My Blog List

Wednesday, April 08, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೮ [ನಾಶಿಕದ ತ್ರ್ಯಂಬಕೇಶ್ವರ].

ನಾಶಿಕದ ತ್ರ್ಯಂಬಕೇಶ್ವರ.

ನಾಷಿಕದ ತ್ರ್ಯಂಬಕೇಶ್ವರ.
ಎಲ್ಲಿದೆ?
ಮಹಾರಾಷ್ಟ್ರದ ನಾಶಿಕದಲ್ಲಿದೆ. ಇದು ಗೋದಾವರಿ ನದಿಯ ಉಗಮ ಸ್ಥಾನ. ತ್ರ್ಯಂಬಕೇಶ್ವರದ ವಿಶೇಷವೆಂದರೆ ಒಂದೇ ಪಾಣಿಪೀಠದ ಕುಳಿಯೊಳಗೆ ಬ್ರಹ್ಮ - ವಿಷ್ಣು - ಮಹೇಶ್ವರರು ಮೂವರು ಕೂಡಿದ ಲಿಂಗ.

ದೇವಸ್ಥಾನದ ಸ್ವರೂಪ.
ಇದು ಭವ್ಯವಾದ ದೇಗುಲ. ಎತ್ತರದ ಕಂಬಗಳು ದೇವಾಲಯಕ್ಕೆ ಮೆರುಗು ನೀಡಿದೆ. ದೇವಾಲಯದ ಆವರಣದಲ್ಲಿ ಅಮೃತಕುಂಡ ಸರೋವರವಿದೆ. ದೇವಾಲಯದ ಸ್ವಲ್ಪ ದೂರದಲ್ಲೇ ಕುಶಾವರ್ತಿ ಎಂಬ ಪುಷ್ಕರಣಿ ಇದೆ. ದೇವಾಲಯವಿರುವ ಬ್ರಹ್ಮಗಿರಿ ಪರ್ವತದ ಬುಡದಲ್ಲಿ ವರಾಹ ತೀರ್ಥ ಮತ್ತು ನರಸಿಂಹ ತೀರ್ಥಗಳೆಂಬ ಪವಿತ್ರ ಕ್ಷೇತ್ರಗಳಿವೆ.

ಸ್ಥಳ ಪುರಾಣ.
ಬ್ರಹ್ಮಗಿರಿ ಪರ್ವತದ ತಪ್ಪಲಿನಲ್ಲಿ ಮಳೆಯಾಗದ್ದರಿಂದ ಗೌತಮ ಋಷಿಯು ದೀರ್ಘ ತಪಸ್ಸು ನಡೆಸಿದ. ಅವನ ತಪಸ್ಸಿಗೆ ಒಲಿದ ವರುಣನು ಶಾಶ್ವತವಾಗಿ ಹರಿಯುವ ಜಲಧಾರೆಯನ್ನು ಕರುಣಿಸಿದ. ಇದೇ ಗೋದಾವರೀ ನದಿ ಆಯಿತು. ಗೌತಮನ ಕೀರ್ತಿಗೆ ಅಸೂಯೆಗೊಂಡ ಋಷಿಗಳು ಅವನ ಮೇಲೆ ಹಸುವನ್ನು ಕೊಂದ ಆಪಾದನೆಯನ್ನು ಹೊರಿಸಿ ಬಹಿಷ್ಕರಿಸಿದರು. ಇದರಿಂದ ನೊಂದ ಗೌತಮನು ತನ್ನ ಸತಿಯೊಂದಿಗೆ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡಾಗ ಅವನು ಜ್ಯೋತಿರ್ಲಿಂಗ ರೂಪಧಾರಿಯಾಗಿ ಪ್ರತ್ಯಕ್ಷನಾಗಿ ತ್ರ್ಯಂಬಕೇಶ್ವರನಾಗಿ ಇಲ್ಲಿ ನೆಲೆಸಿದನೆಂದು ಪುರಾಣ ಹೇಳುತ್ತದೆ.

