My Blog List

Monday, February 08, 2010

ಮಹಾರಾಜ ಸ್ವಾತಿತ್ತಿರುನಾಳ್ - ೩

ತ್ಯಾಗರಾಜರ 'ದರ್ಶನ' 

ಸ್ವಾತಿತ್ತಿರುನಾಳ್ ಅವರು ತ್ಯಾಗರಾಜರ ಅನೇಕ ಕೃತಿಗಳನ್ನು  ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ಕನ್ನೈಯ ಭಾಗವತರ ಮೂಲಕ ಕೇಳಿದ್ದರು. ಅವರ ದರ್ಶನ ಪಡೆಯಬೇಕೆಂಬ ಆಕಾಂಕ್ಷೆ ದೊರೆಯಲ್ಲಿ ಮೂಡಿತು. ತಮ್ಮ ಆಸ್ಥಾನ ವಿದ್ವಾಂಸರಲ್ಲಿ ಒಬ್ಬರಾಗಿದ್ದ, ವಯಸ್ಸಿನಲ್ಲಿ  ತಮಗಿಂತ ಮೂರು ವರ್ಷಹಿರಿಯರಾದ ವಡಿವೇಲು ಎಂಬುವವರಿಗೆ ತ್ಯಾಗರಾಜರನ್ನು ಕರೆದು ತರಲು ದೊರೆ ಹೇಳಿದರು. ವಡಿವೇಲು ಅವರು ಪ್ರಸಿದ್ಧ ಹಾಡುಗಾರರಲ್ಲದೇ ಪಿಟೀಲು ವಿದ್ವಾಂಸರು ಕೂಡ ಆಗಿದ್ದರು. ವಡಿವೇಲು ಅವರು ತ್ಯಾಗರಾಜರನ್ನು ಕಂಡಿದ್ದರು. ಅದಲ್ಲದೆ, ತ್ಯಾಗರಾಜರ ಶಿಷ್ಯರಲ್ಲಿ ಒಬ್ಬರಾದ ವೀಣಾ ಕುಪ್ಪಯ್ಯರ್ ಅವರ ಗೆಳೆಯ ಕೂಡ. ಆದರೆ, ತ್ಯಾಗರಾಜರಿಗೆ ವಡಿವೇಲು ಅವರ ಪರಿಚಯವಿರಲಿಲ್ಲ. 

ವಡಿವೇಲು ಅವರು ತಿರುವಯ್ಯಾರಿಗೆ ಬಂದು ತಿರುಮಂಜನವೆಂಬ ಬೀದಿಯ  ಒಂದು ಮನೆಯಲ್ಲಿ ತಂಗಿದರು. ಅದೇ ಬೀದಿಯಲ್ಲಿ ತ್ಯಾಗರಾಜರೂ ಇದ್ದರು. ವಡಿವೇಲು ತಂಗಿದ್ದ ಮನೆ, ತ್ಯಾಗರಾಜರ ಮನೆಯ ಸಾಲಿನ ಎದುರು ಸಾಲಿನಲ್ಲಿ, ನದಿಗೆ ಇಳಿಯುವ ಬಳಿ ಇತ್ತು. ಸ್ನಾನ ಸಂಧ್ಯಾವಂದನೆಗಳಿಗೆ ನದಿಗೆ ಹೋಗುತ್ತಿದ್ದ ತ್ಯಾಗರಾಜರು ವಡಿವೇಲು ತಂಗಿದ್ದ ಮನೆಯ ಮುಂದೆಯೇ ಹೋಗಬೇಕಾಗಿತ್ತು. ತ್ಯಾಗರಾಜರ ಗಮನ ಸೆಳೆಯಲು ವಡಿವೇಲು ಒಂದು ಉಪಾಯ ಹೂಡಿದರು. ದಿನವೂ ತ್ಯಾಗರಾಜರು ನದಿಗೆ ಹೋಗುವ ಸಮಯದಲ್ಲಿ ತಾವು ಸ್ವಾತಿತ್ತಿರುನಾಳ್ ಅವರ ರಚನೆಗಳನ್ನು  ಹಾಡುತ್ತಿದ್ದರು. ಮೊದಲನೆಯ ದಿನವೇ ಅವರ ಹಾಡು ಕೇಳಿ ತ್ಯಾಗರಾಜರು ಚಕಿತರಾದರು. ಅರೆಕ್ಷಣ , ಅಲ್ಲೇ ನಿಂತು ಕೇಳ ತೊಡಗಿದರು. ಎರಡನೆಯ ದಿನ ಇನ್ನೂ ಹೆಚ್ಚು ಕಾಲ ಹೊರಗೇ ನಿಂತು 'ಈತನೊಬ್ಬ ದೊಡ್ಡಾ ವಿದ್ವಾಂಸ' ಎಂದುಕೊಂಡರು. 

