My Blog List

Wednesday, March 31, 2021

ಚೌಪದಿ - 57

ಅರಳುತಿರೆ ಹೂವೊಂದು ನಿರೀಕ್ಷೆಯನಿಡದೆಯೆ। 
ಮರಳುತಿದೆ ಜೀವನವು ಮೊದಲಿನಾ ಹಾಗೆ॥ 
ಸರಿಯಾದ ಹಾದಿಯಲಿ ಪಯಣವದು ಸಾಗುತಿರೆ। 
ಬರಡಾಗದೀಬದುಕು - ಅನಿಕೇತನ॥ 57 ॥ 


Tuesday, March 30, 2021

ಚೌಪದಿ - 56

ಕನವರಿಸಿ ನಿದಿರೆಯಲಿ ಕಾದಿಹೆನು ಹಗಲಿರಳು। 
ಕನಸೊಂದ ಕಟ್ಟುತ್ತ ಜೀವವನೆ ತೇಯ್ದು॥ 
ನನಸಾಗಬೇಕೆಂದು ಸಂಕಲ್ಪ ಮಾಡಿಹೆನು। 
ಮನದಲ್ಲಿ ಛಲವಿಟ್ಟು - ಅನಿಕೇತನ॥ 56 ॥ 

ಚೌಪದಿ - 55

ದಿನದಿನವು ಹೊಸತನ್ನು ಹುಡುಕುತ್ತ ಸಾಗುವೆವು। 
ಕನಸುಗಳ ಕಟ್ಟುತ್ತ ನನಸದನು ಮಾಡಿ॥ 
ಅನುದಿನವು ಸಂತಸವು ಮನದಲ್ಲಿ ಕಾಯುತಿರೆ। 
ಘನವಾಗುವುದು ಬದುಕು - ಅನಿಕೇತನ॥ 55 ॥ 




Monday, March 29, 2021

ಚೌಪದಿ - 54

ಜಗ್ಗದೆಯೆ ಜಗವನ್ನು ಜಯಿಸುವಾ ನಿಟ್ಟಿನಲಿ। 
ಹಿಗ್ಗುತಲಿ ಹೋರಾಡು ಎದುರಾಗೆ ಸೋಲು॥ 
ಕುಗ್ಗದೆಯೆ ಕಣ್ತೆರೆದು ಕಾಯುತಿರೆ ಸಮಯಕ್ಕೆ। 
ಸಗ್ಗವನೆ ಕಾಣುವೆಯೊ - ಅನಿಕೇತನ॥ 54 ॥ 

ಚೌಪದಿ - 53

ಬೇಯುತಿದೆ ಅನ್ನವದು ಮಧ್ಯಾಹ್ನದೂಟಕ್ಕೆ। 
ಹಾಯೆನಿಸಿ ಬಾಳೆಲೆಗೆ ನೀರನ್ನು ಚಿಮುಕಿ॥ 
ಪಾಯಸವ ತಿನ್ನುತಿರೆ ಹರಿನಾಮ ಜಪಿಸುತಲಿ। 
ಕಾಯುವಿಕೆಯಲೆ ಸುಖವು - ಅನಿಕೇತನ॥ 53 ॥ 

Sunday, March 28, 2021

ಚೌಪದಿ - 52

ರಾಮನಾ ಬರುವಿಕೆಗೆ ಕಾಯುತ್ತ ಕುಳಿತಿಹಳು। 
ನೇಮದಲಿ ಆರಿಸುತ ಬೋರೆ ಹಣ್ಣುಗಳ॥ 
ಕಾಮನೆಯು ಕೈಗೂಡಿ ಶಬರಿಯನನುಗ್ರಹಿಸೆ। 
ರಾಮನೇ ಬರುತಿಹನು - ಅನಿಕೇತನ॥ 52 ॥ 

ಚೌಪದಿ - 51

ಶರಶಯ್ಯೆಯಲಿ ಮಲಗಿ ಜೀವವನು ಹಿಡಿದಿಹನು। 
ಪರಲೋಕವನು ಸೇರೆ ಉತ್ತರಾಯಣದಿ॥ 
ಮರಣಕ್ಕೆ ಕಾದಿಹನು ಗಂಗೆಯಾ ಮಗನವನು। 
ಕುರುವಂಶದಾ ಹಿರಿಯ - ಅನಿಕೇತನ॥ 51 ॥








ಎಲ್ಲರಲೂ ಓರ್ವ ಬರಹಗಾರ.

ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.

ಪ್ರತಿಯೊಬ್ಬರಲ್ಲೂ ವೈವಿಧ್ಯವುಳ್ಳ ವಿಚಿತ್ರ ಮನಸ್ಸು ಇರುತ್ತದೆ. ಆ ಮನಸ್ಸು ಹಲವು ರೀತಿ ಯೋಚಿಸಿ, ಅಂತೆಯೇ ಹಲವು ರೀತಿಯ ಸಲಹೆ, ಸೂಚನೆ, ಅನಿಸಿಕೆಗಳನ್ನು ನೀಡುತ್ತಿರುತ್ತವೆ. ಆದರೆ, ನಾವು ಆ ಮನಸ್ಸನ್ನು ನಿಯಂತ್ರಿಸಿ, ನಮ್ಮ ಪ್ರತಿಭೆಗಳನ್ನು ಹೊರಹೊಮ್ಮಲು ಬಿಡುವುದೇ ಇಲ್ಲ.

ಇನ್ನು ಕೆಲವರು, ಮನಸ್ಸು ಹೇಳಿದಂತೆಯೇ ಮಾಡಿ, ಮಹಾನ್ ವ್ಯಕ್ತಿಗಳಾಗಿಯೂ, ರಾಜಕಾರಣಿಗಳಾಗಿಯೂ, ಬರಹಗಾರರಾಗಿಯೂ ರೂಪುಗೊಳ್ಳುತ್ತಾರೆ. ಮಿಕ್ಕವರು, ಅದು ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ತಮ್ಮ ಮುಂದೆ ಇರಿಸಿಕೊಂಡು ಶೂನ್ಯತಾಭಾವದಲ್ಲೇ ಜೀವನವನ್ನು ಸವೆಸುತ್ತಾರೆ.

ನಮ್ಮೊಳಗಿರುವ ಚಿಂತಕನ, ಬರಹಗಾರನ, ಅಥವಾ ಚಿತ್ರಕಾರನನ್ನು ಕಟ್ಟಿಹಾಕದೇ, ಹರಿಯಬಿಟ್ಟರೆ, ಮನಸ್ಸಿನ ಆಲೋಚನೆಗಳಿಗೆ, ಆಕೃತಿಯನ್ನು ನೀಡುವ ಸಾಧನಗಳನ್ನು ಕೈಯಲ್ಲಿ ಹಿಡಿದಾಗ ಮನಸ್ಸಿನ ಆಕೃತಿಗಳು ಹೊರಹೊಮ್ಮುತ್ತವೆ. ಆಕೃತಿಯ ಸಾಧಕ-ಬಾಧಕಗಳ ಬಗ್ಗೆ ತಲೆಕೆಡಸಿಕೊಳ್ಳಬಾರದು. ಎಲ್ಲರು ಮೆಚ್ಚುವಂತಿರಬೇಕೆಂದಿಲ್ಲ. ಬೆರಳೆಣಿಕೆಯಷ್ಟು ಮಂದಿಯಾದರೂ ಮೆಚ್ಚಿದರೆ ಸಾಕು, ನಮ್ಮೊಳಗಿನ ಆ ವ್ಯಕ್ತಿಯಲ್ಲಿ ಸಾರ್ಥಕ ಮನೋಭಾವ ಉಂಟಾಗುತ್ತದೆ.

‪#‎ಅನುಭವ‬

Half Century

I never knew I could ever write a four-line poem. The journey so far has been very interesting. 


I always thought I could never write a poem. Also, when I started to write the poem, it was nowhere near to the rhythm, rhyme, or whatsoever. As I started to understand the concept of the poems, I got hold of the rhythm and the rhymes. 


