My Blog List

Tuesday, February 03, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೫

ಪರ್ಲಿಯ ವೈದ್ಯನಾಥ.

ಎಲ್ಲಿದೆ?
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಚಿಕ್ಕಗ್ರಾಮ ಪರ್ಲಿ.
ಮಹಾಭಾರತದ ಪ್ರಸಿದ್ಧ ಕುಂತೀಪುರವೇ ಇದು ಎಂದು ನಂಬಿಕೆ.
ಅಮೃತ ಮಥನದ ಸಂದರ್ಭದಲ್ಲಿ ಸೃಷ್ಟಿಯಾದ ಹದಿನಾಲ್ಕು ರತ್ನಗಳಲ್ಲಿ ಈ ಲಿಂಗವೂ ಒಂದು ಎಂಬುದು ಪ್ರತೀತಿ.
ರಾವಣಾಸುರನು ಪರಮಶಿವನನ್ನು ಒಲಿಸಿಕೊಳ್ಳಲುಇಲ್ಲಿ ತಪಸ್ಸು ಮಾಡಿ ತನ್ನ ಶಿರವನ್ನೇ ಅರ್ಪಿಸಿದನಂತೆ.
ಕ್ರಿ. ಶ. ೧೭೦೬ರಲ್ಲಿ ಅಹಲ್ಯಾದೇವಿ ಹೋಳ್ಕರ್ ಈ ಅಪೂರ್ವ ಲಿಂಗವನ್ನು ಪತ್ತೆ ಮಾಡಿದಳು.
ನಂತರ ಪೇಶ್ವೆ ನಾನಾರಾವ್ ದೇಶಪಾಂಡೆ ಇಲ್ಲಿ ಭವ್ಯವಾದ ದೇವಸ್ಥಾನವನ್ನು ಕಟ್ಟಿಸಿದನು.

ದೇವಾಲಯದ ಸ್ವರೂಪ, ಭೇಟಿ ನೀಡುವ ಸಮಯ.
ಬೆಟ್ಟದ ಮೇಲಿರುವ ವೈದ್ಯನಾಥ ದೇವಸ್ಥಾನದಲ್ಲಿ ಶಿವಲಿಂಗ ೧೧ ಅಂಗುಲ ಎತ್ತರವಿದ್ದು, ಮೇಲೆ ಉಂಗುಷ್ಟಾಕಾರದ ಗುಳಿ ಇದೆ. ಇದು ರಾವಣನ ಉಂಗುಷ್ಟದ ಗುರುತು ಎನ್ನಲಾಗುತ್ತದೆ. ಹತ್ತಿರದಲ್ಲೇ ರಾಮ ರಾಜೇಶ್ವರ ಮಹದೇವ ದೇವಸ್ಥಾನವೂ ಇದೆ.
ಪರ್ಲಿ ಶೈವ ಕ್ಷೇತ್ರವಾದಂತೆ, ವೈಷ್ಣವ ಕ್ಷೇತ್ರವೂ ಹೌದು. ಇಲ್ಲಿ ಹರಿಹರ ತೀರ್ಥವಿದೆ.
ಭಕ್ತ ಮಾರ್ಕಂಡೇಯ ಇಲ್ಲಿ ತಪಸ್ಸು ಮಾಡಿದನೆಂಬ ಕತೆ ಇರುವಂತೆ, ಪ್ರಸಿದ್ಧವಾದ ಸತ್ಯವಾನ್-ಸಾವಿತ್ರಿಯರ ಕತೆ ಕೂದ ಇಲ್ಲಿಯೇ ನಡೆದದ್ದು ಎಂದು ನಂಬಲಾಗಿದೆ.
ಹತ್ತಿರದ ನಾರಾಯಣ ಪರ್ವತದಲ್ಲಿ ಸಾವಿತ್ರಿ ನೆಟ್ಟದ್ದು ಎಂದು ನಂಬಲಾದ ವಟವೃಕ್ಷವೂ ಇದೆ.
ಇಲ್ಲಿ ವಿಶಿಷ್ಟವಾದ ಗಣಪತಿ ವಿಗ್ರಹವಿದೆ.
ವೈದ್ಯನಾಥ ಲಿಂಗಕ್ಕೆ ಪ್ರತೀ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ.
ಚೈತ್ರ ಪಾಡ್ಯ (ಯುಗಾದಿ), ವಿಜಯದಶಮಿ, ತೃಪ್ತಿ ಪೂರ್ಣಿಮಾ (ಭಾರತ ಹುಣ್ಣಿಮೆ), ಮಹಾಶಿವರಾತ್ರಿಗಳಂದು ವಿಶೇಷ ಪೂಜೆಗಳಿರುತ್ತವೆ.
ಈ ಶಿವಲಿಂಗಕ್ಕೆ ಬಿಲ್ವಪತ್ರದಂತೆ, ತುಳಸೀ ಕೂಡ ಪವಿತ್ರವಾಗಿರುವುದೊಂದು ವಿಶೇಷ.

ಸೇರುವ ಮಾರ್ಗ.
ಮುಂಬೈಯಿಂದ ೫೧೭ ಕಿ. ಮೀ.
ಔರಂಗಾಬಾದ್ ಮಾರ್ಗವಾಗಿ ಪರ್ಲಿ ವೈಜನಾಥ ರೈಲು ನಿಲ್ದಾಣಕ್ಕೆ ಬರಬೇಕು.
ಅಲ್ಲಿಂದ ೨ ಕಿ. ಮೀ. ರಸ್ತೆ ಮಾರ್ಗ. ವಾಹನ ಸೌಕರ್ಯ ಇದೆ.
ಹೆಚ್ಚಿನ ಭಕ್ತರು ನಡೆದೇ ಈ ಮಾರ್ಗ ಕ್ರಮಿಸುತ್ತಾರೆ.

ವಸತಿ.
ದೇವಸ್ಥಾನದ ಅಧಿಕೃತ ವಸತಿಗೃಹ ಮಾತ್ರ ಇಲ್ಲಿ ಇರುವ ವ್ಯವಸ್ಥೆ.
ಪರ್ಲಿ ನಿಲ್ದಾಣದಲ್ಲಿ ಹೋಟೆಲುಗಳಿವೆ.
ಹತ್ತಿರದ ನಂದೇಡಿನಲ್ಲೂ ಉಳಿದುಕೊಳ್ಳಬಹುದು.

---------------------
ಚಿತ್ರ ಕೃಪೆ: shaivam.org