My Blog List

Wednesday, September 26, 2012

ಸೂಯೆಜ್ ಕಾಲುವೆ!


ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್‍ಹೋಪ್‍ ಭೂಶಿರವನ್ನು ಬಳಸಿಕೊಂಡು ಹೋಗಬೇಕಾಗುತ್ತಿತ್ತು. ಹಾಗಾಗಿ ಸಾರಿಗೆ, ಸರಕು ಸಾಗಾಟ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು. 

ಈ ವಿಳಂಬವನ್ನು ಸಾಕಷ್ಟು ಕಡಿಮೆ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು, ಸಾಗರದ ಡೊಂಕು ತಿದ್ದುವ ಸೂಯೆಜ್ ಕಾಲುವೆ ಯೋಜನೆ. ಆಗಿನ ಈಜಿಪ್ಟ್ ಇಂಥ ಬೃಹತ್ ಯೋಜನೆಯನ್ನು ನೆರವೇರಿಸುವಷ್ಟು ಬಲವಾಗಿರಲಿಲ್ಲ. ಅದಕ್ಕೆಂದೇ ’ಆಗ್ಲೋ-ಫೆಂಚ್ ಮಾರಿ ಟೈಮ್ ಕೆನಾಲ್ ಕಂಪೆನಿ’ ಹುಟ್ಟಿಕೊಂಡಿತು. 

ಉತ್ತರದಲ್ಲಿ ಮೆಡಿಟರೇನಿಯನ್ ಇಂದ ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಈ ಕಾಲುವೆ ೧೭೩ ಕಿ.ಮೀ. ಅಷ್ಟು ಉದ್ದವಾಗಿದೆ. ಈಜಿಪ್ಟಿನ ಉಗ್ರ ಬಿಸಿಲಿನ, ಮರಳುಗಾಡಿನ, ಅಲ್ಲಲ್ಲಿ ಗಸಿಮಣ್ಣಿನ, ನೊರಜುಗಲ್ಲಿನ ಪ್ರದೇಶಗಳ ಮೇಲೆ, ಮಾರ್ಗದಲ್ಲಿ ಹಲವು ಸರೋವರಗಳ ಮೂಲಕ ಕಾಲುವೆ ಹಾದುಹೋಗುತ್ತದೆ. ಉತ್ತರದ ತುದಿಯಲ್ಲಿ ಸೈಯದ್ ಬಂದರು, ದಕ್ಷಿಣದ ತುದಿಯಲ್ಲಿ ಸೂಯೆಜ್ ಬಂದರುಗಳಿವೆ. ಕಾಲುವೆ ನಿರ್ಮಾಣದ ನಂತರ ಹಲವು ಹೊಸ ಊರುಗಳು ಹುಟ್ಟಿಕೊಂಡಿವೆ. 

ಫ್ರೆಂಚ್ ಎಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣಗೊಂಡಿತು. ಬಲಾತ್ಕಾರದ ದುಡಿಮೆಗೆ ನೂಕಲ್ಪಟ್ಟ ಸಾವಿರಾರು ಬಡ ಕೂಲಿಯಾಳುಗಳು, ಕೈದಿಗಳು, ಬ್ರಿಟನಿನ ಹಾಗೂ ಫ್ರಾನ್ಸಿನ ತಂತ್ರಜ್ಞರು ನಿರ್ಮಾಣದಲ್ಲಿ ಭಾಗವಹಿಸಿದ್ದರು. 

ಕೆಂಪು ಸಮುದ್ರದ ಮಟ್ಟ ಮೆಡಿಟರೇನಿಯನ್ ಸಾಗರದ ಮಟ್ಟಕ್ಕಿಂತ ೩೦ ಅಡಿಗಳಷ್ಟು ಎತ್ತರದಲ್ಲಿರುವುದು ಎಂದು ತಿಳಿದಾಗ, ನೀರಿನ ಮಟ್ಟ ಬದಲಾವಣೆಯ ಕಟ್ಟೆಗಳನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ ಕಾಲುವೆ ೮ ಮೀ. ಆಳ, ೨೨ ಮೀ. ಅಗಲವಾಗಿತ್ತು. ಮುಂದೆ ಕಾಲುವೆಯಲ್ಲಿ ಭಾರಿ ಟ್ಯಾಂಕರ್ ಹಡಗುಗಳೂ ಸಂಚರಿಸುವಂತೆ ಆಳ, ಅಗಲಗಳನ್ನು ಹೆಚ್ಚಿಸಲಾಯಿತು. 