ಭೇಟಿ ನೀಡುವ ಸಮಯ.
ಮಾಘ ಶುದ್ಧ ದಶಮಿಯಂದು ಇಲ್ಲಿ ವಿಶೇಷ ರಥೋತ್ಸವ ನೆರವೇರುತ್ತದೆ. ಗುರು ಉಚ್ಚನಾಗಿರುವಾಗ ಸಿಂಹ ಮಾಸದ ಹುಣ್ಣಿಮೆಯಂದು ಇಲ್ಲಿ ೧೨ ವರ್ಷಗಳಿಗೊಮ್ಮೆ ಕುಂಭಮೇಳ ನೆರವೇರುತ್ತದೆ. ಗೋದಾವರಿಯಲ್ಲಿ ಪುಣ್ಯ ಸ್ನಾನ ಮಾಡುವುದು ವಿಶೇಷವೆಂದು ನಂಬಿಕೆ. ಶಿವರಾತ್ರಿಯಂದು ವಾರ್ಷಿಕ ಉತ್ಸವ ನೆರವೇರುತ್ತದೆ.

ಸೇರುವ ಬಗೆ.
ನಾಶಿಕ್ ಹತ್ತಿರದ ರೈಲು ನಿಲ್ದಾಣದಿಂದ ಕೇವಲ ೮ ಕಿ.ಮೀ. ದೂರದಲ್ಲಿ ತ್ರ್ಯಂಬಕೇಶ್ವರ ದೇವಾಲಯವಿದೆ. ವಾಹನ ಸೌಕರ್ಯವಿದ್ದರೂ ಪಾದಯಾತ್ರೆ ಮೂಲಕ ಕ್ರಮಿಸುವ ಭಕ್ತರೇ ಹೆಚ್ಚು. ಮುಂಬೈಯಿಂದ ೧೮೮ ಕಿ.ಮೀ. ದೂರದಲ್ಲಿರುವ ಇಲ್ಲಿಗೆ ಬಸ್ ಸೌಲಭ್ಯವಿದೆ.

ವಸತಿ.
ತ್ರ್ಯಂಬಕೇಶ್ವರದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆಯ ವಸತಿ ಗೃಹವಿದೆ. ನಾಶಿಕ್ ಅಲ್ಲಿ ಸಾಕಷ್ಟು ಸುಸಜ್ಜಿತವಾದ ವಸತಿ ಗೃಹಗಳಿವೆ.

---------------------------------------------
ಚಿತ್ರ ಕೃಪೆ: www.skyscrapercity.com


Tuesday, April 07, 2009

ಮರೆಯದ ಹಾಡು

ನಿನ್ನೆ ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಹೋಗುತ್ತಿರುವಾಗ ಎಫ್ ಎಮ್ ಕಾಮನಬಿಲ್ಲು ೧೦೧.೩ರಲ್ಲಿ ಬರುವ ಚಿತ್ರಗೀತೆಗಳನ್ನು ಕೇಳ್ತಿದ್ದೆ.

ಅದರಲ್ಲಿ ಒಂದು ಹಾಡು ಬರ್ತಿತ್ತು. ಈ ಹಾಡು ಕೇಳಿ ಬಹಳ ದಿನಗಳಾಗಿದ್ದವು. ಈ ಹಾಡು ಬಂದೊಡನೆಯೇ Volume ಜೋರು ಮಾಡಿದೆ.
ಈ ಹಾಡನ್ನು ಕೇಳ್ತಿದ್ರೆ ಕೇಳ್ತಾನೇ ಇರ್ಬೇಕು ಅಂತ ಅನ್ಸುತ್ತೆ. ಅಷ್ಟು ಚೆನ್ನಾಗಿದೆ ಈ ಹಾಡು. ಯಾವುದೋ ಲೋಕಕ್ಕೆ ಕರೆದೊಯ್ಯುವ ಶಕ್ತಿ ಈ ಹಾಡಿಗಿದೆ.

ಜಿ. ಕೆ. ವೆಂಕಟೇಶ್ ಅವರ ಸಂಗೀತ ತುಂಬಾ ಇಂಪಾಗಿದೆ.
ಆರ್. ಎನ್. ಜಯಗೋಪಾಲ್ ಅವರ ಸಾಹಿತ್ಯ ಕೂಡ ತುಂಬಾ ಚೆನ್ನಾಗಿದೆ.
ಎಸ್. ಜಾನಕಿ ಅವರ ಗಾಯನ ಸುಮಧುರವಾಗಿದೆ.

ನಿನ್ನೆಯಿಂದ ಈ ಹಾಡನ್ನು ಗುನುಗುತ್ತಿರುವೆ.
ಯಾವ ಹಾಡು ಅಂತ ಯೋಚನೆ ಮಾಡ್ತಿದ್ದೀರಾ?

