My Blog List

Monday, November 09, 2009

ಮತ್ತೆ ಮತ್ತೆ ನೆನಪಾಗುವ ಶಂಕರ್ ನಾಗ್

ಇಂದು ಶಂಕರ್ ನಾಗ್ ಅವರ ನೆನಪಾಯಿತು.

ಯಾಕೆ ಅಂದರೆ ನವೆಂಬರ್ ೯ ರಂದು ಅವರ ಜನ್ಮದಿನ. ೧೯೫೪ ನವೆಂಬರ್ ೯ ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.

ಅವರ ಬಗ್ಗೆ ಈಗಾಗಲೇ ಇಲ್ಲಿ ಬರೆದಿದ್ದೇನೆ.

ಏನಪ್ಪ ಇವನು ಶಂಕರ್ ನಾಗ್ ಹುಟ್ಟಿದ ದಿನ ಮತ್ತು ಅವರು ತೀರಿಹೋದ ದಿನ ಮಾತ್ರ ಇವರನ್ನು ನೆನಪಿಸಿಕೊಳ್ಳುತ್ತಾನೆ ಅಂತ ತಿಳಿಯಬೇಡಿ. ಆಗಾಗ ಶಂಕರ್ ನಾಗ್ ನೆನಪಾಗ್ತಾ ಇರ್ತಾರೆ.

ಶಂಕರ್ ನಾಗ್ ಒಬ್ಬ ಮಹಾನ್ ಕಲಾವಿದ, ಅದಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೇ ಮನುಷ್ಯ.

ಶಂಕರ್ ನಾಗ್ ಇಳಯರಾಜ ಜೊತೆಗೂಡಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅದರಲ್ಲಿ "ಗೀತ" ಎಂಬ ಚಲನಚಿತ್ರ ಕೂಡ ಒಂದು. ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳೂ ಸೊಗಸಾಗಿವೆ.

ಆ ಎಲ್ಲಾ ಹಾಡುಗಳಲ್ಲಿ "ಕೇಳದೆ ನಿಮಗೀಗ ದೂರದಲ್ಲಿ ಯಾರೋ" ಎಂಬ ಹಾಡು ತುಂಬಾ ಚೆನ್ನಾಗಿದೆ. ಈಗ ಈ ಹಾಡನ್ನು ನೋಡಿ, ಕೇಳಿ. ನನಗಂತೂ ಈ ಹಾಡು ತುಂಬಾ ಅಂದರೆ ತುಂಬಾನೇ ಇಷ್ಟ. ನಿಮಗೂ ಈ ಹಾಡು ಇಷ್ಟ ಆಗುತ್ತೆ ಅಂತ ಭಾವಿಸಿದ್ದೇನೆ.


Thursday, November 05, 2009

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦) 




ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ,  ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.

ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.

ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.

ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.

ಚಿತ್ರ ಕೃಪೆ: ವಿಕಿಪೀಡಿಯಾ

Wednesday, October 28, 2009

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯ ಸ್ಮಾರಕ - ಲಿಬರ್ಟಿ

ಸ್ವಾತಂತ್ರ್ಯದೇವಿಯ ಪ್ರತಿಮೆ ನ್ಯೂಯಾರ್ಕ್ ಬಂದರಿನ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಹಡಗುಗಳಿಗೆ ಬೆಳಕು ತೋರಿಸಿ ಮಾರ್ಗದರ್ಶನ ಮಾಡುವ ರೀತಿಯಲ್ಲಿ ಗಂಭೀರವಾಗಿ ನಿಂತಿದೆ. ಉತ್ತಮ ಬದುಕನ್ನು ಅರಸುತ್ತ ಜಗತ್ತಿನ ನಾನಾ ದೇಶಗಳಿಂದ ನ್ಯೂಯಾರ್ಕಿಗೆ ಬರುವ ವಲಸೆಗಾರರ ಪಾಲಿಗೆ ಈ ಸ್ವಾತಂತ್ರ್ಯ ದೇವಿ ಆಶಾದೀಪವಾಗಿದೆ.

