My Blog List

Showing posts with label ಗಣಪತಿ. Show all posts
Showing posts with label ಗಣಪತಿ. Show all posts

Thursday, February 11, 2010

ಗಣಪತಿಯು ವಾಕ್ಸ್ವರೂಪಿ.

ಮಣ್ಣಿನ ಗಣಪತಿ.

ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಈತನೇ ಲಂಬೋದರ. ಇದನ್ನು ಆತ ಮೂರುವರೆ ಸುತ್ತುಗಳುಳ್ಳ  ಸರ್ಪದಿಂದ ಹಿಡಿದಿಟ್ಟಿದ್ದಾನೆ. ಹಿಂದೂ ಧರ್ಮದಲ್ಲಿ ಸರ್ಪವು ಕಾಮದ ಸಂಕೇತ. ಕಾಮವು ನಿಯಂತ್ರಣವಿಲ್ಲದಿದ್ದಾಗ ಹೇಗೆ ಅಪಾಯಕಾರಿಯೋ, ಹಾಗೇ ನಿಯಂತ್ರಣದಲ್ಲಿದ್ದಾಗ ಸೃಷ್ಟಿಯ ವಿಕಾಸಕ್ಕೆ ಕಾರಣವಾಗುತ್ತದೆ. ಗಣಪತಿಗೆ ವಾಹನವಾಗಿರುವುದು ಇಲಿ. ಅದು ಸ್ವಭಾವದಲ್ಲಿ ಹಾವಿನ ಶತ್ರು. ಸ್ವಭಾವವನ್ನು ಮೀರಿದ ಜ್ಞಾನದಲ್ಲಿ ಶತ್ರುತ್ವ ಇರುವುದಿಲ್ಲವೆಂದು ತಿಳಿಸುವ ಸಲುವಾಗಿಯೇ ಗಣಪತಿ ಅವೆರಡನ್ನೂ ಒಟ್ಟಾಗಿ ಇರಿಸಿಕೊಂಡಿರುವನು. ಗಣಪತಿಯ ವಾಹನವಾದ ಮೂಷಕ (ಇಲಿ) ಎಂಬ ಶಬ್ದವು  ಮೂಷ್ (ಅಂದರೆ 'ಕದಿಯುವಿಕೆ') ಎಂಬ ಧಾತುವಿನಿಂದ ಬಂದಿದೆ. ಮೂಷಕವು ಅಂದರೆ ಆಸೆಯು ಕಳ್ಳತನದಿಂದ ಮನಸ್ಸಿನಲ್ಲಿ ಪ್ರವೇಶಿಸಿ ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ನಾಶ ಮಾಡುತ್ತದೆ. ಅದನ್ನು ದಿವ್ಯ ಜ್ಞಾನದಿಂದ ನಿಯಂತ್ರಿಸಿದಾಗಲೇ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಮನುಷ್ಯರ ಬುದ್ಧಿಯನ್ನು ಚಂಚಲ ಮಾಡುವ ಆಸೆಗಳನ್ನು ಮೂಷಕವು ಪ್ರತಿನಿಧಿಸುತ್ತದೆ. ಎಲ್ಲಾ ವಿಷಯಾಸಕ್ತಿಗೆ ಸಂಕೇತವಾಗಿರುವ ಇಲಿಯು ಹರಿತವಾದ ಬುದ್ಧಿಗೂ ಸಂಕೇತವಾಗಿದೆ. ಗಣಪತಿಯು ವಿದ್ಯೆಯ ಅಧಿದೇವತೆಯಾಗಿರುವುದರಿಂದ ಇಲಿಯನ್ನೇ ವಾಹನವನ್ನಾಗಿರಿಸಿಕೊಂಡಿರುವುದು ಸಹಜವಾಗಿದೆ.

