My Blog List

Thursday, November 12, 2009

ಇಂಗ್ಲೆಂಡಿನ ಸ್ಟೋನ್ ಹೆಂಜ್

ಇಂಗ್ಲೆಂಡಿನ ಸ್ಟೋನ್ ಹೆಂಜ್





ಗುಹೆಗಳಲ್ಲಿ ವಾಸ ಮಾಡುತ್ತ ಬೇಟೆಯಾಡಿ ಜೀವಿಸುತ್ತಿದ್ದ ಪುರಾತನ ಮಾನವ ಕ್ರಮೇಣ ಪಶುಪಾಲನೆ, ಕೃಷಿಯಂಥ ಹೊಸ ವಿಷಯಗಳನ್ನು ಕಲಿಯುವುದರ ಜೊತೆಗೆ ತನ್ನದೇ ರೀತಿಯಲ್ಲಿ ಖಗೋಳ ಜ್ಞಾನವನ್ನು ಆರ್ಜಿಸಿದ. ನಿಸರ್ಗಕ್ಕೆ ಹೊಂದಿಕೊಂಡೇ ಬದುಕುತ್ತಿದ್ದ ಆತನಿಗೆ ಪರಿವಾರ ದೊಡ್ಡದಾದಂತೆ ಹೆಚ್ಚು ಹೆಚ್ಚು ಧಾನ್ಯ ಬೆಳೆಯಬೇಕಾದ ಹಾಗೂ ಅದನ್ನು ಸಂಗ್ರಹಿಸಿಡಬೇಕಾದ ಅಗತ್ಯ ಉಂಟಾಯಿತು. ಯಾವ ದಿಕ್ಕಿನಲ್ಲಿ ಮೋಡ ಹೆಪ್ಪುಗಟ್ಟಿದಾಗ ಮಳೆ ಬೀಳುತ್ತದೆ, ಯಾವ ಮರದಲ್ಲಿ ಯಾವ ಹಣ್ಣು ಬಿಡುತ್ತದೆ, ಇತ್ಯಾದಿಗಳನ್ನು ಅನುಭವದಿಂದ ಕಂಡುಕೊಂಡ. ಹಾಗೆಯೇ ಹಗಲು, ರಾತ್ರಿ, ಸೂರ್ಯ ಚಂದ್ರ, ನಕ್ಷತ್ರಗಳ ವೀಕ್ಷಣೆಯಿಂದ ಕಾಲವನ್ನು ಅಳೆಯಲು ಕಲಿತ.

ಈಗ ಖಗೋಳ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಗ್ರಹಗಳು, ನಕ್ಷತ್ರಗಳು ನಿಹಾರಿಕೆಗಳು, ಆಕಾಶಕಾಯಗಳು - ಹೀಗೆ ಆಸಕ್ತಿದಾಯಕವಾದ ಹಲವು ವಿಷಯಗಳ ಅಭ್ಯಾಸ ನಿರಂತರವಾಗಿ ನಡೆಯುತ್ತಲೂ ಇದೆ. ಜಗತ್ತಿನ ಅನೇಕ ಕಡೆ ದೂರದ ನಕ್ಷತ್ರಗಳನ್ನು ಅಭ್ಯಸಿಸುತ್ತ, ಸೌರಮಂಡಲದ ಅದ್ಭುತಗಳಿಗೆ ಸದಾ ಕಣ್ಣು ತೆರೆದುಕೊಂದಿರುವ ಹಲವಾರು ಅತ್ಯಾಧುನಿಕ ವೀಕ್ಷಣಾಲಯಗಳಿವೆ.

ಪುರಾತನ ಮನುಷ್ಯರು ಸಹ ತಮ್ಮದೇ ರೀತಿಯಲ್ಲಿ ವೀಕ್ಷಣಾಲಯಗಳನ್ನು ನಿರ್ಮಿಸಿಕೊಂದು ಖಗೋಳವನ್ನು ಅಭ್ಯಾಸ ಮಾಡುತ್ತಿದ್ದರು ಎಂಬುದಕ್ಕೆ ಅನೇಕ ಪುರಾವೆಗಳಿವೆ. ಇಂಗ್ಲೆಂಡಿನ ಸ್ಯಾಲಿಸ್ಬರಿ ಮೈದಾನದಲ್ಲಿ ಇರುವ ಸ್ಟೋನ್ ಹೆಂಜ್ ಎಂಬ ಕಲ್ಲು ಕಂಬಗಳ ಗುಡಿ ಅಂಥವುಗಳಲ್ಲೊಂದು.





