My Blog List

Wednesday, February 18, 2009

ನಿಸರ್ಗ ಮಾಸಿಕ - ಫೆಬ್ರವರೀ ಸಂಚಿಕೆ.

"ನಿಸರ್ಗ" - ಪರಿಸರ ಪ್ರೇಮಿಗಳಿಗೊಂದು ಮಾಸಿಕ.

ನಿಸರ್ಗ

ಫೆಬ್ರವರೀ ಸಂಚಿಕೆಯನ್ನು ತಪ್ಪದೇ ಓದಿರಿ.

Wednesday, February 11, 2009

ಶ್ರೀ ಹರಿವರಾಸನಾಷ್ಟಕಂ

ನಾನು ಮಾಲೆ ಹಾಕಿಕೊಂಡು ಅಯ್ಯಪ್ಪನ ವ್ರತ ಆಚರಿಸಿ ಶಬರಿಮಲೆಗೆ ಹೋಗುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು.
ಇಂದು ದೈನಂದಿನ ಪೂಜೆ ಮುಗಿಸಿ ಅಯ್ಯಪ್ಪನ ಹಾಡುಗಳನ್ನು ಕೇಳುತ್ತಿದ್ದೆ. ಅಂತರ್ಜಾಲದಲ್ಲಿ ಹೀಗೇ ಯೂಟ್ಯೂಬ್.ಕಾಂ ಅಲ್ಲಿ ಅಯ್ಯಪ್ಪನ ಕೀರ್ತನೆಗಳನ್ನು ಹುಡುಕುತ್ತಿದ್ದಾಗ ಸಿಕ್ಕ ದೇವರನಾಮ ಇದು. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಆಯ್ತು.
ಹಾಗಾಗಿ ಇಲ್ಲಿ ದೇವರನಾಮ ಮತ್ತು ಅದರ ವೀಡಿಯೋ ಮತ್ತು ಈ ದೇವರನಾಮದ .mp3 Format ಕೊಂಡಿ ಇಲ್ಲಿ ಸೇರಿಸಿದ್ದೇನೆ.

ಈ ಹಾಡು ಅಯ್ಯಪ್ಪನಿಗೆ ಲಾಲಿ ಹಾಡಿನ ತರಹ. ಹಾಗಾಗಿ ಈ ದೇವರನಾಮವನ್ನು ರಾತ್ರಿಹೊತ್ತು ಹೇಳಿಕೊಂಡರೆ ಒಳ್ಳೆಯದು.

ಹಾಡಿನ ವೀಡಿಯೋ ಇಲ್ಲಿದೆ.



ಶ್ರೀ ಹರಿವರಾಸನಾಷ್ಟಕಮ್

||ಹರಿವರಾಸನಂ ವಿಶ್ವಮೋಹನಂ|
||ಹರಿದಧೀಶ್ವರಂ ಆರಾಧ್ಯಪಾದುಕಂ||
||ಅರಿವಿಮರ್ದನಂ ನಿತ್ಯನರ್ತನಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೧ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಶರಣಕೀರ್ತನಂ ಭಕ್ತಮಾನಸಂ|
||ಭರಣಲೋಲುಪಂ ನರ್ತನಾಲಸಂ||
||ಅರುಣಭಾಸುರಂ ಭೂತನಾಯಕಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೨ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಪ್ರಣಯಸತ್ಯಕಂ ಪ್ರಾಣನಾಯಕಂ|
||ಪ್ರಣತಕಲ್ಪಕಂ ಸುಪ್ರಭಾಂಚಿತಂ||
||ಪ್ರಣವಮಂದಿರಂ ಕೀರ್ತನಪ್ರಿಯಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೩ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ತುರಗವಾಹನಂ ಸುಂದರಾನನಂ|
||ವರಗದಾಯುಧಂ ವೇದವರ್ಣಿತಂ||
||ಗುರುಕೃಪಾಕರಂ ಕೀರ್ತನಪ್ರಿಯಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೪ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ತ್ರಿಭುವನಾರ್ಚಿತಂ ದೇವತಾತ್ಮಕಂ|
||ತ್ರಿನಯನಂಪ್ರಭುಂ ದಿವ್ಯದೇಶಿಕಂ||
||ತ್ರಿದಶಪೂಜಿತಂ ಚಿಂತಿತಪ್ರದಂ||
||ಹರಿಹರಾತ್ಮಜಂ ದೇವಮಾಶ್ರಯೇ|| ೫ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಭವಭಯಾಪಹಂ ಭಾವುಕಾವಹಂ|
||ಭುವನಮೋಹನಂ ಭೂತಿಭೂಶಣಂ||
||ಧವಳವಾಹನಂ ದಿವ್ಯವಾರಣಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೬ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಕಲಮೃದುಸ್ಮಿತಂ ಸುಂದರಾನನಂ|
||ಕಲಭಕೋಮಲಂ ಗಾತ್ರಮೋಹನಂ||
||ಕಲಭಕೇಸರೀ ವಾಜಿವಾಹನಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೭ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||

||ಶ್ರಿತಜನಪ್ರಿಯಂ ಚಿಂತಿತಪ್ರದಂ|
||ಶೃತಿವಿಭೂಶಣಂ ಸಾಧುಜೀವನಂ||
||ಶೃತಿಮನೋಹರಂ ಗೀತಲಾಲಸಂ|
||ಹರಿಹರಾತ್ಮಜಂ ದೇವಮಾಶ್ರಯೇ|| ೮ ||

||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ|
||ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ||



ಈ ದೇವರನಾಮವನ್ನು Download ಮಾಡಲು ಇಲ್ಲಿ ಚಿಟುಕಿಸಿರಿ.