Now that I have reached the 50-mark, this journey so far has been very exciting. 


Thanks to my lovely friends who have taught and inspired me. I hope this journey of literature continues till my last breath. 

Saturday, March 27, 2021

ಚೌಪದಿ - 50

ಅಹಂಕಾರದ ಕಿಚ್ಚು ಯುದ್ಧದಲಿ ಅಳಿದಿರಲು। 
ಅರ್ಹಂತ ಜನಿಸಿದನು ಭರತನನು ಜಯಿಸಿ॥ 
ಮಹಂತದ ದೀಕ್ಷೆಯ ಪಡೆದು ತಾನಾಗಿಹನು। 
ಅರ್ಹಂತ ಬಾಹುಬಲಿ - ಅನಿಕೇತನ॥ 50 ॥ 

Friday, March 26, 2021

ಚೌಪದಿ - 49

ಹಾಲುಕುಡಿಯುತ ಬೆಳೆದು ವಿದ್ಯೆಯನು ಕಲಿಯುತ್ತ। 
ಕಾಲಮೇಲೆಯೆ ನಿಂತು ಹೋರಾಡುತಿರಲು॥ 
ಗಾಲಿಯದು ತಿರುಗುತಿರೆ ಜೀವನವು ಸಾಗುವುದು। 
ಲಾಲಿ ಚರಮದ ನಡುವೆ - ಅನಿಕೇತನ॥ 49 ॥ 

Thursday, March 25, 2021

ಚೌಪದಿ - 48

ಅರಿವಿನಾ ಅಲೆಗಳಲಿ ಅರಿತವರು ಮುಳುಗುತಿರೆ।
ಅರಿಯುವುದು ಸರಿತಪ್ಪು ಮನದಾಳದಲ್ಲಿ॥ 
ಅರಿವಿನಲಿ ಅರಿಯನ್ನು ಅರಿತರೇ ಅರಿಯುವುದು। 
ಅರಿವಿನಲೆ ಅರಿವಿಹುದು - ಅನಿಕೇತನ॥ 48 ॥ 

Wednesday, March 24, 2021

ಚೌಪದಿ - 47

ಸೋರುತಿದೆ ಬೆವರಹನಿ ಬಿಸಿಲನಾ ಬೇಗೆಯಲಿ। 
ಏರಿರಲು ತಾಪವದು ಬೇಸಿಗೆಯ ದಿನದೆ॥
ಊರಿನಲಿ ಬತ್ತಿರಲು ಬಾವಿಗಳು ಒಂದೊಂದೆ। 
ನೀರಿಗಾಗಿಯೆ ಕದನ - ಅನಿಕೇತನ॥ 47 ॥ 

ಚೌಪದಿ - 46

ಮೊಳಗೆ ಪಾಂಚಜನ್ಯವು ಬೋಧನೆ ಶುರುವಾಯಿತು। 
ಕಳೆಗುಂದದೆ ಕೇಳಿದನು ಕಿವಿಯಾ ಕೊಟ್ಟು॥ 
ಒಳಗಿನಾ ಕಣ್ತೆರೆಯೆ ವಿರಾಟವನು ನೋಡುತ। 
ಮೊಳಗಿದನು ಶಂಖವನು ಧನಂಜಯನು॥ 46 ॥ 

Tuesday, March 23, 2021

ಚೌಪದಿ - 45

ಕೇಡಿ ಗುಪ್ತರ ಸೊಕ್ಕನಡಗಿಸಲು ಛಲದಲ್ಲಿ। 
ಹೇಡಿತನವಿರದ ಸೇನೆಯನು ಬೆಳೆಸುತ್ತ॥ 
ನಾಡಲಿ ಸನಾತನದ ಧರ್ಮದುತ್ಥಾನಕ್ಕೆ। 
ಸೇಡಿನಾ ಯುದ್ಧವದು - ಅನಿಕೇತನ॥ 45 ॥ 

