My Blog List

Tuesday, February 03, 2009

ತಾಳ -ಸೂಳಾದಿ (ಸುಳಾದಿ) ಸಪ್ತತಾಳಗಳು

ತಾಳ - ಸೂಳಾದಿ (ಸುಳಾದಿ) ಸಪ್ತ ತಾಳಗಳು.

ಸಂಗೀತಕ್ಕೆ ರಾಗವು ಸೌಂದರ್ಯವನ್ನು ಕೊಡಬಲ್ಲದಾದರೆ ತಾಳವು ಅಚ್ಚುಕಟ್ಟುತನವನ್ನು ಕಲಿಸುತ್ತದೆ. ಯಾವ ವಸ್ತುವಿಗಾದರೂ ಒಂದು ನಿರ್ದಿಷ್ಟ ಆಕಾರವಿಲ್ಲದಿದ್ದರೆ ಅದು ಚೆನ್ನಾಗಿ ಕಾಣಿಸಲಾರದು. ಅಂತೆಯೇ ಕವಿತೆ ಎಷ್ಟು ಸುಂದರವಾಗಿದ್ದರೂ ಲಯರಹಿತ ಕವಿತೆಯು ತಾಳದ ಚೌಕಟ್ಟಿನೊಳಗಿನ ಕವಿತೆಗೆ ಸಾಟಿಯಾಗಲಾರದು. ಅಡಿಗೋಲಿನಲ್ಲಿರುವ ಹನ್ನೆರಡು ಭಾಗಗಳಲ್ಲಿ ಹೇಗೆ ಸ್ವಲ್ಪವಾದರೂ ವ್ಯತ್ಯಾಸವಿಲ್ಲವೋ ಹಾಗೆಯೇ ತಾಳದ ಭಾಗಗಳಲ್ಲಿ ವ್ಯತ್ಯಾಸವಿರಬಾರದು. ಹೀಗೆ ವ್ಯತ್ಯಾಸವಿರದ ಏಕರೂಪದ ಸಮಯಾವಕಾಶಕ್ಕೆ "ಲಯ" ಎಂದು ಹೆಸರು. ಸಂಗೀತದ ಸಮಯವನ್ನು ಕೆಲವು ನಿರ್ದಿಷ್ಟವಾದ ನಿಯಮಗಳಿಗನುಸರಿಸಿ ಒಂದು ಕ್ರಮಬದ್ಧ ರೀತಿಯಲ್ಲಿ ಅಳವಡಿಸಿಕೊಳ್ಳುವ ವಿಧಾನವೇ "ತಾಳ". ತಾಳದ ಮುಖ್ಯ ಜೀವಾಳ ಲಯ.

ಹಾಡಿನಲ್ಲಿ ಸಾಹಿತ್ಯ ಭಾವಪೋಷಕವಾಗಿರುತ್ತದೆ. ಅದಕ್ಕೆ ಅನುಸಾರವಾಗಿ ರಾಗವು ಹೆಣೆಯಲ್ಪಟ್ಟಿರುತ್ತದೆ. ಅವುಗಳಿಗೆ ಸರಿಯಾಗಬಹುದಾದ "ವೇಗ" ಇರಬೇಕಾದುದು ಅವಶ್ಯ. ನಾವು ಸಂತೋಷದಿಂದಿರುವಾಗ ನಮ್ಮ ಮಾತಿನ ವೇಗ ಸಾಮಾನ್ಯವಾಗಿರುತ್ತದೆ. ಅವಸರದ ಸಮಯದಲ್ಲಿ ಅಥವಾ ಸಿಟ್ಟುಬಂದಾಗ ಮಾತಿನ ವೇಗ ಹೆಚ್ಚುತ್ತದೆ. ದುಃಖ ಬಂದಾಗ ತೀರ ನಿಧಾನವಾಗಿರುತ್ತದೆ. ಇದೇ ತತ್ವವನ್ನು ಸಂಗೀತದಲ್ಲಿ ಕೂಡ ನಾವು ಕಾಣಬಹುದು. ಭಾವಕ್ಕೆ ತಕ್ಕಂತೆ ಹಾಡುಗಳು ನಿಧಾನ, ಮಧ್ಯಮ ಹಾಗೂ ವೇಗ ಗತಿಗಳಲ್ಲಿರುತ್ತದೆ. ನಿಧಾನಗತಿಯಲ್ಲಿ ಹಾಡುವುದಕ್ಕೆ "ವಿಳಂಬಗತಿ" ಎಂದು ಹೆಸರು. ಸಂತೋಷದಿಂದ ಹಾಡುವಾಗ ವೇಗವು ತುಂಬಾ ಹೆಚ್ಚಾಗಿರುತ್ತದೆ. ಇಂತಹ ವೇಗವನ್ನು "ದ್ರುತಗತಿ" ಎನ್ನುವರು. ಇವೆರಡಕ್ಕೂ ಮಧ್ಯದಲ್ಲಿ ಬರುವುದಕ್ಕೆ "ಮಧ್ಯಮಗತಿ" ಎಂದು ಹೆಸರು. ಹಾಡುವ ವೇಗವು ಸಾಹಿತ್ಯ, ಭಾವ, ರಾಗಗಳಿಗೆ ಅನುಗುಣವಾಗಿ ಇರಬೇಕಾದುದು ತೀರಾ ಅವಶ್ಯ. ವೇಗದಲ್ಲಿ ವ್ಯತ್ಯಾಸವಾದರೆ ಹಾಡಿನ ಸೌಂದರ್ಯಕ್ಕೆ ಚ್ಯುತಿಯುಂಟಾಗುವುದು.

