My Blog List
Wednesday, September 26, 2012
ಸೂಯೆಜ್ ಕಾಲುವೆ!
Saturday, September 22, 2012
ಕುತುಬ್ ಮಿನಾರ್!
Saturday, August 18, 2012
ಪಕ್ಷಿ ವೀಕ್ಷಣೆ
ಪ್ರತಿದಿನ, ನಮ್ಮ ಅಂಗಳದಲ್ಲಿ ಹಾಜರಾಗುವ, ಮನೆಯ ಸೂರಿನಲ್ಲಿ ಅಥವಾ ಸಮೀಪದ ಮರಗಳಲ್ಲಿ ಗೂಡು ಕಟ್ಟಿ ವಾಸಿಸುವ ಹಕ್ಕಿಗಳು ಕೆಲವಾದರೆ, ಊರಾಚೆಗಿನ ತೋಪುಗಳಲ್ಲಿ, ತೋಟಗಳಲ್ಲಿ, ಕಾಡುಗಳಲ್ಲಿ ವಾಸಿಸುವ ಪಕ್ಷಿಗಳು ಹಲವಾರು. ಅವುಗಳ ಬಣ್ಣ, ಆಕಾರ, ದನಿ, ಸ್ವಭಾವ, ನೆಲೆ, ಆಹಾರ, ಗೂಡುಕಟ್ಟುವ ಹಾಗೂ ಮರಿಗಳನ್ನು ಸಾಕುವ ವಿಧಾನ ಸಹ ವೈವಿಧ್ಯಮಯ.
’ಪಕ್ಷಿ ವೀಕ್ಷಣೆ’ ಕುತೂಹಲಕಾರಿಯಾದ, ಹೆಚ್ಚು ದುಬಾರಿಯಲ್ಲದ, ಪರಿಸರದ ಬಗ್ಗೆ, ಪಕ್ಷಿಗಳ ಬಗ್ಗೆ ಆಸಕ್ತಿಯನ್ನು, ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹವ್ಯಾಸ. ಇದನ್ನು ಒಂದು ಅಧ್ಯಯನ ಎಂದು ಹೇಳಲೂಬಹುದು. ಪಕ್ಷಿ ವೀಕ್ಷಣೆಗೆ ಬೇಕಾಗುವ ವಸ್ತುಗಳು ಸಹ ತೀರಾ ಸಾಮಾನ್ಯವಾದುವು. ಒಂದು ನೋಟ್ ಪುಸ್ತಕ, ಲೇಖನಿ, ದುರ್ಬೀನು ಹಾಗೂ ಅತ್ಯಂತ ಮುಖ್ಯವಾಗಿ ತಾಳ್ಮೆ. ಪಕ್ಷಿ ವೀಕ್ಷಣೆಯಲ್ಲಿ ಮಕ್ಕಳೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು.
ಮನೆಯಂಗಳದಿಂದಲೇ ಪಕ್ಷಿ ವೀಕ್ಷಣೆ ಪ್ರಾರಂಭಿಸಬಹುದು. ದುರ್ಬೀನು ಇದ್ದರೆ ಇನ್ನೂ ಉತ್ತಮ. ನಗರೀಕರಣದ ಪರಿಣಾಮವಾಗಿ ಪಕ್ಷಿಗಳು ಕಾಣಿಸುವುದು ಅಪರೂಪವಾಗಿರಬಹುದು. ಆದರೂ ಮರಗಳ ಗುಂಪಿನಲ್ಲಿ, ಕೆರೆಕಟ್ಟೆಗಳ ಸಮೀಪ, ಟೆಲಿಗ್ರಾಫ್ ತಂತಿಗಳ ಮೇಲೆ ಕುಳಿತ ಹಕ್ಕಿ ಸಾಲನ್ನು ನೋಡಬಹುದು. ಸಹಜವಾಗಿಯೇ ಪಕ್ಷಿಗಳಿಗೆ ಮನುಷ್ಯರ ಬಗ್ಗೆ ಅಂಜಿಕೆ ಇರುತ್ತದೆ. ಅವು ತಮ್ಮಷ್ಟಕ್ಕೆ ಇರಬಯಸುತ್ತವೆ. ಕಿರುಕುಳವನ್ನು ಸಹಿಸಲಾರವು. ಆದುದರಿಂದ, ಸಾಧ್ಯವಾದಷ್ಟು ಮರೆಯಲ್ಲಿ ನಿಂತು, ಅವುಗಳ ಏಕಾಂತತೆಗೆ ಭಂಗವಾಗದಂತೆ, ತುಸು ದೂರದಿಂದಲೇ ಪಕ್ಷಿವೀಕ್ಷಣೆ ಮಾಡುವುದು ಒಳ್ಳೆಯದು. ಆಗ ದುರ್ಬೀನು ಸಹಾಯಕ್ಕೆ ಬರುತ್ತದೆ.
ಪಕ್ಷಿಗಳು ಗೂಡು ಕಟ್ಟುವುದನ್ನು, ಆಹಾರ ಸಂಗ್ರಹಿಸುವುದನ್ನು, ಸಲ್ಲಾಪ ನಡೆಸುವುದನ್ನು, ಮೊಟ್ಟೆಗಳನ್ನು ಜೋಪಾನ ಮಾಡುವುದನ್ನು, ಕಾವು ಕೊಡುವುದನ್ನು, ಮರಿಗಳಿಗೆ ಗುಟುಕು ನೀಡುವುದನ್ನು, ಅಪಾಯದ ಸಂದರ್ಭದಲ್ಲಿ ಗಾಬರಿಯ ದನಿಯಲ್ಲಿ ಸೂಚನೆ ನೀಡುವುದು, ಪ್ರತಿಭಟಿಸುವುದು, ಅಪಾಯ ನೀಗಿದ ಮೇಲೆ ಹರ್ಷದ ದನಿ ಹೊರಡಿಸುವುದು, ನೀರಿನಲ್ಲಿ ಮುಳುಗು ಹಾಕಿ ಬಿಸಿಲಿನ ಝಳದಿಂದ ಸಾಂತ್ವನ ಪಡೆಯುವುದು, ಮುಂತಾದವನ್ನು ಮರೆಯಲ್ಲಿ ನಿಂತು ನೋಡುತ್ತ ಹೋದಂತೆ ಅವುಗಳ ಬಗ್ಗೆ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ.
ಪಕ್ಷಿಗಳ ವಲಸೆ ನೂರಾರು ವರ್ಷಗಳಿಂದ ನಡೆಯುತ್ತ ಬಂದಿರುವ ವಿದ್ಯಮಾನ. ಅವು ಭೂಕಂಡದ ಬೇರೆ ಬೇರೆ ಭಾಗಗಳಿಂದ, ಭೂಗೋಳಿಕ ಎಲ್ಲೆಗಳನ್ನು ದಾಟಿ, ಹಾರಿ ಬಂದು ಒಂದು ನಿರ್ದಿಷ್ಟ ತಾಣದಲ್ಲಿ ಸಂಸಾರ ಹೂಡುತ್ತವೆ, ಆಹಾರ ಸಂಗ್ರಹಿಸುತ್ತವೆ, ಮೊಟ್ಟೆಯಿಟ್ಟು ಮರಿಮಾಡುತ್ತವೆ. ಮರಿಗಳು ಹಾಡುವಂತಾಗುವ ವೇಳೆಗೆ ಹಾರಿಹೋಗುತ್ತವೆ. ಇವೆಲ್ಲಾ ಪಕ್ಷಿವೀಕ್ಷಕರ ಅಧ್ಯಯನಕ್ಕೆ ಬಹಳ ಮುಖ್ಯವಾದ ವಿಷಯಗಳಾಗಿವೆ.
ಪಕ್ಷಿ ವೀಕ್ಷಕರು ತಮ್ಮ ಪುಸ್ತಕಗಳಲ್ಲಿ ಈ ಕೆಳಕಂಡಂತೆ ವಿವರಗಳನ್ನು ಸಂಗ್ರಹಿಸಿ ಪಕ್ಷಿಗಳನ್ನು ಕುರಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
ಪಕ್ಷಿ ವೀಕ್ಷಣೆ ವಿವರ.
ವೇಳೆ........................ ದಿನಾಂಕ.......................
ಸ್ಥಳ.........................ಋತು.............................
ಪಕ್ಷಿಯ ವರ್ಣನೆ...............................................
೧. ಆಕಾರ....................................................
೨. ಬಣ್ಣ........................................................
೩. ಪ್ರಮುಖ ವೈಶಿಷ್ಟ್ಯಗಳು..................................
..................................................................
..................................................................
೪. ಗಂಡು ಮತ್ತು ಹೆಣ್ಣು ಹಕ್ಕಿಗಳಲ್ಲಿ ವ್ಯತ್ಯಾಸ............
..................................................................
೫. ಮರಿಗಳ ಬಣ್ಣ ಮತ್ತು ಸ್ವರೂಪ.........................
..................................................................
..................................................................
ಪಕ್ಷಿಯ ನಡೆವಳಿಕೆ............................................
..................................................................
ಧ್ವನಿ............................................................
ಗೂಡಿನ ವರ್ಣನೆ..............................................
..................................................................
ಪ್ರವಾಸಿ ಪಕ್ಷಿಯೇ ಅಥವಾ ಸ್ಥಳೀಯ ಪಕ್ಷಿಯೇ?..........
----------------------------------------------------
Monday, July 18, 2011
ಹಾವುರಾಣಿ. - Common Garden Skink.
Scientific classification
Thursday, June 24, 2010
ಶಿವಲಿಂಗದ ಮಹತ್ವ.