ಕ್ರಿ. ಶ. ೧೮೬೫ ಇಂದ ೧೯೦೦ ವರೆಗೆ ಸುಮಾರು ಒಂದೂವರೆ ಕೋಟಿ ವಲಸೆಗಾರರು ಬಹುಮಟ್ಟಿಗೆ ನ್ಯೂಯಾರ್ಕ್ ಮೂಲಕವೇ ಅಮೆರಿಕ ಪ್ರವೇಶಿಸಿದರು. ಅವರು ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ನೋಡಿದ ಕೂಡಲೇ ಹೊಸ ಚೈತನ್ಯ ಹೊಂದುತ್ತಿದ್ದರು. ತಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಭಾವಿಸುತ್ತಿದ್ದರು.

ಕಳೆದ ಶತಮಾನದಲ್ಲಿ, ಬ್ರಿಟೀಷ್ ವಸಾಹತಾಗಿದ್ದ ಅಮೆರಿಕದ ರಾಜ್ಯಗಳು ಸಶಸ್ತ್ರ ಹೋರಾಟ ನಡೆಸಿ ಬ್ರಿಟನ್ನಿನಿಂದ ಸ್ವಾತಂತ್ರ್ಯಗಳಿಸಿ, ಸ್ವತಂತ್ರ ರಾಜ್ಯಗಳ ಒಕ್ಕೂಟ ರಚಿಸಿಕೊಂಡವು. ಸ್ವಾತಂತ್ರ್ಯ ಸೇವಿಯ ಪ್ರತಿಮೆ ಈ ಗೆಲುವಿನ ಪ್ರತೀಕವಾಗಿದೆ.




ಅಕ್ಟೋಬರ್ ೨೮, ೧೮೭೬ರಂ ಸ್ವಾತಂತ್ರ್ಯ ಸಮಾರಂಭದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆಯನ್ನು ಸ್ಥಾಪಿಸಲಾಯಿತು. ೪೬ಮೀ. ಎತ್ತರವಿರುವ ಈ ಪ್ರತಿಮೆಯನ್ನು ಫ್ರೆಡೆರಿಕ್ ಅಗಸ್ಟೆ ಬಾರ್ಥೋಲ್ದಿ ಎಂಬಾತ ವಿನ್ಯಾಸಗೊಳಿಸಿದ. ಸುಮಾರು ಅಷ್ಟೇ ಎತ್ತರದ ಪೀಠದ ಮೇಲೆ ಭವ್ಯವಾಗಿ ನಿಂತಿರುವ ಈ ಪ್ರತಿಮೆಯನ್ನು ಕಬ್ಬಿಣದ ಹಾಳೆಗಳ ಮೇಲೆ ತಾಮ್ರದ ರೇಕು ಹೊದಿಸಿ ತಯಾರಿಸಲಾಗಿದೆ.

ಸ್ವಾತಂತ್ರ್ಯ ದೇವಿಯ ಪ್ರತಿಮೆಯ ನಿರ್ಮಾನ ಕಾರ್ಯವನ್ನು ಫ್ರೆಂಚ್ ಇಂಜಿನಿಯರ್ ಗುಸ್ತಾವ್ ಐಫೆಲ್ ವಹಿಸಿದನು. ಆ ವೇಳೆಗಾಗಲೇ ಆತ ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿ ಖ್ಯಾತನಾಗಿದ್ದ. ಈ ಪ್ರತಿಮೆ ಅಮೆರಿಕದ ಜನರಿಗೆ ಫ್ರಾನ್ಸ್ ನೀಡಿದ ಕೊಡುಗೆ. ಪ್ರತಿಮೆಯನ್ನು ಪ್ಯಾರಿಸಿನಲ್ಲಿ ಪ್ರಮಾಣಕ್ಕೆ ತಕ್ಕಂತೆ ಒಂದೊಂದೇ ಭಾಗವಾಗಿ ತಯಾರಿಸಲಾಯಿತು. ಈ ಭಾಗಗಳನ್ನು ಹಡಗಿನಲ್ಲಿ ನ್ಯೂಯಾರ್ಕಿಗೆ ಸಾಗಿಸಿ, ಒಂದೊಂದೇ ಭಾಗವನ್ನು ಜೋಡಿಸಲಾಯಿತು.