Monday, March 22, 2021

ಚೌಪದಿ - 44

ಹೊಸಕನಸ ಕಾಣುತ್ತ ಹೊಸಯುಕ್ತಿ ಬೆಳೆಸುತ್ತ। 
ಹೊಸಬದುಕ ಜೀವಿಸಲು ಅಣಿಯಾಗು ನೀನು॥ 
ಹೊಸವೈರಿ ಎದುರಾಗೆ ಸದೆಬಡಿದು ಮುನ್ನುಗ್ಗು। 
ಹೊಸಯುದ್ಧ ದಿನದಿನವು - ಅನಿಕೇತನ॥ 44 ॥ 

Sunday, March 21, 2021

ಚೌಪದಿ - 43

ಬದ್ಧವೈರಿಯು ಮನದ ಮೂಲೆಯಲಿ ಅವಿತಿರಲು। 
ಯುದ್ಧವೇ ಆಗಿಹುದು ನಮ್ಮೊಳಗೆ ಹೊರಗೆ॥ 
ಶುದ್ಧಮಾಡಲು ಮನವ ಇದನೆಲ್ಲ ನೋಡುತ್ತ। 
ಬುದ್ಧನೇ ಬರುತಿಹನು - ಅನಿಕೇತನ॥ 43 ॥

Saturday, March 20, 2021

ಚೌಪದಿ - 42

ಹಲವಾರು ವರ್ಷಗಳು ಕಳೆದರೂ ಸಮಯಕ್ಕೆ। 
ಫಲಕೊಡುವನೆಲ್ಲರಿಗು ಬೇಸಿಗೆಯು ಮುಗಿಯೆ॥ 
ಛಲವಂತ ಲಯವಂತ ಧೀಮಂತ ಕರುಣಾಳು।
ಬಲಶಾಲಿ ಮಳೆರಾಯ - ಅನಿಕೇತನ॥ 42 ॥ 

ಚೌಪದಿ - 41

ಅಳುತಲಿದೆ ಆಗಸವು ನೆಲದ ಕಷ್ಟವನೋಡಿ।
ತೊಳಲುತಾ ಶಿರದಲ್ಲಿ ಭಾರವನು ತುಂಬಿ॥ 
ಬಳುಕುತಾ ಗುಡುಗುತಾ ಸುರಿಯುತಿರೆ ಕಣ್ಣೀರು। 
ಮಳೆಯಾಗಿಹುದು ಇಳೆಗೆ - ಅನಿಕೇತನ॥ 41 ॥ 

Friday, March 19, 2021

ಚೌಪದಿ - 40

ಬಂಗಾರದಂತಹಾ ದಿನಕರನು ಮುಳುಗಿರಲು। 
ರಂಗಾದ ಬಾನಿನಲಿ ಕವಿದಿಹುದು ಮೋಡ॥ 
ತಂಗಾಳಿ ಬೀಸಿರಲು ಮುಸ್ಸಂಜೆ ವೇಳೆಯಲಿ। 
ಸಂಗಾತಿ ಮಳೆಯದುವೆ - ಅನಿಕೇತನ॥ 40 ॥ 

ಚೌಪದಿ - 39

ಬೆಳೆಯುತ್ತ ಬಿಸಿಲಲ್ಲಿ ಬಾಡುತ್ತ ಚಳಿಯಲ್ಲಿ। 
ಹೊಳೆಯುತ್ತ ಮಳೆಯಲ್ಲಿ ಬದುಕುವೆವು ನಾವು॥ 
ಸುಳಿಯಲ್ಲಿ ಸಿಲುಕದೇ ಸಾಗುತಿರೆ ಮನವದುವು।
ಸೆಳೆಯುವುದು ದೈವವದು  - ಅನಿಕೇತನ॥ 39 ॥ 

ಚೌಪದಿ - 38

ಹಳೆಯದನು ನೆನೆನೆನೆದು ಜೀವನವೆ ಹೊರೆಯಾಗಿ। 
ಅಳುತಿಹುದು ಮನವು ನೋವಿನಾ ಬೇಗೆಯಲಿ॥ 
ತಳಮಳವು ದುಗುಡಗಳು ಎದೆಯಲ್ಲಿ ಉಮ್ಮಳಿಸಿ। 
ಮಳೆಯಾಗಿಹುದು ಮನದೆ - ಅನಿಕೇತನ॥ 38॥ 