೧೮೬೯ರಲ್ಲಿ ಕಾಲುವೆಯ ಉದ್ಘಾಟನೆಗಾಗಿ ಹಡಗು ಸಂಚಾರಕ್ಕೆ ತೆರೆಯಲಾಯಿತು. ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗುಗಳ ಸಂಚಾರ ಮಾರ್ಗದಲ್ಲಿ ಸುಮಾರು ೧೧,೦೦೦ ಕಿ.ಮೀ., ಅಷ್ಟು ಕಡಿತವಾಯಿತು. ಕಳೆದ ಶತಮಾನದ ಈ ಮನುಷ್ಯ ಪ್ರಯತ್ನ ಸಾಧಾರಣವಾದುದೇನಲ್ಲ. ಇದರಿಂದ ಭಾರತದಂಥ ದೊಡ್ಡ ದೇಶವನ್ನು ವಸಾಹತಾಗಿ ಮಾಡಿಕೊಂಡಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಹೆಚ್ಚು ಪ್ರಯೋಜನವಾಯಿತು. 

೧೯೫೦ರ ದಶಕದಲ್ಲಿ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಭಾರಿ ಕೋಲಾಹಲವುಂಟಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಪರಿಸ್ಥಿತಿ ಹತೋಟಿಗೆ ಬಂದಿತು. 

Saturday, September 22, 2012

ಕುತುಬ್ ಮಿನಾರ್!


ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್! 
ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. ೧೧೯೯ರ ಸುಮಾರಿನಲ್ಲಿ ಇದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ. ಆತನ ತರುವಾಯ ಆಡಳಿತ ವಹಿಸಿಕೊಂಡ ಸುಲ್ತಾನ್ ಇಲ್ತ್ ಮುಷ್ ೧೨೩೦ರ ಸುಮಾರಿಗೆ ನಿರ್ಮಾಣವನ್ನು ಪೂರ್ತಿಗೊಳಿಸಿದ. ಆಗ ಅದು ನಾಲ್ಕು ಅಂತಸ್ತಿನದ್ದಾಗಿತ್ತು. ಫಿರೋಜ್ ಷಾ ತುಘಲಕ್‍ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಮತ್ತು ಐದನೆಯ ಅಂತಸ್ತುಗಳನ್ನು ನಿರ್ಮಿಸಿದ. 
ಹೀಗೆ ಒಟ್ಟು ಐದು ಅಂತಸ್ತುಗಳ ಈ ಗೋಪುರ ೭೩ಮೀ. ಎತ್ತರವಿದೆ. ಇದರ ಬುಡದ ಸುತ್ತಳತೆ ೧೫ಮೀ., ತುದಿಯ ಸುತ್ತಳತೆ ೨.೭ಮೀ., ಇದೆ. ಕೆಳಗಿನ ಮೂರು ಅಂತಸ್ತುಗಳು ಬೆಣಚು ಕಲ್ಲಿನಿಂದ ನಿರ್ಮಿತವಾಗಿದೆ. ಅವಕ್ಕೆ ಕೆಮ್ಮರಳು ಶಿಲೆಯ ಹೊದಿಕೆ ಇದೆ. ನಾಲ್ಕು ಮತ್ತು ಐದನೆಯ ಅಂತಸ್ತುಗಳು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ. ಅವಕ್ಕೆ ಅಮೃತ ಶಿಲೆಯ ಹೊದಿಕೆ ಇದೆ. 
ಹೊರಮೈ ಕುರಾನಿನ ಶ್ಲೋಕಗಳಿಂದಲೂ ಹೂವುಗಳ ಕೆತ್ತನೆಗಳಿಂದಲುಉ ಅಲಂಕೃತವಾಗಿದೆ. ದಿಲ್ಲಿಯ ಅತ್ಯಂತ ಮೋಹಕ ಪ್ರವಾಸಿ ಆಕರ್ಷಣೆಯಾದ ಈ ಗೋಪುರದ ತುದಿಗೇರಲು ಒಳಭಾಗದಲ್ಲಿ ೩೭೬ ಮೆಟ್ಟಿಲುಗಳಿವೆ. 
ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ ೨೫-೩೦ ಸೆಂ.ಮೀ. ಅಷ್ಟು ವಾಲಿರುವಂತೆ ಕಾಣಿಸುತ್ತದೆ. ಯಾರಾದರೂ ಇದರ ಕಿವಿಗೆ ಪಿಸಾ ಗೋಪುರದ ಸುದ್ದಿ ಮುಟ್ಟಿಸಿರಬಹುದೇ? ಆದರೆ, ವಾಸ್ತವದಲ್ಲಿ ಅದು ವಾಲಿದ್ದಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.  
ಕುತುಬ್ ಮಿನಾರಿನ ಆವರಣದಲ್ಲಿ ಲೋಹಶಾಸ್ತ್ರದಲ್ಲಿ ಭಾರತೀಯರಿಗಿದ್ದ ನೈಪುಣ್ಯದ ಸಂಕೇತವಾದ ಕಬ್ಬಿಣದ ಕಂಬ ಒಂದಿದೆ. ಅದು ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಸತತವಾದ ಗಾಳಿ ಮಳೆಗೆ ಮೈ ಒಡ್ಡಿಯೂ ತುಕ್ಕು ಹಿಡಿಯದೇ ನಿಂತಿರುವ ಇದರ ಮೇಲೆ ಚಂದ್ರಗುಪ್ತ ವಿಕ್ರಮಾದಿತ್ಯರ ವಿಜಯಗಳನ್ನು ಕೊಂಡಾಡುವ ಶಾಸನಗಳನ್ನು ಕೆತ್ತಲಾಗಿದೆ. 
ಚಿತ ಕೃಪೆ: ಇಲ್ಲಿಂದ

Monday, September 17, 2012

ಕಾರಿನ ಸ್ವಗತ!


ಮೊದಲ ನೋಟದಲ್ಲೆ ನೀನು ನನಗೆ ಸೋತೆ. ಮನೆಯವರನ್ನು ಓಲೈಸಿ ನನ್ನನ್ನು ನಿನ್ನ ಮನೆಗೆ ಕರೆತಂದೆ. ನಂತರ ನಿನ್ನ ಜೊತೆಗೆ ಸ್ನೇಹ ಬೆಳೆಯಿತು, ಸ್ನೇಹ ಪ್ರೇಮವಾಯಿತು. ಎಲ್ಲಿಗೆ ಹೋದರೂ ನೀನು ನನ್ನೊಂದಿಗೆ ಬರುತ್ತಿದ್ದೆ. ನಾನು ಇಲ್ಲದೇ ನೀನು ಇರದಾದೆ. ನನ್ನೊಂದಿಗೆ ನೀನು ಬೆರೆತುಹೋದೆ. ನನ್ನನ್ನು ಮನೆಗೆ ಕರೆತಂದ ಹೊಸತರಲ್ಲಿ, ನನ್ನನ್ನು ನೋಡಿಕೊಂಡ ರೀತಿ ನನಗೆ ಇಂದಿಗೂ ನೆನಪಿದೆ. ದಿನವೂ ನನ್ನ ಒರೆಸುವುದು, ಚಕ್ರಗಳಿಗೆ ಮಣ್ಣು ಮೆತ್ತಿದ್ದರೆ ನೀರು ಹಾಕಿ ತೊಳೆಯುವುದು, ನಂತರ ಒಣಗಿದ ಬಟ್ಟೆಯಿಂದ ಒರೆಸುವುದು, ಎಲ್ಲಾ ನೆನಪಿದೆ. ನನ್ನನ್ನು ತಣ್ಣೀರಿನಿಂದ ತೊಳೆದಾಗಲೆಲ್ಲಾ ನನಗೆ ಚಳಿ ಆಗಬಾರದೆಂದು ನನ್ನನ್ನು ಒರೆಸಿದ ಬಳಿಕ ಬಿಸಿಲಿನಲ್ಲಿ ಕಾಯಿಸುತ್ತಿದ್ದೆ. ಆಗ ಸೂರ್ಯನ ಶಾಖ ತಗುಲಿ ಮೈ ಬೆಚ್ಚಗಾಗುತ್ತಿತ್ತು. ನನಗೆ ಹುಮ್ಮಸ್ಸು ಬರುತ್ತಿತ್ತು. ನನ್ನನ್ನು ಹುರಿದುಂಬಿಸಿದಾಗಲೆಲ್ಲ ನಾನು ಜೋರಾಗಿ ಓಡ್ತಿದ್ದೆ. ಓಡಿ, ಓಡಿ, ನನಗೆ ಸುಸ್ತಾದಾಗ ನನ್ನನ್ನು ನಿಲ್ಲಿಸಿ ನೀನು ವಿಶ್ರಾಂತಿ ಪಡೆಯುತ್ತಿದ್ದೆ. ನನಗೋಸ್ಕರ ಒಂದು ಗೂಡು ಕಟ್ಟಿಸಿಕೊಟ್ಟೆ, ನಾನು ಅದರಲ್ಲಿ ಇರಲು ಶುರು ಮಾಡಿದೆ. ನನ್ನನ್ನೂ ನಿಮ್ಮವರಲ್ಲೊಬ್ಬಳಂತೆ ಭಾವಿಸಿದೆ. ನನಗೂ ಆಗ ವಯಸ್ಸಿತ್ತು, ಚೆನ್ನಾಗಿ ಓಡುವ ಶಕ್ತಿ ಇತ್ತು. ಹಬ್ಬದ ದಿನ, ನನ್ನನ್ನು ಚೆನ್ನಾಗಿ ತೊಳೆದು, ಪೂಜೆ ಸಲ್ಲಿಸುತ್ತಿದ್ದೆ. 