೧೯೭೬ರಲ್ಲಿ ಈ ಪ್ರತಿಮೆಯ ಶತಮಾನೋತ್ಸವ ನೆರವೇರಿತು.

ಚಿತ್ರ ಕೃಪೆ: ವಿಕಿಪೀಡಿಯಾ

Thursday, October 15, 2009

ಐಫೆಲ್ ಗೋಪುರ

ಐಫೆಲ್ ಗೋಪುರ

ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಐಫೆಲ್ ಗೋಪುರ ಪ್ಯಾರಿಸಿನ ಹೆಗ್ಗುರುತಾಗಿದೆ. ನಗರದ ಮಧ್ಯೆ, ಸೀನ್ ನದಿಯ ದಡದ ಮೇಲೆ, ಆಕಾಶಕ್ಕೆ ಚಾಚಿಕೊಂಡಂತಿರುವ ಈ ಗೋಪುರ ನಗರದ ಹೊರಗೆ ಹಲವಾರು ಕಿ.ಮೀ ದೂರದಿಂದಲೇ ಕಾಣಿಸುತ್ತದೆ.

ಫ್ರಾನ್ಸಿನ ಮಹಾಕ್ರಾಂತಿಯ ಶತಮಾನೋತ್ಸವ ಸಂದರ್ಭಕ್ಕಾಗಿ ನಡೆದ ವಾಸ್ತು ವಿನ್ಯಾಸ ಸ್ಪರ್ಧೆಯಲ್ಲಿ ಅಲೆಕ್ಸಾಂಡರ್ ಗುಸ್ತಾವ್ ಐಫೆಲ್ ಅವರ ಈ ವಿನ್ಯಾಸ ಬಹುಮಾನ ಗಳಿಸಿತು. ೧೮೮೯ರಲ್ಲಿ ಪ್ಯಾರಿಸಿನಲ್ಲಿ ನಡೆದ ಜಾಗತಿಕ ಮೇಳಕ್ಕಾಗಿ ಇದನ್ನು ನಿರ್ಮಿಸಲಾಯಿತು. ಇದು ಯೂರೋಪಿನ ಕೈಗಾರಿಕಾ ಕ್ರಾಂತಿಯ ಸಂಕೇತವೂ ಆಗಿದೆ. ಇದರ ವಿನ್ಯಾಸಕರ್ತ ಗುಸ್ತಾವ್ ಐಫೆಲ್ ಅವರ ಗೌರವಾರ್ಥ ಇದನ್ನು ಐಫೆಲ್ ಗೋಪುರ ಎಂದು ಹೆಸರಿಸಲಾಯಿತು.

