My Blog List

Friday, July 30, 2021

ಚೌಪದಿ - 169

ನನಗೆಲ್ಲ ತಿಳಿದಿಹುದು ನಾನೆ ದೊಡ್ಡವನನೆಂದು।
ನನಗಿಂತ ಕಿರಿಯರಿಗೆ ದರ್ಪ ತೋರಿಸುತ॥
ನನಗೆ ಕೊಡಲೇಬೇಕು ಗೌರವವನೆಂದೊಡನೆ। 
ನನಗೆ ನಾನೇ ಶತ್ರು - ಅನಿಕೇತನ॥ 169 ॥ 

Thursday, July 29, 2021

ಚೌಪದಿ - 168

ಕೂಸನ್ನು ಗಾಳಿಯಲಿ ಮೇಲೆತ್ತಿಯಾಡಿಸಲು। 
ಮಾಸದೋ ನಗುವದುವು ಮುಖದಲ್ಲಿ ತಾನು॥ 
ಘಾಸಿಯನುಗೊಳಿಸುತ್ತ ಮಗುವನ್ನು ಬೆದರಿಸದೆ। 
ಮೋಸವನು ಮಾಡದಿರೊ - ಅನಿಕೇತನ॥ 168 ॥ 

Tuesday, July 27, 2021

ಚೌಪದಿ - 167

ಪಿಸುಮಾತುಗಳನಾಡಿ ಮನದೊಳಗೆ ಮನೆಮಾಡಿ। 
ಬಿಸಿಯಿಸಿರು ಬೆರೆಯುತಿರಲುಕ್ಕುವುದು ಮೋಹ॥ 
ಟಿಸಿಲೊಡೆದ ಮನಸುಗಳು ಬೆರೆಯುತಿರಲೊಂದಾಗಿ। 
ಉಸಿರಾಟದಲ್ಲೊಲವೊ - ಅನಿಕೇತನ॥ 167 ॥ 

Sunday, July 18, 2021

ಚೌಪದಿ - 166

ಏನು ಮಾಡಿದರೇನು ನೆಮ್ಮದಿಯ ಕಾಣುವೆನೊ। 
ಮೌನದಲ್ಲನುಭವಿಸಿ ಜೀವನದ ಸಾರ॥ 
ಯಾನವನು ಮಾಡುತಲಿ ಬದುಕನ್ನು ಸವೆಯುತ್ತ।  
ನಾನು ಹೋಗುವೆ ದೂರ - ಅನಿಕೇತನ॥ 166 ॥ 

Friday, July 16, 2021

ಚೌಪದಿ - 165

ಗಮನಿಸುತಲೆಲ್ಲರನು ನೋಡಬೇಕಿದೆ ಜಗವ। 
ಗಮನದಲ್ಲಿರಬೇಕು ಮನದಾಳದಲ್ಲಿ॥ 
ಗಮನವಿಡು ಸಮಯಕ್ಕೆ ಕಾಯುತ್ತ ಕುಳಿತು ನಿರ್-। 
ಗಮಿಸು ನೀ ಸದ್ದಿರದೆ - ಅನಿಕೇತನ॥ 165 ॥