ಈ ಪ್ರವಾಸ ನಾವು ಕೈಗೊಂಡಿದ್ದು ಜನವರೀ ೨೪ ೨೦೦೯ರ ಶನಿವಾರದಂದು. ಈ ಪ್ರಯಾಣಕ್ಕೆ ಜೊತೆಯಾದವರು ನನ್ನ ಸಂಬಂಧಿ ರಾಘು, ಆತನ ಸೋದರಿಯರು (ಅವನ Cousins ಸೇರಿ) ಮತ್ತು ಗೆಳೆಯ ರಾಮ.
ಈ ಪ್ರವಾಸಕ್ಕೆ ಹೋಗುವುದೆಂದು ಖಾತ್ರಿಯಾದದ್ದು ಶುಕ್ರವಾರ, ಅಂದರೆ ಜನವರೀ ೨೩ ೨೦೦೯. ಸಂಜೆ ೬ಕ್ಕೆ ರಾಘು, ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಮಡಿಕೇರಿಗೆ ಹೋಗೋಣವೆಂದು, ನಮ್ಮ ಜೊತೆಗೆ ಆತನ ಸೋದರಿಯರು ಬರುತ್ತಾರೆಂದು ಹೇಳಿದ. ಒಟ್ಟು ೭ ಮಂದಿ. ಎರಡು ಕಾರುಗಳಲ್ಲಿ ಹೋಗುವುದಾಗಿ ಹೇಳಿದ. ನನ್ನ ಮತ್ತು ರಾಘು ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಕೊನೆ ಘಳಿಗೆಯಲ್ಲಿ ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗುವ ನಿರ್ಧಾರವಾಯಿತು.
ಈಗ ನಮ್ಮಲ್ಲಿದ್ದ ಗೊಂದಲ ವಾಹನದ arrangement. ನಾಳೆ ಬೆಳಿಗ್ಗೆ ಹೋಗುವ ಪ್ರಯಾಣಕ್ಕೆ ಇಂದು ರಾತ್ರಿ ವಾಹನ ಬುಕ್ ಮಾಡಿದರೆ ಸಿಗುವುದೇ ಎಂಬ ಯೋಚನೆ ಇತ್ತು. ಗೊತ್ತಿದ್ದ ಎಲ್ಲಾ ಟ್ರ್ಯಾವೆಲ್ ಏಜೆಂಟರಿಗೆ ಫೋನ್ ಮಾಡಿದೆವು. ಯಾವ ವಾಹನವೂ ಸಿಗಲಿಲ್ಲ. ಯಾವುದೇ ವಾಹನ ಸಿಗದಿದ್ದಲ್ಲಿ ನಮ್ಮದೇ ಕಾರುಗಳಲ್ಲಿ ಹೋಗುವ ನಿರ್ಧಾರ ಮಾಡಿ, ಕೊನೆಯ ಪ್ರಯತ್ನ ಅಂತ ಇನ್ನೊಬ್ಬ ಟ್ರ್ಯಾವೆಲ್ ಏಜೆಂಟ್ಗೆ ಫೋನ್ ಮಾಡಿದ ರಾಘು. ಟಾಟಾ ಸುಮೋ ಇದೆ ಅಂತ ಹೇಳಿದ ಏಜೆಂಟ್. ಅಬ್ಬಾ ಸದ್ಯ ವಾಹನ ಸಿಕ್ತಲ್ಲಾ ಅಂತ ಟಾಟಾ ಸುಮೋವನ್ನು ಬುಕ್ ಮಾಡಿದ ರಾಘು. ಆಗ ಸಮಯ ರಾತ್ರಿ ೧೨ಘಂಟೆ.
ರಾಘು ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಟಾಟಾ ಸುಮೋ ಬುಕ್ ಮಾಡಿದ್ದೇನೆ. ಬೆಳಿಗ್ಗೆ ಆರಕ್ಕೆ ನಮ್ಮ ಮನೆಗೆ ಬರುತ್ತದೆ ಅಂತ ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.
ಬೆಳಿಗ್ಗೆ ಆರಕ್ಕೆ ರಾಘು ಮನೆಗೆ ಟಾಟಾ ಸುಮೋ ಓಡಿಸಿಕೊಂಡು ಡ್ರೈವರ್ ಮಂಜುನಾಥ್ ಬಂದನು. ಅಲ್ಲಿಂದ ರಾಘು ಮತ್ತು ಅವನ ಸೋದರಿಯರು ನಮ್ಮ ಮನೆಗೆ ಬಂದರು. ಅಲ್ಲಿಂದ ರಾಮನನ್ನು ಕರೆದುಕೊಂಡು ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ ದುಬಾರೆ ಆನೆ ಶಿಬಿರಕ್ಕೆ ತಲುಪಿದೆವು.
ಅಲ್ಲಿ ಊಟವನ್ನು ಮುಗಿಸಿ ಆನೆ ಶಿಬಿರಕ್ಕೆ ಮೋಟಾರ‍್ ದೋಣಿಯಲ್ಲಿ ಹೋದೆವು.
ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದೆನು.
ನಂತರ ಮಡಿಕೇರಿಯನ್ನು ತಲುಪುವ ಹೊತ್ತಿಗೆ ಸಂಜೆಯಾಗಿತ್ತು.