ಚೌಪದಿ - 37

ವನಕುಸುಮ ಅರಳಿದೊಡೆ ಮಣ್ಣಿನಾ ಪರಿಮಳಕೆ। 
ನನಗದುವೆ ಉತ್ಸಾಹ ಮನವೆಲ್ಲವರಳಿ॥ 
ಕನಸುಗಳು ನನಸಾಗಿ ಹಸನಾಗುತಿರೆ ಬದುಕು। 
ಮನದೊಳಗೆ ಮಳೆಯಿದುವೆ - ಅನಿಕೇತನ॥ 37 ॥ 

Wednesday, March 17, 2021

ಚೌಪದಿ - 36

ಕಗ್ಗದರಸರ ಹುಟ್ಟು ಹಬ್ಬದಾ ದಿನವಿದುವೆ। 
ಅಗ್ಗಳದ ಸರಳತೆಯ ಮೆರೆದ ಗುಂಡಪ್ಪ॥ 
ಲಗ್ಗೆಯಿಡೆ ಭಾಷಾಂತರಂಗದ ಆಳದಲಿ। 
ಸಗ್ಗವದೊ ಸಾಹಿತ್ಯ ಅನಿಕೇತನ॥ 36 ॥ 

Friday, March 12, 2021

ಚೌಪದಿ - 35

ಜಡಹಿಡಿದ ಮೈಮನಕೆ ಸಾಗರನೆ ಸಂಜೀವಿ। 
ತಡೆರಹಿತ ಅಲೆಗಳಲಿ ಬೀಳುತಿರೆ ನಾವು॥ 
ಸಡಿಲವಾಗುವುದು ಜಡ ಸೋಕಿದೊಡೆ ಮರಳಿನಲಿ। 
ಕಡಲ ಬೆಳದಿಂಗಳಲಿ - ಅನಿಕೇತನ॥ 35 ॥ 

Thursday, March 11, 2021

ಚೌಪದಿ - 34

ಸಶಕ್ತರನು ಮಾಡುವ ಪರಮೇಶನೀ ಈಶ। 
ನಿಶೆಹಗಲು ಎನದೆ ಭಕ್ತರನು ಕಾಯ್ವನ್॥ 
ರಕ್ಷಿಸಲು ಲೋಕವನು ಹಾಲಾಹಲವ ಕುಡಿದ। 
ವಿಷಕಂಠನಿರುಳಿದುವೆ - ಅನಿಕೇತನ॥ 34 ॥ 

ಚೌಪದಿ - 33

ರಾಮನಾ ಭಕ್ತಿಯಲಿ ಪ್ರೀತಿಯನು ಕಂಡೆನು। 
ಶ್ಯಾಮನ ಮಾತಿನಲಿ ತರ್ಕವನು ಕಂಡೆ॥ 
ಕಾಮನನು ಕೊಂದವನ ತ್ರಿನೇತ್ರವ ಕಂಡೆ। 
ಈ ಮೂವರ ಪೂಜಿಸೊ - ಅನಿಕೇತನ॥ 33 ॥ 

ಚೌಪದಿ - 32

ಮಹಾಭಕ್ತರಿಗನುಗ್ರಹನೀಡುತಹರಸುವ। 
ಮಹಾಪಿತನವನುಗಣಪಗುಹಗಣಗಳಿಗೆ॥  
ಸಹಾಯಹಸ್ತವತೋರಿಸಲಹುವದೇವನಿಗೆ। 
ಮಹಾಶಿವರಾತ್ರಿಯು - ಅನಿಕೇತನ॥ 32 ॥ 

