My Blog List

Monday, May 04, 2009

ಮಾನಸ ಸರೋವರ ಯಾತ್ರೆ

ಮಾನಸ ಸರೋವರ ಯಾತ್ರೆ

ಎಲ್ಲಿದೆ?
ಮಾನಸ ಸರೋವರ ಭಾರತ - ನೇಪಾಳ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು ೧೪,೯೫೦ ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಹೋಗುವುದು ಜೀವನದ ಅತಿ ಮುಖ್ಯ ಕರ್ತವ್ಯ ಎಂಬುದು ನಂಬಿಕೆ.

ಮಾನಸ ಸರೋವರ


ಮಾನಸ ಸರೋವರ ವಿಶೇಷ.
ಕೈಲಾಸ ಪರ್ವತ ಶಿಖರವು ಪ್ರಪಂಚದ ಅತಿ ಎತ್ತರದ ಶಿಖರಗಳಲ್ಲಿ (ಸುಮಾರು ೨೩,೦೦೦ ಅಡಿಗಳು) ಒಂದು. ಇದಕ್ಕೆ ಅನೇಕ ಹೆಸರುಗಳಿವೆ. ಮೇರು, ಸುಮೇರು, ಸುಷುದ್ನು, ಹೇಮಾದ್ರಿ, ದೇವಪರ್ವತ, ಗಾನಪರ್ವತ, ರಜತಾದ್ರಿ, ರತ್ನ ಸ್ತಂಭ ಎಂಬ ಹೆಸರುಗಳೂ ಇವೆ. ಇದಕ್ಕೆ ರಾವಣ ಪರ್ವತ, ಹನುಮಾನ್ ಪರ್ವತ, ಪದ್ಮ ಸಂಭವ, ಮಂಜುಶ್ರೀ, ವಜ್ರಧರ, ಅವಲೋಕಿತೇಶ್ವರ ಎಂದೂ ಕರೆಯುತ್ತಾರೆ. ಇದು ಪಾರ್ವತಿ-ಪರಮೇಶ್ವರರ ಆವಾಸಸ್ಥಾನ. ಶಿವಶಕ್ತಿಯರು ಒಂದುಗೂಡಿದ ಜಾಗ. ಪ್ರಕೃತಿ ಪುರುಷರ ಮಿಲನ ಸ್ಥಾನ. ಜೀವಾತ್ಮ ಪರಮಾತ್ಮರ ಐಕ್ಯ ಸ್ಥಾನ. ವಿಶ್ವದ ರಚನೆ, ಸ್ಥಿತಿ, ಲಯಗಳಿಗೆ ಕಾರಣೀಭೂತವಾದ ಕೇಂದ್ರಬಿಂದು (Pillar of the Universe) ಮುಂತಾದವು. ಇದು ವರ್ಷದ ಎಲ್ಲಾ ಕಾಲವೂ ಹಿಮಾಚ್ಛಾದಿತವಾಗಿರುವುದು. ಈ ಸ್ಥಳವನ್ನು ದೂರದಿಂದ ದರ್ಶನ ಮಾಡಬಹುದೇ ಹೊರತು ಹತ್ತಲಾಗುವುದಿಲ್ಲ. ಇಚ್ಛೆಪಟ್ಟರೆ ಅದರ ಪರಿಕ್ರಮ ಮಾಡಬಹುದು. ಅದರ ಮಾರ್ಗ ೫೦ ಕಿ. ಮೀ. ಅದರಲ್ಲಿ ನಂದಿ ಗೊಂಫ್, ದಿರಾಚಕ್, ಗೌರಿಕುಂಡ, ಜಾನುಲಾ ಪಾರ್ಕ್ ಎಂಬ ಸ್ಥಳಗಳು ಬರುವುವು.