ಇಲ್ಲಿ ೪.೫-೬ಮೀ. ಎತ್ತರದ ಕಲ್ಲು ಚಪ್ಪಡಿಗಳನ್ನು ಅವುಗಳ ಅಕ್ಷ ದಕ್ಷಿಣಾಯನ ದಿನದಂದು ಉದಯಿಸುವ  ಸೂರ್ಯನ ಮಧ್ಯಭಾಗವನ್ನು ಸರಿಯಾಗಿ ಭೇದಿಸುವಂತೆ ನಿಲ್ಲಿಸಲಾಗಿದೆ. ಇದು ಕ್ರಿ. ಪೂ. ೨೫೦೦ರಷ್ಟು ಹಿಂದಿನದು ಎಂದು ಹೇಳಲಾಗುತ್ತಿದೆ. ಆಗಿನ್ನೂ ಮಾನವನಿಗೆ ಲೋಹಗಳ ಪರಿಚಯವೂ ಆಗಿರಲಿಲ್ಲ. ಆದರೂ ಪೂರ್ವನಿವಾಸಿಗಳ ಖಗೋಳ ಪ್ರಜ್ಞೆ ನಮ್ಮನ್ನು ಅಚ್ಚರಿಗೊಳಿಸದೆ ಇರುವುದಿಲ್ಲ. ಆ ಜನರು ಅದನ್ನು ಕಾಲವನ್ನು ಅಳೆಯುವ ಯಂತ್ರವಾಗಿ, ಸೂರ್ಯಾರಾಧನೆಯ ಮಂದಿರವಾಗಿ, ವೀಕ್ಷಣಾಲಯವಾಗಿ ಅಥವಾ ಧಾರ್ಮಿಕ ಕ್ರಿಯೆಗಳ ಕೇಂದ್ರವಾಗಿ ಬಳಸಿರಬಹುದೆಂದು ಊಹಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ.

ಚಿತ್ರ ಕೃಪೆ: ವಿಕಿಪೀಡಿಯಾ

Tuesday, November 10, 2009

ಪಿಸಾ ಗೋಪುರ

ಪಿಸಾ ಗೋಪುರ

ಪಿಸಾ, ಮಧ್ಯ ಇಟಲಿಯ ಟಸ್ಕನಿಯ ಪ್ರಾಂತ್ಯದ ಒಂದು ನಗರ. ಅದರ ಕೇಂದ್ರ ಭಾಗದಲ್ಲಿರುವ ಪಿಸಾ ಗೋಪುರ (ಕ್ಯಾಂಪಾನೈಲ್ ಕಟ್ಟಡ) ಅಧುನಿಕ ಜಗತ್ತಿನ ಏಳು ಅದ್ಭುತಗಳಲ್ಲೊಂದೆಂದು ಪ್ರಖ್ಯಾತವಾಗಿದೆ. ಈ ಗೋಪುರದ ನಿರ್ಮಾಣ ಕ್ರಿ. ಶ. ೧೧೭೩ರಲ್ಲಿ ಪ್ರಾರಂಭವಾಗಿ ಕ್ರಿ. ಶ. ೧೩೫೦ರಲ್ಲಿ ಮುಕ್ತಾಯಗೊಂಡಿತು. ಅದರ ಸಮೀಪದಲ್ಲಿರುವ ಬ್ಯಾಪ್ಟಿಸ್ಟ್ರಿ ಇಗರ್ಜಿಯ ಗಂಟೆ ಗೋಪುರವಾಗಿ ಅದನ್ನು ನಿರ್ಮಿಸಲಾಯಿತು. ಪ್ರಾರಂಭದಲ್ಲಿ ಅದನ್ನು ಹದಿಮೂರು ಅಂತಸ್ತಿನ ಗೋಪುರವಾಗಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಎಂಟನೆಯ ಮಹಡಿಯ ಕೆಲಸ ಪೂರ್ಣವಾಗುವ ವೇಳೆಗೆ ಅದು ಕೇಂದ್ರ ಅಕ್ಷದಿಂದ ಸುಮಾರು ೨.೧ ಮೀ. ಅಷ್ಟು ವಾಲಿದುದರಿಂದ ನಿರ್ಮಾಣವನ್ನು ಅಲ್ಲಿಗೇ‌ ನಿಲ್ಲಿಸಲಾಯಿತು. ನಿರ್ಮಾಣ ಅರ್ಧದಲ್ಲೇ ನಿಂತರೂ ಅದರ ಬಗ್ಗೆ ಆಕರ್ಷಣೆ ಕಡಿಮೆಯಾಗಲಿಲ್ಲ. ಇದು ಪ್ರತಿ ವರ್ಷ ಸುಮಾರು ೨ಸೆ. ಮೀ. ಅಷ್ಟು ವಾಲುತ್ತ, ಈಗ 'ಪಿಸಾ ವಾಲು ಗೋಪುರ' ಎಂದು ಪ್ರಖ್ಯಾತವಾಗಿದೆ.