ಚಿತ್ರ: ಮರೆಯದ ಹಾಡು
ಸಂಗೀತ: ಜಿ. ಕೆ. ವೆಂಕಟೇಶ್
ಸಾಹಿತ್ಯ: ಆರ್. ಎನ್. ಜಯಗೋಪಾಲ್

ಹಾಡಿನ ಸಾಹಿತ್ಯ ಕೆಳಗೆ ಬರೆದಿರುವೆ.

||ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ|
||ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ..||

||ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ|
||ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ||
||ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ|
||ತಪಸಿನಾ ಫಲವಿದೂ ದೈವದಾ ವರವಿದೂ ಆ..ಆ..||೧||

||ಶೃತಿಲಯದ ಮಿಲನದಲ್ಲೇ ದೈವೀಕನಾದ ಲೀಲೆ|
||ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ||
||ನೆನಪಿನ ತೋಟದ ಮಲ್ಲೇ ಹೂ ಮಾಲೆ|
||ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು ಆ..ಆ..||೨||

||ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ|
||ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ||
||ನಿನ್ನೊಲವಿನಲ್ಲೆ ಮಿ೦ದೂ ನಾನಿ೦ದೂ|
||ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ ಆ..ಆ..||೩||

ಈ ಹಾಡು ನಿಮಗೂ ಇಷ್ಟವಾಗಬಹುದು ಎಂದು ತಿಳಿದು ಹಾಡಿನ ಸಾಹಿತ್ಯವನ್ನು ಇಲ್ಲಿ ಪೋಸ್ಟ್ ಮಾಡಿದ್ದೀನಿ.

Wednesday, March 18, 2009

ಆನಂದಭೈರವಿ - ಚಲನಚಿತ್ರ

ಆನಂದ ಭೈರವಿ ಚಿತ್ರ ೧೯೮೨ರಲ್ಲಿ ಬಿಡುಗಡೆಯಾಯಿತು.

ಸಂಗೀತಕ್ಕೆ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವವಿದ್ದ ಚಿತ್ರವಿದು.

ಈ ಚಿತ್ರವನ್ನು "ಕನ್ನಡಚಿತ್ರರಂಗದ ಕುಳ್ಳ" ಎಂಬ ಖ್ಯಾತಿ ಪಡೆದಿರುವ ದ್ವಾರಕೀಶ್ ಅವರು ನಿರ್ಮಿಸಿದರು.

ಈ ಚಿತ್ರದ ಎಲ್ಲಾ ಹಾಡುಗಳು ತುಂಬಾ ಸೊಗಸಾಗಿವೆ.

ಈ ಚಿತ್ರಕ್ಕೆ ಸೋರಟ್ ಅಶ್ವಥ್ ಅವರ ಸಾಹಿತ್ಯ ಹಾಗೂ ರಮೇಶ್ ನಾಯ್ಡು ಅವರ ಸಂಗೀತವಿದೆ.

ಹಿನ್ನೆಲೆಗಾಯನದಲ್ಲಿ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ವಾಣಿ ಜಯರಾಂ ರಾರಾಜಿಸಿದ್ದಾರೆ.

ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಬರುವ ಮೊದಲ ಹಾಡು ಇದು.

ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ದಿನವೆಲ್ಲಾ ಹೋರಾಟ ಲೋಕದಲ್ಲಿ

ಈ ಹಾಡಿನಲ್ಲಿ ಭೈರವಿ ದೊಂಬರಾಟ ಆಡ್ತಿರ್ತಾಳೆ.

ಮುಂದಿನ ಹಾಡು
ಬ್ರಹ್ಮಾಂಜಲಿ...(ಮುಂದೆ ಗೊತ್ತಿಲ್ಲ). :(

ಈ ಹಾಡಿನಲ್ಲಿ ಭೈರವಿಗೆ ಗಿರೀಶ್ ಕಾರ್ನಾಡ್ ನೃತ್ಯಾಭ್ಯಾಸ ಪ್ರಾರಂಭ ಮಾಡ್ತಾರೆ.

ಈ ಹಾಡಿನ ನಂತರ ಬರುವ ಹಾಡು

ಚೈತ್ರದ ಕುಸುಮಾಂಜಲಿ
ಚೈತ್ರದ ಕುಸುಮಾಂಜಲಿ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ

ಈ ಹಾಡಿನಲ್ಲಿ ಗಿರೀಶ್ ಕಾರ್ನಾಡ್ ಅವರ ನೃತ್ಯ ತುಂಬಾ ಚೆನ್ನಾಗಿದೆ.
ಗಿರೀಶ್ ಕಾರ್ನಾಡರ ನರ್ತನಾ ಸಾಮರ್ಥ್ಯ ಇದರಲ್ಲಿ ನೋಡಬಹುದು.