ಶಿವನ ಸ್ವರೂಪವು ಅತ್ಯಂತ ಗಹನವಾದದ್ದು. ವಿಸ್ತರಿಸಿ ಹೇಳುವುದಾದರೆ, ಅವನು ರೂಪಗಳಿಗೆ ಅತೀತನು. ಅಮೂರ್ತ ತತ್ತ್ವವನ್ನು ಆರಾಧಿಸುವುದು ಅಸಾಧ್ಯವಾದ್ದರಿಂದ ಶಿವನ ವಿಗ್ರಹವು ಎಂದೂ ಮೂಲಮೂರ್ತಿಯಾಗಿ ಪ್ರತಿಷ್ಠಾಪಿಸಲ್ಪಡುವುದಿಲ್ಲ ಮತ್ತು ಪೂಜಿಸಲ್ಪಡುವುದಿಲ್ಲ. ಶಿವಲಿಂಗದ ಸಂಕೇತದಲ್ಲೇ ಶಿವನಿಗೆ ಪೂಜೆ. ಲಿಂಗ ಎಂದರೆ ಸಂಕೇತ ಅಥವಾ ಗುರುತು. ಶಿವನು ಕಾಲಾತೀತನಾದ್ದರಿಂದ, ಅಂತಹ ಅವ್ಯಕ್ತರೂಪದ ವಿಶಾಲತೆಯನ್ನು ಶಿವಲಿಂಗವು ಸಂಕೇತಿಸುತ್ತದೆ. ವ್ಯಕ್ತರೂಪವು ಶಿವ ಮತ್ತು ಅವ್ಯಕ್ತರೂಪವು ಲಿಂಗ ಎಂಬುದೂ ಉಲ್ಲೇಖಿತವಾಗಿದೆ. ಶಿವಲಿಂಗಗಳಲ್ಲಿ 'ಚಲ' ಮತ್ತು 'ಅಚಲ' ಎಂಬ ಎರಡು ಬಗೆಗಳಿವೆ.
ಅಚಲ ಲಿಂಗಗಳು.
ಅಚಲ ಲಿಂಗಗಳು ದೇವಸ್ಥಾನಗಳಲ್ಲಿ ಸ್ಥಾಪಿತವಾಗುತ್ತವೆ. ಇವು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತದೆ. ಅತ್ಯಂತ ಕೆಳಗಿನ ಭಾಗವು ಚೌಕಾಕಾರವಾಗಿರುತ್ತದೆ. ಇದು 'ಬ್ರಹ್ಮ ಭಾಗ'. ಇದು ಸಹಜವಾಗಿ ಸೃಷ್ಟಿಯ ಸಂಕೇತ. ಮಧ್ಯ ಭಾಗವು ಅಷ್ಟಕೋನಾಕಾರದಲ್ಲಿದ್ದು 'ವಿಷ್ಣು ಭಾಗ' ಎಂದು ಕರೆಯಲ್ಪಡುತ್ತದೆ. ಇದು ಸ್ಥಿತಿಗೆ ಸಂಕೇತ. ದುಂಡನೆಯ ಕುಂಭದೋಪಾದಿಯ 'ರುದ್ರ ಭಾಗ'ವು ಪೀಠದಿಂದ ಹೊರಬರುವಂತಿದ್ದು ಇದು ಅವ್ಯಕ್ತದಿಂದ ಮೂಡಿದ ವ್ಯಕ್ತ ರೂಪದ ಸಂಕೇತ. ಇದನ್ನೇ ಶಿವ ಸ್ವರೂಪವಾಗಿ ಪೂಜಿಸಲಾಗುತ್ತದೆ. ಈ ಪೂಜಾಭಾಗದ ಮೇಲೆ ತ್ರಿಗುಣ ಸಂಕೇತವಾದ ಮೂರು ಗೆರೆಗಳಿರುತ್ತದೆ. ಇದಕ್ಕೆ 'ಬ್ರಹ್ಮಸೂತ್ರ' ಎಂದು ಹೆಸರು. ಇದರಿಂದ ಲಿಂಗವು ಪೂಜೆಗೆ ಅರ್‌ಹವಾಗುತ್ತದೆ. ಅಷ್ಟೇ ಅಲ್ಲ, ಶಿವಲಿಂಗದ ಎದುರು ಬಸವನ ಮೂರ್ತಿ ಇರಲೇಬೇಕು ಎಂಬ ಪ್ರತೀತಿ ಇದೆ. ಇದನ್ನು ಅವ್ಯಕ್ತದ ಅಗಾಧತೆಯನ್ನು ವ್ಯಕ್ತದ ಮೂಲಕ ಸರಿದೂಗಿಸುವ ಯತ್ನವನ್ನಾಗಿ ನೋಡಬಹುದು. ಗಮನಿಸ ಬೇಕಾದ ಅಂಶವೆಂದರೆ, ಶಿವನು ನಂದಿವಾಹನನೂ ಹೌದು. ಈ ನಂದಿಯ ಭುಜದಲ್ಲೂ ಶಿವಲಿಂಗ ಸ್ವರೂಪದ ಡುಬ್ಬ ಇರುವುದನ್ನು ನೋಡಬಹುದು.
ಚಲ ಲಿಂಗಗಳು.
ಚಲ ಲಿಂಗಗಳೆಂದರೆ ಮೈಮೇಲೆ ಧರಿಸುವ ಲಿಂಗಗಳು, ಕೊರಳಲ್ಲಿ, ತಲೆಯ ಮೇಲೆ, ಭುಜದಲ್ಲಿ ಲಿಂಗಗಳನ್ನು, ಬಟ್ಟೆಯಲ್ಲಿ ಸುತ್ತಿ ಅಥವಾ ಸಂಪುಟಗಳಲ್ಲಿಟ್ಟು ಮೈಮೇಲೆ ಇರಿಸಿಕೊಳ್ಳುವ ಸಂಪ್ರದಾಯ ಶೈವ ಪರಂಪರೆಯಲ್ಲಿದೆ. ಇದನ್ನು 'ಶಿವಯೋಗ' ಎಂದೂ ಕರೆಯಲಾಗುತ್ತದೆ. ಶಿವನು ತಾನೇ ಲಿಂಗವನ್ನು ಸದಾ ತನ್ನ ಕೊರಳಲ್ಲಿ ಧರಿಸಿರುತ್ತಾನೆಂದೂ, ಅದಕ್ಕೆ 'ಆತ್ಮಲಿಂಗ'ವೆಂಬ ಹೆಸರಿದೆ ಎಂದು ಪ್ರತೀತಿ ಇದೆ. ಹೀಗೆ ಶಿವಲಿಂಗ ಧರಿಸುವುದರ ಹಿಂದೆ ಅಮೂರ್ತವನ್ನು ಹಿಡಿಯುವ ಮಹತ್ವಾಕಾಂಕ್ಷೆ ಮತ್ತು ಅದಕ್ಕೆ ಬೇಕಾಗುವ ಏಕಾಗ್ರತೆ ಎರಡರ ತಾತ್ತ್ವಿಕತೆಯೂ ಇದೆ. ಶಿವನು ನಿರಾಕಾರನು, ಅವನು ನಮ್ಮ ಅಭಿರುಚಿ ಮತ್ತು ಆಕಾರಗಳಿಗೆ ತಕ್ಕಂತೆ ಪರಿಭಾವಿಸಬೇಕು. ಈ ಉಪಾಸನೆಗೆ ಲಿಂಗಧಾರಣೆಯು ಸಂಕೇತ ಎಂದು ಹೇಳಬಹುದು.
Wednesday, April 07, 2010
ಯೋಗಮೂರ್ತಿ ಪರಶಿವ.
ತ್ರಿಶೂಲ ಮತ್ತು ಡಮರುಗ.
ತ್ರಿಶೂಲವು ಶಿವನ ಪ್ರಮುಖವಾದ ಆಯುಧ. ಇದರಲ್ಲಿ ರಕ್ಷಣೆ ಮತ್ತು ಆಕ್ರಮಣ ಎರಡೂ ಗುಣಗಳಿವೆ. ಇವೆರಡನ್ನು ಏಕ ಕಾಲದಲ್ಲಿ ಸಾಧಿಸುವ ಈ ತ್ರಿಶೂಲದಲ್ಲಿರುವ ಮೂರು ಮೊನೆಗಳು ತತ್ತ್ವಶಾಸ್ತ್ರದ ತ್ರಿಗುಣಗಳನ್ನು ಬಿಂಬಿಸುತ್ತವೆ. ಸೃಷ್ಟಿ - ಸ್ಥಿತಿ - ಲಯಗಳು ಜಗತ್ತಿನ ಸ್ಥಾಯಿ ಗುಣಗಳು. ಇವುಗಳನ್ನು ಅರಿತರೆ ರಕ್ಷಣೆ ಮತ್ತು ಮರೆತರೆ ಆಕ್ರಮಣ ಎಂಬ ವೇದಾಂತವನ್ನು ತ್ರಿಶೂಲ ಪ್ರತಿನಿಧಿಸುತ್ತದೆ.
ಶಿವನ ಆಕಾರಗಳಲ್ಲಿ ಬಹಳ ಮುಖ್ಯವಾದದ್ದು ತಾಂಡವ ನೃತ್ಯ ಭಂಗಿ ಅಥವಾ ನಟರಾಜನ ಸ್ವರೂಪ. ಈ ಸ್ವರೂಪವು ನಿರಂತರವಾದ ಕಾಲಕ್ಕೆ ಸಂಕೇತವಾಗಿದೆ. ಶಿವನ ತಾಂಡವ ನೃತ್ಯ ಮಾಡುತ್ತಿರುವಾಗ ತನ್ನ ಡಮರುಗಗಳನ್ನು ಹದಿನಾಲ್ಕು ಬಾರಿ ನುಡಿಸಿದನೆಂದೂ, ಅದು ಆ - ಇ - ಉಣ್ - ಋ - ಲೃ - ಕ್ ಮೊದಲಾದ ಬೀಜಾಕ್ಷರಗಳು ಮೂಡಿದವೆಂದು ಪ್ರತೀತಿ. ಇದಕ್ಕೆ ಮಾಹೇಶ್ವರ ಸೂತ್ರಗಳು ಎಂದು ಹೆಸರು. ಈ ಬೀಜಾಕ್ಷರಗಳಿಂದ ಜಗತ್ತಿನ ಎಲ್ಲಾ ಭಾಷೆ ಮತ್ತು ಅವುಗಳ ವ್ಯಾಕರಣ ರೂಪಗೊಳ್ಳುವುದರಿಂದ ಡಮರುಗವನ್ನು ಭಾಷೆಯ ಪ್ರತಿನಿಧಿ ಎಂದು ಕರೆಯಬಹುದು ಅಥವಾ ಬರಹರೂಪದಲ್ಲಿ ಜ್ಞಾನವನ್ನು ಹಿಡಿದಿಡುವ ಕಾರ್ಯಕ್ಕೆ ಇದನ್ನು ರೂಪಕವಾಗಿ ನೋಡಬಹುದು.
ಚಿತ್ರ ಕೃಪೆ: ಶ್ರೀನಿವಾಸ್
Friday, February 12, 2010
ನಿರಾಕಾರ ಸ್ವರೂಪ ಪರಶಿವ.
