My Blog List

Saturday, February 13, 2021

ಚೌಪದಿ - 7

ಕಲೆತಿಹುದು ಕಣ್ಣುಗಳು ಬೆರೆತಿಹವು ಮನಸುಗಳು।
ನಲಿವಿನಾ ಬದುಕಿನಲಿ ಅರಳಿಹುದು ಹೂವು॥
ಕಲರವವು ಮೂಡಿಹುದು ಮನದೊಳಿಹ ಗೂಡಿನಲಿ।
ಒಲವಿನಾ ಫಲವಿದುವೆ - ಅನಿಕೇತನ॥ 7 ॥ 


ಚೌಪದಿ - 6

ಕಿಟಕಿಯಾ ಹೊರಗಿಹುದು ಬೆಳಕಿನಾ ಲೋಕವದು।
ಕಿಟಕಿಯಾ ಒಳಗಿಹುದು ನೆಮ್ಮದಿಯ ಬದುಕು॥
ಹಟಮಾಡಿ ಹೋಗುನೀಂ ತಡಮಾಡದೇ ಗೆಳೆಯ।
ಚಟವಾಗುವುದದುವೇ - ಅನಿಕೇತನ॥ 6 ॥ 

ಚೌಪದಿ - 5

ಕಡಲೊಳಗೆ ಮುಳುಗುತಿಹ ಮುಸ್ಸಂಜೆ ಮಾಯಾವಿ।
ದಡದೊಳಿಹ ದೋಣಿಯನು ಮೋಹದಲಿ ನೋಡಿ॥
ಸಡಗರದಿ ನಾಚಿಹನು ಬಾನ ರಂಗೇರಿಸುತ।
ಪಡುವಣದ ಸೊಬಗಿದುವೆ - ಅನಿಕೇತನ॥ 5 ॥ 

ಚೌಪದಿ - 4

ಮೂಡಣದಿ ಮೂಡಿಹನು ಮೋಹಿತನು ದಿನದಿನವು।
ನೋಡುತಿಹನೆಲ್ಲರನು ಮನಸೂರೆಗೊಂಡು॥
ಹಾಡುತಿಹನವನು ರಮಣೀಯ ರಾಗದಲಿ।
ತಡವರಿಸನವನೆಂದು - ಅನಿಕೇತನ॥ 4 ॥ 

ಚೌಪದಿ - 3

ಅಲೆಗಳನು ನೋಡುತಿರೆ ಪಡುವಣದ ದಿಕ್ಕಿನಲಿ।
ಬಲೆಗಳನು ಬೀಸಿಹನು ದಿನಕರನು ನಮಗೆ॥
ತಲೆಯೊಳಿಹ ದುಗುಡಗಳು ಏನನೂ ಹೇಳದೇ।
ಮೂಲೆಯನು ಸೇರಿಹುದು - ಅನಿಕೇತನ॥ 3 ॥