Wednesday, March 10, 2021

ಚೌಪದಿ - 31

ನಿಶಾಚರನಿರುಳ ಕಾವಲುಗಾರನಾಗಿರಲು।
ಪಿಶಾಚಿ ಪ್ರೇತಗಳನೋಡಿಸಲು ಬರುವ॥ 
ವಿಶೇಷವಿರುವುದವನವದನವಾ ಸಮಯದೀ। 
ಸಶೇಷದ ಪಹರೆಯದು - ಅನಿಕೇತನ॥ 31 ॥ 

Tuesday, March 09, 2021

ಚೌಪದಿ - 30

ಹಾಲಿನಂತಹ ಬೆಳಕ ಚೆಲ್ಲಿರಲು ಚಂದಿರನು। 

ತೇಲಿಬಂದಿದೆ ಗಾಳಿ ಬಲು ದೂರದಿಂದ॥ 

ಆಲಿಸಿಹೆನಿಂಪಾದ ಗೀತೆಯನು ಮಲಗುತ್ತ। 

ಲಾಲಿಹಾಡಿಹುದಿರುಳು - ಅನಿಕೇತನ॥ 30 ॥

Monday, March 08, 2021

ಚೌಪದಿ - 29

ಇಂಪಾಗಿ ಹಾಡುವಾ ಹಕ್ಕಿಗಳು ಮಲಗಿಹವು। 
ಸೊಂಪಾಗಿ ಬೆಳೆದಿರುವ ಮರದ ಗೂಡಿನಲಿ॥ 
ಕಂಪನ್ನು ಚೆಲ್ಲಿಹನು ಚಂದಿರನು ಮೇಲೇರಿ। 
ಚಂದ್ರೋದಯವಿದುವೆ - ಅನಿಕೇತನ॥ 29 ॥

Sunday, March 07, 2021

ಚೌಪದಿ - 28

ಕತ್ತಲಲಿ ಎಲ್ಲರೂ ಜೊತೆಗೂಡಿ ತಿನ್ನುತಿರೆ। 
ಹೆತ್ತವಳು ಹಾಕುವಾ ಕೈತುತ್ತಿನೂಟ॥ 
ಬತ್ತುವುದು ಹಸಿವು ಬೆಳದಿಂಗಳಾ ಬೆಳಕಿನಲಿ। 
ಮತ್ತು ಬರುವುದು ನಿದಿರೆ - ಅನಿಕೇತನ॥ 28 ॥

ಚೌಪದಿ - 27

ಬಾಳಿನಾ ಕಡಲಲ್ಲಿ ಮುಳುಗದೇ ಈಜುತಿರು। 
ಹಾಳುಮಾಡಿಕೊಳದೇ ಜೀವನವ ನೀನು॥ 
ಆಳವನು ನೋಡುತಿರೆ ಬೆಳಕಿನಲೆ ಕಾಣುವುದು। 
ಏಳುಬೀಳುಗಳಿದುವೆ - ಅನಿಕೇತನ॥ 27 ॥ 

Friday, March 05, 2021

ಚೌಪದಿ - 26

ಹೋಗಿಹುದು ಮುಸ್ಸಂಜೆ ಹೊಸತೊಂದು ದಿನತರಲು। 
ಆಗಸವ ಸಿಂಗರಿಸಿ ಒಲವಿಂದ ತಾನು॥ 
ಸಾಗುತಿದೆ ಕತ್ತಲೆಯು ಮುಂಜಾವಿನೌತಣಕೆ। 
ಆಗಲಿದೆ ನಲ್ಬೆಳಗು- ಅನಿಕೇತನ॥ 26 ॥ 

ಚೌಪದಿ - 25

ಬೇಸರವ ಪಡದೆಯೇ ನಡೆಸಿಬಿಡು ಜೀವನವ। 
ನೇಸರನ ನೋಡುತಾ ಬದುಕುವುದ ಕಲಿಯೊ॥ 
ಘಾಸಿಗೊಳಗಾಗದೆಯೆ ಬೆಳಗುವವನೆಂದೆಂದು। 
ಆಸೆಗಳ ಹುಟ್ಟಿಸುತ - ಅನಿಕೇತನ॥ 25 ॥ 