ಹೇಗೆ ಹೋಗಬೇಕು? ಯಾವಾಗ?
ಪ್ರತಿ ವರ್ಷದ ಜೂನ್ ತಿಂಗಳಿಂದ ಸೆಪ್ಟೆಂಬರ್ ಕೊನೆಯ ವಾರದವರೆಗೆ (ಹಿಮ ಕಡಿಮೆ ಇರುವ ತಿಂಗಳುಗಳನ್ನು ಪರಿಗಣಿಸಿ) ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು. ಇದು ನಾವಿ ಇಚ್ಛಿಸಿದಂತೆ ಕೈಗೊಳ್ಳುವ ಯಾತ್ರೆಯಲ್ಲ. ಭಾರತದ ವಿದೇಶಾಂಗ ಮಂತ್ರಾಲಯ "ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್" (ಐ. ಟಿ. ಬಿ. ಪಿ) ನೇತೃತ್ವದಲ್ಲಿ ಈ ಯಾತ್ರೆಯನ್ನು ನೆರವೇರಿಸುತ್ತದೆ. ಹೋಗಲು ಬಯಸುವವರು ಈ ಐ. ಟಿ. ಬಿ. ಪಿ ಪರೀಕ್ಷೆ ಎದುರಿಸಬೇಕು. ಇದು ಯಾತ್ರಾಕಾಂಕ್ಷಿಗಳ ದೈಹಿಕ, ಮಾನಸಿಕ ದೃಢತೆ ಹಾಗೂ ಸಾಮರ್ಥ್ಯ ಪರಿಶೀಲಿಸಿ ಯಾತ್ರೆಯ ಸಮಯ ನಿಗದಿ ಪಡಿಸುತ್ತಾರೆ. ಯಾತ್ರೆಯ ಅವಧಿ ೨೮ ದಿನಗಳು. ಇದಕ್ಕಾಗಿ ೪೦ ಸದಸ್ಯರ ವಿವಿಧ ತಂಡಗಳನ್ನು ರಚಿಸಲಾಗುತ್ತದೆ. ಈ ತಂಡದಲ್ಲಿ ಯಾತ್ರಾರ್ಥಿಗಳಲ್ಲದೆ ಭದ್ರತಾ ಸಿಬ್ಬಂದಿ, ನುರಿತ ವೈದ್ಯರೂ ಇರುತ್ತಾರೆ. ಯಾವ ತಂಡದಲ್ಲಿ ಹೋಗಬೇಕು ಎಂಬ ವಿವರವನ್ನು ಯಾತ್ರಾರ್ಥಿಗಳಿಗೆ ಕನಿಷ್ಠ ಆರು ತಿಂಗಳು ಮೊದಲೇ ತಿಳಿಸಲಾಗುತ್ತದೆ.

ಯಾತ್ರೆಯ ಸಿದ್ಧತೆ.
ಮಾನಸ ಸರೋವರದ ಯಾತ್ರೆ ಉಳಿದ ತೀರ್ಥಯಾತ್ರೆಗಳಷ್ಟು ಸುಲಭವಾದದ್ದಲ್ಲ. ಇದಕ್ಕೆ ದಿನಕ್ಕೆ ಕನಿಷ್ಠ ೧೦ ಕಿ. ಮೀ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮಂಕಿಕ್ಯಾಪ್, ಸ್ವೆಟರ‍್, ಉಣ್ಣೆಯ ಕೈಕವಚ, ಥರ್ಮಲ್ ಬಟ್ಟೆಗಳು, ರೈನ್ ಕೋಟ್, ಹಿಮಪಾತ ತಡೆಯಬಲ್ಲ ಕೊಡೆ, ಸಣ್ಣ ಕತ್ತರಿ, ಚಾಕು, ಚಾರಣಕ್ಕೆ ಹೊಂದುವಂಥ ಬೂಟುಗಳು, ಹಿಮಪಾತವಾದರೆ ತಡೆಯಬಲ್ಲ ವಾಟರ್ ಪ್ರೂಫ್ ಬೂಟುಗಳು, ಮಂಜಿನ ಹೊಡೆತ ತಡೆಯಬಲ್ಲ ಕನ್ನಡಕ, ಧೂಳಿನಿಂದ ರಕ್ಷಿಸಬಲ್ಲ ಮುಖವಾಡ ಇವೆಲ್ಲ ಬೇಕೇಬೇಕು. ಅದು ನುರಿತರಿಂದ ಪರಿಶೀಲಿಸಲ್ಪಡುವುದು ಅನಿವಾರ್ಯ. ಇದರ ಜೊತೆಗೆ ಗ್ಲೂಕೋಸ್, ಚಾಕೊಲೇಟ್, ನೀರಿನ ಬಾಟಲಿಗಳು, ಪೋರ‍್ಟಬಲ್ ಆಕ್ಸಿಜೆನ್ ಸಿಲಿಂಡರ‍್ಗಳು, ಆಮ್ಲಜನಕ ಪರಿಮಾಣ ಹಾಗೂ ನಾಡಿ ಮಿಡಿತವನ್ನು ಏಕಕಾಲದಲ್ಲಿ ನೋಡಬಲ್ಲ ಪಲ್ಸ್ ಆಕ್ಸಿಮೀಟರ್ ಅವಶ್ಯವಾಗಿ ಬೇಕು.

