ಅನಿಕೇತನ
ಮನದಲ್ಲಿ ಮೂಡುವ ಆಲೋಚನೆಗಳು, ಬರವಣಿಗೆ ರೂಪದಲ್ಲಿ...
My Blog List
Friday, July 30, 2021
ಚೌಪದಿ - 169
ನನಗೆಲ್ಲ ತಿಳಿದಿಹುದು ನಾನೆ ದೊಡ್ಡವನನೆಂದು।
ನನಗಿಂತ ಕಿರಿಯರಿಗೆ ದರ್ಪ ತೋರಿಸುತ॥
ನನಗೆ ಕೊಡಲೇಬೇಕು ಗೌರವವನೆಂದೊಡನೆ।
ನನಗೆ ನಾನೇ ಶತ್ರು - ಅನಿಕೇತನ॥ 169 ॥
Thursday, July 29, 2021
ಚೌಪದಿ - 168
ಕೂಸನ್ನು ಗಾಳಿಯಲಿ ಮೇಲೆತ್ತಿಯಾಡಿಸಲು।
ಮಾಸದೋ ನಗುವದುವು ಮುಖದಲ್ಲಿ ತಾನು॥
ಘಾಸಿಯನುಗೊಳಿಸುತ್ತ ಮಗುವನ್ನು ಬೆದರಿಸದೆ।
ಮೋಸವನು ಮಾಡದಿರೊ - ಅನಿಕೇತನ॥ 168 ॥
Tuesday, July 27, 2021
ಚೌಪದಿ - 167
ಪಿಸುಮಾತುಗಳನಾಡಿ ಮನದೊಳಗೆ ಮನೆಮಾಡಿ।
ಬಿಸಿಯಿಸಿರು ಬೆರೆಯುತಿರಲುಕ್ಕುವುದು ಮೋಹ॥
ಟಿಸಿಲೊಡೆದ ಮನಸುಗಳು ಬೆರೆಯುತಿರಲೊಂದಾಗಿ।
ಉಸಿರಾಟದಲ್ಲೊಲವೊ - ಅನಿಕೇತನ॥ 167 ॥
Sunday, July 18, 2021
ಚೌಪದಿ - 166
ಏನು ಮಾಡಿದರೇನು ನೆಮ್ಮದಿಯ ಕಾಣುವೆನೊ।
ಮೌನದಲ್ಲನುಭವಿಸಿ ಜೀವನದ ಸಾರ॥
ಯಾನವನು ಮಾಡುತಲಿ ಬದುಕನ್ನು ಸವೆಯುತ್ತ।
ನಾನು ಹೋಗುವೆ ದೂರ - ಅನಿಕೇತನ॥ 166 ॥
Friday, July 16, 2021
ಚೌಪದಿ - 165
ಗಮನಿಸುತಲೆಲ್ಲರನು ನೋಡಬೇಕಿದೆ ಜಗವ।
ಗಮನದಲ್ಲಿರಬೇಕು ಮನದಾಳದಲ್ಲಿ॥
ಗಮನವಿಡು ಸಮಯಕ್ಕೆ ಕಾಯುತ್ತ ಕುಳಿತು ನಿರ್-।
ಗಮಿಸು ನೀ ಸದ್ದಿರದೆ - ಅನಿಕೇತನ॥ 165 ॥
ಚೌಪದಿ - 164
ಕಾಣದಿಹ ಕೈಗಳನು ದೂಷಿಸುತ ಕೊರಗದಿರು।
ಕಾಣಿಸುವ ದೈವಗಳ ನೆನೆಯುತ್ತ ಬದುಕು॥
ಜಾಣನಾಗಿರು ನೀನು ಸರಿತಪ್ಪುಗಳನರಿತು।
ಕೋಣೆಯಲಿ ಕೂರದೆಯೆ - ಅನಿಕೇತನ॥ 164 ॥
ಚೌಪದಿ - 163
ಕಾಲಕ್ಕೆ ತಕ್ಕಂತೆ ನಡೆಯುತಿರೆ ಜನರೆಲ್ಲ।
ಸೋಲನ್ನು ಗೆಲ್ಲುವುದು ಬಲು ಸುಲಭವಂತೆ॥
ವಾಲುತಿರೆ ತಕ್ಕಡಿಯು ಭಾರವನು ತೂಗುತಲಿ।
ಪಾಲುಗಳು ಸಮಭಾಗಿ - ಅನಿಕೇತನ॥ 163 ॥