ಶಿವನ ಸ್ವರೂಪಗಳು.
ನಿರಾಕಾರಮಯನಾದ ಶಿವನ ಆರಾಧನೆಯಲ್ಲಿ ಶಾಂತ ಸ್ವರೂಪವನ್ನು ಕಾಣಬಹುದಾಗಿದ್ದು, ಪ್ರಳಯ ಸ್ವರೂಪವಾದ ರುದ್ರನೆಂಬ ಇನ್ನೊಂದು ಆಕಾರವೂ ಇದೆ. ಶಿವನು ಒಂದು ರೂಪದಲ್ಲಿ ಶ್ವೇತವರ್ಣನಾಗಿದ್ದರೆ, ಇನ್ನೊಂದು ರೂಪದಲ್ಲಿ ಕಡು ನೀಲಿಬಣ್ಣವನ್ನು ಹೊಂದಿದ್ದಾನೆ. ಪರಸ್ಪರ ವಿರುದ್ಧ ಎನಿಸಬಹುದಾದ ಈ ಗುಣಗಳು ಶಿವನಿಗಿರುವುದು ಆಶ್ಚರ್ಯಕರ ಎನಿಸಬಹುದು. ಆದರೆ, ಎಲ್ಲಾ ವರ್ಣಗಳನ್ನು ಬೇರ್ಪಡಿಸಲಾಗದಂತೆ ಪಡೆದಿರುವ ಇವನ ನಿರಾಕಾರವು ಅಸಂಖ್ಯ ಆಕಾರಗಳ ಪೂರ್ಣ ಸ್ವರೂಪವೂ ಆಗಿದೆ. ಹೀಗಾಗಿ ನೋಡುವವರ ಭಾವಕ್ಕೆ ತಕ್ಕ ಬಣ್ಣಗಳಲ್ಲಿ ಶಿವನು ಕಂಡಿದ್ದಾನೆ. ಮುಕ್ಕಣ್ಣನೆಂದು ಹೆಸರಾದ ಶಿವನಿಗಿರುವ ಮೂರು ಕಣ್ಣುಗಳು ಸೂರ್ಯ, ಚಂದ್ರ ಮತ್ತು ಅಗ್ನಿ ಇವುಗಳ ಸಂಕೇತ. ಇವು ಬೆಳಕು, ಜೀವ ಮತ್ತು ಶಾಖದ ಮೂಲ ಆಕಾರಗಳೂ ಹೌದು. ಹಾಗೇಸಾಮಾನ್ಯ ಕಣ್ಣುಗಳನ್ನು ಮೀರಿದ ಶಿವನ ಮೂರನೆಯ ಕಣ್ಣು, ಜ್ಞಾನ ನೇತ್ರ. ಅದು ವಿವೇಕದ ಸಂಕೇತ. ಅದು ಯಾವಾಗಲೂ ಮುಚ್ಚಿಕೊಂಡಿರುತ್ತದೆ. ತೆರೆದರೆ ಮಹಾ ಪ್ರಳಯವೇ ಆಗಿ ಬಿಡುತ್ತದೆ ಎಂಬಲ್ಲಿ ಜ್ಞಾನ ಮತ್ತು ವಿವೇಕಗಳು ಒಟ್ಟಾಗಿ ಇರಬೇಕಾದ ಸರ್ವ ವ್ಯಾಪಕತೆಯ ಗುಣವನ್ನು ಗಮನಿಸಬಹುದು.
ಸೂರ್ಯ-ಚಂದ್ರರೇ ಶಿವನ ಸಹಜ ಕಣ್ಣುಗಳಾದರೆ ಪ್ರಚಂಡವಾಗಿ ಬೀಸುತ್ತಿರುವ ಗಾಳಿಸಹಿತವಾದ ಇಡೀ ಆಕಾಶವು ಅವನ ತಲೆಗೂದಲಾಗುತ್ತದೆ. ಆದ್ದರಿಂದಲೇ ಅವನಿಗೆ 'ವ್ಯೋಮಕೇಶ' (ಆಕಾಶವನ್ನೇ ತಲೆಗೂದಲಾಗಿ ಉಳ್ಳವನು) ಎಂದು ಕರೆಯುತ್ತಾರೆ. ಹುಲಿಯು ಆಕ್ರಮಣಕಾರಿಯಾದ ಪ್ರಾಣಿ. ಅಸಹಾಯಕ ಬಲಿಪಶುಗಳನ್ನು ನಿರ್ದಾಕ್ಷಿಣ್ಯವಾಗಿ ಬಗೆದು ತಿನ್ನುವ ಕ್ರೂರಿ. ಇದನ್ನು ಎಂದಿಗೂ ತೃಪ್ತಿಗೊಳ್ಳದೆ ಮಾನವರನ್ನು ಸದಾ ಬಲಿ ತೆಗೆದುಕೊಳ್ಳುತ್ತಿರುವ 'ಆಸೆ'ಗಳಿಗೆ ಹೋಲಿಸಬಹುದು. ಹುಲಿಯನ್ನು ಕೊಂದು ಅದರ ಚರ್ಮವನ್ನು ಧರಿಸಿರುವ ಶಿವನು ಆಸೆಯನ್ನು ಮೆಟ್ಟಿ ನಿಂತಿರುವ ಮನೋಸ್ಥಿತಿಯ ಸಂಕೇತ.
ಆನೆ, ಪ್ರಾಣಿಗಳಲ್ಲೇ ಅತ್ಯಂತ ಬಲಿಷ್ಠವಾದದ್ದು. ಶಿವನು ಅದರ ಚರ್ಮವನ್ನು ಧರಿಸಿ ಎಲ್ಲಾ ಬಗೆಯ ಪಶುಭಾವಗಳನ್ನು ಜಯಿಸಿರುವ ಸ್ಥಿತಿಯನ್ನು ಪ್ರತಿಬಿಂಬಿಸುತ್ತಾನೆ. ಶಿವನು ಧರಿಸಿರುವ ತಲೆಬುರುಡೆಗಳ ಹಾರ ಮತ್ತು ಚಿತಾಭಸ್ಮಧಾರಣೇ ಅವನು ವಿನಾಶದ ಪ್ರಭು ಎಂದು ಸೂಚಿಸುತ್ತದೆ. ತಲೆಬುರುಡೆಗಳ ಮೂಳೆಯು ಕಾಲಪ್ರವಾಹದ ಆವರ್ತಗಳನ್ನು, ಸೃಷ್ಟಿ-ಸ್ಥಿತಿ-ಲಯಗಳ ನಿರಂತರವಾದ ಕಾಲಚಕ್ರವನ್ನು ಸೂಚಿಸುತ್ತದೆ. ಹೀಗೆ ಶಿವನ ಸ್ವರೂಪದಲ್ಲಿ ತಾತ್ತ್ವಿಕತೆಯನ್ನು ಕಾಣಬಹುದು.
Thursday, February 11, 2010
ಗಣಪತಿಯು ವಾಕ್ಸ್ವರೂಪಿ.
ಮಣ್ಣಿನ ಮಗನಾಗಿ ಗಣಪತಿ.
ಮೂಲತಃ ಮಣ್ಣಿನ ಮಗನಾಗಿ ಗಣಪತಿ, ಕೃಷಿ ಅಭಿಮಾನಿಯಾದ ದೇವತೆಯೂ ಹೌದು. ಈತನ ದೊಡ್ಡ ಹೊಟ್ಟೆಯನ್ನು ಕಣಜದ ಸಂಕೇತವನ್ನಾಗಿ ನೋಡಬಹುದು. ಕಿವಿಗಳು ಮರದಂತೆ ವಿಶಾಲ. ಅವು ಒಳಿತು-ಕೆಡಕುಗಳು ಬೆರೆತ ವಿಚಾರಗಳನ್ನು ಕೇರಿ ಶುದ್ಧೀಕರಿಸುವಂತಹವುಗಳು. ಗಣಪತಿಯ ಕೈಯಲ್ಲಿರುವ ಕಬ್ಬಿನ ಜಲ್ಲೆ, ಅವನಿಗೆ ಅತ್ಯಂತ ಪ್ರಿಯವಾದ ಪತ್ರ-ಪುಷ್ಪಗಳು ಎಲ್ಲವೂ ವ್ಯವಸಾಯದ ಪ್ರತೀಕಗಳೇ. ಈತನು ಧಾನ್ಯಗಳನ್ನು ಹಾಳು ಮಾಡುವ ಮೂಷಕವನ್ನು ನಿಯಂತ್ರಿಸಿ ವಾಹನವನ್ನಾಗಿಸಿಕೊಂಡವನು. ಬೆಳೆಗಳಿಗೆ ತೊಡಕನ್ನು ತರುವ ಕಾಡುಹಂದಿ, ಆನೆ ಮೊದಲಾದವುಗಳನ್ನು ನಿಯಂತ್ರಿಸುವ ಪಾಶಾಂಕುಶಗಳು ಈತನ ಕೈಯಲ್ಲಿವೆ. ಈತನ ತಾಯಿ ಪಾರ್ವತೀ ಬೆಟ್ಟದ ಮಗಳಾದರೆ, ತಂದೆ ಪರಮೇಶ್ವರನು ಬೆಟ್ಟದ ವಾಸಿಯಾಗಿದ್ದಾನೆ. ಇವೆಲ್ಲವೂ ಗಣಪತಿಯ ಸ್ವರೂಪದಲ್ಲಿನ ಕೃಷಿ ಚಟುವಟಿಕೆಗಳಿಗೆ ಸಂಕೇತವಾಗಿದೆ. ಗಣಪತಿಯ ಮಣ್ಣಿನ ಮೂರ್ತಿಯೇ ಶ್ರೇಷ್ಟ ಎನ್ನುವುದರ ಹಿನ್ನೆಲೆ ಇದೇ.
ಇಂದಿನ ಯುಗದ ನಾಯಕತ್ವದ ಸಮಸ್ತ ಗುಣಗಳಿಗೂ ಗಣಪತಿಯು ಆದರ್ಶಪ್ರಾಯನಾಗಿರುವನು. ಒಳ್ಳೆಯ ಮಾತು, ಪ್ರಚಂಡ ಬುದ್ಧುಶಕ್ತಿ, ಕಲಾ ಪ್ರೌಢಿಮೆ, ಇಂದ್ರಿಯನಿಗ್ರಹ, ವ್ಯವಹಾರ ಚಾತುರ್ಯ ಎಲ್ಲವೂ ಇವನ ಸ್ವತ್ತು. ಇದೇ ಕಾರಣಕ್ಕೆ ಇವನು ವಿಶ್ವನಾಯಕನೂ ಹೌದು.