ಯಾತ್ರೆಯ ವಿಧಾನ.
ವಿಮಾನ, ರೈಲು, ಬಸ್ ಹೀಗೆ ಯಾವ ಮಾರ್ಗದಿಂದಲಾದರೂ ನೇಪಾಳದ ರಾಜಧಾನಿಯಾದ ಕಠ್ಮಂಡು ತಲುಪಬಹುದು. ಅಲ್ಲಿಂದಲೇ ಯಾತ್ರೆ ಆರಂಭ. ಅಲ್ಲಿಂದ ಅಧಿಕೃತ ಬಸ್ ಮೂಲಕ ಕಡೋರಿಗೆ ಪ್ರಯಾಣ. ಇದು ಚೀನಾದ ಗಡಿ. ಇಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ನಂತರ ಮಾನಸ ಸರೋವರ ಯಾತ್ರೆಗೆ ಅನುಮತಿ ಇದೆ. ಇಲ್ಲಿಂದ ಸಿಂಕೋಲಾ ಎಂಬ ಹಳ್ಳಿಯವರೆಗೆ ಮಾತ್ರ ವಾಹನ ಸೌಲಭ್ಯವಿದೆ. ಚಾರಣ ಇಲ್ಲಿಂದಲೇ ಆರಂಭ. ೬ ಕಿ. ಮೀ. ಕ್ಲಿಷ್ಟಕರ ಹಾದಿಯಲ್ಲಿ ನಡೆದರೆ ’ಗಾಲಾ’ ಸಿಗುತ್ತದೆ. ಇದು ಬಹಳ ಸುಂದರವಾದ ಹಿಮನಗರಿ. ಕಾಳಿದಾಸನ ’ಮೇಘದೂತ’ದ ಕಾವ್ಯ ಕ್ಷೇತ್ರ ಇದೇ ಎಂದು ನಂಬಿಕೆ. ಇಲ್ಲಿಒಂದ ೪೦೦೦ ಅಡಿ ಇಳಿಯಬೇಕು. ಇದು ಅತಿ ದುರ್ಗಮವಾದ ಹಾದಿ. ಭೂಕುಸಿತ, ಹಿಮಪಾತ ಇಲ್ಲಿ ಸರ್ವೇಸಾಮಾನ್ಯ. ಯಾತ್ರಿಗಳು ಈ ಸವಾಲನ್ನು ಎದುರಿಸಿಕೊಂಡೇ ಸಾಗಬೇಕು. ಹೀಗೆ ಸಾಗಿದರೆ ’ಮಲ್ಪಾ’ ಸಿಗುತ್ತದೆ. ಅಲ್ಲಿಂದ ಕಿರಿದಾದ ಹಾದಿ ಮೂಲಕ ’ಬುಧಿ’ ಸೇರಬೇಕು. ನಂತರ ಎರಡು ಸಾವಿರ ಅಡಿ ಹತ್ತಿದರೆ ’ಅನ್ನಪೂರ್ಣೇಶ್ವರಿ’ ಪರ್ವತದ ಸಾಲು ಸಿಗುತ್ತದೆ. ಇಲ್ಲಿಂದ ಮುಂದೆ ಚಾರಣಕ್ಕೆ ’ಯಾಕ್’ ಪ್ರಾಣಿಗಳ ಅಥವಾ ಟಿಬೆಟಿಯನ್ ಗೈಡುಗಳ ಸಹಾಯ ಬೇಕೇಬೇಕು. ಸುಮಾರು ನಾಲ್ಕು ಕಿ.ಮೀ. ನಡೆದರೆ ’ಗುಂಜಿ’ ಸಿಗುತ್ತದೆ. ಇಲ್ಲಿ ಕಿರುಕೈಲಾಸ ಪರ್ವತ ಕಾಣಿಸುವುದು. ಈ ಸ್ಥಳದಲ್ಲಿ ಐ. ಟಿ. ಬಿ. ಪಿ ವೈದ್ಯರ ತಪಾಸಣೆ ಕಡ್ಡಾಯ. ಇದರಲ್ಲಿ ತೇರ್ಗಡೆಯಾದರೆ ಮಾತ್ರ ಮುಂದಿನ ಯಾತ್ರೆ, ಇಲ್ಲದಿದ್ದರೆ ಮಾನಸ ಸರೋವರ ಯಾತ್ರೆ ಇಲ್ಲಿಯೇ ಮೊಟಕುಗೊಳ್ಳುತ್ತದೆ.