ಮಣ್ಣಿನ ಮಗನಾಗಿ ಗಣಪತಿ.
ಮೂಲತಃ ಮಣ್ಣಿನ ಮಗನಾಗಿ ಗಣಪತಿ, ಕೃಷಿ ಅಭಿಮಾನಿಯಾದ ದೇವತೆಯೂ ಹೌದು. ಈತನ ದೊಡ್ಡ ಹೊಟ್ಟೆಯನ್ನು ಕಣಜದ ಸಂಕೇತವನ್ನಾಗಿ ನೋಡಬಹುದು. ಕಿವಿಗಳು ಮರದಂತೆ ವಿಶಾಲ. ಅವು ಒಳಿತು-ಕೆಡಕುಗಳು ಬೆರೆತ ವಿಚಾರಗಳನ್ನು ಕೇರಿ ಶುದ್ಧೀಕರಿಸುವಂತಹವುಗಳು. ಗಣಪತಿಯ ಕೈಯಲ್ಲಿರುವ ಕಬ್ಬಿನ ಜಲ್ಲೆ, ಅವನಿಗೆ ಅತ್ಯಂತ ಪ್ರಿಯವಾದ ಪತ್ರ-ಪುಷ್ಪಗಳು ಎಲ್ಲವೂ ವ್ಯವಸಾಯದ ಪ್ರತೀಕಗಳೇ. ಈತನು ಧಾನ್ಯಗಳನ್ನು ಹಾಳು ಮಾಡುವ ಮೂಷಕವನ್ನು ನಿಯಂತ್ರಿಸಿ ವಾಹನವನ್ನಾಗಿಸಿಕೊಂಡವನು. ಬೆಳೆಗಳಿಗೆ ತೊಡಕನ್ನು ತರುವ ಕಾಡುಹಂದಿ, ಆನೆ ಮೊದಲಾದವುಗಳನ್ನು ನಿಯಂತ್ರಿಸುವ ಪಾಶಾಂಕುಶಗಳು ಈತನ ಕೈಯಲ್ಲಿವೆ. ಈತನ ತಾಯಿ ಪಾರ್ವತೀ ಬೆಟ್ಟದ ಮಗಳಾದರೆ, ತಂದೆ ಪರಮೇಶ್ವರನು ಬೆಟ್ಟದ ವಾಸಿಯಾಗಿದ್ದಾನೆ. ಇವೆಲ್ಲವೂ ಗಣಪತಿಯ ಸ್ವರೂಪದಲ್ಲಿನ ಕೃಷಿ ಚಟುವಟಿಕೆಗಳಿಗೆ ಸಂಕೇತವಾಗಿದೆ. ಗಣಪತಿಯ ಮಣ್ಣಿನ ಮೂರ್ತಿಯೇ ಶ್ರೇಷ್ಟ ಎನ್ನುವುದರ ಹಿನ್ನೆಲೆ ಇದೇ.

ಇಂದಿನ ಯುಗದ ನಾಯಕತ್ವದ ಸಮಸ್ತ ಗುಣಗಳಿಗೂ ಗಣಪತಿಯು ಆದರ್ಶಪ್ರಾಯನಾಗಿರುವನು. ಒಳ್ಳೆಯ ಮಾತು, ಪ್ರಚಂಡ ಬುದ್ಧುಶಕ್ತಿ, ಕಲಾ ಪ್ರೌಢಿಮೆ, ಇಂದ್ರಿಯನಿಗ್ರಹ, ವ್ಯವಹಾರ ಚಾತುರ್ಯ ಎಲ್ಲವೂ ಇವನ ಸ್ವತ್ತು. ಇದೇ ಕಾರಣಕ್ಕೆ ಇವನು ವಿಶ್ವನಾಯಕನೂ ಹೌದು. 

(ಮುಗಿಯಿತು) 

ಚಿತ್ರ ಕೃಪೆ: ಪವಿತ್ರ

Wednesday, February 10, 2010

ಗಣಪತಿಗೇ ಏಕೆ ಮೊದಲ ಪೂಜೆ?

ಗಣಪ.

ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ ಎಂಬುದು ಒಂದು ವಿವರಣೆ. ಇನ್ನೊಂದು ಮಾದರಿ ವಿಶ್ಲೇಷಣೆ ಎಂದರೆ ಶಿವನು ಪರಮ ಪುರುಷನಾದರೆ, ಪಾರ್ವತಿಯು ಪರಮ ಪ್ರಕೃತಿ. ಆಕೆಯ ದೇಹದಲ್ಲಿನ ಕೊಳೆ ಎಂದರೆ ಅದು ಮಾಯಾ ಪ್ರಕೃತಿ. ಅದನ್ನು ಪಡೆದು ಹುಟ್ಟಿದವನು ಗಣಪತಿ. ಪರಶಿವನು ಈ ತಮೋಗುಣಗಳ ಶಿರವನ್ನು ತೆಗೆದು ಅದರಲ್ಲಿ ಬ್ರಹ್ಮ ಸ್ವರೂಪಿಯಾದ ಗಜ ಮುಖವನ್ನು ಇಟ್ಟಿದ್ದಾನೆ. ಹೀಗಾಗಿ ಮಾಯೆಯನ್ನು ಗೆದ್ದು ಸತ್ಯದ ಅರಿವು ಮೂಡಿಸಬಲ್ಲವನು ಎಂಬ ಅಂತರಾರ್ಥ ಗಣಪತಿಯ ಸ್ವರೂಪದಲ್ಲಿದೆ. ಚಿಂತನಾಕ್ರಮದಲ್ಲಿನ ಪರಿಶುದ್ಧತೆ ಮತ್ತು ಪರಿಪೂರ್ಣತೆಯೇ ಆತನ ಮೊದಲ ಪೂಜೆಗೆ ಕಾರಣವಾಗಿದೆ. 