--------------------------------------------------------------
ಮರೆತಿದ್ದೆ: ಬ್ಲಾಗಿಂಗ್ ಜಗತ್ತಿಗೆ ಬಂದು ಇಂದಿಗೆ ಒಂದು ವರ್ಷ ಆಯಿತು.

Wednesday, February 04, 2009

ಚಿತ್ರಗಳನ್ನು Stitch ಮಾಡಿದಾಗ...

ಜನವರೀ ೨೪/೨೫ರಂದು ಮಡಿಕೇರಿಗೆ ಪ್ರವಾಸ ಕೈಗೊಂಡಿದ್ದೆವು.
ಜನವರೀ ೨೪ರ ಶನಿವಾರದಂದು ಬೆಂಗಳೂರಿನಿಂದ ಹೊರಟು ಸಂಜೆ ೫.೩೦ರ ಹೊತ್ತಿಗೆ ಮಡಿಕೇರಿಯ ರಾಜಾಸೀಟ್ ತಲುಪಿದೆವು.

ಅಲ್ಲಿ ಸೂರ್ಯಾಸ್ತಕ್ಕೆ ಮುಂಚೆ ತೆಗೆದ ಚಿತ್ರ ಇಲ್ಲಿದೆ.
ಚಿತ್ರವನ್ನು ಹೊಲಿದಿರುವೆ (Stitch ಮಾಡಿರುವೆ).

ಮರುದಿನ ಬೆಳಿಗ್ಗೆ, ಮಡಿಕೇರಿಯಿಂದ, ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ಹೋಗಿದ್ದೆವು.

ತಲಕಾವೇರಿಯ ವ್ಯೂ ಪಾಯಿಂಟ್ ಇಂದ ಕಂಡ ದೃಶ್ಯ ಇಲ್ಲಿದೆ.

------------------------------------------------------------------------------

ಚಿತ್ರವನ್ನು Stitch ಮಾಡಿರುವುದರಿಂದ ಸಣ್ಣ Strip ತರಹ ಕಾಣಿಸುತ್ತೆ.

ಪೂರ್ಣ ರೆಸೊಲ್ಯೂಷನ್ ನೋಡಲು ಚಿತ್ರಗಳನ್ನು ಚಿಟುಕಿಸಿರಿ.

Tuesday, February 03, 2009

ತಾಳ -ಸೂಳಾದಿ (ಸುಳಾದಿ) ಸಪ್ತತಾಳಗಳು

ತಾಳ - ಸೂಳಾದಿ (ಸುಳಾದಿ) ಸಪ್ತ ತಾಳಗಳು.

ಸಂಗೀತಕ್ಕೆ ರಾಗವು ಸೌಂದರ್ಯವನ್ನು ಕೊಡಬಲ್ಲದಾದರೆ ತಾಳವು ಅಚ್ಚುಕಟ್ಟುತನವನ್ನು ಕಲಿಸುತ್ತದೆ. ಯಾವ ವಸ್ತುವಿಗಾದರೂ ಒಂದು ನಿರ್ದಿಷ್ಟ ಆಕಾರವಿಲ್ಲದಿದ್ದರೆ ಅದು ಚೆನ್ನಾಗಿ ಕಾಣಿಸಲಾರದು. ಅಂತೆಯೇ ಕವಿತೆ ಎಷ್ಟು ಸುಂದರವಾಗಿದ್ದರೂ ಲಯರಹಿತ ಕವಿತೆಯು ತಾಳದ ಚೌಕಟ್ಟಿನೊಳಗಿನ ಕವಿತೆಗೆ ಸಾಟಿಯಾಗಲಾರದು. ಅಡಿಗೋಲಿನಲ್ಲಿರುವ ಹನ್ನೆರಡು ಭಾಗಗಳಲ್ಲಿ ಹೇಗೆ ಸ್ವಲ್ಪವಾದರೂ ವ್ಯತ್ಯಾಸವಿಲ್ಲವೋ ಹಾಗೆಯೇ ತಾಳದ ಭಾಗಗಳಲ್ಲಿ ವ್ಯತ್ಯಾಸವಿರಬಾರದು. ಹೀಗೆ ವ್ಯತ್ಯಾಸವಿರದ ಏಕರೂಪದ ಸಮಯಾವಕಾಶಕ್ಕೆ "ಲಯ" ಎಂದು ಹೆಸರು. ಸಂಗೀತದ ಸಮಯವನ್ನು ಕೆಲವು ನಿರ್ದಿಷ್ಟವಾದ ನಿಯಮಗಳಿಗನುಸರಿಸಿ ಒಂದು ಕ್ರಮಬದ್ಧ ರೀತಿಯಲ್ಲಿ ಅಳವಡಿಸಿಕೊಳ್ಳುವ ವಿಧಾನವೇ "ತಾಳ". ತಾಳದ ಮುಖ್ಯ ಜೀವಾಳ ಲಯ.