ಮೂರನೆಯ ದಿನ, ತ್ಯಾಗರಾಜರ ಕುತೂಹಲ ಎಲ್ಲೆ ಮೀರಿತು. ಹಾಡುತ್ತಿರುವ ಮೇಧಾವಿ ಯಾರು ಎಂದು ನೋಡಲೇಬೇಕೆಂದು ವಡಿವೇಲು ಇದ್ದ ಮನೆಯ ಒಳಕ್ಕೆ ಪ್ರವೇಶಿಸಿದರು. ಕೂಡಲೇ ವಡಿವೇಲು ಎದ್ದು ಬಂದು ನಮಸ್ಕರಿಸಿ, ಸ್ವಾಗತಿಸಿದರು. 'ಧನ್ಯ ಸ್ವಾಮಿ, ನಾನು ಧನ್ಯ. ತಾವೇಕೆ ಶ್ರಮ ವಹಿಸಿದಿರಿ? ಒಂದು ಮಾತು ಹೇಳಿಕಳಿಸಿದ್ದರೆ, ನಿಮ್ಮ ಸನ್ನಿಧಾನಕ್ಕೆ ನಾನೇ ಬರುತ್ತಿದ್ದೆ' ಎಂದು ವಿನಮ್ರದಿಂದ ಹೇಳಿದರು. ತ್ಯಾಗರಾಜರು ವಡಿವೇಲು ಅವರ ಅಮೋಘವಾದ ವಿದ್ವತ್ತನ್ನು ಮುಕ್ತಕಂಠದಿಂದ ಹೊಗಳಿದರು. ತಮ್ಮ ಮನೆಗೆ ಬಂದು (ಮರುದಿನವೇ) ಹಾಡಬೇಕೆಂದು ಹೇಳಿದರು. ಈ ಅವಕಾಶಕ್ಕೇ ಕಾದಿದ್ದ ವಡಿವೇಲು, ತ್ಯಾಗರಾಜರರ ಆಮಂತ್ರಣವನ್ನು ಸ್ವೀಕರಿಸಿ ಅವರ ಆದರಕ್ಕೆ ಪಾತ್ರರಾದರು. 

ತ್ಯಾಗರಾಜರ ಮನೆಯಲ್ಲಿ ವಡಿವೇಲು, ತಮ್ಮ ಮಧುರವಾದ ಕಂಠದಿಂದ, ಸ್ವಾತಿತ್ತಿರುನಾಳ್ ಅವರ ಹಲವಾರು ಕೃತಿಗಳನ್ನು ಹಾಡಿದರು. ತ್ಯಾಗರಾಜರು ಆನಂದಪರವಶರಾದರು. ಪದ್ಮನಾಭನೇ ಕಣ್ಣೆದುರು ಬಂದು ನಿಂತಂತಾಯಿತೇನೋ! 'ಭೇಷ್ ವಡಿವೇಲು! ಪರಮ ಸುಪ್ರೀತನಾಗಿದ್ದೇನೆ ನಾನು. ನಿನಗೇನು ವರ ಬೇಕೋ ಕೇಳು!' ಎಂದರು. ಆಗ ವಡಿವೇಲು 'ಸ್ವಾಮಿನ್! ತಿರುವಾಂಕೂರು ಮಹಾರಾಜರು ತಮ್ಮನ್ನು ಕಾಣಬೇಕೆಂದು ತವಕಿಸುತ್ತಿದ್ದಾರೆ. ಆದುದರಿಂದ ತಾವು...' ಎಂದು ವಡಿವೇಲು ತಮ್ಮ ಪ್ರಾರ್ಥನೆಯನ್ನು ಹೇಳಿ ಮುಗಿಸುವ ಮುನ್ನವೇ ಶ್ರೀ ತ್ಯಾಗರಾಜರು ಚಕಿತರಾದುದನ್ನು ಕಂಡು ಅಷ್ಟಕ್ಕೇ ನಿಲ್ಲಿಸಿದರು. 

ಕೆಲಕಾಲ ಕಣ್ಣುಮುಚ್ಚಿ ಧ್ಯಾನಕ್ಕೆ ಕುಳಿತರು. ನಂತರ ತ್ಯಾಗರಾಜರು 'ಸ್ವಾತಿತ್ತಿರುನಾಳ್ ಅವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ. ನನ್ನ ಆಶ್ವಾಸನೆ ಖಂಡಿತ ನೆರವೇರುತ್ತದೆ. ಆದರೆ ನನ್ನ - ಅವರ ಭೇಟಿ ಈ ಪ್ರಪಂಚದಲ್ಲಿ ಅಲ್ಲ. ಸ್ವರ್ಗದಲ್ಲಿ! ಅವರ ಆರಾಧ್ಯ ದೈವನೂ (ಪದ್ಮನಾಭ) ನನ್ನ ಆರಾಧ್ಯ ದೈವನೂ (ಶ್ರೀರಾಮ) ಒಬ್ಬನೇ.' ಎಂದು ಹೇಳಿದರು. ನಿರಾಶರಾದ ವಡಿವೇಲು ತಿರುವಾಂಕೂರಿಗೆ ಮರಳಿ, ನಡೆದ ಸಂಗತಿಯನ್ನೆಲ್ಲಾ ದೊರೆಗೆ ತಿಳಿಸಿದರು. 