Wednesday, February 10, 2010
ಗಣಪತಿಗೇ ಏಕೆ ಮೊದಲ ಪೂಜೆ?
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ.
Tuesday, February 09, 2010
ಗಣಪತಿಯ ಬಗ್ಗೆ.
ಗಣಪತಿ ಹೆಸರಿನ ಮೂಲ.
ಗಣ ಎಂದತೆ ತತ್ತ್ವ. ಯಾವ ಮೂಲ ತತ್ತ್ವಗಳಿಂದ ಎಲ್ಲಾ ವಿದ್ಯೆಗಳೂ ಆವಿಷ್ಕಾರಗೊಳ್ಳುವುದೋ , ಆ ಮೂಲ ತತ್ತ್ವವೇ ಗಣಪತಿ. ಹೀಗಾಗಿ ಆತನು ವಿದ್ಯೆಗೆ ಅಧಿಪತಿಯಾಗಿರುತ್ತಾನೆ. ಗಣಪತಿಗೆ ಆನೆಯ ಮುಖವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪ್ರತಿನಿಧಿಸುವ 'ಗಜ' ಎಂಬ ಶಬ್ದಕ್ಕೆ ಆಳವಾದ ಅರ್ಥವಿದೆ. 'ಗ' ಎಂದರೆ ಗತಿ. ಜೀವನದ ಪರಮ ಧ್ಯೇಯದತ್ತ ತಿಳಿದೂ ತಿಳಿಯದೆಯೂ ಸಾಗುವುದು. 'ಜ' ಎಂದರೆ ಜನ್ಮ, ಅಂದರೆ ವಿಶ್ವದ ಮಹತ್ತರ ಉದ್ದೇಶ ಯಾವುದಿದೆಯೋ ಅದಕ್ಕಾಗಿ ಜನ್ಮ ತಳೆಯುವುದು ಎಂದರ್ಥ. ಸೃಷ್ಟಿಯಲ್ಲಿ ಸೂಕ್ಷ್ಮಾಂಡ ಹಾಗೂ ಬ್ರಹ್ಮಾಂಡಗಳೆಂಬ ಎರಡು ಬಗೆಗಳಿವೆ. ಇವೆರಡೂ ಒಂದಕ್ಕೊಂದು ಪ್ರತಿರೂಪವಾಗಿದೆ. ಈ ಎರಡೂ ರೂಪಗಳಲ್ಲಿರುವ ತತ್ತ್ವ ಒಂದೇ. ಆದರೆ, ಸ್ವರೂಪವು ಬೇರೆ. ಗಣಪತಿ ಮೂರ್ತಿಯಲ್ಲಿರುವ ಗಜಮುಖವು ಬ್ರಹ್ಮಾಂಡದ ಪ್ರತೀಕ. ಮಾನವ ಶರೀರವು ಸೂಕ್ಷ್ಮಾಂಡದ ಪ್ರತೀಕ. ಸೂಕ್ಷ್ಮಾಂಡದ ಗುರಿ ಬ್ರಹ್ಮಾಂಡವಾಗಿರುವುದರಿಂದ ಗಣಪತಿಯ ಸ್ವರೂಪದಲ್ಲಿ ಗಜಮುಖಕ್ಕೇ ಪ್ರಾಧಾನ್ಯತೆ.
ಗಜಮುಖವೇ ವಿಶ್ವವನ್ನು ಪ್ರತಿನಿಧಿಸಿದರೆ, ಮಾನವಾಕಾರವೇ ವ್ಯಕ್ತಿ ಎಂದು ಗ್ರಹಿಸಬಹುದು. ಅವೆರಡೂ ಒಂದೇ, ಮಾತ್ರವಲ್ಲ, ಪರಸ್ಪರ ಪೂರಕವಾದದ್ದು ಎಂಬುದನ್ನು ಗಣಪತಿಯ ಕಲ್ಪನೆ ತೋರಿಸಿಕೊಡುತ್ತದೆ.
Wednesday, January 20, 2010
ಚಾನೆಲ್ ಸುರಂಗ
Thursday, November 12, 2009
ಇಂಗ್ಲೆಂಡಿನ ಸ್ಟೋನ್ ಹೆಂಜ್
Tuesday, November 10, 2009
ಪಿಸಾ ಗೋಪುರ
Wednesday, October 28, 2009
ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ
ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್ನು ಅರಸುತ್ತ ಜಗತ್ತಿನ ನಾನಾ ದೇಶಗಳಿಂದ ನ್ಯೂಯಾರ್ಕಿಗೆ ಬರುವ ವಲಸೆಗಾರರ ಪಾಲಿಗೆ ಈ ಸ್ವಾತಂತ್ರ್ಯ ದೇವಿ ಆಶಾದೀಪವಾಗಿದೆ.
ಕ್ರಿ. ಶ. ೧೮೬೫ ಇಂದ ೧೯೦೦ ವರೆಗೆ ಸುಮಾರು ಒಂದೂವರೆ ಕೋಟಿ ವಲಸೆಗಾರರು ಬಹುಮಟ್ಟಿಗೆ ನ್ಯೂಯಾರ್ಕ್ ಮೂಲಕವೇ ಅಮೆರಿಕ ಪ್ರವೇಶಿಸಿದರು. ಅವರು ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ನೋಡಿದ ಕೂಡಲೇ ಹೊಸ ಚೈತನ್ಯ ಹೊಂದುತ್ತಿದ್ದರು. ತಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಭಾವಿಸುತ್ತಿದ್ದರು.
ಕಳೆದ ಶತಮಾನದಲ್ಲಿ, ಬ್ರಿಟೀಷ್ ವಸಾಹತಾಗಿದ್ದ ಅಮೆರಿಕದ ರಾಜ್ಯಗಳು ಸಶಸ್ತ್ರ ಹೋರಾಟ ನಡೆಸಿ ಬ್ರಿಟನ್ನಿನಿಂದ ಸ್ವಾತಂತ್ರ್ಯಗಳಿಸಿ, ಸ್ವತಂತ್ರ ರಾಜ್ಯಗಳ ಒಕ್ಕೂಟ ರಚಿಸಿಕೊಂಡವು. ಸ್ವಾತಂತ್ರ್ಯ ಸೇವಿಯ ಪ್ರತಿಮೆ ಈ ಗೆಲುವಿನ ಪ್ರತೀಕವಾಗಿದೆ.
ಅಕ್ಟೋಬರ್ ೨೮, ೧೮೭೬ರಂ ಸ್ವಾತಂತ್ರ್ಯ ಸಮಾರಂಭದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ೪೬ಮೀ. ಎತ್ತರವಿರುವ ಈ ಪ್ರತಿಮೆಯನ್ನು ಫ್ರೆಡೆರಿಕ್ ಅಗಸ್ಟೆ ಬಾರ್ಥೋಲ್ದಿ ಎಂಬಾತ ವಿನ್ಯಾಸಗೊಳಿಸಿದ. ಸುಮಾರು ಅಷ್ಟೇ ಎತ್ತರದ ಪೀಠದ ಮೇಲೆ ಭವ್ಯವಾಗಿ ನಿಂತಿರುವ ಈ ಪ್ರತಿಮೆಯನ್ನು ಕಬ್ಬಿಣದ ಹಾಳೆಗಳ ಮೇಲೆ ತಾಮ್ರದ ರೇಕು ಹೊದಿಸಿ ತಯಾರಿಸಲಾಗಿದೆ.
ಸ್ವಾತಂತ್ರ್ಯ ದೇವಿಯ ಪ್ರತಿಮೆಯ ನಿರ್ಮಾನ ಕಾರ್ಯವನ್ನು ಫ್ರೆಂಚ್ ಇಂಜಿನಿಯರ್ ಗುಸ್ತಾವ್ ಐಫೆಲ್ ವಹಿಸಿದನು. ಆ ವೇಳೆಗಾಗಲೇ ಆತ ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿ ಖ್ಯಾತನಾಗಿದ್ದ. ಈ ಪ್ರತಿಮೆ ಅಮೆರಿಕದ ಜನರಿಗೆ ಫ್ರಾನ್ಸ್ ನೀಡಿದ ಕೊಡುಗೆ. ಪ್ರತಿಮೆಯನ್ನು ಪ್ಯಾರಿಸಿನಲ್ಲಿ ಪ್ರಮಾಣಕ್ಕೆ ತಕ್ಕಂತೆ ಒಂದೊಂದೇ ಭಾಗವಾಗಿ ತಯಾರಿಸಲಾಯಿತು. ಈ ಭಾಗಗಳನ್ನು ಹಡಗಿನಲ್ಲಿ ನ್ಯೂಯಾರ್ಕಿಗೆ ಸಾಗಿಸಿ, ಒಂದೊಂದೇ ಭಾಗವನ್ನು ಜೋಡಿಸಲಾಯಿತು.
೧೯೭೬ರಲ್ಲಿ ಈ ಪ್ರತಿಮೆಯ ಶತಮಾನೋತ್ಸವ ನೆರವೇರಿತು.
ಚಿತ್ರ ಕೃಪೆ: ವಿಕಿಪೀಡಿಯಾ
Thursday, October 15, 2009
ಐಫೆಲ್ ಗೋಪುರ
ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕಾಣಿಸುತ್ತದೆ.
ಫ್ರಾನ್ಸಿನ ಮಹಾಕ್ರಾಂತಿಯ ಶತಮಾನೋತ್ಸವ ಸಂದರ್ಭಕ್ಕಾಗಿ ನಡೆದ ವಾಸ್ತು ವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ಅವರ ಈ ವಿನ್ಯಾಸ ಬಹುಮಾನ ಗಳಿಸಿತು. ೧೮೮೯ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಇದನ್ನು ನಿರ್ಮಿಸಲಾಯಿತು. ಇದು ಯೂರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಆಗಿದೆ. ಇದರ ವಿನ್ಯಾಸಕರ್ತ ಗುಸ್ತಾವ್ ಐಫೆಲ್ ಅವರ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಯಿತು.
