಗರ" ಎಂಬ ಊರಿನ ಕಡೆ ಹಾದಿ ಹಿಡಿದೆವು. ನಗರದಲ್ಲಿ ಊಟಾ ಮಾಡಿ ನಮ್ಮ ಮುಂದಿನ ಗುರಿ "ಹಿಡ್ಲೆಮನೆ ಜಲಪಾತ"ದ ಕಡೆಗೆ ಹೊರಟೆವು.

ಹಿಡ್ಲೆಮನೆ ಜಲಪಾತ:

ಈ ಸುಂದರ ಜಲಪಾತವು "ಹೊಸನಗರ" ತಾಲ್ಲೂಕಿನ "ನಿಟ್ಟೂರು" ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಸಿಗುವ "ಕುಂಬಳೆ" ಎನ್ನುವ ಊರಿನಲ್ಲಿ ಸಿಗುವ ಸರ್ಕಾರಿ ಪ್ರಾಥಮಿಕ ಶಾಲೆಯ ನಂತರದ ಬಲಕ್ಕೆ ತಿರುಗಿ ಒಂದು ಕಿ ಮೀ ಮುಂದೆ ಹೋದರೆ ಅಲ್ಲಿ ಒಂದು ಮನೆ ಸಿಗುತ್ತದೆ. ಆ ಮನೆಯ ಬಳಿ ನಮ್ಮ ವಾಹನವನ್ನಿ ನಿಲ್ಲಿಸಿ, ಮನೆಯ ಹಿಂಬದಿಯಲ್ಲಿರುವ ತೋಟದ ಮಾರ್ಗವಾಗಿ ಹೋದಾಗ ನಮಗೆ ಸಿಕ್ಕಿದ್ದು ಈ ಜಲಪಾತ... ಈ ಜಲಪಾತಕ್ಕೆ ಹೋಗುವ ಹಾದಿ ಸುಗಮವಾಗಿಲ್ಲ. ಈ ಜಲಪಾತಕ್ಕೆ ನಾವು ಚಾರಣ ಮಾಡಿಕೊಂದು ಹೋಗಬೇಕು. ಪಾಚಿ ಕಟ್ಟಿದ್ದ ಕಲ್ಲು ಬಂಡೆಗಳನ್ನು ದಾಟಿಕೊಂಡು ಮೇಳೆ ಹತ್ತಿಕೊಂಡು ಹೋದಾಗ ನಮಗೆ ಈ ಜಲಪಾತ ಸಿಕ್ಕಿತು.

<span title=

ಈ ಜಲಪಾತದ ಕೆಲವು ಪಾಪೆಗಳನ್ನು ತೆಗೆದು, ಮುಕ್ಕಾಲು ಘಂಟೆ ಅಲ್ಲಿ ಕಾಲ ಕಳೆದು, ನಂತರ ಅಲ್ಲಿಂದ ಹೊರೆಟೆವು.
ಸಮಯ ಸಂಜೆ ಐದಾಗಿತ್ತು. ವಾಹನದ ಬಳಿ ಬಂದು ಅಲ್ಲಿಂದ ವಾಹನದಲ್ಲಿ ತೀರ್ಥಹಳ್ಳಿಯ ಕಡೆ ಪ್ರಯಾಣ ಬೆಳೆಸಿದೆವು... ತೀರ್ಥಹಳ್ಳಿಯ ಮಾರ್ಗದಲ್ಲಿ ಚಹಾ ಕುಡಿಯಲು ಮನಸ್ಸಾಗಿ, ಚಹಾ ಕುಡಿಯಲು ವಾಹನವನ್ನು ನಿಲ್ಲಿಸಿ, ಚಹಾ ಕುಡಿದು ಮತ್ತೆ ತೀರ್ಥಹಳ್ಳಿಯ ಕಡೆ ಪ್ರಯಾಣವನ್ನು ಬೆಳೆಸಿದೆವು. ತೀರ್ಥಹಳ್ಳಿ ತಲುಪಿದಾಗ ಸಮಯ ಏಳು ಘಂಟೆ ಮೂವತ್ತು ನಿಮಷ... ನಾವೆಲ್ಲರೂ ಫ್ರೆಶ್ ಆಗಿ, ಹೊಟೆಲ್ಲ್ಲೊಂದರಲ್ಲಿ ಊಟವನ್ನು ಮಾಡಿ ಮತ್ತೆ ನಾವಿದ್ದ ಕೋಣೆಗೆ ಬರುವಹೊತ್ತೆಗೆ ರಾತ್ರಿ ಹತ್ತು ಘಂಟೆ... ಆಮೇಲೆ, ಆ ದಿನದಲ್ಲಿ ಆದ ಘಟನೆಗಳನ್ನು ನಮ್ಮ ನಮ್ಮ ಮನೆಯವರಿಗೆ ದೂರವಾಣಿಯ ಮೂಲಕ ಕರೆ ಮಾಡಿ ತಿಳಿಸಿದೆವು...