ಮಾನಸ ಸರೋವರ

ಗುಂಜಿಯಿಂದ ’ಕಾಲಾಪಾನಿ’ವರೆಗೆ ೧೦ ಕಿ.ಮೀ. ಹಿಮಪರ್ವತದ ಹಾದಿ. ಮಂಜು ಮುಸುಕಿದ ಪರ್ವತದ ನಡುವಿನ ಈ ಪ್ರಯಾಣಕ್ಕೆ ಆಮ್ಲಜನಕದ ಸಿಲಿಂಡರುಗಳು ಅವಶ್ಯವಾಗಿ ಬೇಕು. ಮಧ್ಯದಲ್ಲಿ ವೈದ್ಯರ ಚಿಕಿತ್ಸೆ ಅವಶ್ಯವಾಗಬಹುದು. ಅದಕ್ಕೆ ವ್ಯವಸ್ಥೆ ಇರುತ್ತದೆ. ಉತ್ತರಾಂಚಲದ ಮಂಡಲ್ ವಿಕಾಸ್ ನಿಗಮ್ ಇಲ್ಲಿ ಅನೇಕ ಚಿಕಿತ್ಸಾ ಶಿಬಿರಗಳನ್ನು, ಆಹಾರ ವ್ಯವಸ್ಥೆ ನಿರ್ವಹಣಾ ತಾಣಗಳನ್ನು ನಿರ್ಮಿಸಿದೆ.

ದಾರಿಯಲ್ಲಿನ ಕೆಲವು ಗುಹೆಗಳಿಗೆ ’ವ್ಯಾಸಗುಹೆ’ ಎಂಬ ಹೆಸರಿದೆ. ಪುರಾಣದ ವ್ಯಾಸರು ಇಲ್ಲಿದ್ದರು ಎಂಬ ನಂಬಿಕೆ ಇದೆ. ಇಲ್ಲಿ ಕಾಳಿ ದೇವಾಲಯವೂ ಇದೆ. ಹೀಗೆ ೧೨,೦೦೦ ಅಡಿ ಹತ್ತಿದಾಗ ನಾಭಿದಂಗ್ ಪರ್ವತ ಶ್ರೇಣಿಗೆ ಯಾತ್ರಿಗಳು ತಲುಪುವರು. ಇಲ್ಲಿ ಮಂಜುಗಡ್ಡೆಗಳಿಂದ ಉಂಟಾದ ’ಓಂ’ ಎಂಬ ಸ್ವರೂಪ ಸ್ಪಷ್ಟವಾಗಿ ಕಾಣುತ್ತದೆ. ಈ ಪರ್ವತ ಶ್ರೇಣಿಯಲ್ಲಿ ಗಣಪತಿ-ಆಂಜನೇಯ ಮತ್ತು ಸಾಕ್ಷಾತ್ ಪರಶಿವನನ್ನೇ ಮಂಜುಗಡ್ಡೆಯ ಆಕೃತಿ ಮೂಲಕ ದರ್ಶನ ಮಾಡಿದ ಭಕ್ತಾದಿಗಳಿದ್ದಾರೆ. ನಾಭಿದಂಗಿನ ’ಹೋರೆ’ ಎಂಬ ಶಿಬಿರದಲ್ಲಿ ಯಾತ್ರಿಗಳು ತಂಗಬೇಕು. ಮಂದಾರ ಪರ್ವತ ಮತ್ತು ಕೈಲಾಸ ಪರ್ವತದ ನಡುವಿನ ಈ ಜಾಗದಲ್ಲಿ ಮಾನಸ ಸರೋವರದ ದಾರಿ ಸಿಗುತ್ತದೆ. ಮೊದಲು ರಾವಣ ಶಿವನನ್ನು ಕುರಿತು ತಪಸ್ಸು ಮಾಡಿದನೆಂದು ನಂಬಲಾದ ’ರಾಕ್ಷಸ ಸರೋವರ’ ಸಿಗುವುದು. ಇದನ್ನು ದಾಟಿದ ನಂತರ ಜದಿ ಶಿಬಿರ ಸಿಗುತ್ತದೆ.