Wednesday, July 14, 2021
ಚೌಪದಿ - 162
ಉತ್ತಮನು ನೀನೆಂದು ಬೀಗದೆಯೆ ಬದುಕಿಬಿಡು।
ಪಿತ್ತವದು ತಲೆಯೊಳಗೆ ಹತ್ತುವುದು ನಿನಗೆ॥
ನೆತ್ತಿಯಲಿ ಕುಳಿತಿರಲು ಕೊಬ್ಬು ತಾ ಮದವೇರಿ।
ಹೊತ್ತುವುದೊ ಮೈಯೆಲ್ಲ - ಅನಿಕೇತನ॥ 162 ॥
ಚೌಪದಿ - 161
ಬೇಕಿರದ ಮಾತಾಡಿ ಮೂಲೆಯಾ ಗುಂಪಾಗಿ।
ಶೋಕಿಗಳ ಮಾಡುತಿಹ ಜನರನ್ನು ಬಲ್ಲೆ॥
ಮೂಕನಾಗಿಹೆನೆಂದು ತಪ್ಪನ್ನು ತಿಳಿಯದಿರು।
ಜೋಕೆಯಿಂದಿರಬೇಕೊ - ಅನಿಕೇತನ॥ 161 ॥
Tuesday, July 13, 2021
ಚೌಪದಿ - 160
ಹಾಯನಿಸಿ ನವೆಯಾದ ಚರ್ಮವನು ಮುಟ್ಟುತಿರೆ।
ಗಾಯವನು ಕೆರೆಯುತ್ತ ಹುಣ್ಣಾಗಿಸಿಹನು॥
ಬಾಯನ್ನು ಬಡಿಯುತ್ತ ನೋವಿನಲಿ ನರಳುತ್ತ।
ಬೇಯುವನು ಕೋಪದಲಿ - ಅನಿಕೇತನ॥ 160 ॥
Monday, July 05, 2021
ಚೌಪದಿ - 159
ಕಾಲಕಾಲಕ್ಕೆ ಮಳೆ ಬೆಳೆಯಾಗುತಿರೆ ಜಗದಿ।
ಪೋಲು ಮಾಡದೆ ಕಾಲ ದುಡಿಯುವರು ಜನರು॥
ಮೇಲು ಕೀಳೆನ್ನುವಾ ಬೇಧವನು ತೋರಿಸದ। ಕಾಲಕ್ಕೆ ನಾ ಮಣಿವೆ - ಅನಿಕೇತನ॥ 159 ॥
Saturday, July 03, 2021
ಚೌಪದಿ - 158
ವಾಲದಿರು ನೀನೆಂದು ಯಾರದೇ ಮಾತಿಗೂ।
ಕಾಲವೇ ಹೇಳುವುದು ಧರ್ಮವನು ನಮಗೆ॥
ಸೋಲು ಗೆಲುವುಗಳನ್ನು ಸಮನಾಗಿ ಕಾಣುವಾ।
ಕಾಲಕ್ಕೆ ನಮಿಸುವೆನು - ಅನಿಕೇತನ॥ 158 ॥
ಚೌಪದಿ - 157
ಮೂಲೆಯಲಿ ಕೂರದೆಯೆ ಸಾಧಿಸುವ ಜನರನ್ನು।
ಕಾಲವೇ ಕಾಯುವುದು ಚಿರಕಾಲ ಹರಸಿ॥
ಸಾಲವನು ಕೊಡದೆಯೇ ಲೆಕ್ಕವನು ತೀರಿಸುವ।
ಕಾಲಕ್ಕೆ ನಾ ಮಣಿವೆ - ಅನಿಕೇತನ॥ 157 ॥
ಚೌಪದಿ - 156
ಓಲೆಯನು ಬರೆದಿಟ್ಟು ನೆಮ್ಮದಿಯಲುಸಿರಾಡು।
ಮೂಲವನು ಹುಡುಕುತ್ತ ಕಳೆಯದಿರು ಕಾಲ॥
ಹೋಲಿಕೆಯ ಮಾಡದೆಯೆ ಬದುಕನ್ನು ತೋರಿಸುವ।
ಕಾಲಕ್ಕೆ ನಮಿಸಯ್ಯ - ಅನಿಕೇತನ॥ 156 ॥
Newer Posts
Older Posts
Home
Subscribe to:
Posts (Atom)