ಈ ಐಫೆಲ್ ಮಹಾಶಯ ಸಣ್ಣ ಪುಟ್ಟ ರಚನೆಗಳನ್ನು ವಿನ್ಯಾಸಗೊಳಿಸುವ ಜಾಯಮಾನದವನಲ್ಲ. ಈತನ ವಿನ್ಯಾಸಗಳಿಗೆ ಈತನದೇ ವಿಶಿಷ್ಟವಾದ ಮುದ್ರೆ ಇದೆ. ಈತ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಿದ ಎರಡು ರಚನೆಗಳು ಇಂದಿಗೂ ಈತನ ಕೀರ್ತಿಯನ್ನು ಜಗತ್ತಿಗೆ ಸಾರುತ್ತಿವೆ. ಐಫೆಲ್ ಗೋಪುರ ಮತ್ತು ನ್ಯೂಯಾರ್ಕ್ ಅಲ್ಲಿರುವ ಸ್ಟ್ಯಾಚ್ಯೂ ಆಫ್ ಲಿಬರ್ಟಿ - ಈ ಎರಡೂ ಕಳೆದ ಶತಮಾನಗಳಲ್ಲಿ ಜರುಗಿದ ಎರಡು ಮಹತ್ವದ ಘಟನೆಗಳ ನೆನಪಿಗಾಗಿ ನಿರ್ಮಿಸಲಾದ ರಚನೆಗಳು. ಇವೆರಡೂ ಶತಮಾನೋತ್ಸವ ಆಚರಿಸಿಕೊಂಡಿವೆ!





ಐಫೆಲ್ ಗೋಪುರ ಸುಮಾರು ೩೦೦ಮೀ. ಎತ್ತರವಿದೆ. ಮೇಲಿನ ತುದಿಯಲ್ಲಿ ಮತ್ತೆ ೨೦.೭೫ಮೀ. ಎತ್ತರದ ಟಿ.ವಿ. ಟ್ರಾನ್ಸ್ ಮಿಟರ್ ಇದೆ. ಹಾಗಾಗಿ ಗೋಪುರದ ಒಟ್ಟು ಎತ್ತರ ೩೨೦.೭೫ಮೀ. ಆಗುತ್ತದೆ. ತೂಕ ಸುಮಾರು ೭೩೦೦ ಟನ್ನುಗಳು. ನಾಲ್ಕು ಕಡೆ ಭಾರಿ ಕಮಾನಿನಾಕಾರದ ಭದ್ರ ಅಸ್ತಿಭಾರದ ಮೇಲೆ ಈ ಗೋಪುರ ನಿಂತಿದೆ. ನಾಲ್ಕು ಕಡೆ ಜನರು ನಿಂತು, ಪ್ಯಾರಿಸ್ ನಗರದ ಸೌಂದರ್ಯವನ್ನು ನೋಡಲು ಸಹಾಯವಾಗುವಂತೆ, ಭೂಮಿಯಿಂದ ೫೭ಮೀ. ಎತ್ತರದಲ್ಲಿ ಮೊದಲ ಅಟ್ಟಣೆ, ೧೧೫ಮೀ. ಎತ್ತರದಲ್ಲಿ ಎರಡನೆಯ ಅಟ್ಟಣೆ ಮತ್ತು ೨೪೭ಮೀ. ಎತ್ತರದಲ್ಲಿ ಮೂರನೆಯ ವೀಕ್ಷಣಾ ಅಟ್ಟಣೆಯನ್ನು ನಿರ್ಮಿಸಲಾಗಿದೆ. ಮೇಲೇರುತ್ತ ಹೊದಂತೆ ಚೌಕಟ್ಟು ಕಿರಿದಾಗುತ್ತಾ ಹೋಗುತ್ತದೆ. ಮೇಲೇರಲು ಒಮ್ಮೆಗೆ ೬೩ ಜನರನ್ನು ಒಯ್ಯ ಬಲ್ಲ ಮೂರು ಲಿಫ್ಟುಗಳಿವೆ. ೧೭೯೨ ಮೆಟ್ಟಿಲುಗಳಿವೆ. ಎರಕ ಹೊಯ್ದ ಕಬ್ಬಿಣದ ತೊಲೆಗಳಿಂದ ಈ ರಚನೆಯನ್ನು ನಿರ್ಮಿಸಲಾಗಿದೆ. ಪ್ರತಿ ೩ ಮೀ. ಎತ್ತರಕ್ಕೆ ಒಂದು ಮಹಡಿಯಂತೆ ಲೆಕ್ಕ ಹಾಕಿದರೆ, ೧೦೦ ಮಹಡಿ ಕಟ್ಟಡ! ಅದನ್ನು ಕಟ್ಟಿ ಮುಗಿಸಲು ೨ ವರ್ಷ, ೨ ತಿಂಗಳು, ೨ ದಿನ ಬೇಕಾಯಿತು. ಅನೇಕ ವರ್ಷಗಳವರೆಗೆ ಇದು ಜಗತ್ತಿನ ಅತ್ಯಂತ ಎತ್ತರದ ಗೋಪುರವಾಗಿತ್ತು.