ನನ್ನ ನಿಜವಾದ ಶಕ್ತಿ ಪ್ರದರ್ಶನವಾದದ್ದು ಕೊಡಚಾದ್ರಿಗೆ ಹೋದಾಗ. ನನ್ನ ಶಕ್ತಿ ಮೀರಿ ಓಡ್ತಿದ್ದೆ. ಆದರೆ ನನಗೆ ವಯಸ್ಸಾಗಿದೆ ಎಂಬ ಸುಳಿವೂ ಇರಲಿಲ್ಲ. ಓಡಿ, ಓಡಿ, ನನಗೂ ದಣಿವಾಗಿತ್ತು. ಹೇಗೋ ನಿನ್ನನ್ನು ಕ್ಷೇಮವಾಗಿ ಮನೆಗೆ ಕರೆತಂದೆ. ನಂತರ ನನ್ನ ದಣಿವನ್ನು ಇಂಗಿಸಲು ಒಂದು ವಾರ ಬೇಕಾಯಿತು. ಅಂದಿನಿಂದ ನೀನು, ನನಗೆ ಇನ್ನೂ ಹೆಚ್ಚು ಆರೈಕೆ ಮಾಡಿದೆ. ಎಲ್ಲರಿಗೂ ವಯಸ್ಸಾಗುತ್ತದೆ. ಅಲ್ಲವೇ? ಹಾಗೆಯೇ ನನಗೂ ಸಹ ವಯಸ್ಸಾಗಿದೆ ಎಂಬ ಅರಿವು ಮೂಡಿತು. ನಂತರ ನನ್ನನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ನಿಲ್ಲಿಸಿದೆ. ಜೊತೆಗೆ ಪೆಟ್ರ್‍ಓಲ್ ಬೆಲೆ ಕೂಡ ಏರುತ್ತಾ ಹೋಯಿತು. ನಾನು ನನ್ನ ಗೂಡಿನಲ್ಲಿಯೇ ಹೆಚ್ಚು ಕಾಲ ಕಳೆಯಬೇಕಾಯಿತು. ನೀನು ಒಬ್ಬೊಬ್ಬನೇ ಹೊರಗೆ ಹೋಗುವಾಗ ನನ್ನನ್ನು ಮನೆಯಲ್ಲಿಯೇ ಬಿಟ್ಟು ಹೋಗುತ್ತಿದ್ದೆ. ಆದರೆ ಮನೆಯವರೆಲ್ಲರೂ ಹೊರಗೆ ಹೋಗುವಾಗ ಮಾತ್ರ ನನ್ನನ್ನು ಕರೆದುಕೊಂಡು ಹೋಗುತ್ತಿದ್ದೆ. ದಿನ ನನ್ನ ಜೊತೆ ಹೋಗುತ್ತಿದ್ದ ನೀನು, ವಾರಕ್ಕೊಮ್ಮೆ ನನ್ನೊಂದಿಗೆ ಬರುತ್ತಿದ್ದೆ. ನನಗೂ ಈ ಸೂಕ್ಷ್ಮಗಳು ತಿಳಿಯುವ ಹೊತ್ತಿಗೆ ನನ್ನಲ್ಲೂ ಕೆಲವು ದೋಷಗಳಿವೆ ಎಂದು ಅರಿತೆ. 
ಕಳೆದ ಐದು ವರ್ಷಗಳಿಂದ ನಿನ್ನ ಜೊತೆ ಇದ್ದೆ. ನನ್ನನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಕರೆದುಕೊಂಡು ಹೋದೆ. ಅಷ್ಟೇ ಕ್ಷೇಮವಾಗಿ ಕರೆತಂದೆ. ನಾನು ನೀನು ಜೊತೆಯಲ್ಲಿ ನೋಡಿದ ಜಾಗಗಳು ಅದೆಷ್ಟೋ? 
ಇಂದು, ನಾನು ನಿನ್ನಿಂದ ದೂರವಾಗಿದ್ದೇನೆ. ಹೊಸ ಮನುಷ್ಯರೊಂದಿಗೆ ನನ್ನ ಒಡನಾಟ ಶುರುವಾಗಲಿದೆ. ಅವರೂ ನಿನ್ನಷ್ಟೇ ಪ್ರೀತಿ ತೋರುತ್ತಾರೆ ಎಂಬ ನಂಬಿಕೆ ಇದೆ. ನಿನಗೆ ಒಳ್ಳೆಯದಾಗಲಿ. 