Thursday, March 04, 2021

ಚೌಪದಿ - 24

ಕಾನನವು ಕರೆದೊಡೇ ಭಯವೇಕೆ ಪಡುವೆನೀಂ?। 
ಮಾನವನ ಮುಸ್ಸಂಜೆ ಮುಗಿಯುವುದು ಹೀಗೆ॥ 
ಯಾನವನು ಮಾಡುತಿರೆ ಸುಖವಾಗುವುದು ಪಯಣ। 
ಹೂನಗೆಯ ಬೆಳಗಿದುವೆ - ಅನಿಕೇತನ॥ 24 ॥ 

Wednesday, March 03, 2021

ಚೌಪದಿ - 23

ನಗುವೊಂದು ಬೇಕಿಹುದು ಹಗುರಾದ ಮನಸಿಗೂ। 
ಬಗೆಹರಿಯೆ ದುಗುಡಗಳು ಹೋಗುವುದು ನೋವು॥ 
ನಗುನಗುತ ಇರುವಾಗ ಕಣ್ಣುಗಳು ತುಂಬಿದರೆ। 
ಸೊಗಸಾದ ಬದುಕದುವೆ - ಅನಿಕೇತನ॥ 23 ॥ 

ಚೌಪದಿ - 22

ಹಿಮಕರಗಿ ನೀರಾಗಿ ಹರಿದಿರಲು ಬೆಟ್ಟದಿಂ।
ಸುಮವರಳಿ ಪರಿಮಳವ ಚೆಲ್ಲಿರಲು ಕಂಪು॥
ಡಮರುಗವ ನುಡಿಸುತಲಿ ಎದ್ದಿರಲು ಶಂಕರನು।
ನಮಿಸಿಹೆನು ನೋಡುತಲಿ ಶಿವನ ಮೊಗವ॥ 

ಪರಮಶಿವ ಪಾರ್ವತಿ ಜೊತೆಗೂಡಿ ನಗುತಿಹರು।
ಹರಸಿಹರು ಮಮತೆಯನು ತೋರಿಸುತ ನನಗೆ॥
ಕರಮುಗಿದು ನಾನಿಂದು ಭಕುತಿಯಲಿ ಹಾಡಿತಿರೆ।
ಸುರಿದಿಹುದು ಕಣ್ಣೀರು ಸಂತಸದಲಿ॥ 

ಹಣತೆಯನು ಹಚ್ಚುತ್ತ ದೀಪವನು ಬೆಳಗುತ್ತ।
ಗಣಪನಿಗೆ ನಮಿಸುತ್ತ ಬಾಗಿಹುದು ಶಿರವು॥ 
ಕಣಕಣದಿ ಹರಿದಿಹುದು ಭಕುತಿಯಾ ರಸಧಾರೆ। 
ಗುಣವಿರುವ ಮುಂಜಾವು - ಅನಿಕೇತನ॥ 22 ॥ 

Tuesday, March 02, 2021

ಚೌಪದಿ - 21

ಅದೇ ಬೆಳಕು ಅದೇ ಸೊಬಗು ಎಲ್ಲವೂ ಅದೇ।
ಅದೇ ಹೊಳಪು ಅದೇ ಸೊಗಸು ಸದಾ ಜೊತೆಗೆ॥
ಅದೇ ಇರಲಿ ಸದಾ ನಮಗೆ ಕಾಲಕಾಲವೂ।
ಅದೇ ಮುಂಜಾವಿರಲಿ - ಅನಿಕೇತನ॥ 21 ॥ 

Monday, March 01, 2021

ಚೌಪದಿ - 20

ಮೂಡಣದ ಆಗಸದಿ ಹೊಮ್ಮಿಹುದು ಚಿತ್ತಾರ।  
ಗೂಡಿನಾ ಹೊರಬಂದು ಇಣುಕಿಹನು ರವಿಯು॥ 
ನೋಡುತಿರೆ ಬಾನಿನಾ ಸೊಬಗನ್ನು ನಾವುಗಳು। 
ಹಾಡಿಹುದು ಮುಂಜಾವು - ಅನಿಕೇತನ॥ 20॥