My Blog List

Wednesday, February 10, 2010

ಗಣಪತಿಗೇ ಏಕೆ ಮೊದಲ ಪೂಜೆ?

ಗಣಪ.

ಗಣಪತಿಯ ಹುಟ್ಟಿನ ಹಿನ್ನೆಲೆಯನ್ನು ನಾವು ಗಮನಿಸಿದರೆ, ಆತ ಸ್ತ್ರೀ-ಪುರುಷರ ಸಂಯೋಗವಿಲ್ಲದೆ ಹುಟ್ಟಿದವನು. ಅಂದರೆ ನಿಷ್ಕಾಮದಿಂದ ಜನಿಸಿದವನು. ಹಾಗೆ ಗಣಪತಿ 'ಸತ್' ಎಂಬ ಶುದ್ಧಗುಣದಿಂದ ಹುಟ್ಟಿದವನು. ಹೀಗಾಗಿ ಅವನು ಅಪರಂಜಿ, ಮೊದಲ ಪೂಜೆಗೆ ಅರ್ಹ ಎಂಬುದು ಒಂದು ವಿವರಣೆ. ಇನ್ನೊಂದು ಮಾದರಿ ವಿಶ್ಲೇಷಣೆ ಎಂದರೆ ಶಿವನು ಪರಮ ಪುರುಷನಾದರೆ, ಪಾರ್ವತಿಯು ಪರಮ ಪ್ರಕೃತಿ. ಆಕೆಯ ದೇಹದಲ್ಲಿನ ಕೊಳೆ ಎಂದರೆ ಅದು ಮಾಯಾ ಪ್ರಕೃತಿ. ಅದನ್ನು ಪಡೆದು ಹುಟ್ಟಿದವನು ಗಣಪತಿ. ಪರಶಿವನು ಈ ತಮೋಗುಣಗಳ ಶಿರವನ್ನು ತೆಗೆದು ಅದರಲ್ಲಿ ಬ್ರಹ್ಮ ಸ್ವರೂಪಿಯಾದ ಗಜ ಮುಖವನ್ನು ಇಟ್ಟಿದ್ದಾನೆ. ಹೀಗಾಗಿ ಮಾಯೆಯನ್ನು ಗೆದ್ದು ಸತ್ಯದ ಅರಿವು ಮೂಡಿಸಬಲ್ಲವನು ಎಂಬ ಅಂತರಾರ್ಥ ಗಣಪತಿಯ ಸ್ವರೂಪದಲ್ಲಿದೆ. ಚಿಂತನಾಕ್ರಮದಲ್ಲಿನ ಪರಿಶುದ್ಧತೆ ಮತ್ತು ಪರಿಪೂರ್ಣತೆಯೇ ಆತನ ಮೊದಲ ಪೂಜೆಗೆ ಕಾರಣವಾಗಿದೆ. 

ಗಣಪತಿಯ ಮೂರ್ತಿಸ್ವರೂಪ.
ಗಣಪತಿಯ ಮೂರ್ತಿಯಲ್ಲಿನ ಅಂಗಗಳ ಸಂಕೇತವನ್ನು ಗಮನಿಸಿದರೆ, ಆತನ ಕಿವಿಗಳು, ಭಕ್ತರೆಲ್ಲರ ಪ್ರಾರ್ಥನೆಗಳನ್ನು ಕೇಳಲು, ದೊಡ್ಡದಾಗಿವೆ. ದೊಡ್ಡದಾದ ತಲೆ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಂಕೇತವಾಗಿದೆ. ಆದರೆ, ಗಣಪತಿಯ ಕಣ್ಣುಗಳು ಸಣ್ಣದಾಗಿವೆ, ಅವು ಏಕಾಗ್ರತೆಯ ಸಂಕೇತ. ಹಾಗೇ, ಉದ್ದನೆಯ ಸೊಂಡಿಲು ಒಳಿತು ಕೆಡಕುಗಳನ್ನು ಸೋಸಿ ತೆಗೆಯುವ ವಿವೇಕದ ಸಂಕೇತ. ಗಣಪತಿಯ ಆಕಾರ ಎಷ್ಟೇ ದೊಡ್ಡದಾಗಿದ್ದರೂ, ಆತನ ಬಾಯಿ ತುಂಬಾ ಚಿಕ್ಕದು. ಅದು ವಾಚಾಳಿತನವನ್ನು ನಿಲ್ಲಿಸಲು ಪ್ರೇರಣೆ ನೀಡಿದಂತಿದೆ. ಗಣಪತಿಯ ಸ್ವರೂಪದಲ್ಲಿನ ಬಾಗಿದ ಸೊಂಡಿಲು ಓಂಕಾರ ಅಥವಾ ಪ್ರಣವ ಸ್ವರೂಪ. ಪ್ರಣವ ಇಡೀ ಚಿಂತನಾ ಜಗತ್ತಿನ ಆದಿಬಿಂದು. ಈ ಆದಿಸ್ವರೂಪ, ಗಣಪತಿಯೇ ಆಗಿದ್ದಾನೆ. 