Saturday, September 08, 2012

ಗೊಬ್ಬರವಾಗುವ ಮನೆತ್ಯಾಜ್ಯ.

ಸಾಮಾನ್ಯವಾಗಿ ಮನೆಯಲ್ಲಿ ಉತ್ಪನ್ನವಾಗುವ ಕಸವನ್ನು ಪಕ್ಕದ ಸೈಟಿನ ಖಾಲಿ ಜಾಗದಲ್ಲೋ, ಅಥವಾ ಕಸದ ತೊಟ್ಟಿಗೋ ಎಸೆಯುತ್ತಾರೆ. ಅದರ ಬದಲು ಮನೆಯಲ್ಲಿ ಸಿಗುವ ತ್ಯಾಜ್ಯಗಳನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿದರೆ, ಪರಿಸರಕ್ಕೂ ಅನುಕೂಲಗಳಾಗುತ್ತದೆ. 


ಮನೆಯಲ್ಲಿ ಗಿಡಗಳನ್ನು ಬೆಳೆಸಿದ್ದರೆ, ಅವುಗಳಿಗೆ ತರಕಾರಿ ಸಿಪ್ಪೆಗಳನ್ನು, ಹಣ್ಣಿನ ಸಿಪ್ಪೆಗಳನ್ನು ಒಂದು ಚಿಕ್ಕ ಬಕೆಟಿನಲ್ಲಿ ಹಾಕಿ, ಅದರ ಮೇಲೆ ಒಣ ಎಲೆಗಳನ್ನು ಹಾಕಿ, ಅದನ್ನು ಮಣ್ಣನಿಂದ ಮುಚ್ಚಿಡಿ. ಒಣ ಎಲೆಗಳು ಸಿಗದಿದ್ದರೆ, ಹಸಿ ಎಲೆಗಳನ್ನು ಕೂಡ ಹಾಕಬಹುದು. ಅವೇ ಒಣಗುತ್ತವೆ. ಆದರೆ ಸ್ವಲ್ಪ ಸಮಯ ಹೆಚ್ಚು ತೆಗೆದುಕೊಳ್ಳುತ್ತದೆ. ಹವಾಮಾನಕ್ಕೆ ಹೊಂದುವಂತೆ ಅದು ಕಾಂಫೋಸ್ಟ್ ಆಗುತ್ತದೆ. ಅಂದರೆ, ಬಿಸಿಲು ಹೆಚ್ಚಿದ್ದರೆ (ಬೇಸಿಗೆ ಕಾಲ) ಬೇಗ ಕಾಂಪೋಸ್ಟ್ ಆಗುತ್ತದೆ. ಮೋಡ ಕವಿದ ವಾತಾವರಣವಿದ್ದರೆ (ಮಳೆಗಾಲ), ಕೊಂಚ ತಡವಾಗುತ್ತದೆ. 
 

ಪ್ರತಿ ರಾತ್ರಿ ಅಳಿದುಳಿದ ಪ್ಲಾಸ್ಟಿಕ್ ಹೊರತುಪಡಿಸಿದ ತ್ಯಾಜ್ಯವನ್ನು ಮಾರನೆ ದಿನ ಗೊಬ್ಬರದ ಬಕೆಟಿಗೆ ಹಾಕಿ. ಬಕೆಟ್ ತುಂಬಿದ ಬಳಿಕ ಎಲೆಗಳಿಂದ ಮುಚ್ಚಿಡುವುದು ಉತ್ತಮ. ಇದರಿಂದ ತ್ಯಾಜ್ಯಗಳ ಕೊಳೆತ ವಾಸನೆಯನ್ನು ತಡೆಗಟ್ಟಬಹುದು. ಎರಡು ಬಕೆಟ್ ಇಂದ ಆದ ಕಾಂಪೋಸ್ಟ್ ಅನ್ನು, ಒಂದು ದೊಡ್ಡ ಬಕೆಟ್‍ಗೆ ಹಾಕಬೇಕು. ಆಗ ಎರಡು ಬಕೆಟ್‍ನ ಕಾಂಪೋಸ್ಟ್ ಬೆರೆಯುತ್ತದೆ. ಈ ಕಾಂಪೋಸ್ಟಿಗೆ ನರ್ಸರಿಅಲ್ಲಿ ಸಿಗುವ ಮಣ್ಣನ್ನು ಬೆರೆಸಿ ನೇರವಾಗಿ ಮನೆಯಲ್ಲಿ ಬೆಳೆಸಿರುವ ಗಿಡಗಳಿಗೆ ಬಳಸಿಕೊಳ್ಳಬಹುದು. ಮಣ್ಣು ತುಂಬಾ ಹದಗೊಳ್ಳುತ್ತದೆ. ಹಾಗೂ ಪ್ರತಿ ಬಾರಿಯೂ ನರ್ಸರಿಗೆ ಹೋಗೋದು ತಪ್ಪುತ್ತದೆ. 