ಈ ಐಫೆಲ್ ಮಹಾಶಯ ಸಣ್ಣ ಪುಟ್ಟ ರಚನೆಗಳನ್ನು ವಿನ್ಯಾಸಗೊಳಿಸುವ ಜಾಯಮಾನದವನಲ್ಲ. ಈತನ ವಿನ್ಯಾಸಗಳಿಗೆ ಈತನದೇ ವಿಶಿಷ್ಟವಾದ ಮುದ್ರೆ ಇದೆ. ಈತ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಿದ ಎರಡು ರಚನೆಗಳು ಇಂದಿಗೂ ಈತನ ಕೀರ್ತಿಯನ್ನು ಜಗತ್ತಿಗೆ ಸಾರುತ್ತಿವೆ. ಐಫೆಲ್ ಗೋಪುರ ಮತ್ತು ನ್ಯೂಯಾರ್ಕ್ ಅಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ - ಈ ಎರಡೂ ಕಳೆದ ಶತಮಾನಗಳಲ್ಲಿ ಜರುಗಿದ ಎರಡು ಮಹತ್ವದ ಘಟನೆಗಳ ನೆನಪಿಗಾಗಿ ನಿರ್ಮಿಸಲಾದ ರಚನೆಗಳು. ಇವೆರಡೂ ಶತಮಾನೋತ್ಸವ ಆಚರಿಸಿಕೊಂಡಿವೆ!
ಐಫೆಲ್ ಗೋಪುರ ಸುಮಾರು ೩೦೦ಮೀ. ಎತ್ತರವಿದೆ. ಮೇಲಿನ ತುದಿಯಲ್ಲಿ ಮತ್ತೆ ೨೦.೭೫ಮೀ. ಎತ್ತರದ ಟಿ.ವಿ. ಟ್ರಾನ್ಸ್ ಮಿಟರ್ ಇದೆ. ಹಾಗಾಗಿ ಗೋಪುರದ ಒಟ್ಟು ಎತ್ತರ ೩೨೦.೭೫ಮೀ. ಆಗುತ್ತದೆ. ತೂಕ ಸುಮಾರು ೭೩೦೦ ಟನ್ನುಗಳು. ನಾಲ್ಕು ಕಡೆ ಭಾರಿ ಕಮಾನಿನಾಕಾರದ ಭದ್ರ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕು ಕಡೆ ಜನರು ನಿಂತು, ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಲು ಸಹಾಯವಾಗುವಂತೆ, ಭೂಮಿಯಿಂದ ೫೭ಮೀ. ಎತ್ತರದಲ್ಲಿ ಮೊದಲ ಅಟ್ಟಣೆ, ೧೧೫ಮೀ. ಎತ್ತರದಲ್ಲಿ ಎರಡನೆಯ ಅಟ್ಟಣೆ ಮತ್ತು ೨೪೭ಮೀ. ಎತ್ತರದಲ್ಲಿ ಮೂರನೆಯ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೇರುತ್ತ ಹೊದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಗೆ ೬೩ ಜನರನ್ನು ಒಯ್ಯ ಬಲ್ಲ ಮೂರು ಲಿಫ್ಟುಗಳಿವೆ. ೧೭೯೨ ಮೆಟ್ಟಿಲುಗಳಿವೆ. ಎರಕ ಹೊಯ್ದ ಕಬ್ಬಿಣದ ತೊಲೆಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ. ಪ್ರತಿ ೩ ಮೀ. ಎತ್ತರಕ್ಕೆ ಒಂದು ಮಹಡಿಯಂತೆ ಲೆಕ್ಕ ಹಾಕಿದರೆ, ೧೦೦ ಮಹಡಿ ಕಟ್ಟಡ! ಅದನ್ನು ಕಟ್ಟಿ ಮುಗಿಸಲು ೨ ವರ್ಷ, ೨ ತಿಂಗಳು, ೨ ದಿನ ಬೇಕಾಯಿತು. ಅನೇಕ ವರ್ಷಗಳವರೆಗೆ ಇದು ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.
ನಿರ್ಮಾಣ ಸಮಯದಲ್ಲಿ, ಇಪ್ಪತ್ತು ವರ್ಷಗಳ ನಂತರ, ಅದನ್ನು ಕಳಚಿ ಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ, ಮೊದಲನೆಯ ಮಹಾಯುದ್ಧ ಆರಂಭವಾಯಿತು. ಆಗ ಐಫೆಲ್ ಗೋಪುರ, ಮಿಲಿಟರಿ ಸಂಪರ್ಕ ಕೇಂದ್ರವಾಗಿ, ಫ್ರೆಂಚ್ ಸೈನ್ಯ ಕಮಾಂಡಿನ ಕಣ್ಣು ಮತ್ತು ಕಿವಿಯಾಗಿ, ಬಹಳ ಸಹಾಯಕವಾಯಿತು. ಹಾಗಾಗಿ ಅದನ್ನು ಕಳಚಿ ಹಾಕುವ ಪ್ರಶ್ನೆಯೇ ಬರಲಿಲ್ಲ. ಮುಂದೆ ನೂರು ವರ್ಷಕ್ಕೂ ಹೆಚ್ಚು ಕಾಲ ತಲೆಯೆತ್ತಿ ನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.
೧೯೬೭ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯಿತು. ವರ್ಷಗಳು ಕಳೆದಂತೆ, ಪ್ಯಾರಿಸಿನ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಯಿತು.
ಫ್ರೆಂಚರಿಗೆ ತಮ್ಮ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ ಅಲ್ಲಿ ನಡೆಯುವ ಬೇರೆ ಬೇರೆ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ತಳಿರು ತೋರಣ ಮತ್ತು ದೀಪಾಲಂಕಾರ ಮಾಡಲೇಬೇಕು. ದೀಪಾಲಂಕಾರಗೊಂಡ ರಾತ್ರಿ, ಸುಮಾರು ೪೦ಕಿ.ಮೀ ಆಚೆಗೆ , ಅದು ಆಗಸಕ್ಕೆ ಪಂಜು ಹಿಡಿದಂತೆ ಕಾಣುತ್ತದೆ.
ಈಗ ಐಫೆಲ್ ಗೋಪುರವನ್ನು ಪರಿಸರ ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸುಮಾರು ನಾನೂರು ಮಂದಿ ಸದಾ ಕಾರ್ಯನಿರತರಾಗಿದ್ದಾರೆ. ಗೋಪುರದಲ್ಲಿ ಪ್ರತಿ ತಿಂಗಳು ಸುಮಾರು ಏಳು ಟನ್ನುಗಳಷ್ಟು ರದ್ದಿ ಶೇಖರಣೆ ಆಗುತ್ತದೆ. ತುಕ್ಕು ಹಿಡಿಯಬಹುದಾದ ಭಾಗಗಳನ್ನು ಕಣ್ಗಾಣಿಸಲು ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐಫೆಲ್ ಮಿನಿಯೇಚರ್ ಗೋಪುರಗಳು ಅಸಂಖ್ಯಾತ ಪ್ರವಾಸಿಗರ ಆರಾಮ ಕೋಣೆಗಳನ್ನು ಅಲಂಕರಿಸಿವೆ.
ಚಿತ್ರ ಕೃಪೆ: ವಿಕಿಪೀಡಿಯಾ
Friday, October 09, 2009
ಮೌಂಟ್ ರಷ್ಮೋರ್
ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು.
ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಷ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖಗಳಿರುವ ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಲಾಗಿದೆ.
ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರು - ೧. ಜಾರ್ಜ್ ವಾಷಿಂಗ್ಟನ್, ೨. ಥಾಮಸ್ ಜೆಫರ್ಸನ್, ೩. ಥಿಯೋಡರ್ ರೂಸ್ವೆಲ್ಟ್, ೪. ಅಬ್ರಹಾಂ ಲಿಂಕನ್.
ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾರ್ಶ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನ್ ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಅನುಸರಿಸಿರಬಹುದು, ಎಂಥ ದುಸ್ಸಹ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡಿರಬಹುದು ಎಂಬ ಕಲ್ಪನೆಯೇ ರೋಚಕವಾಗಿದೆ. ಜಾರ್ಜ್ ವಾಷಿಂಗ್ಟನ್ ಅವರ ಮುಖ ೧೮ ಮೀ. ಎತ್ತರವಾಗಿದೆ. ಅಂದರೆ, ಸುಮಾರು ಐದು ಮಹಡಿ ಕಟ್ಟಡದಷ್ಟು ಎತ್ತರ! ಇದೇ ಪ್ರಮಾಣದಲ್ಲಿ ವಾಷಿಂಗ್ಟನ್ ಅವರ ಪೂರ್ಣರೂಪವನ್ನು ಕೆತ್ತಿದರೆ, ಆಗ ಅದು ೧೪೨ಮೀ. ಎತ್ತರವಾಗುತ್ತದೆ. ಈ ನಾಲ್ಕು ಪ್ರತಿಮೆಗಳ ಮುಖಗಳೂ ಸರಿಸುಮಾರು ಒಂದೇ ಪ್ರಮಾಣದವು.
ಗುಟ್ಜನ್ ಬೋರ್ಗ್ಲಾಮ್ ಎಂಬಾತ ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ಕೆಲಸದ ಮೇಲ್ವಿಚಾರಣೆಯ ಹೆಚ್ಚು ಪಾಲು ನೋಡಿಕೊಂಡ. ಪ್ರತಿಮೆಗಳನ್ನು ಕೆತ್ತುವ ಕೆಲಸ ೧೯೨೭ರಲ್ಲಿ ಪ್ರಾರಂಭವಾಗಿ ಕುಂಟುತ್ತಾ, ಎಡವುತ್ತಾ, ೧೪ ವರ್ಷಗಳ ಕಾಲ ನಡೆಯಿತು. ೧೯೪೧ರಲ್ಲಿ ಸ್ಮಾರಕದ ಕೆಲಸ ಪೂರ್ಣವಾಗುವ ಮೊದಲೇ ಬೋರ್ಗ್ಲಾಮ್ ತೀರಿಕೊಂಡ. ಮುಂದೆ ಆತನ ಮಗ ಅಬ್ರಹಾಂ ಲಿಂಕನ್ ಅವರ ಪ್ರತಿಮೆ ಪೂರ್ಣಮಾಡಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು.
ಮೌಂಟ್ ರಷ್ಮೋರ್ ಸಮುದ್ರ ಮಟ್ಟಕ್ಕಿಂತ ೧೭೪೫ಮೀ. ಎತ್ತರದಲ್ಲಿದೆ, ಹಾಗೂ, ಆ ಕಣಿವೆಯ ಇನ್ನಿತರ ಶಿಖರಗಳಿಗಿಂತ ಸುಮಾರು ೧೫೦ಮೀ. ಅಷ್ಟು ಎತ್ತರದಲ್ಲಿದೆ.