ದಿನಾಂಕ ೨೭ ಜನವರಿ ೨೦೦೭:

ಬೆಳಿಗ್ಗೆ ನನ್ನನ್ನು ಹೊರತುಪಡಿಸಿ ಎಲ್ಲರೂ ಬೇಗನೆ ಎದ್ದು, ವಿನೋದ ಮತ್ತೆ ನಾನು ಹಿಂದಿನ ದಿನ ಹೋಗಿದ್ದ ನದಿಯ ಬಳಿ ಹೊರಟರು... ನಾನು ಇನ್ನು ಸ್ವಲ್ಪ ಹೊತ್ತು ಮಲಗಿದ್ದು, ಅವರು ಬರುವ ಹೊತ್ತಿಗೆ ಸ್ನಾನವನ್ನು ಮಾಡಿ ಅವರು ಬರುವಿಕೆಗಾಗಿ ಕಾಯುತ್ತಿದ್ದೆ... ಎಲ್ಲರೂ ಬಂದಮೇಲೆ, ಹೊಟೆಲ್ ಮಯೂರದಲ್ಲಿ ತಿಂಡಿಯನ್ನು ತಿಂದು ತೀರ್ಥಹಳ್ಳಿಯಿಂದ ಹನ್ನೆರಡು ಕಿ. ಮೀ ದೂರದಲ್ಲಿರುವ ಕುಪ್ಪಳ್ಳಿಯ ಕಡೆಗೆ ದಾರಿ ಹಿಡಿದೆವು...

<span title=

ಕುಪ್ಪಳ್ಳಿ ಎಲ್ಲರಿಗೂ ತಿಳಿದಿರುವಂತೆ ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ಊರು. ಅವರಿದ್ದ ಮನೆಯನ್ನು ಈಗ ಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ...