ರಾಜಾಸೀಟಿನಲ್ಲಿ ಶನಿವಾರವಾಗಿದ್ದರಿಂದ ಜನಜಂಗುಳಿ.
ಅಲ್ಲೇ ಸೂರ್ಯಾಸ್ತದವರೆಗೂ ಕಾದು ಸೂರ್ಯಾಸ್ತದ ಕೆಲವು ಚಿತ್ರಗಳನ್ನು ಸೆರೆಹಿಡಿದೆನು.
ನಂತರ ಮಡಿಕೇರಿಯಿಂದ ತಲಕಾವೇರಿಯ ಮಾರ್ಗದಲ್ಲಿರುವ "ರತಿ ಹೋಂ ಸ್ಟೇ"ಯಲ್ಲಿ ತಂಗಿದ್ದೆವು.
ಈ ಹೋಂ ಸ್ಟೇಯನ್ನು ಇನ್ನೊಬ್ಬ ಸ್ನೇಹಿತನ ಮೂಲಕ ಮುಂಗಡವಾಗಿ ಕಾದಿರಿಸಿದೆವು. ಬುಕಿಂಗ್ ಮಾಡಿಸಿದಾಗ ರಾತ್ರಿ ಹನ್ನೊಂದು ಘಂಟೆ (ಜನವರೀ ೨೩ ೨೦೦೯). ರಾತ್ರಿ ಹೋಂ ಸ್ಟೇಯಲ್ಲೇ ಭರ್ಜರಿ ಭೋಜನ. ಒಳ್ಳೇ ನಿದ್ದೆ.
ಮಾರನೇ ದಿನ ಬೆಳಿಗ್ಗೆ ಎದ್ದು ತಲಕಾವೇರಿಯ ಕಡೆಗೆ ಹೊರಟೆವು.
ವಾಹನದಲ್ಲಿ ಅಂತ್ಯಾಕ್ಷರಿ ಆಟ. ಎಲ್ಲರೂ ಭಾಗವಹಿಸಿದೆವು. ತಲಕಾವೇರಿಯಲ್ಲಿ ಕಾವೇರಿಯ ಉಗಮ ಸ್ಥಾನವನ್ನು ನೋಡಿ ಅಲ್ಲಿನ view pointಗೆ ಹೋದೆವು.
ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು.
ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನಕ್ಕೆ ಹೋದಾಗ ಸಮಯ ೧೨ ಆಗಿತ್ತು.
ಓಂಕಾರೇಶ್ವರನಿಗೆ ಮಾಡುತ್ತಿದ್ದ ಮಹಾಮಂಗಳಾರತಿಯನ್ನು ವೀಕ್ಷಿಸಿ ಅಲ್ಲಿಂದ ಅಬ್ಬಿ ಜಲಪಾತದ ಕಡೆಗೆ ಹೊರಟೆವು.
ಭಾನುವಾರವಾದ್ದರಿಂದ ಸಿಕ್ಕಾಪಟ್ಟೆ ಜನ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಬೆಂಗಳೂರಿನ ಕಡೆಗೆ ಹೊರಟೆವು.
ಮಾರ್ಗ ಮಧ್ಯದಲ್ಲಿ ಊಟ ಮಾಡಿ ಮೈಸೂರು ತಲುಪುವ ಹೊತ್ತಿಗೆ ಸಂಜೆ ೬ ಆಗಿತ್ತು. ಮೈಸೂರಿನಲ್ಲಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.
ಅನಿಲ್,
ReplyDeleteಚಿತ್ರಗಳಂತೂ ಸೊಗಸು. ಆ ಬೆಟ್ಟಗಳ ಚಿತ್ರವಂತೂ ಅದ್ಭುತ.
ಅನಿಲ್
ReplyDeleteಚಿತ್ರಗಳು ತು೦ಬಾ ಚೆನ್ನಾಗಿವೆ. ನಾನು ಹೋಗಿ ಬ೦ದಾಗಿನ ನೆನಪು ಕಾಡಿತು, ಮತ್ತೆ ಹೋಗಬೇಕೆನಿಸುತ್ತಿದೆ.
ರಾಜೇಶ್,
ReplyDeleteಪ್ರತಿಕ್ರಿಯೆಗೆ ತುಂಬಾ ಧನ್ಯವಾದ.
ಮೊಟ್ಟ ಮೊದಲ ಬಾರಿ ನನ್ನ ಬ್ಲಾಗಿಗೆ ಬಂದಿರುವಿರಿ. ಸ್ವಾಗತ!
ಅಂದಹಾಗೆ,
ನಿಮ್ಮನ್ನು ನನ್ನ ಗೆಳೆಯರ ಬಳಗಕ್ಕೆ ಸೇರಿಸಿಕೊಂಡಿದ್ದೇನೆ.
ಪರಾಂಜಪೆ,
ReplyDeleteಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್.
ಹೀಗೇ ಬರುತ್ತಿರಿ.
ಮತ್ತೆ ಮಡಿಕೇರಿಗೆ ಹೋಗಿ ಬಂದು ಚಿತ್ರಗಳನ್ನು ಹಂಚಿಕೊಳ್ಳಿ.
-ಅನಿಲ್.