ಮಾನಸ ಸರೋವರ ಪ್ರವೇಶ.
ಇಲ್ಲಿ ಅಧಿಕಾರಿಗಳು ಮಾನಸ ಸರೋವರ ಪ್ರವೇಶಕ್ಕೆ ಪ್ರಾಕೃತಿಕ ಅನುಕೂಲ ಹೇಗಿದೆ ಎಂಬುದನ್ನು ಪರಿಶೀಲಿಸಿ ಯಾತ್ರಿಗಳನ್ನು ಬಿಡುತ್ತಾರೆ. ಕೆಲವೊಮ್ಮೆ ೩-೪ ದಿನಗಳ ಕಾಲ ಯಾತ್ರಿಗಳು ಇಲ್ಲಿ ತಂಗಬೇಕಾಗುತ್ತದೆ. ಇಷ್ಟೆಲ್ಲಾ ಸಾಹಸದ ನಂತರ ಮಾನಸ ಸರೋವರದ ದರ್ಶನ. ಅದರ ದರ್ಶನ ಈ ಎಲ್ಲಾ ಶ್ರಮವನ್ನು ಮರೆಸಬಲ್ಲಷ್ಟು ರಮ್ಯವಾಗಿದೆ. ’ಬ್ರಹ್ಮನ ಮನಸ್ಸು’ ಎಂಬ ಕಲ್ಪನೆ ಇರುವ ಮಾನಸ ಸರೋವರದಲ್ಲಿ ಸೂರ್ಯ ರಶ್ಮಿ ಚಿನ್ನದ ರೇಖೆಯಂತೆ ಕಂಗೊಳಿಸುತ್ತದೆ. ಹಿಂಬದಿಯ ಕೈಲಾಸ ಪರ್ವತ ಭಕ್ತಿಭಾವ ಮೂಡಿಸುತ್ತದೆ. ರುದ್ರಾಭಿಷೇಕ, ರುದ್ರಯಾಗ ಸೇರಿದಂತೆ ಹಲವು ಧಾರ್ಮಿಕ ವಿಧಿಗಳನ್ನು ಇಲ್ಲಿ ನಡೆಸಲು ಅವಕಾಶವಿದೆ. ಅಪರ ವಿಧಿಗಳನ್ನು ಮಾಡುವವರೂ ಇದ್ದಾರೆ.

ಇಲ್ಲಿಂದ ಮುಂದೆ ’ತಾಲ್ಜೆನ್’ ಎಂಬ ಜಾಗದಲ್ಲಿ ರಾತ್ರಿ ವಿರಮಿಸಿದ ನಂತರ ’ಕೈಲಾಸ ಪ್ರದಕ್ಷಿಣೆ’ ಆರಂಭವಾಗುತ್ತದೆ. ದಕ್ಷಿಣಾಮೂರ್ತಿ ಇಂದ ಆರಂಭವಾಗುವ ಇದು ಪಶ್ಚಿಮಕ್ಕೆ, ಉತ್ತರಕ್ಕೆ ತಿರುಗಿ ಕೊನೆಗೆ ’ತಾಲ್ಜೆನ್’ ಅಲ್ಲೇ ಕೊನೆಯಾಗುತ್ತದೆ. ಇದರಲ್ಲಿ ೨೦,೦೦೦ ಅಡಿಯವರೆಗೂ ಹತ್ತಬೇಕು. ಗಟ್ಟಿಗರೇ ಇದನ್ನು ಸಾಧಿಸಬಲ್ಲರು. ಜೀವಹಾನಿಯ ಸಂಭವವೂ ಇರುವುದರಿಂದ ದೃಢ ನಿರ್ಧಾರ ಪರಿಶೀಲಿಸಿದ ನಂತರವೇ ಈ ಪರಿಕ್ರಮಕ್ಕೆ ಅವಕಾಶ. ನಂತರ, ಮಾನಸ ಸರೋವರವನ್ನು ಇದೇ ಮಾರ್ಗದಲ್ಲೇ ಇಳಿಯಬೇಕು. ಇಳಿಯುವಾಗ ’ಗೌರಿಕುಂಡ’ದ ದರ್ಶನ ಮಾಡುತ್ತಾರೆ.