<span title=

ಅಲ್ಲಿ ಸುಮಾರು ಎರಡು ಘಂಟೆ ಕಾಲ ಕಳೆದು ಕೆಲವು ಪುಸ್ತಕಗಳನ್ನು ಖರೀದಿಸಿ ಅಲ್ಲಿಂದ ಶೃಂಗೇರಿಯ ಕಡೆ ಪ್ರಯಾಣವನ್ನು ಬೆಳೆಸಿದೆವು...
ನಾವು ಶೃಂಗೇರಿಯನ್ನು ತಲುಪುವ ಹೊತ್ತಿಗೆ ಸಮಯ ಮಧ್ಯಾಹ್ನ ಒಂದು ಘಂಟೆಯಾಗಿತ್ತು... ಶೃಂಗೇರಿ ಶಾರದಾಂಬೆಯ ದರ್ಶನವನ್ನು ಮಾಡಿ, ತುಂಗಾ ತೀರದಲ್ಲಿ ಸವಲ್ಪ ಹೊತ್ತು ಕಾಲ ಕಳೆದು ದೇವಸ್ಥಾನದಲ್ಲಿ ಊಟವನ್ನು ಮಾಡಿ "ಆಗುಂಬೆ" ಕಡೆ ಹೊರಟೆವು... ಹಾದಿಯು ಸುಗಮವಾಗಿದ್ದರಿಂದ ಸತೀಶನು ವಾಹನವನ್ನು ವೇಗವಾಗಿ ಡ್ರೈವ್ ಮಾಡಿದನು... ಆಗುಂಬೆಗೆ ಒಂದು ಕಿ. ಮೀ ಮುಂಚೆ ಎಡಕ್ಕೆ ತಿರುಗಿದರೆ ಬರ್ಕಣ ಜಲಪಾತಕ್ಕೆ ಹೋಗುವ ದಾರಿ ಸಿಗುತ್ತದೆ... ಆ ಜಂಕ್ಷನ್ ಇಂದ ಸ್ವಲ್ಪ ಮುಂದೆ ಹೋದರೆ ನಮಗೆ ಮತ್ತೊಂದು Deviation ಕಾಣುತ್ತದೆ. ಮುಖ್ಯರಸ್ತೆಯಿಂದ ಏಳು ಕಿ. ಮೀ ಮುಂದೆ ಹೋದರೆ ಸೊಗಸಾದ ಬರ್ಕಣ ಜಲಪಾತ ಸಿಗುತ್ತದೆ. ಮುಖ್ಯರಸ್ತೆಯಿಂದ ಬಲಕ್ಕೆ ತಿರುಗಿ ಎರಡು ಕಿ. ಮೀ ಮುಂದೆ ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋದೆವು. ನಿರ್ಜನ ಪ್ರದೇಶವಾಗಿದ್ದರಿಂದ ಆತಂಕವಾಗುತ್ತಿತ್ತು. ವಿನೋದ ಮತ್ತು ರಾಘವೇಂದ್ರ ನಮಗಿಂತ ಮುಂದೆ ಇದ್ದರು. ದಟ್ಟವಾದ ಕಾಡು ಪ್ರದೇಶದಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದಾಗ ವಿಚಿತ್ರ ಶಬ್ದ, ಹಕ್ಕಿಗಳ ಕಲರವ ಕೇಳಿಬರುತ್ತಿದ್ದವು. ಆತಂಕದಲ್ಲೂ ಒಂದು ರೀತಿಯ ಆನಂದವಿತ್ತು. ಮುಂದೇನಾಗುತ್ತದೆ ಎಂಬ ಕುತೂಹಲ ನಮ್ಮನ್ನು ಕಾಡುತ್ತಿತ್ತು... ಹಾಗೇ ಮುಂದೆ ನಡೆದುಕೊಂಡು ಹೋದೆವು. ಇನ್ನೇನು ನಾವು ಜಲಪಾತದ ಹತ್ತಿರವಿದ್ದಾಗ, ನಾಗರಾಜ ಅವರಿಗೆ ಭಯವಾಗಿ ವಾಪಸ್ ಹೊರಡೋಣ ಎಂದರು. ಪ್ರಶಾಂತನು ಏನಾದರಾಗಲಿ ಜಲಪಾತವನ್ನು ನೋಡಿಯೇ ತೀರೋದು ಅಂತ ಪಟ್ಟು ಹಿಡಿದ ಮುಂದಕ್ಕೆ ಸಾಗಿದ. ನಾಗರಾಜನಿಗೆ ಬೇರೆ ವಿಧಿಯಿಲ್ಲದೆ ನಮ್ಮನ್ನು ಹಿಂಬಾಲಿಸಿಕೊಂಡು ಬರುವಂತಾಯಿತು. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಲೇ ನಮಗೆ ಸುಂದರವಾದ ಬರ್ಕಣ ಜಲಪಾತ ಕಾಣಿಸಿತು. ನಮ್ಮ ಕಣ್ಣುಗಳನ್ನು ನಂಬುವುದಕ್ಕೇ ಸಾಧ್ಯವಾಗಲಿಲ್ಲ. ಅಷ್ಟು ಸೊಗಸಾಗಿತ್ತು...

<span title=

ಪರ್ವತ ಶ್ರೇಣಿಗಳ ಮಧ್ಯೆಯಿಂದ ಧುಮ್ಮಿಕ್ಕುತ್ತಿದ್ದ ಬರ್ಕಣ ಜಲಪಾತದ ಬಳಿ ಕೆಲ ಹೊತ್ತು ಕಾಲ ಕಳೆದು ನಂತರ ಅಲ್ಲಿಂದ ಆಗುಂಬೆಯ ಕಡೆಗೆ ಹೊರಟೆವು.
ಆಗುಂಬೆಯಲ್ಲಿ ಸೂರ್ಯಾಸ್ತವನ್ನು ನೋಡಿ ಅಲ್ಲಿಂದ ಹೊರಡುವ ಹೊತ್ತಿಗೆ ಸಂಜೆ ಆರು ಘಂಟೆ ಮೂವತ್ತು ನಿಮಿಷ...

