ಕಲೋಸಸ್ ಪ್ರತಿಮೆ
ಯುದ್ಧದಲ್ಲಿ ಶತ್ರುವನ್ನು ಸೋಲಿಸಸಿದ ನೆನಪಿಗಾಗಿ ಗೆದ್ದ ರಾಜರು ವಿಜಯಸ್ತಂಭ ಸ್ಥಾಪಿಸುವುದು ಹಿಂದಿನ ಕಾಲದಿಂದಲೂ ಅನುಸರಿಸುತ್ತ ಬಂದಿರುವ ರೂಢಿ. ಇವು ಶಾಸನಗಳ ರೂಪದಲ್ಲಿಯೂ ಇವೆ. ಕರ್ನಾಟಕದ ವೀರಗಲ್ಲುಗಳು ನಮಗೆ ಪರಿಚಿತವಾಗಿವೆ.
ಹೀಗೊಂದು ವಿಜಯಸ್ತಂಭ ಅಪೂರ್ವವೂ, ಅದ್ಭುತವೂ ಆಗಿದ್ದು. ತಮ್ಮ ಕೀರ್ತಿಯನ್ನು ಶಾಶ್ವತಗೊಳಿಸುವಂತಿರಬೇಕು ಎಂಬ ಆಕಾಂಕ್ಷೆಯಿಂದ ಪುರಾತನ ರೋಡ್ಸ್ ದ್ವೀಪವಾಸಿಗಳು ವಿಜಯದ ಸ್ಮಾರಕವಾಗಿ ಬೃಹತ್ ಪ್ರತಿಮೆಯೊಂದನ್ನು ಸ್ಥಾಪಿಸಿದರು. ಅದು ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ಪ್ರಖ್ಯಾತವಾದ ಕಲೋಸಸ್ ಪ್ರತಿಮೆ.
ಈಗ ಗ್ರೀಸ್ ದೇಶಕ್ಕೆ ಸೇರಿರುವ ರೋಡ್ಸ್, ಮೆಡಿಟರೇನಿಯನ್ ದ್ವೀಪಗಳ ಪೈಕಿ ಒಂದಾಗಿದ್ದು, ಆಯಕಟ್ಟಿನ ಬಂದರಾಗಿತ್ತು. ಹಾಗಾಗಿ, ದ್ವೀಪದ ಮುಖ್ಯ ನಗರ ರೋಮನರ, ಪರ್ಶಿಯನರ, ಅರಬರ, ವೆನಿಷಿಯನರ, ತುರ್ಕರ (ಟರ್ಕಿ ದೇಶದವರು), ಹಾಗೆಯೇ, ಸೇಂಟ್ ಜಾನ್ಸ್ ಕ್ರೂಸೇಡಿಂಗ್ ನೈಟರ ಆಳ್ವಿಕೆಗೆ ಒಳಪಟ್ಟಿತ್ತು.
ಕ್ರಿ.ಪೂ. ಮೂರನೇ ಶತಮಾನದ ಅಂತ್ಯದ ವೇಳೆಗೆ ಮ್ಯಾಸಿಡೋನಿಯನ್ನರ ಭಾರಿ ಸೈನ್ಯ ರೋಡ್ಸ್ ದ್ವೀಪದ ಮೇಲೆ ದಾಳಿ ಮಾಡಿತು. ರೋಡ್ಸ್ ಜನರು, ಸಂಖ್ಯೆಯಲ್ಲಿ ಮ್ಯಾಸಿಡೋನಿಯನ್ನರಿಗಿಂತ ಕಡಿಮೆಯಾಗಿದ್ದರೂ, ಶೌರ್ಯದಿಂದ ಹೋರಾಡಿದರು. ಶತ್ರು ಸೈನ್ಯ ನಗರದ ಮೇಲೆ ಬಲವಾದ ಮುತ್ತಿಗೆ ಹಾಕಿತು. ರೋಡ್ಸ್ ಜನರು ಧೈರ್ಯಗುಂದಲಿಲ್ಲ. ಇಡೀ ಒಂದು ವರ್ಷ ನಡೆದ ಮುತ್ತಿಗೆ ಹಾಗೂ ಕದನದಲ್ಲಿ ಮ್ಯಾಸಿಡೋನಿಯನ್ನರ ಸೈನ್ಯ ಸೋತು ಹಿಮ್ಮೆಟ್ಟಿತು.
