My Blog List

Friday, July 02, 2010

ಸಾಕಾರ ಸ್ವರೂಪ ಮಹಾವಿಷ್ಣು.

ಮಹಾವಿಷ್ಣುವು ಸಾಕಾರ ಸ್ವರೂಪನು, ಹಾಗಾಗಿ ಹಲವು ಅವತಾರಗಳ ಮೂಲಕ ಗುರುತಿಸಲ್ಪಟ್ಟಿದ್ದಾನೆ. ಹತ್ತು ಅವತಾರಗಳನ್ನೂ ಪ್ರಮುಖ ಎಂದು ನಿರ್ದೇಶಿಸುವ ವಾಡಿಕೆ ಇದ್ದರೂ ವಿಷ್ಣುವಿನ ಅವತಾರಗಳು ವಾಸ್ತವವಾಗಿ ಅಸಂಖ್ಯ. 'ವಿಷ್ಣು' ಎಂಬ ಶಬ್ದವೇ 'ಎಲ್ಲವನ್ನೂ ವ್ಯಾಪಿಸಿಕೊಂಡಿರುವವನು' ಎಂಬ ಅರ್ಥವನ್ನು ಸೂಚಿಸುತ್ತದೆ. ವಿಷ್ಣುವಿನ ವಾಮನ ಅವತಾರದಲ್ಲಿ ತ್ರಿವಿಕ್ರಮನಾಗುವ ಚಿತ್ರಣ ಇದೆ. ಹಾಗೇ ಕೃಷ್ಣಾವತಾರದಲ್ಲಿ ಭಗವದ್ಗೀತೆ ಬೋಧನೆ ಮಾಡಿದಾಗ 'ವಿಶ್ವರೂಪದರ್ಶನ' ಮಾಡಿದ ವಿವರಗಳಿವೆ. ವಿಷ್ಣುವಿನ ಸ್ವರೂಪ ಸಾಕಾರವಾಗುವುದರ ಜೊತೆಗೆ ಅದು 'ವಿರಾಟ್' ಆಗಿರುವುದು ಎಂಬುದನ್ನು ಇಲ್ಲಿ ಸೂಚಿಸುತ್ತದೆ. ವಿಷ್ಣುವಿನ ಕುರಿತ ಜನಪ್ರಿಯವಾದ ಪರಿಕಲ್ಪನೆ ಎಂದರೆ ಕ್ಷೀರಸಾಗರದ ಮೇಲೆ ಶೇಷಶಾಯಿಯಾಗಿ ವಿಶ್ರಮಿಸುತ್ತಿರುವುದು. ಒಂದೆಡೆ, ಲಕ್ಷ್ಮಿಯು ಅವನ ಕಾಲನ್ನೊತ್ತುತ್ತಿದರೆ, ಇನ್ನೊಂದೆಡೆ, ನಾಭಿಯಿಂದ ಬಂದ ಕಮಲದಲ್ಲಿ ಬ್ರಹ್ಮನು ಸೃಷ್ಟಿ ಕಾರ್ಯದಲ್ಲಿ ನಿರತನಾಗಿದ್ದಾನೆ. ಇದು ಇಡೀ ಬ್ರಹ್ಮಾಂಡದಲ್ಲಿ ಇರುವ ಚೇತನ ಸ್ವರೂಪವನ್ನು ಚಿತ್ರಿಸುತ್ತದೆ. ಕ್ಷೀರಸಾಗರವು ಪ್ರಕೃತಿಯ ಪರಿಶುದ್ಧ ರೂಪವನ್ನು ಸೂಚಿಸಿದರೆ, ಮುಗಿಲು-ಕಡಲುಗಳೆರಡರ ಕಲ್ಪನೆ ಬೆರೆತಂತಿರುವ ಇದನ್ನು ವಿಜ್ಞಾನದ ಆಕಾಶಗಂಗೆ (ಮಿಲ್ಕೀವೇ) ಪರಿಕಲ್ಪನೆಗೆ ಹೋಲಿಸಬಹುದು. ವಿಷ್ಣುವು ಮಲಗಿದ್ದಾನೆ ಎನ್ನಲಾದ ಆದಿಶೇಷ ಅಥವಾ ಅನಂತ ಎಂಬ ಸರ್ಪಕ್ಕೆ ಸಾವಿರ ಹೆಡೆಗಳಿದ್ದು ಅದು ಅನೇಕ ಲೋಕವನ್ನು ಹೊತ್ತಿದೆ ಎನ್ನಲಾಗುತ್ತದೆ. 'ಅನಂತ' ಎಂಬ ಪದಕ್ಕೆ ಎಣಿಕೆಗೆ ಸಿಕ್ಕದ್ದು ಎಂಬ ಅರ್ಥವಿದೆ. ಹೀಗೆ ಎಣಿಸುವವನು ಮಾನವ ಎಂಬುದನ್ನು ಗಮನಿಸಬೇಕಾಗುತ್ತದೆ. ಅಂದರೆ, ಪ್ರಕೃತಿಯು ಮಾನವನಿಗಿಂತಲೂ ಬಹಳ ದೊಡ್ಡದು. ಅದನ್ನು ಎಣಿಸುವ ಪ್ರಯತ್ನವೇ ವ್ಯರ್ಥ ಎಂಬುದನ್ನು 'ಅನಂತ' ಎಂಬ ಪದ ಸೂಚಿಸುತ್ತದೆ. ಹಾಗೆಯೇ, 'ಶೇಷ' ಎಂಬ ಪದವೂ ಅರ್ಥಗರ್ಭಿತವಾದದ್ದು. ಇದು ಉಳಿದದ್ದು ಎಂಬುದನ್ನು ಸೂಚಿಸುತ್ತದೆ. ಸೃಷ್ಟಿಯು ಯಾವಾಗಲೂ ಶೂನ್ಯದಿಂದ ಉಂಟಗುವುದಿಲ್ಲ. ಹಿಂದಿನ ಸೃಷ್ಟಿಯಲ್ಲಿ ಉಳಿದು ಹೋದದ್ದು ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಇಡೀ ಜಗತ್ತನ್ನು ಮುನ್ನಡೆಸುತ್ತಿರುವ 'ಸೃಷ್ಟಿಚಕ್ರ'. ಆದಿಶೇಷನ ಪರಿಕಲ್ಪನೆ ಇದನ್ನೇ ಸೂಚಿಸುತ್ತದೆ ಎನ್ನಬಹುದು. ಇದರ ಜೊತೆಗೆ ಸರ್ಪವು ಕಾಮಕ್ಕೆ ಸಂಕೇತ ಎಂಬ ಅರ್ಥ ಕೂಡ ಈ ವಿಶ್ಲೇಷಣೆಗೆ ಇಂಬು ನೀಡುತ್ತದೆ.