ನಂತರ ಬರುವುದು ಈ ಯುಗಳ ಗೀತೆ

ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ
ಎದೆಯಲಿ ಒಂದೇ ರಾಗ
ಅದು ಆನಂದ ಭೈರವಿ ರಾಗ
ಕರೆಯುವ ಕೊಳಲಿನ ನಲಿಯುವ ಗೆಜ್ಜೆಯ
ಎದೆಯಲಿ ಪ್ರೇಮ ಪರಾಗ
ಅದು ಆನಂದ ಭೈರವಿ ರಾಗ

ಈ ಹಾಡು ಆನಂದ ಹಾಗು ಭೈರವಿ ಅವರ ಮೇಲೆ ಚಿತ್ರಿತವಾಗಿದೆ.

ನಂತರ ಬರುವ ಹಾಡು
ಮಲಗಿರುವೆಯಾ ರಂಗನಾಥ... (ಮುಂದೆ ಗೊತ್ತಿಲ್ಲ). :(

ಮಾಳವಿಕಾ ಅವರ ನರ್ತನಾ ಸಾಮರ್ಥ್ಯ ಈ ಹಾಡಿನಲ್ಲಿ ನೋಡಬಹುದು.

ಇನ್ನು ಕ್ಲೈಮ್ಯಾಕ್ಸ್.
ಕ್ಲೈಮ್ಯಾಕ್ಸಿನಲ್ಲಿ ಬರುವ ಹಾಡು ಇದು.

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲಿನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ

ಈ ಹಾಡಂತೂ ತುಂಬಾ ಸುಮಧುರವಾಗಿದೆ.
ಕೊನೆಯಲ್ಲಿ ಬರುವ ವೇಣುವಾದನ ಅದ್ಬುತವಾಗಿದೆ.

ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳು ನನಗಿಷ್ಟ.

ಈ ಚಿತ್ರ ದ್ವಾರಕೀಶ್ ಅವರು ನಿರ್ಮಿಸಿದ ೧೯ನೇ ಚಿತ್ರ.

------------------------------------------
ಇಂದು ಮನೆಗೆ ಬಂದಾಗ ಟಿವಿಯಲ್ಲಿ ಈ ಚಿತ್ರ ಬರ್ತಿತ್ತು.
ಹಾಗಾಗಿ ಈ ಬರಹ. :)

Wednesday, March 04, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೭

ಹಿಮಾಲಯದ ಕೇದಾರನಾಥ.

ಎಲ್ಲಿದೆ?
ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ.

ಸ್ಥಳ ಪುರಾಣ.
ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ.
ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ.
ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ.
ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ.
ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ.

ಭೇಟಿ ನೀಡುವ ಸಮಯ.
ಕೇದಾರನಾಥಕ್ಕೆ ನಾವು ಇಚ್ಛಿಸಿದ ಸಂದರ್ಭದಲ್ಲಿ ಭೇಟಿಕೊಡಲು ಸಾಧ್ಯವಿಲ್ಲ. ಏಕೆಂದರೆ, ಈ ದೇವಸ್ಥಾನ ವರ್ಷದಲ್ಲಿ ಆರು ತಿಂಗಳು ಹಿಮದಲ್ಲಿ ಮುಳುಗಿ ಹೋಗಿರುತ್ತದೆ. ಹೀಗೆ ಹಿಮಾವೃತವಾಗಿದ್ದಾಗಲೂ ಘೃತಾವೃತವಾದ ’ನಂದಾದೀಪ’ ಉರಿಯುತ್ತಲೇ ಇರುವುದು ವಿಶೇಷ. ವೈಶಾಖ ಮಾಸದಿಂದ (ಮೇ ತಿಂಗಳಿನಿಂದ) ಕಾರ್ತಿಕ ಮಾಸದವರೆಗೆ (ನವೆಂಬರ್ ತಿಂಗಳವರೆಗೆ) ಮಾತ್ರ ಇಲ್ಲಿ ದರ್ಶನದ ಅವಕಾಶ. ಕಡೇ ಕಾರ್ತಿಕ ಸೋಮವಾರದ ವಿಶೇಷ ಪೂಜೆಯ ನಂತರ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಕಾರ್ತಿಕ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ಇರುತ್ತದೆ. ಶಂಕರ ಜಯಂತಿ ಕೂಡ ಇಲ್ಲಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ.