ಇಡೀ ಹಗಲು ಸೂರ್ಯನ ಬೆಳಕು ಬೀಳುವಂಥ ಪಾರ್ಶ್ವದಲ್ಲಿರುವ ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರು ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ, ಈ ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ.
ಚಿತ್ರಕೃಪೆ: ವಿಕಿಪೀಡಿಯಾ
Thursday, October 08, 2009
ಬೃಹತ್ ಏಕಶಿಲಾ ಶಿಲ್ಪಗಳು
ಕಲ್ಲಿನಲ್ಲಿ ಅತ್ಯಂತ ಸೂಕ್ಷ್ಮ ಕುಸುರಿ ಕೆಲಸದಿಂದ ಹಿಡಿದು ಬೃಹತ್ ಏಕಶಿಲಾ ಶಿಲ್ಪಗಳ ಕೆತ್ತನೆಯವರೆಗೆ ಭಾರತೀಯರು ಹಿಂದಿನಿಂದಲೂ ಶಿಲ್ಪಶಾಸ್ತ್ರದಲ್ಲಿ ಪರಿಣತರಾಗಿದ್ದರು.
ಭಾರತದ, ಮಧ್ಯಪ್ರದೇಶದ ಪಶ್ಚಿಮಭಾಗದಲ್ಲಿರುವ ಬಾರ್ವಾನಿಯ ಸಮೀಪದಲ್ಲಿ, ಸಾತ್ಪುರ ಬೆಟ್ಟ ಶ್ರೇಣಿಯ ಚುಲಗಿರಿ ಶಿಖರದ ಮೇಲೆ ಒಂದು ಬೃಹತ್ ಪ್ರತಿಮೆ ಇದೆ. ಸಾವಿರದಿಂದ ಸಾವಿರದ ಐನೂರು ವರ್ಷಗಳಷ್ಟು ಪ್ರಾಚೀನವಾದ ಈ ಏಕಶಿಲೆಯ ಉಬ್ಬು ಪ್ರತಿಮೆ ಜೈನ ಪರಂಪರೆಯ ಮೊದಲನೆಯ ತೀರ್ಥಂಕರನಾದ ಋಷಭದೇವನದು. ಅನೇಕ ವರ್ಷಗಳ ಕಾಲ ದಟ್ಟ ಕಾಡಿನ ಮಧ್ಯೆ ಮರೆಯಾಗಿದ್ದ ಅದು ಅಲ್ಲಿನ ಆದಿವಾಸಿಗಳಿಗೆ ಮಾತ್ರವೇ ಪರಿಚಿತವಾಗಿತ್ತು. ೧೯೭೯ರಲ್ಲಿ ಅಕಸ್ಮಾತ್ ಬೆಳಕಿಗೆ ಬಂದ ಅದನ್ನು ಅನೇಕ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಯಿತು.
ಋಷಭದೇವನ ಆ ಪ್ರತಿಮೆ ೨೫.೬ಮೀ. ಎತ್ತರವಾಗಿದೆ. ಒಂದು ಭುಜದಿಂದ ಮತ್ತೊಮ್ದು ಭುಜದ ನಡುವಣ ಅಂತರ ೮ ಮೀ. ತೋಳಿನ ಉದ್ದ ೧೪ಮೀ. ಪಾದದಿಂದ ಟೊಂಕದವರೆಗೆ ೧೧ಮೀ ಎತ್ತರವಿದೆ.
ಪ್ರತಿಮೆಗಳ ಕೆತ್ತನೆಯಲ್ಲಿ ಪ್ರಾಚೀನ ಕರ್ನಾಟಕವೇನೂ ಹಿಂದೆ ಬಿದ್ದಿರಲಿಲ್ಲ. ನಮ್ಮ ಹಲವು ದೇವಾಲಯಗಳು ಪ್ರಾಚೀನ ಶಿಲ್ಪ ವೈಭವದ ದೃಷ್ಟಾಂತಗಳಾಗಿ ನಮ್ಮ ಮುಂದಿವೆ.
ದೊಡ್ಡ ಪ್ರಮಾಣದ ಪ್ರತಿಮೆಗಳ ಪೈಕಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಮೇಲಿರುವ ಗೊಮ್ಮಟೇಶ್ವರ ಅತ್ಯಂತ ಪ್ರಮುಖವಾದದ್ದು. ಬೆಟ್ಟದ ಮೇಲೆ ಶ್ರವಣಬೆಳಗೊಳದತ್ತ ಮುಖ ಮಾಡಿ ನಿಂತಿರುವ ಗೊಮ್ಮಟನ ವಿಗ್ರಹ ೧೭.೩೭ಮೀ ಎತ್ತರವಾಗಿದೆ. (ಇತ್ತೀಚೆಗೆ ಇದನ್ನು ೧೭.೮೩ಮೀ. ಎಂದು ಗುರುತಿಸಲಾಗಿದೆ). ಗಂಗ ದೊರೆ ರಾಚಮಲ್ಲನ ಬಳಿ ಸೇನಾಧಿಪತಿಯಾಗಿದ್ದ ಚಾವುಂಡರಾಯನು ಗೊಮ್ಮಟ ಪ್ರತಿಮೆಯ ನಿರ್ಮಾಣಕ್ಕೆ ಕಾರಣನಾಗಿದ್ದ. ಅಂದಿನ ಹೆಸರಾಂತ ಶಿಲ್ಪಿ ಅರಿಷ್ಟನೇಮಿ ಇದನ್ನು ನಿರ್ಮಿಸಿದನು. ಕ್ರಿ. ಶ. ೯೬೮ರಲ್ಲಿ ನಿರ್ಮಾಣ ಕಾರ್ಯ ಪೂರ್ತಿಗೊಂಡು ಮಹಾಮಸ್ತಕಾಭಿಷೇಕ ನೆರವೇರಿತು.
ಕರ್ನಾಟಕದ ಕಾರ್ಕಳದಲ್ಲಿ ೧೨.೫ಮೀ., ವೇಣೂರಿನಲ್ಲಿ ೧೦.೫ಮೀ., ಧರ್ಮಸ್ಥಳದಲ್ಲಿ ೧೨ಮೀ. ಎತ್ತರದ ಗೊಮ್ಮಟ ವಿಗ್ರಹಗಳಿವೆ.
Friday, September 11, 2009
ಮಮಯೇವ್ ಸ್ಮಾರಕ
ಈ ಶತಮಾನದಲ್ಲಿ ನಡೆದ ಎರಡು ಘೋರ ಮಹಾಯುದ್ಧಗಳಲ್ಲಿ ರಷ್ಯಾ ಭಾಗವಹಿಸಬೇಕಾದ ನಿರ್ಬಂಧಕ್ಕೊಳಗಾಯಿತು.ಎರಡನೆಯ ಮಹಾಯುದ್ಧದ ವೇಳೆಗೆ ಹೊಸ ಹೊಸ ಅಸ್ತ್ರಗಳು (ಟ್ಯಾಂಕರುಗಳು, ಬಾಂಬರು ವಿಮಾನಗಳು. ಇತ್ಯಾದಿ) ಬಳಕೆಗೆ ಬಂದು ಯುದ್ಧದ ವಿನಾಶಕಾರಿ ಶಕ್ತಿ ನೂರಾರು ಪಟ್ಟು ಹೆಚ್ಚಿತು. ಯುದ್ಧದಲ್ಲಿ ತೊಡಗಿಕೊಂಡಿದ್ದ ದೇಶಗಳ ಪೈಕಿ ಸೋವಿಯತ್ ಒಕ್ಕೂಟ ಅಪಾರ ಹಾನಿಗೊಳಗಾಯಿತು. ಯುದ್ಧದ ಸಾವಿನ ಜೊತೆ ಹಸಿವು, ರೋಗ ರುಜಿನಗಳೂ ಸೇರಿಕೊಂಡವು.
ಯುದ್ಧದ ಕಾರಣ ರಷ್ಯಾದ ಸುಮಾರು ಇಪ್ಪತ್ತು ಮಿಲಿಯನ್ ಮಂದಿ ಪ್ರಾಣನೀಗಿದರು. ಲೆನಿನ್ ಗ್ರಾಡ್ ನಗರದ ಜನರು ಸತತ ಒಂಬೈನೂರು ದಿನಗಳ ಕಾಲ ಹಿಟ್ಲರನ ಸೈನ್ಯವನ್ನು ಎದುರಿಸಿ ನಿಂತದ್ದು ಯುದ್ಧದ ದಾಖಲೆಗಳಲ್ಲಿ ಅತ್ಯಂತ ಮುಖ್ಯವಾದ ಘಟನೆಯಾಗಿದೆ.
ಈ ಎರಡೂ ಯುದ್ಧಗಳಿಗೆ ಸಂಬಂಧಿಸಿದ ಹಲವಾರು ಯುದ್ಧ ಸ್ಮಾರಕಗಳು ರಷ್ಯಾದಲ್ಲಿವೆ. ಬ್ರೆಸ್ಟ್ ಕೋಟೆಯ ಗೋಡೆಯನ್ನೇ ಯುದ್ಧಸ್ಮಾರಕವಾಗಿ ಉಳಿಸಿಡಲಾಗಿದೆ.
ಯುದ್ಧ ಸ್ಮಾರಕಗಳಲ್ಲಿ ಅತಿ ದೊಡ್ಡದು ಸ್ಟ್ಯಾಲಿನ್ ಗ್ರಾಡ್ (ಈಗಿನ ವೋಲ್ಗೊಗ್ರಾಡ್) ಅಲ್ಲಿರುವ ಮಮಯೇವ್ ಬೆಟ್ಟದ ಸ್ಮಾರಕ. ಇಲ್ಲಿ ಅನೇಕಾನೇಕ ಅದ್ಭುತ ಶಿಲ್ಪವಿನ್ಯಾಸಗಳನ್ನು ನಿರ್ಮಿಸಿ ಇಡೀ ಬೆಟ್ಟವನ್ನು ಒಂದು ಸ್ಮಾರಕವಾಗಿ ಮಾಡಲಾಗಿದೆ. ಹಿಟ್ಲರನಿಗೆ ಮಾಸ್ಕೋ ಬಳಿ ಮೊದಲ ಪರಾಭವವಾದರೆ, ಸ್ಟ್ಯಾಲಿನ್ ಗ್ರಾಡ್ ಬಳಿ ನಿರ್ಧಾರಕ ಪರಾಭವಾಯಿತು. ಅಲ್ಲಿಂದಾಚೆಗೆ ಹಿಟ್ಲರ್ ಸತತವಾಗಿ ಸೋಲುತ್ತಾ ಹೋದ. ಈ ಘಟನೆಯನ್ನು ಚಿರಸ್ಥಾಯಿಯಾಗಿ ಮಾಡಲೆಂದೇ ಮಮಯೇವ್ ಸ್ಮಾರಕ ನಿರ್ಮಾಣವಾಯಿತು.