ಮಾನಸ ಸರೋವರ


ಸದಾ ನೀರು ಹೆಪ್ಪುಗಟ್ಟಿರುವ ಇಲ್ಲಿನ ಪೂರ್ವದಲ್ಲಿ ’ಶಕ್ತಿ’ತತ್ವವನ್ನು ಪ್ರತಿನಿಧಿಸುವ ಕೈಲಾಸ ಪರ್ವತವೂ, ದಕ್ಷಿಣದಲ್ಲಿ ’ಧ್ಯಾನ’ತತ್ವ ಹೇಳುವ ಭೈರವನೂ, ಪಶ್ಚಿಮದಲ್ಲಿ ’ಅಹಂ’ತತ್ವ ಹೇಳುವ ನಂದಿಯೂ, ಉತ್ತರದಲ್ಲಿ ’ಕ್ರಿಯಾ’ತತ್ವವನ್ನು ಹೇಳುವ ಪಾರ್ವತಿ ಪರ್ವತವು ಗೋಚರಿಸುತ್ತದೆ. ಇದೇ ಮಾನಸ ಸರೋವರ ಯಾತ್ರೆಯ ಸಾರ್ಥಕ ಘಟ್ಟ.

ಸಹಾಯ.
ಭಾರತ ಸರ್ಕಾರದ ವೆದೇಶಾಂಗ ಸಚಿವಾಲಯ, ಕುಮಾನ್ ಮಂಡಲ್ ವಿಕಾಸ್ ನಿಗಮ್, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯಾತ್ರೆಗೆ ನೆರವಾಗುತ್ತದೆ. ಸಹಾಯ ವೆಚ್ಚ ರೂ. ೪೫,೦೦೦/- ಇಂದ ರೂ. ೫೦,೦೦೦/-. ಇದಲ್ಲದೆ ಕುದುರೆ, ಸೇವಕ, ಯಾಕ್, ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆ ಒದಗಿಸುತ್ತದೆ.

ಚಿತ್ರ ಕೃಪೆ: ಮೊದಲ ಚಿತ್ರ ಇಲ್ಲಿಂದ
ಎರಡನೆಯ ಮತ್ತು ಮೂರನೆಯ ಚಿತ್ರ ಇಲ್ಲಿಂದ

4 comments:

 1. ನನಗೊಮ್ಮೆ ಮಾನಸ ಸರೋವರ ಯಾತ್ರೆ ಕೈಗೊಳ್ಳಲೇಬೇಕೆ೦ಬ ಆಸೆ ಇದೆ. ಎ೦ದು ಕೈಗೂಡುವುದೋ ಗೊತ್ತಿಲ್ಲ. ನಿಮ್ಮ ಲೇಖನ ಓದಿ, ಫೋಟೋನೋಡಿ ಪುಳಕಿತಗೊ೦ಡೆ, ಚೆನ್ನಾಗಿದೆ ಮಾಹಿತಿ.

  ReplyDelete
 2. ಅನಿಲ್,

  ಮಾನಸ ಸರೋವರದ ಬಗ್ಗೆ ತುಂಬಾ ಸುಂದರವಾದ ಉಪಯುಕ್ತವಾದ ಲೇಖನ...ಇಷ್ಟವಾಯಿತು....ನನಗೂ ಅಲ್ಲಿಗೆ ಹೋಗಬೇಕೆಂಬ ಆಸೆ. ಆದ್ರೆ ನಮ್ಮ ಕೆಲಸ ಅದಕ್ಕೆ ಸಪೋರ್ಟ್ ಮಾಡುವುದಿಲ್ಲ...

  ಕಳೆದ ವರ್ಷ ನನ್ನ ಶಿರಸಿ ಗೆಳಯ ನಾಗೇಂದ್ರ ಮತ್ಮರ್ಡು ಹೋಗಿ ಬಂದಿದ್ದರು...ಅವರ ತೆಗೆದ ಫೋಟೋಗಳಿಗೆ ಅನೇಕ ಬಹುಮಾನಗಳು ಬಂದಿವೆ...

  ಧನ್ಯವಾದಗಳು...

  ReplyDelete
 3. ನಿರಂಜನ್,
  ನನಗೂ ಮಾನಸ ಸರೋವರಕ್ಕೆ ಹೋಗಬೇಕೆಂಬ ಹಂಬಲವಿದೆ.
  ಕೈ-ಕಾಲು ಗಟ್ಟಿ ಇರುವಾಗಲೇ ಹೋಗಿಬರಬೇಕು. ಯಾವಾಗ ಹೋಗೋಕೆ ಆಗುತ್ತೋ ಗೊತ್ತಿಲ್ಲ.

  ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.

  -ಅನಿಲ್

  ReplyDelete
 4. ಶಿವು,
  ಲೇಖನ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.

  -ಅನಿಲ್

  ReplyDelete