My Blog List

Wednesday, October 29, 2008

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

<span title=

ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅಲಂಕಾರ ಶಾಸ್ತ್ರಗಳ ಅಧ್ಯಯನ ಮಾಡಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ವಾಲ್ಮೀಕಿ ರಾಮಾಯಣದ ಇಪ್ಪತ್ತನಾಲ್ಕು ಶ್ಲೋಕಗಳನ್ನು ಕಂಠಪಾಠ ಮಾಡಿ ಶ್ರೀ ತ್ಯಾಗರಾಜರು ಸುಮಧುರವಾಗಿ ಹಾಡುತ್ತಿದ್ದರು. ತಂದೆ ರಾಮಬ್ರಹ್ಮರ ರಾಮಾಯಣದ ವ್ಯಾಖ್ಯಾನಕ್ಕೆ ಶ್ಲೋಕಗಳನ್ನು ಹಾಡುತ್ತಿದ್ದರು.

ಸೊಂಠಿ ವೆಂಕಟರಮಣ ಭಾಗವತರ ಶಿಷ್ಯರಾಗಿ, ತಮ್ಮ ಎಂಟನೇ ವಯಸ್ಸಿನಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಕಾಲಾವಧಿಯಲ್ಲಿ ಸಂಗೀತದಲ್ಲಿ ಪಾರಂಗತರಾದರು. ಗುರುಗಳು ಹೆಮ್ಮೆಯಿಂದ "ದೊರಕುನಾ ಇಟುವಂಟಿ ಶಿಷ್ಯುಡು" ಅಂದರೆ "ಇಂತಹ ಶಿಷ್ಯನು ದೊರಕುವನೇ" ಎಂದು ಸಭಿಕರ ಮುಂದೆ ತ್ಯಾಗರಾಜರನ್ನು ಹೊಗಳಿದರು.

ಮುಂದೆ ರಾಮಕೃಷ್ಣಾನಂದ ಯತಿಗಳಿಂದ ತಾರಕನಾಮ ಉಪದೇಶವಾಯಿತು. ಶ್ರೀ ರಾಮಚಂದ್ರನೇ ಅವರ ಸರ್ವಸ್ವವಾದನು. ತೊಂಬತ್ತಾರು ಕೋಟಿ ರಾಮನಾಮ ಮಂತ್ರವನ್ನು ಜಪಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ, ಅವನ ದರ್ಶನವನ್ನು ಅನೇಕ ಬಾರಿ ಪಡೆದರು. ಶ್ರೀ ತ್ಯಾಗರಾಜರ ಪರಂಪರೆಯಲ್ಲಿ ಕರ್ನಾಟಕ ಸಂಗೀತವು ಸಮೃದ್ಧವಾಗಿ ಬೆಳೆದು, ಜನಮನವನ್ನು ಸೂರೆಗೊಂಡಿತು.

ಅವರ ಕೃತಿಗಳು ಭಕ್ತಿ ಪ್ರಧಾನವಾಗಿ ತತ್ವಗಳು, ನೀತಿಗಳು, ಪುರಾಣಗಳ ಸತ್ವವನ್ನು ಒಳಗೊಂಡಿವೆ. ಮೊಟ್ಟಮೊದಲಿಗೆ ಕೃತಿಗಳಲ್ಲಿ ಸಂಗತಿಗಳನ್ನು ಅಳವಡಿಸಿದವರು ತ್ಯಾಗರಾಜರು ಎಂಬ ಹೆಗ್ಗಳಿಕೆ ಇವರದು. ತಾವು ಭೇಟಿ ಕೊಟ್ಟ ಕ್ಷೇತ್ರಗಳ ಅಧಿದೇವತೆಗಳನ್ನು ಸರಳಸುಂದರ ಕೃತಿಗಳ ಮೂಲಕ ಸ್ತುತಿಸಿರುವುದು ಲಾಲ್ಗುಡಿ ಪಂಚರತ್ನ, ತಿರುವೊಟ್ಟ್ರಿಯೂರು ಪಂಚರತ್ನ, ಕೋವೂರು ಪಂಚರತ್ನಗಳೆಂದು ಪ್ರಸಿದ್ದವಾಗಿವೆ. ಅವರು ರಚಿಸಿರುವ ಘನರಾಗ ಪಂಚರತ್ನಗಳಂತೂ ಸಂಗೀತ ಕ್ಷೇತ್ರಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.

ಇವರ ಪತ್ನಿ ಶಾಂತಮ್ಮ, ಮಗಳು ಸೀತಾಲಕ್ಷ್ಮಿ.

ಅನೇಕ ಶಿಷ್ಯರಿಗೆ ತರಬೇತಿಯನ್ನು ನೀಡಿ ತಮ್ಮ ಸಂಗೀತ ರಚನೆಗಳು ಪರಂಪರಾಗತವಾಗಿ ಉಳಿಯುವಂತೆ ಮಾಡಿದರು. ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಪುಷ್ಯ ಬಹುಳ ಪಂಚಮಿಯಂದು ಶ್ರೀರಾಮನ ಪಾದಾರವಿಂದವನ್ನು ಸೇರಿದರು. ನಾದ ಬ್ರಹ್ಮಾನಂದರಾಗಿ, ನಾದ ಯೋಗಿಯೆನಿಸಿದರು. ಇಂದಿಗೂ ತ್ಯಾಗರಾಜರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇಶದ ಮೂಲೆಮೂಲೆಗಳಲ್ಲೂ ತ್ಯಾಗರಾಜರ ಆರಾಧನೆಯನ್ನು ಆಚರಿಸುವುದು ವಾಡಿಕೆಯಾಗಿದೆ.

ತ್ಯಾಗರಾಜರ ಪಂಚರತ್ನ ಕೀರ್ತನೆಗಳು ಇಲ್ಲಿವೆ ನೋಡಿ...

೧. ಜಗದಾನಂದ ಕಾರಕ - ನಾಟ ರಾಗ - ಆದಿತಾಳ

೨. ದುಡುಕು ಗಲ - ಗೌಳರಾಗ - ಆದಿತಾಳ

೩. ಸಾಧಿಂಚೆನೆ - ಆರಭಿ ರಾಗ - ಆದಿತಾಳ

೪. ಕನಕನ ರುಚಿರಾ - ವರಾಳಿ ರಾಗ - ಆದಿತಾಳ

೫. ಎಂದರೋ ಮಹಾನುಭಾವುಲು - ಶ್ರೀ ರಾಗ - ಆದಿತಾಳ




ಈ ಮಾಹಿತಿ ಕೃಪೆ: ಕರ್ನಾಟಕ ಸಂಗೀತ - ಪ್ರಾಥಮಿಕ ಹಂತ [ಜೂನಿಯರ್ ಗ್ರೇಡ್] ಪುಸ್ತಕ