ಕಲೋಸಿಯಮ್
ಗ್ರೀಕರು ಬಳಕೆಗೆ ತಂದ ಆಂಫಿಥಿಯೇಟರುಗಳು ರೋಮನ್ನರ ಕಾಲದಲ್ಲಿಯೂ ಮುಂದುವರೆದವು. ಆದರೆ ರೋಮನ್ನರ ನಾಗರಿಕತೆಯ ಉಚ್ಛ್ರಾಯ ಕಾಲದಲ್ಲಿ ಅವು ಕಲೋಸಿಯಮ್ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದವು. ಆಗ ಪ್ರತಿಯೊಂದು ದೊಡ್ಡ ನಗರದಲ್ಲಿಯೂ ಕಲೋಸಿಯಮ್ ಇದ್ದಿರಬಹುದಾದರೂ, ರಾಜಧಾನಿಯಲ್ಲಿ ಕಲೋಸಿಯಮ್ ಸಹಜವಾಗಿಯೇ ಚಕ್ರವರ್ತಿಯ ಅಂತಸ್ತನ್ನು ಸಾರುವಂತೆ ಭವ್ಯವಾಗಿ ಇರಬೇಕಾಗುತ್ತಿತ್ತು. ಗ್ರೀಕರ ಕಾಲದಲ್ಲಿ ಸಂಗೀತ, ನಾಟಕ ಸ್ಪರ್ಧೆಗಳಿಗೆ ಕ್ರೀಡೆ, ಮನೊರಂಜಗಳಿಗೆ, ವಸಂತೋತ್ಸವಗಳಿಗೆ ಬಳಕೆಯಾದ ಆಂಫಿಥಿಯೇಟರುಗಳು, ರೋಮನ್ನರ ಕಾಲಕ್ಕೆ ಕಲೋಸಿಯಮ್ಮುಗಳಾಗಿ ಗುಲಾಮರನ್ನೂ, ಖಡ್ಗ ಮಲ್ಲರುಗಳನ್ನೂ, ಸ್ಪರ್ಧೆ, ಕ್ರೌರ್ಯ, ಹಿಂಸೆ, ಪೀಡನೆ, ದೌರ್ಜನ್ಯಗಳಿಗೆ ಗುರಿಪಡಿಸುವುದಕ್ಕೆ ಕುಖ್ಯಾತಿಯೆನಿಸಿದವು.
ರೋಮ್ ನಗರದಲ್ಲಿ ಎಸ್ಕೈಲಿನ್ ಮತ್ತು ಸೇಲಿಯನ್ ಬೆಟ್ಟಗಳ ಮಧ್ಯೆ ಪುರಾತನ ರೋಮನ್ ಕಲೋಸಿಯಮ್ಮಿನ ಅವಶೇಷವಿದೆ. ಪ್ರತಿದಿನ ಬಹುಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಇದು ಇಂದಿನ ಅಧುನಿಕ ಮಾನಕಗಳ ದೃಷ್ಟಿಯಿಂದ ಸಹ ಬೆರಗುಗೊಳಿಸುವಂತಿದೆ. ಅಂಡಾಕಾರದಲ್ಲಿರುವ ಇದು ೧೮೮ ಮೀ. ಉದ್ದ, ೧೫೬ ಮೀ. ಅಗಲ ಹಾಗೂ ೫೨೭ ಮೀ. ಸುತ್ತಳತೆಯದ್ದಾಗಿದೆ. ಕೇಂದ್ರ ರಂಗ ಸಹ ಅಂಡಾಕಾರವಾಗಿದ್ದು, ೮೭ ಮೀ. ಉದ್ದ, ಮತ್ತು ೭೪ ಮೀ. ಅಗಲವಾಗಿದೆ. ಹೊರಭಾಗದ ರಚನೆ ಒಂದು ಕಡೆ ಮಾತ್ರ ಉಳಿದಿದ್ದು ೫೭ ಮೀ. ಎತ್ತರವಾಗಿದೆ. ಅದು ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಮೂರನೆಯ ಮಹಡಿಯವರೆಗೆ ಕಮಾನು ಬಾಗಿಲುಗಳಿವೆ.
