My Blog List

Thursday, January 21, 2010

ಮಹಾರಾಜ ಸ್ವಾತಿತ್ತಿರುನಾಳ್ - ೧



೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು 'ಸಂಗೀತ ಯುಗ' ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿತ್ತಿರುನಾಳ್ ಸಹ ಒಬ್ಬರು.

ಕರ್ನಾಟಕ ಸಂಗೀತರ ತ್ರಿಮೂರ್ತಿಗಳಾದ ಶ್ಯಾಮಶಾಸ್ತ್ರಿಗಳು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಹಲವಾರು ವಿದ್ವಾಂಸರೆಲ್ಲ ಸ್ವಾತಿತ್ತಿರುನಾಳ್ ಅವರ ಸಮಕಾಲೀನರು. ಅಪಾರವಾದ ಸಂಗೀತಜ್ಞಾನವನ್ನೂ ಆಳವಾದ ಪಾಂಡಿತ್ಯವನ್ನೂ ಪಡೆದಿದ್ದ ಸ್ವಾತಿತ್ತಿರುನಾಳ್, ಸಂಗೀತ ಪ್ರಪಂಚಕ್ಕೆ ಅಮಿತಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರ ನಂತರ ಸಂಗೀತ ಪ್ರಪಂಚ ಅವರನ್ನು 'ಅಭಿನವ ತ್ಯಾಗರಾಜ' ಎಂಬ ಹೆಸರಿನಿಂದ ಗೌರವಿಸಲಾರಂಭಿಸಿತು.

ಸ್ವತಃ ಮಹಾರಾಜನಾದರೂ ವಿದ್ಯೆಯ ದಾಹ ಇವರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.

ಸ್ವಾತಿತ್ತಿರುನಾಳ್ ಅವರ ಕಾಲಕ್ಕೆ ಮೊದಲು, ಕೇರಳದಲ್ಲಿ ಸಂಗೀತವು ತನ್ನದೇ‌ ಆದ ರೀತಿಯಲ್ಲಿ ಬೆಳಗುತ್ತಿತ್ತು. ಅದಕ್ಕೆ 'ಆಟಕಥಾ ಸಂಗೀತ' ಎಂದು ಹೆಸರಿತ್ತು.

ಅಶ್ವಿನಿತ್ತಿರುನಾಳ್ ಎಂಬ ವಾಗ್ಗೇಯಕಾರರು ರಚಿಸಿದ ಕೆಲವು ಕೀರ್ತನೆಗಳು ಪ್ರಚಾರದಲ್ಲಿದ್ದವು. ರಾಮಪುರಂ ವಾರಿಯರ್ ಎಂಬುವವರು ರಚಿಸಿದ ಗೀತಗೋವಿಂದ ಮೊದಲಾದ ಕೃತಿಗಳೂ ಪ್ರಚಾರದಲ್ಲಿದ್ದವು. ಕಥಕ್ಕಳಿ ನೃತ್ಯದಲ್ಲೂ ಸಂಗೀತ ಬೆರೆತುಕೊಂಡಿತ್ತು. ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು.

ಪದ್ಮನಾಭಸ್ವಾಮಿಯ ಭಕ್ತರಾಗಿದ್ದ ಸ್ವಾತಿತ್ತಿರುನಾಳ್ ಅವರು, ಶ್ರೀರಾಮಭಕ್ತರೂ, ಕರ್ನಾಟಕ ಸಂಗೀತಕ್ಕೆ ಮಕುಟಪ್ರಾಯರೂ ಆಗಿರುವ ತ್ಯಾಗರಾಜರ ಮೆಚ್ಚುಗೆ ಪಡೆದಿದ್ದರೆಂದರೆ, ಅವರಿಗಿದ್ದ ಸಂಗೀತಜ್ಞಾನ, ರಚನಾಸಾಮರ್ಥ್ಯ ಎಷ್ಟರಮಟ್ಟಿನದು ಎಂದು ಊಹಿಸಬಹುದು.

