ಐಫೆಲ್ ಗೋಪುರ
ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕಾಣಿಸುತ್ತದೆ.
ಫ್ರಾನ್ಸಿನ ಮಹಾಕ್ರಾಂತಿಯ ಶತಮಾನೋತ್ಸವ ಸಂದರ್ಭಕ್ಕಾಗಿ ನಡೆದ ವಾಸ್ತು ವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ಅವರ ಈ ವಿನ್ಯಾಸ ಬಹುಮಾನ ಗಳಿಸಿತು. ೧೮೮೯ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಇದನ್ನು ನಿರ್ಮಿಸಲಾಯಿತು. ಇದು ಯೂರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಆಗಿದೆ. ಇದರ ವಿನ್ಯಾಸಕರ್ತ ಗುಸ್ತಾವ್ ಐಫೆಲ್ ಅವರ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಯಿತು.
ಈ ಐಫೆಲ್ ಮಹಾಶಯ ಸಣ್ಣ ಪುಟ್ಟ ರಚನೆಗಳನ್ನು ವಿನ್ಯಾಸಗೊಳಿಸುವ ಜಾಯಮಾನದವನಲ್ಲ. ಈತನ ವಿನ್ಯಾಸಗಳಿಗೆ ಈತನದೇ ವಿಶಿಷ್ಟವಾದ ಮುದ್ರೆ ಇದೆ. ಈತ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಿದ ಎರಡು ರಚನೆಗಳು ಇಂದಿಗೂ ಈತನ ಕೀರ್ತಿಯನ್ನು ಜಗತ್ತಿಗೆ ಸಾರುತ್ತಿವೆ. ಐಫೆಲ್ ಗೋಪುರ ಮತ್ತು ನ್ಯೂಯಾರ್ಕ್ ಅಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ - ಈ ಎರಡೂ ಕಳೆದ ಶತಮಾನಗಳಲ್ಲಿ ಜರುಗಿದ ಎರಡು ಮಹತ್ವದ ಘಟನೆಗಳ ನೆನಪಿಗಾಗಿ ನಿರ್ಮಿಸಲಾದ ರಚನೆಗಳು. ಇವೆರಡೂ ಶತಮಾನೋತ್ಸವ ಆಚರಿಸಿಕೊಂಡಿವೆ!
ಐಫೆಲ್ ಗೋಪುರ ಸುಮಾರು ೩೦೦ಮೀ. ಎತ್ತರವಿದೆ. ಮೇಲಿನ ತುದಿಯಲ್ಲಿ ಮತ್ತೆ ೨೦.೭೫ಮೀ. ಎತ್ತರದ ಟಿ.ವಿ. ಟ್ರಾನ್ಸ್ ಮಿಟರ್ ಇದೆ. ಹಾಗಾಗಿ ಗೋಪುರದ ಒಟ್ಟು ಎತ್ತರ ೩೨೦.೭೫ಮೀ. ಆಗುತ್ತದೆ. ತೂಕ ಸುಮಾರು ೭೩೦೦ ಟನ್ನುಗಳು. ನಾಲ್ಕು ಕಡೆ ಭಾರಿ ಕಮಾನಿನಾಕಾರದ ಭದ್ರ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕು ಕಡೆ ಜನರು ನಿಂತು, ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಲು ಸಹಾಯವಾಗುವಂತೆ, ಭೂಮಿಯಿಂದ ೫೭ಮೀ. ಎತ್ತರದಲ್ಲಿ ಮೊದಲ ಅಟ್ಟಣೆ, ೧೧೫ಮೀ. ಎತ್ತರದಲ್ಲಿ ಎರಡನೆಯ ಅಟ್ಟಣೆ ಮತ್ತು ೨೪೭ಮೀ. ಎತ್ತರದಲ್ಲಿ ಮೂರನೆಯ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೇರುತ್ತ ಹೊದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಗೆ ೬೩ ಜನರನ್ನು ಒಯ್ಯ ಬಲ್ಲ ಮೂರು ಲಿಫ್ಟುಗಳಿವೆ. ೧೭೯೨ ಮೆಟ್ಟಿಲುಗಳಿವೆ. ಎರಕ ಹೊಯ್ದ ಕಬ್ಬಿಣದ ತೊಲೆಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ. ಪ್ರತಿ ೩ ಮೀ. ಎತ್ತರಕ್ಕೆ ಒಂದು ಮಹಡಿಯಂತೆ ಲೆಕ್ಕ ಹಾಕಿದರೆ, ೧೦೦ ಮಹಡಿ ಕಟ್ಟಡ! ಅದನ್ನು ಕಟ್ಟಿ ಮುಗಿಸಲು ೨ ವರ್ಷ, ೨ ತಿಂಗಳು, ೨ ದಿನ ಬೇಕಾಯಿತು. ಅನೇಕ ವರ್ಷಗಳವರೆಗೆ ಇದು ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.
