ಎಲ್ಲಿದೆ?
ಮಧ್ಯಪ್ರದೇಶದ ಪರ್ವತ ಶ್ರೇಣಿಯಲ್ಲಿ, ನರ್ಮದಾ ನದಿಯ ತೀರದಲ್ಲಿದೆ.
ಮಾಮಲ್ಲೇಶ್ವರ ದ್ವೀಪ ಮತ್ತು ನದಿ "ಓಂ"ಕಾರದ ಮಾದರಿಯಲ್ಲಿರುವುದರಿಂದ ಇದಕ್ಕೆ ಓಂಕಾರೇಶ್ವರ ಎಂದು ಹೆಸರು.
ಇಡೀ ಆವರಣದಲ್ಲಿ ಕೋಟಿ ತೀರ್ಥಗಳಿವೆಯಂತೆ.
ಈ ಕ್ಷೇತ್ರಕ್ಕೆ ಮಾಂದಾತ ಎಂಬ ಹೆಸರೂ ಇದೆ.
ಸ್ಥಳಪುರಾಣ.
ರಾಕ್ಷಸರ ನಾಶಕ್ಕಾಗಿ ಶಿವನು ಈ ರೂಪ ತಳೆದನೆಂಬುದು ಪುರಾಣ ಪ್ರತೀತಿ. ಮಾಂದಾತನೆಂಬ ಅರಸ ಶಿವನನ್ನು ಒಲಿಸಿ ಇಲ್ಲಿ ನೆಲೆಗೊಳ್ಳುವಂತೆ ಮಾಡಿದನೆಂಬ ಕತೆಯೂ ಇದೆ.
ಈ ಕ್ಷೇತ್ರಕ್ಕೆ ಮಾಂದಾತ ಎಂಬ ಹೆಸರು ಬರಲು ಇದೊ ಕಾರಣ ಎಂದು ನಂಬಿಕೆ.
ಕ್ರಿ.ಶ. ೧೦೬೩ರಲ್ಲಿ ಉದಯಾದಿತ್ಯನೆಂಬ ರಾಜ ಇದನ್ನು ಸ್ಥಾಪಿಸಿದನೆಂದ್ಬುದು ಚಾರಿತ್ರಿಕ ದಾಖಲೆ. ಸಂಸ್ಕೃತ ಕವಿ ಪುಷ್ಪದಂತ ಇಲ್ಲಿ ಕಾವ್ಯರಚನೆ ಮಾಡಿದನಂತೆ.
ಇಂದಿಗೂ ಆತ ರಚಿಸಿದನೆಂದು ನಂಬಲಾದ ’ಶಿವ ಮಹಾಸ್ತೋತ್ರ’ ಕೆತ್ತಲ್ಪಟ್ಟಿದೆಯಂತೆ.
ಪೇಶ್ವೆ ಬಾಜಿರಾವ್ ಕಾಲದಲ್ಲಿ ಈ ದೇವಸ್ಥಾನದ ಅಭಿವೃದ್ಧಿ ನಡೆಯಿತು. ದೇಗುಲದ ಸದ್ಯದ ಸ್ವರೂಪವನ್ನು ಕ್ರಿ. ಶ. ೧೧೯೫ರಲ್ಲಿ ರಾಜ ಭರತ್ ಸಿಂಗ್ ಚೌಹಾಣ್ ನೀಡಿದನು.
ನರ್ಮದೆಯ ಸುಂದರನೋಟ, ದಡಗಳ ಮಧ್ಯೆ ಸೇತುವೆ, ಒಂದು ಕ್ಷಣ ಹಾಗೇ ನಿಂತು ನೋಡಿದರೆ ಪರ್ವತ ಶ್ರೇಣಿ, ನದಿಯ ಗುಂಟ ಹಲವಾರು ದೇಗುಲಗಳ ಶಿಖರಗಳ ಪಡಿಯಚ್ಚು ನರ್ಮದೆಯಲ್ಲಿದೆ.
ನಾವು ಈಗ ಸಾಗುವುದು ಓಂಕಾರೇಶ್ವರನೆಡೆಗೆ.
ಒಂದು ದಡ ಬ್ರಹ್ನಪುರಿ, ಅತ್ತಲಿನದು ಶಿವಪುರಿ. ನದಿಯಿಂದ ೨೫೦ಅಡಿ ಎತ್ತರದಲ್ಲಿ ದೇವಾಲಯವಿದ್ದರೂ ನರ್ಮದೆ ನಿರಂತರ ಶಿವನ ಪಾದ ತೊಳೆಯುತ್ತಾಳಿಲ್ಲಿ.
ಹಿಂಭಾಗದಲ್ಲೇ ಪಾರ್ವತಿದೇವಿ ವಿರಾಜಮಾನಳಾಗಿದ್ದಾಳೆ. ಭವ್ಯ ದೇಗುಲದ ಪಾವಟಿಗೆ ಏರುತ್ತಾ ಅತ್ತ ಇತ್ತ ಕಣ್ಣು ಹಾಯಿಸಿದರೆ ಶಿಲ್ಪ ಚಾತುರ್ಯ ಮನತುಂಬುತ್ತದೆ.
ಸನಿಹದಲ್ಲೇ ಪುರಾತನ ಓಂಕಾರೇಶ್ವರ ದೇವಾಲಯವೂ ಇದೆ. ಇದಕ್ಕೆ ಹಿನ್ನೆಲೆಯಾದ ಕಥೆಯ ಪ್ರಕಾರ ’ದೇವತೆಗಳನ್ನು ಸೋಲಿಸಿ ವಿಜಯ ಪಡೆದ ರಾಕ್ಷಸರು ಲೋಕ ಕಂಟಕರಾದಾಗ ದೇವತೆಗಳು ಶಿವನನ್ನು ಇಲ್ಲಿ ಆರಾಧಿಸಿ ಅತಿಬಲ ಪಡೆದು ವಿಜೃಂಭಿಸಿದರಂತೆ. ಆತನೇ ಈ "ಓಂಕಾರೇಶ್ವರ" ಎಂದು ನಂಬಿಕೆ.