ತಿರುವಾಂಕೂರು ಅರಸು ಮನೆತನದಲ್ಲಿ ೧೮೧೩ನೇ ಇಸವಿಯ ಏಪ್ರಿಲ್ ೧೬ನೇ ತಾರೀಖು ಸ್ವಾತಿತ್ತಿರುನಾಳ್ ಅವರು ಜನಿಸಿದರು. ಹುಟ್ಟುವಾಗಲೇ ಮಕುಟ ಧರಿಸುವ ಯೋಗ ಇವರಿಗಾಯಿತು. ಇವರ ಹಿಂದಿನ ದೊರೆ ಬಾಲರಾಮವರ್ಮ ಮಹಾರಾಜರ ಕಾಲ ೧೮೧೧ನೇ ಇಸವಿಗೆ ಮುಗಿದು ಅವರಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರ ತಂಗಿ ರಾಣಿ ಸೇತುಕ್ಷ್ಮಿಬಾಯಿಯೇ ಗದ್ದುಗೆ ಏರಿದರು. ಇವರು ಶ್ರೀ ಪದ್ಮನಾಭಸ್ವಾಮಿಯ ಅನನ್ಯ ಭಕ್ತರು. ಆ ಸ್ವಾಮಿಯ ಅನುಗ್ರಹದಿಂದ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಕುಮಾರನೇ ಸ್ವಾತಿತ್ತಿರುನಾಳ್.

ಚಿಕ್ಕಂದಿನಲ್ಲೇ ಮಾತೆಯನ್ನು ಕಳೆದುಕೊಂಡ ಸ್ವಾತಿತ್ತಿರುನಾಳ್ ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದರು. ಶುಕ್ಲ ಪಕ್ಷದ ಚಂದ್ರನಂತೆ ಇವರ ದೇಹ, ಮನಸ್ಸು, ಬುದ್ಧಿ ಎಲ್ಲವೂ ಬೆಳೆದವು, ಬೆಳಗಿದವು. ಬಾಲ್ಯದಲ್ಲೇ ಸಂಗೀತ, ಶಿಲ್ಪಕಲೆ, ಚಿತ್ರಕಲೆ, ಸಾಹಿತ್ಯ, ಅಂಗಸಾಧನೆ ಕಲೆ, ಯುದ್ಧಕಲೆ, ಹೀಗೆ ಎಲ್ಲದರಲ್ಲೂ ಮಹಾಮೇಧಾವಿ ಎನಿಸಿಕೊಂಡರು.

೧೬ನೇ ವಯಸ್ಸಿನಲ್ಲಿ, ಚಿಕ್ಕಮ್ಮ ಗೌರಿ ಪಾರ್ವತಿಬಾಯಿ ಅವರು ತಮ್ಮ ಅಮೃತ ಹಸ್ತದಿಂದ ಸ್ವಾತಿತ್ತಿರುನಾಳ್ ಅವರಿಗೆ ಮಕುಟಾಭಿಷೇಕ ಮಾಡಿದರು.

ಮಹಾದೈವಭಕ್ತರೂ, ಚತುರರೂ, ರಾಜತಂತ್ರಜ್ಞರೂ ಆಗಿದ್ದ ಇವರು ರಾಜ್ಯಭಾರವನ್ನು ಅದ್ಭುತವಾದ ರೀತಿಯಲ್ಲಿ ನಿರ್ವಹಿಸಿದರು. ಕಲಾವಿದರಿಗೆ ಇವರು ಕೊಡಿತ್ತಿದ್ದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಅನೇಕ ಸಂಗೀತಗಾರರಿಗೆ, ಕಲಾವಿದರಿಗೆ ಸ್ವತಃ ಧನಸಹಾಯ ನೀಡಿ ವಿದ್ಯೆಕಲಿಸುವ ವ್ಯವಸ್ಥೆ ಮಾಡುತ್ತಿದ್ದರು. ಪ್ರತಿಭೆ ಇರುವವರಿಗೆ ವಿಶೇಷ ಗೌರವ ಸಲ್ಲಿಸಿ ಪ್ರಶಸ್ತಿ ನೀಡುತ್ತಿದ್ದರು.

ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ತಮಿಳು ದೇಶಗಳಿಂದೆಲ್ಲ ಸಂಗೀತ ವಿದ್ವಾಂಸರನ್ನು ಕರೆಸಿ ಗೌರವಿಸುತ್ತಿದ್ದರು. ಅವರಲ್ಲಿ ಹಲವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ರಾಜ್ಯವು ಸಂಪತ್ಸಮೃದ್ಧವಾಗಿತ್ತಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳಾದವು.

(ಸಶೇಷ)

2 comments:

  1. ಇವರ ಬಗ್ಗೆ ಗೊತ್ತಿರಲಿಲ್ಲ
    ಅದ್ಭುತ ಮಾಹಿತಿ
    ಧನ್ಯವಾದಗಳು ತಿಳಿಸಿದ್ದಕ್ಕೆ

    ReplyDelete
  2. ಇವರ ಬಗ್ಗೆ ಬರೆಯಲು ಇನ್ನೂ ಇದೆ.

    -ಅನಿಲ್

    ReplyDelete