ವಿಷ್ಣುವನ್ನು ನೀಲಮೇಘಶ್ಯಾಮನೆಂದು ವರ್ಣಿಸುತ್ತಾರೆ. ಇದು ಮಳೆ ನೀಡಲು ಸಿದ್ಧವಾಗಿರುವ ಕಡುನೀಲಿ ಮೋಡದ ಬಣ್ಣ. ಇದರಲ್ಲಿ ಸೃಷ್ಟಿಯು ಪಕ್ವವಾಗಿರುವುದರ ಸಾಂಕೇತಿಕ ಅರ್ಥವಿದೆ. ವಿಷ್ಣುವಿನ ಕಲ್ಪನೆಯಲ್ಲಿ ಸಾಧನೆ ಮತ್ತು ಸಿದ್ಧಿ ಇವೆರಡರ ಸಂಯೋಗದ ಅರ್ಥಗಳಿರುವುದನ್ನು ನಾವು ಗಮನಿಸಬಹುದು. ವಿಷ್ಣುವಿನ ಕಲ್ಪನೆಯಲ್ಲಿರುವ ಇನ್ನು ಕೆಲವು ಅಂಶಗಳತ್ತ ಗಮನ ಹರಿಸಿದರೆ, ವಿಷ್ಣುವು ಸಾಮಾನ್ಯವಾಗಿ ಚಿತ್ರಿತವಾಗುವುದು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ಹಿಡಿದಿರುವ ಸ್ಥಿತಿಯಲ್ಲಿ. ಈ ನಾಲ್ಕು ಕೈಗಳು ನಾಲ್ಕು ದಿಕ್ಕುಗಳನ್ನು ಸೂಚಿಸುತ್ತಾ ವಿಷ್ಣುವು ಸರ್ವವ್ಯಾಪಿ ಎಂಬುದನ್ನು ತೋರಿಸುತ್ತದೆ. ಶಂಖವು ಸಮಸ್ತ ಉದಯದ ಸಂಕೇತ. ಚಕ್ರವು ಸಮಸ್ತ ಚಿತ್ತವೃತ್ತಿಯ, ಗದೆಯು ಸಮಸ್ತ ಬುದ್ಧಿಗಳ ದ್ಯೋತಕ. ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಇವೆಲ್ಲವೂ, ವಿಷ್ಣುವು ಸೃಷ್ಟಿಕರ್ತನೂ ಮತ್ತು ಸ್ಥಿತಿಕಾರನೂ ಆಗಿದ್ದಾನೆ ಎಂಬುದಕ್ಕೆ ರೂಪಕ. ಇನ್ನು ವಿಷ್ಣುವಿನ ಎದೆಯ ಮೇಲೆ ಶ್ರೀವತ್ಸ ಲಾಂಛನವಿದೆ. ಅದನ್ನು ಕೌಸ್ತುಭಮಣಿ ಮತ್ತು ವೈಜಯಂತಿ ಹಾರಗಳು ಮುಚ್ಚಿರುತ್ತವೆ. ಶ್ರೀವತ್ಸ ಲಾಂಛನವು ಎಲ್ಲಾ ಭೋಗವಸ್ತುಗಳ ಸಂಕೇತವಾಗಿದೆ. ಇದರ ಮೇಲಿನ ಕೌಸ್ತುಭಮಣಿಯು, ಭೋಗಿಯ ಪ್ರತಿನಿಧಿ. ಹೀಗೆ ಭೋಗ-ಭೋಗಿಗಳಿಂದ ಕೂಡಿದ ಪ್ರಪಂಚವು ಸ್ಥಿತಿಕಾರಕನಾದ ವಿಷ್ಣುವಿಗೆ ಒಂದು ಮಾಲೆಯೇ. ಜೊತೆಗಿರುವ ವೈಜಯಂತಿ ಮಾಲೆಯು ಪಂಚಭೂತಗಳ ಸಂಕೇತ. ಹೀಗೆ ವಿಷ್ಣು ಸ್ವರೂಪದಲ್ಲಿ ಇಡೀ ಬ್ರಹ್ಮಾಂಡದ ಸೂಕ್ಷ್ಮ ಚಿತ್ರಣವೇ ಅಡಗಿರುವುದನ್ನು ನೋಡಬಹುದು.