ನಿರ್ಮಾಣ ಸಮಯದಲ್ಲಿ, ಇಪ್ಪತ್ತು ವರ್ಷಗಳ ನಂತರ, ಅದನ್ನು ಕಳಚಿ ಹಾಕಲು ಉದ್ದೇಶಿಸಲಾಗಿತ್ತು. ಈ ಮಧ್ಯೆ, ಮೊದಲನೆಯ ಮಹಾಯುದ್ಧ ಆರಂಭವಾಯಿತು. ಆಗ ಐಫೆಲ್ ಗೋಪುರ, ಮಿಲಿಟರಿ ಸಂಪರ್ಕ ಕೇಂದ್ರವಾಗಿ, ಫ್ರೆಂಚ್ ಸೈನ್ಯ ಕಮಾಂಡಿನ ಕಣ್ಣು ಮತ್ತು ಕಿವಿಯಾಗಿ, ಬಹಳ ಸಹಾಯಕವಾಯಿತು. ಹಾಗಾಗಿ ಅದನ್ನು ಕಳಚಿ ಹಾಕುವ ಪ್ರಶ್ನೆಯೇ ಬರಲಿಲ್ಲ. ಮುಂದೆ ನೂರು ವರ್ಷಕ್ಕೂ ಹೆಚ್ಚು ಕಾಲ ತಲೆಯೆತ್ತಿ ನಿಂತ ಹೆಗ್ಗಳಿಕೆಗೆ ಪಾತ್ರವಾಯಿತು.

೧೯೬೭ರಲ್ಲಿ ಐಫೆಲ್ ಗೋಪುರವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯಿತು. ವರ್ಷಗಳು ಕಳೆದಂತೆ, ಪ್ಯಾರಿಸಿನ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಯಿತು.

ಫ್ರೆಂಚರಿಗೆ ತಮ್ಮ ಐಫೆಲ್ ಗೋಪುರದ ಬಗ್ಗೆ ಅಪಾರ ಅಭಿಮಾನ. ಪ್ಯಾರಿಸ್ ಅಲ್ಲಿ ನಡೆಯುವ ಬೇರೆ ಬೇರೆ ಉತ್ಸವಗಳ ಸಮಯದಲ್ಲಿ ಐಫೆಲ್ ಗೋಪುರಕ್ಕೆ ತಳಿರು ತೋರಣ ಮತ್ತು ದೀಪಾಲಂಕಾರ ಮಾಡಲೇಬೇಕು. ದೀಪಾಲಂಕಾರಗೊಂಡ ರಾತ್ರಿ, ಸುಮಾರು ೪೦ಕಿ.ಮೀ ಆಚೆಗೆ , ಅದು ಆಗಸಕ್ಕೆ ಪಂಜು ಹಿಡಿದಂತೆ ಕಾಣುತ್ತದೆ.

