ಸ್ವಾಮಿಯೇ ಶರಣಂ ಅಯ್ಯಪ್ಪ.
ಕಳೆದ ವರ್ಷ ನನಗೆ ಮದುವೆ ಆಯಿತು. ಹಾಗಾಗಿ, ನಮ್ಮ ಗುರುಸ್ವಾಮಿಗಳು ’ಈ ವರ್ಷ ಬೇಡ, ಮುಂದಿನ ವರ್ಷ ಬಾ’ ಎಂದ ಕಾರಣ ಶಬರಿಮಲೆಗೆ ಹೋದ ವರ್ಷ ಹೋಗೋದಕ್ಕೆ ಆಗಿರ್ಲಿಲ್ಲ. :-( ಈ ವರ್ಷ ನಮ್ಮ ಗುರುಸ್ವಾಮಿಗಳ ಮಗ ಫೋನ್ ಮಾಡಿ ’ಶಬರಿಮಲೆಗೆ ಹೋಗೋಣ, ಬರ್ತೀಯಾ?’ ಎಂದು ಕೇಳಿದಾಗ ಕೂಡಲೆ ಒಪ್ಪಿದೆ. ಈಗಾಗಲೇ ಶಬರಿಮಲೆ ಮೂರು ಬಾರಿ ಹೋಗಿ ಬಂದಿರುವೆ. ಈ ವರ್ಷ ನಾಲ್ಕನೆಯ ವರ್ಷ.
ಇಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸಂಧ್ಯಾವಂದನೆ ಮಾಡಿ, ಮನೆದೇವರಾದ ತಿರುಪತಿ ತಿಮ್ಮಪ್ಪನಿಗೆ ಕಾಣಿಕೆ ಸಲ್ಲಿಸಿ, ಆತನ ಅಪ್ಪಣೆ ಪಡೆದು, ನಂತರ ಅಯ್ಯಪ್ಪನಿಗೂ ಕಾಣಿಕೆ ಸಲ್ಲಿಸಿದೆ. ಅಮ್ಮ ಕೊಟ್ಟ ಹಾರ್ಲಿಕ್ಸ್ ಕುಡಿದು ಮಲ್ಲೇಶ್ವರದ ಬಳಿಯಿರುವ ಶ್ರೀರಾಂಪುರದಲ್ಲಿರುವ ಅಯ್ಯಪ ದೇವಸ್ಥಾನಕ್ಕೆ ಹೊರಟೆ.
ನಿನ್ನೆ ರಾತ್ರಿಯೇ ಅಯ್ಯಪ್ಪ ಮಾಲೆಯನ್ನು ಹಸಿ ಹಾಲಿನಲ್ಲಿ ನೆನೆಸಿ ಇಟ್ಟಿದ್ದೆ. ಇಂದು ಬೆಳಿಗ್ಗೆ, ಆ ಮಾಲೆಯನ್ನು ಅರಿಶಿನದ ನೀರಿನಲ್ಲಿ ತೊಳೆದುಕೊಂಡು ಒಂದು ಚೀಲದಲ್ಲಿ ಹಾಕಿ, ಶ್ರೀರಾಂಪುರದಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ಹೊರಟೆ. ಒಂದು ಕಪ್ಪು ಬಣ್ಣದ ಪಂಚೆ ಹಾಗೂ ಅದೇ ಬಣ್ಣದ ಉತ್ತರೀಯವನ್ನು ತೆಗೆದುಕೊಂಡು ಹೋಗಿದ್ದೆ. ನಂತರ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ೫೪ ರುದ್ರಾಕ್ಷಿಗಳುಳ್ಳ ಮಾಲೆಯನ್ನು ಹಾಕಿಕೊಂಡೆ. ಅರ್ಚಕರು ಅಕ್ಕಿಯನ್ನು, ಎರಡು ಅಚ್ಚು ಬೆಲ್ಲವನ್ನು, ಎರಡು ಬಾಳೆಹಣ್ಣುಗಳನ್ನು ಜೊತೆಗೆ ದಕ್ಷಿಣೆಯನ್ನೂ ನನ್ನಿಂದ ಸ್ವೀಕರಿಸಿದರು.
ನಂತರ ಅಯ್ಯಪ್ಪನಿಗೆ ಶರಣುಗಳನ್ನು ಹೇಳಿ, ಅಲ್ಲಿಂದ ಮನೆಗೆ ಬಂದೆ. ಮನೆಯಲ್ಲಿ ಉದ್ದಿನ ದೋಸೆ ತಿಂದು, ಅಯ್ಯಪ್ಪನ ಧ್ಯಾನದಲ್ಲಿ ಕುಳಿತೆ.
ಇಂದು ಸಂಜೆ ಹಾಗೂ ನಾಳೆ ಬೆಳಿಗ್ಗೆ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬೇಕು. ಬೆಳಿಗ್ಗೆ ಮತ್ತು ರಾತ್ರಿ ತಿಂಡಿ ತಿನ್ನಬೇಕು, ಮಧ್ಯಾಹ್ನ ಮಾತ್ರ ಊಟ ಮಾಡಬೇಕು. ರಾತ್ರಿ ಊಟ ಮಾಡುವ ಹಾಗಿಲ್ಲ. ಹೊರಗಡೆ ಏನೂ ಸೇವಿಸಬಾರದು. ತುಂಬಾ ನಿಷ್ಠೆಯಿಂದ ವ್ರತವನ್ನು ಆಚರಿಸಬೇಕು.
ನಾನು ಸಂಧ್ಯಾವಂದನೆಯನ್ನು ದಿನವೂ ಮಾಡೋದ್ರಿಂದ ಭಜನೆಯನ್ನು ಮನೆಯಲ್ಲೇ ಮಾಡಬಹುದು. ಸಂಜೆ ಹದಿನೆಂಟು ಮೆಟ್ಟಿಲುಗಳ ಪೂಜೆ, ನಂತರ ಮಂಗಳಾರತಿ. ಮಂಗಳಾರತಿ ಮುಗಿದ ಮೇಲೆ, ೧೦೮ ಶರಣುಗಳನ್ನು ಹೇಳಬೇಕು. ಅದು ಮುಗಿದ ನಂತರ ಹರಿವರಾಸನಾಷ್ಟಕಂ ಹೇಳಬೇಕು.
ನಾನು ಆಗಸ್ಟ್ ೧೯ರಂದು ಶಬರಿಮಲೆಗೆ ಹೊರಟು, ಆಗಸ್ಟ್ ೨೩ರಂದು ಬೆಂಗಳೂರಿಗೆ ಹಿಂದಿರುಗುವೆ.
ನನ್ನ ಜೊತೆಗೆ ಇನ್ನೂ ೯ ಜನ ಸೇರ್ಕೋತಾರೆ. ಒಟ್ಟು ಹತ್ತು ಮಂದಿ.
ಸ್ವಾಮಿಯೇ ಶರಣಂ ಅಯ್ಯಪ್ಪ.
-ಅನಿಲ್
nimma prayaaNa shubhakaravaagirali.
ReplyDeletesharanamayyappa.
ಸ್ವಾಮಿಯೇ ಶರಣಂ ಅಯ್ಯಪ್ಪ!
ReplyDelete-ಅನಿಲ್.