ತಾಳವು ವಿವಿಧ ಅವಯವಗಳಿಂದ ಕೂಡಿರುತ್ತದೆ. ಇಂತಹ ಭಾಗಗಳಿಗೆ "ಅಂಗಗಳು" ಎಂದು ಹೆಸರು. ಅಂತಹ ಅಂಗಗಳು ಆರು ಇವೆ. ಅನುದ್ರುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಅವುಗಳಿಗೆ ಹೆಸರು. ಇವುಗಳಿಗೆ "ಷಡಂಗಗಳು" ಎಂದು ಹೆಸರು. ಸಂಗೀತದಲ್ಲಿ ಉಪಯೋಗಿಸುವ ತಾಳಗಳು ಏಳು. ಇವುಗಳಿಗೆ "ಸಪ್ತತಾಳಗಳು" ಎಂದು ಹೆಸರು. ಈ ಸಪ್ತತಾಳ ಪದ್ಧತಿಯು ಹರಿದಾಸರ ಕಾಲದಿಂದ ಪ್ರಚಾರಕ್ಕೆ ಬಂದಿತು. ಈ ತಾಳಗಳಿಗೆ "ಸೂಳಾದಿ (ಸುಳಾದಿ) ತಾಳಗಳು" ಎಂದು ಹೆಸರು. ಈ ಏಳು ತಾಳಗಳಲ್ಲಿ ಷಡಂಗಗಳಲ್ಲಿನ ಮೊದಲಿನ ಮೂರು ಅಂಗಗಳಾದ ಅನುದ್ರುತ, ದ್ರುತ, ಲಘುಗಳು ಮಾತ್ರ ಇವೆ. ಈ ಸಪ್ತ ತಾಳಗಳಿಗೆ ಕ್ರಮವಾಗಿ ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುತ, ಅಟ, ಏಕ ತಾಳಗಳೆಂದು ಹೆಸರು.

ಅನುದ್ರುತದ ಕಾಲಪ್ರಮಾಣ ಒಂದು ಅಕ್ಷರಕಾಲ. ದ್ರುತದ ಕಾಲಪ್ರಮಾಣ ಎರಡು ಅಕ್ಷರಕಾಲ. ಲಘುವಿನಲ್ಲಿ ಐದು ಜಾತಿಗಳಿವೆ. ಅವುಗಳಿಗೆ ಕ್ರಮವಾಗಿ ೩, ೪, ೫, ೭, ೯ ಅಕ್ಷರಕಾಲಗಳಿದ್ದು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣಗಳೆಂಬ ಹೆಸರಿದೆ. ತಾಳವನ್ನು ಹಾಕಿ ತೋರಿಸುವ ಕ್ರಮಕ್ಕೆ "ಕ್ರಿಯೆ" ಎಂದು ಹೆಸರು. ಈ ಕ್ರಿಯೆಯಲ್ಲಿ ಸಶಬ್ಧಕ್ರಿಯೆ (ಘಾತ), ವಿಸರ್ಜಿತ (ಕೈಯನ್ನು ಮಗಚಿ ಹಾಕುವುದು) ಮತ್ತು ನಿಶ್ಯಬ್ಧಕ್ರಿಯೆಗಳು (ಬೆರಳೆಣಿಕೆಗಳು) ಬರುತ್ತವೆ. ಅನುದ್ರುತವನ್ನು ಒಂದು ಘಾತದಿಂದಲೂ, ದ್ರುತವನ್ನು ಒಂದು ಘಾತ ಮತ್ತು ವಿಸರ್ಜಿತದಿಂದಲೂ, ಲಘುವನ್ನು ಘಾತದಿಂದ (ಏಟಿನಿಂದ) ಕೂಡಿದ ಬೆರಳೆಣಿಕೆಯಿಂದಲೂ ತೋರಿಸಲಾಗುತ್ತದೆ. ಲಘುವಿನ ಸೂಚನೆಯಲ್ಲಿ ಬರುವ ಬೆರಳೆಣೆಕೆ ಲಘುವಿರುವ ಅಕ್ಷರಕಾಲಕ್ಕಿಂತ ಕಡಿಮೆ ಇರುತ್ತದೆ.
ಉದಾ: ಚತುರಶ್ರ ಲಘು ಅಂದರೆ, ಒಂದು ಘಾತ (ಏಟು) + ೩ ಬೆರಳೆಣಿಕೆ.