ಮಗದೊಂದೆಡೆ ’ಅಗಸ್ತ್ಯ ಮಹರ್ಷಿಯೂ ತನ್ನ ಪ್ರಿಯ ಶಿಷ್ಯ ವಿಂಧ್ಯನ ಆಸೆಯನ್ನು ಮನ್ನಿಸಲು ಶಿವನನ್ನು ಪ್ರಾರ್ಥಿಸಿದಾಗ... ವಿಂಧ್ಯನು ಪೂಜಿಸುತ್ತಿದ್ದ ಲಿಂಗದಲ್ಲಿ ನೆಲೆಸಿ ಪ್ರಣವ ಸ್ವರೂಪಿ, ಎಂದರೆ ಓಂಕಾರರೂಪಿಯಾಗಿ ಕಂಡನಂತೆ. ಅದೇ ಈ ’ಓಂಕಾರೇಶ್ವರ’. ಇದಕ್ಕೆ ಧಾರೇಶ್ವರ, ಅಮರೇಶ್ವರ ಎಂಬ ಹೆಸರೂ ಇದೆ.’ ಎಂಬ ಮಾತು ಕೇಳಿಬರುತ್ತವೆ.
ದೇವಸ್ಥಾನದ ಸ್ವರೂಪ, ಪ್ರಮುಖ ಉತ್ಸವ.
ಇದು ೧೨ ಅಂತಸ್ತಿನ ಶಿಲಾ ದೇವಾಲಯ. ಕೈಸಾಲೆ ಮತ್ತು ಕಂಬಗಳಿಂದ ಅಲಂಕೃತವಾಗಿದೆ. ಇಲ್ಲಿ ಜ್ಯೋತಿರ್ಲಿಂಗದ ೨ ಸ್ವರೂಪಗಳಿವೆ. ಒಂದು ಓಂಕಾರೇಶ್ವರ, ಇನ್ನೊಂದು ಅಮರೇಶ್ವರ. ಇಲ್ಲಿ ಬೃಹತ್ ಪ್ರಮಾಣದ ಹಸಿರು ಬಣ್ಣದ ನಂದಿಯ ಶಿಲಾವಿಗ್ರಹವಿದೆ. ಹತ್ತಿರದಲ್ಲೇ ವಿಷ್ಣು, ವರಾಹ, ಚಾಮುಂಡಿ ವಿಗ್ರಹಗಳಿವೆ. ಚಾಮುಂಡಿ ದೇವಿಗೆ ಹತ್ತು ಕೈಗಳಿದ್ದು, ಕಪಾಲಗಳಿಂದ ಅಲಂಕೃತವಾಗಿದ್ದಾಳೆ. ಒಟ್ಟು ೧೮.೫ಅಡಿ ಎತ್ತರದ ದೇವಿಯ ಎದೆಯ ಮೇಲೆ ಬೃಹದಾಕಾರದ ಚೇಳು ಮತ್ತು ಬಲಗಡೆಯಲ್ಲಿ ಇಲಿ ಇದೆ. ಕಾರ್ತಿಕ ಪೂರ್ಣಿಮೆಯಂದು ವಿಶೇಷ ರಥೋತ್ಸವ ನಡೆಯುತ್ತದೆ. ಶಿವನಿಗೆ ಪ್ರತಿನಿತ್ಯವೂ ಕಡಲೇಬೇಳೆ ನೈವೇದ್ಯ, ಶರನ್ನವರಾತ್ರಿ ವಿಶೇಷ ಉತ್ಸವಗಳಿರುತ್ತದೆ.
ಸೇರುವ ಮಾರ್ಗ.
ಓಂಕಾರೇಶ್ವರ, ರೈಲು ನಿಲ್ದಾಣದಿಂದ ೧೨ ಕಿ. ಮೀ. ದೂರದಲ್ಲಿದೆ.
ಇಂದೋರ್, ಖಾಂಡ್ವ, ಪ್ರಧಾನ ರೈಲು ಮಾರ್ಗದಲ್ಲಿ ಓಂಕಾರೇಶ್ವರವಿದೆ.
ಉಜ್ಜಯನಿ ಮತ್ತು ಖಾಂಡ್ವದಿಂದ ಸಾಕಷ್ಟು ಬಸ್ಸುಗಳಿವೆ.
ವಸತಿ.
ಮಧ್ಯಪ್ರದೇಶದ ಅಧಿಕೃತ ವಸತಿಗೃಹ ಓಂಕಾರೇಶ್ವರ ಲಭ್ಯ.
ಮಾಧವಾಶ್ರಮ, ಗಂಗೋತ್ರಿ ಉತ್ತಮ ಸೇವೆ ನೀಡುವ ವಸತಿಗೃಹಗಳು.
-----------------------------
ಚಿತ್ರ ಕೃಪೆ: indiaplaces.com
No comments:
Post a Comment
ನನ್ನ ನಾನೇ ಕಂಡೆ, ಚೆಲುವ ಹತ್ತಿರ ಕರೆದೆ,
ಕಂಡ ಚೆಲುವನು ಹಾಡಿನಲ್ಲಿ ಬರೆದೆ.
ಬಾಳ ದುಗುಡಗಳನ್ನು ನಾನು ಒಮ್ಮೆಲೆ ತೊರೆದೆ,
ಸಂತಸವೆ ನಾನಾಗಿ ಹಿಗ್ಗಿ ಮೆರೆದೆ.