ಗಣಪತಿಯ ಮೂರ್ತಿಸ್ವರೂಪ.
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ. 

ಗಣಪತಿಯ ಸ್ವರೂಪದಲ್ಲಿರುವ ಕುತೂಹಲಕರ ಅಂಶವೆಂದರೆ ಮುರಿದ ದಂತ. ಸಾಮಾನ್ಯವಾಗಿ ವಿಗ್ರಹಗಳಲ್ಲಿ ಕೊಂಚ ಭಿನ್ನ ಕಂಡರೂ ಅದು ಪೂಜೆಗೆ ಅರ್ಹವಾಗುವುದಿಲ್ಲ. ಆದರೆ ಗಣಪತಿಯ ದಂತ ಭಗ್ನವಾಗಿರುವುದೇ ಇಲ್ಲಿ ಸ್ವರೂಪವಾಗಿದೆ. ಇದು ಏಕೆ ಎಂದು ಯೋಚಿಸಿದಾಗ, ಕೆಲವು ಸತ್ಯಗಳ ಅರಿವಾಗುತ್ತದೆ. ಮೂಲಸ್ವರೂಪವಾದ 'ಸತ್ಯ' ಅಖಂಡವಾದದ್ದು. ಅದನ್ನು ಬಲ ಭಾಗದಲ್ಲಿರುವ ಪೂರ್ಣದಂತ ಸೂಚಿಸುತ್ತದೆ. ಪ್ರಪಂಚ ಮಾಯೆಗಳಿಂದ ತುಂಬಿ ಅಪರಿಪೂರ್ಣವಾಗಿದೆ. ಇದನ್ನು ಮುರಿದಿರುವ ಎಡದಂತವು ಸೂಚಿಸುತ್ತದೆ. ಪೂರ್ಣ ಮತ್ತು ಅಪೂರ್ಣಗಳೆರಡೂ ಬೇರೆಬೇರೆಯಾಗಿ ಕಂಡರೂ ಅವೆರಡೂ ಪರಮಾತ್ಮನ ರೂಪ ವಿಶೇಷಗಳೇ. ಇದನ್ನು ಗಣಪತಿಯ ದಂತಗಳು ಸೂಚಿಸುತ್ತದೆ. 

(ಇನ್ನೂ ಇದೆ)

Tuesday, February 09, 2010

ಗಣಪತಿಯ ಬಗ್ಗೆ.

ಗಣಪತಿ.

ಹಿಂದೂ ದೇವತೆಗಳಲ್ಲಿ ಪ್ರಥಮ ಪೂಜಿತನಾಗುವವನು ಗಣಪತಿ. ಅವನು ಸಮುದಾಯದ ದೇವತೆ. 'ಗಣಾನಾಂತ್ವ...' ಮತ್ತು 'ನಿಷು ಸೀದ ಗಣಪತಿ...' ಶ್ಲೋಕಗಳ ಕಾಲದಿಂದಲೂ ಗಣಪತಿ ಸಮುದಾಯದ ನಾಯಕನಾಗಿಯೇ ವರ್ಣಿತನಾದವನು. 'ಗಣಪತಿ' ಎಂಬ ಶಬ್ದದ ಅರ್ಥವೇ ಗಣಗಳ ಅಧಿಪತಿ, ಅಂದರೆ, ಸಮುದಾಯದ ನಾಯಕ ಎಂದು. ಆ ಕಾರಣಕ್ಕೇ ಅವನಿಗೆ ಬೃಹಸ್ಪತಿ ಮತ್ತು ವಾಚಸ್ಪತಿ ಎಂಬ ಹೆಸರುಗಳಿವೆ. ಗಣಪತಿಯ ಸ್ವರೂಪದ ಮುಖ್ಯ ಲಕ್ಷಣವೆಂದರೆ ವಿಘ್ನಗಳನ್ನು ನಿವಾರಿಸುವುದು. ವಿಘ್ನಗಳು ಎಲ್ಲಾ ಕಾರ್ಯಗಳಿಗೂ ಇರುತ್ತವೆ. ಆದರೆ, ಧೀರರು ಮಾತ್ರವೇ ಅದನ್ನು ಹಿಮ್ಮೆಟ್ಟಿಸಬಲ್ಲರು. ಗಣಪತಿ ಅಂತಹ ಸಾಮರ್ಥ್ಯದ ಪ್ರತೀಕವಾಗಿದ್ದಾನೆ. ಹೀಗಾಗಿ ಗಣಪತಿಗೆ 'ವಿಘ್ನೇಶ್ವರ'ನೆಂಬ ಹೆಸರಿದೆ.