ಮನೆಯಲ್ಲೇ ತಯಾರಿಸಲ್ಪಟ್ಟ ಈ ರೀತಿಯಾದ ಗೊಬ್ಬರದಿಂದ ಗಿಡಗಳಿಗೆ ಒಳ್ಳೆಯ ಆರೈಕೆ ಸಿಕ್ಕಂತಾಗುತ್ತದೆ. ಹಣ್ಣು, ತರಕಾರಿ ಸಿಪ್ಪೆಗಳಿಂದ ಮಾತ್ರವಲ್ಲದೇ, ಪ್ಲಾಸ್ಟಿಕ್ ಹೊರತುಪಡಿಸಿರುವ ಯಾವುದೇ ಪದಾರ್ಥಗಳನ್ನು ಗೊಬ್ಬರವನ್ನಾಗಿ ಮರುಬಳಕೆ ಮಾಡಬಹುದು. ಪ್ಲಾಸ್ಟಿಕ್ ಅಂಶ ಇಲ್ಲದ ಪದಾರ್ಥಗಳು: ಹಣ್ಣು-ತರಕಾರಿ ಸಿಪ್ಪೆ, ಟೀ ಡಿಕಾಕ್ಷನ್, ರಾತ್ರಿ ಉಳಿದಂತಹ ಅನ್ನ, ಹುಳಿ, ಸಾರು, ಒಡೆದ ಹಾಲು, ಹುಳಿಯಾದ ಮೊಸರು, ಇತ್ಯಾದಿ. ಹುಳಿ ಮೊಸರನ್ನು, ತಿಳಿ ಸಾರನ್ನು, ಕರಬೇವು ಗಿಡಕ್ಕು ಹಾಕಿದರೆ, ಚೆನ್ನಾಗಿ ಚಿಗುರುತ್ತದೆ. 

ನಮ್ಮ ಮನೆಯಲ್ಲಿ ಬೆಳೆಯುತ್ತಿರುವ ನಂದಿಬಟ್ಟಲು, ಅಲೋವೆರಾ, ಬಸಳೆ (ಕೆಂಪು ಹಾಗು ಬಿಳಿ), ದೊಡ್ಡಪತ್ರೆ, ಅಮೃತಬಳ್ಳಿ, ಕಣಿಗಲೆ (ಬಿಳಿ ಹಾಗು ಕೆಂಪು), ಮಲ್ಲಿಗೆ (ದುಂಡು, ಸೂಜಿ), ಜಾಜಿ, ದಾಸವಾಳ (ಹಲವು ಬಣ್ಣಗಳು), ಪಾರಿಜಾತ, ಶಂಖದ ಹೂವಿನ ಗಿಡ (ಶಂಖಪುಷ್ಠಿ), ಆಂಥೋರಿಯಮ್, ಇನ್ಸುಲಿನ್ ಹಾಗೂ ಕೆಲವು ಹೂವಿನ ಗಿಡಗಳು, ಮನೆಯಲ್ಲಿ ತಯಾರಿಸಲಾದ ಗೊಬ್ಬರದಿಂದಲೇ ಚೆನ್ನಾಗಿ ಬೆಳೆದಿವೆ. ಕಳೆದ ಒಂದೂವರೆ ವರ್ಷಗಳಿಂದ ಈ ರೀತಿ ಮನೆ ತ್ಯಾಜ್ಯಗಳಿಂದಲೇ ಗೊಬ್ಬರವನ್ನು ಮಾಡುತ್ತಿದ್ದೇವೆ. ಕೆಲವು ಹೂವಿನ ಗಿಡಗಳು, ಪಾರಿಜಾತದ ಗಿಡ, ಕರಿಬೇವು ಸೊಪ್ಪಿನ ಗಿಡ, ಕಣಿಗಲೆ, ದಾಸವಾಳದ ಗಿಡಗಳು ಮೊದಲನೆಯ ಕಟ್ಟಿಂಗ್‍ಗೆ ಬಂದಿವೆ. 



ಇಂದಿನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಈ ಲೇಖನ ಪ್ರಕಟಗೊಂಡಿದೆ. http://epaper.samyukthakarnataka.com/c/364540