ಸಾಮಾನ್ಯವಾಗಿ ಮನೆಯಲ್ಲಿ ಉತ್ಪನ್ನವಾಗುವ ಕಸವನ್ನು ಪಕ್ಕದ ಸೈಟಿನ ಖಾಲಿ ಜಾಗದಲ್ಲೋ, ಅಥವಾ ಕಸದ ತೊಟ್ಟಿಗೋ ಎಸೆಯುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ತ್ಯಾಜ್ಯಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿದರೆ, ಪರಿಸರಕ್ಕೂ ಅನುಕೂಲಗಳಾಗುತ್ತದೆ.
ಮನೆಯಲ್ಲಿ ಗಿಡಗಳನ್ನು ಬೆಳೆಸಿದ್ದರೆ, ಅವುಗಳಿಗೆ ತರಕಾರಿ ಸಿಪ್ಪೆಗಳನ್ನು, ಹಣ್ಣಿನ ಸಿಪ್ಪೆಗಳನ್ನು ಒಂದು ಚಿಕ್ಕ ಬಕೆಟಿನಲ್ಲಿ ಹಾಕಿ, ಅದರ ಮೇಲೆ ಒಣ ಎಲೆಗಳನ್ನು ಹಾಕಿ, ಅದನ್ನು ಮಣ್ಣನಿಂದ ಮುಚ್ಚಿಡಿ. ಒಣ ಎಲೆಗಳು ಸಿಗದಿದ್ದರೆ, ಹಸಿ ಎಲೆಗಳನ್ನು ಕೂಡ ಹಾಕಬಹುದು. ಅವೇ ಒಣಗುತ್ತವೆ. ಆದರೆ ಸ್ವಲ್ಪ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ. ಹವಾಮಾನಕ್ಕೆ ಹೊಂದುವಂತೆ ಅದು ಕಾಂಫೋಸ್ಟ್ ಆಗುತ್ತದೆ. ಅಂದರೆ, ಬಿಸಿಲು ಹೆಚ್ಚಿದ್ದರೆ (ಬೇಸಿಗೆ ಕಾಲ) ಬೇಗ ಕಾಂಪೋಸ್ಟ್ ಆಗುತ್ತದೆ. ಮೋಡ ಕವಿದ ವಾತಾವರಣವಿದ್ದರೆ (ಮಳೆಗಾಲ), ಕೊಂಚ ತಡವಾಗುತ್ತದೆ.
ಪ್ರತಿ ರಾತ್ರಿ ಅಳಿದುಳಿದ ಪ್ಲಾಸ್ಟಿಕ್ ಹೊರತುಪಡಿಸಿದ ತ್ಯಾಜ್ಯವನ್ನು ಮಾರನೆ ದಿನ ಗೊಬ್ಬರದ ಬಕೆಟಿಗೆ ಹಾಕಿ. ಬಕೆಟ್ ತುಂಬಿದ ಬಳಿಕ ಎಲೆಗಳಿಂದ ಮುಚ್ಚಿಡುವುದು ಉತ್ತಮ. ಇದರಿಂದ ತ್ಯಾಜ್ಯಗಳ ಕೊಳೆತ ವಾಸನೆಯನ್ನು ತಡೆಗಟ್ಟಬಹುದು. ಎರಡು ಬಕೆಟ್ ಇಂದ ಆದ ಕಾಂಪೋಸ್ಟ್ ಅನ್ನು, ಒಂದು ದೊಡ್ಡ ಬಕೆಟ್‍ಗೆ ಹಾಕಬೇಕು. ಆಗ ಎರಡು ಬಕೆಟ್‍ನ ಕಾಂಪೋಸ್ಟ್ ಬೆರೆಯುತ್ತದೆ. ಈ ಕಾಂಪೋಸ್ಟಿಗೆ ನರ್ಸರಿಅಲ್ಲಿ ಸಿಗುವ ಮಣ್ಣನ್ನು ಬೆರೆಸಿ ನೇರವಾಗಿ ಮನೆಯಲ್ಲಿ ಬೆಳೆಸಿರುವ ಗಿಡಗಳಿಗೆ ಬಳಸಿಕೊಳ್ಳಬಹುದು. ಮಣ್ಣು ತುಂಬಾ ಹದಗೊಳ್ಳುತ್ತದೆ. ಹಾಗೂ ಪ್ರತಿ ಬಾರಿಯೂ ನರ್ಸರಿಗೆ ಹೋಗೋದು ತಪ್ಪುತ್ತದೆ.