ಗಣಪತಿ ಹೆಸರಿನ ಮೂಲ.
ಗಣ ಎಂದತೆ ತತ್ತ್ವ. ಯಾವ ಮೂಲ ತತ್ತ್ವಗಳಿಂದ ಎಲ್ಲಾ ವಿದ್ಯೆಗಳೂ ಆವಿಷ್ಕಾರಗೊಳ್ಳುವುದೋ , ಆ ಮೂಲ ತತ್ತ್ವವೇ ಗಣಪತಿ. ಹೀಗಾಗಿ ಆತನು ವಿದ್ಯೆಗೆ ಅಧಿಪತಿಯಾಗಿರುತ್ತಾನೆ. ಗಣಪತಿಗೆ ಆನೆಯ ಮುಖವಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನು ಪ್ರತಿನಿಧಿಸುವ 'ಗಜ' ಎಂಬ ಶಬ್ದಕ್ಕೆ ಆಳವಾದ ಅರ್ಥವಿದೆ. 'ಗ' ಎಂದರೆ ಗತಿ. ಜೀವನದ ಪರಮ ಧ್ಯೇಯದತ್ತ ತಿಳಿದೂ ತಿಳಿಯದೆಯೂ ಸಾಗುವುದು. 'ಜ' ಎಂದರೆ ಜನ್ಮ, ಅಂದರೆ ವಿಶ್ವದ ಮಹತ್ತರ ಉದ್ದೇಶ ಯಾವುದಿದೆಯೋ ಅದಕ್ಕಾಗಿ ಜನ್ಮ ತಳೆಯುವುದು ಎಂದರ್ಥ. ಸೃಷ್ಟಿಯಲ್ಲಿ ಸೂಕ್ಷ್ಮಾಂಡ ಹಾಗೂ ಬ್ರಹ್ಮಾಂಡಗಳೆಂಬ ಎರಡು ಬಗೆಗಳಿವೆ. ಇವೆರಡೂ ಒಂದಕ್ಕೊಂದು ಪ್ರತಿರೂಪವಾಗಿದೆ. ಈ ಎರಡೂ ರೂಪಗಳಲ್ಲಿರುವ ತತ್ತ್ವ ಒಂದೇ. ಆದರೆ, ಸ್ವರೂಪವು ಬೇರೆ. ಗಣಪತಿ ಮೂರ್ತಿಯಲ್ಲಿರುವ ಗಜಮುಖವು ಬ್ರಹ್ಮಾಂಡದ ಪ್ರತೀಕ. ಮಾನವ ಶರೀರವು ಸೂಕ್ಷ್ಮಾಂಡದ ಪ್ರತೀಕ. ಸೂಕ್ಷ್ಮಾಂಡದ ಗುರಿ ಬ್ರಹ್ಮಾಂಡವಾಗಿರುವುದರಿಂದ ಗಣಪತಿಯ ಸ್ವರೂಪದಲ್ಲಿ ಗಜಮುಖಕ್ಕೇ ಪ್ರಾಧಾನ್ಯತೆ.

ಗಜಮುಖವೇ‌ ವಿಶ್ವವನ್ನು ಪ್ರತಿನಿಧಿಸಿದರೆ, ಮಾನವಾಕಾರವೇ ವ್ಯಕ್ತಿ ಎಂದು ಗ್ರಹಿಸಬಹುದು. ಅವೆರಡೂ ಒಂದೇ, ಮಾತ್ರವಲ್ಲ, ಪರಸ್ಪರ ಪೂರಕವಾದದ್ದು ಎಂಬುದನ್ನು ಗಣಪತಿಯ ಕಲ್ಪನೆ ತೋರಿಸಿಕೊಡುತ್ತದೆ. 

(ಇನ್ನೂ ಇದೆ)