ಈ ವಿಜಯಕ್ಕೆ ಯೋಗ್ಯವಾದ ಸ್ಮಾರಕ ನಿರ್ಮಿಸುವ ಅಪೇಕ್ಷೆ ರೋಡ್ಸ್ ವಾಸಿಗಳದು. ದ್ವೀಪ ರಕ್ಷಣೆಗಾಗಿ ಹೋರಾಡಿದವರ ಪೈಕಿ ಚಾರೆಸ್ ಎಂಬ ಶಿಲ್ಪಿಯೂ ಇದ್ದ. ವಿಜಯ ಸ್ಮಾರಕ ನಿರ್ಮಾಣವನ್ನು ಆತನಿಗೆ ವಹಿಸಲಾಯಿತು. ಕಂಚಿನಲ್ಲಿ ತಯಾರಾದ ಆ ಪ್ರತಿಮೆಗಾಗಿ ಚಾರೆಸ್ ಮ್ಯಾಸಿಡೋನಿಯನ್ನರು ಬಿಟ್ಟು ಹೋಗಿದ್ದ ಯುದ್ಧ ಸಲಕರಣೆಗಳ ಲೋಹವನ್ನೇ ಬಳಸಿಕೊಂಡನು. ೩೨ ಮೀಟರ್ ಎತ್ತರದ, ಸುಮಾರು ೩೦೦ ಟನ್ ಭಾರದ ಕಲೋಸಸ ಪ್ರತಿಮೆಯ ನಿರ್ಮಾಣ ಪೂರ್ಣಗೊಳ್ಳಲು (ಕ್ರಿ. ಪೂ. ೨೯೨ ಇಂದ ಕ್ರಿ. ಪೂ. ೨೮೦ ವರೆಗೆ) ಹನ್ನೆರಡು ವರ್ಷಗಳು ಬೇಕಾಯಿತು. ಅದರ ಕೈಬೆರಳುಗಳು ಮನುಷ್ಯನಷ್ಟು ಉದ್ದವಿದ್ದವು.
ಪ್ರತಿಮೆ ನಿರ್ಮಾಣಗೊಂಡ ನಂತರ ಶಿಲ್ಪಿ ಚಾರೆಸನಿಗೆ ಅದು ಪ್ರಮಾಣಬದ್ಧವಾಗಿಲ್ಲ ಎನಿಸಿತು. ಅದರಿಂದಾಗಿ, ಸೂಕ್ಷ್ಮ ಪ್ರವೃತ್ತಿಯ ಚಾರೆಸ್ ಆತ್ಮಹತ್ಯೆ ಮಾಡಿಕೊಂಡನು. ಆದರೂ ಅಂದಿನ ಶಿಲ್ಪಿಗಳು ಪ್ರತಿಮೆ ಯಾವುದೇ ರೀತಿಯಿಂದಲೂ ಅತ್ಯಂತ ಪ್ರಮಾಣಬದ್ಧವಾಗಿದೆ ಎಂದು ಶ್ಲಾಘಿಸಿದರಲ್ಲದೇ, ಅದನ್ನು ಜಗತ್ತಿನ ಅದ್ಭುತಗಳಲ್ಲೊಂದೆಂದು ಸಾರಿದರು.