ಮನೆಯಲ್ಲೇ ತಯಾರಿಸಲ್ಪಟ್ಟ ಈ ರೀತಿಯಾದ ಗೊಬ್ಬರದಿಂದ ಗಿಡಗಳಿಗೆ ಒಳ್ಳೆಯ ಆರೈಕೆ ಸಿಕ್ಕಂತಾಗುತ್ತದೆ. ಹಣ್ಣು, ತರಕಾರಿ ಸಿಪ್ಪೆಗಳಿಂದ ಮಾತ್ರವಲ್ಲದೇ, ಪ್ಲಾಸ್ಟಿಕ್ ಹೊರತುಪಡಿಸಿರುವ ಯಾವುದೇ ಪದಾರ್ಥಗಳನ್ನು ಗೊಬ್ಬರವನ್ನಾಗಿ ಮರುಬಳಕೆ ಮಾಡಬಹುದು. ಪ್ಲಾಸ್ಟಿಕ್ ಅಂಶ ಇಲ್ಲದ ಪದಾರ್ಥಗಳು: ಹಣ್ಣು-ತರಕಾರಿ ಸಿಪ್ಪೆ, ಟೀ ಡಿಕಾಕ್ಷನ್, ರಾತ್ರಿ ಉಳಿದಂತಹ ಅನ್ನ, ಹುಳಿ, ಸಾರು, ಒಡೆದ ಹಾಲು, ಹುಳಿಯಾದ ಮೊಸರು, ಇತ್ಯಾದಿ. ಹುಳಿ ಮೊಸರನ್ನು, ತಿಳಿ ಸಾರನ್ನು, ಕರಬೇವು ಗಿಡಕ್ಕು ಹಾಕಿದರೆ, ಚೆನ್ನಾಗಿ ಚಿಗುರುತ್ತದೆ.
ನಮ್ಮ ಮನೆಯಲ್ಲಿ ಬೆಳೆಯುತ್ತಿರುವ ನಂದಿಬಟ್ಟಲು, ಅಲೋವೆರಾ, ಬಸಳೆ (ಕೆಂಪು ಹಾಗು ಬಿಳಿ), ದೊಡ್ಡಪತ್ರೆ, ಅಮೃತಬಳ್ಳಿ, ಕಣಿಗಲೆ (ಬಿಳಿ ಹಾಗು ಕೆಂಪು), ಮಲ್ಲಿಗೆ (ದುಂಡು, ಸೂಜಿ), ಜಾಜಿ, ದಾಸವಾಳ (ಹಲವು ಬಣ್ಣಗಳು), ಪಾರಿಜಾತ, ಶಂಖದ ಹೂವಿನ ಗಿಡ (ಶಂಖಪುಷ್ಠಿ), ಆಂಥೋರಿಯಮ್, ಇನ್ಸುಲಿನ್ ಹಾಗೂ ಕೆಲವು ಹೂವಿನ ಗಿಡಗಳು, ಮನೆಯಲ್ಲಿ ತಯಾರಿಸಲಾದ ಗೊಬ್ಬರದಿಂದಲೇ ಚೆನ್ನಾಗಿ ಬೆಳೆದಿವೆ. ಕಳೆದ ಒಂದೂವರೆ ವರ್ಷಗಳಿಂದ ಈ ರೀತಿ ಮನೆ ತ್ಯಾಜ್ಯಗಳಿಂದಲೇ ಗೊಬ್ಬರವನ್ನು ಮಾಡುತ್ತಿದ್ದೇವೆ. ಕೆಲವು ಹೂವಿನ ಗಿಡಗಳು, ಪಾರಿಜಾತದ ಗಿಡ, ಕರಿಬೇವು ಸೊಪ್ಪಿನ ಗಿಡ, ಕಣಿಗಲೆ, ದಾಸವಾಳದ ಗಿಡಗಳು ಮೊದಲನೆಯ ಕಟ್ಟಿಂಗ್‍ಗೆ ಬಂದಿವೆ.
ಇಂದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಈ ಲೇಖನ ಪ್ರಕಟಗೊಂಡಿದೆ. http://epaper.samyukthakarnataka.com/c/364540
upayukta maahiti ulal lekhana
ReplyDeletethanks!
ReplyDelete-AR