6 comments:

  1. ಉತ್ತಮ ಲೇಖನ ಅನಿಲ್."ಸೃಷ್ಟಿಯು ಯಾವಾಗಲೂ ಶೂನ್ಯದಿಂದ ಉಂಟಾಗುವುದಿಲ್ಲ. ಹಿಂದಿನ ಸೃಷ್ಟಿಯಲ್ಲಿ ಉಳಿದು ಹೋದದ್ದು ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಇದೇ ಇಡೀ ಜಗತ್ತನ್ನು ಮುನ್ನಡೆಸುತ್ತಿರುವ 'ಸೃಷ್ಟಿಚಕ್ರ'". ಹಿ೦ದಿನ ಸೃಷ್ಟಿಯಲ್ಲಿ ಉಳಿದಿದ್ದು ಮು೦ದಿನ ಸೃಷ್ಟಿಗೆ ಕಾರಣವಾದರೆ, ಇ೦ದಿನ ಸೃಷ್ಟಿಯಲ್ಲಿ ಇದ್ದದ್ದು ಮು೦ದೆ ಎಲ್ಲಿ ಗೆ ಹೋಗುತ್ತದೆ? ಒ೦ದು ಜಿಜ್ಞಾಸೆ ಮಾಡೋಣವೆ?

    ಅನ೦ತ್

    ReplyDelete
  2. ಅನಿಲ್
    ವಿಷ್ಣುವಿಗೆ ಬೇರೆ ಬೇರೆ ಹೆಸರುಗಳಿವೆ. ಗುರುತಿಸುವ ಬಗೆ ಹೇಗೆ?
    ಉತ್ತಮ ಲೇಖನ

    ReplyDelete
  3. ಅನಿಲ್ ಗೆ ಕಷ್ಟ ಎನಿಸಿದ ಪ್ರಶ್ನೆ ನನಗೆ ಕಷ್ಟವೆನಿಸುತ್ತಿಲ್ಲ. ನನ್ನ ಸುಲಭದ ಉತ್ತರ: ಮೊದಲು ವಿಷ್ಣು ಸಹಸ್ರನಾಮದಿಂದ ಆರಂಭಿಸಿ... ಈ ಕೆಳಗಿನ ಮೂರು ಲಿಂಕ್ ಗಳು ಉಪಯೋಗವಾಗಬಹುದು. ಮನೆಯಲ್ಲಿ ಮಹಾಭಾರತದ ಎಲ್ಲಾ ಸಂಪುಟಗಳೂ (ಭಾರತದ ದರ್ಶನ ಪ್ರಕಾಶನದವರದ್ದು) ಇದ್ದರೆ ಅದರಲ್ಲೇ ವಿಷ್ಣು ಸಹಸ್ರನಾಮ ಸ್ತೋತ್ರ ಸಿಗುತ್ತದೆ. ಇಲ್ಲದಿದ್ದೆ ಹೆಚ್ಚಿನ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿಯೂ ಇದು ದೊರೆಯುತ್ತದೆ.
    http://www.raaga.com/player4/?id=88972&mode=100&rand=0.06841606523547772
    http://www.sriraghavendramutt.org/srsm/content/%E0%B2%B6%E0%B3%8D%E0%B2%B0%E0%B3%80-%E0%B2%B5%E0%B2%BF%E0%B2%B7%E0%B3%8D%E0%B2%A3%E0%B3%81-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B2%B8%E0%B3%8D%E0%B2%A4%E0%B3%8B%E0%B2%A4%E0%B3%8D%E0%B2%B0%E0%B2%82
    http://www.trsiyengar.com/id70.shtml
    ಆಸ್ತಿಕರು ಇದನ್ನು ಪಠಿಸುವುದಕ್ಕೆ ಅನೇಕ ಕಾರಣಗಳಿರಬಹುದು. ಮಗುವಿಗೊಂದು ಹೆಸರು ಬೇಕು ಎಂದು ಯಾರಾದರೂ ಗೆಳೆಯರು ಕೇಳಿದರೆ ನಾನು ಮೊದಲು ರೆಫರ್ ಮಾಡುವ ಕೆಲವು ಮೂಲಗಳಲ್ಲಿ ಇದೂ ಒಂದು...

    ReplyDelete
  4. ಅನಂತರಾಜ್ ಅವರೇ,
    ಅನವರತಕ್ಕೆ ಸ್ವಾಗತ.
    ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
    ಆರೋಗ್ಯಕರ ಚರ್ಚೆಗೆ ನಾನು ಸದಾ ಸಿದ್ಧ.

    -ಅನಿಲ್.

    ReplyDelete
  5. ಹೆಬ್ಬಾರ್ ಅವರೇ,
    ನಿಮಗೂ ಅನವರತಕ್ಕೆ ಸುಸ್ವಾಗತ.
    ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

    -ಅನಿಲ್.

    ReplyDelete
  6. ಇಸ್ಮಾಯಿಲ್‌ಜೀ,
    ಅನವರತಕ್ಕೆ ಸ್ವಾಗತ.
    ಕೊಂಡಿಗಳಿಗೆ ತುಂಬಾ ಧನ್ಯವಾದಗಳು.

    -ಅನಿಲ್.

    ReplyDelete