My Blog List

Thursday, February 18, 2021

ಚೌಪದಿ - 13

ದುಂಡುಮಲ್ಲಿಯ ಕೈಪಿಡಿದ ಪಾದಪುಷ್ಪವನು। 
ಕಂಡಂಕುಡೊಂಕ ಹೆಡ್ಡರಸರೊಂದಾಗಿ॥ 
ಕೊಂಡಾಡೆ ಮುದ್ದುರಂಗನಾಂತರಾತ್ಮದಲಿ। 
ಗುಂಡಿಗೆಯನಂಜಳಿವುದನಿಕೇತನ॥ 13 ॥ 

ರಿಂಗಣದ ದಿಬ್ಬಣದಿ ಭಟ್ಟವಾಕ್ಯವ ಕೇಳು। 
ರಂಗಮಂಚದಿ ನಲಿವ ಶುಭಕರನ ನೋಡು॥ 
ರಂಗನಾಥನ ಭಕ್ತ ಮಂಗರಾಯನು ನುಡಿವ। 
ರಂಗಿನಾ ವಿದ್ಯೆಯಿದು - ಅನಿಕೇತನ ॥ 13.1 ॥ 

Tuesday, February 16, 2021

ಚೌಪದಿ - 12

ಸಾಕುಬೇಕುಗಳ ನಡವೆ ತೊಳಲುವುದು ಬಡಜೀವ।
ಅಂಕೆಯಿಲ್ಲವೊ ಬಯಕೆಗಳಿಗೆ ಬಾಳಲ್ಲಿ॥
ನಾಕನರಕಗಳೆರಡು ಇಲ್ಲಿಹವು ಮನದಲ್ಲಿ।
ಸಾಕುಬೇಕುಗಳದುವೆ - ಅನಿಕೇತನ॥ 12 ॥ 

ಚೌಪದಿ - 11

ಬೇಕಿಹುದು ಜೀವನಕೆ ಹೊಸದೊಂದು ಹುಡುಕಾಟ। 
ಬೇಕಿಹುದು ಜೀವನಕೆ ಗೆಲುವಿನಾ ಆಟ॥ 
ಬೇಕಿಹುದು ಜೀವನಕೆ ಹಗಲಿರುಳು ಹೋರಾಟ। 
ಬೇಕಿಹುದು ಜೀವನಕೆ - ಅನಿಕೇತನ॥ 11 ॥ 

Monday, February 15, 2021

ಚೌಪದಿ - 10

ಸಿಂಗರಿಸೆ ಆಗಸವ ಮೋಡಗಳು ಕವಿದಿಹುದು। 
ಕಂಗೊಳಿಸೆ ಸಾಗರವ ಹೊರಟಿಹುದು ನದಿಯು॥ 
ಮುಂದಿರಿಸಿ ಕಾಗದವ ಕುಳಿತಿಹನು ಗಾಯಕನು। 
ಸಂತಸದಿ ಹಾಡಿದವ - ಅನಿಕೇತನ॥ 10 ॥ 

ಚೌಪದಿ - 9

ಹೊಲದಲೇ ದುಡಿಯುತಾ ಕಳೆಯುವನು ಜೀವನವ। 
ಬಲವಿಹುದು ತೋಳಿನಲಿ ನೇಗಿಲನು ಹೊತ್ತು॥ 
ನೆಲದಲೇ ಬೆಳೆದುದನು ತಿನಿಸುವನು ನಮಗೆಲ್ಲ। 
ಒಲವಿನಲಿ ಬಾಳುವನು - ಅನಿಕೇತನ॥ 9 ॥