ಗಣಪತಿಯ ಸ್ವರೂಪದಲ್ಲಿರುವ ಕುತೂಹಲಕರ ಅಂಶವೆಂದರೆ ಮುರಿದ ದಂತ. ಸಾಮಾನ್ಯವಾಗಿ ವಿಗ್ರಹಗಳಲ್ಲಿ ಕೊಂಚ ಭಿನ್ನ ಕಂಡರೂ ಅದು ಪೂಜೆಗೆ ಅರ್ಹವಾಗುವುದಿಲ್ಲ. ಆದರೆ ಗಣಪತಿಯ ದಂತ ಭಗ್ನವಾಗಿರುವುದೇ ಇಲ್ಲಿ ಸ್ವರೂಪವಾಗಿದೆ. ಇದು ಏಕೆ ಎಂದು ಯೋಚಿಸಿದಾಗ, ಕೆಲವು ಸತ್ಯಗಳ ಅರಿವಾಗುತ್ತದೆ. ಮೂಲಸ್ವರೂಪವಾದ 'ಸತ್ಯ' ಅಖಂಡವಾದದ್ದು. ಅದನ್ನು ಬಲ ಭಾಗದಲ್ಲಿರುವ ಪೂರ್ಣದಂತ ಸೂಚಿಸುತ್ತದೆ. ಪ್ರಪಂಚ ಮಾಯೆಗಳಿಂದ ತುಂಬಿ ಅಪರಿಪೂರ್ಣವಾಗಿದೆ. ಇದನ್ನು ಮುರಿದಿರುವ ಎಡದಂತವು ಸೂಚಿಸುತ್ತದೆ. ಪೂರ್ಣ ಮತ್ತು ಅಪೂರ್ಣಗಳೆರಡೂ ಬೇರೆಬೇರೆಯಾಗಿ ಕಂಡರೂ ಅವೆರಡೂ ಪರಮಾತ್ಮನ ರೂಪ ವಿಶೇಷಗಳೇ. ಇದನ್ನು ಗಣಪತಿಯ ದಂತಗಳು ಸೂಚಿಸುತ್ತದೆ. 

(ಇನ್ನೂ ಇದೆ)

5 comments:

  1. ಬಹಳ ಸುಂದರವಾಗಿ ಬರೆದಿದ್ದೀರಿ, ಅನಿಲ್.

    ReplyDelete
  2. ಮಾಹಿತಿ ಚೆನ್ನಾಗಿದೆ..
    ಧನ್ಯವಾದಗಳು.

    ReplyDelete
  3. ರವಿ,
    ತುಂಬಾ ಧನ್ಯವಾದಗಳು.

    -ಅನಿಲ್

    ReplyDelete
  4. ವನಮುಕ್ತಾ,
    'ಅನವರತ'ಕ್ಕೆ ಸ್ವಾಗತ.
    ಮೆಚ್ಚುಗೆಗೆ ಧನ್ಯವಾದಗಳು.

    -ಅನಿಲ್

    ReplyDelete
  5. ಚೆನ್ನಾಗಿದೆ ಬರಹ. ಮಾಹಿತಿಪೂರ್ಣವಾಗಿದೆ.

    ಆದರೆ ಗಣಪತಿ ನಿಷ್ಕಾಮದಿಂದ ಜನಿಸಿದವನು ಎಂಬ ವಾಕ್ಯ ಸ್ವಲ್ಪ ಗೊಂದಲ ತಂದಿತು. ನಿಷ್ಕಾಮ ಎಂಬ ಪದವನ್ನು ಬರೀ "ಆಸೆಯಿಲ್ಲದ" "ಬಯಕೆಯಿಲ್ಲದ" ಎಂಬರ್ಥಗಳಿಗೆ ಮಾತ್ರ ಬಳಸಬಹುದು ಅಂದುಕೊಂಡಿದ್ದೆ.

    ReplyDelete