ಸೇರುವ ಬಗೆ.
ಕೇದಾರನಾಥಕ್ಕೆ ಹೋಗಲು ದೆಹಲಿ, ಹರಿದ್ವಾರ ಮುಖಂತರ ಗೌರಿಕುಂಡಕ್ಕೆ ಬರಬೇಕು. ಅಲ್ಲಿಂದ ೧೪ ಕಿ. ಮೀ. ದೂರವನ್ನು ನಡಿಗೆ, ಡೋಲಿ ಅಥವಾ ಕುದುರೆ ಸವಾರಿ ಮೂಲಕ ಕ್ರಮಿಸಬೇಕು.

ವಸತಿ.
ಕೇದಾರನಾಥದಲ್ಲಿ ವಸತಿ ಸೌಕರ್ಯವಿಲ್ಲ. ದೇವಪ್ರಯಾಗ (೭೧ ಕಿ. ಮೀ.), ಗೌರಿಕುಂಡ (೧೪ ಕಿ. ಮೀ.) ಅಥವಾ ಉತ್ತರ ಕಾಶಿಗಳಲ್ಲಿ (೨೩೫ ಕಿ. ಮೀ.) ವಸತಿ ವ್ಯವಸ್ಥೆಗಳಿವೆ.


---------------------------------

ಚಿತ್ರ ಕೃಪೆ: www.indiamike.com

Monday, March 02, 2009

ಹನ್ನೆರಡು ಜ್ಯೋತಿರ್ಲಿಂಗಗಳು - ೬

ಡಾಕಿನಿಯ ಭೀಮಶಂಕರ

ಎಲ್ಲಿದೆ?
ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿದೆ. ಪುಣೆಯಿಂದ ನಾಶಿಕ ರಸ್ತೆಯಲ್ಲಿ ಮಂಚರ್ ಎಂಬ ಊರಿಗೆ ಬಂದು ಸಹ್ಯಾದ್ರಿ ಪರ್ವತ ಶ್ರೇಣಿಯತ್ತ ತಿರುಗಿ ಖೋಡೆಂಗಾವ್ ಎಂಬ ಊರಿಗೆ ಬಂದರೆ ಸಮೀಪದ ಡಾಕಿನಿಯಲ್ಲಿ ಭೀಮಶಂಕರ ದೇಗುಲವಿದೆ. ಇದು ಬ್ರಹ್ಮಪುರ ಪರ್ವತ ಶಿಖರದಲ್ಲಿದ್ದು ಭೀಮಾ ನದಿ ಇಲ್ಲಿ ಉಗಮವಾಗುವುದು. ಸುಂದರ ದೇಗುಲ, ಪ್ರಾಕಾರ ಭವ್ಯ ಗೋಪುರಗಳು ಹಸಿರಿನ ಮಧ್ಯೆ ಕಂಗೊಳಿಸುತ್ತವೆ. ಲಿಂಗದ ಮಧ್ಯದಲ್ಲಿ ಗೆರೆ ಇದ್ದು, ಇದು ಶಿವ ಶಕ್ತಿ ಸ್ವರೂಪವಾಗಿದೆ. ಇದನ್ನು ಅರ್ಧನಾರೀಶ್ವರ ರೂಪ ಎಂದೂ ಶಿವಲೀಲಾಮೃತ ವರ್ಣಿಸುತ್ತದೆ. ಸಂತ ರಾಮದಾಸರು, ಗಂಗಾಧರ ಪಂಡಿತರು, ಸಂತ ಜ್ಞಾನೇಶ್ವರರು, ವರದಹಳ್ಳಿ ಶ್ರೀಧರ ಸ್ವಾಮಿಗಳು ಮೊದಲಾದ ಮಹಿಮರು ತಪಸ್ಸು ಮಾಡಿ ಅನುಗ್ರಹ ಪಡೆದ ಸ್ಥಳವಿದೆ. ಪೋರ್ಚುಗೀಸರು ಸ್ಥಾಪಿಸಿದರು ಎಂದು ನಂಬಲಾದ ಬೃಹದಾಕಾರದ ತೂಗಾಡುವ ಘಂಟೆ ಇಲ್ಲಿನ ಇನ್ನೊಂದು ವಿಶೇಷ.