ಅದನ್ನು ನಿರ್ಮಿಸಿದ ಶಿಲ್ಪಿಯಂತೆಯೇ, ಪ್ರತಿಮೆಯದೂ ಅಲ್ಪಾಯುಷ್ಯವಾಗಿತ್ತು. ಅದರ ಸ್ಥಾಪನೆಯ ಐವತ್ತಾರು ವರ್ಷಗಳ ಬಳಿಕ ಸಂಭವಿಸಿದ ಭೂಕಂಪದಲ್ಲಿ ಕಲೋಸಸ್ ಪ್ರತಿಮೆ ಮುರಿದು ಚೂರುಚೂರಾಯಿತು. ಅದು ಮುರಿದು ಬಿದ್ದದ್ದನ್ನು ಕ್ರಿ. ಶ. ಒಂದನೆಯ ಶತಮಾನದಲ್ಲಿ ರೋಮನ್ ಇತಿಹಾಸಕಾರ ಪ್ಲಿನಿ ದಾಖಲುಗೊಳಿಸಿದ. ಮುಂದೆ ಏಳನೆಯ ಶತಮಾನದಲ್ಲಿ ಆ ದ್ವೀಪವನ್ನು ವಶಪಡಿಸಿಕೊಂದ ಅರಬರು ಕಲೋಸಸ್ ಪ್ರತಿಮೆಯ ಲೋಹದ ಚೂರುಗಳನ್ನು ಯಹೂದಿ ವರ್ತಕನೊಬ್ಬನಿಗೆ ಮಾರಿದರು.
ಆ ಪ್ರತಿಮೆಯ ಕಾಲಿನ ಕೆಳಗೆ ಹಡಗುಗಳು ತೂರಿಹೋಗುವಂತೆ ನಿರ್ಮಿಸಲಾಗಿತ್ತೆಂಬ ಪ್ರತೀತಿ ಇದೆ. ತರುವಾಯದ ಚಿತ್ರಕಾರರು ಆ ಪ್ರತಿಮೆ ಒಂದು ಎತ್ತರವಾದ ವೇದಿಕೆಯ ಮೇಲೆ ನಿಂತಿದ್ದಿರಬಹುದೆಂಬ ಊಹೆಯ ಮೇಲೆ ಅದರ ಚಿತ್ರ ರಚಿಸಿದರು.
ಆ ಕಾಲದಲ್ಲಿ ಪ್ರತಿಮೆಯ ಒಂದೊಂದು ಭಾಗವನ್ನು ಕಂಚಿನ ತಗಡುಗಳ ರೂಪದಲ್ಲಿ ತಯಾರಿಸಿ, ಅವುಗಳನ್ನು ಬೆಸೆಯಲು ಪ್ರತಿಯೊಂದು ಹಂತದ ಎತ್ತರಕ್ಕೆ ಅಟ್ಟ ಕಟ್ಟಿ ಕುಲುಮೆಗಳನ್ನು ಸ್ಥಾಪಿಸಿದ್ದ ಆ ಶಿಲ್ಪಿಯ ಕಾರ್ಯಕೌಶಲ್ಯ ಬೆರಗುಗೊಳಿಸುವುದಂತೂ ನಿಜ.
ಚಿತ್ರ ಕೃಪೆ: ಇಲ್ಲಿಂದ
ಅನಿಲ್,
ReplyDeleteಕಲೋಸಿಯಸ್ ಪ್ರತಿಮೆ ಫೋಟೊ ಹೈ ರೆಸಲ್ಯಾಷನ್ ಇರಬೇಕು ಅದಕ್ಕೆ ಬೇಗ open ಆಗಲಿಲ್ಲ. ಜೊತೆಗೆ ನೀವು ಅದರ ಬಗ್ಗೆ ಕೊಟ್ಟಿರುವ ವಿವರ ಮಾಹಿತಿ ಚೆನ್ನಾಗಿದೆ...
ಶಿವು,
ReplyDeleteಧನ್ಯವಾದಗಳು..
ಚಿತ್ರ ಈಗ ಸರಿಯಾಗಿದೆ ನೋಡಿ..
-ಅನಿಲ್