ಹಾಡಿನಲ್ಲಿ ಸಾಹಿತ್ಯ ಭಾವಪೋಷಕವಾಗಿರುತ್ತದೆ. ಅದಕ್ಕೆ ಅನುಸಾರವಾಗಿ ರಾಗವು ಹೆಣೆಯಲ್ಪಟ್ಟಿರುತ್ತದೆ. ಅವುಗಳಿಗೆ ಸರಿಯಾಗಬಹುದಾದ "ವೇಗ" ಇರಬೇಕಾದುದು ಅವಶ್ಯ. ನಾವು ಸಂತೋಷದಿಂದಿರುವಾಗ ನಮ್ಮ ಮಾತಿನ ವೇಗ ಸಾಮಾನ್ಯವಾಗಿರುತ್ತದೆ. ಅವಸರದ ಸಮಯದಲ್ಲಿ ಅಥವಾ ಸಿಟ್ಟುಬಂದಾಗ ಮಾತಿನ ವೇಗ ಹೆಚ್ಚುತ್ತದೆ. ದುಃಖ ಬಂದಾಗ ತೀರ ನಿಧಾನವಾಗಿರುತ್ತದೆ. ಇದೇ ತತ್ವವನ್ನು ಸಂಗೀತದಲ್ಲಿ ಕೂಡ ನಾವು ಕಾಣಬಹುದು. ಭಾವಕ್ಕೆ ತಕ್ಕಂತೆ ಹಾಡುಗಳು ನಿಧಾನ, ಮಧ್ಯಮ ಹಾಗೂ ವೇಗ ಗತಿಗಳಲ್ಲಿರುತ್ತದೆ. ನಿಧಾನಗತಿಯಲ್ಲಿ ಹಾಡುವುದಕ್ಕೆ "ವಿಳಂಬಗತಿ" ಎಂದು ಹೆಸರು. ಸಂತೋಷದಿಂದ ಹಾಡುವಾಗ ವೇಗವು ತುಂಬಾ ಹೆಚ್ಚಾಗಿರುತ್ತದೆ. ಇಂತಹ ವೇಗವನ್ನು "ದ್ರುತಗತಿ" ಎನ್ನುವರು. ಇವೆರಡಕ್ಕೂ ಮಧ್ಯದಲ್ಲಿ ಬರುವುದಕ್ಕೆ "ಮಧ್ಯಮಗತಿ" ಎಂದು ಹೆಸರು. ಹಾಡುವ ವೇಗವು ಸಾಹಿತ್ಯ, ಭಾವ, ರಾಗಗಳಿಗೆ ಅನುಗುಣವಾಗಿ ಇರಬೇಕಾದುದು ತೀರಾ ಅವಶ್ಯ. ವೇಗದಲ್ಲಿ ವ್ಯತ್ಯಾಸವಾದರೆ ಹಾಡಿನ ಸೌಂದರ್ಯಕ್ಕೆ ಚ್ಯುತಿಯುಂಟಾಗುವುದು.

ತಾಳವು ವಿವಿಧ ಅವಯವಗಳಿಂದ ಕೂಡಿರುತ್ತದೆ. ಇಂತಹ ಭಾಗಗಳಿಗೆ "ಅಂಗಗಳು" ಎಂದು ಹೆಸರು. ಅಂತಹ ಅಂಗಗಳು ಆರು ಇವೆ. ಅನುದ್ರುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಅವುಗಳಿಗೆ ಹೆಸರು. ಇವುಗಳಿಗೆ "ಷಡಂಗಗಳು" ಎಂದು ಹೆಸರು. ಸಂಗೀತದಲ್ಲಿ ಉಪಯೋಗಿಸುವ ತಾಳಗಳು ಏಳು. ಇವುಗಳಿಗೆ "ಸಪ್ತತಾಳಗಳು" ಎಂದು ಹೆಸರು. ಈ ಸಪ್ತತಾಳ ಪದ್ಧತಿಯು ಹರಿದಾಸರ ಕಾಲದಿಂದ ಪ್ರಚಾರಕ್ಕೆ ಬಂದಿತು. ಈ ತಾಳಗಳಿಗೆ "ಸೂಳಾದಿ (ಸುಳಾದಿ) ತಾಳಗಳು" ಎಂದು ಹೆಸರು. ಈ ಏಳು ತಾಳಗಳಲ್ಲಿ ಷಡಂಗಗಳಲ್ಲಿನ ಮೊದಲಿನ ಮೂರು ಅಂಗಗಳಾದ ಅನುದ್ರುತ, ದ್ರುತ, ಲಘುಗಳು ಮಾತ್ರ ಇವೆ. ಈ ಸಪ್ತ ತಾಳಗಳಿಗೆ ಕ್ರಮವಾಗಿ ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುತ, ಅಟ, ಏಕ ತಾಳಗಳೆಂದು ಹೆಸರು.

ಅನುದ್ರುತದ ಕಾಲಪ್ರಮಾಣ ಒಂದು ಅಕ್ಷರಕಾಲ. ದ್ರುತದ ಕಾಲಪ್ರಮಾಣ ಎರಡು ಅಕ್ಷರಕಾಲ. ಲಘುವಿನಲ್ಲಿ ಐದು ಜಾತಿಗಳಿವೆ. ಅವುಗಳಿಗೆ ಕ್ರಮವಾಗಿ ೩, ೪, ೫, ೭, ೯ ಅಕ್ಷರಕಾಲಗಳಿದ್ದು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣಗಳೆಂಬ ಹೆಸರಿದೆ. ತಾಳವನ್ನು ಹಾಕಿ ತೋರಿಸುವ ಕ್ರಮಕ್ಕೆ "ಕ್ರಿಯೆ" ಎಂದು ಹೆಸರು. ಈ ಕ್ರಿಯೆಯಲ್ಲಿ ಸಶಬ್ಧಕ್ರಿಯೆ (ಘಾತ), ವಿಸರ್ಜಿತ (ಕೈಯನ್ನು ಮಗಚಿ ಹಾಕುವುದು) ಮತ್ತು ನಿಶ್ಯಬ್ಧಕ್ರಿಯೆಗಳು (ಬೆರಳೆಣಿಕೆಗಳು) ಬರುತ್ತವೆ. ಅನುದ್ರುತವನ್ನು ಒಂದು ಘಾತದಿಂದಲೂ, ದ್ರುತವನ್ನು ಒಂದು ಘಾತ ಮತ್ತು ವಿಸರ್ಜಿತದಿಂದಲೂ, ಲಘುವನ್ನು ಘಾತದಿಂದ (ಏಟಿನಿಂದ) ಕೂಡಿದ ಬೆರಳೆಣಿಕೆಯಿಂದಲೂ ತೋರಿಸಲಾಗುತ್ತದೆ. ಲಘುವಿನ ಸೂಚನೆಯಲ್ಲಿ ಬರುವ ಬೆರಳೆಣೆಕೆ ಲಘುವಿರುವ ಅಕ್ಷರಕಾಲಕ್ಕಿಂತ ಕಡಿಮೆ ಇರುತ್ತದೆ.
ಉದಾ: ಚತುರಶ್ರ ಲಘು ಅಂದರೆ, ಒಂದು ಘಾತ (ಏಟು) + ೩ ಬೆರಳೆಣಿಕೆ.

ತಾಳಾಂಗಗಳು: ಅಂಗವು ತಾಳ ದಶಪ್ರಾಣಗಳಲ್ಲಿ ಒಂದು. ತಾಳವನ್ನು ಎಣಿಸುವಾಗ ಬರುವ ಅವಯವಗಳನ್ನು ತಾಳಾಂಗವೆನ್ನುತ್ತಾರೆ. ಸೂಳಾದಿ (ಸುಳಾದಿ) ಸಪ್ತತಾಳಗಳಲ್ಲಿ ಬಳಸುವ ತಾಳಾಂಗಗಳು ಮೂರು. ಅವು ಲಘು, ದ್ರುತ, ಅನುದ್ರುತ. ಈ ತಾಳಗಳಿಗೆ ಸೂಳಾದಿ ತಾಳ ಎಂದು ಹೆಸರು ಬಂದಿದ್ದು ಹರಿದಾಸರ ಕಾಲದಲ್ಲಿ.

ಲಘು: ಒಂದು ಘಾತವನ್ನು (ಏಟನ್ನು) ಹಾಕಿ ಬೆರಳುಗಳನ್ನು ಎಣಿಸುವುದಕ್ಕೆ ಲಘುವೆಂದು ಹೆಸರು. ಇದರ ಚಿಹ್ನೆ ’|'

ದ್ರುತ: ಒಂದು ಘಾತವನ್ನು ಹಾಕಿ ವಿಸರ್ಜಿತವನ್ನು (ಏಟನ್ನು ಹಾಕಿ ಕೈ ಮಗಚುವುದು) ಹಾಕುವುದಕ್ಕೆ ದ್ರುತವೆಂದು ಹೆಸರು. ಇದರ ಚಿಹ್ನೆ ’೦’

ಅನುದ್ರುತ: ಒಂದು ಘಾತವನ್ನು (ಏಟನ್ನು) ಮಾತ್ರ ಹಾಕುವುದಕ್ಕೆ ಅನುದ್ರುತವೆಂದು ಹೆಸರು. ಇದರ ಚಿಹ್ನೆ ’U'

ಒಂದು ಘಾತಕ್ಕೆ ೪ ಅಕ್ಷರಗಳು ಬರುವುದನ್ನು ಚತುರಶ್ರಗತಿ ಎಂದು ಕರೆಯಲಾಗುವುದು. ನಾಲ್ಕು ಅಕ್ಷರಗಳ ಬದಲಿಗೆ ೩, ೫, ೭, ೯ ಅಕ್ಷರಗಳನ್ನು ಇರಿಸಿಕೊಳ್ಳುವುದಿದೆ. ಈ ರೀತಿ ಮೂಡಿದಾಗ ಅವು ಕ್ರಮವಾಗಿ ತ್ರಿಶ್ರ, ಖಂಡ, ಮಿಶ್ರ, ಸಂಕೀರ್ಣ ಗತಿಗಳೆನಿಸಿಕೊಳ್ಳುವುವು.

ತ್ರಿಶ್ರಜಾತಿಗೆ ಮೂರು ಅಕ್ಷರಗಳು - ತ್ರಿಶ್ರ ಲಘು
ಚತುರಶ್ರಜಾತಿಗೆ ನಾಲ್ಕು ಅಕ್ಷರಗಳು - ಚತುರಶ್ರ ಲಘು
ಖಂಡಜಾತಿಗೆ ಐದು ಅಕ್ಷರಗಳು - ಖಂಡ ಲಘು
ಮಿಶ್ರಜಾತಿಗೆ ಏಳು ಅಕ್ಷರಗಳು - ಮಿಶ್ರ ಲಘು
ಸಂಕೀರ್ಣಜಾತಿಗೆ ಒಂಭತ್ತು ಅಕ್ಷರಗಳು - ಸಂಕೀರ್ಣ ಲಘು

ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲೂ ಲಘು ಇದ್ದೇ ಇರುತ್ತದೆ. ಅನುದ್ರುತವು ಝಂಪೆ ತಾಳದಲ್ಲಿ ಮಾತ್ರ ಇದೆ. ಏಕತಾಳದಲ್ಲಿ ಲಘುವು ಮಾತ್ರ ಇದೆ. ಲಘುವಿನಲ್ಲಿ ಐದು ಜಾತಿ ಭೇದಗಳು ಇರುವುದರಿಂದಲೂ, ಸಪ್ತತಾಳದ ಪ್ರತಿಯೊಂದರಲ್ಲೂ ಲಘುವು ಇರುವುದರಿಂದಲೂ ಪ್ರತಿಯೊಂದು ತಾಳವೂ ಲಘುವಿನ ಐದು ಜಾತಿಭೇದಗಳಿಗೆ ಅನುಗುಣವಾಗಿ ಐದೈದು ಪ್ರತ್ಯೇಕ ತಾಳಗಳಾಗುತ್ತವೆ. ಸಪ್ತತಾಳಗಳ ಹೆಸರನ್ನು ಹೇಳುವಾಗ ಲಘುವಿನ ಜಾತಿಯ ಕುರಿತು ಹೇಳದಿದ್ದಲ್ಲಿ ಧ್ರುವ, ಮಠ್ಯ, ರೂಪಕ, ಏಕತಾಳಗಳನ್ನು ಚತುರಶ್ರಜಾತಿಯವು ಎಂದೂ, ಝಂಪೆತಾಳವನ್ನು ಮಿಶ್ರಜಾತಿ ಎಂದೂ. ತ್ರಿಪುಟತಾಳವನ್ನು ತ್ರಿಶ್ರಜಾತಿ ಎಂದೂ, ಅಟತಾಳವನ್ನು ಖಂಡಜಾತಿ ಎಂದೂ ತಿಳಿಯಬೇಕು.