ಮಹಾರಾಜ ಸ್ವಾತಿತ್ತಿರುನಾಳ್ ಸ್ವತಃ ತಾವೇ ತಿರುವಯ್ಯಾರಿಗೆ ಹೋಗಬೇಕೆಂದು ಎಷ್ಟೋ ಬಾರಿ ಪ್ರಯತ್ನಿಸಿದರು. ಆದರೆ, ರಾಜಕಾರ್ಯ ಅವರನ್ನು ಬಿಡಲಿಲ್ಲ. ರಾಜಕಾರ್ಯ ಬಿಡಲಿಲ್ಲವೋ, ತ್ಯಾಗರಾಜರ ಮಾತು ನಿಜವಾಗಬೇಕೆಂಬ ದೈವಸಂಕಲ್ಪವೋ ಏನೋ, ಈ ಘಟನೆ ನಡೆದ ಬಳಿಕ ಸುಮಾರು ಹನ್ನೆರಡು ವರ್ಷಗಳ ಕಾಲ ಸ್ವಾತಿತ್ತಿರುನಾಳ್ ಅವರು ಬದುಕಿದ್ದರೂ, ತ್ಯಾಗರಾಜರನ್ನು ಭೇಟಿಯಾಗಲು ತಿರುವಯ್ಯಾರಿಗೆ ಹೋಗುವುದಕ್ಕಾಗಲೇ ಇಲ್ಲ. 

ಕೊನೆಗೆ ಸ್ವಾತಿತ್ತಿರುನಾಳ್ ಅವರೇ ತ್ಯಾಗರಾಜರ ಭೇಟಿಗಾಗಿ ಅವರಿಗಿಂತ ೧೨ದಿನಗಳ ಮೊದಲೇ ಸ್ವರ್ಗದಲ್ಲಿ ಕಾದು ಕುಳಿತರು! ಸ್ವಾತಿತ್ತಿರುನಾಳ್ ಅವರು ೧೮೪೬ನೇ ಡಿಸೆಂಬರ್ ೨೫ರಂದು, ಅಂದರೆ, ಪುಷ್ಯ ಶುಕ್ಲ ಅಷ್ಟಮಿಯಂದು ಸ್ವರ್ಗಸ್ಥರಾದರು. ತ್ಯಾಗರಾಜರು ೧೮೪೭ನೇ ಜನವರಿ ೬ರಂದು, ಅಂದರೆ, ಪುಷ್ಯ ಬಹುಳ ಪಂಚಮಿಯಂದು ಸ್ವಾತಿತ್ತಿರುನಾಳ್ ಅವರನ್ನು ನೋಡಲು ಸ್ವರ್ಗಕ್ಕೆ ಹೊರಟರು. 

ಮಹಾಮೇಧಾವಿಯೂ, ಸಾಹಿತಿಯೂ, ರಾಜಕಾರಣಿಯೂ, ರಸಿಕರೂ, ವಾಗ್ಗೇಯಕಾರರೂ ಆಗಿ ಬಾಳಿ ಕೇವಲ ೩೪ವರ್ಷಗಳಲ್ಲೇ, ಮಹಾ ಪ್ರತಿಭಾನ್ವಿತರೆನಿಸಿಕೊಂಡ ಮಹಾರಾಜ ಸ್ವಾತಿತ್ತಿರುನಾಳ್ ಅವರ ಹೆಸರನ್ನು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಇಂತಹ ದೊಡ್ಡ ಸಾಧನೆ ಮಾಡಿರುವ ವಾಗ್ಗೇಯಕಾರರು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಇಲ್ಲವೆಂದೇ ಹೇಳಬೇಕು. ಅವರು ನಮಗೆ, ಸಂಗೀತ ಪ್ರಪಂಚಕ್ಕೆ, ಬಿಟ್ಟು ಹೋಗಿರುವ ಆಸ್ತಿ ಅಮರವಾಗಿರುತ್ತದೆ. ಅವರ ಕೀರ್ತಿ ಆಚಂದ್ರಾರ್ಕ ಬೆಳಗುತ್ತಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. 

(ಮುಗಿಯಿತು)

2 comments:

  1. ಮಹಾರಾಜ ಸ್ವಾತಿತ್ತಿರುನಾಳ್ ಅವರ ಬಗ್ಗೆ ಚಂದವಾಗಿ ತಿಳಿಸಿ ಕೊಟ್ಟಿದ್ದಿರಿ
    ನನಗೆ ಬಹಳಷ್ಟು ಗೊತ್ತಿರಲಿಲ್ಲ
    ಒಳ್ಳೆಯ ಲೇಖನ

    ReplyDelete