ತಾಳಾಂಗಗಳು: ಅಂಗವು ತಾಳ ದಶಪ್ರಾಣಗಳಲ್ಲಿ ಒಂದು. ತಾಳವನ್ನು ಎಣಿಸುವಾಗ ಬರುವ ಅವಯವಗಳನ್ನು ತಾಳಾಂಗವೆನ್ನುತ್ತಾರೆ. ಸೂಳಾದಿ (ಸುಳಾದಿ) ಸಪ್ತತಾಳಗಳಲ್ಲಿ ಬಳಸುವ ತಾಳಾಂಗಗಳು ಮೂರು. ಅವು ಲಘು, ದ್ರುತ, ಅನುದ್ರುತ. ಈ ತಾಳಗಳಿಗೆ ಸೂಳಾದಿ ತಾಳ ಎಂದು ಹೆಸರು ಬಂದಿದ್ದು ಹರಿದಾಸರ ಕಾಲದಲ್ಲಿ.

ಲಘು: ಒಂದು ಘಾತವನ್ನು (ಏಟನ್ನು) ಹಾಕಿ ಬೆರಳುಗಳನ್ನು ಎಣಿಸುವುದಕ್ಕೆ ಲಘುವೆಂದು ಹೆಸರು. ಇದರ ಚಿಹ್ನೆ ’|'

ದ್ರುತ: ಒಂದು ಘಾತವನ್ನು ಹಾಕಿ ವಿಸರ್ಜಿತವನ್ನು (ಏಟನ್ನು ಹಾಕಿ ಕೈ ಮಗಚುವುದು) ಹಾಕುವುದಕ್ಕೆ ದ್ರುತವೆಂದು ಹೆಸರು. ಇದರ ಚಿಹ್ನೆ ’೦’

ಅನುದ್ರುತ: ಒಂದು ಘಾತವನ್ನು (ಏಟನ್ನು) ಮಾತ್ರ ಹಾಕುವುದಕ್ಕೆ ಅನುದ್ರುತವೆಂದು ಹೆಸರು. ಇದರ ಚಿಹ್ನೆ ’U'

ಒಂದು ಘಾತಕ್ಕೆ ೪ ಅಕ್ಷರಗಳು ಬರುವುದನ್ನು ಚತುರಶ್ರಗತಿ ಎಂದು ಕರೆಯಲಾಗುವುದು. ನಾಲ್ಕು ಅಕ್ಷರಗಳ ಬದಲಿಗೆ ೩, ೫, ೭, ೯ ಅಕ್ಷರಗಳನ್ನು ಇರಿಸಿಕೊಳ್ಳುವುದಿದೆ. ಈ ರೀತಿ ಮೂಡಿದಾಗ ಅವು ಕ್ರಮವಾಗಿ ತ್ರಿಶ್ರ, ಖಂಡ, ಮಿಶ್ರ, ಸಂಕೀರ್ಣ ಗತಿಗಳೆನಿಸಿಕೊಳ್ಳುವುವು.