ಆವರ್ತ: ಒಂದು ತಾಳದ ತಾಳಾಂಗಗಳನ್ನು ಒಂದಾವರ್ತಿ ಪೂರ್ಣವಾಗಿ ನಡೆಸುವುದಕ್ಕೆ "ಆವರ್ತ" ಎಂದು ಹೆಸರು.
ಉದಾಹರಣೆ: ||ಸರಿಗಮ| ಪದ| ನಿಸ||
ಸಂಗೀತ ರಚನೆಗಳನ್ನು ಬರೆಯುವಾಗ ತಾಳಾವರ್ತದ ಪ್ರಾರಂಭ ಮತ್ತು ಮುಕ್ತಾಯಕ್ಕೆ ಎರಡು ಇದ್ದನೆಯ ಗೆರೆಗಳನ್ನು, ಪ್ರತಿಯೊಂದು ಅಂಗದ ಮುಕ್ತಾಯಕ್ಕೆ ಒಂದು ಉದ್ದನೆಯ ಗೆರೆಯನ್ನು ಎಳೆದು ಸೂಚಿಸಲಾಗುವುದು.

ಲಘುವಿನ ೫
ಜಾತಿಗಳು

ಸಪ್ತತಾಳಗಳ ಹೆಸರು, ಅಂಗ, ಚಿಹ್ನೆ, ಅಕ್ಷರಕಾಲ, ಕ್ರಿಯೆ ಮತ್ತು ಲಘುವಿನ ಹೆಸರು, ಜಾತಿ, ಅಕ್ಷರಕಾಲ, ಚಿಹ್ನೆಗಳು

ಜಾತಿಗಳಿಂದ ಅಲಂಕಾರದ ಸಪ್ತತಾಳಗಳು. ೩೫ ತಾಳಗಳಾಗುವ ಪಟ್ಟಿ.

ಪಟ್ಟಿಗಳನ್ನು ನೋಡಲು ಇಲ್ಲಿ ಚಿಟುಕಿಸಿರಿ.

ಗ್ರಹ: ಸಂಗೀತ ರಚನೆಯೂ ತಾಳವೂ ಪ್ರಾರಂಭವಾಗಲು ಇರುವ ಸಂಬಂಧಕ್ಕೆ "ಗ್ರಹ" ಎಂದು ಹೆಸರು.
ಇದರಲ್ಲಿ ಎರಡು ವಿಧ. ಸಮಗ್ರಹ ಮತ್ತು ವಿಷಮಗ್ರಹ.

ಸಮಗ್ರಹ: ತಾಳ ಮತ್ತು ರಚನೆಯು ಏಕಕಾಲದಲ್ಲಿ ಅಂದರೆ ಒಟ್ಟಿಗೆ ಪ್ರಾರಂಭವಾಗುವುದಕ್ಕೆ "ಸಮಗ್ರಹ" ಎಂದು ಹೆಸರು.

ವಿಷಮಗ್ರಹ: ತಾಳ ಮತ್ತು ರಚನೆಯು ಏಕಕಾಲದಲ್ಲಿ ಅಂದರೆ ಒಟ್ಟಿಗೆ ಪ್ರಾರಂಭವಾಗದಿರುವುದಕ್ಕೆ "ವಿಷಮಗ್ರಹ" ಎಂದು ಹೆಸರು.
ಇದರಲ್ಲಿ ಎರಡು ವಿಧ. ಅತೀತಗ್ರಹ ಮತ್ತು ಅನಾಗತಗ್ರಹ.

ಅತೀತಗ್ರಹ: ಸಂಗೀತವು ಆರಂಭವಾಗಿ ನಂತರ ತಾಳವು ಆರಂಭವಾಗುವುದಕ್ಕೆ "ಅತೀತಗ್ರಹ" ಎಂದು ಹೆಸರು.

ಅನಾಗತಗ್ರಹ: ತಾಳವು ಮೊದಲು ಪ್ರಾರಂಭವಾಗಿ ನಂತರ ಸಂಗೀತ ರಚನೆಯು ಪ್ರಾರಂಭವಾಗುವುದಕ್ಕೆ "ಅನಾಗತಗ್ರಹ" ಎಂದು ಹೆಸರು.

ಹನ್ನೆರಡು ಜ್ಯೋತಿರ್ಲಿಂಗಗಳು - ೫

ಪರ್ಲಿಯ ವೈದ್ಯನಾಥ.