ಸೂರ್ಯಾಸ್ತವನ್ನು ನೋಡಿ ಅಲ್ಲಿಂದ ಬೆಂಗಳೂರಿಗೆ ಚಿಕ್ಕಮಗಳೂರು, ಹಾಸನ ಮಾರ್ಗವಾಗಿ ಹೋಗಲು ನಿರ್ಧರಿಸಿ, ಆಗುಂಬೆ ಚೆಕ್ ಪೋಸ್ಟ್ ಬಳಿ ಚಹಾ ಕುಡಿದು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ವಾಹನದಲ್ಲಿ ವಿನೋದನು ಡಾ||ರಾಜ್ ಕುಮಾರ್ ಅವರು ಹಾಡಿರುವ ಕೆಲವು ಹಾಡುಗಳನ್ನು ಹಾಡಿ ನಮ್ಮನ್ನು ರಂಜಿಸಿದನು.

ನಂತರ ನಾಗರಾಜ ಉಪೇಂದ್ರರ ರಕ್ತಕಣ್ಣೀರು ಚಿತ್ರದ ಸಂಭಾಷಣೆಗಳನ್ನು ಹೇಳಿ ನಮ್ಮನು ರಂಜಿಸಿದರು.

ವಾಹನವನ್ನು ಜಯಪುರದ ಬಳಿ ನಿಲ್ಲಿಸಿ ಮತ್ತೆ ಚಹಾ ಕುಡಿದು, ಹಾಸನದಲ್ಲಿ ಊಟಕ್ಕೆ ನಿಲ್ಲಿಸಿ, ಊಟವನ್ನು ಮುಗಿಸಿ ಅಲ್ಲಿಂದ ಹೊರಟಾಗ ರಾತ್ರಿ ಹನ್ನೊಂದು ಘಂಟೆ...
ಬೆಂಗಳೂರಿಗೆ ತಲುಪುವ ಹೊತ್ತಿಗೆ ಮುಂಜಾನೆ ಮೂರಾಗಿತ್ತು...

ಎಲ್ಲರನ್ನೂ ಅವರವರ ಮನೆಗೆ ಬಿಟ್ಟು ನಾನು ರಾಘು ಮನೆಗೆ ಹೋಗುವಷ್ಟರಲ್ಲಿ ಬೆಳಿಗ್ಗೆ ನಾಲ್ಕಾಗಿತ್ತು...

2 comments:

  1. ಗುಬ್ಬಿಯಿಂದ ತುರುವೇಕೆರೆಗೆ ಏಕೆ ಹೋದಿರಿ? ಇದರಿಂದ ಬಹುಶಃ ನೀವು ೪೦-೫೦ ಕಿ.ಮೀ ಹೆಚ್ಚುವರಿ ಕ್ರಮಿಸಿದ್ದೀರಿ.
    ತುರುವೇಕೆರೆಗೆ ಹೋಗಲೇ ಬೇಕಿದ್ದರೆ ಕುಣಿಗಲ್ ಯಡಿಯೂರು ಮಾಯಸಂದ್ರ ಮಾರ್ಗ ಹೆಚ್ಚು ಸೂಕ್ತ.

    ReplyDelete
  2. ಪ್ರತಿಕ್ರಿಯೆಗೆ ಧನ್ಯವಾದಗಳು.

    ಅಯ್ಯೋ!!! ಅದು ತಿಪಟೂರು.

    ತುರುವೇಕೆರೆಗೆ ಹೋಗ್ಲಿಲ್ಲ.

    ಈಗ ಬದಲಾಯಿಸಿದ್ದೇನೆ.

    ಮತ್ತೊಮ್ಮೆ ಥ್ಯಾಂಕ್ಸ್.

    ReplyDelete