ಈಗ ಐಫೆಲ್ ಗೋಪುರವನ್ನು ಪರಿಸರ ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಸುಮಾರು ನಾನೂರು ಮಂದಿ ಸದಾ ಕಾರ್ಯನಿರತರಾಗಿದ್ದಾರೆ. ಗೋಪುರದಲ್ಲಿ ಪ್ರತಿ ತಿಂಗಳು ಸುಮಾರು ಏಳು ಟನ್ನುಗಳಷ್ಟು ರದ್ದಿ ಶೇಖರಣೆ ಆಗುತ್ತದೆ. ತುಕ್ಕು ಹಿಡಿಯಬಹುದಾದ ಭಾಗಗಳನ್ನು ಕಣ್ಗಾಣಿಸಲು ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಐಫೆಲ್ ಮಿನಿಯೇಚರ್ ಗೋಪುರಗಳು ಅಸಂಖ್ಯಾತ ಪ್ರವಾಸಿಗರ ಆರಾಮ ಕೋಣೆಗಳನ್ನು ಅಲಂಕರಿಸಿವೆ.

ಚಿತ್ರ ಕೃಪೆ:
ವಿಕಿಪೀಡಿಯಾ

Friday, October 09, 2009

ಮೌಂಟ್ ರಷ್ಮೋರ್

ಮೌಂಟ್ ರಷ್ಮೋರ್ 

ಈ ಶತಮಾನದಲ್ಲಿ ನಿರ್ಮಿತವಾದ, ಮೌಂಟ್ ರಷ್ಮೋರ್ ರಾಷ್ಟ್ರೀಯ ಸ್ಮಾರಕವು ಮಾನವ ನಿರ್ಮಿತ ಅದ್ಭುತಗಳಲ್ಲಿ ಒಮ್ದೆಂದು ಹೇಳಬಹುದು. 

ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದ ಬ್ಲಾಕ್ ಹಿಲ್ಸ್ ಸಾಲಿನಲ್ಲಿ ಮೌಂಟ್ ರಷ್ಮೋರ್ ಎಂಬ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ಈ ಸ್ಮಾರಕವನ್ನು ಕೆತ್ತಲಾಗಿದೆ. ಅಮೆರಿಕದ ನಾಲ್ಕು ಅಧ್ಯಕ್ಷರ ಮುಖಗಳಿರುವ ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಪರಿಗಣಿಸಲಾಗಿದೆ.

ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರು - ೧. ಜಾರ್ಜ್ ವಾಷಿಂಗ್ಟನ್, ೨. ಥಾಮಸ್ ಜೆಫರ್ಸನ್, ೩. ಥಿಯೋಡರ್ ರೂಸ್ವೆಲ್ಟ್, ೪. ಅಬ್ರಹಾಂ ಲಿಂಕನ್.





ಅಷ್ಟು ಕಡಿದಾದ ಆ ಹೆಬ್ಬಂಡೆಯ ಪಾರ್ಶ್ವದಲ್ಲಿ ಆ ನಾಲ್ಕು ಮಂದಿ ಮಹಾನ್ ವ್ಯಕ್ತಿಗಳ ತದ್ರೂಪಗಳನ್ನ್ ಮೂಡಿಸಲು ಶಿಲ್ಪಿಗಳು ಯಾವ ಉಪಾಯ ಅನುಸರಿಸಿರಬಹುದು, ಎಂಥ ದುಸ್ಸಹ ಪರಿಸ್ಥಿತಿಯಲ್ಲಿ ಅವರು ಕೆಲಸ ಮಾಡಿರಬಹುದು ಎಂಬ ಕಲ್ಪನೆಯೇ ರೋಚಕವಾಗಿದೆ. ಜಾರ್ಜ್ ವಾಷಿಂಗ್ಟನ್ ಅವರ ಮುಖ ೧೮ ಮೀ. ಎತ್ತರವಾಗಿದೆ. ಅಂದರೆ, ಸುಮಾರು ಐದು ಮಹಡಿ ಕಟ್ಟಡದಷ್ಟು ಎತ್ತರ! ಇದೇ ಪ್ರಮಾಣದಲ್ಲಿ ವಾಷಿಂಗ್ಟನ್ ಅವರ ಪೂರ್ಣರೂಪವನ್ನು ಕೆತ್ತಿದರೆ, ಆಗ ಅದು ೧೪೨ಮೀ. ಎತ್ತರವಾಗುತ್ತದೆ. ಈ ನಾಲ್ಕು ಪ್ರತಿಮೆಗಳ ಮುಖಗಳೂ ಸರಿಸುಮಾರು ಒಂದೇ ಪ್ರಮಾಣದವು.