ಎಲ್ಲಿದೆ?
ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿರುವ ಚಿಕ್ಕಗ್ರಾಮ ಪರ್ಲಿ.
ಮಹಾಭಾರತದ ಪ್ರಸಿದ್ಧ ಕುಂತೀಪುರವೇ ಇದು ಎಂದು ನಂಬಿಕೆ.
ಅಮೃತ ಮಥನದ ಸಂದರ್ಭದಲ್ಲಿ ಸೃಷ್ಟಿಯಾದ ಹದಿನಾಲ್ಕು ರತ್ನಗಳಲ್ಲಿ ಈ ಲಿಂಗವೂ ಒಂದು ಎಂಬುದು ಪ್ರತೀತಿ.
ರಾವಣಾಸುರನು ಪರಮಶಿವನನ್ನು ಒಲಿಸಿಕೊಳ್ಳಲುಇಲ್ಲಿ ತಪಸ್ಸು ಮಾಡಿ ತನ್ನ ಶಿರವನ್ನೇ ಅರ್ಪಿಸಿದನಂತೆ.
ಕ್ರಿ. ಶ. ೧೭೦೬ರಲ್ಲಿ ಅಹಲ್ಯಾದೇವಿ ಹೋಳ್ಕರ್ ಈ ಅಪೂರ್ವ ಲಿಂಗವನ್ನು ಪತ್ತೆ ಮಾಡಿದಳು.
ನಂತರ ಪೇಶ್ವೆ ನಾನಾರಾವ್ ದೇಶಪಾಂಡೆ ಇಲ್ಲಿ ಭವ್ಯವಾದ ದೇವಸ್ಥಾನವನ್ನು ಕಟ್ಟಿಸಿದನು.

ದೇವಾಲಯದ ಸ್ವರೂಪ, ಭೇಟಿ ನೀಡುವ ಸಮಯ.
ಬೆಟ್ಟದ ಮೇಲಿರುವ ವೈದ್ಯನಾಥ ದೇವಸ್ಥಾನದಲ್ಲಿ ಶಿವಲಿಂಗ ೧೧ ಅಂಗುಲ ಎತ್ತರವಿದ್ದು, ಮೇಲೆ ಉಂಗುಷ್ಟಾಕಾರದ ಗುಳಿ ಇದೆ. ಇದು ರಾವಣನ ಉಂಗುಷ್ಟದ ಗುರುತು ಎನ್ನಲಾಗುತ್ತದೆ. ಹತ್ತಿರದಲ್ಲೇ ರಾಮ ರಾಜೇಶ್ವರ ಮಹದೇವ ದೇವಸ್ಥಾನವೂ ಇದೆ.
ಪರ್ಲಿ ಶೈವ ಕ್ಷೇತ್ರವಾದಂತೆ, ವೈಷ್ಣವ ಕ್ಷೇತ್ರವೂ ಹೌದು. ಇಲ್ಲಿ ಹರಿಹರ ತೀರ್ಥವಿದೆ.
ಭಕ್ತ ಮಾರ್ಕಂಡೇಯ ಇಲ್ಲಿ ತಪಸ್ಸು ಮಾಡಿದನೆಂಬ ಕತೆ ಇರುವಂತೆ, ಪ್ರಸಿದ್ಧವಾದ ಸತ್ಯವಾನ್-ಸಾವಿತ್ರಿಯರ ಕತೆ ಕೂದ ಇಲ್ಲಿಯೇ ನಡೆದದ್ದು ಎಂದು ನಂಬಲಾಗಿದೆ.
ಹತ್ತಿರದ ನಾರಾಯಣ ಪರ್ವತದಲ್ಲಿ ಸಾವಿತ್ರಿ ನೆಟ್ಟದ್ದು ಎಂದು ನಂಬಲಾದ ವಟವೃಕ್ಷವೂ ಇದೆ.
ಇಲ್ಲಿ ವಿಶಿಷ್ಟವಾದ ಗಣಪತಿ ವಿಗ್ರಹವಿದೆ.
ವೈದ್ಯನಾಥ ಲಿಂಗಕ್ಕೆ ಪ್ರತೀ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ.
ಚೈತ್ರ ಪಾಡ್ಯ (ಯುಗಾದಿ), ವಿಜಯದಶಮಿ, ತೃಪ್ತಿ ಪೂರ್ಣಿಮಾ (ಭಾರತ ಹುಣ್ಣಿಮೆ), ಮಹಾಶಿವರಾತ್ರಿಗಳಂದು ವಿಶೇಷ ಪೂಜೆಗಳಿರುತ್ತವೆ.
ಈ ಶಿವಲಿಂಗಕ್ಕೆ ಬಿಲ್ವಪತ್ರದಂತೆ, ತುಳಸೀ ಕೂಡ ಪವಿತ್ರವಾಗಿರುವುದೊಂದು ವಿಶೇಷ.

ಸೇರುವ ಮಾರ್ಗ.
ಮುಂಬೈಯಿಂದ ೫೧೭ ಕಿ. ಮೀ.
ಔರಂಗಾಬಾದ್ ಮಾರ್ಗವಾಗಿ ಪರ್ಲಿ ವೈಜನಾಥ ರೈಲು ನಿಲ್ದಾಣಕ್ಕೆ ಬರಬೇಕು.
ಅಲ್ಲಿಂದ ೨ ಕಿ. ಮೀ. ರಸ್ತೆ ಮಾರ್ಗ. ವಾಹನ ಸೌಕರ್ಯ ಇದೆ.
ಹೆಚ್ಚಿನ ಭಕ್ತರು ನಡೆದೇ ಈ ಮಾರ್ಗ ಕ್ರಮಿಸುತ್ತಾರೆ.

ವಸತಿ.
ದೇವಸ್ಥಾನದ ಅಧಿಕೃತ ವಸತಿಗೃಹ ಮಾತ್ರ ಇಲ್ಲಿ ಇರುವ ವ್ಯವಸ್ಥೆ.
ಪರ್ಲಿ ನಿಲ್ದಾಣದಲ್ಲಿ ಹೋಟೆಲುಗಳಿವೆ.
ಹತ್ತಿರದ ನಂದೇಡಿನಲ್ಲೂ ಉಳಿದುಕೊಳ್ಳಬಹುದು.