ನಗರದಾಚೆಗೆ ಬಹು ದೂರದಿಂದಲೇ ಗೋಚರಿಸುವ ಈ ಪ್ರತಿಮೆ ಅದ್ಭುತವೂ ಭವ್ಯವೂ ಆಗಿದೆ. ಬುಡದಿಂದ ತುದಿಯವರೆಗೆ ಸುಮಾರು ೬೦ ಮೀಟರ್ ಎತ್ತರವಿರುವ ಇದನ್ನು ಯವ್ಗೆನಿ ವುಚೆತಿಚ್ ಎಂಬ ಶಿಲ್ಪಿ ವಿನ್ಯಾಸಗೊಳಿಸಿದರು. ಕತ್ತಿ ಹಿಡಿದು ನಿಂತಿರುವ ರಷ್ಯಾ ಮಾತೆಯ ಪ್ರತಿಮೆ, ದುರಾಕ್ರಮಣಕಾರರಿಗೆ ಎಚ್ಚರಿಕೆ ನೀಡುವಂತಿದೆ. ವಿಶೇಷ ದಿನಗಳಲ್ಲಿ ಸಾವಿರಾರು ಜನರನ್ನು ಆಕರ್ಷಿಸುವ ಈ ಪ್ರತಿಮೆಯ ಬಳಿಗೆ ಸಾಗುವ ದಾರಿಯಲ್ಲಿ ಸ್ಮಾರಕಗಳ ಸಮುಚ್ಚಯವೇ ಇದೆ.
ಚಿತ್ರ ಕೃಪೆ: ಇಲ್ಲಿಂದ
Thursday, August 27, 2009
ಕಲೋಸಸ್ ಪ್ರತಿಮೆ

ಕಲೋಸಸ್ ಪ್ರತಿಮೆ
ಯುದ್ಧದಲ್ಲಿ ಶತ್ರುವನ್ನು ಸೋಲಿಸಸಿದ ನೆನಪಿಗಾಗಿ ಗೆದ್ದ ರಾಜರು ವಿಜಯಸ್ತಂಭ ಸ್ಥಾಪಿಸುವುದು ಹಿಂದಿನ ಕಾಲದಿಂದಲೂ ಅನುಸರಿಸುತ್ತ ಬಂದಿರುವ ರೂಢಿ. ಇವು ಶಾಸನಗಳ ರೂಪದಲ್ಲಿಯೂ ಇವೆ. ಕರ್ನಾಟಕದ ವೀರಗಲ್ಲುಗಳು ನಮಗೆ ಪರಿಚಿತವಾಗಿವೆ.
ಹೀಗೊಂದು ವಿಜಯಸ್ತಂಭ ಅಪೂರ್ವವೂ, ಅದ್ಭುತವೂ ಆಗಿದ್ದು. ತಮ್ಮ ಕೀರ್ತಿಯನ್ನು ಶಾಶ್ವತಗೊಳಿಸುವಂತಿರಬೇಕು ಎಂಬ ಆಕಾಂಕ್ಷೆಯಿಂದ ಪುರಾತನ ರೋಡ್ಸ್ ದ್ವೀಪವಾಸಿಗಳು ವಿಜಯದ ಸ್ಮಾರಕವಾಗಿ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿದರು. ಅದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರಖ್ಯಾತವಾದ ಕಲೋಸಸ್ ಪ್ರತಿಮೆ.
ಈಗ ಗ್ರೀಸ್ ದೇಶಕ್ಕೆ ಸೇರಿರುವ ರೋಡ್ಸ್, ಮೆಡಿಟರೇನಿಯನ್ ದ್ವೀಪಗಳ ಪೈಕಿ ಒಂದಾಗಿದ್ದು, ಆಯಕಟ್ಟಿನ ಬಂದರಾಗಿತ್ತು. ಹಾಗಾಗಿ, ದ್ವೀಪದ ಮುಖ್ಯ ನಗರ ರೋಮನರ, ಪರ್ಶಿಯನರ, ಅರಬರ, ವೆನಿಷಿಯನರ, ತುರ್ಕರ (ಟರ್ಕಿ ದೇಶದವರು), ಹಾಗೆಯೇ, ಸೇಂಟ್ ಜಾನ್ಸ್ ಕ್ರೂಸೇಡಿಂಗ್ ನೈಟರ ಆಳ್ವಿಕೆಗೆ ಒಳಪಟ್ಟಿತ್ತು.
ಕ್ರಿ.ಪೂ. ಮೂರನೇ ಶತಮಾನದ ಅಂತ್ಯದ ವೇಳೆಗೆ ಮ್ಯಾಸಿಡೋನಿಯನ್ನರ ಭಾರಿ ಸೈನ್ಯ ರೋಡ್ಸ್ ದ್ವೀಪದ ಮೇಲೆ ದಾಳಿ ಮಾಡಿತು. ರೋಡ್ಸ್ ಜನರು, ಸಂಖ್ಯೆಯಲ್ಲಿ ಮ್ಯಾಸಿಡೋನಿಯನ್ನರಿಗಿಂತ ಕಡಿಮೆಯಾಗಿದ್ದರೂ, ಶೌರ್ಯದಿಂದ ಹೋರಾಡಿದರು. ಶತ್ರು ಸೈನ್ಯ ನಗರದ ಮೇಲೆ ಬಲವಾದ ಮುತ್ತಿಗೆ ಹಾಕಿತು. ರೋಡ್ಸ್ ಜನರು ಧೈರ್ಯಗುಂದಲಿಲ್ಲ. ಇಡೀ ಒಂದು ವರ್ಷ ನಡೆದ ಮುತ್ತಿಗೆ ಹಾಗೂ ಕದನದಲ್ಲಿ ಮ್ಯಾಸಿಡೋನಿಯನ್ನರ ಸೈನ್ಯ ಸೋತು ಹಿಮ್ಮೆಟ್ಟಿತು.
ಈ ವಿಜಯಕ್ಕೆ ಯೋಗ್ಯವಾದ ಸ್ಮಾರಕ ನಿರ್ಮಿಸುವ ಅಪೇಕ್ಷೆ ರೋಡ್ಸ್ ವಾಸಿಗಳದು. ದ್ವೀಪ ರಕ್ಷಣೆಗಾಗಿ ಹೋರಾಡಿದವರ ಪೈಕಿ ಚಾರೆಸ್ ಎಂಬ ಶಿಲ್ಪಿಯೂ ಇದ್ದ. ವಿಜಯ ಸ್ಮಾರಕ ನಿರ್ಮಾಣವನ್ನು ಆತನಿಗೆ ವಹಿಸಲಾಯಿತು. ಕಂಚಿನಲ್ಲಿ ತಯಾರಾದ ಆ ಪ್ರತಿಮೆಗಾಗಿ ಚಾರೆಸ್ ಮ್ಯಾಸಿಡೋನಿಯನ್ನರು ಬಿಟ್ಟು ಹೋಗಿದ್ದ ಯುದ್ಧ ಸಲಕರಣೆಗಳ ಲೋಹವನ್ನೇ ಬಳಸಿಕೊಂಡನು. ೩೨ ಮೀಟರ್ ಎತ್ತರದ, ಸುಮಾರು ೩೦೦ ಟನ್ ಭಾರದ ಕಲೋಸಸ ಪ್ರತಿಮೆಯ ನಿರ್ಮಾಣ ಪೂರ್ಣಗೊಳ್ಳಲು (ಕ್ರಿ. ಪೂ. ೨೯೨ ಇಂದ ಕ್ರಿ. ಪೂ. ೨೮೦ ವರೆಗೆ) ಹನ್ನೆರಡು ವರ್ಷಗಳು ಬೇಕಾಯಿತು. ಅದರ ಕೈಬೆರಳುಗಳು ಮನುಷ್ಯನಷ್ಟು ಉದ್ದವಿದ್ದವು.
ಪ್ರತಿಮೆ ನಿರ್ಮಾಣಗೊಂಡ ನಂತರ ಶಿಲ್ಪಿ ಚಾರೆಸನಿಗೆ ಅದು ಪ್ರಮಾಣಬದ್ಧವಾಗಿಲ್ಲ ಎನಿಸಿತು. ಅದರಿಂದಾಗಿ, ಸೂಕ್ಷ್ಮ ಪ್ರವೃತ್ತಿಯ ಚಾರೆಸ್ ಆತ್ಮಹತ್ಯೆ ಮಾಡಿಕೊಂಡನು. ಆದರೂ ಅಂದಿನ ಶಿಲ್ಪಿಗಳು ಪ್ರತಿಮೆ ಯಾವುದೇ ರೀತಿಯಿಂದಲೂ ಅತ್ಯಂತ ಪ್ರಮಾಣಬದ್ಧವಾಗಿದೆ ಎಂದು ಶ್ಲಾಘಿಸಿದರಲ್ಲದೇ, ಅದನ್ನು ಜಗತ್ತಿನ ಅದ್ಭುತಗಳಲ್ಲೊಂದೆಂದು ಸಾರಿದರು.
ಅದನ್ನು ನಿರ್ಮಿಸಿದ ಶಿಲ್ಪಿಯಂತೆಯೇ, ಪ್ರತಿಮೆಯದೂ ಅಲ್ಪಾಯುಷ್ಯವಾಗಿತ್ತು. ಅದರ ಸ್ಥಾಪನೆಯ ಐವತ್ತಾರು ವರ್ಷಗಳ ಬಳಿಕ ಸಂಭವಿಸಿದ ಭೂಕಂಪದಲ್ಲಿ ಕಲೋಸಸ್ ಪ್ರತಿಮೆ ಮುರಿದು ಚೂರುಚೂರಾಯಿತು. ಅದು ಮುರಿದು ಬಿದ್ದದ್ದನ್ನು ಕ್ರಿ. ಶ. ಒಂದನೆಯ ಶತಮಾನದಲ್ಲಿ ರೋಮನ್ ಇತಿಹಾಸಕಾರ ಪ್ಲಿನಿ ದಾಖಲುಗೊಳಿಸಿದ. ಮುಂದೆ ಏಳನೆಯ ಶತಮಾನದಲ್ಲಿ ಆ ದ್ವೀಪವನ್ನು ವಶಪಡಿಸಿಕೊಂದ ಅರಬರು ಕಲೋಸಸ್ ಪ್ರತಿಮೆಯ ಲೋಹದ ಚೂರುಗಳನ್ನು ಯಹೂದಿ ವರ್ತಕನೊಬ್ಬನಿಗೆ ಮಾರಿದರು.