ಗುಟ್ಜನ್ ಬೋರ್ಗ್ಲಾಮ್ ಎಂಬಾತ ಈ ಸ್ಮಾರಕವನ್ನು ವಿನ್ಯಾಸಗೊಳಿಸಿದ ಮತ್ತು ಕೆಲಸದ ಮೇಲ್ವಿಚಾರಣೆಯ ಹೆಚ್ಚು ಪಾಲು ನೋಡಿಕೊಂಡ. ಪ್ರತಿಮೆಗಳನ್ನು ಕೆತ್ತುವ ಕೆಲಸ ೧೯೨೭ರಲ್ಲಿ ಪ್ರಾರಂಭವಾಗಿ ಕುಂಟುತ್ತಾ, ಎಡವುತ್ತಾ, ೧೪ ವರ್ಷಗಳ ಕಾಲ ನಡೆಯಿತು. ೧೯೪೧ರಲ್ಲಿ ಸ್ಮಾರಕದ ಕೆಲಸ ಪೂರ್ಣವಾಗುವ ಮೊದಲೇ ಬೋರ್ಗ್ಲಾಮ್ ತೀರಿಕೊಂಡ. ಮುಂದೆ ಆತನ ಮಗ ಅಬ್ರಹಾಂ ಲಿಂಕನ್ ಅವರ ಪ್ರತಿಮೆ ಪೂರ್ಣಮಾಡಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅದರ ಉದ್ಘಾಟನೆ ತೀರಾ ಸಾಧಾರಣ ರೀತಿಯಲ್ಲಿ ನೆರವೇರಿತು.

ಮೌಂಟ್ ರಷ್ಮೋರ್ ಸಮುದ್ರ ಮಟ್ಟಕ್ಕಿಂತ ೧೭೪೫ಮೀ. ಎತ್ತರದಲ್ಲಿದೆ, ಹಾಗೂ, ಆ ಕಣಿವೆಯ ಇನ್ನಿತರ ಶಿಖರಗಳಿಗಿಂತ ಸುಮಾರು ೧೫೦ಮೀ. ಅಷ್ಟು ಎತ್ತರದಲ್ಲಿದೆ.

ಇಡೀ ಹಗಲು ಸೂರ್ಯನ ಬೆಳಕು ಬೀಳುವಂಥ ಪಾರ್ಶ್ವದಲ್ಲಿರುವ ಈ ರಾಷ್ಟ್ರೀಯ ಸ್ಮಾರಕವನ್ನು ತೀರಾ ಸಮೀಪದಿಂದ ನೋಡಿದರೆ ಅದರ ನಿಜವಾದ ಗಾಂಭೀರ್ಯ ತಿಳಿಯುವುದಿಲ್ಲ. ಹಾಗೆ ನೋಡಲು ಪ್ರಯತ್ನಿಸಿದರೆ, ನಾಲ್ಕು ಮುಖಗಳ ಪೈಕಿ ಒಂದೆರಡನ್ನು ನೋಡಬಹುದು. ಆದುದರಿಂದ ಸ್ಮಾರಕದ ಎದುರು ಬೆಟ್ಟದಲ್ಲಿ ಹಾದು ಹೋಗುವ ದಾರಿಯಲ್ಲಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ, ಈ ಭವ್ಯ ಸ್ಮಾರಕವನ್ನು ದೂರದಿಂದ ನೋಡಿ ಸಂತೋಷಪಡುತ್ತಾರೆ.

ಚಿತ್ರಕೃಪೆ: ವಿಕಿಪೀಡಿಯಾ