---------------------
ಚಿತ್ರ ಕೃಪೆ: shaivam.org

Monday, February 02, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೪

ಮಾಂದಾತದ ಓಂಕಾರೇಶ್ವರ

ಎಲ್ಲಿದೆ?
ಮಧ್ಯಪ್ರದೇಶದ ಪರ್ವತ ಶ್ರೇಣಿಯಲ್ಲಿ, ನರ್ಮದಾ ನದಿಯ ತೀರದಲ್ಲಿದೆ.
ಮಾಮಲ್ಲೇಶ್ವರ ದ್ವೀಪ ಮತ್ತು ನದಿ "ಓಂ"ಕಾರದ ಮಾದರಿಯಲ್ಲಿರುವುದರಿಂದ ಇದಕ್ಕೆ ಓಂಕಾರೇಶ್ವರ ಎಂದು ಹೆಸರು.
ಇಡೀ ಆವರಣದಲ್ಲಿ ಕೋಟಿ ತೀರ್ಥಗಳಿವೆಯಂತೆ.
ಈ ಕ್ಷೇತ್ರಕ್ಕೆ ಮಾಂದಾತ ಎಂಬ ಹೆಸರೂ ಇದೆ.

ಸ್ಥಳಪುರಾಣ.
ರಾಕ್ಷಸರ ನಾಶಕ್ಕಾಗಿ ಶಿವನು ಈ ರೂಪ ತಳೆದನೆಂಬುದು ಪುರಾಣ ಪ್ರತೀತಿ. ಮಾಂದಾತನೆಂಬ ಅರಸ ಶಿವನನ್ನು ಒಲಿಸಿ ಇಲ್ಲಿ ನೆಲೆಗೊಳ್ಳುವಂತೆ ಮಾಡಿದನೆಂಬ ಕತೆಯೂ ಇದೆ.
ಈ ಕ್ಷೇತ್ರಕ್ಕೆ ಮಾಂದಾತ ಎಂಬ ಹೆಸರು ಬರಲು ಇದೊ ಕಾರಣ ಎಂದು ನಂಬಿಕೆ.
ಕ್ರಿ.ಶ. ೧೦೬೩ರಲ್ಲಿ ಉದಯಾದಿತ್ಯನೆಂಬ ರಾಜ ಇದನ್ನು ಸ್ಥಾಪಿಸಿದನೆಂದ್ಬುದು ಚಾರಿತ್ರಿಕ ದಾಖಲೆ. ಸಂಸ್ಕೃತ ಕವಿ ಪುಷ್ಪದಂತ ಇಲ್ಲಿ ಕಾವ್ಯರಚನೆ ಮಾಡಿದನಂತೆ.
ಇಂದಿಗೂ ಆತ ರಚಿಸಿದನೆಂದು ನಂಬಲಾದ ’ಶಿವ ಮಹಾಸ್ತೋತ್ರ’ ಕೆತ್ತಲ್ಪಟ್ಟಿದೆಯಂತೆ.
ಪೇಶ್ವೆ ಬಾಜಿರಾವ್ ಕಾಲದಲ್ಲಿ ಈ ದೇವಸ್ಥಾನದ ಅಭಿವೃದ್ಧಿ ನಡೆಯಿತು. ದೇಗುಲದ ಸದ್ಯದ ಸ್ವರೂಪವನ್ನು ಕ್ರಿ. ಶ. ೧೧೯೫ರಲ್ಲಿ ರಾಜ ಭರತ್ ಸಿಂಗ್ ಚೌಹಾಣ್ ನೀಡಿದನು.
ನರ್ಮದೆಯ ಸುಂದರನೋಟ, ದಡಗಳ ಮಧ್ಯೆ ಸೇತುವೆ, ಒಂದು ಕ್ಷಣ ಹಾಗೇ ನಿಂತು ನೋಡಿದರೆ ಪರ್ವತ ಶ್ರೇಣಿ, ನದಿಯ ಗುಂಟ ಹಲವಾರು ದೇಗುಲಗಳ ಶಿಖರಗಳ ಪಡಿಯಚ್ಚು ನರ್ಮದೆಯಲ್ಲಿದೆ.
ನಾವು ಈಗ ಸಾಗುವುದು ಓಂಕಾರೇಶ್ವರನೆಡೆಗೆ.
ಒಂದು ದಡ ಬ್ರಹ್ನಪುರಿ, ಅತ್ತಲಿನದು ಶಿವಪುರಿ. ನದಿಯಿಂದ ೨೫೦ಅಡಿ ಎತ್ತರದಲ್ಲಿ ದೇವಾಲಯವಿದ್ದರೂ ನರ್ಮದೆ ನಿರಂತರ ಶಿವನ ಪಾದ ತೊಳೆಯುತ್ತಾಳಿಲ್ಲಿ.
ಹಿಂಭಾಗದಲ್ಲೇ ಪಾರ್ವತಿದೇವಿ ವಿರಾಜಮಾನಳಾಗಿದ್ದಾಳೆ. ಭವ್ಯ ದೇಗುಲದ ಪಾವಟಿಗೆ ಏರುತ್ತಾ ಅತ್ತ ಇತ್ತ ಕಣ್ಣು ಹಾಯಿಸಿದರೆ ಶಿಲ್ಪ ಚಾತುರ್ಯ ಮನತುಂಬುತ್ತದೆ.
ಸನಿಹದಲ್ಲೇ ಪುರಾತನ ಓಂಕಾರೇಶ್ವರ ದೇವಾಲಯವೂ ಇದೆ. ಇದಕ್ಕೆ ಹಿನ್ನೆಲೆಯಾದ ಕಥೆಯ ಪ್ರಕಾರ ’ದೇವತೆಗಳನ್ನು ಸೋಲಿಸಿ ವಿಜಯ ಪಡೆದ ರಾಕ್ಷಸರು ಲೋಕ ಕಂಟಕರಾದಾಗ ದೇವತೆಗಳು ಶಿವನನ್ನು ಇಲ್ಲಿ ಆರಾಧಿಸಿ ಅತಿಬಲ ಪಡೆದು ವಿಜೃಂಭಿಸಿದರಂತೆ. ಆತನೇ ಈ "ಓಂಕಾರೇಶ್ವರ" ಎಂದು ನಂಬಿಕೆ.
ಮಗದೊಂದೆಡೆ ’ಅಗಸ್ತ್ಯ ಮಹರ್ಷಿಯೂ ತನ್ನ ಪ್ರಿಯ ಶಿಷ್ಯ ವಿಂಧ್ಯನ ಆಸೆಯನ್ನು ಮನ್ನಿಸಲು ಶಿವನನ್ನು ಪ್ರಾರ್ಥಿಸಿದಾಗ... ವಿಂಧ್ಯನು ಪೂಜಿಸುತ್ತಿದ್ದ ಲಿಂಗದಲ್ಲಿ ನೆಲೆಸಿ ಪ್ರಣವ ಸ್ವರೂಪಿ, ಎಂದರೆ ಓಂಕಾರರೂಪಿಯಾಗಿ ಕಂಡನಂತೆ. ಅದೇ ಈ ’ಓಂಕಾರೇಶ್ವರ’. ಇದಕ್ಕೆ ಧಾರೇಶ್ವರ, ಅಮರೇಶ್ವರ ಎಂಬ ಹೆಸರೂ ಇದೆ.’ ಎಂಬ ಮಾತು ಕೇಳಿಬರುತ್ತವೆ.