ತ್ರಿಶ್ರಜಾತಿಗೆ ಮೂರು ಅಕ್ಷರಗಳು - ತ್ರಿಶ್ರ ಲಘು
ಚತುರಶ್ರಜಾತಿಗೆ ನಾಲ್ಕು ಅಕ್ಷರಗಳು - ಚತುರಶ್ರ ಲಘು
ಖಂಡಜಾತಿಗೆ ಐದು ಅಕ್ಷರಗಳು - ಖಂಡ ಲಘು
ಮಿಶ್ರಜಾತಿಗೆ ಏಳು ಅಕ್ಷರಗಳು - ಮಿಶ್ರ ಲಘು
ಸಂಕೀರ್ಣಜಾತಿಗೆ ಒಂಭತ್ತು ಅಕ್ಷರಗಳು - ಸಂಕೀರ್ಣ ಲಘು

ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲೂ ಲಘು ಇದ್ದೇ ಇರುತ್ತದೆ. ಅನುದ್ರುತವು ಝಂಪೆ ತಾಳದಲ್ಲಿ ಮಾತ್ರ ಇದೆ. ಏಕತಾಳದಲ್ಲಿ ಲಘುವು ಮಾತ್ರ ಇದೆ. ಲಘುವಿನಲ್ಲಿ ಐದು ಜಾತಿ ಭೇದಗಳು ಇರುವುದರಿಂದಲೂ, ಸಪ್ತತಾಳದ ಪ್ರತಿಯೊಂದರಲ್ಲೂ ಲಘುವು ಇರುವುದರಿಂದಲೂ ಪ್ರತಿಯೊಂದು ತಾಳವೂ ಲಘುವಿನ ಐದು ಜಾತಿಭೇದಗಳಿಗೆ ಅನುಗುಣವಾಗಿ ಐದೈದು ಪ್ರತ್ಯೇಕ ತಾಳಗಳಾಗುತ್ತವೆ. ಸಪ್ತತಾಳಗಳ ಹೆಸರನ್ನು ಹೇಳುವಾಗ ಲಘುವಿನ ಜಾತಿಯ ಕುರಿತು ಹೇಳದಿದ್ದಲ್ಲಿ ಧ್ರುವ, ಮಠ್ಯ, ರೂಪಕ, ಏಕತಾಳಗಳನ್ನು ಚತುರಶ್ರಜಾತಿಯವು ಎಂದೂ, ಝಂಪೆತಾಳವನ್ನು ಮಿಶ್ರಜಾತಿ ಎಂದೂ. ತ್ರಿಪುಟತಾಳವನ್ನು ತ್ರಿಶ್ರಜಾತಿ ಎಂದೂ, ಅಟತಾಳವನ್ನು ಖಂಡಜಾತಿ ಎಂದೂ ತಿಳಿಯಬೇಕು.

ಆವರ್ತ: ಒಂದು ತಾಳದ ತಾಳಾಂಗಗಳನ್ನು ಒಂದಾವರ್ತಿ ಪೂರ್ಣವಾಗಿ ನಡೆಸುವುದಕ್ಕೆ "ಆವರ್ತ" ಎಂದು ಹೆಸರು.
ಉದಾಹರಣೆ: ||ಸರಿಗಮ| ಪದ| ನಿಸ||
ಸಂಗೀತ ರಚನೆಗಳನ್ನು ಬರೆಯುವಾಗ ತಾಳಾವರ್ತದ ಪ್ರಾರಂಭ ಮತ್ತು ಮುಕ್ತಾಯಕ್ಕೆ ಎರಡು ಇದ್ದನೆಯ ಗೆರೆಗಳನ್ನು, ಪ್ರತಿಯೊಂದು ಅಂಗದ ಮುಕ್ತಾಯಕ್ಕೆ ಒಂದು ಉದ್ದನೆಯ ಗೆರೆಯನ್ನು ಎಳೆದು ಸೂಚಿಸಲಾಗುವುದು.

ಲಘುವಿನ ೫
ಜಾತಿಗಳು

ಸಪ್ತತಾಳಗಳ ಹೆಸರು, ಅಂಗ, ಚಿಹ್ನೆ, ಅಕ್ಷರಕಾಲ, ಕ್ರಿಯೆ ಮತ್ತು ಲಘುವಿನ ಹೆಸರು, ಜಾತಿ, ಅಕ್ಷರಕಾಲ, ಚಿಹ್ನೆಗಳು

ಜಾತಿಗಳಿಂದ ಅಲಂಕಾರದ ಸಪ್ತತಾಳಗಳು. ೩೫ ತಾಳಗಳಾಗುವ ಪಟ್ಟಿ.

ಪಟ್ಟಿಗಳನ್ನು ನೋಡಲು ಇಲ್ಲಿ ಚಿಟುಕಿಸಿರಿ.

ಗ್ರಹ: ಸಂಗೀತ ರಚನೆಯೂ ತಾಳವೂ ಪ್ರಾರಂಭವಾಗಲು ಇರುವ ಸಂಬಂಧಕ್ಕೆ "ಗ್ರಹ" ಎಂದು ಹೆಸರು.
ಇದರಲ್ಲಿ ಎರಡು ವಿಧ. ಸಮಗ್ರಹ ಮತ್ತು ವಿಷಮಗ್ರಹ.

