My Blog List

Tuesday, November 10, 2009

ಪಿಸಾ ಗೋಪುರ

ಪಿಸಾ ಗೋಪುರ

ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ್ಮಾಣ ಕ್ರಿ. ಶ. ೧೧೭೩ರಲ್ಲಿ ಪ್ರಾರಂಭವಾಗಿ ಕ್ರಿ. ಶ. ೧೩೫೦ರಲ್ಲಿ ಮುಕ್ತಾಯಗೊಂಡಿತು. ಅದರ ಸಮೀಪದಲ್ಲಿರುವ ಬ್ಯಾಪ್ಟಿಸ್ಟ್ರಿ ಇಗರ್ಜಿಯ ಗಂಟೆ ಗೋಪುರವಾಗಿ ಅದನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ ಅದನ್ನು ಹದಿಮೂರು ಅಂತಸ್ತಿನ ಗೋಪುರವಾಗಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಎಂಟನೆಯ ಮಹಡಿಯ ಕೆಲಸ ಪೂರ್ಣವಾಗುವ ವೇಳೆಗೆ ಅದು ಕೇಂದ್ರ ಅಕ್ಷದಿಂದ ಸುಮಾರು ೨.೧ ಮೀ. ಅಷ್ಟು ವಾಲಿದುದರಿಂದ ನಿರ್ಮಾಣವನ್ನು ಅಲ್ಲಿಗೇ‌ ನಿಲ್ಲಿಸಲಾಯಿತು. ನಿರ್ಮಾಣ ಅರ್ಧದಲ್ಲೇ ನಿಂತರೂ ಅದರ ಬಗ್ಗೆ ಆಕರ್ಷಣೆ ಕಡಿಮೆಯಾಗಲಿಲ್ಲ. ಇದು ಪ್ರತಿ ವರ್ಷ ಸುಮಾರು ೨ಸೆ. ಮೀ. ಅಷ್ಟು ವಾಲುತ್ತ, ಈಗ 'ಪಿಸಾ ವಾಲು ಗೋಪುರ' ಎಂದು ಪ್ರಖ್ಯಾತವಾಗಿದೆ.




ಇದು ಸುಮಾರು ೫೫.೮೬ ಮೀ (೧೮೩ ಅಡಿ, ೩ ಅಂಗುಲ) ಎತ್ತರವಾಗಿದೆ. ಇದರ ಅಡಿಪಾಯ ಕೇವಲ ಮೂರು ಮೀ. ಆಳ ಇರುವುದೇ ಅದು ವಾಲುವುದಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಾರೆ. ವಾಸ್ತವದಲ್ಲಿ, ಪಿಸಾ ಗೋಪುರ ನಿಂತಿರುವುದು ಗಟ್ಟಿ ಕಲ್ಲಿನ ನೆಲದ ಮೇಲಲ್ಲ, ಬದಲಾಗಿ ತೀರಾ ಜಾಳಾಗಿ ಸಂಚಯಗೊಂಡಿರುವ ಶಿಲಾಪದರದ ಮೇಲೆ. ಪಿಸಾ ಗೋಪುರ ವಾಲಲು ಇದೇ ಕಾರಣ ಎನ್ನುವವರೂ ಇದ್ದಾರೆ.

ಇಟಲಿಯ ಗಣಿತ ಶಾಸ್ತ್ರಜ್ಞ, ಖಗೋಳ ವಿಜ್ಞಾನಿ ಹಾಗು ಭೌತ ವಿಜ್ಞಾನಿ ಗೆಲಿಲಿಯೋ ಈ ಗೋಪುರದ ಮೇಲಿನಿಂದ ಬೇರೆ ಬೇರೆ ತೂಕದ ಎರಡು ಗುಂಡುಗಳನ್ನು ಕೆಳಕ್ಕೆ ಬೀಳಲು ಬಿಟ್ಟು, ಅವು ಏಕಕಾಲದಲ್ಲಿ ಭೂಮಿಯನ್ನು ತಲುಪಿದುದನ್ನು ತೋರಿಸಿದ ಎಂದು ಹೇಳಲಾಗಿದೆ.

ಈಗ ಅದು ಕೇಂದ್ರ ಅಕ್ಷದಿಂದ ೩.೯ ಮೀ. ಅಷ್ಟು ವಾಲಿರುವುದರಿಂದ, ಪಿಸಾ ಗೋಪುರ ಏರಿ ನಗರ ವೀಕ್ಷಿಸಲು ಯಾರಿಗೂ ಅನುಮತಿ ಇಲ್ಲ. ಆದರೂ ಅದು ವಾಲಿ ನಿಂತಿರುವ ದೃಶ್ಯವನ್ನು ಕಾಣಲು ಪ್ರವಾಸಿಗಳು ಬರುತ್ತಲೇ ಇದ್ದಾರೆ.

ಚಿತ್ರ ಕೃಪೆ: ವಿಕಿಪೀಡಿಯಾ

4 comments:

  1. ಅನಿಲ್ ಸರ್,
    ನಾನೂ ವರ್ಷದ ಮೊದಲ ಭಾಗದಲ್ಲಿ ಇದಕ್ಕೆ ಭೆಟ್ಟಿ ಕೊಟ್ಟಿದ್ದೆ, ಮನಮೋಹಕ ಗೋಪುರ.
    ನಿಮ್ಮ ಬರಹ ಆಪ್ತವಾಗಿದೆ

    ReplyDelete
  2. ಒಳ್ಳೆಯ ಮಾಹಿತಿಯುಕ್ತ ಲೇಖನ. ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿ ವಾಲುವಿಕೆಯನ್ನು ತಡೆಯಲಾಗಿದೆ ಎಂದು ಎಲ್ಲೋ ಓದಿದಿ ನೆನಪು.

    ReplyDelete
  3. ಎಲ್ಲರಿಗು ತುಂಬಾ ಧನ್ಯವಾದಗಳು..

    -ಅನಿಲ್

    ReplyDelete