ಇದು ಸುಮಾರು ೫೫.೮೬ ಮೀ (೧೮೩ ಅಡಿ, ೩ ಅಂಗುಲ) ಎತ್ತರವಾಗಿದೆ. ಇದರ ಅಡಿಪಾಯ ಕೇವಲ ಮೂರು ಮೀ. ಆಳ ಇರುವುದೇ ಅದು ವಾಲುವುದಕ್ಕೆ ಕಾರಣ ಎಂದು ಕೆಲವರು ವಾದಿಸುತ್ತಾರೆ. ವಾಸ್ತವದಲ್ಲಿ, ಪಿಸಾ ಗೋಪುರ ನಿಂತಿರುವುದು ಗಟ್ಟಿ ಕಲ್ಲಿನ ನೆಲದ ಮೇಲಲ್ಲ, ಬದಲಾಗಿ ತೀರಾ ಜಾಳಾಗಿ ಸಂಚಯಗೊಂಡಿರುವ ಶಿಲಾಪದರದ ಮೇಲೆ. ಪಿಸಾ ಗೋಪುರ ವಾಲಲು ಇದೇ ಕಾರಣ ಎನ್ನುವವರೂ ಇದ್ದಾರೆ.

ಇಟಲಿಯ ಗಣಿತ ಶಾಸ್ತ್ರಜ್ಞ, ಖಗೋಳ ವಿಜ್ಞಾನಿ ಹಾಗು ಭೌತ ವಿಜ್ಞಾನಿ ಗೆಲಿಲಿಯೋ ಈ ಗೋಪುರದ ಮೇಲಿನಿಂದ ಬೇರೆ ಬೇರೆ ತೂಕದ ಎರಡು ಗುಂಡುಗಳನ್ನು ಕೆಳಕ್ಕೆ ಬೀಳಲು ಬಿಟ್ಟು, ಅವು ಏಕಕಾಲದಲ್ಲಿ ಭೂಮಿಯನ್ನು ತಲುಪಿದುದನ್ನು ತೋರಿಸಿದ ಎಂದು ಹೇಳಲಾಗಿದೆ.

ಈಗ ಅದು ಕೇಂದ್ರ ಅಕ್ಷದಿಂದ ೩.೯ ಮೀ. ಅಷ್ಟು ವಾಲಿರುವುದರಿಂದ, ಪಿಸಾ ಗೋಪುರ ಏರಿ ನಗರ ವೀಕ್ಷಿಸಲು ಯಾರಿಗೂ ಅನುಮತಿ ಇಲ್ಲ. ಆದರೂ ಅದು ವಾಲಿ ನಿಂತಿರುವ ದೃಶ್ಯವನ್ನು ಕಾಣಲು ಪ್ರವಾಸಿಗಳು ಬರುತ್ತಲೇ ಇದ್ದಾರೆ.

ಚಿತ್ರ ಕೃಪೆ: ವಿಕಿಪೀಡಿಯಾ

Monday, November 09, 2009

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಇಂದು ಶಂಕರ್ ನಾಗ್ ಅವರ ನೆನಪಾಯಿತು.

ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.

ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.

ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.

ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.

ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅದರಲ್ಲಿ "ಗೀತ" ಎಂಬ ಚಲನಚಿತ್ರ ಕೂಡ ಒಂದು. ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳೂ ಸೊಗಸಾಗಿವೆ.

ಆ ಎಲ್ಲಾ ಹಾಡುಗಳಲ್ಲಿ "ಕೇಳದೆ ನಿಮಗೀಗ ದೂರದಲ್ಲಿ ಯಾರೋ" ಎಂಬ ಹಾಡು ತುಂಬಾ ಚೆನ್ನಾಗಿದೆ. ಈಗ ಈ ಹಾಡನ್ನು ನೋಡಿ, ಕೇಳಿ. ನನಗಂತೂ ಈ ಹಾಡು ತುಂಬಾ ಅಂದರೆ ತುಂಬಾನೇ ಇಷ್ಟ. ನಿಮಗೂ ಈ ಹಾಡು ಇಷ್ಟ ಆಗುತ್ತೆ ಅಂತ ಭಾವಿಸಿದ್ದೇನೆ.


Thursday, November 05, 2009

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦) 




ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.

ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.

ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.

ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.

ಚಿತ್ರ ಕೃಪೆ: ವಿಕಿಪೀಡಿಯಾ