ಸಮಗ್ರಹ: ತಾಳ ಮತ್ತು ರಚನೆಯು ಏಕಕಾಲದಲ್ಲಿ ಅಂದರೆ ಒಟ್ಟಿಗೆ ಪ್ರಾರಂಭವಾಗುವುದಕ್ಕೆ "ಸಮಗ್ರಹ" ಎಂದು ಹೆಸರು.

ವಿಷಮಗ್ರಹ: ತಾಳ ಮತ್ತು ರಚನೆಯು ಏಕಕಾಲದಲ್ಲಿ ಅಂದರೆ ಒಟ್ಟಿಗೆ ಪ್ರಾರಂಭವಾಗದಿರುವುದಕ್ಕೆ "ವಿಷಮಗ್ರಹ" ಎಂದು ಹೆಸರು.
ಇದರಲ್ಲಿ ಎರಡು ವಿಧ. ಅತೀತಗ್ರಹ ಮತ್ತು ಅನಾಗತಗ್ರಹ.

ಅತೀತಗ್ರಹ: ಸಂಗೀತವು ಆರಂಭವಾಗಿ ನಂತರ ತಾಳವು ಆರಂಭವಾಗುವುದಕ್ಕೆ "ಅತೀತಗ್ರಹ" ಎಂದು ಹೆಸರು.

ಅನಾಗತಗ್ರಹ: ತಾಳವು ಮೊದಲು ಪ್ರಾರಂಭವಾಗಿ ನಂತರ ಸಂಗೀತ ರಚನೆಯು ಪ್ರಾರಂಭವಾಗುವುದಕ್ಕೆ "ಅನಾಗತಗ್ರಹ" ಎಂದು ಹೆಸರು.

6 comments:

  1. ಅನಿಲ್,

    ನಿಮ್ಮ ನಿಜವಾದ ಬರಹದ ಶಕ್ತಿ ಇರುವುದು ಈ ರೀತಿಯ ವಿಚಾರಗಳನ್ನು ಕೊಡುವುದರಲ್ಲಿ...ನನಗಂತೂ ತುಂಬಾ ಇಷ್ಟವಾಯಿತು....keep it up !

    ReplyDelete
  2. ಶಿವು,

    ತುಂಬಾ ಧನ್ಯವಾದ.
    ನಿಮಗೆ ಸಂಗೀತದಲ್ಲಿ ಆಸಕ್ತಿಯಿದೆ ಎಂದು ತಿಳಿದು ಸಂತೋಷ ಆಯ್ತು.

    -ಸ್ವಾಮಿ ಶರಣಂ.

    ReplyDelete
  3. ಅನಿಲ್ ಅವರೇ..
    ನನಗೆ ಸಂಗೀತದ ಬಗ್ಗೆ ಅರಿವು ತುಂಬಾನೇ. ಆದರೆ ನಿಮ್ಮ ಈ ಲೇಖನ ಓದಿದ ಮೇಲೆ ಸ್ವಲ್ಪವಾದರೂ ಸಂಗೀತದ ಬಗ್ಗೆ ತಿಳಿವು ಮೂಡಿತು. ನಿಮಗೆ ವಂದನೆಗಳು.

    ReplyDelete
  4. ಸುನಿಲ್,
    ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

    -ಸ್ವಾಮಿ ಶರಣಂ.

    ReplyDelete
  5. ಅನಿಲ್,

    ನನಗೆ ಸಂಗೀತ ಒಂದೇ ಅಲ್ಲ..ಎಲ್ಲಾ ವಿಚಾರದಲ್ಲೂ ಆಸಕ್ತಿ ಇದೆ...ಹೊಸತೇನು ಕಂಡರೂ ನನ್ನ ಕುತೂಹಲ ಹೆಚ್ಚಾಗುತ್ತದೆ...

    ReplyDelete
  6. >>ನನಗೆ ಸಂಗೀತ ಒಂದೇ ಅಲ್ಲ..ಎಲ್ಲಾ ವಿಚಾರದಲ್ಲೂ ಆಸಕ್ತಿ ಇದೆ...ಹೊಸತೇನು ಕಂಡರೂ ನನ್ನ ಕುತೂಹಲ ಹೆಚ್ಚಾಗುತ್ತದೆ...

    ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು.

    -ಸ್ವಾಮಿ ಶರಣಂ.

    ReplyDelete