ಸ್ಥಳ ಪುರಾಣ.
ಭೀಮಶಂಕರ ಪೂರ್ವ ಇತಿಹಾಸ ತಿಳಿಸುವ ಅನೇಕ ಕಥೆಗಳಿವೆ. ವೃತ್ರಾಸುರನನ್ನು ಸಂಹರಿಸಿ ಕೆಲಕಾಲ ಇಲ್ಲಿ ವಿಶ್ರಮಿಸಿದ ಶಿವನ ಮೈಯಿಂದ ಇಳಿದ ಬೆವರೇ ಭೀಮಾನದಿ ಆಯಿತು. ಶಿವ ಅಲ್ಲಿ ನೆಲೆಸಿ ಭೀಮಶಂಕರನಾದ ಎಂಬುದು ಒಂದು ಕಥೆಯಾದರೆ, ಭೀಮಾಸುರನೆಂಬ ಅಸುರ ಸುದೇಷ್ಣೆ ಎಂಬ ಮಹಾರಾಣಿಯ ಸೌಂದರ್ಯಕ್ಕೆ ಮಾರುಹೋಗಿ ಅವಳ ಪತಿ ಸುಲಕ್ಷಣನ ಜೊತೆ ಬಂಧಿಸಿ ಕಾರಾಗೃಹದಲ್ಲಿಟ್ಟಾಗ ಅವರು ಮೃತ್ತಿಕಾಲಿಂಗವನ್ನು ಪೂಜಿಸುತ್ತಿದ್ದಾರೆ ಎಂದು ತಿಳಿದು ನಾಶ ಮಾಡಲು ಹೋದಾಗ, ಶಿವನು ಅವತರಿಸಿ ಭೀಮಾಸುರನನ್ನು ಸಂಹರಿಸಿ, ಭಕ್ತರ ಕೋರಿಹೆಯ ಮೇರೆಗೆ ಇಲ್ಲೇ ನಿಂತು ಭೀಮಶಂಕರನಾದ ಎಂಬುದು ಇನ್ನೊಂದು ಕಥೆ.
ಚಾರಿತ್ರಿಕವಾಗಿ ಛತ್ರಪತಿ ಶಿವಾಜಿ ಈ ದೇವಸ್ಥಾನವನ್ನು ಸ್ತಾಪಿಸಿದ. ಪೇಶ್ವೆ ನಾನಾ ಫಡ್ನವೀಸ್ ಇದನ್ನು ಅಭಿವೃದ್ದಿಗೊಳಿಸಿದ. ಪುಣೆಯ ವರ್ತಕ ಚಿಮನ್ ಜಿ ಅಂತಾಜಿ ನಾಯಕ್ ಭೀಡೇ ೧೪೩೭ರಲ್ಲಿ ಮುಖಮಂಟಪ ನಿರ್ಮಿಸಿದ. ಕ್ರಿ. ಶ. ೧೭೨೧ರಲ್ಲಿ ಪೋರ್ಚುಗೀಸರು ಬೃಹತ್ ಘಂಟೆ ನಿರ್ಮಿಸಿದರು ಎಂಬುದಕ್ಕೆ ದಾಖಲೆಗಳಿವೆ.

ಭೇಟಿ ನೀಡುವ ಸಮಯ.
ಮಹಾಶಿವರಾತ್ರಿಯಂದು ಇಲ್ಲಿ ದೊಡ್ಡ ರಥೋತ್ಸವ ಜರುಗುತ್ತದೆ. ಪ್ರತಿ ಸೋಮವಾರ ವಿಶೇಷ ಪೂಜೆಗಳಿದ್ದು, ಪ್ರತಿನಿತ್ಯವೂ ಮೂರು ಬಾರಿ ರುದ್ರಾಭಿಷೇಕ, ಪಂಚಾಮೃತ ಸ್ನಾನ ನಡೆಯುವುದು ಇಲ್ಲಿನ ವಿಶೇಷ.

ಸೇರುವ ಬಗೆ.
ಮುಂಬೈಯಿಂದ ಇಲ್ಲಿಗೆ ನೇರ ರೈಲು ಸಂಪರ್ಕವಿದೆ. ಪುಣೆಯಿಂದ ಬಸ್, ಜೀಪ್ ಸೇರಿದಂತೆ ಹಲವು ಮಾದರಿ ವಾಹನಗಳ ಸೌಲಭ್ಯವಿದೆ.

ವಸತಿ.
ಇಳಿದುಕೊಳ್ಳಲು ಸಾಕಷ್ಟು ಧರ್ಮಶಾಲೆಗಳಿವೆ. ಹತ್ತಿರದ ಪುಣೆ ಹೊಟೆಲ್ಗಳಿಗೆ ಪ್ರಸಿದ್ಧವಾಗಿದೆ.

--------------------------------------

ಚಿತ್ರ ಕೃಪೆ: www.shaivam.org