ನಿರ್ಮಾಣ ಸಮಯದಲ್ಲಿ, ಇಪ್ಪತ್ತು ವರ್ಷಗಳ ನಂತರ, ಅದನ್ನು ಕಳಚಿ ಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ, ಮೊದಲನೆಯ ಮಹಾಯುದ್ಧ ಆರಂಭವಾಯಿತು. ಆಗ ಐಫೆಲ್ ಗೋಪುರ, ಮಿಲಿಟರಿ ಸಂಪರ್ಕ ಕೇಂದ್ರವಾಗಿ, ಫ್ರೆಂಚ್ ಸೈನ್ಯ ಕಮಾಂಡಿನ ಕಣ್ಣು ಮತ್ತು ಕಿವಿಯಾಗಿ, ಬಹಳ ಸಹಾಯಕವಾಯಿತು. ಹಾಗಾಗಿ ಅದನ್ನು ಕಳಚಿ ಹಾಕುವ ಪ್ರಶ್ನೆಯೇ ಬರಲಿಲ್ಲ. ಮುಂದೆ ನೂರು ವರ್ಷಕ್ಕೂ ಹೆಚ್ಚು ಕಾಲ ತಲೆಯೆತ್ತಿ ನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.
೧೯೬೭ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯಿತು. ವರ್ಷಗಳು ಕಳೆದಂತೆ, ಪ್ಯಾರಿಸಿನ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಯಿತು.
ಫ್ರೆಂಚರಿಗೆ ತಮ್ಮ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ ಅಲ್ಲಿ ನಡೆಯುವ ಬೇರೆ ಬೇರೆ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ತಳಿರು ತೋರಣ ಮತ್ತು ದೀಪಾಲಂಕಾರ ಮಾಡಲೇಬೇಕು. ದೀಪಾಲಂಕಾರಗೊಂಡ ರಾತ್ರಿ, ಸುಮಾರು ೪೦ಕಿ.ಮೀ ಆಚೆಗೆ , ಅದು ಆಗಸಕ್ಕೆ ಪಂಜು ಹಿಡಿದಂತೆ ಕಾಣುತ್ತದೆ.
ಈಗ ಐಫೆಲ್ ಗೋಪುರವನ್ನು ಪರಿಸರ ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸುಮಾರು ನಾನೂರು ಮಂದಿ ಸದಾ ಕಾರ್ಯನಿರತರಾಗಿದ್ದಾರೆ. ಗೋಪುರದಲ್ಲಿ ಪ್ರತಿ ತಿಂಗಳು ಸುಮಾರು ಏಳು ಟನ್ನುಗಳಷ್ಟು ರದ್ದಿ ಶೇಖರಣೆ ಆಗುತ್ತದೆ. ತುಕ್ಕು ಹಿಡಿಯಬಹುದಾದ ಭಾಗಗಳನ್ನು ಕಣ್ಗಾಣಿಸಲು ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐಫೆಲ್ ಮಿನಿಯೇಚರ್ ಗೋಪುರಗಳು ಅಸಂಖ್ಯಾತ ಪ್ರವಾಸಿಗರ ಆರಾಮ ಕೋಣೆಗಳನ್ನು ಅಲಂಕರಿಸಿವೆ.
ಚಿತ್ರ ಕೃಪೆ: ವಿಕಿಪೀಡಿಯಾ
ಅನಿಲ್,
ReplyDeleteಐಪೆಲ್ ಟವರ್ ಜಗತ್ತಿನ ವಿಸ್ಮಯಗಳಲ್ಲಿ ಒಂದು. ಅದರ ಸೊಗಸಾದ ಮಾಹಿತಿಯನ್ನು ಕೊಟ್ಟಿದ್ದೀರಿ..ಧನ್ಯವಾದಗಳು.
ತುಂಬಾ ಒಳ್ಳೆಯ ಮಾಹಿತಿಗಳನ್ನು ನೀಡಿದ್ದೀರಿ. ಧನ್ಯವಾದಗಳು.....
ReplyDeleteಶಿವು,
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
-ಅನಿಲ್
ವಿನಾಯಕ,
ReplyDeleteಅನವರತಕ್ಕೆ ಸ್ವಾಗತ!
ಲೇಖನ ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದಗಳು..
-ಅನಿಲ್