ಆ ಪ್ರತಿಮೆಯ ಕಾಲಿನ ಕೆಳಗೆ ಹಡಗುಗಳು ತೂರಿಹೋಗುವಂತೆ ನಿರ್ಮಿಸಲಾಗಿತ್ತೆಂಬ ಪ್ರತೀತಿ ಇದೆ. ತರುವಾಯದ ಚಿತ್ರಕಾರರು ಆ ಪ್ರತಿಮೆ ಒಂದು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದಿರಬಹುದೆಂಬ ಊಹೆಯ ಮೇಲೆ ಅದರ ಚಿತ್ರ ರಚಿಸಿದರು.
ಆ ಕಾಲದಲ್ಲಿ ಪ್ರತಿಮೆಯ ಒಂದೊಂದು ಭಾಗವನ್ನು ಕಂಚಿನ ತಗಡುಗಳ ರೂಪದಲ್ಲಿ ತಯಾರಿಸಿ, ಅವುಗಳನ್ನು ಬೆಸೆಯಲು ಪ್ರತಿಯೊಂದು ಹಂತದ ಎತ್ತರಕ್ಕೆ ಅಟ್ಟ ಕಟ್ಟಿ ಕುಲುಮೆಗಳನ್ನು ಸ್ಥಾಪಿಸಿದ್ದ ಆ ಶಿಲ್ಪಿಯ ಕಾರ್ಯಕೌಶಲ್ಯ ಬೆರಗುಗೊಳಿಸುವುದಂತೂ ನಿಜ.
ಚಿತ್ರ ಕೃಪೆ: ಇಲ್ಲಿಂದ
Thursday, August 06, 2009
ಕಲೋಸಿಯಮ್
ಕಲೋಸಿಯಮ್
ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು ದೊಡ್ಡ ನಗರದಲ್ಲಿಯೂ ಕಲೋಸಿಯಮ್ ಇದ್ದಿರಬಹುದಾದರೂ, ರಾಜಧಾನಿಯಲ್ಲಿ ಕಲೋಸಿಯಮ್ ಸಹಜವಾಗಿಯೇ ಚಕ್ರವರ್ತಿಯ ಅಂತಸ್ತನ್ನು ಸಾರುವಂತೆ ಭವ್ಯವಾಗಿ ಇರಬೇಕಾಗುತ್ತಿತ್ತು. ಗ್ರೀಕರ ಕಾಲದಲ್ಲಿ ಸಂಗೀತ, ನಾಟಕ ಸ್ಪರ್ಧೆಗಳಿಗೆ ಕ್ರೀಡೆ, ಮನೊರಂಜಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ಆಂಫಿಥಿಯೇಟರುಗಳು, ರೋಮನ್ನರ ಕಾಲಕ್ಕೆ ಕಲೋಸಿಯಮ್ಮುಗಳಾಗಿ ಗುಲಾಮರನ್ನೂ, ಖಡ್ಗ ಮಲ್ಲರುಗಳನ್ನೂ, ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಯೆನಿಸಿದವು.
ರೋಮ್ ನಗರದಲ್ಲಿ ಎಸ್ಕೈಲಿನ್ ಮತ್ತು ಸೇಲಿಯನ್ ಬೆಟ್ಟಗಳ ಮಧ್ಯೆ ಪುರಾತನ ರೋಮನ್ ಕಲೋಸಿಯಮ್ಮಿನ ಅವಶೇಷವಿದೆ. ಪ್ರತಿದಿನ ಬಹುಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಇದು ಇಂದಿನ ಅಧುನಿಕ ಮಾನಕಗಳ ದೃಷ್ಟಿಯಿಂದ ಸಹ ಬೆರಗುಗೊಳಿಸುವಂತಿದೆ. ಅಂಡಾಕಾರದಲ್ಲಿರುವ ಇದು ೧೮೮ ಮೀ. ಉದ್ದ, ೧೫೬ ಮೀ. ಅಗಲ ಹಾಗೂ ೫೨೭ ಮೀ. ಸುತ್ತಳತೆಯದ್ದಾಗಿದೆ. ಕೇಂದ್ರ ರಂಗ ಸಹ ಅಂಡಾಕಾರವಾಗಿದ್ದು, ೮೭ ಮೀ. ಉದ್ದ, ಮತ್ತು ೭೪ ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದಿದ್ದು ೫೭ ಮೀ. ಎತ್ತರವಾಗಿದೆ. ಅದು ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಮೂರನೆಯ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.
ಈಗ ಉಳಿದಿರುವ ಕಲೋಸಿಯಮ್ಮಿನ ನಿರ್ಮಾಣ ಕಾರ್ಯ ಬಹುಶಃ ಕ್ರಿ. ಶ ೭೦ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಮುಂಚೆ ಇದ್ದ ಕಲೋಸಿಯಮ್ಮನ್ನು ಮರದಿಂದ ನಿರ್ಮಿಸಲಾಗಿದ್ದು ಕ್ರಿ. ಶ. ೬೪ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾದುದರಿಂದ ಹೊಸ ಕಲೋಸಿಯಮ್ ನಿರ್ಮಾಣ ಅಗತ್ಯವಾಗಿತ್ತು. ಹತ್ತು ವರ್ಷಗಳ ಕಾಲ ನಡೆದ ಅದರ ನಿರ್ಮಾಣಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತು ಶಿಲ್ಪಿಗಳು, ರೋಮಿನ ಕಾರ್ಮಿಕರ ಜೊತೆಗೆ ಸಾವಿರಾರು ಮಂದಿ ಗುಲಾಮರು ಭಾಗವಹಿಸಿದ್ದರು. ಚಕ್ರವರ್ತಿ ಟಾಇಟಸ್ ಅದನ್ನು ಉದ್ಘಾಟಿಸಿದ.
ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆಗಳನ್ನು ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯ ನಾಗರಿಕರಿಗೆ, ಅವರವರ ಅಂತಸ್ತಿಗೆ ತಕ್ಕಂತೆ ಆಸನಗಳು ಇದರಲ್ಲಿತ್ತು. ಒಂದೇ ಬಾರಿಗೆ ನಲವತ್ತೈದು ಸಾವಿರ ಮಂದಿ ಕುಳಿತು, ಐದು ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. ಇದಲ್ಲದೆ, ಕ್ರೀಡೆಗಳಲ್ಲಿ ಭಾಗವಹಿಸುವವರು ರಂಗ ಪ್ರವೇಶಿಸಲು, ಪಂದ್ಯಾಟಗಳಲ್ಲಿ ಪ್ರಾಣ ತೆತ್ತವರ ಕಳೇಬರವನ್ನು ಕೂಡಲೇ ಸಾಗಿಸುವ ಏರ್ಪಾಟುಗಳೂ ಇದ್ದವು. ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪ್ರೇಕ್ಷಕರ ಮನರಂಜಿಸಲು ಕೋಡಂಗಿಗಳಿಗೆ ಅವಕಾಶ, ನೆಲಮಾಳಿಗೆಗಳಲ್ಲಿ ಕ್ರೂರ ಮೃಗಗಳಿಗಾಗಿ ಪಂಜರಗಳು, ಪಂಜರಗಳ ಬಾಗಿಲು ತೆರೆಯಲು ಒಂದು ನಿಯಂತ್ರಣ ಕೇಂಡ್ರ, ಇತ್ಯಾದಿ ವ್ಯವಸ್ಥೆಗಳೂ ಇದ್ದವು.
ಆಗ ಪರಿಚಿತವಾಗಿದ್ದ ಕ್ರೀಡೆಗಳ ಪೈಕಿ ಖಡ್ಗಮಲ್ಲರುಗಳ ಕದನ ಬಹಳ ಜನಪ್ರಿಯವಾಗಿತ್ತು. ಇಂಥ ಜನಪ್ರಿಯ ಖಡ್ಗಮಲ್ಲರುಗಳಲ್ಲಿ ಗುಲಾಮನಾಗಿದ್ದ ಸ್ಪಾರ್ಟಕಸ್ ಕೂಡ ಒಬ್ಬ. ವೈಯಕ್ತಿಕ ಸಾಹಸದ ಕ್ರೀಡೆಯನ್ನು ರೋಮನರು ಕ್ರೂರ ಕ್ರೀಡೆಯಾಗಿ ಮಾರ್ಪಡಿಸಿದ್ದರು. ಅಂದಿನ ಜನರೂ ಇದನ್ನು ನೋಡುವುದಕ್ಕೆ ಒಗ್ಗಿ ಹೋಗಿದ್ದರು!
ಕಲೋಸಿಯಮ್ಮಿನ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ನಡೆದ ಮೋಜಿನ ಕ್ರೀಡೆಗಳ ಸಂದರ್ಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೇ ಅಪರಾಧಿಗಳನ್ನೂ, ಸೈನ್ಯ ಸೇವೆ ತೊರೆದವರನ್ನೂ, ಮತ್ತು ಇನ್ನೂ ಹಲವು ಖೈದಿಗಳನ್ನೂಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆಯನ್ನು ಬಳಸಲಾಗುತ್ತಿತ್ತು. ಕೆಲವೊಮ್ಮೆ ಖೈದಿಗಳು ತಮ್ಮ ತಮ್ಮಲ್ಲಿಯೇ ಹೋರಾಡುತ್ತ ಮಿತ್ರರನ್ನು ಕೊಲ್ಲಬೇಕಾದ ಪರಿಸ್ತಿಥಿಯೂ ಉಂಟಾಗುತ್ತಿತ್ತು. ಮುಂದೆ ಕ್ರಿ. ಶ. ೪೦೪ರಲ್ಲಿ ಈ ಕ್ರೂರ ಕ್ರೀಡೆಯನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು.
ಚಿತ್ರ ಕೃಪೆ: ಇಲ್ಲಿಂದ