ದೇವಸ್ಥಾನದ ಸ್ವರೂಪ, ಪ್ರಮುಖ ಉತ್ಸವ.
ಇದು ೧೨ ಅಂತಸ್ತಿನ ಶಿಲಾ ದೇವಾಲಯ. ಕೈಸಾಲೆ ಮತ್ತು ಕಂಬಗಳಿಂದ ಅಲಂಕೃತವಾಗಿದೆ. ಇಲ್ಲಿ ಜ್ಯೋತಿರ್ಲಿಂಗದ ೨ ಸ್ವರೂಪಗಳಿವೆ. ಒಂದು ಓಂಕಾರೇಶ್ವರ, ಇನ್ನೊಂದು ಅಮರೇಶ್ವರ. ಇಲ್ಲಿ ಬೃಹತ್ ಪ್ರಮಾಣದ ಹಸಿರು ಬಣ್ಣದ ನಂದಿಯ ಶಿಲಾವಿಗ್ರಹವಿದೆ. ಹತ್ತಿರದಲ್ಲೇ ವಿಷ್ಣು, ವರಾಹ, ಚಾಮುಂಡಿ ವಿಗ್ರಹಗಳಿವೆ. ಚಾಮುಂಡಿ ದೇವಿಗೆ ಹತ್ತು ಕೈಗಳಿದ್ದು, ಕಪಾಲಗಳಿಂದ ಅಲಂಕೃತವಾಗಿದ್ದಾಳೆ. ಒಟ್ಟು ೧೮.೫ಅಡಿ ಎತ್ತರದ ದೇವಿಯ ಎದೆಯ ಮೇಲೆ ಬೃಹದಾಕಾರದ ಚೇಳು ಮತ್ತು ಬಲಗಡೆಯಲ್ಲಿ ಇಲಿ ಇದೆ. ಕಾರ್ತಿಕ ಪೂರ್ಣಿಮೆಯಂದು ವಿಶೇಷ ರಥೋತ್ಸವ ನಡೆಯುತ್ತದೆ. ಶಿವನಿಗೆ ಪ್ರತಿನಿತ್ಯವೂ ಕಡಲೇಬೇಳೆ ನೈವೇದ್ಯ, ಶರನ್ನವರಾತ್ರಿ ವಿಶೇಷ ಉತ್ಸವಗಳಿರುತ್ತದೆ.

ಸೇರುವ ಮಾರ್ಗ.
ಓಂಕಾರೇಶ್ವರ, ರೈಲು ನಿಲ್ದಾಣದಿಂದ ೧೨ ಕಿ. ಮೀ. ದೂರದಲ್ಲಿದೆ.
ಇಂದೋರ್, ಖಾಂಡ್ವ, ಪ್ರಧಾನ ರೈಲು ಮಾರ್ಗದಲ್ಲಿ ಓಂಕಾರೇಶ್ವರವಿದೆ.
ಉಜ್ಜಯನಿ ಮತ್ತು ಖಾಂಡ್ವದಿಂದ ಸಾಕಷ್ಟು ಬಸ್ಸುಗಳಿವೆ.

ವಸತಿ.
ಮಧ್ಯಪ್ರದೇಶದ ಅಧಿಕೃತ ವಸತಿಗೃಹ ಓಂಕಾರೇಶ್ವರ ಲಭ್ಯ.
ಮಾಧವಾಶ್ರಮ, ಗಂಗೋತ್ರಿ ಉತ್ತಮ ಸೇವೆ ನೀಡುವ ವಸತಿಗೃಹಗಳು.

-----------------------------
ಚಿತ್ರ ಕೃಪೆ: indiaplaces.com