ಈಗ ಉಳಿದಿರುವ ಕಲೋಸಿಯಮ್ಮಿನ ನಿರ್ಮಾಣ ಕಾರ್ಯ ಬಹುಶಃ ಕ್ರಿ. ಶ ೭೦ರಲ್ಲಿ ಪ್ರಾರಂಭವಾಯಿತು. ಅದಕ್ಕೆ ಮುಂಚೆ ಇದ್ದ ಕಲೋಸಿಯಮ್ಮನ್ನು ಮರದಿಂದ ನಿರ್ಮಿಸಲಾಗಿದ್ದು ಕ್ರಿ. ಶ. ೬೪ರಲ್ಲಿ ಬೆಂಕಿಯಿಂದ ಸಂಪೂರ್ಣ ನಾಶವಾದುದರಿಂದ ಹೊಸ ಕಲೋಸಿಯಮ್ ನಿರ್ಮಾಣ ಅಗತ್ಯವಾಗಿತ್ತು. ಹತ್ತು ವರ್ಷಗಳ ಕಾಲ ನಡೆದ ಅದರ ನಿರ್ಮಾಣಕಾರ್ಯದಲ್ಲಿ ರೋಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತು ಶಿಲ್ಪಿಗಳು, ರೋಮಿನ ಕಾರ್ಮಿಕರ ಜೊತೆಗೆ ಸಾವಿರಾರು ಮಂದಿ ಗುಲಾಮರು ಭಾಗವಹಿಸಿದ್ದರು. ಚಕ್ರವರ್ತಿ ಟಾಇಟಸ್ ಅದನ್ನು ಉದ್ಘಾಟಿಸಿದ.
ಚಕ್ರವರ್ತಿಯ ಪರಿವಾರಕ್ಕೆ ತೀರಾ ಹತ್ತಿರದಿಂದ ಕ್ರೀಡೆಗಳನ್ನು ನೋಡಿ ಆನಂದಿಸಲು ವಿಶೇಷ ಆಸನಗಳು, ವಿದೇಶಿ ಅತಿಥಿಗಳಿಗೆ, ಸೈನ್ಯಾಧಿಕಾರಿಗಳಿಗೆ, ಗಣ್ಯ ನಾಗರಿಕರಿಗೆ, ಅವರವರ ಅಂತಸ್ತಿಗೆ ತಕ್ಕಂತೆ ಆಸನಗಳು ಇದರಲ್ಲಿತ್ತು. ಒಂದೇ ಬಾರಿಗೆ ನಲವತ್ತೈದು ಸಾವಿರ ಮಂದಿ ಕುಳಿತು, ಐದು ಸಾವಿರ ಬಡ ನಾಗರಿಕರು ನಿಂತು ನೋಡುವ ಸೌಕರ್ಯವಿತ್ತು. ಇದಲ್ಲದೆ, ಕ್ರೀಡೆಗಳಲ್ಲಿ ಭಾಗವಹಿಸುವವರು ರಂಗ ಪ್ರವೇಶಿಸಲು, ಪಂದ್ಯಾಟಗಳಲ್ಲಿ ಪ್ರಾಣ ತೆತ್ತವರ ಕಳೇಬರವನ್ನು ಕೂಡಲೇ ಸಾಗಿಸುವ ಏರ್ಪಾಟುಗಳೂ ಇದ್ದವು. ಮತ್ತೊಂದು ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪ್ರೇಕ್ಷಕರ ಮನರಂಜಿಸಲು ಕೋಡಂಗಿಗಳಿಗೆ ಅವಕಾಶ, ನೆಲಮಾಳಿಗೆಗಳಲ್ಲಿ ಕ್ರೂರ ಮೃಗಗಳಿಗಾಗಿ ಪಂಜರಗಳು, ಪಂಜರಗಳ ಬಾಗಿಲು ತೆರೆಯಲು ಒಂದು ನಿಯಂತ್ರಣ ಕೇಂಡ್ರ, ಇತ್ಯಾದಿ ವ್ಯವಸ್ಥೆಗಳೂ ಇದ್ದವು.
ಆಗ ಪರಿಚಿತವಾಗಿದ್ದ ಕ್ರೀಡೆಗಳ ಪೈಕಿ ಖಡ್ಗಮಲ್ಲರುಗಳ ಕದನ ಬಹಳ ಜನಪ್ರಿಯವಾಗಿತ್ತು. ಇಂಥ ಜನಪ್ರಿಯ ಖಡ್ಗಮಲ್ಲರುಗಳಲ್ಲಿ ಗುಲಾಮನಾಗಿದ್ದ ಸ್ಪಾರ್ಟಕಸ್ ಕೂಡ ಒಬ್ಬ. ವೈಯಕ್ತಿಕ ಸಾಹಸದ ಕ್ರೀಡೆಯನ್ನು ರೋಮನರು ಕ್ರೂರ ಕ್ರೀಡೆಯಾಗಿ ಮಾರ್ಪಡಿಸಿದ್ದರು. ಅಂದಿನ ಜನರೂ ಇದನ್ನು ನೋಡುವುದಕ್ಕೆ ಒಗ್ಗಿ ಹೋಗಿದ್ದರು!
