ಎಲ್ಲಿದೆ?
ಇದು ಮಹಾರಾಷ್ಟ್ರದ ಪರಭಣಿ ಜಿಲ್ಲಿಯಲ್ಲಿದೆ. ದಾರುಕಾವನಕ್ಕೆ ಈಗ ಔಂದ್ ಎಂಬ ಹೆಸರಿದೆ.
ದೇವಸ್ಥಾನದ ಸ್ವರೂಪ.
ದಾರುಕಾವನದ ನಾಗೇಶ ಅಥವಾ ನಾಗನಾಥ ದೇವಾಲಯವು ಅಪರೂಪದ ವಾಸ್ತುಶಿಲ್ಪವಾಗಿದೆ. ಸಂಪೂರ್ಣ ಶಿಲಿಯಲ್ಲೇ ನಿರ್ಮಾಣವಾಗಿರುವ ಈ ದೇವಸ್ಥಾನಕ್ಕೆ ಬೃಹದಾಕಾರದ ಬಾಗಿಲುಗಳು, ವಿಶಾಲವಾದ ಸಭಾಂಗಣವೂ ಇದೆ. ಎಂಟು ಶಿಲ ಕಂಬಗಳ ಆಧಾರದ ಮೇಲೆ ಇಡೀ ದೇವಾಲಯ ನಿಲ್ಲುವಂತೆ ರೂಪಿಸಲಾಗಿದೆ. ನಾಗನಾಥ ಲಿಂಗವು ಒಳಭಾಗದ ಚಿಕ್ಕ ಗರ್ಭಗುಡಿಯಲ್ಲಿದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿ ಶಿವಲಿಂದ ಎದುರು ನಂದಿಯ ವಿಗ್ರಹವಿಲ್ಲ. ದೇವಸ್ಥಾನದ ಹಿಂಭಾಗದಲ್ಲಿ ನಂದಿಕೇಷ್ವರನ ಪ್ರತ್ಯೇಕ ದೇವಾಲಯವಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ೧೨ ಜ್ಯೊತಿರ್ಲಿಂಗ ದೇವಸ್ಥಾನಗಳಿವೆ. ಸುಂದರವಾದ ಗಣಪತಿ, ದತ್ತಾತ್ರೇಯ, ಮುರಳಿ ಮನೋಹರ, ದಶಾವತಾರ ದೇವಾಲಯಗಳಿವೆ. ಔಂದ್ ಅಲ್ಲಿ ೧೦೮ ಶಿವ ದೇವಸ್ಥಾನಗಳು ಮತ್ತು ೬೮ ಇತರ ದೇವಾಲಯಗಳು ಇವೆ. ಹಾಗಾಗಿ ಔಂದ್ ದೇವಾಲಯಗಳ ನಗರಿ. ನಾಗನಾಥ ದೇವಸ್ಥಾನಕ್ಕೆ ಎರಡು ಕಳಸ ಗೋಪುರಗಳು ಇವೆ. ಇದನ್ನು ಅತ್ತೆ-ಸೊಸೆ ಕಳಸ ಗೋಪುರ ಎಂದು ಕರೆಯಲಾಗುತ್ತದೆ.
ಸ್ಥಳ ಪುರಾಣ.
ದಕ್ಷಬ್ರಹ್ಮ ತಾನು ನಡೆಸಿದ ಮಹಾಯಾಗಕ್ಕೆ ಶಿವನನ್ನು ಕರೆಯಲಿಲ್ಲ. ಪಾರ್ವತಿ ಅಪಮಾನದಿಂದ ಕುಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಾಗ ಶಿವ ಬೇಸತ್ತು ಅಲೆಯುತ್ತಾ ಅಮರದತ್ ಸರೋವರದ ಬಳಿ ತಪಸ್ಸು ಮಾಡಿದನೆಂಬುದು ನಂಬಿಕೆ. ಮುಂದೆ ಪಾಂಡವರು ವನವಾಸದಲ್ಲಿ ಇಲ್ಲಿಗೆ ಬಂದಾಗ, ಹಸುಗಳು ತಾವಾಗಿಯೇ ಈ ಸ್ಥಳದಲ್ಲಿ ಹಾಲು ಸುರಿಸುವುದನ್ನು ಕಂದು, ಇದರ ಇತಿಹಾಸ ತಿಳಿದು ಶಿವಲಿಂಗ ಸ್ಥಾಪಿಸಿದರಂತೆ. ಇನ್ನೊಂದು ಕತೆ(ಥೆ)ಯಂತೆ ಇಲ್ಲಿ ದಾರುಕಾಸುರನೆಂಬ ಅಸುರನಿದ್ದ. ಅವನು ಪಾರ್ವತಿಯಿಂದ ವರಪಡೆದು ಅಜೇಯನಾಗಿ ಮೆರೆಯುತ್ತಿದ್ದ. ಶಿವನು ಕೊನೆಗೆ ತನ್ನ ಭಕ್ತನಾದ ಸುಪ್ರಿಯನೆಂಬ ಅರಸನ ಮೂಲಕ ದಾರುಕಾಸುರನ ಉಪಟಳವನ್ನು ಕೊನೆಗೊಳಿಸೆ ಇಲ್ಲಿ ನೆಲೆ ನಿಂತನು. ಹಾಗಾಗಿ ಈ ಕ್ಷೇತ್ರಕ್ಕೆ ದಾರುಕಾವನ ಎಂಬ ಹೆಸರು ಬಂದಿದೆ ಎಂದು ನಂಬಿಕೆ. ನಾಗನಾಥ ದೇವಸ್ಥಾನದ ಹೊರಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಇದಕ್ಕೊಂದು ಕತೆ(ಥೆ)ಯಿದೆ. ಔರಂಗಜೇಬ್ ಈ ದೇವಾಲಯವನ್ನು ನಾಶ ಮಾಡುವ ಸಲುವಾಗಿ ದಾಳಿ ಮಾಡಿ ಪಾರ್ವತಿ ವಿಗ್ರಹ ಕಿತ್ತು ಎಸೆದಾಗ ಸಾವಿರಾರು ಹಾವುಗಳು ಅವನ ಸೈನ್ಯದ ಮೇಲೆ ದಾಳಿ ಮಾಡಿದವೆಂದೂ, ಅವರು ಪಲಾಯನ ಮಾಡಿದ ನಂತರ ಭಕ್ತಾದಿಗಳು ಅಲ್ಲೇ ಪಾರ್ವತಿ ದೇವಾಲಯ ನಿರ್ಮಿಸಿದರೆಂದೂ ನಂಬಿಕೆಯಿದೆ. ಇಂದಿಗೂ ಹಾವುಗಳು ಇಲ್ಲಿ ನಿರ್ಭಯವಾಗಿ ಸಂಚರಿಸುತ್ತವೆ. ನಾಗಪಂಚಮಿಯಂದು ಜೀವಂತ ಹಾವುಗಳಿಗೆ ತನಿ ಎರೆಯುವ ಪದ್ಧತಿ ಇಲ್ಲಿದೆ.
ಭೇಟಿ ನೀಡುವ ಸಮಯ.
ಪ್ರತಿ ೧೨ ವರ್ಷಗಳಿಗೊಮ್ಮೆ ಕಪಿಲಷಷ್ಠಿ ಮುಹೂರ್ತದಲ್ಲಿ ಕಾಶಿಯಿಂದಲೇ ಇಲ್ಲಿಗೆ ಗಂಗೆಯನ್ನು ತಂದು ಅಭಿಷೇಕ ನೆರವೇರಿಸಲಾಗುತ್ತದೆ. ಶಿವರಾತ್ರಿ, ಯುಗಾದಿಗಳಂದು ವಿಶೇಷ ಪೂಜೆ ನೆರವೇರುತ್ತದೆ.
ಸೇರುವ ಬಗೆ.
ಹತ್ತಿರದ ರೈಲು ನಿಲ್ದಾಣ ಪರಭಣಿ. ಪರಭಣಿಗೆ ಔರಂಗಾಬಾದ್ ಇಂದ ಸಾಕಷ್ಟು ರೈಲು ಸೌಕರ್ಯಗಳಿವೆ.
ನಂದೇಡ್ ಇಂದ (೬೦ ಕಿ. ಮೀ. ದೂರ), ಔರಂಗಾಬಾದ್ ಇಂದ (೨೧೮ ಕಿ. ಮೀ. ದೂರ) ಸಾಕಷ್ಟು ಬಸ್ ಸೌಕರ್ಯಗಳಿವೆ.
ವಸತಿ.
ಔಂದ್ ಅಲ್ಲಿ ದೇಗುಲದ ಯಾತ್ರಿ ನಿವಾಸ ಮಾತ್ರ ತಂಗಲು ಇರುವ ತಾಣ. ಆದರೆ ಪರಭಣಿ ಇಂದ ಸಾಕಷ್ಟು ವಾಹನ ವ್ಯವಸ್ಥೆ ಇರುವುದರಿಂದ ಅಲ್ಲಿಯೇ ತಂಗುವುದು ಉತ್ತಮ.
----------------------------------------------
ಚಿತ್ರ ಕೃಪೆ: ಇಲ್ಲಿಂದ ಪಡೆದದ್ದು
ನಿಮ್ಮ ಲೇಖನ ಚೆನ್ನಾಗಿದೆ, ಎಲ್ಲದರ ಬಗೆಗೆ ತುಂಬಾ ಚೆನ್ನಾಗಿ ತಿಳಿಸುತ್ತಿದ್ದಿರಿ
ReplyDeleteಡಾ. ಗುರು,
ReplyDeleteಜ್ಯೋತಿರ್ಲಿಂಗ ಸರಣಿ ಮುಗಿಯಿತು.
ಓದಿ ಮೆಚ್ಚೆದ್ದಕ್ಕೆ ತುಂಬಾ ಧನ್ಯವಾದಗಳು.
-ಅನಿಲ್