ಕಲೋಸಿಯಮ್ಮಿನ ಉದ್ಘಾಟನೆಗೆ ಮೊದಲು ನೂರು ದಿನಗಳ ಕಾಲ ನಡೆದ ಮೋಜಿನ ಕ್ರೀಡೆಗಳ ಸಂದರ್ಭದಲ್ಲಿ ಸಾವಿರಾರು ಗುಲಾಮರ, ಮೃಗಗಳ ಹತ್ಯೆ ನಡೆಯಿತು. ಗುಲಾಮರನ್ನು ಮಾತ್ರವಲ್ಲದೇ ಅಪರಾಧಿಗಳನ್ನೂ, ಸೈನ್ಯ ಸೇವೆ ತೊರೆದವರನ್ನೂ, ಮತ್ತು ಇನ್ನೂ ಹಲವು ಖೈದಿಗಳನ್ನೂಶಿಕ್ಷಿಸುವ ಉಪಾಯವಾಗಿ ಸಹ ಖಡ್ಗಮಲ್ಲರ ಕ್ರೀಡೆಯನ್ನು ಬಳಸಲಾಗುತ್ತಿತ್ತು. ಕೆಲವೊಮ್ಮೆ ಖೈದಿಗಳು ತಮ್ಮ ತಮ್ಮಲ್ಲಿಯೇ ಹೋರಾಡುತ್ತ ಮಿತ್ರರನ್ನು ಕೊಲ್ಲಬೇಕಾದ ಪರಿಸ್ತಿಥಿಯೂ ಉಂಟಾಗುತ್ತಿತ್ತು. ಮುಂದೆ ಕ್ರಿ. ಶ. ೪೦೪ರಲ್ಲಿ ಈ ಕ್ರೂರ ಕ್ರೀಡೆಯನ್ನು ಅಧಿಕೃತವಾಗಿ ರದ್ದುಪಡಿಸಲಾಯಿತು.
ಚಿತ್ರ ಕೃಪೆ: ಇಲ್ಲಿಂದ
tumba chennagide explaination. mai jhummentu omme! naanu 2 tingala hinde hogidde idannanu nodalu, omme haleyadannella yochisi noduttiruvaaga asahyavoo annisitu.
ReplyDeleteಉತ್ತಮ ಮಾಹಿತಿ
ReplyDeleteಒಳ್ಳೆಯ ಮಾಹಿತಿಯನ್ನು ಹೊತ್ತ ಲೇಖನ...ವಿವರಣೆ ಚನ್ನಾಗಿದೆ!!
ReplyDeleteಒಳ್ಳೆಯ ವಿವರಣೆ ಕೊಟ್ಟಿದ್ದೀರಿ ಅನಿಲ್....
ReplyDeleteಶ್ಯಾಮಲ
ಅನಿಲ್,
ReplyDeleteತುಂಬಾ ಚೆನ್ನಾಗಿದೆ ವಿವರಣೆ, ನಾನೂ ೩ ತಿಂಗಳ ಹಿಂದೆ ರೋಮ್ ಗೆ ೫ ದಿನಗಳ ಕಾಲ ಹೋಗಿದ್ದೆ. ಅಲ್ಲಿನ ಅನುಭವಗಳನ್ನು ಸದ್ಯದಲ್ಲಿಯೇ ಬರೆಯುತ್ತೇನೆ.
ಅನಿಲ್,
ReplyDeleteಕಲೋಸಿಯಮ್ ಬಗ್ಗೆ ತುಂಬಾ ಚೆನ್ನಾದ ವಿವರಣೆಯನ್ನು, ಮಾಹಿತಿಯನ್ನು ಒದಗಿಸಿದ್ದೀರಿ....ಧನ್ಯವಾದಗಳು ಅದಕ್ಕೆ ತಕ್ಕಂತೆ ಸೊಗಸಾದ ಫೋಟೊ...
@ಗೀತಾ, @ನಿರಂಜನ್, @ರೂಪಶ್ರೀ, @ಶ್ಯಾಮಲ, @ಗುರು, @ಶಿವು,
ReplyDeleteಧನ್ಯವಾದಗಳು..
-ಅನಿಲ್